ಯೋಹಾನ 21:1-25

21  ಇದಾದ ಬಳಿಕ ಯೇಸು ತಿಬೇರಿಯದ ಸಮುದ್ರದ ಬಳಿಯಲ್ಲಿ ತನ್ನನ್ನು ಪುನಃ ಶಿಷ್ಯರಿಗೆ ತೋರಿಸಿ​ಕೊಂಡನು. ಅವನು ತೋರಿಸಿಕೊಂಡ ರೀತಿ ಹೀಗಿತ್ತು.  ಸೀಮೋನ ಪೇತ್ರನೂ ದಿದುಮ​ನೆಂಬ ತೋಮನೂ ಗಲಿಲಾಯದ ಕಾನಾ ಎಂಬ ಊರಿನ ನತಾನಯೇಲನೂ ಜೆಬೆದಾಯನ ಪುತ್ರರೂ ಅವನ ಇತರ ಇಬ್ಬರು ಶಿಷ್ಯರೂ ಅಲ್ಲಿದ್ದರು.  ಸೀಮೋನ ಪೇತ್ರನು ಅವರಿಗೆ, “ನಾನು ಮೀನು ಹಿಡಿಯಲು ಹೋಗುತ್ತೇನೆ” ಎಂದನು. ಅವರು ಅವನಿಗೆ, “ನಾವೂ ನಿನ್ನೊಂದಿಗೆ ಬರುತ್ತೇವೆ” ಅಂದರು. ಅವರು ಹೋಗಿ ದೋಣಿಯನ್ನು ಹತ್ತಿದರು, ಆದರೆ ಆ ರಾತ್ರಿ ಅವರಿಗೆ ಒಂದು ಮೀನೂ ಸಿಗಲಿಲ್ಲ.  ಬೆಳಗಾಗುತ್ತಿರುವಾಗ ಯೇಸು ದಡದಲ್ಲಿ ನಿಂತುಕೊಂಡಿದ್ದನು, ಆದರೆ ಅವನು ಯೇಸು ಎಂಬುದನ್ನು ಶಿಷ್ಯರು ಗ್ರಹಿಸಲಿಲ್ಲ.  ಯೇಸು ಅವರಿಗೆ, “ಚಿಕ್ಕ ಮಕ್ಕಳೇ, ನಿಮ್ಮ ಬಳಿ ಊಟಕ್ಕೆ ಏನೂ ಇಲ್ಲವಲ್ಲವೆ?” ಎಂದು ಕೇಳಿದಾಗ ಅವರು, “ಇಲ್ಲ!” ಎಂದು ಉತ್ತರಿಸಿದರು.  ಅವನು ಅವರಿಗೆ, “ದೋಣಿಯ ಬಲಗಡೆಯಲ್ಲಿ ಬಲೆಯನ್ನು ಬೀಸಿ; ಆಗ ನಿಮಗೆ ಕೆಲವು ಮೀನುಗಳು ಸಿಗುವವು” ಎಂದನು. ಅವರು ಬಲೆಯನ್ನು ಬೀಸಿದಾಗ ಅಸಂಖ್ಯಾತ ಮೀನುಗಳು ಸಿಕ್ಕಿದ್ದರಿಂದ ಅವರಿಗೆ ಬಲೆಯನ್ನು ಎಳೆಯಲು ಆಗದೇ ಹೋಯಿತು.  ಆಗ ಯೇಸುವಿಗೆ ಪ್ರಿಯನಾಗಿದ್ದ ಆ ಶಿಷ್ಯನು ಪೇತ್ರನಿಗೆ, “ಅದು ಕರ್ತನೇ” ಎಂದು ಹೇಳಿದನು. ಅದು ಕರ್ತನೆಂಬುದನ್ನು ಕೇಳಿಸಿಕೊಂಡ ಸೀಮೋನ ಪೇತ್ರನು ಮೈಮೇಲೆ ಬಟ್ಟೆಯಿಲ್ಲದವನಾಗಿದ್ದರಿಂದ ತನ್ನ ಮೇಲ್ಹೊದಿಕೆಯನ್ನು ಸುತ್ತಿಕೊಂಡು ಸಮುದ್ರಕ್ಕೆ ಧುಮುಕಿದನು.  ಆದರೆ ಅವರು ದಡದಿಂದ ಬಹಳ ದೂರದಲ್ಲಿರದೆ ಸುಮಾರು ಇನ್ನೂರು ಮೊಳ ದೂರದಲ್ಲಿದ್ದುದರಿಂದ ಉಳಿದ ಶಿಷ್ಯರು ಮೀನುಗಳ ಬಲೆಯನ್ನು ಎಳೆದುಕೊಂಡು ಆ ಚಿಕ್ಕ ದೋಣಿಯಲ್ಲಿ ಬಂದರು.  ಅವರು ದಡಕ್ಕೆ ಬಂದಿಳಿದಾಗ ಇದ್ದಲಿನ ಕೆಂಡವನ್ನೂ ಅದರ ಮೇಲಿದ್ದ ಮೀನನ್ನೂ ಮತ್ತು ರೊಟ್ಟಿಯನ್ನು ಕಂಡರು. 10  ಯೇಸು ಅವರಿಗೆ, “ನೀವು ಈಗತಾನೇ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ” ಎಂದು ಹೇಳಿದನು. 11  ಸೀಮೋನ ಪೇತ್ರನು ದೋಣಿಯನ್ನು ಹತ್ತಿ ನೂರೈವತ್ತಮೂರು ದೊಡ್ಡ ಮೀನುಗಳಿಂದ ತುಂಬಿದ್ದ ಬಲೆಯನ್ನು ದಡಕ್ಕೆ ಎಳೆದು ತಂದನು. ಅಷ್ಟೊಂದು ಮೀನುಗಳಿದ್ದರೂ ಬಲೆಯು ಹರಿಯಲಿಲ್ಲ. 12  ಯೇಸು ಅವರಿಗೆ, “ಬನ್ನಿರಿ, ಉಪಾಹಾರವನ್ನು ಸೇವಿಸಿರಿ” ಎಂದನು. ಅವನು ಕರ್ತನೆಂದು ತಿಳಿದಿದ್ದರಿಂದ ಅವನ ಶಿಷ್ಯರಲ್ಲಿ ಯಾರಿಗೂ “ನೀನು ಯಾರು?” ಎಂದು ಅವನನ್ನು ಕೇಳುವ ಧೈರ್ಯವಿರಲಿಲ್ಲ. 13  ಯೇಸು ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟನು, ಹಾಗೆಯೇ ಮೀನನ್ನೂ ಕೊಟ್ಟನು. 14  ಯೇಸು ಸತ್ತವರೊಳಗಿಂದ ಎಬ್ಬಿಸಲ್ಪಟ್ಟ ಬಳಿಕ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಬಾರಿಯಾಗಿತ್ತು. 15  ಅವರು ಉಪಾಹಾರವನ್ನು ಸೇವಿಸಿದ ಮೇಲೆ ಯೇಸು ಸೀಮೋನ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ಇವುಗಳಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತೀಯೊ?” ಎಂದು ಕೇಳಿದನು. ಅದಕ್ಕೆ ಅವನು, “ಹೌದು ಕರ್ತನೇ, ನನಗೆ ನಿನ್ನ ಮೇಲೆ ಮಮತೆ ಇದೆ ಎಂಬುದನ್ನು ನೀನೇ ಬಲ್ಲೆ” ಎಂದನು. ಆಗ ಯೇಸು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು” ಎಂದು ಹೇಳಿದನು. 16  ಎರಡನೆಯ ಬಾರಿ ಪುನಃ ಅವನು, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೊ?” ಎಂದು ಕೇಳಿದನು. ಅದಕ್ಕೆ ಅವನು, “ಹೌದು ಕರ್ತನೇ, ನನಗೆ ನಿನ್ನ ಮೇಲೆ ಮಮತೆ ಇದೆ ಎಂಬುದನ್ನು ನೀನೇ ಬಲ್ಲೆ” ಎಂದನು. ಆಗ ಯೇಸು ಅವನಿಗೆ, “ನನ್ನ ಚಿಕ್ಕ ಕುರಿಗಳನ್ನು ಪಾಲಿಸು” ಎಂದು ಹೇಳಿದನು. 17  ಮೂರನೆಯ ಬಾರಿ ಅವನು ಸೀಮೋನನಿಗೆ, “ಯೋಹಾನನ ಮಗನಾದ ಸೀಮೋನನೇ, ನಿನಗೆ ನನ್ನ ಮೇಲೆ ಮಮತೆ ಇದೆಯೊ?” ಎಂದು ಕೇಳಿದನು. ಮೂರನೆಯ ಬಾರಿ ಅವನು, “ನಿನಗೆ ನನ್ನ ಮೇಲೆ ಮಮತೆ ಇದೆಯೊ?” ಎಂದು ಕೇಳಿದ್ದಕ್ಕಾಗಿ ಪೇತ್ರನು ದುಃಖಪಟ್ಟು ಅವನಿಗೆ, “ಕರ್ತನೇ ನೀನು ಎಲ್ಲವನ್ನೂ ಬಲ್ಲೆ; ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆ ಎಂಬುದು ನಿನಗೆ ತಿಳಿದಿದೆ” ಎಂದನು. ಆಗ ಯೇಸು ಅವನಿಗೆ, “ನನ್ನ ಚಿಕ್ಕ ಕುರಿಗಳನ್ನು ಮೇಯಿಸು. 18  ನಿನಗೆ ನಿಜ​ನಿಜವಾಗಿ ಹೇಳುತ್ತೇನೆ, ನೀನು ಯುವಕನಾಗಿದ್ದಾಗ ನೀನೇ ನಡುವನ್ನು ಕಟ್ಟಿಕೊಂಡು ನಿನಗೆ ಇಷ್ಟಬಂದ ಕಡೆ ತಿರುಗಾಡುತ್ತಿದ್ದಿ. ಆದರೆ ನೀನು ಮುದುಕನಾಗುವಾಗ ನಿನ್ನ ಕೈಗಳನ್ನು ಚಾಚುವಿ ಮತ್ತು ಇನ್ನೊಬ್ಬನು ನಿನ್ನ ನಡುವನ್ನು ಕಟ್ಟಿ ನಿನಗೆ ಇಷ್ಟವಿಲ್ಲದ ಕಡೆಗೆ ನಿನ್ನನ್ನು ಹೊತ್ತುಕೊಂಡು ಹೋಗುವನು” ಎಂದು ಹೇಳಿದನು. 19  ಯಾವ ರೀತಿಯ ಮರಣದಿಂದ ಅವನು ದೇವರನ್ನು ಮಹಿಮೆಪಡಿಸುವನು ಎಂಬುದನ್ನು ಸೂಚಿಸಲಿಕ್ಕಾಗಿ ಯೇಸು ಇದನ್ನು ಹೇಳಿದನು. ಅವನು ಇದನ್ನು ಹೇಳಿದ ಬಳಿಕ ಪೇತ್ರನಿಗೆ, “ನನ್ನನ್ನು ಹಿಂಬಾಲಿಸುತ್ತಾ ಇರು” ಎಂದನು. 20  ಪೇತ್ರನು ಹಿಂದೆ ತಿರುಗಿದಾಗ ಯೇಸುವಿಗೆ ಪ್ರಿಯನಾಗಿದ್ದ ಮತ್ತು ಸಂಧ್ಯಾ ಭೋಜನದ ಸಮಯದಲ್ಲಿ ಯೇಸುವಿನ ಎದೆಗೆ ಒರಗಿ ಅವನಿಗೆ, “ಕರ್ತನೇ, ನಿನ್ನನ್ನು ದ್ರೋಹದಿಂದ ಹಿಡಿದುಕೊಡುವವನು ಯಾರು?” ಎಂದೂ ಕೇಳಿದ್ದ ಶಿಷ್ಯನು ಹಿಂದೆ ಬರುತ್ತಿರುವುದನ್ನು ಕಂಡನು. 21  ಅವನನ್ನು ನೋಡಿದಾಗ ಪೇತ್ರನು ಯೇಸುವಿಗೆ, “ಕರ್ತನೇ, ಇವನು ಏನು ಮಾಡುವನು?” ಎಂದು ಕೇಳಿದನು. 22  ಆಗ ಯೇಸು ಅವನಿಗೆ, “ನಾನು ಬರುವ ತನಕ ಇವನು ಉಳಿಯಬೇಕೆಂಬುದು ನನ್ನ ಚಿತ್ತವಾಗಿರುವಲ್ಲಿ, ಅದರಿಂದ ನಿನಗೇನು ಚಿಂತೆ? ನೀನು ನನ್ನನ್ನು ಹಿಂಬಾಲಿಸುವುದನ್ನು ಮುಂದುವರಿಸು” ಎಂದು ಹೇಳಿದನು. 23  ಆದುದರಿಂದ ಆ ಶಿಷ್ಯನು ಸಾಯುವುದಿಲ್ಲ ಎಂಬ ಮಾತು ಸಹೋದರರಲ್ಲಿ ಹಬ್ಬಿತು. ಆದರೆ ಅವನು ಸಾಯುವುದಿಲ್ಲ ಎಂದು ಯೇಸು ಅವನಿಗೆ ಹೇಳಲಿಲ್ಲ, ಬದಲಾಗಿ “ನಾನು ಬರುವ ತನಕ ಇವನು ಉಳಿಯಬೇಕೆಂಬುದು ನನ್ನ ಚಿತ್ತವಾಗಿರುವಲ್ಲಿ, ಅದರಿಂದ ನಿನಗೇನು ಚಿಂತೆ?” ಎಂದು ಹೇಳಿದನು. 24  ಈ ವಿಷಯಗಳ ಕುರಿತು ಸಾಕ್ಷಿಹೇಳಿ ಇವುಗಳನ್ನು ಬರೆದವನು ಆ ಶಿಷ್ಯನೇ ಮತ್ತು ಅವನು ಕೊಡುವ ಸಾಕ್ಷಿ ಸತ್ಯವಾದದ್ದೆಂದು ನಮಗೆ ಗೊತ್ತು. 25  ವಾಸ್ತವದಲ್ಲಿ, ಯೇಸು ಮಾಡಿದ ಇನ್ನೂ ಅನೇಕ ಸಂಗತಿಗಳಿವೆ; ಒಂದುವೇಳೆ ಅವುಗಳನ್ನು ಸವಿವರವಾಗಿ ಬರೆಯುವುದಾದರೆ ಬರೆಯಲ್ಪಟ್ಟ ಸುರುಳಿಗಳನ್ನು ಶೇಖರಿಸಿಡಲು ಲೋಕವೇ ಸಾಕಾಗದು ಎಂದು ನಾನು ನೆನಸುತ್ತೇನೆ.

ಪಾದಟಿಪ್ಪಣಿ