2 ಕೊರಿಂಥ 5:1-21

5  ನಮ್ಮ ಭೂಮಿಯ ಮನೆಯಾದ ಈ ಗುಡಾರವು ಕೆಡವಲ್ಪಡಬೇಕಾಗಿರುವಲ್ಲಿ ದೇವರಿಂದ ಕಟ್ಟಲ್ಪಟ್ಟಿರುವ ಕಟ್ಟಡವನ್ನು ನಾವು ಹೊಂದಲಿದ್ದೇವೆ ಎಂಬುದು ನಮಗೆ ತಿಳಿದಿದೆ. ಆ ಮನೆಯು ಕೈಯಿಂದ ಕಟ್ಟಲ್ಪಟ್ಟದ್ದಲ್ಲ, ನಿತ್ಯವಾಗಿ ಸ್ವರ್ಗದಲ್ಲಿರುವಂಥದ್ದು.  ಈಗ ವಾಸಿಸುತ್ತಿರುವ ಮನೆಯಲ್ಲಿ ನಾವು ನರಳುತ್ತಿದ್ದೇವೆ; ಸ್ವರ್ಗದಿಂದ ದೊರಕುವಂಥದ್ದನ್ನು ಧರಿಸಿಕೊಳ್ಳಲು ನಾವು ಅತ್ಯಾಸಕ್ತಿಯಿಂದ ಬಯಸುತ್ತಿದ್ದೇವೆ.  ಹೀಗೆ ನಾವು ಅದನ್ನು ನಿಜವಾಗಿಯೂ ಧರಿಸಿಕೊಂಡರೆ ನಾವು ಬೆತ್ತಲೆಯಾಗಿ ಕಂಡುಬರುವುದಿಲ್ಲ.  ವಾಸ್ತವದಲ್ಲಿ ಈ ಗುಡಾರದಲ್ಲಿರುವವರಾದ ನಾವು ಭಾರದಿಂದ ಕುಗ್ಗಿದವರಾಗಿ ನರಳುತ್ತಿದ್ದೇವೆ; ನಾವು ಇದನ್ನು ಕಳಚಿಹಾಕಲು ಬಯಸುವುದಿಲ್ಲ, ಬದಲಾಗಿ ನಶ್ವರವಾದದ್ದು ಜೀವದಿಂದ ನುಂಗಲ್ಪಡುವಂತೆ ಇನ್ನೊಂದನ್ನು ಧರಿಸಿಕೊಳ್ಳಲು ಬಯಸುತ್ತೇವೆ.  ಇದಕ್ಕಾಗಿ ನಮ್ಮನ್ನು ಸಿದ್ಧಮಾಡಿದವನು ದೇವರು ತಾನೇ; ಆತನೇ ಮುಂದೆ ಬರಲಿಕ್ಕಿರುವುದರ ಸೂಚಕವನ್ನು ಅಂದರೆ ಪವಿತ್ರಾತ್ಮವನ್ನು ನಮಗೆ ಅನುಗ್ರಹಿಸಿದ್ದಾನೆ.  ಆದುದರಿಂದ ನಾವು ಯಾವಾಗಲೂ ಧೈರ್ಯವುಳ್ಳವರಾಗಿದ್ದು ಈ ದೇಹದಲ್ಲಿ ನಮ್ಮ ಮನೆಯಿರುವ ವರೆಗೆ ನಾವು ಕರ್ತನಿಂದ ದೂರವಾಗಿದ್ದೇವೆಂದು ತಿಳಿದವರಾಗಿದ್ದೇವೆ.  ನಾವು ನೋಡುವವರಾಗಿ ನಡೆಯದೆ ನಂಬಿಕೆಯಿಂದಲೇ ನಡೆಯುತ್ತಿದ್ದೇವೆ.  ಆದರೆ ನಾವು ಧೈರ್ಯವುಳ್ಳವರಾಗಿದ್ದು ಈ ದೇಹದಿಂದ ದೂರವಾಗಿ ಕರ್ತನೊಂದಿಗೆ ನಮ್ಮ ಮನೆಮಾಡಿಕೊಳ್ಳಲು ಇಷ್ಟಪಡುತ್ತೇವೆ.  ಆದುದರಿಂದ ನಮ್ಮ ಮನೆಯು ಕರ್ತನೊಂದಿಗಿರಲಿ, ಅವನಿಂದ ದೂರವಿರಲಿ, ಅವನಿಗೆ ಸ್ವೀಕಾರಾರ್ಹವಾಗಿರುವುದನ್ನು ನಮ್ಮ ಗುರಿಯಾಗಿ ಮಾಡಿಕೊಳ್ಳುತ್ತಿದ್ದೇವೆ. 10  ನಾವೆಲ್ಲರು ಕ್ರಿಸ್ತನ ನ್ಯಾಯಾಸನದ ಮುಂದೆ ಕಾಣಿಸಿಕೊಳ್ಳಬೇಕು; ಹೀಗೆ ಪ್ರತಿಯೊಬ್ಬನು ತನ್ನ ದೇಹದ ಮೂಲಕ ನಡಿಸಿದ ಅಂದರೆ ತಾನು ರೂಢಿಯಾಗಿ ಮಾಡಿದ ಒಳ್ಳೇದಕ್ಕಾಗಲಿ ಕೆಟ್ಟದ್ದಕ್ಕಾಗಲಿ ತಕ್ಕ ಫಲವನ್ನು ಹೊಂದುವಂತಾಗುವುದು. 11  ಆದುದರಿಂದ ಕರ್ತನ ಭಯವನ್ನು ಅರಿತವರಾದ ನಾವು ಜನರನ್ನು ಒಡಂಬಡಿಸುತ್ತಾ ಇರುತ್ತೇವೆ. ಆದರೆ ನಾವು ದೇವರಿಗೆ ಪ್ರಕಟಮಾಡಲ್ಪಟ್ಟಿದ್ದೇವೆ. ಹೀಗಿದ್ದರೂ ನಾವು ಎಂಥವರೆಂಬುದು ನಿಮ್ಮ ಮನಸ್ಸಾಕ್ಷಿಗಳಿಗೂ ತಿಳಿದಿದೆ ಎಂದು ನಾನು ನಿರೀಕ್ಷಿಸುತ್ತೇನೆ. 12  ನಮ್ಮ ಬಗ್ಗೆ ನಾವೇ ನಿಮಗೆ ಪುನಃ ಶಿಫಾರಸ್ಸು ಮಾಡಿಕೊಳ್ಳುತ್ತಿಲ್ಲ; ಬದಲಾಗಿ ನಮ್ಮ ವಿಷಯದಲ್ಲಿ ಹೊಗಳಿಕೊಳ್ಳಲು ನಿಮಗೆ ಆಸ್ಪದಮಾಡಿಕೊಡುತ್ತಿದ್ದೇವೆ. ಹೀಗೆ ಹೃದಯದ ವಿಷಯ​ದಲ್ಲಿ ಹೆಚ್ಚಳಪಡದೆ ಹೊರತೋರಿಕೆಯ ವಿಷಯ​ದಲ್ಲಿ ಯಾರು ಹೆಚ್ಚಳಪಡುತ್ತಾರೋ ಅವರಿಗೆ ನೀವು ಪ್ರತ್ಯುತ್ತರ ನೀಡುವಂತಾಗುವುದು. 13  ನಮಗೆ ಬುದ್ಧಿಭ್ರಮಣೆಯಾಗಿರುತ್ತಿದ್ದರೆ ಅದು ದೇವರಿಗಾಗಿಯೇ; ನಾವು ಸ್ವಸ್ಥಬುದ್ಧಿಯವರಾಗಿರುವುದಾದರೆ ಅದು ನಿಮಗೋಸ್ಕರವೇ. 14  ಕ್ರಿಸ್ತನಿಗಿರುವ ಪ್ರೀತಿಯು ನಮ್ಮನ್ನು ಒತ್ತಾಯಮಾಡುತ್ತದೆ; ಏಕೆಂದರೆ ಒಬ್ಬ ಮನುಷ್ಯನು ಎಲ್ಲರಿಗೋಸ್ಕರ ಸತ್ತನೆಂದು ನಾವು ತೀರ್ಮಾನಿಸಿದ್ದೇವೆ; ಹೀಗೆ ಎಲ್ಲರೂ ಸತ್ತವರಾದರು. 15  ಜೀವಿಸುವವರು ಇನ್ನು ಮುಂದೆ ಸ್ವತಃ ತಮಗಾಗಿ ಜೀವಿಸದೆ ತಮಗೋಸ್ಕರ ಸತ್ತು ಎಬ್ಬಿಸಲ್ಪಟ್ಟವನಿಗಾಗಿ ಜೀವಿಸುವಂತೆ ಅವನು ಎಲ್ಲರಿಗೋಸ್ಕರ ಸತ್ತನು. 16  ಹೀಗಿರುವುದರಿಂದ ಇಂದಿನಿಂದ ನಾವು ಯಾವನನ್ನೂ ಶರೀರಸಂಬಂಧವಾಗಿ ತಿಳಿದುಕೊಳ್ಳುವುದಿಲ್ಲ. ಒಂದುವೇಳೆ ನಾವು ಕ್ರಿಸ್ತನನ್ನು ಶರೀರಸಂಬಂಧವಾಗಿ ತಿಳಿದುಕೊಂಡಿದ್ದರೂ ಈಗ ನಿಶ್ಚಯವಾಗಿ ನಾವು ಅವನನ್ನು ಹಾಗೆ ತಿಳಿದುಕೊಳ್ಳುವುದಿಲ್ಲ. 17  ಯಾವನಾದರೂ ಕ್ರಿಸ್ತನೊಂದಿಗೆ ಐಕ್ಯದಿಂದಿದ್ದರೆ ಅವನು ನೂತನ ಸೃಷ್ಟಿಯಾಗಿದ್ದಾನೆ; ಇಗೋ, ಹಳೆಯ ಸಂಗತಿಗಳು ಗತಿಸಿಹೋಗಿ ನೂತನ ಸಂಗತಿಗಳು ಅಸ್ತಿತ್ವಕ್ಕೆ ಬಂದಿವೆ. 18  ಎಲ್ಲವೂ ದೇವರಿಂದಲೇ ಉಂಟಾಯಿತು. ಆತನು ಕ್ರಿಸ್ತನ ಮೂಲಕ ನಮ್ಮನ್ನು ತನ್ನೊಂದಿಗೆ ಸಮಾಧಾನ ಸಂಬಂಧಕ್ಕೆ ತಂದುಕೊಂಡು, ಸಮಾಧಾನ ಸಂಬಂಧದ ಶುಶ್ರೂಷೆಯನ್ನು ನಮಗೆ ಕೊಟ್ಟಿದ್ದಾನೆ. 19  ಅದೇನೆಂದರೆ, ದೇವರು ಮನುಷ್ಯರ ಅಪರಾಧಗಳನ್ನು ಅವರ ಲೆಕ್ಕಕ್ಕೆ ತೆಗೆದುಕೊಳ್ಳದೆ, ಕ್ರಿಸ್ತನ ಮೂಲಕ ಲೋಕವನ್ನು ತನ್ನೊಂದಿಗೆ ಸಮಾಧಾನ ಸಂಬಂಧಕ್ಕೆ ತರುತ್ತಿದ್ದಾನೆ ಮತ್ತು ಸಮಾಧಾನ ಸಂಬಂಧದ ಕುರಿತಾದ ಈ ವಾಕ್ಯವನ್ನು ನಮಗೆ ಒಪ್ಪಿಸಿದ್ದಾನೆ. 20  ಆದುದರಿಂದ ದೇವರು ನಮ್ಮ ಮೂಲಕ ವಿನಂತಿಸುತ್ತಿದ್ದಾನೋ ಎಂಬಂತೆ ನಾವು ಕ್ರಿಸ್ತನ ಬದಲಿಯಾಗಿ ರಾಯಭಾರಿಗಳಾಗಿದ್ದೇವೆ. ಕ್ರಿಸ್ತನ ಬದಲಿಯಾಗಿರುವ ನಾವು, “ದೇವರೊಂದಿಗೆ ಸಮಾಧಾನ ಸಂಬಂಧಕ್ಕೆ ಬನ್ನಿರಿ” ಎಂದು ಬೇಡಿಕೊಳ್ಳುತ್ತೇವೆ. 21  ಕ್ರಿಸ್ತನ ಮೂಲಕ ನಾವು ದೇವರ ನೀತಿಯಾಗುವಂತೆ, ಪಾಪವನ್ನೇ ಅರಿಯದ ಅವನನ್ನು ಆತನು ನಮಗೋಸ್ಕರ ಪಾಪಸ್ವರೂಪಿಯಾಗಿ ಮಾಡಿದನು.

ಪಾದಟಿಪ್ಪಣಿ