2 ಕೊರಿಂಥ 6:1-18
6 ದೇವರೊಂದಿಗೆ ಕೆಲಸಮಾಡುವವರಾದ ನಾವು ಸಹ ನಿಮ್ಮನ್ನು, ನೀವು ಆತನ ಅಪಾತ್ರ ದಯೆಯನ್ನು ಪಡೆದುಕೊಂಡು ಅದರ ಉದ್ದೇಶವನ್ನು ಕಳೆದುಕೊಳ್ಳಬಾರದೆಂದು ಬೇಡಿಕೊಳ್ಳುತ್ತೇವೆ.
2 ಏಕೆಂದರೆ, “ಸ್ವೀಕೃತವಾದ ಸಮಯದಲ್ಲಿ ನಾನು ನಿನಗೆ ಕಿವಿಗೊಟ್ಟೆನು ಮತ್ತು ರಕ್ಷಣೆಯ ದಿನದಲ್ಲಿ ನಾನು ನಿನಗೆ ಸಹಾಯಮಾಡಿದೆನು” ಎಂದು ಆತನು ಹೇಳುತ್ತಾನೆ. ಇಗೋ, ವಿಶೇಷವಾಗಿ ಸ್ವೀಕೃತವಾದ ಸಮಯವು ಇದೇ ಆಗಿದೆ. ಇಗೋ, ರಕ್ಷಣೆಯ ದಿನವೂ ಇದೇ ಆಗಿದೆ.
3 ನಮ್ಮ ಶುಶ್ರೂಷೆಯು ಲೋಪವುಳ್ಳದ್ದಾಗಿ ಕಂಡುಬರದಂತೆ ನಾವು ಯಾವುದೇ ವಿಧದಲ್ಲಿ ಎಡವಲು ಯಾವುದೇ ಕಾರಣವನ್ನು ಕೊಡುತ್ತಿಲ್ಲ.
4 ಆದರೆ ಪ್ರತಿಯೊಂದು ವಿಧದಲ್ಲಿ ನಾವು ದೇವರ ಶುಶ್ರೂಷಕರಾಗಿ ನಮ್ಮನ್ನು ಶಿಫಾರಸ್ಸು ಮಾಡಿಕೊಳ್ಳುತ್ತಿದ್ದೇವೆ. ನಾವು ಬಹಳ ಸಂಗತಿಗಳನ್ನು ತಾಳಿಕೊಳ್ಳುವುದರಲ್ಲಿಯೂ ಸಂಕಟಗಳಲ್ಲಿಯೂ ಕೊರತೆಗಳಲ್ಲಿರುವಾಗಲೂ ಕಷ್ಟಗಳಲ್ಲಿಯೂ
5 ಹೊಡೆತಗಳಲ್ಲಿಯೂ ಸೆರೆಮನೆಗಳಲ್ಲಿಯೂ ಗೊಂದಲಗಳಲ್ಲಿಯೂ ಪ್ರಯಾಸಗಳಲ್ಲಿಯೂ ನಿದ್ರಾರಹಿತ ರಾತ್ರಿಗಳಲ್ಲಿಯೂ ಆಹಾರವಿಲ್ಲದ ಸಮಯಗಳಲ್ಲಿಯೂ
6 ಶುದ್ಧತೆಯಿಂದಲೂ ಜ್ಞಾನದಿಂದಲೂ ದೀರ್ಘ ಸಹನೆಯಿಂದಲೂ ದಯೆಯಿಂದಲೂ ಪವಿತ್ರಾತ್ಮದಿಂದಲೂ ನಿಷ್ಕಪಟವಾದ ಪ್ರೀತಿಯಿಂದಲೂ
7 ಸತ್ಯವಾದ ಮಾತಿನಿಂದಲೂ ದೇವರ ಶಕ್ತಿಯಿಂದಲೂ ನಮ್ಮನ್ನು ದೇವರ ಶುಶ್ರೂಷಕರೆಂದು ರುಜುಪಡಿಸುತ್ತೇವೆ; ಎಡಬಲಗೈಗಳಲ್ಲಿ ನೀತಿಯ ಆಯುಧಗಳನ್ನು ಹಿಡಿದುಕೊಳ್ಳುವುದರ ಮೂಲಕವೂ
8 ಮಹಿಮೆ ಮತ್ತು ಅವಮಾನದ ಮೂಲಕವೂ ಒಳ್ಳೆಯ ವರದಿ ಮತ್ತು ಕೆಟ್ಟ ವರದಿಯ ಮೂಲಕವೂ ನಾವು ಇದನ್ನು ತೋರಿಸುತ್ತೇವೆ; ವಂಚಕರೆನಿಸಿಕೊಂಡರೂ ಸತ್ಯವಂತರಾಗಿಯೂ
9 ಅಜ್ಞಾತರೆನಿಸಿಕೊಂಡರೂ ಗುರುತಿಸಲ್ಪಡುವವರಾಗಿಯೂ ಸಾಯುವವರಾಗಿ ತೋರಿದರೂ ಬದುಕುತ್ತಿರುವವರಾಗಿಯೂ ಶಿಕ್ಷೆಹೊಂದುವವರಾಗಿದ್ದರೂ ಮರಣಕ್ಕೆ ಒಪ್ಪಿಸಲ್ಪಡದವರಾಗಿಯೂ
10 ದುಃಖಪಡುವವರಾಗಿ ಕಂಡುಬಂದರೂ ಯಾವಾಗಲೂ ಸಂತೋಷಪಡುವವರಾಗಿಯೂ ಬಡವರಾಗಿದ್ದರೂ ಅನೇಕರನ್ನು ಐಶ್ವರ್ಯವಂತರಾಗಿ ಮಾಡುವವರಾಗಿಯೂ ಏನೂ ಇಲ್ಲದವರಾಗಿದ್ದರೂ ಎಲ್ಲವನ್ನೂ ಹೊಂದಿರುವವರಾಗಿಯೂ ಇದ್ದೇವೆ.
11 ಕೊರಿಂಥದವರೇ, ನಾವು ನಿಮ್ಮೊಂದಿಗೆ ಮುಚ್ಚುಮರೆಯಿಲ್ಲದೆ ಮಾತಾಡಿದ್ದೇವೆ, ನಮ್ಮ ಹೃದಯವು ವಿಶಾಲಗೊಂಡಿದೆ.
12 ನಿಮ್ಮನ್ನು ನಮ್ಮೊಳಗೆ ಸೇರಿಸಿಕೊಳ್ಳಲಾಗದಷ್ಟು ಸಂಕುಚಿತರು ನಾವಲ್ಲ. ಆದರೆ ನೀವು ನಿಮ್ಮ ಕೋಮಲ ಮಮತೆಯೊಳಗೆ ನಮ್ಮನ್ನು ಸೇರಿಸಿಕೊಳ್ಳಲಾಗದಷ್ಟು ಸಂಕುಚಿತರಾಗಿದ್ದೀರಿ.
13 ಆದುದರಿಂದ ಮಕ್ಕಳೆಂದು ಭಾವಿಸಿ ನಾನು ಹೇಳುವುದೇನೆಂದರೆ, ನಿಮ್ಮ ವಿಷಯದಲ್ಲಿ ನಮ್ಮ ಹೃದಯವು ವಿಶಾಲವಾಗಿರುವಂತೆಯೇ ನೀವು ಸಹ ವಿಶಾಲಗೊಳ್ಳಿರಿ.
14 ನೀವು ಅವಿಶ್ವಾಸಿಗಳೊಂದಿಗೆ ಸಮತೆಯಿಲ್ಲದ ಜೊತೆಯಾಗಬೇಡಿರಿ. * ನೀತಿಗೂ ಅನೀತಿಗೂ ಮೈತ್ರಿ ಏನು? ಬೆಳಕಿಗೂ ಕತ್ತಲೆಗೂ ಐಕ್ಯವೇನು?
15 ಮಾತ್ರವಲ್ಲದೆ ಕ್ರಿಸ್ತನಿಗೂ ಬಿಲಯೇಲನಿಗೂ ಹೊಂದಾಣಿಕೆ ಏನು? ನಂಬಿಗಸ್ತನಿಗೂ ಅವಿಶ್ವಾಸಿಗೂ ಪಾಲುಗಾರಿಕೆ ಏನು?
16 ದೇವರ ಆಲಯಕ್ಕೂ ವಿಗ್ರಹಗಳಿಗೂ ಒಪ್ಪಂದವೇನು? ನಾವು ಜೀವವುಳ್ಳ ದೇವರ ಆಲಯವಾಗಿದ್ದೇವೆ; “ನಾನು ಅವರ ಮಧ್ಯೆ ವಾಸಿಸುವೆನು, ಅವರ ಮಧ್ಯೆ ನಡೆದಾಡುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನ್ನ ಜನರಾಗಿರುವರು” ಎಂದು ದೇವರು ಹೇಳಿದಂತೆಯೇ ಇದಾಯಿತು.
17 “ ‘ಆದುದರಿಂದ ಅವರ ಮಧ್ಯದಿಂದ ಹೊರಗೆ ಬಂದು ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಿರಿ ಮತ್ತು ಅಶುದ್ಧವಾದುದನ್ನು ಮುಟ್ಟುವುದನ್ನು ಬಿಟ್ಟುಬಿಡಿ’ ಎಂದು ಯೆಹೋವನು ಹೇಳುತ್ತಾನೆ”; “ ‘ಮತ್ತು ನಾನು ನಿಮ್ಮನ್ನು ಸೇರಿಸಿಕೊಳ್ಳುವೆನು.’ ”
18 “ ‘ನಾನು ನಿಮಗೆ ತಂದೆಯಾಗಿರುವೆನು ಮತ್ತು ನೀವು ನನಗೆ ಪುತ್ರಪುತ್ರಿಯರು ಆಗಿರುವಿರಿ’ ಎಂದು ಸರ್ವಶಕ್ತನಾದ ಯೆಹೋವನು ಹೇಳುತ್ತಾನೆ.”
ಪಾದಟಿಪ್ಪಣಿ
^ 2ಕೊರಿಂ 6:14 ಅಕ್ಷರಾರ್ಥವಾಗಿ, “ಅಸಮರ್ಪಕವಾದ ನೊಗದಡಿ ಸೇರಬೇಡಿರಿ.”