2 ಥೆಸಲೊನೀಕ 1:1-12
1 ನಮ್ಮ ತಂದೆಯಾದ ದೇವರೊಂದಿಗೂ ಕರ್ತನಾದ ಯೇಸು ಕ್ರಿಸ್ತನೊಂದಿಗೂ ಐಕ್ಯದಲ್ಲಿರುವ ಥೆಸಲೊನೀಕದವರ ಸಭೆಗೆ ಪೌಲನೂ ಸಿಲ್ವಾನನೂ ತಿಮೊಥೆಯನೂ ಬರೆಯುವುದೇನೆಂದರೆ,
2 ತಂದೆಯಾದ ದೇವರಿಂದ ಮತ್ತು ಕರ್ತನಾದ ಯೇಸು ಕ್ರಿಸ್ತನಿಂದ ನಿಮಗೆ ಅಪಾತ್ರ ದಯೆಯೂ * ಶಾಂತಿಯೂ ಉಂಟಾಗಲಿ.
3 ಸಹೋದರರೇ, ನಾವು ಯಾವಾಗಲೂ ನಿಮ್ಮ ಪರವಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವ ಹಂಗಿನಲ್ಲಿದ್ದೇವೆ. ಹೀಗೆ ಮಾಡುವುದು ಯೋಗ್ಯವಾದದ್ದಾಗಿದೆ, ಏಕೆಂದರೆ ನಿಮ್ಮ ನಂಬಿಕೆಯು ಅತ್ಯಧಿಕವಾಗಿ ಬೆಳೆಯುತ್ತಾ ನಿಮ್ಮಲ್ಲಿ ಪ್ರತಿಯೊಬ್ಬರಿಗೆ ಒಬ್ಬರ ಮೇಲೊಬ್ಬರಿಗಿರುವ ಪ್ರೀತಿಯು ಹೆಚ್ಚಾಗುತ್ತಾ ಇದೆ.
4 ಆದುದರಿಂದ ನೀವು ಸಹಿಸಿಕೊಳ್ಳುತ್ತಿರುವ ಎಲ್ಲ ಹಿಂಸೆಗಳು ಮತ್ತು ಸಂಕಟಗಳ ನಡುವೆಯೂ ನಿಮಗಿರುವ ತಾಳ್ಮೆ ಹಾಗೂ ನಂಬಿಕೆಯ ಕಾರಣದಿಂದ ನಾವು ದೇವರ ಸಭೆಗಳ ಮಧ್ಯೆ ನಿಮ್ಮ ನಿಮಿತ್ತ ಹೆಚ್ಚಳಪಡುತ್ತೇವೆ.
5 ನೀವು ಯಾವುದಕ್ಕಾಗಿ ಕಷ್ಟಾನುಭವಿಸುತ್ತಿದ್ದೀರೋ ಆ ದೇವರ ರಾಜ್ಯಕ್ಕೆ ಯೋಗ್ಯರಾಗಿ ಎಣಿಸಲ್ಪಡುವಂತೆ ಇದು ದೇವರ ನೀತಿಯ ನ್ಯಾಯತೀರ್ಪಿನ ರುಜುವಾತಾಗಿದೆ.
6 ಇದರಿಂದಾಗಿ ನಿಮಗೆ ಸಂಕಟವನ್ನು ಉಂಟುಮಾಡುವವರಿಗೆ ಪ್ರತಿಯಾಗಿ ಸಂಕಟವನ್ನೂ ಆದರೆ ಸಂಕಟವನ್ನು ಅನುಭವಿಸುವವರಾದ ನಿಮಗೆ ನಮ್ಮೊಂದಿಗೆ ಉಪಶಮನವನ್ನೂ ಕೊಡುವುದು ದೇವರ ಎಣಿಕೆಯಲ್ಲಿ ನೀತಿಯುತವಾದದ್ದಾಗಿದೆ.
7 ಕರ್ತನಾದ ಯೇಸು ಸ್ವರ್ಗದಿಂದ ತನ್ನ ಬಲಿಷ್ಠ ದೂತರೊಂದಿಗೆ ಉರಿಯುವ ಬೆಂಕಿಯಲ್ಲಿ ಪ್ರಕಟವಾಗುವ ಸಮಯದಲ್ಲಿ ಇದು ಸಂಭವಿಸುವುದು.
8 ಆಗ ಅವನು ದೇವರನ್ನು ಅರಿಯದವರಿಗೂ ನಮ್ಮ ಕರ್ತನಾದ ಯೇಸುವಿನ ಕುರಿತಾದ ಸುವಾರ್ತೆಗೆ ವಿಧೇಯರಾಗದವರಿಗೂ ಮುಯ್ಯಿತೀರಿಸುವನು.
9 ಇಂಥವರು ಕರ್ತನ ಸಮಕ್ಷಮದಿಂದಲೂ ಅವನ ಶಕ್ತಿಯ ಮಹಿಮೆಯಿಂದಲೂ ದೂರವಾಗಿ ನಿತ್ಯನಾಶನವೆಂಬ ದಂಡನೆಯ ನ್ಯಾಯತೀರ್ಪನ್ನು ಅನುಭವಿಸುವರು.
10 ಅವನು ತನ್ನ ಪವಿತ್ರ ಜನರ ಸಂಬಂಧದಲ್ಲಿ ಮಹಿಮೆಗೇರಿಸಲ್ಪಡುವ ಸಮಯದಲ್ಲಿ ಮತ್ತು ಆ ದಿನದಲ್ಲಿ ನಂಬಿಕೆಯನ್ನು ತೋರಿಸುವವರೆಲ್ಲರ ಸಂಬಂಧದಲ್ಲಿ ಆಶ್ಚರ್ಯಕರವಾಗಿ ಎಣಿಸಲ್ಪಡುವಾಗ ಇದು ಸಂಭವಿಸುತ್ತದೆ. ಏಕೆಂದರೆ ನಾವು ಕೊಟ್ಟ ಸಾಕ್ಷಿಯು ನಿಮ್ಮ ಮಧ್ಯೆ ನಂಬಿಕೆಗೆ ಪಾತ್ರವಾಗಿದೆ.
11 ನಮ್ಮ ದೇವರು ತನ್ನ ಕರೆಗೆ ನಿಮ್ಮನ್ನು ಯೋಗ್ಯರೆಂದು ಎಣಿಸಿ ತನಗೆ ಮೆಚ್ಚಿಕೆಯಾದ ಎಲ್ಲವನ್ನೂ ಸಂಪೂರ್ಣವಾಗಿ ತನ್ನ ಶಕ್ತಿಯಿಂದ ನಡಿಸಲಿ ಮತ್ತು ನೀವು ನಿಮ್ಮ ನಂಬಿಕೆಯಿಂದ ಪ್ರೇರೇಪಿಸಲ್ಪಟ್ಟು ಮಾಡುತ್ತಿರುವ ಎಲ್ಲವನ್ನೂ ಸಂಪೂರ್ಣಗೊಳಿಸಲಿ ಎಂದು ನಾವು ಯಾವಾಗಲೂ ನಿಮ್ಮ ಕುರಿತು ಪ್ರಾರ್ಥನೆಮಾಡುತ್ತೇವೆ.
12 ಹೀಗಾದರೆ ನಮ್ಮ ದೇವರ ಮತ್ತು ಕರ್ತನಾದ ಯೇಸು ಕ್ರಿಸ್ತನ ಅಪಾತ್ರ ದಯೆಗೆ ಹೊಂದಿಕೆಯಲ್ಲಿ ನಿಮ್ಮಲ್ಲಿ ನಮ್ಮ ಕರ್ತನಾದ ಯೇಸುವಿನ ಹೆಸರು ಮಹಿಮೆಗೊಳಿಸಲ್ಪಡುವುದು ಮತ್ತು ನೀವೂ ಅವನೊಂದಿಗೆ ಐಕ್ಯದಲ್ಲಿ ಮಹಿಮೆಗೊಳಿಸಲ್ಪಡುವಿರಿ.