2 ಥೆಸಲೊನೀಕ 3:1-18

3  ಕೊನೆಯದಾಗಿ ಸಹೋದರರೇ, ನಮಗೋಸ್ಕರ ಪ್ರಾರ್ಥನೆಮಾಡುತ್ತಾ ಇರಿ; ನಿಮ್ಮ ವಿಷಯದಲ್ಲಿ ಸಂಭವಿಸಿದಂತೆ ಯೆಹೋವನ ವಾಕ್ಯವು ತ್ವರಿತವಾಗಿ ಹಬ್ಬುತ್ತಾ ಮಹಿಮೆಗೊಳಿಸಲ್ಪಡುತ್ತಾ ಇರುವಂತೆ  ಮತ್ತು ಹಾನಿಮಾಡುವ ದುಷ್ಟ ಜನರ ಕೈಯಿಂದ ನಾವು ತಪ್ಪಿಸಲ್ಪಡುವಂತೆ ಪ್ರಾರ್ಥನೆಮಾಡಿರಿ; ಏಕೆಂದರೆ ನಂಬಿಕೆಯು ಎಲ್ಲರ ಸೊತ್ತಾಗಿರುವುದಿಲ್ಲ.  ಆದರೆ ಕರ್ತನು ನಂಬಿಗಸ್ತನು ಮತ್ತು ಅವನು ನಿಮ್ಮನ್ನು ದೃಢಪಡಿಸಿ ಕೆಡುಕನಿಂದ ಕಾಪಾಡುವನು.  ಇದಲ್ಲದೆ ನಾವು ನಿಮಗೆ ಆಜ್ಞಾಪಿಸುವಂಥ ವಿಷಯಗಳನ್ನು ನೀವು ಮಾಡುತ್ತಾ ಇದ್ದೀರಿ ಮತ್ತು ಮುಂದೆಯೂ ಮಾಡುವಿರಿ ಎಂದು ನಿಮ್ಮ ವಿಷಯವಾಗಿ ಕರ್ತನಲ್ಲಿ ನಮಗೆ ಭರವಸೆಯಿದೆ.  ಕರ್ತನು ನಿಮ್ಮ ಹೃದಯಗಳನ್ನು ದೇವರ ಪ್ರೀತಿಯಲ್ಲಿಯೂ ಕ್ರಿಸ್ತನಿಗಾಗಿರುವ ತಾಳ್ಮೆಯಲ್ಲಿಯೂ ಯಶಸ್ವಿಕರವಾಗಿ ಮಾರ್ಗದರ್ಶಿಸುತ್ತಾ ಇರಲಿ.  ಸಹೋದರರೇ, ನೀವು ನಮ್ಮಿಂದ ಹೊಂದಿದ ಬೋಧನೆಗಳಿಗೆ ಅನುಸಾರವಾಗಿ ನಡೆಯದೆ ಅಕ್ರಮವಾಗಿ ನಡೆಯುತ್ತಿರುವ ಪ್ರತಿಯೊಬ್ಬ ಸಹೋದರನಿಂದ ದೂರವಾಗಿರಬೇಕೆಂದು ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾವು ನಿಮಗೆ ಆಜ್ಞಾಪಿಸುತ್ತೇವೆ.  ನೀವು ನಮ್ಮನ್ನು ಅನುಕರಿಸಬೇಕಾದ ವಿಧವು ನಿಮಗೆ ತಿಳಿದಿದೆ; ಏಕೆಂದರೆ ನಾವು ನಿಮ್ಮ ಮಧ್ಯೆ ಅಕ್ರಮವಾಗಿ ವರ್ತಿಸಲಿಲ್ಲ  ಅಥವಾ ಉಚಿತವಾಗಿ ಯಾರ ಬಳಿಯೂ ಊಟಮಾಡಲಿಲ್ಲ. ಅದಕ್ಕೆ ಬದಲಾಗಿ, ನಿಮ್ಮಲ್ಲಿ ಯಾರ ಮೇಲೆಯೂ ಅತಿ ಖರ್ಚಿನ ಭಾರವನ್ನು ಹೊರಿಸಬಾರದೆಂಬ ಕಾರಣಕ್ಕಾಗಿ ನಾವು ಹಗಲೂರಾತ್ರಿ ಕಷ್ಟದಿಂದಲೂ ಪರಿಶ್ರಮದಿಂದಲೂ ಕೆಲಸಮಾಡುತ್ತಿದ್ದೆವು.  ನಮಗೆ ಹಕ್ಕು ಇಲ್ಲವೆಂದು ಹಾಗೆ ಮಾಡಲಿಲ್ಲ, ನಿಮಗೆ ಅನುಕರಿಸಲು ಮಾದರಿಯಾಗಿರಬೇಕೆಂದು ಹಾಗೆ ಮಾಡಿದೆವು. 10  ಮಾತ್ರವಲ್ಲದೆ, ನಾವು ನಿಮ್ಮೊಂದಿಗಿದ್ದಾಗ “ಕೆಲಸಮಾಡಲು ಇಷ್ಟವಿಲ್ಲದವನು ಊಟವನ್ನೂ ಮಾಡದಿರಲಿ” ಎಂದು ನಿಮಗೆ ಆಜ್ಞಾಪಿಸುತ್ತಿದ್ದೆವು. 11  ನಿಮ್ಮಲ್ಲಿ ಕೆಲವರು ಅಕ್ರಮವಾಗಿ ನಡೆಯುತ್ತಾ ಯಾವುದೇ ಕೆಲಸವನ್ನು ಮಾಡದೆ ತಮಗೆ ಸಂಬಂಧಿಸದ ವಿಚಾರಗಳಲ್ಲಿ ತಲೆಹಾಕುತ್ತಿದ್ದಾರೆ ಎಂದು ನಾವು ಕೇಳಿಸಿಕೊಂಡಿದ್ದೇವೆ. 12  ಇಂಥ ವ್ಯಕ್ತಿಗಳು ತಮ್ಮ ಕೆಲಸವನ್ನು ನೋಡುತ್ತಾ ತಾವೇ ಸಂಪಾದಿಸುವ ಆಹಾರವನ್ನು ಊಟಮಾಡಬೇಕೆಂದು ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾವು ಆಜ್ಞಾಪಿಸಿ ಬುದ್ಧಿಹೇಳುತ್ತೇವೆ. 13  ಸಹೋದರರೇ, ನೀವಾದರೋ ಒಳ್ಳೇದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ. 14  ನಾವು ಈ ಪತ್ರದ ಮೂಲಕ ತಿಳಿಸಿದ ಮಾತಿಗೆ ಯಾವನಾದರೂ ವಿಧೇಯನಾಗದಿರುವುದಾದರೆ ಅವನನ್ನು ಗುರುತಿಸಲ್ಪಟ್ಟವನಾಗಿ ಇಟ್ಟು, ಅವನಿಗೆ ನಾಚಿಕೆಯಾಗುವಂತೆ ಅವನೊಂದಿಗೆ ಸಹವಾಸಮಾಡುವುದನ್ನು ನಿಲ್ಲಿಸಿರಿ. 15  ಆದರೂ ಅವನನ್ನು ಒಬ್ಬ ವೈರಿಯಾಗಿ ಎಣಿಸದೆ, ಒಬ್ಬ ಸಹೋದರನೆಂದು ನೆನಸಿ ಬುದ್ಧಿಹೇಳುತ್ತಾ ಇರಿ. 16  ಶಾಂತಿಯ ಕರ್ತನು ನಿಮಗೆ ಪ್ರತಿಯೊಂದು ವಿಧದಲ್ಲಿಯೂ ಎಡೆಬಿಡದೆ ಶಾಂತಿಯನ್ನು ದಯಪಾಲಿಸಲಿ. ಕರ್ತನು ನಿಮ್ಮೆಲ್ಲರೊಂದಿಗಿರಲಿ. 17  ಇದು ಪೌಲನೆಂಬ ನಾನು ಸ್ವಂತ ಕೈಯಿಂದ ಬರೆದ ವಂದನೆ; ಪ್ರತಿಯೊಂದು ಪತ್ರದಲ್ಲಿಯೂ ಇದೇ ಗುರುತು. ನಾನು ಬರೆಯುವ ರೀತಿ ಇದೇ ಆಗಿದೆ. 18  ನಮ್ಮ ಕರ್ತನಾದ ಯೇಸು ಕ್ರಿಸ್ತನ ಅಪಾತ್ರ ದಯೆಯು ನಿಮ್ಮೆಲ್ಲರೊಂದಿಗಿರಲಿ.

ಪಾದಟಿಪ್ಪಣಿ