ಅರಣ್ಯಕಾಂಡ 16:1-50

  • ಕೋರಹ, ದಾತಾನ್‌, ಅಬೀರಾಮರ ದಂಗೆ (1-19)

  • ದಂಗೆಕೋರರಿಗೆ ಸಿಕ್ಕಿದ ಶಿಕ್ಷೆ (20-50)

16  ಆಮೇಲೆ ಕೋರಹ,+ ದಾತಾನ್‌, ಅಬೀರಾಮ್‌, ಓನ ಈ ನಾಲ್ಕು ಜನ ಸೇರ್ಕೊಂಡ್ರು. ಕೋರಹ ಇಚ್ಹಾರನ+ ಮಗ, ಕೆಹಾತನ+ ಮೊಮ್ಮಗ, ಲೇವಿಯ+ ಮರಿಮೊಮ್ಮಗ. ದಾತಾನ್‌ ಮತ್ತು ಅಬೀರಾಮ್‌ ಇಬ್ರೂ ರೂಬೇನ್‌ ಕುಲದ ಎಲೀಯಾಬನ+ ಮಕ್ಕಳು. ಓನ ರೂಬೇನ್‌+ ಕುಲದ ಪೆಲೆತನ ಮಗ.  ಆ ನಾಲ್ಕು ಜನ, ಇಸ್ರಾಯೇಲ್ಯರ 250 ಪ್ರಧಾನರು ಮೋಶೆ ವಿರುದ್ಧ ತಿರುಗಿಬಿದ್ರು. ಆ ಪ್ರಧಾನರು ಇಸ್ರಾಯೇಲ್ಯರಿಂದ ಆಯ್ಕೆಯಾದ ಗಣ್ಯ ಪುರುಷರು.  ಅವರೆಲ್ಲ ಸೇರ್ಕೊಂಡು ಬಂದು ಮೋಶೆ ಮತ್ತೆ ಆರೋನನ ವಿರುದ್ಧ+ ಮಾತಾಡ್ತಾ “ಸಾಕು ನಿಮ್ಮ ದರ್ಬಾರ್‌! ನೀವು ಮಾತ್ರ ತುಂಬ ಪವಿತ್ರರು ಅಂದ್ಕೊಂಡ್ರಾ? ಯೆಹೋವ ಎಲ್ಲಾ ಇಸ್ರಾಯೇಲ್ಯರ ಮಧ್ಯ ಇದ್ದಾನೆ.+ ಎಲ್ಲ ಇಸ್ರಾಯೇಲ್ಯರು, ಅವರಲ್ಲಿ ಒಬ್ಬೊಬ್ಬ ಇಸ್ರಾಯೇಲ್ಯನೂ ಪವಿತ್ರನಾಗಿ ಇದ್ದಾನೆ.+ ಅಂದ್ಮೇಲೆ ಯೆಹೋವನ ಸಭೆಗಿಂತ ನೀವೇ ಮಹಾನ್‌ ವ್ಯಕ್ತಿಗಳ ಹಾಗೆ ಯಾಕೆ ತೋರಿಸ್ಕೊಳ್ತಾ ಇದ್ದೀರಾ?” ಅಂತ ಕೇಳಿದ್ರು.  ಇದನ್ನ ಕೇಳಿದ ಕೂಡ್ಲೇ ಮೋಶೆ ಮಂಡಿಯೂರಿ ನೆಲದ ತನಕ ಬಗ್ಗಿದ.  ಆಮೇಲೆ ಕೋರಹ ಮತ್ತೆ ಅವನ ಬೆಂಬಲಿಗರಿಗೆ “ತನ್ನವರು ಯಾರು+ ಅಂತ ಯೆಹೋವ ಬೆಳಿಗ್ಗೆ ತೋರಿಸ್ತಾನೆ. ಯಾರು ಪವಿತ್ರರು, ಯಾರು ಆತನ ಹತ್ರ ಹೋಗಬೇಕು,+ ಅದಕ್ಕಾಗಿ ಆತನು ಯಾರನ್ನ ಆರಿಸ್ಕೊಂಡಿದ್ದಾನೆ+ ಅಂತ ನಿಮಗೆ ಗೊತ್ತಾಗೋ ಹಾಗೆ ಮಾಡ್ತೀನಿ. ದೇವರು ಆರಿಸ್ಕೊಂಡವನೇ ಆತನ ಹತ್ರ ಹೋಗ್ಲಿ.  ಕೋರಹ, ನಾಳೆ ನೀನು ಮತ್ತೆ ನಿನ್ನನ್ನ ಬೆಂಬಲಿಸೋರೆಲ್ಲ+ ಧೂಪ ಹಾಕೋ ಪಾತ್ರೆಗಳನ್ನ+ ತಗೊಂಡು  ಅದ್ರಲ್ಲಿ ಕೆಂಡಗಳನ್ನ ಇಟ್ಟು ಯೆಹೋವನ ಮುಂದೆ ಧೂಪ ಹಾಕಿ. ಯೆಹೋವ ಯಾರನ್ನ ಆರಿಸ್ಕೊಳ್ತಾನೋ+ ಅವನೇ ಪವಿತ್ರ. ಲೇವಿ ವಂಶದ+ ನೀವು ಹದ್ದುಮೀರಿ ವರ್ತಿಸ್ತಾ ಇದ್ದೀರ!” ಅಂದ.  ಆಮೇಲೆ ಮೋಶೆ ಕೋರಹನಿಗೆ “ಲೇವಿಯರೇ, ದಯವಿಟ್ಟು ನಾನು ಹೇಳೋದು ಕೇಳಿ.  ಇಸ್ರಾಯೇಲಿನ ದೇವರು ನಿಮ್ಮನ್ನ ಎಲ್ಲ ಇಸ್ರಾಯೇಲ್ಯರಿಂದ ಪ್ರತ್ಯೇಕಿಸಿದ್ದಾನೆ!+ ಯೆಹೋವ ದೇವರ ಪವಿತ್ರ ಡೇರೆಯ ಸೇವೆ ಮಾಡೋಕೆ ಆತನ ಹತ್ರ ಬರೋ ಅವಕಾಶನ ನಿಮಗೆ ಕೊಟ್ಟಿದ್ದಾನೆ! ಅಷ್ಟೇ ಅಲ್ಲ ಎಲ್ಲಾ ಇಸ್ರಾಯೇಲ್ಯರ ಮುಂದೆ ನಿಂತು ಅವ್ರ ಸೇವೆ ಮಾಡೋಕೆ ಆತನು ನಿಮ್ಮನ್ನ ನೇಮಿಸಿದ್ದಾನೆ!+ ಇದೆಲ್ಲ ಒಂದು ಸಾಧಾರಣ ವಿಷ್ಯನಾ? 10  ದೇವರು ನಿನಗೆ, ಲೇವಿಯರಾದ ನಿನ್ನ ಎಲ್ಲ ಸಹೋದರರಿಗೆ ತನ್ನ ಹತ್ರ ಬರೋ ಅವಕಾಶ ಕೊಟ್ಟಿದ್ದಾನಲ್ಲಾ. ಇದೇನು ಚಿಕ್ಕ ವಿಷ್ಯನಾ? ಈಗ ಪುರೋಹಿತಸೇವೆ ಕೂಡ ಸಿಗಬೇಕಂತ ಆಸೆ ಪಡ್ತೀರಲ್ಲಾ?+ 11  ನೀನೂ ನಿನ್ನ ಬೆಂಬಲಿಗರೂ ಇಂಥ ಕೆಲಸ ಮಾಡಿ ಯೆಹೋವನ ವಿರುದ್ಧ ಎದ್ದಿದ್ದೀರ. ಆರೋನ ಯಾರು ಅಂತ ಅಂದ್ಕೊಂಡು ಅವನ ವಿರುದ್ಧ ಗೊಣಗ್ತಾ ಇದ್ದೀರಾ?”+ ಅಂದ. 12  ಮೋಶೆ ಎಲೀಯಾಬನ ಮಕ್ಕಳಾದ ದಾತಾನ್‌, ಅಬೀರಾಮನನ್ನ+ ಕರೆಸಿದ. ಆದ್ರೆ ಅವರು “ನಾವು ಬರಲ್ಲ! 13  ನೀನು ಮಾಡಿರೋದು ಒಂದಾ ಎರಡಾ? ಹಾಲೂ ಜೇನೂ ಹರಿಯೋ ದೇಶದಿಂದ ನಮ್ಮನ್ನ ಕರ್ಕೊಂಡು ಬಂದು ಈ ಕಾಡಲ್ಲಿ ಸಾಯಿಸ್ತಿದ್ದೀಯ.+ ಇಷ್ಟೆಲ್ಲ ಮಾಡಿದ್ದು ಸಾಲದು ಅಂತ ಈಗ ನಮ್ಮ ಮೇಲೆ ಸರ್ವಾಧಿಕಾರಿಯಾಗಿ ಆಳಬೇಕಂತ ಇದ್ದೀಯಾ? 14  ನೀನು ನಮ್ಮನ್ನ ಹಾಲೂ ಜೇನೂ ಹರಿಯೋ ದೇಶಕ್ಕೆ+ ಕರ್ಕೊಂಡು ಹೋಗ್ತೀನಂತ ಹೇಳಿದ್ದೆ. ಆದ್ರೆ ಎಲ್ಲಿ ಕರ್ಕೊಂಡು ಹೋದೆ? ಹೊಲ, ದ್ರಾಕ್ಷಿತೋಟ ಯಾವುದನ್ನೂ ನಮಗೆ ಕೊಡಲಿಲ್ಲ. ಜನ ಕಣ್ಣು ಮುಚ್ಕೊಂಡು ನಿನ್ನ ಹಿಂದೆ ಬರಬೇಕಂತ ನೆನಸ್ತೀಯಾ? ನಾವು ಬರಲ್ಲ!” ಅಂದ್ರು. 15  ಮೋಶೆಗೆ ತುಂಬ ಸಿಟ್ಟು ಬಂತು. ಅವನು ಯೆಹೋವನಿಗೆ “ದೇವರೇ, ಅವರು ಕೊಟ್ಟ ಧಾನ್ಯ ಅರ್ಪಣೆನ ಮೆಚ್ಚಬೇಡ. ನಾನು ಅವ್ರಿಗೆ ಏನು ಮಾಡ್ದೆ ಅಂತ ಹೀಗೆ ಮಾಡ್ತಿದ್ದಾರೆ? ಅವ್ರಿಂದ ಒಂದು ಕತ್ತೆನೂ ತಗೊಂಡಿಲ್ಲ. ಅವ್ರಲ್ಲಿ ಒಬ್ಬರಿಗೂ ಹಾನಿ ಮಾಡಿಲ್ಲ”+ ಅಂದ. 16  ಆಮೇಲೆ ಮೋಶೆ ಕೋರಹನಿಗೆ “ನೀನೂ ನಿನ್ನ ಎಲ್ಲ ಬೆಂಬಲಿಗರೂ ನಾಳೆ ಯೆಹೋವನ ಮುಂದೆ ಬರಬೇಕು. ಆರೋನ ಕೂಡ ಬರಬೇಕು. 17  ನೀನು ಮತ್ತೆ ನಿನ್ನ ಬೆಂಬಲಿಗರಾದ 250 ಜನ್ರಲ್ಲಿ ಪ್ರತಿಯೊಬ್ಬ ಧೂಪ ಹಾಕೋ ಒಂದೊಂದು ಪಾತ್ರೆ ತಗೊಂಡು ಅದ್ರಲ್ಲಿ ಧೂಪಹಾಕಿ ಯೆಹೋವನ ಮುಂದೆ ತನ್ನಿ. ಆರೋನನೂ ಅದೇ ತರ ಮಾಡ್ಲಿ” ಅಂದ. 18  ಹಾಗಾಗಿ ಅವರೆಲ್ಲ ಧೂಪ ಹಾಕೋ ಪಾತ್ರೆಗಳನ್ನ ತಗೊಂಡು ಕೆಂಡಗಳನ್ನ ಇಟ್ಟು ಧೂಪ ಹಾಕಿದ್ರು. ಆಮೇಲೆ ಅವರು ಮೋಶೆ ಮತ್ತು ಆರೋನನ ಜೊತೆ ದೇವದರ್ಶನ ಡೇರೆಯ ಬಾಗಿಲ ಹತ್ರ ನಿಂತ್ರು. 19  ಕೋರಹ ತನ್ನ ಬೆಂಬಲಿಗರನ್ನ+ ಕರ್ಕೊಂಡು ಮೋಶೆ ಆರೋನರಿಗೆ ವಿರುದ್ಧ ದೇವದರ್ಶನ ಡೇರೆಯ ಬಾಗಿಲ ಹತ್ರ ಬಂದಾಗ ಯೆಹೋವನ ಮಹಿಮೆ ಎಲ್ಲ ಇಸ್ರಾಯೇಲ್ಯರಿಗೆ ಕಾಣಿಸ್ತು.+ 20  ಆಗ ಯೆಹೋವ ಮೋಶೆಗೆ, ಆರೋನನಿಗೆ 21  “ನೀವು ಈ ಜನ್ರ ಗುಂಪಿಂದ ದೂರ ಹೋಗಿ. ನಾನು ಅವರನ್ನ ಒಂದೇ ಕ್ಷಣದಲ್ಲಿ ನಾಶ ಮಾಡಿಬಿಡ್ತೀನಿ”+ ಅಂದನು. 22  ಆಗ ಅವರಿಬ್ರು ಮಂಡಿಯೂರಿ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿ “ದೇವರೇ, ಎಲ್ರಿಗೆ ಜೀವ ಕೊಡೋನು ನೀನೇ.+ ಒಬ್ಬ ಪಾಪ ಮಾಡಿದ ಅನ್ನೋ ಕಾರಣಕ್ಕೆ ನೀನು ಎಲ್ರ ಮೇಲೆ ಕೋಪ ತೋರಿಸ್ತೀಯಾ?”+ ಅಂದ್ರು. 23  ಆಗ ಯೆಹೋವ ಮೋಶೆಗೆ 24  “ಕೋರಹ, ದಾತಾನ್‌, ಅಬೀರಾಮನ+ ಡೇರೆ ಹತ್ರ ಯಾರೂ ಇರಬಾರದು, ಅಲ್ಲಿಂದ ದೂರ ಹೋಗಬೇಕಂತ ಎಲ್ಲ ಇಸ್ರಾಯೇಲ್ಯರಿಗೆ ಹೇಳು” ಅಂದನು. 25  ಆಗ ಮೋಶೆ ದಾತಾನ್‌ ಮತ್ತು ಅಬೀರಾಮ ಇದ್ದಲ್ಲಿ ಹೋದ. ಅವನ ಜೊತೆ ಇಸ್ರಾಯೇಲ್ಯರ ಹಿರಿಯರೂ+ ಹೋದ್ರು. 26  ಮೋಶೆ ಎಲ್ರಿಗೆ “ದಯವಿಟ್ಟು ಈ ಕೆಟ್ಟವರ ಡೇರೆಗಳಿಂದ ದೂರ ಹೋಗಿ. ಅವ್ರಿಗೆ ಸೇರಿದ ವಸ್ತುನ ಮುಟ್ಟಬೇಡಿ. ಇಲ್ಲದಿದ್ರೆ ಅವರು ಮಾಡಿದ ಪಾಪಕ್ಕೆ ನೀವೂ ಅವ್ರ ಜೊತೆ ನಾಶ ಆಗ್ತೀರ” ಅಂದ. 27  ಕೂಡ್ಲೇ ಕೋರಹ, ದಾತಾನ್‌, ಅಬೀರಾಮರ ಡೇರೆಗಳ ಸುತ್ತ ಇದ್ದ ಜನ ಅಲ್ಲಿಂದ ದೂರ ಹೋದ್ರು. ದಾತಾನ್‌ ಮತ್ತು ಅಬೀರಾಮ್‌ ಇಬ್ರೂ ತಮ್ಮ ಡೇರೆಗಳಿಂದ ಹೊರಗೆ ಬಂದ್ರು. ತಮ್ಮ ಹೆಂಡತಿ, ಗಂಡು ಮಕ್ಕಳು, ಚಿಕ್ಕ ಮಕ್ಕಳ ಜೊತೆ ಬಾಗಿಲಲ್ಲಿ ನಿಂತ್ರು. 28  ಆಗ ಮೋಶೆ “ಯೆಹೋವನೇ ನನ್ನನ್ನ ಕಳಿಸಿದ್ದಾನೆ, ನಾನು ಸ್ವಂತ ಇಷ್ಟದಿಂದ ಇದನ್ನೆಲ್ಲ ಮಾಡಿಲ್ಲ, ಆತನು ಹೇಳಿದ ಹಾಗೇ ಮಾಡಿದ್ದೀನಿ ಅಂತ ನಿಮಗೀಗ ಗೊತ್ತಾಗುತ್ತೆ. 29  ಎಲ್ರಿಗೆ ಸಾವು ಬರೋ ಹಾಗೇ ಇವರಿಗೂ ಸಾವು ಬಂದ್ರೆ ಎಲ್ರಿಗೆ ಸಿಗೋ ಶಿಕ್ಷೆನೇ ಇವ್ರಿಗೂ ಸಿಕ್ಕಿದ್ರೆ ಯೆಹೋವ ನನ್ನನ್ನ ಕಳಿಸಿಲ್ಲ ಅಂತ ತಿಳ್ಕೊಳ್ಳಿ.+ 30  ಆದ್ರೆ ಇಲ್ಲಿ ತನಕ ಯಾರೂ ಕಂಡುಕೇಳಿರದ ಶಿಕ್ಷೆನ ಯೆಹೋವ ಇವರಿಗೆ ಕೊಟ್ರೆ ಅಂದ್ರೆ ಇವರು ನಿಂತಿರೋ ಭೂಮಿ ಬಾಯಿ ತೆರೆದು ಇವರನ್ನೂ ಇವ್ರಿಗೆ ಸೇರಿರೋ ಎಲ್ಲವನ್ನೂ ನುಂಗಿ ಜೀವಂತ ಸಮಾಧಿ* ಮಾಡಿದ್ರೆ ಇವರು ನಿಜವಾಗ್ಲೂ ಯೆಹೋವನಿಗೆ ಗೌರವ ಕೊಟ್ಟಿಲ್ಲ ಅಂತ ತಿಳ್ಕೊಳ್ಳಿ” ಅಂದ. 31  ಅವನು ಇದನ್ನ ಹೇಳಿ ಮುಗಿಸಿದ ಕೂಡ್ಲೇ ಅವರು ನಿಂತಿದ್ದ ನೆಲ ಸೀಳಿ ಎರಡು ಭಾಗ ಆಯ್ತು.+ 32  ಭೂಮಿ ಬಾಯಿ ತೆರೆದು ಅವರನ್ನ, ಅವ್ರ ಮನೆಯವರನ್ನ ಅಷ್ಟೇ ಅಲ್ಲ ಕೋರಹನ+ ಪಕ್ಷವಹಿಸಿದ ಎಲ್ರನ್ನ ಮತ್ತು ಅವ್ರಿಗೆ ಸೇರಿದ ಎಲ್ಲವನ್ನ ನುಂಗಿಬಿಡ್ತು. 33  ಅವರೂ ಅವ್ರ ಪಕ್ಷವಹಿಸಿದ ಎಲ್ರೂ ಜೀವಂತ ಸಮಾಧಿ* ಆದ್ರು. ಭೂಮಿ ಅವರನ್ನ ಮುಚ್ಚಿಬಿಡ್ತು. ಹೀಗೆ ಅವರು ಇಸ್ರಾಯೇಲ್‌ ಸಭೆ ಮಧ್ಯದಿಂದ ಹೇಳಹೆಸರಿಲ್ಲದೆ ನಾಶವಾಗಿ ಹೋದ್ರು.+ 34  ಭೂಮಿ ನುಂಗುವಾಗ ಅವ್ರ ಕಿರಿಚಾಟನ ಸುತ್ತ ಇದ್ದ ಇಸ್ರಾಯೇಲ್ಯರು ಕೇಳಿ “ಅಯ್ಯೋ, ಭೂಮಿ ನಮ್ಮನ್ನೂ ನುಂಗಿಬಿಡುತ್ತೇನೋ” ಅಂತ ಕೂಗಿ ದೂರ ಓಡಿದ್ರು. 35  ಆಗ ಯೆಹೋವನಿಂದ ಬೆಂಕಿ ಬಂದು+ ಧೂಪ ಅರ್ಪಿಸ್ತಿದ್ದ 250 ಜನ್ರನ್ನ ಸುಟ್ಟುಬಿಡ್ತು.+ 36  ಆಮೇಲೆ ಯೆಹೋವ ಮೋಶೆಗೆ 37  “ಧೂಪಹಾಕೋ ಪಾತ್ರೆಗಳನ್ನ+ ಆ ಬೆಂಕಿಯಿಂದ ತೆಗಿಯೋಕೆ ಪುರೋಹಿತನಾದ ಆರೋನನ ಮಗ ಎಲ್ಲಾಜಾರನಿಗೆ ಹೇಳು. ಯಾಕಂದ್ರೆ ಅವು ಪವಿತ್ರವಾಗಿವೆ. ಕೆಂಡಗಳನ್ನ ದೂರ ತಗೊಂಡು ಹೋಗಿ ಬಿಸಾಡೋಕೆ ಹೇಳು. 38  ಪಾಪ ಮಾಡಿ ಜೀವ ಕಳ್ಕೊಂಡವರ ಹತ್ರ ಇದ್ದ ಧೂಪ ಹಾಕೋ ಪಾತ್ರೆಗಳನ್ನ ಬಡಿದು ತೆಳುವಾದ ತಗಡುಗಳಾಗಿ ಮಾಡಬೇಕು. ಅವುಗಳನ್ನ ಯಜ್ಞವೇದಿಗೆ ಹೊದಿಸಬೇಕು.+ ಯಾಕಂದ್ರೆ ಧೂಪ ಹಾಕೋ ಆ ಪಾತ್ರೆಗಳನ್ನ ಯೆಹೋವನ ಮುಂದೆ ತಂದಿದ್ರಿಂದ ಅವು ಪವಿತ್ರವಾಗಿವೆ. ಆ ತಗಡುಗಳು ಇಸ್ರಾಯೇಲ್ಯರಿಗೆ ಎಚ್ಚರಿಕೆ ಕೊಡೋ ಗುರುತಾಗಿರುತ್ತೆ”+ ಅಂದನು. 39  ಬೆಂಕಿಯಿಂದ ಸತ್ತವರು ತಂದಿದ್ದ ಧೂಪ ಹಾಕೋ ತಾಮ್ರದ ಪಾತ್ರೆಗಳನ್ನ ಪುರೋಹಿತ ಎಲ್ಲಾಜಾರ ತಗೊಂಡು ಅವುಗಳನ್ನ ಬಡಿದು ಯಜ್ಞವೇದಿಗೆ ಹೊದಿಸಿದ. 40  ಮೋಶೆ ಮೂಲಕ ಯೆಹೋವ ಹೇಳಿದ ಹಾಗೇ ಅವನು ಮಾಡಿದ. ಇದು ಆರೋನನ ವಂಶದವರನ್ನ ಬಿಟ್ಟು ಬೇರೆ ಯಾರೂ ಯೆಹೋವನ ಮುಂದೆ ಧೂಪ ಹಾಕಬಾರದು,+ ಯಾರೂ ಕೋರಹ ಮತ್ತೆ ಅವನ ಬೆಂಬಲಿಗರ ತರ ನಾಶ ಆಗಬಾರದು+ ಅಂತ ಇಸ್ರಾಯೇಲ್ಯರಿಗೆ ನೆನಪು ಹುಟ್ಟಿಸ್ತಾ ಇತ್ತು. 41  ಮಾರನೇ ದಿನಾನೇ ಎಲ್ಲ ಇಸ್ರಾಯೇಲ್ಯರು ಮೋಶೆ ಆರೋನರಿಗೆ “ನೀವು ಯೆಹೋವನ ಜನ್ರನ್ನ ಸಾಯಿಸಿಬಿಟ್ರಿ” ಅಂತ ಅವ್ರ ವಿರುದ್ಧ ಗೊಣಗೋಕೆ ಶುರು ಮಾಡಿದ್ರು.+ 42  ಎಲ್ರೂ ಮೋಶೆ ಮತ್ತೆ ಆರೋನನ ವಿರುದ್ಧ ಕೂಡಿಬಂದ್ರು. ಅವ್ರೆಲ್ಲ ದೇವದರ್ಶನ ಡೇರೆ ಕಡೆ ನೋಡಿದಾಗ ಮೋಡ ದೇವದರ್ಶನ ಡೇರೆನ ಮುಚ್ಕೊಳ್ತು! ಯೆಹೋವನ ಮಹಿಮೆ ಅವರಿಗೆ ಕಾಣಿಸ್ತು.+ 43  ಮೋಶೆ ಮತ್ತು ಆರೋನ ದೇವದರ್ಶನ ಡೇರೆ ಮುಂದೆ ಹೋದ್ರು.+ 44  ಯೆಹೋವ ಮೋಶೆಗೆ 45  “ನೀವು ಈ ಜನ್ರಿಂದ ದೂರ ಹೋಗಿ. ನಾನು ಒಂದೇ ಕ್ಷಣದಲ್ಲಿ ಇವರನ್ನ ನಾಶ ಮಾಡಿಬಿಡ್ತೀನಿ”+ ಅಂದನು. ಆಗ ಅವರಿಬ್ರೂ ಮಂಡಿಯೂರಿ ನೆಲದ ತನಕ ಬಗ್ಗಿದ್ರು.+ 46  ಆಗ ಮೋಶೆ ಆರೋನನಿಗೆ “ನೀನು ಧೂಪ ಹಾಕೋ ಪಾತ್ರೆಯನ್ನ ಬೇಗ ತಗೊಂಡು ಯಜ್ಞವೇದಿಯಿಂದ ಕೆಂಡಗಳನ್ನ ತೆಗೆದು ಅದ್ರಲ್ಲಿಟ್ಟು+ ಅದ್ರ ಮೇಲೆ ಧೂಪ ಹಾಕಿ ಇಸ್ರಾಯೇಲ್ಯರ ಹತ್ರ ಹೋಗು, ಅವರಿಗಾಗಿ ಪ್ರಾಯಶ್ಚಿತ್ತ ಮಾಡು.+ ಯಾಕಂದ್ರೆ ಯೆಹೋವನಿಗೆ ಜನ್ರ ಮೇಲೆ ತುಂಬ ಕೋಪ ಬಂದಿದೆ. ಜನ್ರಲ್ಲಿ ಕಾಯಿಲೆ ಹರಡೋಕೆ ಶುರು ಆಗಿದೆ!” ಅಂದ. 47  ತಕ್ಷಣ ಆರೋನ ಮೋಶೆ ಹೇಳಿದ ಹಾಗೇ ಧೂಪ ಹಾಕೋ ಪಾತ್ರೆ ತಗೊಂಡು ಇಸ್ರಾಯೇಲ್‌ ಜನ್ರ ಮಧ್ಯದಲ್ಲಿ ಓಡಿದ. ಕಾಯಿಲೆ ಜನ್ರಲ್ಲಿ ಹರಡೋಕೆ ಶುರು ಆಗಿತ್ತು. ಹಾಗಾಗಿ ಅವನು ಧೂಪ ಹಾಕಿ ಜನರಿಗಾಗಿ ಪ್ರಾಯಶ್ಚಿತ್ತ ಮಾಡೋಕೆ ಶುರು ಮಾಡಿದ. 48  ಸತ್ತವರ ಮತ್ತು ಬದುಕಿದ್ದವರ ಮಧ್ಯ ಆರೋನ ನಿಂತೇ ಇದ್ದ. ಕೊನೆಗೆ ಆ ಕಾಯಿಲೆ ನಿಂತುಹೋಯ್ತು. 49  ಕೋರಹನ ಜೊತೆ ಸೇರಿ ಸತ್ತವರಲ್ಲದೆ ಈ ಕಾಯಿಲೆಯಿಂದ ಸತ್ತವರು 14,700 ಜನ. 50  ಕಾಯಿಲೆ ನಿಂತ ಮೇಲೆ ಆರೋನ ದೇವದರ್ಶನ ಡೇರೆಯ ಬಾಗಿಲ ಹತ್ರ ಮೋಶೆ ಇದ್ದ ಜಾಗಕ್ಕೆ ವಾಪಸ್‌ ಹೋದ.

ಪಾದಟಿಪ್ಪಣಿ