ಅರಣ್ಯಕಾಂಡ 27:1-23
27 ಚಲ್ಪಹಾದನ+ ಹೆಣ್ಣು ಮಕ್ಕಳು ಮಹ್ಲಾ, ನೋವಾ, ಹೊಗ್ಲಾ, ಮಿಲ್ಕ, ತಿರ್ಚಾ ಇವರೆಲ್ಲ ಮೋಶೆ ಹತ್ರ ಹೋದ್ರು. ಚಲ್ಪಹಾದ ಹೇಫೆರನ ಮಗ. ಹೇಫೆರ ಗಿಲ್ಯಾದನ ಮಗ. ಗಿಲ್ಯಾದ ಮಾಕೀರನ ಮಗ. ಮಾಕೀರ ಮನಸ್ಸೆಯ ಮಗ. ಮನಸ್ಸೆ ಯೋಸೇಫನ ಮಗ. ಹೀಗೆ ಚಲ್ಪಹಾದನ ಕುಟುಂಬ ಮನಸ್ಸೆ ಕುಲದಿಂದ ಬಂದ ಕುಟುಂಬಗಳಿಗೆ ಸೇರಿತ್ತು.
2 ಚಲ್ಪಹಾದನ ಹೆಣ್ಣು ಮಕ್ಕಳು ದೇವದರ್ಶನ ಡೇರೆ ಬಾಗಿಲ ಹತ್ರ ಹೋದ್ರು. ಅಲ್ಲಿ ಮೋಶೆ, ಪುರೋಹಿತ ಎಲ್ಲಾಜಾರ್, ಪ್ರಧಾನರು+ ಮತ್ತೆ ಇಡೀ ಇಸ್ರಾಯೇಲ್ಯರ ಮುಂದೆ ನಿಂತು
3 “ನಮ್ಮ ಅಪ್ಪಾಗೆ ಗಂಡು ಮಕ್ಕಳಿಲ್ಲ. ಅವನು ಕಾಡಲ್ಲಿ ತೀರಿಹೋದ. ಆದ್ರೆ ಅವನು ಯೆಹೋವನ ವಿರುದ್ಧ ಗುಂಪು ಕಟ್ಕೊಂಡ ಕೋರಹನ ಜನ್ರ ಜೊತೆ ಇರಲಿಲ್ಲ.+ ಅವನು ತನ್ನ ಪಾಪದಿಂದ ಸತ್ತ.
4 ನಮ್ಮ ಅಪ್ಪಾಗೆ ಗಂಡು ಮಕ್ಕಳಿಲ್ಲ ಅನ್ನೋ ಕಾರಣಕ್ಕೆ ಅವನ ಹೆಸ್ರನ್ನ ಕುಟುಂಬದಿಂದ ತೆಗೆದುಬಿಡಬೇಕಾ? ಹಾಗೆ ಆಗಬಾರ್ದು ಅಂದ್ರೆ ನಮ್ಮ ಅಪ್ಪನ ಅಣ್ಣತಮ್ಮಂದಿರಿಗೆ ಜಮೀನನ್ನ ಆಸ್ತಿಯಾಗಿ ಕೊಡುವಾಗ ನಮಗೂ ಒಂದು ಪಾಲು ಕೊಡಬೇಕು ಅಂತ ಕೇಳ್ಕೊಳ್ತೀವಿ” ಅಂದ್ರು.
5 ಆಗ ಮೋಶೆ ಆ ವಿಷ್ಯಾನ ಯೆಹೋವನ ಮುಂದೆ ಇಟ್ಟ.+
6 ಯೆಹೋವ ಮೋಶೆಗೆ
7 “ಚಲ್ಪಹಾದನ ಹೆಣ್ಣು ಮಕ್ಕಳು ಹೇಳ್ತಿರೋದು ಸರಿ. ಅವ್ರ ಅಪ್ಪಾಗೆ ಸಿಗಬೇಕಾದ ಆಸ್ತಿ ಅವರಿಗೆ ಸಿಗಬೇಕು. ಹಾಗಾಗಿ ನೀನು ಅವ್ರ ಅಪ್ಪನ ಅಣ್ಣತಮ್ಮಂದಿರಿಗೆ ಜಮೀನನ್ನ ಆಸ್ತಿಯಾಗಿ ಕೊಡುವಾಗ ಈ ಹೆಣ್ಣು ಮಕ್ಕಳಿಗೂ ಒಂದು ಪಾಲು ಕೊಡ್ಲೇಬೇಕು.+
8 ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಒಬ್ಬ ಸತ್ತಾಗ ಅವನ ಆಸ್ತಿ ಪಡಿಯೋಕೆ ಮಗ ಇಲ್ಲದಿದ್ರೆ ಅದನ್ನ ಮಗಳಿಗೆ ಕೊಡಬೇಕು.
9 ಮಗಳೂ ಇಲ್ಲದಿದ್ರೆ ಅವನ ಅಣ್ಣತಮ್ಮಂದಿರಿಗೆ ಕೊಡಬೇಕು.
10 ಅಣ್ಣತಮ್ಮಂದಿರೂ ಇಲ್ಲದಿದ್ರೆ ಅವನ ತಂದೆಯ ಅಣ್ಣತಮ್ಮಂದಿರಿಗೆ ಕೊಡಬೇಕು.
11 ಒಂದುವೇಳೆ ಅವನ ತಂದೆಗೂ ಅಣ್ಣತಮ್ಮಂದಿರು ಇಲ್ಲದಿದ್ರೆ ಕುಟುಂಬದಲ್ಲಿರೋ ಹತ್ರದ ರಕ್ತಸಂಬಂಧಿಗೆ ಕೊಡಬೇಕು. ಆ ಆಸ್ತಿ ಆ ರಕ್ತಸಂಬಂಧಿಗೆ ಸೇರುತ್ತೆ. ಯೆಹೋವ ಮೋಶೆಗೆ ಆಜ್ಞಾಪಿಸಿರೋ ಹಾಗೇ ಈ ತೀರ್ಪು ಇಸ್ರಾಯೇಲ್ಯರು ಪಾಲಿಸಬೇಕಾದ ಒಂದು ನಿಯಮ” ಅಂದನು.
12 ಆಮೇಲೆ ಯೆಹೋವ ಮೋಶೆಗೆ “ನೀನು ಅಬಾರೀಮಿನ ಈ ಬೆಟ್ಟ+ ಹತ್ತಿ ಇಸ್ರಾಯೇಲ್ಯರಿಗೆ ನಾನು ಕೊಡೋ ದೇಶ ನೋಡು.+
13 ಅದನ್ನ ನೋಡಿದ ಮೇಲೆ ನಿನ್ನ ಅಣ್ಣ ಆರೋನನ ತರ ನೀನೂ ಸಾಯ್ತೀಯ. ನಿನ್ನ ಪೂರ್ವಜರ ತರ ನಿನಗೂ ಸಮಾಧಿ ಆಗುತ್ತೆ.+
14 ಯಾಕಂದ್ರೆ ಚಿನ್ ಕಾಡಲ್ಲಿ ಇಸ್ರಾಯೇಲ್ಯರು ನನ್ನ ಜೊತೆ ಜಗಳ ಮಾಡಿದಾಗ ನಾನು ಅವರಿಗೆ ನೀರು ಕೊಟ್ಟೆ. ಆಗ ನೀವಿಬ್ರೂ ಜನ್ರ ಮುಂದೆ ನನ್ನನ್ನ ಪವಿತ್ರ ಅಂತ ತೋರಿಸ್ಕೊಟ್ಟು ಗೌರವ ಕೊಡಬೇಕಿತ್ತು.+ ಆದ್ರೆ ನೀವು ನಾನು ಹೇಳಿದ್ದನ್ನ ಕೇಳದೆ ನನ್ನ ವಿರುದ್ಧ ದಂಗೆ ಎದ್ರಿ” ಅಂದನು. ಆತನು ಚಿನ್ ಕಾಡಿನ+ ಕಾದೇಶಿನಲ್ಲಿರೋ+ ಮೆರೀಬಾದ ನೀರಿನ ಹತ್ರ+ ನಡೆದ ಘಟನೆ ಬಗ್ಗೆ ಹೇಳ್ತಿದ್ದನು.
15 ಆಗ ಮೋಶೆ ಯೆಹೋವನಿಗೆ
16 “ಯೆಹೋವನೇ ಎಲ್ಲ ಜನ್ರಿಗೆ ಜೀವ ಕೊಡೋ ದೇವರೇ, ಈ ಜನ್ರ ಮೇಲೆ ಒಬ್ಬ ನಾಯಕನನ್ನ ನೇಮಿಸು.
17 ಯೆಹೋವನ ಜನ್ರು ಕುರುಬನಿಲ್ಲದ ಕುರಿಗಳ ತರ ಆಗಬಾರದು. ಹಾಗಾಗಿ ಮುಂದೆ ನಿಂತು ನಡಿಸೋಕೆ ಒಬ್ಬನನ್ನ ನೇಮಿಸು. ಎಲ್ಲ ವಿಷ್ಯಗಳಲ್ಲಿ ಅವನು ಅವರಿಗೆ ದಾರಿ ತೋರಿಸ್ಲಿ. ಏನೆಲ್ಲ ಮಾಡಬೇಕು ಅಂತ ಹೇಳ್ಕೊಡ್ಲಿ” ಅಂದನು.
18 ಆಗ ಯೆಹೋವ ಮೋಶೆಗೆ “ನೂನನ ಮಗ ಯೆಹೋಶುವ ಅದಕ್ಕೆ ಸರಿಯಾದ ವ್ಯಕ್ತಿ. ಅವನನ್ನ ಕರ್ಕೊಂಡು ಬಂದು ಅವನ ಮೇಲೆ ನಿನ್ನ ಕೈಯಿಡು.+
19 ಅವನನ್ನ ಪುರೋಹಿತ ಎಲ್ಲಾಜಾರನ ಮುಂದೆ, ಎಲ್ಲ ಜನ್ರ ಮುಂದೆ ನಿಲ್ಲಿಸಿ ಅವ್ರ ಕಣ್ಮುಂದೆನೇ ನಾಯಕನಾಗಿ ನೇಮಿಸು.+
20 ನಿನಗಿರೋ ಅಧಿಕಾರದಲ್ಲಿ* ಸ್ವಲ್ಪ ಅವನಿಗೆ ಕೊಡು.+ ಆಗ ಎಲ್ಲ ಇಸ್ರಾಯೇಲ್ಯರು ಅವನ ಮಾತು ಕೇಳ್ತಾರೆ.+
21 ಯೆಹೋಶುವನಿಗೆ ಯಾವುದೇ ವಿಷ್ಯದಲ್ಲಿ ದೇವರ ತೀರ್ಮಾನ ಏನಂತ ಗೊತ್ತಾಗಬೇಕಂದ್ರೆ ಪುರೋಹಿತ ಎಲ್ಲಾಜಾರನ ಹತ್ರ ಹೋಗಬೇಕು. ಅವನ ಪರವಾಗಿ ಎಲ್ಲಾಜಾರ ಯೆಹೋವನ ಮುಂದೆ ಹೋಗಿ ಊರೀಮ್‌ನ*+ ಮೂಲಕ ಆತನ ತೀರ್ಮಾನ ಏನಂತ ತಿಳ್ಕೊಬೇಕು. ಆಗ ಏನು ಅಪ್ಪಣೆ ಸಿಗುತ್ತೋ ಅದನ್ನ ಯೆಹೋಶುವ, ಎಲ್ಲ ಇಸ್ರಾಯೇಲ್ಯರು, ಬೇರೆಯವರು ಪಾಲಿಸಬೇಕು” ಅಂದನು.
22 ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಮಾಡಿದ. ಅವನು ಯೆಹೋಶುವನನ್ನ ಕರ್ಕೊಂಡು ಬಂದು ಪುರೋಹಿತ ಎಲ್ಲಾಜಾರನ ಮುಂದೆ ಎಲ್ಲ ಜನ್ರ ಮುಂದೆ ನಿಲ್ಲಿಸಿದ.
23 ಅವನು ಯೆಹೋಶುವನ ಮೇಲೆ ಕೈಯಿಟ್ಟು ನಾಯಕನಾಗಿ ನೇಮಿಸಿದ.+ ಹೀಗೆ ಮೋಶೆ ಯೆಹೋವ ಹೇಳಿದ ಹಾಗೇ ಮಾಡಿದ.+