ಅರಣ್ಯಕಾಂಡ 3:1-51

  • ಆರೋನನ ಗಂಡು ಮಕ್ಕಳು (1-4)

  • ಸೇವೆಗಾಗಿ ಲೇವಿಯರ ಆಯ್ಕೆ (5-39)

  • ಮೊದಲ ಗಂಡು ಮಕ್ಕಳನ್ನ, ಪ್ರಾಣಿಗಳನ್ನ ಬಿಡಿಸೋದು (40-51)

3  ಆರೋನ ಮತ್ತು ಮೋಶೆ ವಂಶದವರ ವಿವರ. ಈ ವಂಶದವರು, ಸಿನಾಯಿ ಬೆಟ್ಟದ+ ಮೇಲೆ ಯೆಹೋವ ಮೋಶೆ ಜೊತೆ ಮಾತಾಡಿದ ಸಮಯದಲ್ಲಿ ಇದ್ದವರು.  ಆರೋನನ ಮಕ್ಕಳ ಹೆಸ್ರು: ಮೊದಲ ಮಗ ನಾದಾಬ್‌, ಅವನಾದ ಮೇಲೆ ಅಬೀಹೂ,+ ಎಲ್ಲಾಜಾರ್‌,+ ಈತಾಮಾರ್‌.+  ಆರೋನನ ಈ ಮಕ್ಕಳನ್ನ ಪುರೋಹಿತರಾಗಿ* ಸೇವೆ ಮಾಡೋಕೆ ಅಭಿಷೇಕಿಸಿ ನೇಮಿಸಿದ್ರು.+  ಆದ್ರೆ ಇವರಲ್ಲಿ ನಾದಾಬ್‌, ಅಬೀಹೂ ಸಿನಾಯಿ ಕಾಡಲ್ಲಿ ಯೆಹೋವನ ಮುಂದೆ ನಿಯಮಕ್ಕೆ ವಿರುದ್ಧವಾದ ಬೆಂಕಿ ಅರ್ಪಿಸಿದ್ರಿಂದ ಯೆಹೋವನ ಮುಂದೆನೇ ಸತ್ತುಹೋದ್ರು.+ ಅವರಿಗೆ ಗಂಡು ಮಕ್ಕಳು ಇರಲಿಲ್ಲ. ಎಲ್ಲಾಜಾರ್‌,+ ಈತಾಮಾರ+ ಆರೋನನ ಜೊತೆ ಪುರೋಹಿತರಾಗಿ ಸೇವೆ ಮಾಡೋದನ್ನ ಮುಂದುವರಿಸಿದ್ರು.  ಯೆಹೋವ ಮೋಶೆಗೆ ಹೀಗಂದನು:  “ಲೇವಿ ಕುಲದವರನ್ನ+ ಕರೆದು ಪುರೋಹಿತನಾದ ಆರೋನನ ಮುಂದೆ ನಿಲ್ಲಿಸು. ಅವರು ಆರೋನನಿಗೆ ಸಹಾಯ ಮಾಡಬೇಕು.+  ಅವರು ಪವಿತ್ರ ಡೇರೆಗೆ ಸಂಬಂಧಿಸಿದ ಸೇವೆ ಮಾಡಬೇಕು. ಹೀಗೆ ಅವರು ದೇವದರ್ಶನ ಡೇರೆಯಲ್ಲಿ ಸೇವೆ ಮಾಡೋ ಮೂಲಕ ಆರೋನನ, ಎಲ್ಲ ಇಸ್ರಾಯೇಲ್ಯರ ವಿಷ್ಯದಲ್ಲಿ ತಮಗಿರೋ ಜವಾಬ್ದಾರಿಗಳನ್ನ ಮಾಡಬೇಕು.  ದೇವದರ್ಶನ ಡೇರೆಯ ಎಲ್ಲ ಉಪಕರಣಗಳನ್ನ ಚೆನ್ನಾಗಿ ನೋಡ್ಕೊಬೇಕು.+ ಪವಿತ್ರ ಡೇರೆಗೆ ಸಂಬಂಧಿಸಿದ ಎಲ್ಲ ಸೇವೆ ಮಾಡಿ ಇಸ್ರಾಯೇಲ್ಯರ ವಿಷ್ಯದಲ್ಲಿ ತಮಗಿರೋ ಜವಾಬ್ದಾರಿಗಳನ್ನ ಮಾಡಬೇಕು.+  ಆರೋನನಿಗೆ, ಅವನ ಮಕ್ಕಳಿಗೆ ನೀನು ಲೇವಿಯರನ್ನ ಒಪ್ಪಿಸಬೇಕು. ಅವರನ್ನ ಇಸ್ರಾಯೇಲ್ಯರಿಂದ ಆಯ್ಕೆ ಮಾಡಿ ಆರೋನನಿಗೆ ಸಹಾಯ ಮಾಡೋಕೆ ನೇಮಿಸಬೇಕು.+ 10  ನೀನು ಆರೋನನನ್ನ, ಅವನ ಮಕ್ಕಳನ್ನ ಪುರೋಹಿತರಾಗಿ ನೇಮಿಸಬೇಕು. ಅವರು ಪುರೋಹಿತರಾಗಿ ತಮ್ಮ ಜವಾಬ್ದಾರಿ ಮಾಡಬೇಕು.+ ಆರೋನನ ಕುಟುಂಬಕ್ಕೆ ಸೇರದ ಯಾರೂ ಆರಾಧನಾ ಸ್ಥಳದ ಹತ್ರ ಬರಬಾರದು. ಬಂದ್ರೆ ಅವನನ್ನ ಸಾಯಿಸಬೇಕು.”+ 11  ಯೆಹೋವ ಮೋಶೆಗೆ ಇನ್ನೂ ಹೇಳೋದು ಏನಂದ್ರೆ 12  “ಇಸ್ರಾಯೇಲ್ಯರಿಗೆ ಹುಟ್ಟಿದ ಮೊದಲ ಗಂಡು ಮಕ್ಕಳ ಬದ್ಲು ಲೇವಿಯರನ್ನ ತಗೊಂಡಿದ್ದೀನಿ.+ ಅವರು ನನ್ನವರಾಗ್ತಾರೆ. 13  ಯಾಕಂದ್ರೆ ಪ್ರತಿಯೊಬ್ಬನ ಮೊದಲನೇ ಮಗ ನನಗೆ ಸೇರಿದ್ದಾನೆ.+ ನಾನು ಈಜಿಪ್ಟ್‌ ದೇಶದಲ್ಲಿ ಮೊದಲ ಗಂಡು ಮಕ್ಕಳನ್ನೆಲ್ಲ ಸಾಯಿಸಿದಾಗ+ ಇಸ್ರಾಯೇಲ್ಯರ ಎಲ್ಲ ಮೊದಲ ಗಂಡುಮಕ್ಕಳನ್ನ ನನಗಾಗಿ ಆರಿಸ್ಕೊಂಡೆ. ಇಸ್ರಾಯೇಲ್ಯರ ಎಲ್ಲ ಮೊದಲ ಗಂಡುಮಕ್ಕಳು, ಅವ್ರ ಪ್ರಾಣಿಗಳಿಗೆ ಹುಟ್ಟಿದ ಎಲ್ಲ ಮೊದಲ ಗಂಡುಮರಿಗಳು ನನಗೆ ಸೇರಿವೆ.+ ನಾನು ಯೆಹೋವ.” 14  ಸಿನಾಯಿ ಕಾಡಲ್ಲಿ+ ಯೆಹೋವ ಮೋಶೆ ಜೊತೆ ಮಾತಾಡ್ತಾ 15  “ಲೇವಿಯರಲ್ಲಿ ಒಂದು ತಿಂಗಳ ಮಗುವಿನಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರನ್ನ ಅವರವರ ಕುಟುಂಬ, ತಂದೆಯ ಮನೆತನದ ಪ್ರಕಾರ ಬರಿಬೇಕು”+ ಅಂದನು. 16  ಯೆಹೋವ ಹೇಳಿದ ಹಾಗೇ ಮೋಶೆ ಹೆಸ್ರುಗಳನ್ನ ಬರೆದ. 17  ಲೇವಿಯ ಮಕ್ಕಳು ಯಾರಂದ್ರೆ ಗೇರ್ಷೋನ್‌, ಕೆಹಾತ್‌, ಮೆರಾರೀ.+ 18  ಗೇರ್ಷೋನನ ಮಕ್ಕಳು ಲಿಬ್ನಿ ಮತ್ತು ಶಿಮ್ಮಿ.+ ಇವ್ರ ಕುಟುಂಬಗಳಿಗೆ ಇವ್ರ ಹೆಸ್ರನ್ನೇ ಕೊಟ್ರು. 19  ಕೆಹಾತನ ಮಕ್ಕಳು ಅಮ್ರಾಮ್‌, ಇಚ್ಹಾರ್‌, ಹೆಬ್ರೋನ್‌, ಉಜ್ಜೀಯೇಲ್‌.+ ಇವ್ರ ಕುಟುಂಬಗಳಿಗೆ ಇವ್ರ ಹೆಸ್ರನ್ನೇ ಕೊಟ್ರು. 20  ಮೆರಾರೀಯ ಮಕ್ಕಳು ಮಹ್ಲಿ+ ಮತ್ತು ಮೂಷಿ.+ ಇವ್ರ ಕುಟುಂಬಗಳಿಗೆ ಇವ್ರ ಹೆಸ್ರನ್ನೇ ಕೊಟ್ರು. ಇವು ಲೇವಿಯರ ಕುಟುಂಬಗಳು. ಈ ಕುಟುಂಬಗಳನ್ನ ಅವರವರ ತಂದೆ ಕಡೆಯಿಂದ* ಪಟ್ಟಿ ಮಾಡಿದ್ರು. 21  ಗೇರ್ಷೋನನಿಂದ ಲಿಬ್ನಿಯರ,+ ಶಿಮ್ಮಿಯರ ಕುಟುಂಬ ಬಂತು. ಇವು ಗೇರ್ಷೋನ್ಯರ ಕುಟುಂಬಗಳು. 22  ಇವ್ರಲ್ಲಿ ಒಂದು ತಿಂಗಳ ಮಗುವಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರ ಸಂಖ್ಯೆ 7,500.+ 23  ಗೇರ್ಷೋನ್ಯರ ಕುಟುಂಬಗಳವರು ಪವಿತ್ರ ಡೇರೆಯ ಹಿಂಭಾಗದಲ್ಲಿ+ ಅಂದ್ರೆ ಪಶ್ಚಿಮ ದಿಕ್ಕಿಗೆ ಡೇರೆಗಳನ್ನ ಹಾಕೊಂಡ್ರು. 24  ಗೇರ್ಷೋನ್ಯರ ತಂದೆ ಮನೆತನದ ಪ್ರಧಾನ ಲಾಯೇಲನ ಮಗ ಎಲ್ಯಾಸಾಫ್‌. 25  ದೇವದರ್ಶನ ಡೇರೆಯಲ್ಲಿ ಗೇರ್ಷೋನ್ಯರಿಗೆ+ ಕೆಲವು ಜವಾಬ್ದಾರಿ ಇತ್ತು. ಪವಿತ್ರ ಡೇರೆ+ ಮತ್ತೆ ಅದಕ್ಕೆ ಹಾಕೋ ಬೇರೆ ಬೇರೆ ಹೊದಿಕೆಗಳು,+ ದೇವದರ್ಶನ ಡೇರೆಯ ಬಾಗಿಲಲ್ಲಿರೋ ಪರದೆ,+ 26  ಅಂಗಳದಲ್ಲಿ ತೂಗುಬಿಟ್ಟ ಪರದೆಗಳು,+ ಪವಿತ್ರ ಡೇರೆ ಮತ್ತೆ ಯಜ್ಞವೇದಿ ಸುತ್ತ ಇರೋ ಅಂಗಳದ ಬಾಗಿಲಲ್ಲಿರೋ ಪರದೆ,+ ಅಂಗಳದ ಹಗ್ಗಗಳು ಇದನ್ನೆಲ್ಲ ಮತ್ತು ಇದಕ್ಕೆ ಸಂಬಂಧಿಸಿದ ಕೆಲಸಗಳನ್ನ ಅವರು ನೋಡ್ಕೊಬೇಕಿತ್ತು. 27  ಕೆಹಾತ್‌ನಿಂದ ಅಮ್ರಾಮ್ಯರ, ಇಚ್ಹಾರ್ಯರ, ಹೆಬ್ರೋನ್ಯರ, ಉಜ್ಜೀಯೇಲ್ಯರ ಕುಟುಂಬ ಬಂತು. ಇವು ಕೆಹಾತ್ಯರ ಕುಟುಂಬಗಳು.+ 28  ಇವರಲ್ಲಿ ಒಂದು ತಿಂಗಳ ಮಗುವಿನಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರ ಸಂಖ್ಯೆ 8,600. ಇವರಿಗೆ ಆರಾಧನಾ ಸ್ಥಳ ನೋಡ್ಕೊಳ್ಳೋ ಜವಾಬ್ದಾರಿ ಇತ್ತು.+ 29  ಕೆಹಾತನ ಗಂಡುಮಕ್ಕಳ ಕುಟುಂಬಗಳವರು ಪವಿತ್ರ ಡೇರೆಯ ದಕ್ಷಿಣ ದಿಕ್ಕಿಗೆ ಡೇರೆಗಳನ್ನ ಹಾಕೊಂಡ್ರು.+ 30  ಕೆಹಾತ್ಯರ ಕುಟುಂಬಗಳ ಪ್ರಧಾನ ಉಜ್ಜೀಯೇಲನ+ ಮಗ ಎಲೀಚಾಫಾನ್‌. 31  ಮಂಜೂಷ,+ ಮೇಜು,+ ದೀಪಸ್ತಂಭ,+ ಯಜ್ಞವೇದಿ,+ ಧೂಪವೇದಿ, ಪವಿತ್ರ ಸ್ಥಳದಲ್ಲಿ ಸೇವೆ ಮಾಡುವಾಗ ಬಳಸೋ ಉಪಕರಣಗಳನ್ನ,+ ಪರದೆಯನ್ನ,+ ಇದಕ್ಕೆ ಸಂಬಂಧಿಸಿದ ಕೆಲಸಗಳನ್ನ ಅವರು ನೋಡ್ಕೊಬೇಕಿತ್ತು.+ 32  ಪುರೋಹಿತನಾದ ಆರೋನನ ಮಗ ಎಲ್ಲಾಜಾರ್‌+ ಲೇವಿಯರ ಮುಖ್ಯ ಪ್ರಧಾನ. ಇವನು ಪವಿತ್ರ ಸ್ಥಳಕ್ಕೆ ಸಂಬಂಧಿಸಿದ ಕೆಲಸಗಳನ್ನ ನೋಡ್ಕೊಳ್ಳೋ ಜವಾಬ್ದಾರಿ ಇದ್ದವರ ಮೇಲ್ವಿಚಾರಕ. 33  ಮೆರಾರೀಯಿಂದ ಮಹ್ಲಿಯರ, ಮೂಷೀಯರ ಕುಟುಂಬ ಬಂತು. ಇವು ಮೆರಾರೀಯ+ ಕುಟುಂಬಗಳು. 34  ಇವರಲ್ಲಿ ಒಂದು ತಿಂಗಳ ಮಗುವಿನಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರ ಸಂಖ್ಯೆ 6,200.+ 35  ಅಬೀಹೈಲನ ಮಗ ಚೂರೀಯೇಲ್‌ ಮೆರಾರೀಯ ಕುಟುಂಬಗಳ ಪ್ರಧಾನ. ಈ ಕುಟುಂಬಗಳವರು ಪವಿತ್ರ ಡೇರೆಯ ಉತ್ತರ ದಿಕ್ಕಿಗೆ ಡೇರೆಗಳನ್ನ ಹಾಕೊಂಡ್ರು.+ 36  ಮೆರಾರೀಯರು ಪವಿತ್ರ ಡೇರೆಯ ಚೌಕಟ್ಟುಗಳನ್ನ+ ಕೋಲುಗಳನ್ನ+ ಕಂಬಗಳನ್ನ+ ಅಡಿಗಲ್ಲುಗಳನ್ನ ಎಲ್ಲ ಉಪಕರಣಗಳನ್ನ+ ಇದಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳನ್ನ+ 37  ಅಂಗಳದ ಸುತ್ತ ಇದ್ದ ಕಂಬಗಳನ್ನ ಅವುಗಳ ಅಡಿಗಲ್ಲುಗಳನ್ನ+ ಗೂಟಗಳನ್ನ ಹಗ್ಗಗಳನ್ನ ನೋಡ್ಕೊಬೇಕಿತ್ತು. 38  ಪವಿತ್ರ ಡೇರೆಯ ಮುಂಭಾಗದಲ್ಲಿ, ಪೂರ್ವ ದಿಕ್ಕಲ್ಲಿ ಅಂದ್ರೆ ದೇವದರ್ಶನ ಡೇರೆಯ ಎದುರಿಗೆ ಮೋಶೆ, ಆರೋನ, ಅವನ ಮಕ್ಕಳು ಡೇರೆ ಹಾಕೊಂಡ್ರು. ಇವ್ರಿಗೆ ಆರಾಧನಾ ಸ್ಥಳವನ್ನ ನೋಡ್ಕೊಳ್ಳೋ ಜವಾಬ್ದಾರಿ ಇತ್ತು. ಇವರು ಇಸ್ರಾಯೇಲ್ಯರ ಪರವಾಗಿ ಈ ಜವಾಬ್ದಾರಿಯನ್ನ ಮಾಡಬೇಕು. ಲೇವಿಯರನ್ನ ಬಿಟ್ಟು ಬೇರೆ ಯಾರಾದ್ರೂ ಆರಾಧನಾ ಸ್ಥಳದ ಹತ್ರ ಬಂದ್ರೆ ಜೀವ ಕಳ್ಕೊಬೇಕಾಗುತ್ತೆ.+ 39  ಯೆಹೋವ ಹೇಳಿದ ಹಾಗೆ ಮೋಶೆ ಆರೋನರು ಲೇವಿಯರಲ್ಲಿ ಒಂದು ತಿಂಗಳ ಮಗುವಿನಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರ ಹೆಸ್ರನ್ನ ಅವರವರ ಕುಟುಂಬಗಳ ಪ್ರಕಾರ ಬರೆದ್ರು. ಆ ಕುಲದವರ ಸಂಖ್ಯೆ 22,000. 40  ಆಮೇಲೆ ಯೆಹೋವ ಮೋಶೆಗೆ “ಇಸ್ರಾಯೇಲ್ಯರಲ್ಲಿ ಒಂದು ತಿಂಗಳ ಮಗುವಿನಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಮೊದಲ ಗಂಡು ಮಕ್ಕಳ ಹೆಸ್ರನ್ನ ಬರೆದು ಪಟ್ಟಿಮಾಡು.+ 41  ಇಸ್ರಾಯೇಲ್ಯರ ಎಲ್ಲ ಮೊದಲ ಗಂಡು ಮಕ್ಕಳ ಬದ್ಲು ಲೇವಿಯರನ್ನ,+ ಇಸ್ರಾಯೇಲ್ಯರ ಎಲ್ಲ ಸಾಕುಪ್ರಾಣಿಗಳಿಗೆ ಹುಟ್ಟಿದ ಮೊದಲ ಗಂಡು ಮರಿಗಳಿಗೆ ಬದ್ಲು ಲೇವಿಯರ ಸಾಕುಪ್ರಾಣಿಗಳನ್ನ ನೀನು ನನಗೋಸ್ಕರ ತಗೊಬೇಕು.+ ನಾನು ಯೆಹೋವ” ಅಂದನು. 42  ಯೆಹೋವ ಹೇಳಿದ ಹಾಗೇ ಮೋಶೆ ಇಸ್ರಾಯೇಲ್ಯರ ಎಲ್ಲ ಮೊದಲ ಗಂಡು ಮಕ್ಕಳ ಹೆಸ್ರುಗಳನ್ನ ಬರೆದ. 43  ಒಂದು ತಿಂಗಳ ಮಗುವಿನಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಮೊದಲ ಗಂಡು ಮಕ್ಕಳು 22,273. 44  ಯೆಹೋವ ಮುಂದುವರಿಸಿ ಮೋಶೆಗೆ 45  “ಇಸ್ರಾಯೇಲ್ಯರ ಎಲ್ಲ ಮೊದಲ ಗಂಡು ಮಕ್ಕಳಿಗೆ ಬದ್ಲು ಲೇವಿಯರನ್ನ, ಇಸ್ರಾಯೇಲ್ಯರ ಎಲ್ಲ ಸಾಕುಪ್ರಾಣಿಗಳಿಗೆ ಹುಟ್ಟಿದ ಮೊದಲ ಗಂಡು ಮರಿಗಳಿಗೆ ಬದ್ಲು ಲೇವಿಯರ ಸಾಕುಪ್ರಾಣಿಗಳನ್ನ ನೀನು ತಗೊಬೇಕು. ಲೇವಿಯರು ನನ್ನವರು. ನಾನು ಯೆಹೋವ. 46  ಲೇವಿಯರ ಸಂಖ್ಯೆಗಿಂತ ಇಸ್ರಾಯೇಲ್ಯರಲ್ಲಿ 273 ಗಂಡು ಮಕ್ಕಳು ಜಾಸ್ತಿ ಇದ್ದಾರೆ.+ ಇವರನ್ನ ಬಿಡಿಸೋಕೆ ಬಿಡುಗಡೆ ಬೆಲೆಯನ್ನ+ 47  ನೀನು ತಗೊಬೇಕು. ಆ ಬೆಲೆ ಎಷ್ಟಂದ್ರೆ ಒಬ್ಬೊಬ್ಬನಿಗೆ ಐದೈದು ಶೆಕೆಲ್‌.*+ ಆ ಶೆಕೆಲ್‌ ಮೌಲ್ಯ ಆರಾಧನಾ ಸ್ಥಳದ ತೂಕದ ಪ್ರಕಾರ* ಇರಬೇಕು. ಒಂದು ಶೆಕೆಲ್‌ ಅಂದ್ರೆ 20 ಗೇರಾ.*+ 48  ಆ ಹಣವನ್ನ ಜಾಸ್ತಿ ಇರೋ ಗಂಡು ಮಕ್ಕಳನ್ನ ಬಿಡಿಸೋಕೆ ಆರೋನನಿಗೆ, ಅವನ ಗಂಡು ಮಕ್ಕಳಿಗೆ ಕೊಡಬೇಕು” ಅಂದನು. 49  ಹಾಗಾಗಿ ಮೋಶೆ ಲೇವಿಯರಿಗಿಂತ ಜಾಸ್ತಿ ಇದ್ದ ಆ ಗಂಡು ಮಕ್ಕಳನ್ನ ಬಿಡಿಸೋಕೆ ಕೊಡೋ ಬಿಡುಗಡೆ ಬೆಲೆಯನ್ನ ತಗೊಂಡ. 50  ಅವನು ಇಸ್ರಾಯೇಲ್ಯರ ಆ ಗಂಡು ಮಕ್ಕಳಿಂದ ತಗೊಂಡ ಹಣ 1,365 ಶೆಕೆಲ್‌ಗಳು. ಅದ್ರ ಮೌಲ್ಯ ಆರಾಧನಾ ಸ್ಥಳದ ತೂಕದ ಪ್ರಕಾರ ಇತ್ತು. 51  ಮೋಶೆ ಯೆಹೋವ ಹೇಳಿದ ಹಾಗೆ ಆ ಬಿಡುಗಡೆ ಬೆಲೆಯನ್ನ ಆರೋನನಿಗೆ, ಅವನ ಮಕ್ಕಳಿಗೆ ಕೊಟ್ಟ. ಯೆಹೋವ ಹೇಳಿದ ಹಾಗೇ ಮೋಶೆ ಮಾಡಿದ.

ಪಾದಟಿಪ್ಪಣಿ

ಅಕ್ಷ. “ಯಾಜಕರಾಗಿ.”
ಅಕ್ಷ. “ತಂದೆಯ ಮನೆತನಗಳ ಪ್ರಕಾರ.”
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”
ಒಂದು ಗೇರಾದ ತೂಕ 0.57 ಗ್ರಾಂ. ಪರಿಶಿಷ್ಟ ಬಿ14 ನೋಡಿ.