ಅರಣ್ಯಕಾಂಡ 32:1-42

  • ಯೋರ್ದನಿನ ಪೂರ್ವದಲ್ಲಿ ಕೊಟ್ಟ ಆಸ್ತಿ (1-42)

32  ರೂಬೇನ್‌+ ಮತ್ತು ಗಾದ್‌+ ಕುಲದವರ ಹತ್ರ ಪ್ರಾಣಿಗಳ ದೊಡ್ಡ ದೊಡ್ಡ ಹಿಂಡು ಇತ್ತು. ಯಜ್ಜೇರ್‌,+ ಗಿಲ್ಯಾದ್‌ ಅನ್ನೋ ಪ್ರದೇಶಗಳನ್ನ ನೋಡಿ ಪ್ರಾಣಿ ಸಾಕೋಕೆ ಒಳ್ಳೇ ಜಾಗ ಅಂತ ಅವರಿಗೆ ಅನಿಸ್ತು.  ಹಾಗಾಗಿ ಮೋಶೆ, ಪುರೋಹಿತ ಎಲ್ಲಾಜಾರ್‌ ಮತ್ತು ಎಲ್ಲ ಇಸ್ರಾಯೇಲ್‌ ಪ್ರಧಾನರ ಹತ್ರ ಗಾದ್‌, ರೂಬೇನ್‌ ಕುಲದವರು ಬಂದು  “ಯೆಹೋವ ಇಸ್ರಾಯೇಲ್ಯರಿಗಾಗಿ ಅಟಾರೋತ್‌, ದೀಬೋನ್‌, ಯಜ್ಜೇರ್‌, ನಿಮ್ರಾ, ಹೆಷ್ಬೋನ್‌,+ ಎಲೆಯಾಲೆ, ಸೆಬಾಮ್‌, ನೆಬೋ,+ ಬೆಯೋನ್‌+  ಅನ್ನೋ ಪ್ರದೇಶಗಳನ್ನ ಗೆದ್ದಿದಾನಲ್ಲಾ,+ ಆ ಪ್ರದೇಶಗಳು ಪ್ರಾಣಿಗಳನ್ನ ಸಾಕೋಕೆ ಒಳ್ಳೇ ಜಾಗ. ನಿನ್ನ ಸೇವಕರಾದ ನಮ್ಮ ಹತ್ರ ತುಂಬ ಪ್ರಾಣಿಗಳಿವೆ”+ ಅಂದ್ರು.  “ನೀನು ಒಪ್ಪಿದ್ರೆ ನಿನ್ನ ಸೇವಕರಾದ ನಮಗೆ ಈ ಪ್ರದೇಶಗಳನ್ನೇ ಆಸ್ತಿಯಾಗಿ ಕೊಡು. ಯೋರ್ದನ್‌ ನದಿಯಾಚೆ ಬನ್ನಿ ಅಂತ ದಯವಿಟ್ಟು ನಮಗೆ ಹೇಳಬೇಡ” ಅಂದ್ರು.  ಆಗ ಮೋಶೆ ಗಾದ್‌ ಮತ್ತು ರೂಬೇನ್‌ ಕುಲದವರಿಗೆ “ನಿಮ್ಮ ಸಹೋದರರು ಯುದ್ಧಕ್ಕೆ ಹೋಗುವಾಗ ನೀವು ಮಾತ್ರ ಇಲ್ಲಿ ಆರಾಮವಾಗಿ ಇರಬೇಕಂತ ನಿಮ್ಮ ಆಸೆನಾ?  ಆ ದೇಶವನ್ನ ಅವರಿಗೆ ಖಂಡಿತ ಕೊಡ್ತೀನಿ ಅಂತ ಯೆಹೋವ ಹೇಳಿದ್ದಾನೆ. ಯೋರ್ದನ್‌ ನದಿ ದಾಟಿ ಆ ದೇಶಕ್ಕೆ ಹೋಗಬೇಕು ಅನ್ನೋ ಅವರ ಆಸೆಗೆ ನೀವ್ಯಾಕೆ ಕಲ್ಲು ಹಾಕ್ತೀರಾ?  ಆ ದೇಶ ನೋಡ್ಕೊಂಡು ಬನ್ನಿ ಅಂತ ನಾನು ನಿಮ್ಮ ತಂದೆಯಂದಿರನ್ನ ಕಾದೇಶ್‌-ಬರ್ನೇಯದಿಂದ ಕಳಿಸಿದಾಗ ಅವರೂ ಹೀಗೇ ಮಾಡಿದ್ರು.+  ಅವರು ಎಷ್ಕೋಲ್‌ ಕಣಿವೆಗೆ+ ಹೋಗಿ ಆ ದೇಶ ನೋಡ್ಕೊಂಡು ಬಂದ ಮೇಲೆ ಇಸ್ರಾಯೇಲ್ಯರಲ್ಲಿ ಭಯ ಹುಟ್ಟಿಸಿದ್ರು. ಯೆಹೋವ ಕೊಡೋ ದೇಶಕ್ಕೆ ಹೋಗೋಕೆ ಇಸ್ರಾಯೇಲ್ಯರಿಗೆ ಧೈರ್ಯ ಬರಲಿಲ್ಲ.+ 10  ಆ ದಿನ ಯೆಹೋವನಿಗೆ ಅವರ ಮೇಲೆ ತುಂಬ ಕೋಪ ಬಂತು. ಆತನು ಪ್ರಮಾಣ ಮಾಡಿ+ 11  ‘ಈಜಿಪ್ಟಿಂದ ಬಂದ ಜನ್ರಲ್ಲಿ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನವರಲ್ಲಿ ಒಬ್ಬನೂ ಅಬ್ರಹಾಮ, ಇಸಾಕ, ಯಾಕೋಬರಿಗೆ+ ಕೊಡ್ತೀನಿ ಅಂತ ನಾನು ಮಾತುಕೊಟ್ಟ ದೇಶಕ್ಕೆ ಹೋಗಲ್ಲ.+ ಯಾಕಂದ್ರೆ ನಾನು ಹೇಳಿದ ಮಾತನ್ನ ಅವರು ಮನಸಾರೆ* ಪಾಲಿಸಲಿಲ್ಲ. 12  ಆದ್ರೆ ಕೆನಿಜೀಯನಾದ ಯೆಫುನ್ನೆಯ ಮಗ ಕಾಲೇಬ,+ ನೂನನ ಮಗ ಯೆಹೋಶುವ+ ಇವರಿಬ್ರು ಮಾತ್ರ ಯೆಹೋವನ ಮಾತನ್ನ ಮನಸಾರೆ ಪಾಲಿಸಿದ ಕಾರಣ ಆ ದೇಶಕ್ಕೆ ಹೋಗ್ತಾರೆ’ + ಅಂದನು. 13  ಯೆಹೋವನಿಗೆ ಇಸ್ರಾಯೇಲ್ಯರ ಮೇಲೆ ತುಂಬ ಕೋಪ ಬಂತು. ಅದಕ್ಕೆ ಯೆಹೋವ ತನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನ ಮಾಡಿದ ಆ ತಲೆಮಾರಿನವರೆಲ್ಲ ಸಾಯೋ ತನಕ 40 ವರ್ಷ+ ಕಾಡಲ್ಲಿ ಅಲೆಯೋ ತರ ಮಾಡಿದನು.+ 14  ನೀವೀಗ ನಿಮ್ಮ ತಂದೆಯಂದಿರು ಮಾಡಿದ ಅದೇ ಪಾಪ ಮಾಡ್ತಾ ಇದ್ದೀರ. ಇಸ್ರಾಯೇಲ್ಯರ ಮೇಲೆ ಯೆಹೋವನ ಕೋಪ ಇನ್ನೂ ಹೊತ್ತಿ ಉರಿಯೋ ಹಾಗೆ ಮಾಡ್ತಾ ಇದ್ದೀರ. 15  ದೇವರ ಮಾತು ಕೇಳೋದನ್ನ ನೀವೀಗ ಬಿಟ್ಟುಬಿಟ್ರೆ ಆತನು ಮತ್ತೆ ಇಸ್ರಾಯೇಲ್ಯರನ್ನ ಕಾಡಲ್ಲಿ ಅಲೆಯೋ ತರ ಬಿಡೋದ್ರಲ್ಲಿ ಸಂಶಯನೇ ಇಲ್ಲ. ನಿಮ್ಮಿಂದಾಗಿ ಈ ಜನ್ರೆಲ್ಲ ನಾಶ ಆಗ್ತಾರೆ” ಅಂದನು. 16  ಅವರು ಮೋಶೆಗೆ “ಪ್ರಾಣಿಗಳಿಗೆ ಕಲ್ಲಿನ ಕೊಟ್ಟಿಗೆಗಳನ್ನ, ಮಕ್ಕಳಿಗೆ ಪಟ್ಟಣಗಳನ್ನ ಕಟ್ಟೋಕೆ ಅನುಮತಿ ಕೊಡು. 17  ಅವರು ಕೋಟೆಗಳು ಇರೋ ಪಟ್ಟಣಗಳಲ್ಲಿ ವಾಸ ಮಾಡ್ಲಿ. ಆಗ ಈ ದೇಶದ ಜನ್ರಿಂದ ನಮ್ಮ ಮಕ್ಕಳಿಗೆ ಏನೂ ಹಾನಿ ಆಗಲ್ಲ. ಆದ್ರೆ ಇಸ್ರಾಯೇಲ್ಯರನ್ನ ಅವರವರ ಜಾಗಗಳಿಗೆ ಮುಟ್ಟಿಸೋ ತನಕ ಅವರ ಮುಂದೆ ಮುಂದೆ ಹೋಗಿ ಅವರ ಜೊತೆ ಸೇರಿ ಯುದ್ಧ ಮಾಡ್ತೀವಿ.+ 18  ಇಸ್ರಾಯೇಲ್ಯರಲ್ಲಿ ಪ್ರತಿಯೊಬ್ಬನಿಗೆ ಆ ದೇಶದಲ್ಲಿ ಆಸ್ತಿ ಸಿಗೋ ತನಕ ಮನೆಗೆ ವಾಪಸ್‌ ಹೋಗಲ್ಲ.+ 19  ಯೋರ್ದನಿನ ಪೂರ್ವದಲ್ಲಿ+ ನಮಗೆ ಆಸ್ತಿ ಸಿಕ್ಕಿರೋದ್ರಿಂದ ಯೋರ್ದನ್‌ ದಾಟಿ ಆಕಡೆ ಎಲ್ಲೂ ನಮಗೆ ಆಸ್ತಿ ಸಿಗಲ್ಲ” ಅಂದ್ರು. 20  ಅದಕ್ಕೆ ಮೋಶೆ “ಹಾಗಾದ್ರೆ ನಿಮ್ಮಲ್ಲಿ ಪ್ರತಿಯೊಬ್ಬ ಯುದ್ಧ ಮಾಡೋಕೆ ಯೆಹೋವನ ಮುಂದೆ ಆಯುಧಗಳನ್ನ ತಗೊಳ್ಳಲಿ.+ 21  ಯೆಹೋವನ ಮುಂದೆ ಯೋರ್ದನ್‌ ನದಿ ದಾಟಿ. ಆತನ ಶತ್ರುಗಳನ್ನ ಓಡಿಸಿಬಿಟ್ಟ ಮೇಲೆ,+ 22  ಯೆಹೋವನ ಮುಂದೆ ನೀವು ಆ ದೇಶ ವಶಪಡಿಸಿಕೊಂಡ ಮೇಲೆ+ ನಿಮ್ಮ ಪ್ರದೇಶಕ್ಕೆ ವಾಪಸ್‌ ಹೋಗಬಹುದು.+ ಆಗ ಯೆಹೋವನ ಮುಂದೆ, ಇಸ್ರಾಯೇಲ್ಯರ ಮುಂದೆ ನೀವು ಅಪರಾಧಿಗಳಲ್ಲ. ಆಮೇಲೆ ಯೆಹೋವನ ಮುಂದೆ ಈ ದೇಶ ನಿಮ್ಮದಾಗುತ್ತೆ.+ 23  ನೀವು ಹಾಗೆ ಮಾಡದೆ ಹೋದ್ರೆ ಯೆಹೋವನ ವಿರುದ್ಧ ಪಾಪ ಮಾಡಿದ ಹಾಗಾಗುತ್ತೆ. ಆ ಪಾಪಕ್ಕೆ ಶಿಕ್ಷೆ ಅನುಭವಿಸಬೇಕಾಗುತ್ತೆ. 24  ಈಗ ನೀವು ಹೋಗಿ ನಿಮ್ಮ ಮಕ್ಕಳಿಗೆ ಪಟ್ಟಣಗಳನ್ನ ಆಡು-ಕುರಿಗಳಿಗೆ ಕೊಟ್ಟಿಗೆಗಳನ್ನ ಕಟ್ಟಬಹುದು.+ ಆದ್ರೆ ನೀವು ಕೊಟ್ಟ ಮಾತಿಗೆ ತಪ್ಪಬಾರದು” ಅಂದನು. 25  ಆಗ ಗಾದ್‌ ಮತ್ತು ರೂಬೇನ್‌ ಕುಲದವರು ಮೋಶೆಗೆ “ಸ್ವಾಮಿ, ನೀನು ಹೇಳಿದ ಹಾಗೇ ನಿನ್ನ ಸೇವಕರಾದ ನಾವು ಮಾಡ್ತೀವಿ. 26  ನಮ್ಮ ಹೆಂಡತಿ ಮಕ್ಕಳು, ಎಲ್ಲ ಸಾಕುಪ್ರಾಣಿಗಳು ಗಿಲ್ಯಾದಿನ ಪಟ್ಟಣಗಳಲ್ಲೇ ವಾಸ ಮಾಡ್ಲಿ.+ 27  ನಮ್ಮಲ್ಲಿ ಪ್ರತಿಯೊಬ್ರು ನೀನು ಹೇಳಿದ ಹಾಗೇ ಆಯುಧ ತಗೊಂಡು ಯೋರ್ದನ್‌ ದಾಟಿ ಹೋಗಿ ಯೆಹೋವನ ಮುಂದೆ ಯುದ್ಧ ಮಾಡ್ತೀವಿ”+ ಅಂದ್ರು. 28  ಆಗ ಮೋಶೆ ಅವರ ವಿಷ್ಯದಲ್ಲಿ ಪುರೋಹಿತ ಎಲ್ಲಾಜಾರನಿಗೆ, ನೂನನ ಮಗ ಯೆಹೋಶುವನಿಗೆ, ಇಸ್ರಾಯೇಲ್‌ ಕುಲಗಳ ಮುಖ್ಯಸ್ಥರಿಗೆ 29  “ಗಾದ್‌ ಮತ್ತು ರೂಬೇನ್‌ ಕುಲದಲ್ಲಿ ಗಂಡಸರೆಲ್ಲ ಆಯುಧ ತಗೊಂಡು ನಿಮ್ಮ ಜೊತೆ ಯೋರ್ದನ್‌ ದಾಟಿ ಹೋಗಿ ಯೆಹೋವನ ಮುಂದೆ ಯುದ್ಧ ಮಾಡಿದ್ರೆ ಆ ದೇಶವನ್ನ ನೀವೆಲ್ಲ ವಶಪಡಿಸಿಕೊಂಡ್ರೆ ನೀವು ಅವರಿಗೆ ಗಿಲ್ಯಾದ್‌ ಪ್ರದೇಶವನ್ನ ಆಸ್ತಿಯಾಗಿ ಕೊಡಬೇಕು.+ 30  ಅವರು ನಿಮ್ಮ ಜೊತೆ ಯೋರ್ದನ್‌ ದಾಟದಿದ್ರೆ ನಿಮ್ಮ ಜೊತೆ ಕಾನಾನ್‌ ದೇಶದಲ್ಲೇ ಇರಬೇಕು” ಅಂದ. 31  ಅದಕ್ಕೆ ಗಾದ್‌ ಮತ್ತು ರೂಬೇನ್‌ ಕುಲದವರು “ನಿನ್ನ ಸೇವಕರಾದ ನಮಗೆ ಯೆಹೋವ ಏನು ಆಜ್ಞೆ ಕೊಟ್ಟಿದ್ದಾನೋ ಅದನ್ನೆಲ್ಲ ಮಾಡ್ತೀವಿ. 32  ಆಯುಧ ತಗೊಂಡು ಯೆಹೋವನ ಮುಂದೆ ಯೋರ್ದನ್‌ ದಾಟಿ ಕಾನಾನ್‌ ದೇಶಕ್ಕೆ ಹೋಗ್ತೀವಿ.+ ಆದ್ರೆ ಯೋರ್ದನಿನ ಈ ಕಡೆಯಲ್ಲೇ ನಮಗೆ ಆಸ್ತಿ ಕೊಡಬೇಕು” ಅಂದ್ರು. 33  ಹಾಗಾಗಿ ಗಾದ್‌ ಕುಲದವರಿಗೆ, ರೂಬೇನ್‌ ಕುಲದವರಿಗೆ,+ ಯೋಸೇಫನ ಮಗ ಮನಸ್ಸೆಯ ಕುಲದ ಅರ್ಧ ಜನ್ರಿಗೆ+ ಮೋಶೆ ಅಮೋರಿಯರ ರಾಜನಾದ ಸೀಹೋನನ ರಾಜ್ಯವನ್ನ+ ಬಾಷಾನಿನ ರಾಜನಾದ ಓಗನ ರಾಜ್ಯವನ್ನ+ ಆಸ್ತಿಯಾಗಿ ಕೊಟ್ಟ. ಅದ್ರಲ್ಲಿ ಆ ರಾಜ್ಯಗಳ ಪಟ್ಟಣಗಳು, ಅವುಗಳಿಗೆ ಸೇರಿದ ಪ್ರದೇಶಗಳು, ಆ ಪ್ರದೇಶಗಳ ಸುತ್ತ ಇರೋ ಪಟ್ಟಣಗಳು ಇದ್ವು. 34  ಗಾದ್‌ ಕುಲದವರು ದೀಬೋನ್‌,+ ಅಟಾರೋತ್‌,+ ಅರೋಯೇರ್‌,+ 35  ಅಟ್ರೋತ್‌-ಷೋಫಾನ್‌, ಯಜ್ಜೇರ್‌,+ ಯೊಗ್ಬೆಹಾ,+ 36  ಬೇತ್‌ -ನಿಮ್ರಾ,+ ಬೇತ್‌-ಹಾರಾನ್‌+ ಅನ್ನೋ ಕೋಟೆಗಳು ಇರೋ ಪಟ್ಟಣಗಳನ್ನ ಕಟ್ಟಿದ್ರು.* ಆಡು-ಕುರಿಗಳಿಗೆ ಕಲ್ಲಿನ ಕೊಟ್ಟಿಗೆಗಳನ್ನ ಕಟ್ಟಿದ್ರು. 37  ರೂಬೇನ್‌ ಕುಲದವರು ಹೆಷ್ಬೋನ್‌,+ ಎಲೆಯಾಲೆ,+ ಕಿರ್ಯಾತಯಿಮ್‌,+ 38  ನೆಬೋ,+ ಬಾಳ್‌-ಮೆಯೋನ್‌,+ (ಈ ಎರಡು ಪಟ್ಟಣಗಳ ಹೆಸ್ರನ್ನ ಬದಲಿಸಲಾಗಿದೆ) ಸಿಬ್ಮ ಅನ್ನೋ ಪಟ್ಟಣಗಳನ್ನ ಕಟ್ಟಿದ್ರು. ಅವರು ಮತ್ತೆ ಕಟ್ಟಿದ ಪಟ್ಟಣಗಳಿಗೆ ಹೊಸ ಹೆಸ್ರು ಇಟ್ರು. 39  ಮನಸ್ಸೆಯ ಮಗ ಮಾಕೀರನ ವಂಶದವರು+ ಗಿಲ್ಯಾದ್‌ ಅನ್ನೋ ಪ್ರದೇಶನ ವಶ ಮಾಡ್ಕೊಂಡು ಅಲ್ಲಿದ್ದ ಅಮೋರಿಯರನ್ನ ಓಡಿಸಿಬಿಟ್ರು. 40  ಹಾಗಾಗಿ ಮೋಶೆ ಗಿಲ್ಯಾದನ್ನ ಮನಸ್ಸೆಯ ಮಗ ಮಾಕೀರನ ವಂಶದವರಿಗೆ ಕೊಟ್ಟ. ಅವರು ಅಲ್ಲಿ ವಾಸ ಮಾಡೋಕೆ ಶುರು ಮಾಡಿದ್ರು.+ 41  ಮನಸ್ಸೆ ಕುಲದ ಯಾಯೀರ ಅಮೋರಿಯರ ಮೇಲೆ ದಾಳಿ ಮಾಡಿ ಗಿಲ್ಯಾದಿನ ಡೇರೆಗಳು ಇರೋ ಹಳ್ಳಿಗಳನ್ನ ವಶ ಮಾಡ್ಕೊಂಡ. ಅವನು ಅವುಗಳಿಗೆ ಹವತ್‌-ಯಾಯೀರ್‌*+ ಅಂತ ಹೆಸರಿಟ್ಟ. 42  ಕೆನತ್‌ ಅನ್ನೋ ಜಾಗ, ಅದಕ್ಕೆ ಸೇರಿದ* ಊರುಗಳನ್ನ ನೋಬಹ ದಾಳಿ ಮಾಡಿ ವಶ ಮಾಡ್ಕೊಂಡ. ಕೆನತಿಗೆ ಅವನು ನೋಬಹ ಅಂತ ತನ್ನ ಹೆಸ್ರನ್ನೇ ಇಟ್ಟ.

ಪಾದಟಿಪ್ಪಣಿ

ಅಥವಾ “ಪೂರ್ಣ ಹೃದಯದಿಂದ.”
ಅಥವಾ “ಮತ್ತೆ ಕಟ್ಟಿದ್ರು.”
ಅರ್ಥ “ಡೇರೆಗಳು ಇರೋ ಯಾಯೀರನ ಹಳ್ಳಿಗಳು.”
ಅಥವಾ “ಸುತ್ತಮುತ್ತಲಿನ.”