ಅರಣ್ಯಕಾಂಡ 35:1-34

  • ಲೇವಿಯರಿಗೆ ಪಟ್ಟಣಗಳು (1-8)

  • ಆಶ್ರಯ ನಗರಗಳು (9-34)

35  ಯೆರಿಕೋ ಪಟ್ಟಣದ ಹತ್ರ, ಯೋರ್ದನ್‌ ನದಿ ಪಕ್ಕದಲ್ಲಿದ್ದ ಮೋವಾಬ್‌ ಬಯಲು ಪ್ರದೇಶಗಳಲ್ಲಿ+ ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ  “ಇಸ್ರಾಯೇಲ್ಯರು ತಮಗೆ ಆಸ್ತಿಯಾಗಿ ಸಿಗೋ ಭೂಪ್ರದೇಶದಿಂದ ಲೇವಿಯರ ವಾಸಕ್ಕಾಗಿ ಕೆಲವು ಪಟ್ಟಣಗಳನ್ನ ಕೊಡಬೇಕಂತ ಹೇಳು.+ ಪಟ್ಟಣಗಳ ಸುತ್ತ ಇರೋ ಹುಲ್ಲುಗಾವಲುಗಳನ್ನ ಸಹ ಇಸ್ರಾಯೇಲ್ಯರು ಲೇವಿಯರಿಗೆ ಕೊಡಬೇಕು.+  ಲೇವಿಯರು ಆ ಪಟ್ಟಣಗಳಲ್ಲಿ ವಾಸ ಮಾಡ್ಲಿ. ಅವರು ತಮ್ಮ ಸಾಕುಪ್ರಾಣಿಗಳಿಗೆ, ಬೇರೆ ಪ್ರಾಣಿಗಳಿಗೆ, ಅವಕ್ಕೆ ಬೇಕಾಗಿರೋ ಸಾಮಾನುಗಳನ್ನ ಇಡೋಕೆ ಆ ಹುಲ್ಲುಗಾವಲುಗಳನ್ನ ಉಪಯೋಗಿಸ್ಲಿ.  ನೀವು ಲೇವಿಯರಿಗೆ ಕೊಡೋ ಪಟ್ಟಣಗಳ ಸುತ್ತ ಇರೋ ಹುಲ್ಲುಗಾವಲುಗಳು ಪಟ್ಟಣದ ಗೋಡೆಯಿಂದ 1,000 ಮೊಳ* ದೊಡ್ಡದಾಗಿ ಇರಬೇಕು.  ನೀವು ಪಟ್ಟಣದ ಹೊರಗೆ ಪೂರ್ವ ದಿಕ್ಕಲ್ಲಿ 2,000 ಮೊಳ, ದಕ್ಷಿಣ ದಿಕ್ಕಲ್ಲಿ 2,000 ಮೊಳ, ಪಶ್ಚಿಮ ದಿಕ್ಕಲ್ಲಿ 2,000 ಮೊಳ, ಉತ್ತರ ದಿಕ್ಕಲ್ಲಿ 2,000 ಮೊಳ ಅಳತೆ ಮಾಡಬೇಕು. ಪಟ್ಟಣ ಮಧ್ಯದಲ್ಲಿ ಇರಬೇಕು. ಅದೆಲ್ಲ ಲೇವಿಯರಿಗೆ ಕೊಡಬೇಕಾದ ಪಟ್ಟಣಗಳ ಹುಲ್ಲುಗಾವಲು.  ನೀವು ಲೇವಿಯರಿಗೆ 6 ಪಟ್ಟಣಗಳನ್ನ ಆಶ್ರಯನಗರಗಳಾಗಿ ಕೊಡಬೇಕು.+ ಯಾರನ್ನಾದ್ರೂ ಕೊಂದವನು ಅಲ್ಲಿಗೆ ಓಡಿ ಹೋಗಿ ತಪ್ಪಿಸ್ಕೊಳ್ಳಬಹುದು.+ ಆ ಪಟ್ಟಣಗಳಲ್ಲದೆ ಲೇವಿಯರಿಗೆ ನೀವು ಇನ್ನೂ 42 ಪಟ್ಟಣ ಕೊಡಬೇಕು.  ಒಟ್ಟು 48 ಪಟ್ಟಣಗಳನ್ನ, ಅವುಗಳ ಹುಲ್ಲುಗಾವಲುಗಳನ್ನ ಲೇವಿಯರಿಗೆ ಕೊಡಬೇಕು.+  ನಿಮಗೆ ಆಸ್ತಿಯಾಗಿ ಸಿಗೋ ಪ್ರದೇಶದಿಂದ ಲೇವಿಯರಿಗೆ ಆ ಪಟ್ಟಣಗಳನ್ನ ಕೊಡಬೇಕು.+ ಜಾಸ್ತಿ ಜನ ಇರೋ ಕುಲದವರು ಜಾಸ್ತಿ ಪಟ್ಟಣಗಳನ್ನ ಕೊಡಬೇಕು, ಕಮ್ಮಿ ಜನ ಇರೋ ಕುಲದವರು ಕಮ್ಮಿ ಪಟ್ಟಣಗಳನ್ನ ಕೊಡಬೇಕು.+ ಪ್ರತಿಯೊಂದು ಕುಲದವರು ತಮ್ಮ ಕುಲಕ್ಕೆ ಸಿಗೋ ಆಸ್ತಿಗೆ ತಕ್ಕ ಹಾಗೆ ಪಟ್ಟಣಗಳನ್ನ ಕೊಡಬೇಕು.”  ಯೆಹೋವ ಮೋಶೆಗೆ ಹೇಳಿದ್ದು ಏನಂದ್ರೆ 10  “ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನೀವು ಯೋರ್ದನ್‌ ನದಿ ದಾಟಿ ಕಾನಾನ್‌ ದೇಶಕ್ಕೆ ಹೋಗ್ತೀರ.+ 11  ಅಪ್ಪಿತಪ್ಪಿ ಒಬ್ಬನನ್ನ ಕೊಂದವನಿಗೆ ಓಡಿಹೋಗೋಕೆ ಸುಲಭ ಆಗುವಂಥ ಪಟ್ಟಣಗಳನ್ನ ನೀವು ಆಶ್ರಯನಗರಗಳಾಗಿ ಆರಿಸ್ಕೊಳ್ಳಬೇಕು.+ 12  ಜನ್ರಿಂದ ತೀರ್ಪು ಸಿಗೋ ಮುಂಚೆನೇ, ಸೇಡು ತೀರಿಸಬೇಕಾದ ವ್ಯಕ್ತಿ+ ಕೈಯಿಂದ* ಸಾಯದೆ ಇರೋಕೆ ಅವನು ಆ ಆಶ್ರಯನಗರಕ್ಕೆ ಓಡಿಹೋಗಬೇಕು.+ 13  ನೀವು ಕೊಡೋ ಆರು ಆಶ್ರಯನಗರಗಳು ಈ ಉದ್ದೇಶಕ್ಕಾಗಿ ಇರುತ್ತೆ. 14  ಯೋರ್ದನಿನ ಈ ಕಡೆಯಲ್ಲಿ ಮೂರು ಪಟ್ಟಣಗಳನ್ನ+ ಕಾನಾನ್‌ ದೇಶದಲ್ಲಿ ಮೂರು ಪಟ್ಟಣಗಳನ್ನ+ ಆಶ್ರಯನಗರಗಳಾಗಿ ಕೊಡಬೇಕು. 15  ಇಸ್ರಾಯೇಲ್ಯರ ಜೊತೆ ವಾಸ ಮಾಡೋ ವಿದೇಶಿಯರಲ್ಲಿ+ ಪ್ರವಾಸಿಗರಲ್ಲಿ ಯಾರಾದ್ರೂ ಅಪ್ಪಿತಪ್ಪಿ ಒಬ್ಬನನ್ನ ಕೊಂದ್ರೆ ಅವನು ಆ ಆರು ಆಶ್ರಯನಗರಗಳಲ್ಲಿ ಒಂದಕ್ಕೆ ಓಡಿಹೋಗಿ ಆಶ್ರಯ ಪಡಿಬಹುದು.+ 16  ಆದ್ರೆ ಕಬ್ಬಿಣದ ವಸ್ತುವಿನಿಂದ ಒಬ್ಬನನ್ನ ಹೊಡೆದಾಗ ಅವನು ಸತ್ರೆ, ಹೊಡೆದವನು ಕೊಲೆಗಾರ ಆಗ್ತಾನೆ. ಆ ಕೊಲೆಗಾರನನ್ನ ಸಾಯಿಸ್ಲೇಬೇಕು.+ 17  ಜೀವಕ್ಕೆ ಹಾನಿ ಮಾಡುವಂಥ ಕಲ್ಲಿಂದ ಒಬ್ಬನನ್ನ ಹೊಡೆದಾಗ ಅವನು ಸತ್ರೆ, ಹೊಡೆದವನು ಕೊಲೆಗಾರ ಆಗ್ತಾನೆ. ಆ ಕೊಲೆಗಾರನನ್ನ ಸಾಯಿಸ್ಲೇಬೇಕು. 18  ಜೀವಕ್ಕೆ ಹಾನಿ ಮಾಡುವಂಥ ಮರದ ವಸ್ತುವಿನಿಂದ ಒಬ್ಬನನ್ನ ಹೊಡೆದಾಗ ಅವನು ಸತ್ರೆ, ಹೊಡೆದವನು ಕೊಲೆಗಾರ ಆಗ್ತಾನೆ. ಆ ಕೊಲೆಗಾರನನ್ನ ಸಾಯಿಸ್ಲೇಬೇಕು. 19  ಸೇಡು ತೀರಿಸಬೇಕಾದ ವ್ಯಕ್ತಿನೇ ಕೊಲೆಗಾರನನ್ನ ಸಾಯಿಸಬೇಕು. ಕೊಲೆಗಾರ ಸಿಕ್ಕಿದಾಗ ಕೊಲ್ಲಬಹುದು. 20  ಒಬ್ಬನನ್ನ ದ್ವೇಷದಿಂದ ನೂಕಿದಾಗ ಅಥವಾ ಕೆಟ್ಟದು ಮಾಡೋ ಉದ್ದೇಶದಿಂದ ಅವನ ಮೇಲೆ ಏನೋ ಎಸೆದಾಗ ಅವನು ಸತ್ರೆ+ 21  ಅಥವಾ ದ್ವೇಷದಿಂದ ತನ್ನ ಕೈಯಿಂದ ಹೊಡೆದಾಗ ಅವನು ಸತ್ರೆ, ಹೊಡೆದವನನ್ನ ಸಾಯಿಸ್ಲೇಬೇಕು. ಅವನು ಕೊಲೆಗಾರ ಆಗ್ತಾನೆ. ಸೇಡು ತೀರಿಸಬೇಕಾದ ವ್ಯಕ್ತಿಗೆ ಕೊಲೆಗಾರ ಸಿಕ್ಕಿದಾಗ ಕೊಲ್ಲಬಹುದು. 22  ದ್ವೇಷ ಇಲ್ಲದೆ, ಕೆಟ್ಟದು ಮಾಡೋ ಉದ್ದೇಶ ಇಲ್ಲದೆ ಅಪ್ಪಿತಪ್ಪಿ ಒಬ್ಬನನ್ನ ನೂಕಿದಾಗ ಅಥವಾ ಅವನ ಮೇಲೆ ಏನೋ ಎಸೆದಾಗ ಅವನು ಸತ್ರೆ+ 23  ಅಥವಾ ಕಲ್ಲನ್ನ ಕೆಳಗೆ ಹಾಕಿದಾಗ ಕೆಳಗಿದ್ದ ವ್ಯಕ್ತಿ ಮೇಲೆ ಬಿದ್ದು ಅವನು ಸತ್ರೆ, ಕೆಳಗೆ ಅವನಿರೋದು ಗೊತ್ತಿಲ್ಲದೇ ಇದ್ರೆ, ಸತ್ತವನು ಸಾಯಿಸಿದವನ ಶತ್ರು ಅಲ್ಲದಿದ್ರೆ, ಹಾನಿಮಾಡೋ ಉದ್ದೇಶ ಇರದೇ ಇದ್ರೆ 24  ಸಾಯಿಸಿದ ವ್ಯಕ್ತಿಯ ಮತ್ತು ಸೇಡು ತೀರಿಸಬೇಕಾದ ವ್ಯಕ್ತಿಯ ವಿಚಾರಣೆ ಮಾಡುವಾಗ ಈ ನಿಯಮಗಳ ಪ್ರಕಾರ ತೀರ್ಪು ಕೊಡಬೇಕು.+ 25  ಕೊಂದವನನ್ನ ಸೇಡು ತೀರಿಸಬೇಕಾದ ವ್ಯಕ್ತಿ ಕೈಯಿಂದ ತಪ್ಪಿಸಿ ಅವನು ಈಗಾಗ್ಲೇ ಓಡಿಹೋಗಿದ್ದ ಆಶ್ರಯನಗರಕ್ಕೆ ಮತ್ತೆ ಸೇರಿಸಬೇಕು. ಪವಿತ್ರ ತೈಲದಿಂದ ಅಭಿಷೇಕ ಆಗಿದ್ದ ಮಹಾ ಪುರೋಹಿತ+ ಬದುಕಿರೋ ತನಕ ಅವನು ಆ ಆಶ್ರಯನಗರದಲ್ಲೇ ಇರಬೇಕು. 26  ಒಂದುವೇಳೆ ಕೊಂದವನು ಅವನಿರೋ ಆಶ್ರಯನಗರದ ಗಡಿ ದಾಟಿ ಬಂದ್ರೆ 27  ಅವನು ಆಶ್ರಯನಗರದ ಹೊರಗೆ ಇರೋದನ್ನ ಸೇಡು ತೀರಿಸಬೇಕಾದ ವ್ಯಕ್ತಿ ನೋಡಿ ಅವನನ್ನ ಕೊಂದುಬಿಟ್ರೆ ಕೊಂದವನ ಮೇಲೆ ಯಾವ ಅಪರಾಧನೂ ಇರಲ್ಲ. 28  ಯಾಕಂದ್ರೆ ಅಪ್ಪಿತಪ್ಪಿ ಕೊಂದವನು ಮಹಾ ಪುರೋಹಿತ ಬದುಕಿರೋ ತನಕ ಆಶ್ರಯನಗರದ ಒಳಗೆ ಇರಬೇಕು. ಮಹಾ ಪುರೋಹಿತ ತೀರಿಹೋದ ಮೇಲೆ ಅವನು ತನ್ನ ಊರಿಗೆ ವಾಪಸ್‌ ಹೋಗಬಹುದು.+ 29  ನೀವು ಎಲ್ಲೇ ಇದ್ರೂ ವಿಚಾರಣೆ ಮಾಡುವಾಗ ಈ ನಿಯಮಗಳಿಗೆ ತಕ್ಕ ಹಾಗೆ ತೀರ್ಪು ಕೊಡಬೇಕು. ಇದು ಎಲ್ಲ ತಲೆಮಾರುಗಳು ಪಾಲಿಸಬೇಕಾದ ನಿಯಮ. 30  ಕೊಲೆ ಆದ್ರೆ ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆನೇ+ ಆ ಕೊಲೆಗಾರನಿಗೆ ಮರಣಶಿಕ್ಷೆ ಕೊಡಬೇಕು.+ ಆದ್ರೆ ಒಬ್ಬನ ಸಾಕ್ಷಿಯ ಆಧಾರದ ಮೇಲೆ ಯಾರಿಗೂ ಮರಣಶಿಕ್ಷೆ ಕೊಡಬಾರದು. 31  ಮರಣಕ್ಕೆ ಅರ್ಹನಾದ ಕೊಲೆಗಾರನ ಜೀವ ಉಳಿಸೋಕೆ ಬಿಡುಗಡೆ ಬೆಲೆ ತಗೊಳ್ಳಬಾರದು. ಅವನಿಗೆ ಮರಣಶಿಕ್ಷೆ ಆಗ್ಲೇಬೇಕು.+ 32  ಮಹಾ ಪುರೋಹಿತ ಸಾಯೋ ಮುಂಚೆನೇ ತನ್ನ ಊರಿಗೆ ವಾಪಸ್‌ ಹೋಗೋಕೆ ಆಶ್ರಯನಗರಕ್ಕೆ ಓಡಿಹೋದವನಿಂದ ಬಿಡುಗಡೆ ಬೆಲೆ ತಗೊಳ್ಳಬಾರದು. 33  ರಕ್ತ ಸುರಿಸಿದಾಗ ದೇಶ ಅಶುದ್ಧ ಆಗುತ್ತೆ.+ ನೀವು ವಾಸಿಸೋ ದೇಶವನ್ನ ಈ ರೀತಿ ಅಶುದ್ಧ ಮಾಡಬಾರದು. ಕೊಂದವನ ರಕ್ತ ಸುರಿಸಿದಾಗ್ಲೇ ಕೊಲೆಯಾದವನ ರಕ್ತಕ್ಕೆ ಪ್ರಾಯಶ್ಚಿತ್ತ ಆಗುತ್ತೆ,+ ಬೇರೆ ಯಾವುದರಿಂದಲೂ ಪ್ರಾಯಶ್ಚಿತ್ತ ಆಗಲ್ಲ. 34  ನೀವು ವಾಸಿಸೋ ದೇಶವನ್ನ ಅಶುದ್ಧ ಮಾಡಬಾರದು. ಯಾಕಂದ್ರೆ ನಾನು ಅಲ್ಲಿ ವಾಸ ಮಾಡ್ತಾ ಇದ್ದೀನಿ. ಯೆಹೋವನಾದ ನಾನು ಇಸ್ರಾಯೇಲ್ಯರ ಮಧ್ಯದಲ್ಲಿ ವಾಸ ಮಾಡ್ತಾ ಇದ್ದೀನಿ.’”+

ಪಾದಟಿಪ್ಪಣಿ

ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.
ಅಂದ್ರೆ, “ಕೊಲೆಯಾದವನ ಹತ್ರದ ಸಂಬಂಧಿಕ.”