ಅರಣ್ಯಕಾಂಡ 4:1-49

  • ಕೆಹಾತ್ಯರ ಕೆಲಸ (1-20)

  • ಗೇರ್ಷೋನ್ಯರ ಕೆಲಸ (21-28)

  • ಮೆರಾರೀಯರ ಕೆಲಸ (29-33)

  • ಪಟ್ಟಿಯ ಸಾರಾಂಶ (34-49)

4  ಮೋಶೆ, ಆರೋನಗೆ ಯೆಹೋವ ಹೀಗೆ ಹೇಳಿದನು:  “ಲೇವಿಯ ಮಕ್ಕಳಲ್ಲಿ ಕೆಹಾತನ+ ವಂಶದವರ ಹೆಸ್ರನ್ನ ಅವರವರ ಕುಟುಂಬ, ತಂದೆಯ ಮನೆತನಗಳ ಪ್ರಕಾರ ಬರೆದು ಲೆಕ್ಕ ಮಾಡಬೇಕು.  ದೇವದರ್ಶನ ಡೇರೆಯಲ್ಲಿ ಕೆಲಸ ಮಾಡೋ+ ಗುಂಪಲ್ಲಿ 30 ರಿಂದ+ 50 ವರ್ಷದ+ ಒಳಗಿರೋ ಎಲ್ರ ಲೆಕ್ಕ ತಗೋಬೇಕು.  ದೇವದರ್ಶನ ಡೇರೆಯಲ್ಲಿ ಕೆಹಾತ್ಯರಿಗೆ ಕೊಟ್ಟ ಅತಿ ಪವಿತ್ರ ಕೆಲಸ+ ಏನಂದ್ರೆ  ಇಸ್ರಾಯೇಲ್ಯರು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೊರಡೋ ಮುಂಚೆ ಆರೋನ, ಅವನ ಮಕ್ಕಳು ದೇವದರ್ಶನ ಡೇರೆ ಒಳಗೆ ಬಂದು ಸಾಕ್ಷಿ ಮಂಜೂಷದ ಹತ್ರ ಇರೋ ಪರದೆ+ ತೆಗೆದು ಅದ್ರಿಂದ ಮಂಜೂಷವನ್ನ ಮುಚ್ಚಬೇಕು.+  ಅದ್ರ ಮೇಲೆ ಸೀಲ್‌ ಪ್ರಾಣಿಯ* ಚರ್ಮದ ಒಂದು ಹೊದಿಕೆ ಹಾಕಿ, ಕಡುನೀಲಿ ಬಣ್ಣದ ಬಟ್ಟೆ ಮುಚ್ಚಬೇಕು. ಆಮೇಲೆ ಮಂಜೂಷದ ಬಳೆಗಳಲ್ಲಿ ಅದ್ರ ಕೋಲುಗಳನ್ನ+ ಹಾಕಬೇಕು.  ಅರ್ಪಣೆಯ ರೊಟ್ಟಿಗಳನ್ನ ಇಡೋ ಮೇಜಿನ+ ಮೇಲೆ ಒಂದು ನೀಲಿ ಬಟ್ಟೆ ಹಾಕಿ ಅದ್ರ ಮೇಲೆ ತಟ್ಟೆಗಳನ್ನ, ಲೋಟಗಳನ್ನ, ಪಾನ ಅರ್ಪಣೆ ಸುರಿಯೋಕೆ ಬಳಸೋ ಹೂಜಿಗಳನ್ನ,+ ಬೋಗುಣಿಗಳನ್ನ ಇಡಬೇಕು. ಯಾವಾಗ್ಲೂ ಅರ್ಪಿಸೋ ರೊಟ್ಟಿಗಳು+ ಮೇಜಿನ ಮೇಲೆನೇ ಇರಬೇಕು.  ಅವುಗಳ ಮೇಲೆ ಕಡುಗೆಂಪು ಬಣ್ಣದ ಬಟ್ಟೆ ಹಾಕಿ, ಅದ್ರ ಮೇಲೆ ಸೀಲ್‌ ಪ್ರಾಣಿಯ ಚರ್ಮದ ಒಂದು ಹೊದಿಕೆ ಮುಚ್ಚಬೇಕು. ಕೋಲುಗಳನ್ನ ಮೇಜಿನ ಬಳೆಗಳಲ್ಲಿ ಹಾಕಬೇಕು.+  ಆಮೇಲೆ ಆರೋನ, ಅವನ ಮಕ್ಕಳು ಒಂದು ನೀಲಿ ಬಟ್ಟೆಯಿಂದ ದೀಪಸ್ತಂಭವನ್ನ,+ ಅದ್ರ ದೀಪಗಳನ್ನ,+ ಚಿಮುಟಗಳನ್ನ,* ಸುಟ್ಟ ಬತ್ತಿಗಳನ್ನ ಹಾಕೋ ಪಾತ್ರೆಗಳನ್ನ,+ ದೀಪದ ಎಣ್ಣೆ ಇಡೋ ಎಲ್ಲ ಪಾತ್ರೆಗಳನ್ನ ಮುಚ್ಚಬೇಕು. 10  ದೀಪಸ್ತಂಭವನ್ನ, ಅದ್ರ ಎಲ್ಲ ಉಪಕರಣಗಳನ್ನ ಸೀಲ್‌ ಪ್ರಾಣಿಯ ಚರ್ಮದ ಹೊದಿಕೆಯಿಂದ ಸುತ್ತಿ ಅವುಗಳನ್ನ ಹೊತ್ಕೊಂಡು ಹೋಗೋಕೆ ಬಳಸೋ ಕೋಲಿನ ಮೇಲೆ ಇಡಬೇಕು. 11  ಆಮೇಲೆ ಅವರು ಚಿನ್ನದ ಧೂಪವೇದಿ+ ಮೇಲೆ ಒಂದು ನೀಲಿ ಬಟ್ಟೆ ಹಾಕಿ, ಸೀಲ್‌ ಪ್ರಾಣಿಯ ಚರ್ಮದ ಹೊದಿಕೆಯಿಂದ ಮುಚ್ಚಬೇಕು. ಧೂಪವೇದಿಯ ಕೋಲುಗಳನ್ನ+ ಅದ್ರ ಬಳೆಗಳಲ್ಲಿ ಹಾಕಬೇಕು. 12  ಪವಿತ್ರ ಸ್ಥಳದಲ್ಲಿ ಸೇವೆ ಮಾಡುವಾಗೆಲ್ಲ ಬಳಸೋ ಬೇರೆ ಎಲ್ಲ ಉಪಕರಣಗಳನ್ನ+ ಅವರು ತಗೊಂಡು ನೀಲಿ ಬಟ್ಟೆಯಲ್ಲಿ ಹಾಕಿ, ಸೀಲ್‌ ಪ್ರಾಣಿಯ ಚರ್ಮದ ಹೊದಿಕೆಯಿಂದ ಮುಚ್ಚಿ, ಅವುಗಳನ್ನ ಹೊತ್ಕೊಂಡು ಹೋಗೋಕೆ ಬಳಸೋ ಕೋಲಿನ ಮೇಲೆ ಇಡಬೇಕು. 13  ಅವರು ಯಜ್ಞವೇದಿಯಿಂದ ಬೂದಿ* ತೆಗಿಬೇಕು,+ ನೇರಳೆ ಬಣ್ಣದ ಒಂದು ಉಣ್ಣೆ ಬಟ್ಟೆಯನ್ನ ಯಜ್ಞವೇದಿ ಮೇಲೆ ಹಾಸಬೇಕು. 14  ಯಜ್ಞವೇದಿ ಹತ್ರ ಅವರು ಸೇವೆ ಮಾಡುವಾಗ ಬಳಸೋ ಎಲ್ಲ ಉಪಕರಣಗಳನ್ನ+ ಅಂದ್ರೆ ಸುಟ್ಟ ಬತ್ತಿಗಳನ್ನ ಹಾಕೋ ಪಾತ್ರೆ, ಕವಲುಗೋಲು, ಸಲಿಕೆ, ಬೋಗುಣಿಗಳನ್ನ ಆ ಬಟ್ಟೆ ಮೇಲೆ ಇಡಬೇಕು. ಆಮೇಲೆ ಇದನ್ನೆಲ್ಲ ಸೀಲ್‌ ಪ್ರಾಣಿಯ ಚರ್ಮದ ಹೊದಿಕೆಯಿಂದ ಮುಚ್ಚಬೇಕು. ಯಜ್ಞವೇದಿಯ ಬಳೆಗಳಲ್ಲಿ ಕೋಲುಗಳನ್ನ ಹಾಕಬೇಕು.+ 15  ಇಸ್ರಾಯೇಲ್ಯರು ಬೇರೆ ಜಾಗಕ್ಕೆ ಹೋಗೋ ಮುಂಚೆ ಆರೋನ, ಅವನ ಮಕ್ಕಳು ಆರಾಧನಾ ಸ್ಥಳದ ಎಲ್ಲ ಉಪಕರಣಗಳನ್ನ ಬಟ್ಟೆಗಳಿಂದ ಮುಚ್ಚಿಡಬೇಕು.+ ಇದಾದ ಮೇಲೆನೇ ಕೆಹಾತ್ಯರು ದೇವದರ್ಶನ ಡೇರೆ ಒಳಗೆ ಬಂದು ಅವುಗಳನ್ನ ಹೊತ್ಕೊಂಡು ಹೋಗಬೇಕು.+ ಆದ್ರೆ ಆರಾಧನಾ ಸ್ಥಳದ ಉಪಕರಣಗಳನ್ನ ಮುಟ್ಟಬಾರದು, ಮುಟ್ಟಿದ್ರೆ ಸಾಯ್ತಾರೆ.+ ಇದಿಷ್ಟು ದೇವದರ್ಶನ ಡೇರೆ ವಿಷ್ಯದಲ್ಲಿ ಕೆಹಾತ್ಯರಿಗೆ ಕೊಟ್ಟ ಜವಾಬ್ದಾರಿ. 16  ದೀಪಗಳಿಗೆ ಬೇಕಾದ ಎಣ್ಣೆ,+ ಪರಿಮಳ ಧೂಪ,+ ತಪ್ಪದೆ ಅರ್ಪಿಸೋ ಧಾನ್ಯ ಅರ್ಪಣೆ, ಅಭಿಷೇಕ ತೈಲ+ ಇದನ್ನೆಲ್ಲ ನೋಡ್ಕೊಳ್ಳೋ ಜವಾಬ್ದಾರಿ ಪುರೋಹಿತನಾದ ಆರೋನನ ಮಗ ಎಲ್ಲಾಜಾರನದ್ದು.+ ಅವನು ಪವಿತ್ರ ಡೇರೆ, ಅದ್ರೊಳಗೆ ಇರೋ ಎಲ್ಲ ಅಂದ್ರೆ ಪವಿತ್ರ ಸ್ಥಳ, ಅದ್ರಲ್ಲಿರೋ ಉಪಕರಣಗಳನ್ನ ನೋಡ್ಕೊಬೇಕು.” 17  ಮೋಶೆ ಮತ್ತು ಆರೋನನಿಗೆ ಯೆಹೋವ ಇನ್ನೂ ಹೇಳೋದು ಏನಂದ್ರೆ 18  “ಲೇವಿ ಕುಲದಲ್ಲಿ ಕೆಹಾತ್ಯರ ಕುಟುಂಬಗಳು+ ನಾಶ ಆಗದ ಹಾಗೆ ನೋಡ್ಕೊಳ್ಳಿ. 19  ಕೆಹಾತ್ಯರು ಅತಿ ಪವಿತ್ರವಾದ ವಸ್ತುಗಳ ಹತ್ರ ಹೋಗುವಾಗ+ ಸಾಯದೇ ಇರಬೇಕಂದ್ರೆ ಆರೋನ, ಅವನ ಮಕ್ಕಳು ದೇವದರ್ಶನ ಡೇರೆ ಒಳಗೆ ಹೋಗಿ ಅವ್ರಲ್ಲಿ ಪ್ರತಿಯೊಬ್ಬ ಯಾವ್ಯಾವ ಕೆಲಸ ಮಾಡಬೇಕು, ಯಾವುದನ್ನ ಹೊತ್ಕೊಂಡು ಹೋಗಬೇಕು ಅಂತ ಹೇಳಬೇಕು. 20  ಕೆಹಾತ್ಯರು ಒಳಗೆ ಹೋಗಿ ಪವಿತ್ರ ವಸ್ತುಗಳನ್ನ ಒಂದೇ ಒಂದು ಕ್ಷಣ ಕೂಡ ನೋಡಬಾರದು. ನೋಡಿದ್ರೆ ಸತ್ತು ಹೋಗ್ತಾರೆ.”+ 21  ಆಮೇಲೆ ಯೆಹೋವ ಮೋಶೆಗೆ ಹೀಗೆ ಹೇಳಿದನು: 22  “ಗೇರ್ಷೋನನ ವಂಶದವರನ್ನ ಅವ್ರವರ ಕುಟುಂಬ,+ ತಂದೆಯ ಮನೆತನಗಳ ಪ್ರಕಾರ ಲೆಕ್ಕ ಮಾಡಬೇಕು. 23  ದೇವದರ್ಶನ ಡೇರೆಯಲ್ಲಿ ಕೆಲಸ ಮಾಡೋ ಗುಂಪಲ್ಲಿ 30 ರಿಂದ 50 ವರ್ಷದ ಒಳಗಿರೋ ಎಲ್ರ ಹೆಸ್ರನ್ನ ಬರೀಬೇಕು. 24  ಗೇರ್ಷೋನ್ಯರ ಕುಟುಂಬ ನೋಡ್ಕೊಬೇಕಾದ, ಹೊತ್ಕೊಂಡು ಹೋಗಬೇಕಾದ ವಸ್ತುಗಳ ಪಟ್ಟಿ:+ 25  ಅವರು ಹೊತ್ಕೊಂಡು ಹೋಗಬೇಕಾದ ವಸ್ತುಗಳು ಯಾವುದಂದ್ರೆ ಪವಿತ್ರ ಡೇರೆಯ ಬಟ್ಟೆಗಳು,+ ದೇವದರ್ಶನ ಡೇರೆ ಮೇಲೆ ಹಾಕಿರೋ ಇನ್ನೆರಡು ಹೊದಿಕೆಗಳು, ಅದ್ರ ಮೇಲಿರೋ ಸೀಲ್‌ ಪ್ರಾಣಿಯ ಚರ್ಮದ ಹೊದಿಕೆ,+ ದೇವದರ್ಶನ ಡೇರೆಯ ಬಾಗಿಲಲ್ಲಿರೋ ಪರದೆ,+ 26  ಅಂಗಳದಲ್ಲಿ ತೂಗುಬಿಟ್ಟಿರೋ ಪರದೆಗಳು,+ ಪವಿತ್ರ ಡೇರೆ, ಯಜ್ಞವೇದಿ ಸುತ್ತ ಇರೋ ಅಂಗಳದ ಬಾಗಿಲಲ್ಲಿರೋ ಪರದೆ,+ ಡೇರೆಯ ಹಗ್ಗಗಳು, ಪವಿತ್ರ ಡೇರೆಯ ಕೆಲಸಕ್ಕಾಗಿ ಉಪಯೋಗಿಸೋ ಎಲ್ಲ ವಸ್ತುಗಳು ಮತ್ತು ಸಾಧನಗಳು. ಇದನ್ನೆಲ್ಲ ನೋಡ್ಕೊಳ್ಳೋ ಜವಾಬ್ದಾರಿ ಗೇರ್ಷೋನ್ಯರದ್ದು. 27  ಆರೋನ, ಅವನ ಮಕ್ಕಳ ಮೇಲ್ವಿಚಾರಣೆಯಲ್ಲಿ ಗೇರ್ಷೋನ್ಯರು+ ಎಲ್ಲ ಸೇವೆ ಮಾಡಬೇಕು, ಹೊರೆಗಳನ್ನ ಹೊರಬೇಕು. ಈ ಎಲ್ಲ ಹೊರೆಗಳನ್ನ ಹೊರೋ ಜವಾಬ್ದಾರಿಯನ್ನ ನೀವು ಗೇರ್ಷೋನ್ಯರಿಗೆ ಕೊಡಬೇಕು. 28  ದೇವದರ್ಶನ ಡೇರೆಯಲ್ಲಿ ಗೇರ್ಷೋನ್ಯರ ಕುಟುಂಬ ಮಾಡಬೇಕಾದ ಸೇವೆ ಇದು.+ ಪುರೋಹಿತನಾದ ಆರೋನನ ಮಗ ಈತಾಮಾರ+ ಹೇಳಿದ ಹಾಗೆ ಅವರು ತಮ್ಮ ಜವಾಬ್ದಾರಿ ಮಾಡಬೇಕು. 29  ಮೆರಾರೀಯ ವಂಶದವರನ್ನ ಅವ್ರವರ ಕುಟುಂಬ,+ ತಂದೆಯ ಮನೆತನದ ಪ್ರಕಾರ ನೀನು ಲೆಕ್ಕ ಮಾಡಬೇಕು. 30  ದೇವದರ್ಶನ ಡೇರೆಯ ಕೆಲಸಗಳನ್ನ ಮಾಡೋ ಗುಂಪಲ್ಲಿ 30 ರಿಂದ 50 ವರ್ಷದ ಒಳಗಿರೋ ಎಲ್ರ ಹೆಸ್ರನ್ನ ಬರಿಬೇಕು. 31  ದೇವದರ್ಶನ ಡೇರೆಯಲ್ಲಿನ ಸೇವೆಗೆ ಸಂಬಂಧಿಸಿ ಅವರು ಹೊತ್ಕೊಂಡು ಹೋಗಬೇಕಾದ ವಸ್ತುಗಳ ಪಟ್ಟಿ:+ ಪವಿತ್ರ ಡೇರೆಯ ಎಲ್ಲ ಚೌಕಟ್ಟು,+ ಕೋಲು,+ ಕಂಬ,+ ಅಡಿಗಲ್ಲು.+ 32  ಸುತ್ತ ಇರೋ ಅಂಗಳದ ಎಲ್ಲ ಕಂಬ,+ ಅಡಿಗಲ್ಲು,+ ಡೇರೆಯ ಗೂಟ,+ ಡೇರೆಯ ಹಗ್ಗ ಮತ್ತು ಎಲ್ಲ ಸಾಧನಗಳು. ಇದಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳನ್ನ ಅವರು ಮಾಡಬೇಕು. ಪ್ರತಿಯೊಬ್ಬ ಇವುಗಳಲ್ಲಿ ಯಾವುದನ್ನ ಹೊತ್ಕೊಂಡು ಹೋಗಬೇಕು ಅಂತ ನೀವು ಹೇಳಬೇಕು. 33  ದೇವದರ್ಶನ ಡೇರೆಯಲ್ಲಿ ಮೆರಾರೀಯರ ಕುಟುಂಬಗಳವರು+ ಈ ಸೇವೆ ಮಾಡಬೇಕು. ಅವರು ಪುರೋಹಿತನಾದ ಆರೋನನ ಮಗ ಈತಾಮಾರ ಹೇಳಿದ ಹಾಗೆ ತಮ್ಮ ಕೆಲಸ ಮಾಡಬೇಕು.”+ 34  ಮೋಶೆ, ಆರೋನ, ಇಸ್ರಾಯೇಲ್ಯರ ಪ್ರಧಾನರು+ ಕೆಹಾತ್ಯರ+ ಹೆಸ್ರುಗಳನ್ನ ಅವ್ರವರ ಕುಟುಂಬ, ತಂದೆಯ ಮನೆತನದ ಪ್ರಕಾರ ಬರೆದ್ರು. 35  ಇವರ ವಯಸ್ಸು 30 ರಿಂದ 50 ವರ್ಷ. ಇವರು ದೇವದರ್ಶನ ಡೇರೆಯಲ್ಲಿ ಕೆಲಸ ಮಾಡೋ ಗುಂಪಲ್ಲಿದ್ರು.+ 36  ಅವ್ರವರ ಕುಟುಂಬಗಳ ಪ್ರಕಾರ ಒಟ್ಟು 2,750 ಜನ ಇದ್ರು.+ 37  ಕೆಹಾತ್ಯರ ಕುಟುಂಬಗಳಲ್ಲಿ ಇವ್ರೆಲ್ರ ಹೆಸ್ರುಗಳನ್ನ ಲೆಕ್ಕ ಮಾಡಿದ್ರು. ಇವ್ರೆಲ್ಲ ದೇವದರ್ಶನ ಡೇರೆಯಲ್ಲಿ ಕೆಲಸ ಮಾಡ್ತಿದ್ರು. ಯೆಹೋವ ಹೇಳಿದ್ರಿಂದ ಇವ್ರೆಲ್ರ ಹೆಸ್ರುಗಳನ್ನ ಮೋಶೆ, ಆರೋನ ಬರೆದ್ರು.+ 38  ಗೇರ್ಷೋನನ ವಂಶದವರ ಹೆಸ್ರುಗಳನ್ನ ಅವ್ರವರ ಕುಟುಂಬ,+ ತಂದೆಯ ಮನೆತನದ ಪ್ರಕಾರ ಬರೆದ್ರು. 39  ಇವರ ವಯಸ್ಸು 30 ರಿಂದ 50 ವರ್ಷ, ದೇವದರ್ಶನ ಡೇರೆಯಲ್ಲಿ ಕೆಲಸ ಮಾಡೋ ಗುಂಪಲ್ಲಿ ಇವರಿದ್ರು. 40  ಅವ್ರವರ ಕುಟುಂಬ, ತಂದೆಯ ಮನೆತನದ ಪ್ರಕಾರ ಒಟ್ಟು 2,630 ಜನ ಇದ್ರು.+ 41  ಇದು ಗೇರ್ಷೋನ್ಯರ ಕುಟುಂಬದಲ್ಲಿ ಇದ್ದವರ ಲೆಕ್ಕ. ಇವರೆಲ್ಲ ದೇವದರ್ಶನ ಡೇರೆಯಲ್ಲಿ ಕೆಲಸ ಮಾಡ್ತಿದ್ರು. ಯೆಹೋವ ಹೇಳಿದ್ರಿಂದ ಇವ್ರೆಲ್ರ ಹೆಸ್ರನ್ನ ಮೋಶೆ, ಆರೋನ ಬರೆದ್ರು.+ 42  ಮೆರಾರೀಯ ವಂಶದವರ ಹೆಸ್ರುಗಳನ್ನ ಅವ್ರವರ ಕುಟುಂಬ, ತಂದೆಯ ಮನೆತನದ ಪ್ರಕಾರ ಲೆಕ್ಕ ಮಾಡಿದ್ರು. 43  ಇವರ ವಯಸ್ಸು 30 ರಿಂದ 50 ವರ್ಷ, ದೇವದರ್ಶನ ಡೇರೆಯಲ್ಲಿ ಕೆಲಸ ಮಾಡೋ ಗುಂಪಲ್ಲಿ ಇವರಿದ್ರು.+ 44  ಅವ್ರವರ ಕುಟುಂಬಗಳ ಪ್ರಕಾರ ಒಟ್ಟು 3,200 ಜನ ಇದ್ರು.+ 45  ಇದು ಮೆರಾರೀಯರ ಕುಟುಂಬದಲ್ಲಿ ಇದ್ದವರ ಲೆಕ್ಕ. ಯೆಹೋವ ಮೋಶೆಗೆ ಹೇಳಿದ ಹಾಗೆ ಮೋಶೆ, ಆರೋನ ಇವ್ರೆಲ್ರ ಹೆಸ್ರುಗಳನ್ನ ಬರೆದ್ರು.+ 46  ಮೋಶೆ, ಆರೋನ, ಇಸ್ರಾಯೇಲ್ಯರ ಪ್ರಧಾನರು ಲೇವಿಯರೆಲ್ಲರ ಹೆಸ್ರುಗಳನ್ನ ಅವ್ರವರ ಕುಟುಂಬಗಳಿಗೆ, ತಂದೆಯ ಮನೆತನಗಳ ಪ್ರಕಾರ ಲೆಕ್ಕ ಮಾಡಿದ್ರು. 47  ಅವರ ವಯಸ್ಸು 30 ರಿಂದ 50 ವರ್ಷ. ದೇವದರ್ಶನ ಡೇರೆಗೆ ಸಂಬಂಧಿಸಿದ ಸೇವೆ ಮಾಡೋದು, ಹೊರೆಗಳನ್ನ ಹೊರೋದು ಅವ್ರ ಕೆಲಸ.+ 48  ಲೆಕ್ಕ ಮಾಡಿದ ಲೇವಿಯರ ಒಟ್ಟು ಸಂಖ್ಯೆ 8,580.+ 49  ಯೆಹೋವ ಮೋಶೆಗೆ ಹೇಳಿದ್ರಿಂದ ಎಲ್ರನ್ನ ಲೆಕ್ಕ ಮಾಡಿದ್ರು. ಪ್ರತಿಯೊಬ್ರ ಹೆಸ್ರನ್ನ ಅವರು ಮಾಡಬೇಕಾದ ಕೆಲಸಕ್ಕೆ, ಹೊರಬೇಕಾದ ಹೊರೆಗೆ ತಕ್ಕ ಹಾಗೆ ಬರೆದ್ರು. ಯೆಹೋವ ಮೋಶೆಗೆ ಹೇಳಿದ ಪ್ರಕಾರನೇ ಲೆಕ್ಕ ಮಾಡಿದ್ರು.

ಪಾದಟಿಪ್ಪಣಿ

ಇದೊಂದು ಕಡಲ ಪ್ರಾಣಿ.
ಅಥವಾ “ದೀಪಶಾಮಕಗಳನ್ನ.”
ಅದು, ಬಲಿಗಳ ಕೊಬ್ಬಿಂದ ನೆನೆದ ಬೂದಿ.