ಅರಣ್ಯಕಾಂಡ 8:1-26

  • ಆರೋನ ಏಳು ದೀಪಗಳನ್ನ ಹೊತ್ತಿಸಿದ (1-4)

  • ಲೇವಿಯರ ಶುದ್ಧೀಕರಣ ಮತ್ತು ಸೇವೆಯ ಆರಂಭ (5-22)

  • ಲೇವಿಯರ ಸೇವೆಗೆ ವಯಸ್ಸಿನ ಮಿತಿ (23-26)

8  ಯೆಹೋವ ಮೋಶೆಗೆ  “ಆರೋನ ದೀಪಸ್ತಂಭದ ಏಳು ದೀಪ ಹಚ್ಚುವಾಗ ದೀಪಸ್ತಂಭದ+ ಮುಂದೆ ಬೆಳಕು ಬೀಳೋ ಹಾಗೆ ಅವುಗಳನ್ನ ಇಡಬೇಕು ಅಂತ ಅವನಿಗೆ ಹೇಳು” ಅಂದನು.  ಯೆಹೋವ ಮೋಶೆಗೆ ಹೇಳಿದ ಹಾಗೇ ಆರೋನ ದೀಪಸ್ತಂಭದ+ ಮುಂದೆ ಬೆಳಕು ಬೀಳೋ ಹಾಗೆ ದೀಪಗಳನ್ನ ಇಟ್ಟು ಹಚ್ಚಿದ.  ದೀಪಸ್ತಂಭವನ್ನ ಪೂರ್ತಿಯಾಗಿ ಅಂದ್ರೆ ದೀಪಸ್ತಂಭದ ದಿಂಡಿಂದ ಹಿಡಿದು ಹೂಗಳ ತನಕ ಚಿನ್ನವನ್ನ ಸುತ್ತಿಗೆಯಿಂದ ಬಡಿದು ಮಾಡಿದ್ರು.+ ಯೆಹೋವ ಮೋಶೆಗೆ ತೋರಿಸಿದ ತರಾನೇ ದೀಪಸ್ತಂಭ ಮಾಡಿದ್ರು.+  ಯೆಹೋವ ಮೋಶೆಗೆ ಇನ್ನೂ ಹೇಳೋದು ಏನಂದ್ರೆ  “ನೀನು ಇಸ್ರಾಯೇಲ್ಯರಿಂದ ಲೇವಿಯರನ್ನ ಬೇರೆ ಮಾಡಿ ಅವರನ್ನ ಶುದ್ಧ ಮಾಡು.+  ಅವರನ್ನ ಹೇಗೆ ಶುದ್ಧ ಮಾಡಬೇಕಂದ್ರೆ, ಪಾಪ ಶುದ್ಧೀಕರಣದ ನೀರನ್ನ ಅವ್ರ ಮೇಲೆ ಚಿಮಿಕಿಸಬೇಕು. ಆಮೇಲೆ ಅವರು ತಮ್ಮ ಇಡೀ ದೇಹದ ಕೂದಲು ತೆಗೆದು, ತಮ್ಮ ಬಟ್ಟೆ ಒಗೆದು, ತಮ್ಮನ್ನ ಶುದ್ಧ ಮಾಡ್ಕೊಬೇಕು.+  ಆಮೇಲೆ ಒಂದು ಹೋರಿ,+ ಜೊತೆಗೆ ಧಾನ್ಯ ಅರ್ಪಣೆಗಾಗಿ+ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟು ತಗೊಬೇಕು. ನೀನು ಪಾಪಪರಿಹಾರಕ ಬಲಿಗಾಗಿ ಇನ್ನೊಂದು ಹೋರಿ ತಗೊಬೇಕು.+  ನೀನು ಲೇವಿಯರನ್ನ ದೇವದರ್ಶನ ಡೇರೆ ಮುಂದೆ ಕರ್ಕೊಂಡು ಬರಬೇಕು. ಎಲ್ಲಾ ಇಸ್ರಾಯೇಲ್ಯರನ್ನ ಸಹ ಕೂಡಿಸಬೇಕು.+ 10  ಲೇವಿಯರನ್ನ ಯೆಹೋವನ ಮುಂದೆ ನಿಲ್ಲಿಸಿದಾಗ ಇಸ್ರಾಯೇಲ್ಯರು ತಮ್ಮ ಕೈಗಳನ್ನ ಲೇವಿಯರ ತಲೆ ಮೇಲೆ ಇಡಬೇಕು.+ 11  ಆರೋನ ಲೇವಿಯರನ್ನ ಇಸ್ರಾಯೇಲ್ಯರ ಪರವಾಗಿ ಯೆಹೋವನ ಮುಂದೆ ಓಲಾಡಿಸೋ ಅರ್ಪಣೆಯಾಗಿ ಕೊಡಬೇಕು.+ ಆಗ ಲೇವಿಯರು ಯೆಹೋವನ ಸೇವೆ ಮಾಡ್ತಾರೆ.+ 12  ಆಮೇಲೆ ಲೇವಿಯರು ಹೋರಿಗಳ ತಲೆ ಮೇಲೆ ತಮ್ಮ ಕೈಗಳನ್ನ ಇಡಬೇಕು.+ ಲೇವಿಯರಿಗಾಗಿ ಪ್ರಾಯಶ್ಚಿತ್ತ ಮಾಡೋಕೆ ಅವುಗಳಲ್ಲಿ ಒಂದು ಹೋರಿಯನ್ನ ಪಾಪಪರಿಹಾರಕ ಬಲಿಯಾಗಿ, ಇನ್ನೊಂದನ್ನ ಸರ್ವಾಂಗಹೋಮ ಬಲಿಯಾಗಿ ಯೆಹೋವನಿಗೆ ಅರ್ಪಿಸಬೇಕು.+ 13  ನೀನು ಲೇವಿಯರನ್ನ ಆರೋನ ಮತ್ತು ಅವನ ಮಕ್ಕಳ ಮುಂದೆ ನಿಲ್ಲಿಸಿ ಅವ್ರನ್ನ ಓಲಾಡಿಸೋ ಅರ್ಪಣೆಯಾಗಿ ಯೆಹೋವನಿಗೆ ಕೊಡಬೇಕು. 14  ನೀನು ಇಸ್ರಾಯೇಲ್ಯರಿಂದ ಲೇವಿಯರನ್ನ ಬೇರೆ ಮಾಡಬೇಕು. ಅವರು ನನ್ನವರು ಆಗ್ತಾರೆ.+ 15  ಲೇವಿಯರು ದೇವದರ್ಶನ ಡೇರೆಯಲ್ಲಿ ಸೇವೆಮಾಡೋಕೆ ಬರಬೇಕು. ಈ ರೀತಿಯಲ್ಲೇ ನೀನು ಅವರನ್ನ ಶುದ್ಧ ಮಾಡಿ ಓಲಾಡಿಸೋ ಅರ್ಪಣೆಯಾಗಿ ಕೊಡಬೇಕು. 16  ಯಾಕಂದ್ರೆ ಅವರು ಇಸ್ರಾಯೇಲ್ಯರಿಂದ ನನಗಾಗಿ ಆರಿಸಿ ಕೊಟ್ಟ ಜನ. ಇಸ್ರಾಯೇಲ್ಯರ ಎಲ್ಲ ಮೊದ್ಲ ಗಂಡುಮಕ್ಕಳ ಬದಲು ನಾನು ಲೇವಿಯರನ್ನ ನನಗೋಸ್ಕರ ತಗೊಳ್ತೀನಿ.+ 17  ಯಾಕಂದ್ರೆ ಇಸ್ರಾಯೇಲ್ಯರ ಎಲ್ಲ ಮೊದ್ಲ ಗಂಡುಮಕ್ಕಳು, ಅವ್ರ ಪ್ರಾಣಿಗಳ ಎಲ್ಲ ಮೊದ್ಲ ಗಂಡುಮರಿಗಳು ನನಗೆ ಸೇರಿವೆ.+ ನಾನು ಈಜಿಪ್ಟ್‌ ದೇಶದಲ್ಲಿದ್ದ ಮೊದ್ಲು ಹುಟ್ಟಿದ ಎಲ್ಲ ಮಕ್ಕಳು, ಪ್ರಾಣಿಗಳನ್ನ ಸಾಯಿಸಿದ+ ದಿನ ಇಸ್ರಾಯೇಲ್ಯರಿಗೆ ಮೊದ್ಲು ಹುಟ್ಟಿದ ಎಲ್ಲ ಮಕ್ಕಳು, ಪ್ರಾಣಿಗಳನ್ನ ನನಗಾಗಿ ತಗೊಂಡೆ. 18  ನಾನು ಇಸ್ರಾಯೇಲ್ಯರ ಎಲ್ಲ ಮೊದ್ಲ ಗಂಡುಮಕ್ಕಳ ಬದ್ಲು ಲೇವಿಯರನ್ನ ತಗೊಳ್ತೀನಿ. 19  ನಾನು ಲೇವಿಯರನ್ನ ಇಸ್ರಾಯೇಲ್ಯರಿಂದ ಬೇರೆ ಮಾಡಿ ಆರೋನನಿಗೆ, ಅವನ ಮಕ್ಕಳಿಗೆ ಕೊಡ್ತೀನಿ. ಲೇವಿಯರು ಇಸ್ರಾಯೇಲ್ಯರ ಪರವಾಗಿ ದೇವದರ್ಶನ ಡೇರೆಯಲ್ಲಿ ಸೇವೆ ಮಾಡಬೇಕು.+ ಇಸ್ರಾಯೇಲ್ಯರಿಗಾಗಿ ಪ್ರಾಯಶ್ಚಿತ್ತ ಮಾಡೋ ಕೆಲಸದಲ್ಲಿ ಸಹಾಯ ಮಾಡಬೇಕು. ಇಸ್ರಾಯೇಲ್ಯರು ಆರಾಧನಾ ಸ್ಥಳದ ಹತ್ರ ಬಂದು ಕಾಯಿಲೆಗೆ ತುತ್ತಾಗದ ಹಾಗೇ ಲೇವಿಯರು ಈ ಸೇವೆ ಮಾಡಬೇಕು.”+ 20  ಯೆಹೋವ ಲೇವಿಯರ ವಿಷ್ಯದಲ್ಲಿ ಮೋಶೆಗೆ ಹೇಳಿದ್ದನ್ನೆಲ್ಲ ಅವನು, ಆರೋನ, ಎಲ್ಲ ಇಸ್ರಾಯೇಲ್ಯರು ಮಾಡಿದ್ರು. 21  ಲೇವಿಯರು ತಮ್ಮನ್ನ ಶುದ್ಧ ಮಾಡ್ಕೊಂಡು ಬಟ್ಟೆ ಒಗೆದ್ಕೊಂಡ್ರು.+ ಆಮೇಲೆ ಆರೋನ ಅವರನ್ನ ಯೆಹೋವನ ಮುಂದೆ ಓಲಾಡಿಸೋ ಅರ್ಪಣೆಯಾಗಿ ಕೊಟ್ಟ.+ ಆರೋನ ಅವರನ್ನ ಶುದ್ಧ ಮಾಡೋಕೆ ಅವರಿಗೋಸ್ಕರ ಪ್ರಾಯಶ್ಚಿತ್ತ ಮಾಡಿದ.+ 22  ಆಮೇಲೆ ಲೇವಿಯರು ಹೋಗಿ ದೇವದರ್ಶನ ಡೇರೆಯಲ್ಲಿ ತಮಗೆ ಕೊಟ್ಟ ಸೇವೆ ಮಾಡಿದ್ರು. ತಮ್ಮ ಸೇವೆಯನ್ನ ಆರೋನ, ಅವನ ಮಕ್ಕಳ ಉಸ್ತುವಾರಿಯಲ್ಲಿ ಮಾಡಿದ್ರು. ಲೇವಿಯರ ವಿಷ್ಯದಲ್ಲಿ ಯೆಹೋವ ಮೋಶೆಗೆ ಹೇಳಿದ ಹಾಗೇ ಜನ್ರು ಮಾಡಿದ್ರು. 23  ಯೆಹೋವ ಮೋಶೆಗೆ 24  “ಲೇವಿಯರಿಗಾಗಿ ಇರೋ ನಿಯಮ ಏನಂದ್ರೆ, 25 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರು ದೇವದರ್ಶನ ಡೇರೆಯ ಸೇವೆ ಮಾಡೋ ಗುಂಪಿಗೆ ಸೇರಬೇಕು. 25  ಆದ್ರೆ ಅವರಿಗೆ 50 ವರ್ಷ ಆದ್ಮೇಲೆ ಆ ಸೇವೆಯಿಂದ ನಿವೃತ್ತಿ ಆಗಬೇಕು. ದೇವದರ್ಶನ ಡೇರೆಯ ಸೇವೆ ಮಾಡಬಾರದು. 26  ಬೇಕಾದ್ರೆ ದೇವದರ್ಶನ ಡೇರೆಯಲ್ಲಿ ಜವಾಬ್ದಾರಿಗಳನ್ನ ನಿರ್ವಹಿಸೋ ತಮ್ಮ ಲೇವಿ ಸಹೋದರರಿಗೆ ಸಹಾಯ ಮಾಡಬಹುದು. ಆದ್ರೆ ಅವರಿಗೆ ಅಲ್ಲಿ ಮಾಡೋಕೆ ಯಾವುದೇ ಸೇವೆಯನ್ನ ಕೊಡಲ್ಲ. ನೀನು ಲೇವಿಯರ ಜವಾಬ್ದಾರಿಗಳ ವಿಷ್ಯದಲ್ಲಿ ಈ ನಿಯಮ ಪಾಲಿಸಬೇಕು”+ ಅಂದನು.

ಪಾದಟಿಪ್ಪಣಿ