ಅಪೊಸ್ತಲರ ಕಾರ್ಯ 11:1-30
11 ಯೆಹೂದ್ಯರಲ್ಲದ ಜನ ಸಹ ದೇವರ ಸಂದೇಶ ನಂಬಿದ್ದಾರೆ ಅಂತ ಯೂದಾಯದಲ್ಲಿದ್ದ ಅಪೊಸ್ತಲರಿಗೆ ಮತ್ತು ಸಹೋದರರಿಗೆ ಗೊತ್ತಾಯ್ತು.
2 ಹಾಗಾಗಿ ಪೇತ್ರ ಯೆರೂಸಲೇಮಿಗೆ ಬಂದಾಗ ಬೇರೆ ಜಾತಿಯ ಜನ್ರೂ ಸುನ್ನತಿ ಮಾಡಿಸ್ಕೊಳ್ಳಬೇಕು+ ಅಂತ ಹಠಮಾಡ್ತಿದ್ದ ಜನ ಅವನ ಜೊತೆ ಜಗಳ ಮಾಡೋಕೆ ಶುರುಮಾಡಿದ್ರು.
3 ಅವರು ಪೇತ್ರನಿಗೆ ‘ನೀನು ಸುನ್ನತಿಯಾಗದ ಜನ್ರ ಮನೆಗೆ ಹೋದೆ. ಅಷ್ಟೇ ಅಲ್ಲ ಅವ್ರ ಜೊತೆ ಊಟನೂ ಮಾಡಿದ್ದೀಯ. ಯಾಕೆ ನೀನು ಆ ತರ ಮಾಡಿದೆ?’ ಅಂತ ಕೇಳಿದ್ರು.
4 ಅದಕ್ಕೆ ಪೇತ್ರ ಮೊದಲಿಂದ ಏನೆಲ್ಲಾ ಆಯ್ತೋ ಅದನ್ನೆಲ್ಲ ವಿವರಿಸ್ತಾ ಹೀಗೆ ಹೇಳಿದ:
5 “ನಾನು ಯೊಪ್ಪ ಪಟ್ಟಣದಲ್ಲಿ ಪ್ರಾರ್ಥನೆ ಮಾಡ್ತಾ ಇದ್ದೆ. ಆಗ ಒಂದು ದರ್ಶನ ಬಂತು. ಆ ದರ್ಶನದಲ್ಲಿ ನಾಲ್ಕೂ ಕಡೆಗಳಲ್ಲಿ ಹಿಡಿದಿದ್ದ ಒಂದು ದೊಡ್ಡ ಬಟ್ಟೆ ಆಕಾಶದಿಂದ ಕೆಳಗೆ ಇಳಿದು ನನ್ನ ಕಡೆ ಬಂತು.+
6 ನಾನು ಅದ್ರಲ್ಲಿ ನೋಡಿದಾಗ ಎಲ್ಲ ತರದ ನಾಲ್ಕು ಕಾಲಿನ ಪ್ರಾಣಿಗಳು, ಕಾಡು ಪ್ರಾಣಿಗಳು, ಹರಿದಾಡೋ ಜೀವಿಗಳು, ಹಾರಾಡೋ ಪಕ್ಷಿಗಳು ಇದ್ದವು.
7 ಅಷ್ಟೇ ಅಲ್ಲ ‘ಪೇತ್ರ, ಎದ್ದು ಇವನ್ನ ತಿನ್ನು’ ಅಂತ ದೇವದೂತ ಹೇಳೋದನ್ನ ನಾನು ಕೇಳಿಸ್ಕೊಂಡೆ.
8 ಆದ್ರೆ ನಾನು ‘ಬೇಡ ಸ್ವಾಮಿ. ನಾನು ತಿನ್ನಲ್ಲ. ಇಲ್ಲಿ ತನಕ ನಾನು ಯಾವತ್ತೂ ಅಶುದ್ಧ ಆಗಿರೋದನ್ನ, ಅಪವಿತ್ರ ಆಗಿರೋದನ್ನ ತಿಂದಿಲ್ಲ’ ಅಂದೆ.
9 ಆಗ ಆ ದೇವದೂತ ಎರಡನೇ ಸಲ ನನಗೆ “ದೇವರು ಶುದ್ಧ ಮಾಡಿರೋದನ್ನ ನೀನು ಅಶುದ್ಧ ಅನ್ನೋದನ್ನ ನಿಲ್ಲಿಸು” ಅಂದ.
10 ಮೂರನೇ ಸಲ ಸಹ ಅದೇ ರೀತಿ ಆಯ್ತು. ಆಮೇಲೆ ಆ ದೊಡ್ಡ ಬಟ್ಟೆ ವಾಪಸ್ ಆಕಾಶಕ್ಕೆ ಹೋಯ್ತು.
11 ಸರಿಯಾಗಿ ಅದೇ ಸಮಯಕ್ಕೆ ಮೂರು ಜನ ನಾನು ಉಳ್ಕೊಂಡಿದ್ದ ಮನೆ ಹತ್ರ ನಿಂತಿದ್ರು. ನನ್ನನ್ನ ಭೇಟಿ ಮಾಡೋಕೆ ಕೈಸರೈಯದಿಂದ ಒಬ್ಬ ವ್ಯಕ್ತಿ ಅವ್ರನ್ನ ಕಳಿಸಿದ್ದ.+
12 ಆಗ ದೇವ್ರ ಪವಿತ್ರಶಕ್ತಿ ನನಗೆ ಹಿಂದೆಮುಂದೆ ನೋಡದೆ ಅವ್ರ ಜೊತೆ ಹೋಗೋಕೆ ಹೇಳಿತು. ಈ ಆರು ಮಂದಿ ಸಹೋದರರು ಸಹ ನನ್ನ ಜೊತೆ ಬಂದ್ರು. ಆಮೇಲೆ ನಾವು ಕೊರ್ನೇಲ್ಯನ ಮನೆಗೆ ಹೋದ್ವಿ.
13 “ನಾವು ಅಲ್ಲಿ ಹೋದಾಗ ಕೊರ್ನೇಲ್ಯ ನಮಗೆ ಒಬ್ಬ ದೇವದೂತ ಬಂದಿದ್ರ ಬಗ್ಗೆ ಹೇಳಿದ. ಆ ದೇವದೂತ ಅವನಿಗೆ ‘ಸ್ವಲ್ಪ ಜನ್ರನ್ನ ಯೊಪ್ಪಕ್ಕೆ ಕಳಿಸಿ ಪೇತ್ರ ಅನ್ನೋ ಹೆಸ್ರಿರೋ ಸೀಮೋನನನ್ನ ಬರೋಕೆ ಹೇಳು.+
14 ನೀನೂ ನಿನ್ನ ಮನೆಯವ್ರೆಲ್ರೂ ರಕ್ಷಣೆ ಪಡಿಬೇಕಂದ್ರೆ ಏನು ಮಾಡಬೇಕು ಅಂತ ಅವನು ನಿಮಗೆ ಹೇಳ್ತಾನೆ’ ಅಂದಿದ್ದ.
15 ಆದ್ರೆ ನಾನು ಮಾತಾಡೋಕೆ ಶುರುಮಾಡಿದಾಗ ಪವಿತ್ರಶಕ್ತಿ ಮೊದಲು ನಮ್ಮೆಲ್ಲರ ಮೇಲೆ ಹೇಗೆ ಬಂದಿತ್ತೋ ಹಾಗೇ ಈಗ ಅವ್ರ ಮೇಲೂ ಬಂತು.+
16 ಆಗ ಯೇಸು ಪ್ರಭು ತುಂಬ ಸಾರಿ ಹೇಳಿದ ಮಾತು ನನಗೆ ನೆನಪಾಯ್ತು. ಅದೇನಂದ್ರೆ ‘ಯೋಹಾನ ನೀರಿಂದ ದೀಕ್ಷಾಸ್ನಾನ ಮಾಡಿಸಿದ,+ ಆದ್ರೆ ನಿಮಗೆ ಪವಿತ್ರಶಕ್ತಿಯಿಂದ ದೀಕ್ಷಾಸ್ನಾನ ಆಗುತ್ತೆ.’+
17 ಯೇಸು ಕ್ರಿಸ್ತನನ್ನ ನಂಬಿದ್ದ ನಮಗೆ ದೇವರು ಕೊಟ್ಟ ಪವಿತ್ರಶಕ್ತಿ ಅನ್ನೋ ವರವನ್ನೇ ಅವ್ರಿಗೂ ಕೊಟ್ಟನು. ಅಂದಮೇಲೆ ದೇವರನ್ನ ತಡೆಯೋಕೆ ನಾನ್ಯಾರು?”+
18 ಅವರು ಇದನ್ನೆಲ್ಲ ಕೇಳಿಸ್ಕೊಂಡಾಗ ವಾದ ಮಾಡೋದನ್ನ ನಿಲ್ಲಿಸಿಬಿಟ್ರು. ಆಮೇಲೆ ದೇವರನ್ನ ಹಾಡಿಹೊಗಳ್ತಾ “ಹಾಗಾದ್ರೆ ಅದ್ರರ್ಥ ಬೇರೆ ಜನ್ರು ಸಹ ಜೀವ ಪಡ್ಕೊಳ್ಳಲಿ ಅಂತ ದೇವರು ಅವ್ರಿಗೆ ಪಶ್ಚಾತ್ತಾಪಪಡೋ ಅವಕಾಶ ಕೊಡ್ತಿದ್ದಾನೆ” ಅಂದ್ರು.+
19 ಸ್ತೆಫನನ ಕೊಲೆ ಆದಮೇಲೆ ಬೇರೆ ಶಿಷ್ಯರಿಗೂ ಹಿಂಸೆ ಬಂತು. ಹಾಗಾಗಿ ಅವರು ಫೊಯಿನಿಕೆ, ಸೈಪ್ರಸ್, ಅಂತಿಯೋಕ್ಯದ ತನಕ ಚೆಲ್ಲಾಪಿಲ್ಲಿಯಾದ್ರು.+ ಹಾಗೆ ಹೋದವರು ಯೆಹೂದ್ಯರಿಗೆ ಮಾತ್ರ ದೇವರ ಸಂದೇಶ ಹೇಳ್ತಿದ್ರು.+
20 ಆದ್ರೆ ಸೈಪ್ರಸ್ ಮತ್ತು ಕುರೇನ್ಯದಿಂದ ಅಂತಿಯೋಕ್ಯಕ್ಕೆ ಬಂದ ಶಿಷ್ಯರಲ್ಲಿ ಕೆಲವರು ಗ್ರೀಕ್ ಭಾಷೆ ಮಾತಾಡ್ತಿದ್ದ ಜನ್ರ ಜೊತೆ ಮಾತಾಡ್ತಾ ಅವ್ರಿಗೆ ಯೇಸು ಪ್ರಭು ಬಗ್ಗೆ ಸಿಹಿಸುದ್ದಿ ಹೇಳೋಕೆ ಶುರುಮಾಡಿದ್ರು.
21 ಅಷ್ಟೇ ಅಲ್ಲ ಯೆಹೋವ* ಅವ್ರಿಗೆ ಸಹಾಯ ಮಾಡಿದ್ರಿಂದ ತುಂಬ ಜನ ಯೇಸು ಪ್ರಭು ಮೇಲೆ ನಂಬಿಕೆಯಿಟ್ಟು ಆತನ ಶಿಷ್ಯರಾದ್ರು.+
22 ಈ ಸುದ್ದಿ ಯೆರೂಸಲೇಮಿನ ಸಭೆಯಲ್ಲಿದ್ದ ಎಲ್ರ ಕಿವಿಗೆ ಬಿತ್ತು. ಆಗ ಅವರು ಬಾರ್ನಬನನ್ನ+ ಅಂತಿಯೋಕ್ಯಕ್ಕೆ ಕಳಿಸಿದ್ರು.
23 ಅವನು ಅಲ್ಲಿಗೆ ಬಂದು, ಶಿಷ್ಯರಿಗೆ ದೇವರು ತೋರಿಸಿದ ಅಪಾರ ಕೃಪೆ ನೋಡಿ ತುಂಬ ಖುಷಿಪಟ್ಟನು. ಇನ್ನು ಮುಂದಕ್ಕೂ ಯೇಸು ಪ್ರಭು ಮೇಲೆ ನಂಬಿಕೆ ಇಟ್ಟು ಮುಂದೆ ಸಾಗುವ ದೃಢ ತೀರ್ಮಾನ ಮಾಡೋಕೆ ಅವ್ರನ್ನೆಲ್ಲ ಪ್ರೋತ್ಸಾಹಿಸಿದ.+
24 ಬಾರ್ನಬ ಒಳ್ಳೆಯವನಾಗಿದ್ದ. ಅವನಿಗೆ ದೇವ್ರ ಮೇಲೆ ತುಂಬ ನಂಬಿಕೆ ಇತ್ತು. ದೇವರು ಅವನಿಗೆ ಪವಿತ್ರಶಕ್ತಿ ಕೊಟ್ಟಿದ್ದನು. ಹಾಗಾಗಿ ತುಂಬ ಜನ ಯೇಸು ಪ್ರಭು ಮೇಲೆ ನಂಬಿಕೆ ಇಟ್ರು.+
25 ಬಾರ್ನಬ ಸೌಲನನ್ನ ಹುಡ್ಕೊಂಡು ತಾರ್ಸಕ್ಕೆ ಹೋದ.+
26 ಸೌಲ ಸಿಕ್ಕಾಗ ಅವನನ್ನ ಕರ್ಕೊಂಡು ಅಂತಿಯೋಕ್ಯಕ್ಕೆ ಬಂದ. ಅವರು ಒಂದು ವರ್ಷ ಅಲ್ಲಿದ್ದು ಸಭೆಯವರ ಜೊತೆ ಸಹವಾಸ ಮಾಡ್ತಾ ಇದ್ರು. ತುಂಬ ಜನ್ರಿಗೆ ಕಲಿಸ್ತಾ ಇದ್ರು. ಶಿಷ್ಯರನ್ನ ‘ಕ್ರೈಸ್ತರು’ ಅಂತ ಮೊದಮೊದಲು ಕರೆದಿದ್ದು ಅಂತಿಯೋಕ್ಯದಲ್ಲೇ. ದೇವರೇ ಅವ್ರಿಗೆ ಈ ಹೆಸ್ರನ್ನ ಕೊಟ್ಟನು.+
27 ಆ ಸಮಯದಲ್ಲಿ ಪ್ರವಾದಿಗಳು+ ಯೆರೂಸಲೇಮಿಂದ ಅಂತಿಯೋಕ್ಯಕ್ಕೆ ಬಂದ್ರು.
28 ಅವ್ರಲ್ಲಿ ಅಗಬ+ ಅನ್ನೋ ಪ್ರವಾದಿ ಇದ್ದ. ಪವಿತ್ರಶಕ್ತಿಯ ಸಹಾಯದಿಂದ ಇಡೀ ಭೂಮಿಯಲ್ಲಿ ಬರ ಬರುತ್ತೆ ಅಂತ ಭವಿಷ್ಯವಾಣಿ ಹೇಳಿದ.+ ಅದು ಕ್ಲೌದ್ಯ ಚಕ್ರವರ್ತಿಯ ಸಮಯದಲ್ಲಿ ನಿಜ ಆಯ್ತು.
29 ಆಗ ಎಲ್ಲ ಶಿಷ್ಯರು ಯೂದಾಯದಲ್ಲಿದ್ದ ಸಹೋದರರಿಗೆ ತಮ್ಮಿಂದಾದಷ್ಟು+ ಸಹಾಯಮಾಡಿದ್ರು.*+
30 ಅದನ್ನ ಅವರು ಬಾರ್ನಬ ಮತ್ತು ಸೌಲನ ಮೂಲಕ ಹಿರಿಯರಿಗೆ ಕಳಿಸಿದ್ರು.+