ಅಪೊಸ್ತಲರ ಕಾರ್ಯ 14:1-28

  • ಇಕೋನ್ಯದಲ್ಲಿ ಅಭಿವೃದ್ಧಿ ಮತ್ತು ವಿರೋಧ (1-7)

  • ಲುಸ್ತ್ರದಲ್ಲಿ ದೇವರುಗಳು ಅಂತ ತಪ್ಪು ತಿಳ್ಕೊಂಡ್ರು (8-18)

  • ಪೌಲನನ್ನ ಕಲ್ಲುಗಳಿಂದ ಹೊಡೆದ್ರೂ ಬದುಕಿದ (19, 20)

  • ಸಭೆಗಳನ್ನ ಬಲಪಡಿಸಿದ (21-23)

  • ಸಿರಿಯಾದ ಅಂತಿಯೋಕ್ಯಕ್ಕೆ ವಾಪಸ್‌ ಬಂದ (24-28)

14  ಪೌಲ ಮತ್ತು ಬಾರ್ನಬ ಇಕೋನ್ಯದಲ್ಲಿ ಯೆಹೂದ್ಯರ ಸಭಾಮಂದಿರಕ್ಕೆ ಹೋದ್ರು. ಅವರು ಎಷ್ಟು ಚೆನ್ನಾಗಿ ಮಾತಾಡಿದರಂದ್ರೆ ಯೆಹೂದ್ಯರಲ್ಲಿ ಮತ್ತು ಗ್ರೀಕರಲ್ಲಿ ತುಂಬ ಜನ ಶಿಷ್ಯರಾದ್ರು.  ಆದ್ರೆ ಶಿಷ್ಯರಾಗದ ಯೆಹೂದ್ಯರು ಸಹೋದರರ ಬಗ್ಗೆ ಬೇರೆ ಜನ್ರ ಮನಸ್ಸಲ್ಲಿ ವಿಷಬೀಜ ಬಿತ್ತಿದ್ರು.+  ಹಾಗಾಗಿ ಪೌಲ ಮತ್ತು ಬಾರ್ನಬ ತುಂಬ ಸಮಯ ಅಲ್ಲಿದ್ರು. ಯೆಹೋವ* ಅವ್ರಿಗೆ ಶಕ್ತಿ ಕೊಟ್ಟಿದ್ರಿಂದ ಅದ್ಭುತಗಳನ್ನ ಮಾಡಿದ್ರು. ಧೈರ್ಯದಿಂದ ದೇವ್ರ ಅಪಾರ ಕೃಪೆಯ ಸಂದೇಶವನ್ನ ಸಾರಿದ್ರು.+  ಆದ್ರೆ ಆ ಊರಿನ ಜನ್ರಲ್ಲಿ ಎರಡು ಪಕ್ಷ ಆಯ್ತು. ಕೆಲವರು ಯೆಹೂದ್ಯರ ಪಕ್ಷದಲ್ಲಿದ್ರೆ ಇನ್ನು ಕೆಲವರು ಅಪೊಸ್ತಲರ ಪಕ್ಷದಲ್ಲಿದ್ರು.  ಯೆಹೂದ್ಯರು, ಬೇರೆ ಜನ್ರು ಮತ್ತು ಯೆಹೂದ್ಯರ ನಾಯಕರು ಅಪೊಸ್ತಲರಿಗೆ ಅವಮಾನ ಮಾಡಿ ಕಲ್ಲು ಹೊಡೆದು ಸಾಯಿಸಬೇಕಂತ ಇದ್ರು.+  ಈ ವಿಷ್ಯ ಪೌಲ ಮತ್ತು ಬಾರ್ನಬನಿಗೆ ಗೊತ್ತಾದಾಗ ಅವರು ಓಡಿಹೋದ್ರು. ಅವರು ಲುಕವೋನ್ಯ, ಲುಸ್ತ್ರ, ದೆರ್ಬೆ ಪಟ್ಟಣಗಳಿಗೆ ಮತ್ತು ಅಕ್ಕಪಕ್ಕ ಇದ್ದ ಊರುಗಳಿಗೆ ಹೋದ್ರು.+  ಅಲ್ಲಿ ಸಹ ಅವರು ಸಿಹಿಸುದ್ದಿ ಸಾರ್ತಾ ಹೋದ್ರು.  ಲುಸ್ತ್ರದಲ್ಲಿ ಕಾಲು ಬಿದ್ದುಹೋಗಿದ್ದ ಒಬ್ಬ ವ್ಯಕ್ತಿ ಕೂತಿದ್ದ. ಅವನು ಹುಟ್ಟಿದಾಗಲೇ ಕುಂಟ. ಯಾವತ್ತೂ ನಡೆದೇ ಇರ್ಲಿಲ್ಲ.  ಪೌಲ ಮಾತಾಡ್ತಾ ಇದ್ದಾಗ ಅವನು ಕೇಳಿಸ್ಕೊಳ್ತಾ ಇದ್ದ. ಪೌಲ ಅವನ ಕಡೆ ನೋಡಿದ. ದೇವ್ರ ಸಂದೇಶದ ಮೇಲೆ ಆ ವ್ಯಕ್ತಿಗೆ ನಂಬಿಕೆ ಇದೆ ಅಂತ ಅವನಿಗೆ ಗೊತ್ತಾಯ್ತು. ವಾಸಿಯಾಗ್ತೀನಿ ಅನ್ನೋ ಭರವಸೆನೂ ಅವನಿಗಿತ್ತು.+ ಹಾಗಾಗಿ ಪೌಲ ಅವನಿಗೆ 10  “ಎದ್ದು ನಿನ್ನ ಕಾಲ ಮೇಲೆ ನಿಂತ್ಕೊ” ಅಂತ ಜೋರಾಗಿ ಹೇಳಿದ. ಆಗ ಅವನು ಪಟ್ಟಂತ ಜಿಗಿದು ಎದ್ದು ನಿಂತು ನಡೆಯೋಕೆ ಶುರುಮಾಡಿದ.+ 11  ಪೌಲ ಮಾಡಿದ ಈ ಅದ್ಭುತ ನೋಡಿ ಜನ “ದೇವರು ಈ ಮನುಷ್ಯರ ರೂಪದಲ್ಲಿ ನಮ್ಮ ಹತ್ರ ಇಳಿದು ಬಂದಿದ್ದಾರೆ!”+ ಅಂತ ಲುಕವೋನ್ಯ ಭಾಷೆಯಲ್ಲಿ ಜೋರಾಗಿ ಕೂಗಿದ್ರು. 12  ಹಾಗಾಗಿ ಅವರು ಬಾರ್ನಬನಿಗೆ ಸ್ಯೂಸ್‌ ದೇವ ಅಂತ, ಪೌಲನಿಗೆ ಹರ್ಮೀಸ್‌ ದೇವ ಅಂತ ಕರೆಯೋಕೆ ಶುರುಮಾಡಿದ್ರು. ಅವರಿಬ್ರಲ್ಲಿ ಪೌಲ ಜಾಸ್ತಿ ಮಾತಾಡಿದ್ರಿಂದ ಅವನನ್ನ ಹರ್ಮೀಸ್‌ ಅಂತ ಕರೆದ್ರು. 13  ಆ ಊರಿನ ಮುಖ್ಯ ಬಾಗಿಲ ಹತ್ರ ಸ್ಯೂಸ್‌ ದೇವಸ್ಥಾನ ಇತ್ತು. ಅದ್ರ ಪೂಜಾರಿ ಎತ್ತುಗಳನ್ನ, ಹೂವಿನ ಹಾರಗಳನ್ನ ತಂದ. ಅವನು ಜನ್ರ ಜೊತೆ ಸೇರಿ ಪೌಲ ಮತ್ತು ಬಾರ್ನಬನಿಗೆ ಆ ಎತ್ತುಗಳನ್ನ ಬಲಿ ಅರ್ಪಿಸಬೇಕು ಅಂತ ಅಂದ್ಕೊಂಡ. 14  ಆದ್ರೆ ಅಪೊಸ್ತಲರಾದ ಬಾರ್ನಬ ಮತ್ತು ಪೌಲನಿಗೆ ಈ ವಿಷ್ಯ ಗೊತ್ತಾದಾಗ ಅವರು ತಮ್ಮ ಬಟ್ಟೆ ಹರ್ಕೊಂಡು ಜನ್ರ ಗುಂಪಲ್ಲಿ ನುಗ್ಗಿ ಜೋರಾಗಿ ಹೀಗೆ ಹೇಳಿದ್ರು 15  “ನೀವೆಲ್ಲ ಯಾಕೆ ಹೀಗೆ ಮಾಡ್ತಾ ಇದ್ದೀರಾ? ನಾವೂ ನಿಮ್ಮ ತರಾನೇ ಮನುಷ್ಯರು.+ ನಿಮ್ಮ ತರಾನೇ ನಾವೂ ತಪ್ಪು ಮಾಡ್ತೀವಿ. ನಾವು ನಿಮಗೆ ಸಿಹಿಸುದ್ದಿ ಹೇಳೋಕೆ ಬಂದ್ವಿ. ಯಾಕಂದ್ರೆ ಕೆಲಸಕ್ಕೆ ಬಾರದ ಇವುಗಳನ್ನ ಆರಾಧಿಸೋದನ್ನ ಬಿಟ್ಟು ಜೀವ ಇರೋ ದೇವರನ್ನ ಆರಾಧಿಸಿ. ಆತನೇ ಆಕಾಶ, ಭೂಮಿ, ಸಮುದ್ರ ಮತ್ತು ಎಲ್ಲಾ ಸೃಷ್ಟಿ ಮಾಡಿದ್ದಾನೆ.+ 16  ಈ ಮುಂಚೆ ಆತನು ಎಲ್ಲಾ ಜನ್ರಿಗೆ ತಮಗಿಷ್ಟ ಬಂದ ಹಾಗೆ ನಡ್ಕೊಳೋಕೆ ಬಿಟ್ಟುಬಿಟ್ಟನು.+ 17  ಆದ್ರೆ ಒಳ್ಳೇದನ್ನ ಮಾಡ್ತಾ ತಾನು ಎಂಥವನು ಅಂತ ತೋರಿಸ್ತಾ ಬಂದನು.+ ಹೇಗಂದ್ರೆ, ಆತನು ನಿಮಗೆ ಆಕಾಶದಿಂದ ಮಳೆ ಸುರಿಸಿದನು. ಚೆನ್ನಾಗಿ ಬೆಳೆ ಬರೋ ತರ ಬೇರೆಬೇರೆ ಕಾಲಗಳನ್ನ ಕೊಟ್ಟನು.+ ತೃಪ್ತಿಯಾಗುವಷ್ಟು ಆಹಾರ ಕೊಡ್ತಾ ನಿಮ್ಮ ಮನಸ್ಸನ್ನ ಖುಷಿಪಡಿಸಿದನು.”+ 18  ಇಷ್ಟೆಲ್ಲಾ ಹೇಳಿದ ಮೇಲೂ ಆ ಜನ್ರು ಬಲಿ ಅರ್ಪಿಸೋದನ್ನ ನಿಲ್ಲಿಸೋಕೆ ಅವರು ತುಂಬ ಕಷ್ಟಪಟ್ರು. 19  ಆದ್ರೆ ಅಂತಿಯೋಕ್ಯ ಮತ್ತು ಇಕೋನ್ಯದಿಂದ ಯೆಹೂದ್ಯರು ಬಂದು ಜನ್ರನ್ನ ತಮ್ಮ ಪಕ್ಷಕ್ಕೆ ಸೇರಿಸ್ಕೊಂಡ್ರು.+ ಹಾಗಾಗಿ ಅವರು ಪೌಲನಿಗೆ ಕಲ್ಲುಗಳಿಂದ ಹೊಡೆದ್ರು. ಆಮೇಲೆ ಅವನು ಸತ್ತಿದ್ದಾನೆ ಅಂತ ನೆನಸಿ ಊರ ಹೊರಗೆ ಎಳ್ಕೊಂಡು ಹೋದ್ರು.+ 20  ಆದ್ರೆ ಶಿಷ್ಯರು ಅವನ ಸುತ್ತಲೂ ಬಂದು ನಿಂತಾಗ ಅವನು ಎದ್ದು ಊರೊಳಗೆ ಹೋದ. ಮಾರನೇ ದಿನ ಅವನು ಬಾರ್ನಬನ ಜೊತೆ ದೆರ್ಬೆಗೆ+ ಹೋದ. 21  ಅಲ್ಲಿ ಸಿಹಿಸುದ್ದಿ ಸಾರಿ ತುಂಬ ಜನ್ರನ್ನ ಶಿಷ್ಯರನ್ನಾಗಿ ಮಾಡಿದ ಮೇಲೆ ಅವರು ಲುಸ್ತ್ರಕ್ಕೆ ಹೋದ್ರು. ಅಲ್ಲಿಂದ ಇಕೋನ್ಯಕ್ಕೆ, ಇಕೋನ್ಯದಿಂದ ಅಂತಿಯೋಕ್ಯಕ್ಕೆ ಹೋದ್ರು. 22  ಅಲ್ಲಿ ಪೌಲ ಮತ್ತು ಬಾರ್ನಬ ಶಿಷ್ಯರಿಗೆ ನಂಬಿಕೆಯಲ್ಲಿ ಬಲವಾಗಿ ಇರೋಕೆ ಪ್ರೋತ್ಸಾಹಿಸಿದ್ರು.+ “ತುಂಬ ಕಷ್ಟಗಳನ್ನ ಎದುರಿಸಿ ನಾವು ದೇವ್ರ ಆಳ್ವಿಕೆಯಲ್ಲಿ ಸೇರಬೇಕು”+ ಅಂತ ಹೇಳಿ ಧೈರ್ಯ ತುಂಬಿದ್ರು. 23  ಅಷ್ಟೇ ಅಲ್ಲ ಅವರು ಒಂದೊಂದು ಸಭೆಯಲ್ಲೂ ಹಿರಿಯರನ್ನ ನೇಮಿಸಿದ್ರು.+ ಪ್ರಾರ್ಥನೆ, ಉಪವಾಸ ಮಾಡಿ+ ಅವರನ್ನ ಯೆಹೋವನ* ಕೈಗೆ ಒಪ್ಪಿಸಿದ್ರು. ಈ ಹಿರಿಯರಿಗೆ ದೇವ್ರ ಮೇಲೆ ತುಂಬ ನಂಬಿಕೆ ಇತ್ತು. 24  ಆಮೇಲೆ ಅವರು ಪಿಸಿದ್ಯ ದಾಟ್ಕೊಂಡು ಪಂಫುಲ್ಯಕ್ಕೆ+ ಬಂದ್ರು. 25  ಪೆರ್ಗದಲ್ಲಿ ದೇವ್ರ ಸಂದೇಶ ಹೇಳಿದ ಮೇಲೆ ಅತಾಲ್ಯಕ್ಕೆ ಹೋದ್ರು. 26  ಅಲ್ಲಿಂದ ಹಡಗು ಹತ್ತಿ ಅಂತಿಯೋಕ್ಯಕ್ಕೆ ಹೊರಟ್ರು. ಈ ಊರಲ್ಲೇ ಸಹೋದರರು ಅಪೊಸ್ತಲರ ಕೆಲಸದ ಮೇಲೆ ದೇವ್ರ ಅಪಾರ ಕೃಪೆಗಾಗಿ ಬೇಡ್ಕೊಂಡಿದ್ರು. ಆ ಕೆಲಸವನ್ನ ಅವರು ಈಗ ಮುಗಿಸಿದ್ರು.+ 27  ಅವರು ಅಂತಿಯೋಕ್ಯಕ್ಕೆ ಬಂದಾಗ ಅಲ್ಲಿದ್ದ ಸಹೋದರರನ್ನ ಒಂದು ಕಡೆ ಸೇರಿಸಿದ್ರು. ದೇವರು ತಮ್ಮ ಮೂಲಕ ಮಾಡಿದ್ದನ್ನೆಲ್ಲ ಅವ್ರಿಗೆ ಹೇಳಿದ್ರು. ಅಷ್ಟೇ ಅಲ್ಲ ದೇವರು ಯೆಹೂದ್ಯರಲ್ಲದ ಜನ್ರಿಗೂ ಶಿಷ್ಯರಾಗೋ ಅವಕಾಶ ಹೇಗೆ ಕೊಟ್ಟನು ಅಂತ ವಿವರಿಸಿದ್ರು.+ 28  ಆಮೇಲೆ ಅವರು ಆ ಶಿಷ್ಯರ ಜೊತೆ ತುಂಬ ಸಮಯ ಇದ್ರು.

ಪಾದಟಿಪ್ಪಣಿ