ಅಪೊಸ್ತಲರ ಕಾರ್ಯ 23:1-35

  • ಪೌಲ ಹಿರೀಸಭೆ ಮುಂದೆ ಮಾತಾಡಿದ (1-10)

  • ಪೌಲನಿಗೆ ಒಡೆಯನಿಂದ ಬಲ ಸಿಕ್ತು (11)

  • ಪೌಲನನ್ನ ಕೊಲ್ಲೋಕೆ ಸಂಚು (12-22)

  • ಪೌಲನನ್ನ ಕೈಸರೈಯಕ್ಕೆ ಕಳಿಸಿದ್ರು (23-35)

23  ಪೌಲ ಹಿರೀಸಭೆಯಲ್ಲಿದ್ದ ಜನ್ರನ್ನ ನೋಡಿ “ಸಹೋದರರೇ, ಇವತ್ತಿನ ತನಕ ನಾನು ದೇವ್ರ ಮುಂದೆ ಯಾವ ತಪ್ಪೂ ಮಾಡಿಲ್ಲ ಅಂತ ನನ್ನ ಮನಸ್ಸಾಕ್ಷಿ+ ಹೇಳ್ತಾ ಇದೆ” ಅಂದ.  ಇದನ್ನ ಕೇಳಿಸ್ಕೊಂಡ ಮಹಾ ಪುರೋಹಿತ ಅನನೀಯ ಪೌಲನ ಬಾಯಿ ಮೇಲೆ ಹೊಡೆಯೋಕೆ ಪಕ್ಕದಲ್ಲಿ ನಿಂತವ್ರಿಗೆ ಹೇಳಿದ.  ಅದಕ್ಕೆ ಪೌಲ “ಸುಣ್ಣ ಬಳಿದಿರೋ ಗೋಡೆ ತರ ಇರುವವನೇ, ದೇವರು ನಿನಗೆ ಹೊಡಿತಾನೆ. ನಿಯಮ ಪುಸ್ತಕದ ಪ್ರಕಾರ ನಂಗೆ ತೀರ್ಪು ಮಾಡೋಕೆ ಕೂತ್ಕೊಂಡಿರೋ ನೀನೇ ನನ್ನನ್ನ ಹೊಡಿ ಅಂತ ಹೇಳಿ ನಿಯಮ ಪುಸ್ತಕವನ್ನ ಮೀರ್ತಾ ಇದ್ದೀಯಾ?” ಅಂದ.  ಆಗ ಪೌಲನ ಹತ್ರ ನಿಂತಿದ್ದವರು “ದೇವ್ರ ಮಹಾ ಪುರೋಹಿತನನ್ನ ಅವಮಾನ ಮಾಡೋಕೆ ನಿನಗೆಷ್ಟು ಧೈರ್ಯ?” ಅಂತ ಕೇಳಿದ್ರು.  ಅದಕ್ಕೆ ಪೌಲ “ಸಹೋದರರೇ, ಪವಿತ್ರಗ್ರಂಥದಲ್ಲಿ ‘ನಿಮ್ಮ ಜನ್ರ ಅಧಿಕಾರಿಯನ್ನ ಬಯ್ಯಬೇಡಿ’ ಅಂತ ಬರೆದಿರೋದು ನಂಗೊತ್ತು. ಆತನು ಮಹಾ ಪುರೋಹಿತ ಅಂತ ಗೊತ್ತಾಗದೆ ಮಾತಾಡಿಬಿಟ್ಟೆ”+ ಅಂದ.  ಹಿರೀಸಭೆಯಲ್ಲಿ ಅರ್ಧ ಜನ ಸದ್ದುಕಾಯರು, ಅರ್ಧ ಜನ ಫರಿಸಾಯರು ಇರೋದನ್ನ ಗಮನಿಸಿ ಪೌಲ ಜೋರಾಗಿ ಹೀಗಂದ “ಸಹೋದರರೇ, ನಾನೊಬ್ಬ ಫರಿಸಾಯ,+ ಫರಿಸಾಯರ ಕುಟುಂಬದಲ್ಲೇ ಹುಟ್ಟಿದ್ದೀನಿ. ಸತ್ತವ್ರನ್ನ ದೇವರು ಮತ್ತೆ ಎಬ್ಬಿಸ್ತಾನೆ ಅಂತ ನಾನು ನಂಬ್ತೀನಿ. ಅದಕ್ಕೇ ನನ್ನನ್ನ ವಿಚಾರಣೆ ಮಾಡ್ತಿದ್ದಾರೆ.”  ಇದನ್ನ ಕೇಳಿ ಫರಿಸಾಯರ ಮತ್ತು ಸದ್ದುಕಾಯರ ಮಧ್ಯ ಜಗಳ ಶುರು ಆಗಿ ಸಭೆ ಒಡೆದು ಹೋಯ್ತು.  ಯಾಕಂದ್ರೆ ಸತ್ತವರು ಮತ್ತೆ ಬದುಕ್ತಾರೆ, ದೇವದೂತರು ಇದ್ದಾರೆ, ಕಣ್ಣಿಗೆ ಕಾಣದ ಜೀವಿಗಳಿದ್ದಾರೆ ಅನ್ನೋ ನಂಬಿಕೆ ಫರಿಸಾಯರಿಗಿತ್ತು. ಆದ್ರೆ ಸದ್ದುಕಾಯರಿಗೆ ಇರಲಿಲ್ಲ.+  ಆಗ ಅಲ್ಲಿ ತುಂಬ ಸದ್ದುಗದ್ದಲ ಆಯ್ತು. ಫರಿಸಾಯರ ಪಕ್ಷದಲ್ಲಿದ್ದ ಕೆಲವು ಪಂಡಿತರು “ಈ ವ್ಯಕ್ತಿದು ಏನೂ ತಪ್ಪಿಲ್ಲ. ಒಬ್ಬ ದೇವದೂತ ಅಥವಾ ಕಣ್ಣಿಗೆ ಕಾಣದ ಜೀವಿ ಅವನ ಜೊತೆ ಮಾತಾಡಿರೋದಾದ್ರೆ+——.” ಅಂತ ಹೇಳಿ ತುಂಬ ವಾದ ಮಾಡಿದ್ರು. 10  ಜಗಳ ಹೆಚ್ಚಾಗಿದ್ರಿಂದ ಅವರು ಪೌಲನನ್ನ ಸಾಯಿಸಿಬಿಡ್ತಾರೆ ಅಂತ ಸೇನಾಪತಿಗೆ ಭಯ ಆಯ್ತು. ಅದಕ್ಕೆ ಅವನು ಸೈನಿಕರಿಗೆ ಜನ್ರ ಮಧ್ಯದಿಂದ ಪೌಲನನ್ನ ಹೇಗಾದ್ರೂ ಎಳ್ಕೊಂಡು ಸೈನಿಕರು ಉಳ್ಕೊಂಡಿರೋ ಜಾಗಕ್ಕೆ ಕರ್ಕೊಂಡು ಹೋಗೋಕೆ ಆಜ್ಞೆ ಕೊಟ್ಟ. 11  ಆದ್ರೆ ಆ ರಾತ್ರಿ ಪ್ರಭು ಪೌಲನ ಹತ್ರ ನಿಂತ್ಕೊಂಡು “ಧೈರ್ಯವಾಗಿರು!+ ನೀನು ಯೆರೂಸಲೇಮಲ್ಲಿ ನನ್ನ ಬಗ್ಗೆ ಚೆನ್ನಾಗಿ ಸಾರಿದ ತರ ರೋಮಲ್ಲೂ ನನ್ನ ಬಗ್ಗೆ ಸಾರಬೇಕು”+ ಅಂದನು. 12  ಬೆಳಗಾದಾಗ ಯೆಹೂದ್ಯರು ಪೌಲನನ್ನ ಕೊಲ್ಲೋಕೆ ಸಂಚು ಮಾಡಿದ್ರು. ಅವನನ್ನ ಸಾಯಿಸದೆ ನಾವೇನಾದ್ರೂ ತಿಂದ್ರೆ ಕುಡಿದ್ರೆ ನಮ್ಮ ಮೇಲೆ ಶಾಪ ಬರಲಿ ಅಂತ ಆಣೆ ಇಟ್ರು. 13  ಈ ತರ 40ಕ್ಕಿಂತ ಜಾಸ್ತಿ ಜನ ಆಣೆಯಿಟ್ಟು ಒಳಸಂಚು ಮಾಡಿದ್ರು. 14  ಅವರು ಮುಖ್ಯ ಪುರೋಹಿತರ ಮತ್ತು ಹಿರಿಯರ ಹತ್ರ ಹೋಗಿ “ಪೌಲನನ್ನ ಸಾಯಿಸದೆ ನಾವೇನಾದ್ರೂ ತಿಂದ್ರೆ ಕುಡಿದ್ರೆ ನಮ್ಮ ಮೇಲೆ ಶಾಪ ಬರಲಿ ಅಂತ ಆಣೆ ಮಾಡಿದ್ದೀವಿ. 15  ಹಾಗಾಗಿ ಈಗ ನೀವು ಮತ್ತು ಹಿರೀಸಭೆಯವರು ಸೇನಾಪತಿ ಹತ್ರ ಹೋಗಿ ಪೌಲನನ್ನ ನಮ್ಮ ಹತ್ರ ಕಳಿಸಿ, ನಾವು ಅವನನ್ನ ಇನ್ನೂ ಚೆನ್ನಾಗಿ ವಿಚಾರಣೆ ಮಾಡಬೇಕಂತ ಅಂದ್ಕೊಂಡಿದ್ದೀವಿ ಅಂತ ಹೇಳಿ. ಅವರು ಅವನನ್ನ ನಿಮ್ಮ ಹತ್ರ ಕರ್ಕೊಂಡು ಬರೋದಕ್ಕಿಂತ ಮುಂಚೆನೇ ದಾರಿಯಲ್ಲಿ ನಾವು ಅವನ ಕತೆ ಮುಗಿಸಿಬಿಡ್ತೀವಿ” ಅಂದ್ರು. 16  ಈ ಒಳಸಂಚಿನ ಬಗ್ಗೆ ಪೌಲನ ಸೋದರಳಿಯ ಕೇಳಿಸ್ಕೊಂಡ. ಸೈನಿಕರು ಉಳ್ಕೊಂಡಿರೋ ಜಾಗಕ್ಕೆ ಬಂದು ಪೌಲನಿಗೆ ಅದನ್ನ ಹೇಳಿದ. 17  ಆಗ ಪೌಲ ಒಬ್ಬ ಸೇನಾಧಿಕಾರಿ ಹತ್ರ “ಈ ಹುಡುಗನಿಗೆ ಸೇನಾಪತಿ ಹತ್ರ ಏನೋ ಹೇಳೋಕಿದೆ ಅಂತೆ. ಹಾಗಾಗಿ ಇವನನ್ನ ಸೇನಾಪತಿಯ ಹತ್ರ ಕರ್ಕೊಂಡು ಹೋಗು” ಅಂದ. 18  ಆಗ ಆ ಸೇನಾಧಿಕಾರಿ ಅವನನ್ನ ಸೇನಾಪತಿ ಹತ್ರ ಕರ್ಕೊಂಡು ಹೋಗಿ “ಜೈಲಲ್ಲಿರೋ ಪೌಲ ನನ್ನನ್ನ ಕರೆದು ಈ ಹುಡುಗನನ್ನ ನಿನ್ನ ಹತ್ರ ಕರ್ಕೊಂಡು ಹೋಗೋಕೆ ಹೇಳಿದ. ಇವನಿಗೆ ಏನೋ ಹೇಳಬೇಕಂತೆ” ಅಂದ. 19  ಸೇನಾಪತಿ ಅವನ ಕೈಹಿಡಿದು ಪಕ್ಕಕ್ಕೆ ಕರ್ಕೊಂಡು ಹೋಗಿ “ಏನು ವಿಷ್ಯ, ಹೇಳು” ಅಂದ. 20  ಅದಕ್ಕೆ ಆ ಹುಡುಗ “ಯೆಹೂದ್ಯರು ಒಂದು ಒಳಸಂಚು ಮಾಡಿದ್ದಾರೆ. ಹಿರೀಸಭೆಯವರು ನಿನ್ನ ಹತ್ರ ಬಂದು ‘ಪೌಲನನ್ನ ಇನ್ನೂ ಚೆನ್ನಾಗಿ ವಿಚಾರಣೆ ಮಾಡಬೇಕು. ಅದಕ್ಕೆ ನಾಳೆ ಅವನನ್ನ ಕರ್ಕೊಂಡು ಬಾ’+ ಅಂತ ಕೇಳ್ತಾರೆ. 21  ಆದ್ರೆ ನೀನು ಅದಕ್ಕೆ ಒಪ್ಕೊಬೇಡ. ಯಾಕಂದ್ರೆ 40ಕ್ಕಿಂತ ಜಾಸ್ತಿ ಜನ ಪೌಲನನ್ನ ಸಾಯಿಸೋಕೆ ಹೊಂಚು ಹಾಕಿ ಕಾಯ್ತಾ ಇದ್ದಾರೆ. ಪೌಲನನ್ನ ಸಾಯಿಸದೆ ಏನಾದ್ರೂ ತಿಂದ್ರೆ ಕುಡಿದ್ರೆ ಅವ್ರ ಮೇಲೆ ಶಾಪ ಬರಲಿ ಅಂತ ಆಣೆ ಮಾಡ್ಕೊಂಡಿದ್ದಾರೆ.+ ಈಗ ಅವರು ನಿನ್ನ ಅನುಮತಿಗೋಸ್ಕರ ಕಾಯ್ತಾ ಇದ್ದಾರೆ” ಅಂದ. 22  ಆಗ ಸೇನಾಪತಿ ಆ ಹುಡುಗನಿಗೆ “ಈ ವಿಷ್ಯ ನೀನು ನಂಗೆ ಹೇಳಿದ್ದೀಯ ಅಂತ ಯಾರಿಗೂ ಹೇಳಬೇಡ” ಅಂತ ಅಪ್ಪಣೆ ಕೊಟ್ಟು ಕಳಿಸಿಬಿಟ್ಟ. 23  ಆಮೇಲೆ ಸೇನಾಪತಿ ಇಬ್ರು ಸೇನಾಧಿಕಾರಿಗಳನ್ನ ಕರೆದು “ರಾತ್ರಿ ಒಂಬತ್ತು ಗಂಟೆಗೆ ಕೈಸರೈಯಕ್ಕೆ ಹೋಗೋಕೆ 200 ಸೈನಿಕರನ್ನ, 70 ಕುದುರೆ ಸವಾರರನ್ನ, ಈಟಿ ಹಿಡ್ಕೊಂಡ 200 ಸೈನಿಕರನ್ನ ಸಿದ್ಧಮಾಡಿ. 24  ಅಷ್ಟೇ ಅಲ್ಲ ರಾಜ್ಯಪಾಲ ಫೇಲಿಕ್ಸನ ಹತ್ರ ಪೌಲ ಸುರಕ್ಷಿತವಾಗಿ ಹೋಗೋಕೆ ಕುದುರೆಗಳನ್ನ ಸಿದ್ಧಪಡಿಸಿ” ಅಂದ. 25  ಜೊತೆಗೆ ಸೇನಾಪತಿ ಈ ರೀತಿ ಒಂದು ಪತ್ರ ಬರೆದುಕೊಟ್ಟ 26  “ಮಹಾಪ್ರಭು ರಾಜ್ಯಪಾಲ ಫೇಲಿಕ್ಸನಿಗೆ ಕ್ಲೌದ್ಯ ಲೂಸ್ಯ ಮಾಡೋ ನಮಸ್ಕಾರಗಳು! 27  ಯೆಹೂದ್ಯರು ಈ ಮನುಷ್ಯನನ್ನ ಹಿಡಿದು ಕೊಲ್ಲಬೇಕಂತ ಇದ್ದಾರೆ. ಆದ್ರೆ ಇವನೊಬ್ಬ ರೋಮಿನ ಪ್ರಜೆ ಅಂತ ನಂಗೆ ಗೊತ್ತಾಯ್ತು.+ ಅದಕ್ಕೆ ನಾನು ತಕ್ಷಣ ಸೈನಿಕರನ್ನ ಕರ್ಕೊಂಡು ಹೋಗಿ ಇವನನ್ನ ಕಾಪಾಡಿದೆ.+ 28  ಯೆಹೂದ್ಯರು ಇವನ ಮೇಲೆ ಆರೋಪ ಹಾಕೋಕೆ ಕಾರಣ ಏನಂತ ತಿಳ್ಕೊಬೇಕಂತ ನಾನು ಅವ್ರ ಹಿರೀಸಭೆಗೆ+ ಇವನನ್ನ ಕರ್ಕೊಂಡು ಹೋದೆ. 29  ಅವರು ತಮ್ಮ ನಿಯಮ ಪುಸ್ತಕದ ಆಧಾರದ ಮೇಲೆ ಇವನ ಮೇಲೆ ಆರೋಪ ಹಾಕ್ತಿದ್ದಾರೆ ಅಂತ ನನಗೆ ಗೊತ್ತಾಯ್ತು.+ ಆದ್ರೆ ಮರಣದಂಡನೆ ಕೊಡುವಷ್ಟು, ಜೈಲಿಗೆ ಹಾಕುವಷ್ಟು ದೊಡ್ಡ ಅಪರಾಧ ಇವನೇನೂ ಮಾಡಿಲ್ಲ. 30  ಇವನನ್ನ ಸಾಯಿಸೋಕೆ ಅವರು ಸಂಚು ಮಾಡ್ತಾ ಇದ್ದಾರೆ ಅಂತ ನನಗೆ ಗೊತ್ತಾಯ್ತು.+ ಅದಕ್ಕೆ ತಕ್ಷಣ ಇವನನ್ನ ನಿನ್ನ ಹತ್ರ ಕಳಿಸ್ತಾ ಇದ್ದೀನಿ. ಇವನ ಮೇಲೆ ಆರೋಪ ಹಾಕಿರೋರು ನಿನ್ನ ಮುಂದೆ ಬಂದು ಮಾತಾಡಬೇಕು ಅಂತ ಅವ್ರಿಗೆ ಅಪ್ಪಣೆ ಕೊಟ್ಟಿದ್ದೀನಿ.” 31  ಹೀಗೆ ಈ ಸೈನಿಕರು ಸೇನಾಪತಿ ಹೇಳಿದ ಹಾಗೆ ರಾತ್ರೋರಾತ್ರಿ ಪೌಲನನ್ನ+ ಅಂತಿಪತ್ರಿ ಪಟ್ಟಣಕ್ಕೆ ಕರ್ಕೊಂಡು ಹೋದ್ರು. 32  ಮಾರನೇ ದಿನ ಪೌಲನ ಜೊತೆ ಕುದುರೆ ಸವಾರರು ಹೋದ್ರು. ಉಳಿದ ಸೈನಿಕರು ತಾವು ಉಳ್ಕೊಂಡಿರೋ ಜಾಗಕ್ಕೆ ವಾಪಸ್‌ ಹೋದ್ರು. 33  ಕುದುರೆ ಸವಾರರು ಕೈಸರೈಯಕ್ಕೆ ಹೋಗಿ ರಾಜ್ಯಪಾಲನಿಗೆ ಪತ್ರ ಕೊಟ್ಟು ಪೌಲನನ್ನ ಅವನ ಕೈಗೆ ಒಪ್ಪಿಸಿದ್ರು. 34  ರಾಜ್ಯಪಾಲ ಆ ಪತ್ರ ಓದಿ ಪೌಲ ಯಾವ ಊರಿನವನು ಅಂತ ಕೇಳಿದ. ಆಗ ಅವನು ಕಿಲಿಕ್ಯದವನು+ ಅಂತ ರಾಜ್ಯಪಾಲನಿಗೆ ಗೊತ್ತಾಯ್ತು. 35  ಅವನು ಪೌಲನಿಗೆ “ನಿನ್ನ ಮೇಲೆ ತಪ್ಪು ಹೊರಿಸಿದವರು ಬರಲಿ.+ ವಿಚಾರಣೆ ಆಗುವಾಗ ನಾನು ನಿನಗೆ ಮಾತಾಡೋಕೆ ಅವಕಾಶ ಕೊಡ್ತೀನಿ” ಅಂದ. ಅಲ್ಲಿ ತನಕ ಪೌಲನನ್ನ ಹೆರೋದನ ಅರಮನೆಯಲ್ಲಿಟ್ಟು ಕಾಯೋಕೆ ಅವನು ಸೈನಿಕರಿಗೆ ಆಜ್ಞೆ ಕೊಟ್ಟ.

ಪಾದಟಿಪ್ಪಣಿ