ಅಪೊಸ್ತಲರ ಕಾರ್ಯ 28:1-31

  • ಮಾಲ್ಟ ದ್ವೀಪ ತಲುಪಿದ್ರು (1-6)

  • ಪೊಪ್ಲಿಯನ ಅಪ್ಪನಿಗೆ ವಾಸಿಯಾಯ್ತು (7-10)

  • ರೋಮಿನಲ್ಲಿ (11-16)

  • ಪೌಲ ರೋಮಿನಲ್ಲಿ ಯೆಹೂದಿಗಳ ಜೊತೆ ಮಾತಾಡಿದ (17-29)

  • ಎರಡು ವರ್ಷ ಪೌಲ ಧೈರ್ಯದಿಂದ ಸಾರಿದ (30, 31)

28  ನಾವು ಹೇಗೋ ಅಲ್ಲಿ ಜೋಪಾನವಾಗಿ ತಲಪಿದ್ವಿ. ಆ ದ್ವೀಪದ ಹೆಸ್ರು ಮಾಲ್ಟ ಅಂತ ಗೊತ್ತಾಯ್ತು.+  ಆ ದ್ವೀಪದ ಜನ ನಮ್ಮನ್ನ ತುಂಬ ಚೆನ್ನಾಗಿ ನೋಡ್ಕೊಂಡ್ರು. ಆಗ ಮಳೆ ಸುರಿತಾ ಇತ್ತು. ಅದಕ್ಕೆ ನಮ್ಗೆ ತುಂಬ ಚಳಿ ಆಗ್ತಾ ಇತ್ತು. ಚಳಿ ಕಾಯಿಸೋಕೆ ಬೆಂಕಿ ಹಚ್ಚಿ ಪ್ರೀತಿಯಿಂದ ನಮ್ಮನ್ನ ಸೇರಿಸ್ಕೊಂಡ್ರು.  ಪೌಲ ಕಟ್ಟಿಗೆಗಳನ್ನ ಕೂಡಿಸಿ ಅದನ್ನ ಬೆಂಕಿಗೆ ಹಾಕಿದ. ಆಗ ಆ ಬಿಸಿಗೆ ಒಂದು ಹಾವು ಹೊರಗೆ ಬಂದು ಅವನ ಕೈಗೆ ಸುತ್ಕೊಂಡ್ತು.  ಆ ದ್ವೀಪದ ಜನ ಆ ಹಾವು ಪೌಲನ ಕೈಯಲ್ಲಿ ನೇತಾಡ್ತಾ ಇರೋದನ್ನ ನೋಡಿದಾಗ “ಇವನು ಕೊಲೆಗಾರ ಆಗಿರಬೇಕು. ಅದಕ್ಕೆ ಸಮುದ್ರದಿಂದ ತಪ್ಪಿಸ್ಕೊಂಡ್ರೂ ನ್ಯಾಯದೇವತೆ* ಇವನನ್ನ ಬದುಕೋಕೆ ಬಿಡ್ತಾ ಇಲ್ಲ” ಅಂತ ಮಾತಾಡ್ಕೊಂಡ್ರು.  ಆದ್ರೆ ಪೌಲ ಆ ಹಾವನ್ನ ಬೆಂಕಿಗೆ ಹಾಕಿದ. ಅವನಿಗೇನೂ ಹಾನಿ ಆಗಿಲ್ಲ.  ಅವನ ಶರೀರ ಊದ್ಕೊಂಡು ತಕ್ಷಣ ಸತ್ತುಹೋಗ್ತಾನೆ ಅಂತ ಅವರು ಅಂದ್ಕೊಂಡಿದ್ರು. ಆದ್ರೆ ಎಷ್ಟು ಹೊತ್ತಾದ್ರೂ ಪೌಲನಿಗೆ ಏನೂ ಆಗಿಲ್ಲ. ಆಗ ಅವರು ತಮ್ಮ ಮನಸ್ಸು ಬದಲಾಯಿಸ್ಕೊಂಡ್ರು. ಪೌಲ ಒಬ್ಬ ದೇವರು ಅಂತ ಹೇಳೋಕೆ ಶುರುಮಾಡಿದ್ರು.  ಆ ದ್ವೀಪದ ಮುಖ್ಯಸ್ಥ ಪೊಪ್ಲಿಯ ಅನ್ನೋ ವ್ಯಕ್ತಿಗೆ ಈ ಸ್ಥಳದ ಹತ್ರದಲ್ಲೇ ಜಮೀನು ಇತ್ತು. ಅವನು ನಮ್ಮನ್ನ ಮನೆಗೆ ಕರೆದ. ಮೂರು ದಿನ ತುಂಬ ಪ್ರೀತಿಯಿಂದ ಅತಿಥಿಸತ್ಕಾರ ಮಾಡಿದ.  ಆದ್ರೆ ಪೊಪ್ಲಿಯನ ಅಪ್ಪನಿಗೆ ಜ್ವರ ಮತ್ತು ರಕ್ತಭೇದಿ ಆಗಿತ್ತು. ಅದಕ್ಕೆ ಅವನು ಹುಷಾರಿಲ್ಲದೆ ಮಲಗಿದ್ದ. ಪೌಲ ಅವನ ಹತ್ರ ಹೋಗಿ ಪ್ರಾರ್ಥನೆ ಮಾಡಿದ. ಅವನ ಮೇಲೆ ಕೈಯಿಟ್ಟು ಅವನನ್ನ ವಾಸಿಮಾಡಿದ.+  ಇದಾದ ಮೇಲೆ ಆ ದ್ವೀಪದಲ್ಲಿ ಹುಷಾರಿಲ್ಲದೆ ಇದ್ದ ಬೇರೆ ಜನ ಪೌಲನ ಹತ್ರ ಬಂದು ವಾಸಿಯಾದ್ರು.+ 10  ಅದಕ್ಕೆ ಅವರು ಖುಷಿಯಿಂದ ನಮ್ಗೆ ತುಂಬ ಉಡುಗೊರೆ ಕೊಟ್ರು. ನಾವು ಅಲ್ಲಿಂದ ಹೋಗುವಾಗ ನಮ್ಗೆ ಬೇಕಾಗಿರೋದನ್ನೆಲ್ಲ ಹಡಗಲ್ಲಿ ತುಂಬಿಸಿದ್ರು. 11  ಮೂರು ತಿಂಗಳು ಆದ ಮೇಲೆ “ಸ್ಯೂಸ್‌ ಪುತ್ರರು” ಅನ್ನೋ ಚಿಹ್ನೆ ಇದ್ದ ಒಂದು ಹಡಗನ್ನ ಹತ್ತಿ ನಾವು ಪ್ರಯಾಣ ಮಾಡಿದ್ವಿ. ಅಲೆಕ್ಸಾಂದ್ರಿಯದಿಂದ ಬಂದ ಆ ಹಡಗು ಚಳಿಗಾಲ ಮುಗಿಯೋ ತನಕ ಆ ದ್ವೀಪದಲ್ಲೇ ಇತ್ತು. 12  ನಾವು ಸುರಕೂಸ್‌ ಬಂದರನ್ನ ತಲಪಿ ಅಲ್ಲಿ ಮೂರು ದಿನ ಉಳ್ಕೊಂಡ್ವಿ. 13  ಅಲ್ಲಿಂದ ಮತ್ತೆ ಪ್ರಯಾಣ ಮಾಡಿ ರೇಗಿಯಕ್ಕೆ ಬಂದ್ವಿ. ಮಾರನೇ ದಿನ ದಕ್ಷಿಣದ ಗಾಳಿ ಬೀಸ್ತಾ ಇದ್ದಿದ್ರಿಂದ ಮುಂದಿನ ದಿನಾನೇ ನಾವು ಪೊತಿಯೋಲಕ್ಕೆ ಬಂದುಬಿಟ್ವಿ. 14  ಅಲ್ಲಿ ನಮ್ಗೆ ಸಹೋದರರು ಸಿಕ್ಕಿದ್ರು. ಅವರು ಏಳು ದಿನ ನಮ್ಮ ಜೊತೆ ಇರಿ ಅಂತ ಬೇಡ್ಕೊಂಡ್ರು. ಅವ್ರ ಜೊತೆ ಇದ್ದು ಆಮೇಲೆ ನಾವು ರೋಮ್‌ ಪಟ್ಟಣಕ್ಕೆ ಹೋದ್ವಿ. 15  ಅಲ್ಲಿ ಸಹೋದರರಿಗೆ ನಾವು ಬರ್ತಿರೋ ಸುದ್ದಿ ಗೊತ್ತಾಗಿ ನಮ್ಮನ್ನ ನೋಡೋಕೆ ಬಂದ್ರು. ಅವರು ಅಪ್ಪಿಯ ಪೇಟೆಯ ತ್ರಿಛತ್ರ ಅನ್ನೋ ಸ್ಥಳದ ತನಕ ಬಂದ್ರು. ಅವ್ರನ್ನ ನೋಡಿದಾಗ ಪೌಲನಿಗೆ ತುಂಬ ಖುಷಿ ಆಯ್ತು. ಅವನು ದೇವ್ರಿಗೆ ಕೃತಜ್ಞತೆ ಹೇಳಿದ.+ 16  ಕೊನೆಗೆ ನಾವು ರೋಮ್‌ ಪಟ್ಟಣಕ್ಕೆ ಬಂದ್ವಿ. ತಾನೇ ಬಾಡಿಗೆಗೆ ತಗೊಂಡ ಮನೆಯಲ್ಲಿ ಸೈನಿಕರ ಕಾವಲಲ್ಲಿ ಉಳಿಯೋಕೆ ಪೌಲನಿಗೆ ಅನುಮತಿ ಸಿಕ್ತು. 17  ಮೂರು ದಿನ ಆದ ಮೇಲೆ ಅವನು ಯೆಹೂದ್ಯರ ಮುಖ್ಯಸ್ಥರನ್ನ ಬರೋಕೆ ಹೇಳಿದ. ಅವರು ಬಂದಾಗ “ಸಹೋದರರೇ, ನಾನು ನಮ್ಮ ಜನ್ರ ವಿರುದ್ಧ ಆಗಲಿ, ಪೂರ್ವಜರ ಆಚಾರವಿಚಾರಗಳ ವಿರುದ್ಧ ಆಗಲಿ ಏನೂ ಮಾಡಲಿಲ್ಲ.+ ಆದ್ರೂ ನನ್ನನ್ನ ಒಬ್ಬ ಕೈದಿನ ಕರ್ಕೊಂಡು ಬರೋ ತರ ಯೆರೂಸಲೇಮಿಂದ ಕರ್ಕೊಂಡು ಬಂದು ರೋಮನ್ನರ ಕೈಗೆ ಒಪ್ಪಿಸಿದ್ರು.+ 18  ರೋಮನ್ನರು ನನ್ನನ್ನ ವಿಚಾರಣೆಮಾಡಿದಾಗ+ ಮರಣಶಿಕ್ಷೆ ಸಿಗುವಂಥ ತಪ್ಪೇನೂ ನಾನು ಮಾಡಿಲ್ಲ ಅಂತ ಗೊತ್ತಾಯ್ತು. ಹಾಗಾಗಿ ಅವರು ನನ್ನನ್ನ ಬಿಟ್ಟುಬಿಡೋಣ ಅಂದ್ಕೊಂಡ್ರು.+ 19  ಆದ್ರೆ ಯೆಹೂದ್ಯರು ಅದಕ್ಕೆ ಒಪ್ಪಲಿಲ್ಲ. ಹಾಗಾಗಿ ನಾನು ರೋಮಿನ ರಾಜನ ಹತ್ರ ಮಾತಾಡಬೇಕು ಅಂತ ಕೇಳ್ಕೊಂಡೆ.+ ನನ್ನ ಸ್ವಂತ ಜನ್ರ ಮೇಲೆ ಆರೋಪ ಹಾಕಬೇಕು ಅಂತ ನಾನು ಹೀಗೆ ಮಾಡಿಲ್ಲ. 20  ಹಾಗಾಗಿ ಈ ವಿಷ್ಯ ಹೇಳೋಕೆ ನಾನು ನಿಮ್ಮನ್ನ ಇಲ್ಲಿ ಬರೋಕೆ ಹೇಳಿದೆ. ಇಸ್ರಾಯೇಲ್ಯರು ಏನು ನಂಬ್ತಾರೋ ಅದನ್ನೇ ನಾನು ನಂಬ್ತಾ ಇರೋದ್ರಿಂದ ನನ್ನ ಕೈಗೆ ಬೇಡಿ ಬಿದ್ದಿದೆ” ಅಂದ.+ 21  ಆಗ ಅವರು ಪೌಲನಿಗೆ “ನಿನ್ನ ಬಗ್ಗೆ ನಮ್ಗೆ ಯೂದಾಯದಿಂದ ಯಾವ ಪತ್ರನೂ ಬಂದಿಲ್ಲ, ಅಲ್ಲಿಂದ ಬಂದಿರೋ ಸಹೋದರರು ನಿನ್ನ ಬಗ್ಗೆ ಏನೂ ಸುದ್ದಿ ತಂದಿಲ್ಲ. ನಿನ್ನ ಬಗ್ಗೆ ಕೆಟ್ಟದ್ದೇನೂ ಹೇಳಿಲ್ಲ. 22  ಆದ್ರೆ ಎಲ್ಲ ಕಡೆ ಈ ಹೊಸ ಧರ್ಮದ+ ಬಗ್ಗೆನೇ ಮಾತಾಡ್ತಾ ಇದ್ದಾರೆ. ಅದಕ್ಕೆ ಇದ್ರ ಬಗ್ಗೆ ನಿಂಗೆ ಏನು ಹೇಳೋಕಿದೆ ಅಂತ ಕೇಳಿಸ್ಕೊಳ್ಳೋಕೆ ನಮಗೆ ಆಸೆ ಇದೆ” ಅಂದ್ರು.+ 23  ಅವರು ಒಂದು ದಿನ ಪೌಲನನ್ನ ಭೇಟಿ ಮಾಡಬೇಕಂತ ಅಂದ್ಕೊಂಡು ಅವನಿದ್ದ ಮನೆಗೆ ಬಂದ್ರು. ಆ ದಿನ ತುಂಬ ಜನ ಬಂದಿದ್ರು. ಪೌಲ ಬೆಳಗಿಂದ ಸಾಯಂಕಾಲದ ತನಕ ಅವ್ರಿಗೆ ದೇವ್ರ ಆಳ್ವಿಕೆ ಬಗ್ಗೆ ಚೆನ್ನಾಗಿ ವಿವರಿಸಿದ. ಮೋಶೆಯ ನಿಯಮ ಪುಸ್ತಕವನ್ನ,+ ಪ್ರವಾದಿಗಳು ಬರೆದ ಪುಸ್ತಕಗಳನ್ನ ಉಪಯೋಗಿಸಿ ಯೇಸು ಬಗ್ಗೆ+ ಅರ್ಥಮಾಡಿಸೋಕೆ ಪ್ರಯತ್ನ ಮಾಡಿದ.+ 24  ಅವನು ಹೇಳಿದ್ದನ್ನ ಕೆಲವರು ನಂಬಿದ್ರು. ಇನ್ನು ಕೆಲವರು ನಂಬಲಿಲ್ಲ. 25  ಅವ್ರಲ್ಲೇ ಬೇರೆಬೇರೆ ಅಭಿಪ್ರಾಯ ಇದ್ದಿದ್ರಿಂದ ಅವರು ಅಲ್ಲಿಂದ ಹೋಗೋಕೆ ಶುರುಮಾಡಿದ್ರು. ಆಗ ಪೌಲ ಹೀಗೆ ಹೇಳಿದ “ಪ್ರವಾದಿ ಯೆಶಾಯ ಪವಿತ್ರಶಕ್ತಿಯ ಸಹಾಯದಿಂದ ನಿಮ್ಮ ಪೂರ್ವಜರಿಗೆ ಹೇಳಿದ ಈ ಮಾತು ನಿಜಾನೇ: 26  ‘ನೀನು ಈ ಜನ್ರ ಹತ್ರ ಹೋಗಿ ಹೀಗೆ ಹೇಳು “ನೀವು ಎಷ್ಟು ಕೇಳಿಸ್ಕೊಂಡ್ರೂ ಅರ್ಥ ಆಗಲ್ಲ. ನೀವು ಎಷ್ಟು ನೋಡಿದ್ರೂ ಕಾಣಿಸಲ್ಲ.+ 27  ಈ ಜನ್ರ ಹೃದಯ ಕಲ್ಲಿನ ತರ ಇದೆ. ಅವರು ಕೇಳಿದ್ರೂ ಗಮನ ಕೊಡ್ತಿಲ್ಲ. ಕಣ್ಣು ಮುಚ್ಕೊಂಡಿದ್ದಾರೆ. ಇಲ್ಲದಿದ್ರೆ ಅವರು ಕೇಳಿ, ನೋಡಿ, ಅರ್ಥಮಾಡ್ಕೊಂಡು, ನನ್ನ ಕಡೆ ತಿರುಗ್ತಿದ್ರು. ಆಗ ನಾನು ಅವ್ರನ್ನ ವಾಸಿಮಾಡ್ತಿದ್ದೆ.’”+ 28  ಹಾಗಾಗಿ ದೇವರು ಹೇಗೆ ರಕ್ಷಿಸ್ತಾನೆ ಅನ್ನೋ ಸಂದೇಶ ಯೆಹೂದ್ಯರಲ್ಲದ ಜನ್ರಿಗೆ ಸಾರಲಾಗುತ್ತೆ ಅಂತ ನಿಮ್ಗೆ ಗೊತ್ತಿರಲಿ.+ ಅವರು ಆ ಸಂದೇಶವನ್ನ ಖಂಡಿತ ಕೇಳ್ತಾರೆ.”+ 29  *—— 30  ಹೀಗೆ ಪೌಲ ತನ್ನ ಬಾಡಿಗೆ ಮನೆಯಲ್ಲಿ ಎರಡು ವರ್ಷ ಇದ್ದ.+ ಅವನ ಹತ್ರ ಬರುವವ್ರನ್ನೆಲ್ಲ ಪ್ರೀತಿಸಿ ಸ್ವಾಗತಿಸ್ತಾ ಇದ್ದ. 31  ಯಾವುದೇ ಅಡ್ಡಿತಡೆ ಇಲ್ಲದೆ ಧೈರ್ಯವಾಗಿ ದೇವ್ರ ಆಳ್ವಿಕೆ ಬಗ್ಗೆ ಸಾರ್ತಿದ್ದ.+ ಪ್ರಭು ಯೇಸು ಕ್ರಿಸ್ತನ ಬಗ್ಗೆ ಕಲಿಸ್ತಾ ಇದ್ದ.

ಪಾದಟಿಪ್ಪಣಿ

“ಗ್ರೀಕಲ್ಲಿ ಡೀಕೆ. ನ್ಯಾಯವನ್ನ ನ್ಯಾಯದೇವತೆ ಅಂತ ವ್ಯಕ್ತೀಕರಿಸಿರಬಹುದು.”