ಅಪೊಸ್ತಲರ ಕಾರ್ಯ 5:1-42
5 ಅನನೀಯ ಅನ್ನೋ ವ್ಯಕ್ತಿ ಮತ್ತು ಅವನ ಹೆಂಡತಿ ಸಪ್ಫೈರ ಸಹ ತಮ್ಮ ಆಸ್ತಿ ಮಾರಿದ್ರು.
2 ಆದ್ರೆ ಅನನೀಯ ಬಂದ ಹಣದಲ್ಲಿ ಸ್ವಲ್ಪವನ್ನ ರಹಸ್ಯವಾಗಿ ಬಚ್ಚಿಟ್ಟ. ಈ ವಿಷ್ಯ ಅವನ ಹೆಂಡತಿಗೂ ಗೊತ್ತಿತ್ತು. ಉಳಿದ ಹಣವನ್ನ ಅನನೀಯ ತಂದು ಅಪೊಸ್ತಲರಿಗೆ ಕೊಟ್ಟ.+
3 ಆಗ ಪೇತ್ರ ಅವನಿಗೆ “ಅನನೀಯ, ಸೈತಾನ ನಿನಗೆ ಪವಿತ್ರಶಕ್ತಿಗೆ+ ಮೋಸ ಮಾಡೋಕೆ+ ಮತ್ತು ಜಮೀನು ಮಾರಿದಾಗ ಬಂದ ಹಣದಲ್ಲಿ ಸ್ವಲ್ಪವನ್ನ ಬಚ್ಚಿಡೋಕೆ ಪ್ರೇರೇಪಿಸಿದ. ಅವನಿಗೆ ನೀನ್ಯಾಕೆ ಬಿಟ್ಟುಕೊಟ್ಟೆ?
4 ಮಾರೋದಕ್ಕಿಂತ ಮುಂಚೆ ಆ ಇಡೀ ಜಮೀನು ನಿಂದೇ ತಾನೇ? ಮಾರಿದ ಮೇಲೆನೂ ಆ ಹಣ ನಿನ್ನ ಹತ್ರನೇ ಇತ್ತು ತಾನೇ? ಇಂಥ ಒಂದು ಕೆಟ್ಟ ಕೆಲಸ ಮಾಡೋಕೆ ನಿನಗೆ ಮನಸ್ಸಾದ್ರೂ ಹೇಗೆ ಬಂತು? ನೀನು ಸುಳ್ಳು ಹೇಳಿದ್ದು ಮನುಷ್ಯರಿಗೆ ಅಲ್ಲ, ದೇವ್ರಿಗೆ” ಅಂದ.
5 ಈ ಮಾತು ಕೇಳಿದ ತಕ್ಷಣ ಅನನೀಯ ಕೆಳಗೆ ಬಿದ್ದು ಸತ್ತುಹೋದ. ಇದನ್ನ ಕೇಳಿದವ್ರೆಲ್ಲ ತುಂಬ ಭಯಪಟ್ರು.
6 ಆಮೇಲೆ ಕೆಲವು ಯುವಕರು ಬಂದು ಅನನೀಯನನ್ನ ಬಟ್ಟೆಯಲ್ಲಿ ಸುತ್ತಿ ಹೊತ್ಕೊಂಡು ಹೋಗಿ ಸಮಾಧಿ ಮಾಡಿದ್ರು.
7 ಸುಮಾರು ಮೂರು ತಾಸು ಆದಮೇಲೆ ಅವನ ಹೆಂಡತಿ ಸಫೈರ ಅಲ್ಲಿಗೆ ಬಂದಳು. ನಡೆದ ವಿಷ್ಯ ಅವಳಿಗೆ ಗೊತ್ತಿರಲಿಲ್ಲ.
8 ಪೇತ್ರ ಅವಳಿಗೆ “ನೀವಿಬ್ರು ಜಮೀನನ್ನ ಮಾರಿದಾಗ ಇಷ್ಟೇ ಹಣ ಬಂತಾ?” ಅಂತ ಕೇಳಿದ. ಅದಕ್ಕೆ ಅವಳು “ಹೌದು, ಇಷ್ಟೇ ಹಣ ಬಂತು” ಅಂದಳು.
9 ಆಗ ಪೇತ್ರ “ನೀವಿಬ್ರೂ ಯೆಹೋವನ* ಪವಿತ್ರಶಕ್ತಿಯನ್ನ ಪರೀಕ್ಷಿಸಬೇಕಂತ ಯಾಕೆ ಅಂದ್ಕೊಂಡ್ರಿ? ನೋಡು, ನಿನ್ನ ಗಂಡನನ್ನ ಸಮಾಧಿ ಮಾಡಿದವರು ಬಾಗಿಲ ಹತ್ರನೇ ಇದ್ದಾರೆ. ಅವರು ನಿನ್ನನ್ನೂ ಹೊತ್ಕೊಂಡು ಹೋಗ್ತಾರೆ” ಅಂದ.
10 ಆಗಲೇ ಅವಳು ಪೇತ್ರನ ಕಾಲ ಹತ್ರ ಬಿದ್ದು ಸತ್ತುಹೋದಳು. ಆ ಯುವಕರು ಒಳಗೆ ಬಂದಾಗ ಅವಳು ಸತ್ತಿರೋದನ್ನ ನೋಡಿ ಅವಳನ್ನೂ ಹೊತ್ಕೊಂಡು ಹೋಗಿ ಅವಳ ಗಂಡನ ಪಕ್ಕದಲ್ಲೇ ಸಮಾಧಿ ಮಾಡಿದ್ರು.
11 ಇದ್ರಿಂದಾಗಿ ಯೆರೂಸಲೇಮಲ್ಲಿದ್ದ ಶಿಷ್ಯರಿಗೆ ಮತ್ತು ಇದನ್ನ ಕೇಳಿಸ್ಕೊಂಡ ಎಲ್ರಿಗೆ ತುಂಬ ಭಯ ಆಯ್ತು.
12 ಅಷ್ಟೇ ಅಲ್ಲ ಅಪೊಸ್ತಲರು ಜನ್ರ ಮುಂದೆ ತುಂಬ ಅದ್ಭುತಗಳನ್ನ ಮಾಡ್ತಾ ಬಂದ್ರು.+ ಅವ್ರೆಲ್ಲ ಸೊಲೊಮೋನನ ಮಂಟಪದಲ್ಲಿ+ ಸೇರಿಬರ್ತಿದ್ರು.
13 ಬೇರೆ ಯಾರಿಗೂ ಅವ್ರ ಜೊತೆ ಸೇರೋಕೆ ಧೈರ್ಯ ಇರಲಿಲ್ಲ. ಆದ್ರೂ ಶಿಷ್ಯರ ಬಗ್ಗೆ ಜನ ತುಂಬ ಹೊಗಳಿ ಮಾತಾಡ್ತಿದ್ರು.
14 ಅಷ್ಟೇ ಅಲ್ಲ ತುಂಬ ಜನ ಪುರುಷರು, ಸ್ತ್ರೀಯರು ಪ್ರಭು ಮೇಲೆ ನಂಬಿಕೆ ಇಟ್ಟು ಶಿಷ್ಯರಾದ್ರು.+
15 ಕಾಯಿಲೆ ಬಿದ್ದವ್ರನ್ನ ಸಾರ್ವಜನಿಕ ಸ್ಥಳಗಳಿಗೆ ಕರ್ಕೊಂಡು ಬಂದು ಚಿಕ್ಕ ಹಾಸಿಗೆಗಳ ಮೇಲೆ, ಚಾಪೆ ಮೇಲೆ ಮಲಗಿಸ್ತಿದ್ರು. ಪೇತ್ರ ಆಕಡೆ ಈಕಡೆ ತಿರುಗಾಡುವಾಗ ಅವನ ನೆರಳಾದ್ರೂ ಅವ್ರ ಮೇಲೆ ಬೀಳಲಿ ಅಂತ ಜನ ಹೀಗೆ ಮಾಡ್ತಿದ್ರು.+
16 ಅದೂ ಅಲ್ಲದೆ ಯೆರೂಸಲೇಮಿನ ಸುತ್ತಮುತ್ತ ಇದ್ದ ಊರುಗಳಿಂದ ಜನ ಗುಂಪು ಗುಂಪಾಗಿ ಬರ್ತಿದ್ರು. ಕಾಯಿಲೆ ಬಿದ್ದವರನ್ನ, ಕೆಟ್ಟ ದೇವದೂತರು ಹಿಡಿದವರನ್ನ ಹೊತ್ಕೊಂಡು ಬರ್ತಿದ್ರು. ಅವ್ರಲ್ಲಿ ಎಲ್ರೂ ವಾಸಿ ಆದ್ರು.
17 ಆದ್ರೆ ಮಹಾ ಪುರೋಹಿತನಿಗೆ ಮತ್ತು ಅವನ ಜೊತೆ ಇದ್ದ ಸದ್ದುಕಾಯರ ಗುಂಪಿಗೆ ಇದನ್ನೆಲ್ಲ ನೋಡಿ ತುಂಬ ಹೊಟ್ಟೆಕಿಚ್ಚು ಆಯ್ತು.
18 ಅವರು ಅಪೊಸ್ತಲರನ್ನ ಹಿಡಿದು ಜೈಲಿಗೆ ಹಾಕಿದ್ರು.+
19 ಆದ್ರೆ ರಾತ್ರಿ ಯೆಹೋವನ* ದೂತ ಜೈಲಿನ ಬಾಗಿಲನ್ನ ತೆರೆದು+ ಅವ್ರನ್ನ ಹೊರಗೆ ಕರ್ಕೊಂಡು ಬಂದ.
20 ದೂತ ಅವ್ರಿಗೆ “ನೀವು ದೇವಾಲಯಕ್ಕೆ ಹೋಗಿ ಶಾಶ್ವತಜೀವದ ಬಗ್ಗೆ ಜನ್ರ ಹತ್ರ ಮಾತಾಡ್ತಾ ಇರಿ” ಅಂದ.
21 ಆ ಮಾತು ಕೇಳಿದ ಮೇಲೆ ಅವರು ಬೆಳಬೆಳಿಗ್ಗೆನೇ ದೇವಾಲಯಕ್ಕೆ ಹೋಗಿ ಜನ್ರಿಗೆ ಕಲಿಸೋಕೆ ಶುರುಮಾಡಿದ್ರು.
ಅದೇ ಸಮಯದಲ್ಲಿ, ಮಹಾ ಪುರೋಹಿತ ಮತ್ತು ಅವನ ಜೊತೆಯಲ್ಲಿದ್ದವರು ಒಟ್ಟುಸೇರಿ ಹಿರೀಸಭೆಯನ್ನ, ಇಸ್ರಾಯೇಲ್ಯರ ಹಿರಿಯರನ್ನ ಸಭೆ ಕರೆದ್ರು. ಆಮೇಲೆ ಅವರು ಅಪೊಸ್ತಲರನ್ನ ಕರ್ಕೊಂಡು ಬರೋಕೆ ಕಾವಲುಗಾರರನ್ನ ಜೈಲಿಗೆ ಕಳಿಸಿದ್ರು.
22 ಆದ್ರೆ ಕಾವಲುಗಾರರು ಅಲ್ಲಿಗೆ ಹೋದಾಗ ಜೈಲಲ್ಲಿ ಅವ್ರಿಗೆ ಅಪೊಸ್ತಲರು ಕಾಣಿಸಲಿಲ್ಲ. ಅವರು ವಾಪಸ್ ಬಂದು ಆ ವಿಷ್ಯವನ್ನ ಹೇಳಿದ್ರು
23 “ಜೈಲಿಗೆ ಬೀಗ ಹಾಕಿತ್ತು. ಕಾವಲುಗಾರರು ಬಾಗಿಲ ಹತ್ರನೇ ನಿಂತಿದ್ರು. ಆದ್ರೆ ಬಾಗಿಲು ತೆಗೆದು ನೋಡಿದಾಗ ಒಳಗೆ ಯಾರೂ ಇರ್ಲಿಲ್ಲ.”
24 ಈ ಮಾತು ಕೇಳಿಸ್ಕೊಂಡಾಗ ದೇವಾಲಯದ ಮುಖ್ಯಸ್ಥನಿಗೆ, ಮುಖ್ಯ ಪುರೋಹಿತರಿಗೆ ಮುಂದೆ ಏನಾಗುತ್ತೋ ಅಂತ ಗಾಬರಿ ಆಯ್ತು.
25 ಆದ್ರೆ ಯಾರೋ ಒಬ್ಬ ವ್ಯಕ್ತಿ ಅವ್ರ ಹತ್ರ ಬಂದು “ನೀವು ಜೈಲಿಗೆ ಹಾಕಿಸಿದ್ದವರು ಈಗ ದೇವಾಲಯದಲ್ಲಿ ಜನ್ರಿಗೆ ಕಲಿಸ್ತಾ ಇದ್ದಾರೆ” ಅಂದ.
26 ಆಗ ದೇವಾಲಯದ ಮುಖ್ಯಸ್ಥ ತನ್ನ ಕಾವಲುಗಾರರ ಜೊತೆ ಹೋಗಿ ಅಪೊಸ್ತಲರನ್ನ ಕರ್ಕೊಂಡು ಬಂದ. ಆದ್ರೆ ಅವರು ಅಪೊಸ್ತಲರನ್ನ ಹೊಡಿಲಿಲ್ಲ. ಯಾಕಂದ್ರೆ ಜನ ಕಲ್ಲಿಂದ ಹೊಡೆದು ನಮ್ಮನ್ನ ಸಾಯಿಸಿಬಿಡ್ತಾರೆ ಅಂತ ಅವ್ರಿಗೆ ಭಯ ಇತ್ತು.+
27 ಹಾಗಾಗಿ ಅವರು ಅಪೊಸ್ತಲರನ್ನ ಕರ್ಕೊಂಡು ಬಂದು ಹಿರೀಸಭೆ ಮುಂದೆ ನಿಲ್ಲಿಸಿದ್ರು. ಆಗ ಮಹಾ ಪುರೋಹಿತ ಅವ್ರನ್ನ ವಿಚಾರಣೆ ಮಾಡಿದ.
28 “ಯೇಸು ಹೆಸ್ರೆತ್ತಿ ಏನೂ ಕಲಿಸಬಾರದು ಅಂತ ನಿಮಗೆ ಆಜ್ಞೆ ಕೊಟ್ಟಿರಲಿಲ್ವಾ?+ ಹಾಗಿದ್ರೂ ನೀವು ಯೆರೂಸಲೇಮಲ್ಲಿ ಒಬ್ಬರನ್ನೂ ಬಿಡದೆ ಎಲ್ರಿಗೂ ಕಲಿಸ್ತಾ ಇದ್ದೀರ. ಅವನ ಸಾವಿಗೆ ನಾವೇ ಕಾರಣ ಅಂತ ಹೇಳ್ತಾ ಇದ್ದೀರ” ಅಂದ.+
29 ಅದಕ್ಕೆ ಪೇತ್ರ ಮತ್ತು ಬೇರೆ ಅಪೊಸ್ತಲರು “ನಾವು ಮನುಷ್ಯರಿಗಿಂತ ಹೆಚ್ಚಾಗಿ ದೇವ್ರಿಗೇ ವಿಧೇಯರಾಗಬೇಕು.+ ಯಾಕಂದ್ರೆ ಆತನೇ ನಮ್ಮ ರಾಜ.
30 ನೀವು ಕಂಬಕ್ಕೆ ಜಡಿದು ಕೊಂದ ಯೇಸುಗೆ ನಮ್ಮ ಪೂರ್ವಜರ ದೇವರು ಎಬ್ಬಿಸಿ ಮತ್ತೆ ಜೀವಕೊಟ್ಟಿದ್ದಾನೆ.+
31 ದೇವರು ಆತನನ್ನ ಉನ್ನತ ಸ್ಥಾನಕ್ಕೆ ಏರಿಸಿ ತನ್ನ ಪಕ್ಕದಲ್ಲಿ+ ಕೂತ್ಕೊಳ್ಳೋ ಹಾಗೆ ಮಾಡಿದ್ದಾನೆ. ಇಸ್ರಾಯೇಲ್ಯರು ಪಶ್ಚಾತ್ತಾಪಪಡಬೇಕು ಅಂತ, ಅವ್ರ ಪಾಪಗಳಿಗೆ ಕ್ಷಮೆ ಸಿಗಬೇಕು ಅಂತ ದೇವರು ಆತನನ್ನ ಮುಖ್ಯ ಪ್ರತಿನಿಧಿಯಾಗಿ+ ಮತ್ತು ರಕ್ಷಕನಾಗಿ+ ನೇಮಿಸಿದ್ದಾನೆ.+
32 ಈ ಎಲ್ಲ ವಿಷ್ಯಗಳಿಗೆ ನಾವೇ ಸಾಕ್ಷಿ.+ ಪವಿತ್ರಶಕ್ತಿನೂ+ ಸಾಕ್ಷಿಯಾಗಿದೆ. ಯಾರು ದೇವರನ್ನ ತಮ್ಮ ರಾಜನಾಗಿ ಒಪ್ಕೊಂಡು ಆತನ ಮಾತನ್ನ ಕೇಳಿದ್ದಾರೋ ಅವ್ರಿಗೆ ಆ ಶಕ್ತಿಯನ್ನ ದೇವರು ಕೊಟ್ಟಿದ್ದಾನೆ” ಅಂದ್ರು.
33 ಈ ಮಾತು ಕೇಳಿ ಅಲ್ಲಿದ್ದ ಜನ್ರಿಗೆಲ್ಲ ತುಂಬ ಕೋಪ ಬಂತು. ಅವರು ಅಪೊಸ್ತಲರನ್ನ ಸಾಯಿಸಬೇಕಂತ ಇದ್ರು.
34 ಆದ್ರೆ ಆಗ ಗಮಲಿಯೇಲ+ ಅನ್ನೋ ಫರಿಸಾಯ ಹಿರೀಸಭೆಯಲ್ಲಿ ಎದ್ದು ನಿಂತ. ನಿಯಮಪುಸ್ತಕದ ಬಗ್ಗೆ ಕಲಿಸ್ತಿದ್ದ ಇವನನ್ನ ಜನ ತುಂಬ ಗೌರವಿಸ್ತಿದ್ರು. ಅಪೊಸ್ತಲರನ್ನ ಸ್ವಲ್ಪ ಸಮಯ ಹೊರಗೆ ಕಳಿಸೋಕೆ ಅಪ್ಪಣೆ ಕೊಟ್ಟ.
35 ಆಮೇಲೆ ಅಲ್ಲಿದ್ದವ್ರಿಗೆ ಹೀಗಂದ “ಇಸ್ರಾಯೇಲ್ ಜನ್ರೇ, ಇವ್ರಿಗೆ ಶಿಕ್ಷೆ ಕೊಡೋ ಮುಂಚೆ ಚೆನ್ನಾಗಿ ಯೋಚನೆ ಮಾಡಿ.
36 ಸ್ವಲ್ಪ ಸಮಯದ ಹಿಂದೆ ಥೈದ ಅನ್ನುವವನಿದ್ದ. ನಾನೊಬ್ಬ ದೊಡ್ಡ ಮನುಷ್ಯ ಅಂತ ಅವನು ಹೇಳ್ಕೊಳ್ತಿದ್ದ. ಸುಮಾರು 400 ಜನ ಅವನ ಜೊತೆ ಸೇರಿಕೊಂಡ್ರು. ಆದ್ರೆ ಅವನು ಸ್ವಲ್ಪ ಜನ್ರ ಕೈಯಲ್ಲಿ ಕೊಲೆಯಾದ. ಅವನ ಜೊತೆ ಇದ್ದವರು ಚೆಲ್ಲಾಪಿಲ್ಲಿ ಆಗಿ ಕಾಣೆ ಆದ್ರು.
37 ಆಮೇಲೆ ಜನಗಣತಿಯ ಸಮಯ ಬಂದಾಗ ಗಲಿಲಾಯದ ಯೂದ ಹುಟ್ಕೊಂಡ. ಜನ್ರ ಗುಂಪು ಕಟ್ಕೊಂಡ. ಆಮೇಲೆ ಅವನೂ ಕಣ್ಮರೆ ಆದ. ಅವನ ಜೊತೆ ಇದ್ದವ್ರೂ ಚೆಲ್ಲಾಪಿಲ್ಲಿ ಆದ್ರು.
38 ಹಾಗಾಗಿ ನಾನು ಹೇಳೋದು ಏನಂದ್ರೆ, ಈಗ ಇವ್ರ ತಂಟೆಗೆ ಹೋಗಬೇಡಿ. ಅವ್ರನ್ನ ಹಾಗೇ ಬಿಟ್ಟುಬಿಡಿ. ಅವ್ರ ಯೋಚನೆ, ಅವ್ರ ಕೆಲಸ ಮನುಷ್ಯರಿಂದ ಬಂದಿರೋದಾದ್ರೆ ಅದು ಖಂಡಿತ ನಾಶ ಆಗುತ್ತೆ.
39 ಆದ್ರೆ ದೇವ್ರಿಂದ ಬಂದಿರೋದಾದ್ರೆ ಅದನ್ನ ನೀವು ಖಂಡಿತ ನಾಶ ಮಾಡೋಕಾಗಲ್ಲ.+ ಆಗ ನೀವು ಅವ್ರ ಜೊತೆ ಹೋರಾಡೋಕೆ ಹೋದ್ರೆ ದೇವರ ಜೊತೆನೇ ಹೋರಾಡೋಕೆ ಹೋದ ಹಾಗಾಗುತ್ತೆ.”+
40 ಅವರು ಅವನ ಮಾತನ್ನ ಕೇಳಿ ಅಪೊಸ್ತಲರನ್ನ ಒಳಗೆ ಕರೆದ್ರು.+ ಚೆನ್ನಾಗಿ ಹೊಡೆದು ಇನ್ನು ಮೇಲೆ ಯೇಸುವಿನ ಹೆಸ್ರೆತ್ತಿ ಮಾತಾಡಬಾರದು ಅಂತ ಅಪ್ಪಣೆ ಕೊಟ್ಟು ಬಿಟ್ಟುಬಿಟ್ರು.
41 ಅಪೊಸ್ತಲರು ಹಿರೀಸಭೆಯಿಂದ ಹೋಗುವಾಗ ತುಂಬ ಸಂತೋಷದಿಂದ+ ಹೋದ್ರು. ಯಾಕಂದ್ರೆ ಯೇಸು ಹೆಸ್ರಿಂದಾಗಿ ಅವಮಾನಪಡೋ ದೊಡ್ಡ ಅವಕಾಶ ಸಿಕ್ಕಿದ್ದಕ್ಕೆ ಅವ್ರಿಗೆ ತುಂಬ ಖುಷಿ ಆಯ್ತು.
42 ಅವರು ಪ್ರತಿದಿನ ದೇವಾಲಯದಲ್ಲಿ, ಮನೆಮನೆಗೆ+ ಹೋಗಿ ಜನ್ರಿಗೆ ಕಲಿಸ್ತಾ ಇದ್ರು. ಕ್ರಿಸ್ತನ ಬಗ್ಗೆ ಅಂದ್ರೆ ಯೇಸು ಬಗ್ಗೆ ಸಿಹಿಸುದ್ದಿಯನ್ನ ಹೇಳ್ತಾ ಇದ್ರು.+