ಅಪೊಸ್ತಲರ ಕಾರ್ಯ 8:1-40

  • ಹಿಂಸೆ ಮಾಡ್ತಿದ್ದ ಸೌಲ (1-3)

  • ಸಮಾರ್ಯದಲ್ಲಿ ಚೆನ್ನಾಗಿ ಸೇವೆಮಾಡಿದ ಫಿಲಿಪ್ಪ (4-13)

  • ಪೇತ್ರ ಮತ್ತು ಯೋಹಾನನನ್ನ ಸಮಾರ್ಯಕ್ಕೆ ಕಳಿಸಿದ್ರು (14-17)

  • ಸೀಮೋನ ಪವಿತ್ರಶಕ್ತಿಯನ್ನ ಕೊಂಡ್ಕೊಳೋಕೆ ನೋಡಿದ (18-25)

  • ಇಥಿಯೋಪ್ಯದ ಅಧಿಕಾರಿ (26-40)

8  ಸೌಲ ಸಹ ಸ್ತೆಫನನನ್ನ ಕೊಲ್ಲೋದಕ್ಕೆ ಬೆಂಬಲಿಸಿದ.+ ಆ ದಿನದಿಂದ ಯೆರೂಸಲೇಮಲ್ಲಿದ್ದ ಸಭೆಯ ಮೇಲೆ ಮಹಾ ಹಿಂಸೆ ಶುರು ಆಯ್ತು. ಅಪೊಸ್ತಲರನ್ನ ಬಿಟ್ಟು ಉಳಿದ ಶಿಷ್ಯರೆಲ್ಲ ಯೂದಾಯ, ಸಮಾರ್ಯದಲ್ಲೆಲ್ಲ ಚೆಲ್ಲಾಪಿಲ್ಲಿಯಾಗಿ ಹೋದ್ರು.+  ಆದ್ರೆ ದೇವಭಕ್ತಿಯಿದ್ದ ಕೆಲವು ಜನ ಸ್ತೆಫನನನ್ನ ಹೊತ್ಕೊಂಡು ಹೋಗಿ ಸಮಾಧಿ ಮಾಡಿದ್ರು. ಅವನಿಗೋಸ್ಕರ ತುಂಬ ಗೋಳಾಡಿದ್ರು.  ಆ ಸಮಯದಲ್ಲಿ ಸೌಲ ಸಭೆಗಳ ಮೇಲೆ ದಾಳಿ ಮಾಡೋದನ್ನ ಮುಂದುವರಿಸಿದ. ಅವನು ಮನೆಮನೆಗಳಿಗೆ ನುಗ್ಗಿ ಸ್ತ್ರೀ-ಪುರುಷರನ್ನ ಹೊರಗೆ ಎಳ್ಕೊಂಡು ಬಂದು ಅವ್ರನ್ನ ಜೈಲಿಗೆ ಹಾಕಿಸ್ತಿದ್ದ.+  ಹಾಗಿದ್ರೂ ಚೆಲ್ಲಾಪಿಲ್ಲಿ ಆಗಿದ್ದ ಶಿಷ್ಯರು ಹೋದಲ್ಲೆಲ್ಲ ಸಿಹಿಸುದ್ದಿ ಹೇಳ್ತಾ ಇದ್ರು.+  ಫಿಲಿಪ್ಪ ಸಮಾರ್ಯ+ ಪಟ್ಟಣಕ್ಕೆ ಹೋಗಿ ಅಲ್ಲಿನ ಜನ್ರಿಗೆ ಕ್ರಿಸ್ತನ ಬಗ್ಗೆ ಹೇಳೋಕೆ ಶುರುಮಾಡಿದ.  ಜನ ಗುಂಪುಗುಂಪಾಗಿ ಬಂದು ಫಿಲಿಪ್ಪನ ಮಾತನ್ನ ಮನಸಾರೆ ಕೇಳಿದ್ರು. ಅವನು ಮಾಡೋ ಅದ್ಭುತಗಳನ್ನ ನೋಡಿದ್ರು.  ಅವ್ರಲ್ಲಿ ತುಂಬ ಜನ್ರಿಗೆ ಕೆಟ್ಟ ದೇವದೂತರು ಹಿಡಿದಿದ್ರು. ಆ ಕೆಟ್ಟ ದೇವದೂತರು ಜೋರಾಗಿ ಕೂಗಿ ಹೊರಗೆ ಬರ್ತಿದ್ರು.+ ಅಷ್ಟೇ ಅಲ್ಲ ಲಕ್ವ ಹೊಡೆದಿದ್ದ, ಕುಂಟರಾಗಿದ್ದ ತುಂಬ ಜನ ವಾಸಿಯಾದ್ರು.  ಇದ್ರಿಂದಾಗಿ ಆ ಪಟ್ಟಣದಲ್ಲಿ ಹಬ್ಬದ ವಾತಾವರಣನೇ ಸೃಷ್ಟಿ ಆಯ್ತು.  ಆ ಪಟ್ಟಣದಲ್ಲಿ ಸೀಮೋನ ಅನ್ನೋ ಒಬ್ಬ ವ್ಯಕ್ತಿ ಇದ್ದ. ಅವನು ತನ್ನನ್ನೇ ಒಬ್ಬ ದೊಡ್ಡ ವ್ಯಕ್ತಿ ಅಂತ ಹೇಳ್ಕೊಳ್ತಾ ಮಂತ್ರತಂತ್ರ ಮಾಡಿ ಸಮಾರ್ಯದ ಜನ್ರನ್ನ ಸೆಳಿತಿದ್ದ. 10  ಸಾಮಾನ್ಯ ಜನ್ರಿಂದ ಹಿಡಿದು ಅಧಿಕಾರಿಗಳು ಸಹ ಅವನು ಹೇಳೋದನ್ನ ಗಮನಕೊಟ್ಟು ಕೇಳ್ತಿದ್ರು. “ಅವನಲ್ಲಿ ಏನೋ ಶಕ್ತಿ ಇದೆ, ಅದು ದೇವ್ರ ಶಕ್ತಿನೇ ಇರಬೇಕು” ಅಂತ ಹೇಳ್ತಿದ್ರು. 11  ತುಂಬ ಸಮಯದಿಂದ ಅವನು ಮಾಡ್ತಿದ್ದ ಮಂತ್ರತಂತ್ರ ನೋಡಿ ಜನ ಬೆರಗಾಗಿ ಅವನು ಹೇಳೋ ಪ್ರತಿಯೊಂದು ಮಾತನ್ನ ಮೈಯೆಲ್ಲ ಕಿವಿಯಾಗಿಸಿ ಕೇಳ್ತಿದ್ರು. 12  ಆದ್ರೆ ಫಿಲಿಪ್ಪ ಅವ್ರಿಗೆ ದೇವ್ರ ಆಳ್ವಿಕೆ+ ಬಗ್ಗೆ, ಯೇಸು ಕ್ರಿಸ್ತನ ಬಗ್ಗೆ ಸಿಹಿಸುದ್ದಿ ಹೇಳಿದ ಮೇಲೆ ಅವರು ಅವನನ್ನ ನಂಬಿ ದೀಕ್ಷಾಸ್ನಾನ ಮಾಡಿಸ್ಕೊಳ್ಳೋಕೆ ಆರಂಭಿಸಿದ್ರು.+ ಅವ್ರಲ್ಲಿ ಸ್ತ್ರೀಯರು ಪುರುಷರು ಇದ್ರು. 13  ಸೀಮೋನ ಸಹ ನಂಬಿ, ದೀಕ್ಷಾಸ್ನಾನ ಮಾಡಿಸ್ಕೊಂಡ. ಆಮೇಲೆ ಯಾವಾಗ್ಲೂ ಫಿಲಿಪ್ಪನ ಜೊತೆ ಇರ್ತಿದ್ದ.+ ಫಿಲಿಪ್ಪ ಮಾಡ್ತಿದ್ದ ಅದ್ಭುತಗಳನ್ನ ನೋಡಿ ಆಶ್ಚರ್ಯಪಡ್ತಿದ್ದ. 14  ಸಮಾರ್ಯದ ಜನ ದೇವ್ರ ಮಾತನ್ನ ನಂಬಿದ್ದಾರೆ ಅನ್ನೋ ಸುದ್ದಿ ಯೆರೂಸಲೇಮಲ್ಲಿದ್ದ ಅಪೊಸ್ತಲರಿಗೆ ಗೊತ್ತಾಯ್ತು.+ ಆಗ ಅವರು ಪೇತ್ರ ಯೋಹಾನನನ್ನ ಅಲ್ಲಿಗೆ ಕಳಿಸಿದ್ರು. 15  ಅವರು ಸಮಾರ್ಯಕ್ಕೆ ಹೋಗಿ ಆ ಜನ್ರು ಪವಿತ್ರಶಕ್ತಿ ಪಡ್ಕೊಳ್ಳೋಕೆ ಅವ್ರಿಗೋಸ್ಕರ ಪ್ರಾರ್ಥಿಸಿದ್ರು.+ 16  ಯಾಕಂದ್ರೆ ಅವರು ಪ್ರಭು ಯೇಸು ಹೆಸ್ರಲ್ಲಿ ದೀಕ್ಷಾಸ್ನಾನ ಮಾತ್ರ ಪಡ್ಕೊಂಡಿದ್ರು.+ ಆದ್ರೆ ಅಲ್ಲಿ ತನಕ ಅವ್ರಿಗೆ ಪವಿತ್ರಶಕ್ತಿ ಸಿಕ್ಕಿರ್ಲಿಲ್ಲ. 17  ಪೇತ್ರ ಮತ್ತು ಯೋಹಾನ ಅವ್ರ ಮೇಲೆ ಕೈಯಿಟ್ಟ+ ತಕ್ಷಣ ಅವ್ರಿಗೆ ಪವಿತ್ರಶಕ್ತಿ ಸಿಕ್ತು. 18  ಅಪೊಸ್ತಲರು ಯಾರ ಮೇಲೆಲ್ಲ ಕೈ ಇಟ್ರೋ ಅವ್ರಿಗೆಲ್ಲ ಪವಿತ್ರಶಕ್ತಿ ಸಿಗೋದನ್ನ ಸೀಮೋನ ನೋಡಿದ. ಆಗ ಅವನು ಅಪೊಸ್ತಲರಿಗೆ ಹಣ ಕೊಡ್ತಾ 19  “ಈ ತರದ ಅಧಿಕಾರ ನನಗೂ ಕೊಡಿ. ನಾನು ಸಹ ಯಾರ ಮೇಲೆಲ್ಲ ಕೈ ಇಡ್ತೀನೋ ಅವ್ರಿಗೆಲ್ಲ ಪವಿತ್ರಶಕ್ತಿ ಸಿಗಬೇಕು” ಅಂದ. 20  ಆದ್ರೆ ಪೇತ್ರ ಅವನಿಗೆ “ನಿನ್ನ ಹಣ ನಿನ್ನ ಜೊತೆನೇ ನಾಶವಾಗಿ ಹೋಗಲಿ. ಯಾಕಂದ್ರೆ ದೇವರು ಕೊಡೋ ಉಚಿತ ವರವನ್ನ ನೀನು ಹಣದಿಂದ ಕೊಂಡ್ಕೊಳ್ಳಬೇಕು ಅಂದ್ಕೊಂಡೆ.+ 21  ನಿನಗೆ ಈ ಅಧಿಕಾರ ಸಿಗೋದಿಲ್ಲ. ಯಾಕಂದ್ರೆ ನಿನ್ನ ಮನಸ್ಸು ದೇವ್ರ ದೃಷ್ಟಿಯಲ್ಲಿ ಸರಿಯಾಗಿಲ್ಲ. 22  ಈ ರೀತಿ ಕೆಟ್ಟ ಯೋಚನೆ ಮಾಡಿದ್ದಕ್ಕಾಗಿ ಪಶ್ಚಾತ್ತಾಪಪಡು. ನಿನ್ನ ಮನಸ್ಸಲ್ಲಿ ಇಂಥ ಒಂದು ಕೆಟ್ಟ ಯೋಚನೆ ಬಂದಿರೋದಕ್ಕೆ ಕ್ಷಮಿಸು ಅಂತ ಯೆಹೋವನ* ಹತ್ರ ಅಂಗಲಾಚಿ ಬೇಡ್ಕೊ. 23  ಯಾಕಂದ್ರೆ ನನಗೆ ಅನ್ಸುತ್ತೆ, ನಿನ್ನಲ್ಲಿ ಹೊಟ್ಟೆಕಿಚ್ಚೇ ತುಂಬ್ಕೊಂಡಿದೆ, ಯಾವುದು ತಪ್ಪೋ ಅದನ್ನೇ ನೀನು ಯಾವಾಗ್ಲೂ ಮಾಡಬೇಕಂತ ಇದ್ದೀಯ” ಅಂದ. 24  ಅದಕ್ಕೆ ಸೀಮೋನ “ನೀವು ನನಗೆ ಹೇಳಿದ ಹಾಗೆ ನಾನು ನಾಶವಾಗಿ ಹೋಗಬಾರದು. ಹಾಗಾಗಿ ದಯವಿಟ್ಟು ನನ್ನ ಪರವಾಗಿ ಯೆಹೋವನ* ಹತ್ರ ಬೇಡ್ಕೊಳ್ಳಿ” ಅಂದ. 25  ಪೇತ್ರ ಮತ್ತು ಯೋಹಾನ ಆ ಇಡೀ ಪ್ರದೇಶದಲ್ಲಿ ಯೆಹೋವನ* ಮಾತನ್ನ ಎಲ್ರಿಗೂ ಚೆನ್ನಾಗಿ ಹೇಳಿದ್ರು. ಆಮೇಲೆ ಯೆರೂಸಲೇಮಿಗೆ ವಾಪಸ್‌ ಹೊರಟ್ರು. ಹೀಗೆ ಹೋಗ್ತಿದ್ದಾಗ ಸಮಾರ್ಯದ ತುಂಬ ಹಳ್ಳಿಗಳಲ್ಲಿ ಸಿಹಿಸುದ್ದಿ ಹೇಳ್ತಾ ಹೋದ್ರು.+ 26  ಯೆಹೋವನ* ದೂತ+ ಫಿಲಿಪ್ಪನಿಗೆ “ನೀನು ದಕ್ಷಿಣದ ಕಡೆಯಲ್ಲಿರೋ ಯೆರೂಸಲೇಮಿಂದ ಗಾಜಕ್ಕೆ ಹೋಗೋ ದಾರಿಯಲ್ಲಿ ಹೋಗು” ಅಂದ. (ಈ ದಾರಿ ಮರುಭೂಮಿಯಲ್ಲಿತ್ತು.) 27  ತಕ್ಷಣ ಫಿಲಿಪ್ಪ ಹೋದ. ಆ ದಾರಿಯಲ್ಲಿ, ಇಥಿಯೋಪ್ಯದ ಅಧಿಕಾರಿ ಅವನಿಗೆ ಕಾಣಿಸಿದ. ಆ ಅಧಿಕಾರಿ ಇಥಿಯೋಪ್ಯದ ರಾಣಿ ಕಂದಾಕೆಯ ಕೆಳಗೆ ಕೆಲಸಮಾಡ್ತಾ ಎಲ್ಲ ಹಣ ವ್ಯವಹಾರಗಳನ್ನ ನೋಡ್ಕೊಳ್ತಿದ್ದ. ಅವನು ಆರಾಧನೆ ಮಾಡೋಕೆ ಯೆರೂಸಲೇಮಿಗೆ ಹೋಗಿದ್ದ.+ 28  ಅವನು ಅಲ್ಲಿಂದ ವಾಪಸ್‌ ಹೋಗ್ತಿದ್ದಾಗ ರಥದಲ್ಲಿ ಕೂತು ಪ್ರವಾದಿ ಯೆಶಾಯನ ಪುಸ್ತಕವನ್ನ ಗಟ್ಟಿಯಾಗಿ ಓದ್ತಿದ್ದ. 29  ಆಗ ದೇವರು ತನ್ನ ಪವಿತ್ರಶಕ್ತಿ ಮೂಲಕ ಫಿಲಿಪ್ಪನಿಗೆ “ನೀನು ಆ ರಥದ ಹತ್ರ ಹೋಗು” ಅಂದನು. 30  ಆಗ ಫಿಲಿಪ್ಪ ರಥದ ಹತ್ರ ಹೋಗಿ ಅದ್ರ ಪಕ್ಕದಲ್ಲೇ ಓಡೋಕೆ ಶುರುಮಾಡಿದ. ಆ ಅಧಿಕಾರಿ ಯೆಶಾಯನ ಪುಸ್ತಕವನ್ನ ಗಟ್ಟಿಯಾಗಿ ಓದೋದು ಅವನಿಗೆ ಕೇಳಿಸ್ತು. ಆಗ ಫಿಲಿಪ್ಪ “ನೀನು ಓದ್ತಾ ಇರೋದು ನಿನಗೆ ಅರ್ಥ ಆಗ್ತಾ ಇದ್ಯಾ?” ಅಂತ ಕೇಳಿದ. 31  ಅದಕ್ಕೆ ಅವನು “ಯಾರಾದ್ರೂ ಹೇಳಿಕೊಡದಿದ್ರೆ ನನಗೆ ಹೇಗೆ ಅರ್ಥ ಆಗುತ್ತೆ?” ಅಂದ. ಹಾಗಾಗಿ ತನ್ನ ಜೊತೆ ರಥ ಹತ್ತಿ ಕೂತ್ಕೊಳ್ಳೋಕೆ ಫಿಲಿಪ್ಪನಿಗೆ ಕೇಳ್ಕೊಂಡ. 32  ಆ ಅಧಿಕಾರಿ ಗಟ್ಟಿಯಾಗಿ ಓದ್ತಾ ಇದ್ದ ವಚನಗಳು ಇವೆ “ಬಲಿ ಕೊಡಲಿರೋ ಕುರಿಮರಿನ ತಗೊಂಡು ಬರೋ ತರ ಅವನನ್ನ ಕರ್ಕೊಂಡು ಬರಲಾಯ್ತು, ಉಣ್ಣೆ ಕತ್ತರಿಸುವವ್ರ ಮುಂದೆ ಮೌನವಾಗಿ ನಿಲ್ಲೋ ಕುರಿ ತರ ಅವನು ತನ್ನ ಬಾಯಿ ತೆರೆಯದೆ ಸುಮ್ಮನಿದ್ದನು.+ 33  ಅವನನ್ನ ಅವಮಾನಿಸಿದಾಗ ಅವನಿಗೆ ನ್ಯಾಯ ಸಿಗಲಿಲ್ಲ.+ ಅವನ ಜೀವವನ್ನ ಭೂಮಿ ಮೇಲಿಂದ ತೆಗೆದುಕೊಳ್ಳಲಾಗುತ್ತೆ.+ ಹಾಗಾಗಿ ಅವನು ಯಾರು? ಎಲ್ಲಿಂದ ಬಂದ? ಅನ್ನೋ ವಿವರಗಳನ್ನ ಯಾರು ಹೇಳ್ತಾರೆ?” 34  ಆ ಅಧಿಕಾರಿ ಫಿಲಿಪ್ಪನಿಗೆ “ಪ್ರವಾದಿ ಇಲ್ಲಿ ಯಾರ ಬಗ್ಗೆ ಹೇಳ್ತಾ ಇದ್ದಾನೆ? ತನ್ನ ಬಗ್ಗೆನಾ ಅಥವಾ ಬೇರೆ ವ್ಯಕ್ತಿ ಬಗ್ಗೆನಾ? ದಯಮಾಡಿ ಹೇಳು” ಅಂದ. 35  ಆಗ ಫಿಲಿಪ್ಪ ಆ ವಚನದ ಅರ್ಥ ಹೇಳೋಕೆ ಶುರುಮಾಡಿ ಯೇಸು ಬಗ್ಗೆ ಸಿಹಿಸುದ್ದಿಯನ್ನ ಹೇಳಿದ. 36  ಅವರು ದಾರಿಯಲ್ಲಿ ಹೋಗ್ತಿದ್ದಾಗ ನೀರಿದ್ದ ಒಂದು ಜಾಗಕ್ಕೆ ಬಂದ್ರು. ಆಗ ಆ ಅಧಿಕಾರಿ “ನೋಡು, ಅಲ್ಲಿ ನೀರಿದೆ! ನಾನ್ಯಾಕೆ ದೀಕ್ಷಾಸ್ನಾನ ತಗೊಳ್ಳಬಾರದು?” ಅಂತ ಕೇಳಿದ. 37  * 38  ತಕ್ಷಣ ಅವನು ತನ್ನ ರಥವನ್ನ ನಿಲ್ಲಿಸೋಕೆ ಹೇಳಿದ. ಆಮೇಲೆ ಫಿಲಿಪ್ಪ ಮತ್ತು ಆ ಅಧಿಕಾರಿ ನೀರಿಗೆ ಇಳಿದ್ರು. ಫಿಲಿಪ್ಪ ಅವನಿಗೆ ದೀಕ್ಷಾಸ್ನಾನ ಮಾಡಿಸಿದ. 39  ಅವರು ನೀರಿಂದ ಮೇಲೆ ಬಂದ ತಕ್ಷಣ ಯೆಹೋವನ* ಪವಿತ್ರಶಕ್ತಿ ಫಿಲಿಪ್ಪನಿಗೆ ಅಲ್ಲಿಂದ ಬೇರೆ ಕಡೆ ಹೋಗೋಕೆ ಹೇಳ್ತು. ಆ ಅಧಿಕಾರಿ ಸಂತೋಷದಿಂದ ತನ್ನ ದಾರಿ ಹಿಡಿದು ಊರಿಗೆ ವಾಪಸ್‌ ಹೋದ. ಮುಂದೆ ಯಾವತ್ತೂ ಅವನು ಫಿಲಿಪ್ಪನನ್ನ ನೋಡಲಿಲ್ಲ. 40  ಆದ್ರೆ ಫಿಲಿಪ್ಪ ಅಷ್ಡೋದಿಗೆ ಹೋಗಿ ಎಲ್ಲ ಊರುಗಳಲ್ಲಿ ಸಿಹಿಸುದ್ದಿ ಹೇಳ್ತಾ ಇದ್ದ. ಹೀಗೆ ಕೈಸರೈಯದ ತನಕ ಹೋದ.+