ಆದಿಕಾಂಡ 17:1-27

  • ಅಬ್ರಹಾಮ ಜನಾಂಗಗಳಿಗೆ ತಂದೆ (1-8)

    • ಅಬ್ರಾಮನಿಗೆ ಅಬ್ರಹಾಮ ಅನ್ನೋ ಹೆಸರು (5)

  • ಸುನ್ನತಿಯ ಒಪ್ಪಂದ (9-14)

  • ಸಾರಯಳಿಗೆ ಸಾರ ಅನ್ನೋ ಹೆಸರು (15-17)

  • ಇಸಾಕ ಹುಟ್ತಾನೆ ಅನ್ನೋ ಭವಿಷ್ಯವಾಣಿ (18-27)

17  ಅಬ್ರಾಮನಿಗೆ 99 ವರ್ಷ ಆದಾಗ ಯೆಹೋವ ಅವನಿಗೆ ಕಾಣಿಸಿ ಹೀಗಂದನು: “ನಾನು ಸರ್ವಶಕ್ತ ದೇವರು. ನಾನು ತೋರಿಸೋ ದಾರಿಯಲ್ಲಿ ನಡೆದು ತಪ್ಪಿಲ್ಲದವನಾಗಿರು.*  ನಿನ್ನ ಜೊತೆ ನಾನು ಮಾಡ್ಕೊಂಡ ಒಪ್ಪಂದವನ್ನ ಪಕ್ಕಾ ಮಾಡ್ತೀನಿ,+ ನಿನ್ನ ವಂಶವನ್ನ ತುಂಬ ಹೆಚ್ಚಿಸ್ತೀನಿ.”+  ಆಗ ಅಬ್ರಾಮ ದೇವರಿಗೆ ಅಡ್ಡಬಿದ್ದ. ದೇವರು ಅವನ ಜೊತೆ ಮಾತು ಮುಂದುವರಿಸ್ತಾ ಹೀಗಂದನು:  “ನೋಡು, ನಾನು ನಿನ್ನ ಜೊತೆ ಒಪ್ಪಂದ ಮಾಡ್ಕೊಂಡಿದ್ದೀನಿ.+ ಹಾಗಾಗಿ ನೀನು ಖಂಡಿತ ಅನೇಕ ಜನಾಂಗಗಳಿಗೆ ತಂದೆ ಆಗ್ತಿಯ.+  ಇನ್ನು ಮುಂದೆ ನಿನ್ನ ಹೆಸ್ರು ಅಬ್ರಾಮ* ಅಲ್ಲ ಅಬ್ರಹಾಮ.* ಯಾಕಂದ್ರೆ ನಾನು ನಿನ್ನನ್ನ ತುಂಬ ಜನಾಂಗಗಳಿಗೆ ತಂದೆಯಾಗಿ ಮಾಡ್ತೀನಿ.  ನಿನ್ನ ವಂಶದವರನ್ನ ಎಷ್ಟು ಹೆಚ್ಚಿಸ್ತೀನಿ ಅಂದ್ರೆ ಅವರಿಂದ ತುಂಬ ಜನಾಂಗಗಳು ಬರುತ್ತೆ. ನಿನ್ನ ವಂಶದಲ್ಲಿ ರಾಜರು ಕೂಡ ಹುಟ್ತಾರೆ.+  ನಾನು ನಿನ್ನ ಜೊತೆ, ನಿನ್ನ ಸಂತಾನದ ಜೊತೆ ಮತ್ತು ಅವರಾದ ಮೇಲೆ ಬರೋ ಪೀಳಿಗೆಗಳ ಜೊತೆ ಮಾಡ್ಕೊಂಡ ಒಪ್ಪಂದ ಉಳಿಸ್ಕೊಳ್ತಿನಿ.+ ಈ ಒಪ್ಪಂದ ಶಾಶ್ವತವಾಗಿ ಇರುತ್ತೆ. ಈ ಒಪ್ಪಂದದ ಪ್ರಕಾರ ನಾನು ನಿನಗೆ, ನಿನ್ನ ಸಂತತಿಯವರಿಗೆ ದೇವರಾಗಿ ಇರ್ತಿನಿ.  ನೀನು ವಿದೇಶಿಯಾಗಿ+ ಜೀವಿಸ್ತಿರೋ ಇಡೀ ಕಾನಾನ್‌ ದೇಶವನ್ನ ನಿನಗೆ, ನಿನ್ನ ಸಂತತಿಗೆ ಶಾಶ್ವತ ಆಸ್ತಿಯಾಗಿ ಕೊಡ್ತೀನಿ. ನಾನು ಅವರಿಗೆ ದೇವರಾಗಿ ಇರ್ತಿನಿ.”+  ದೇವರು ಅಬ್ರಹಾಮನಿಗೆ ಇನ್ನೂ ಹೇಳಿದ್ದೇನಂದ್ರೆ “ನೀನು ಮತ್ತು ನಿನ್ನ ಸಂತತಿಯವರು ಎಲ್ಲ ಪೀಳಿಗೆಯವರು ನಾನು ಮಾಡಿದ ಒಪ್ಪಂದದ ಪ್ರಕಾರ ನಡಿಬೇಕು. 10  ನಾನು ನಿನ್ನ ಜೊತೆ ಮಾಡ್ಕೊಳ್ಳೋ ಒಪ್ಪಂದ ಏನಂದ್ರೆ, ನೀನು ಮತ್ತು ನಿನ್ನ ಸಂತತಿಯಲ್ಲಿ ಪ್ರತಿಯೊಬ್ಬ ಗಂಡಸು* ಸುನ್ನತಿ*+ ಮಾಡ್ಕೊಳ್ಳಬೇಕು. 11  ನೀವು ನಿಮ್ಮ ಮುಂದೊಗಲನ್ನ* ಸುನ್ನತಿ ಮಾಡ್ಕೊಳ್ಳಬೇಕು. ಇದು ನಾನು ನಿನ್ನ ಜೊತೆ ಮಾಡಿರೋ ಒಪ್ಪಂದಕ್ಕೆ ಗುರುತಾಗಿರುತ್ತೆ.+ 12  ನಿನ್ನ ಮನೆಯಲ್ಲಿ ಹುಟ್ಟೋ ಪ್ರತಿಯೊಂದು ಗಂಡುಮಗುಗೆ ಎಂಟು ದಿನ ಆದಾಗ ಸುನ್ನತಿ ಮಾಡಿಸಬೇಕು.+ ನಿನ್ನ ಸಂತತಿಯಲ್ಲಿ ಹುಟ್ಟದೆ ವಿದೇಶಿಯರಿಂದ ನೀನು ಹಣಕ್ಕೆ ಕೊಂಡುಕೊಳ್ಳೋ ಪ್ರತಿಯೊಬ್ಬ ಗಂಡಸಿಗೆ ಸುನ್ನತಿ ಆಗಬೇಕು. ಇದನ್ನ ಎಲ್ಲ ಪೀಳಿಗೆಯವರು ಪಾಲಿಸಬೇಕು. 13  ನಿನ್ನ ಮನೇಲಿ ಹುಟ್ಟಿದ, ನೀನು ಹಣಕ್ಕೆ ತಗೊಂಡ ಪ್ರತಿಯೊಬ್ಬ ಪುರುಷನಿಗೆ ಸುನ್ನತಿ ಆಗಬೇಕು.+ ನಿಮ್ಮ ದೇಹದಲ್ಲಿರೋ ಈ ಗುರುತು ನಾನು ನಿನ್ನ ಜೊತೆ ಮಾಡಿರೋ ಶಾಶ್ವತ ಒಪ್ಪಂದಕ್ಕೆ ಪುರಾವೆ. 14  ಯಾವ ಗಂಡಸಾದ್ರೂ ಸುನ್ನತಿ ಮಾಡ್ಕೊಳ್ಳದಿದ್ರೆ ಅವನನ್ನ ಸಾಯಿಸಬೇಕು. ಯಾಕಂದ್ರೆ ಅವನು ನನ್ನ ಒಪ್ಪಂದ ಮುರಿದಿದ್ದಾನೆ.” 15  ಆಮೇಲೆ ದೇವರು ಅಬ್ರಹಾಮನಿಗೆ “ಇನ್ನು ಮುಂದೆ ನೀನು ನಿನ್ನ ಹೆಂಡತಿನ ಸಾರಯ*+ ಅಂತ ಕರಿಬಾರದು. ಯಾಕಂದ್ರೆ ಇವತ್ತಿಂದ ಅವಳ ಹೆಸ್ರು ಸಾರ.* 16  ನಾನು ಅವಳನ್ನ ಆಶೀರ್ವದಿಸ್ತೀನಿ. ಅವಳಿಂದ ನಿನಗೆ ಒಬ್ಬ ಮಗ ಹುಟ್ಟೋ ತರ ಮಾಡ್ತೀನಿ.+ ನಾನು ಅವಳಿಗೆ ಆಶೀರ್ವಾದ ಮಾಡೋದ್ರಿಂದ ಅವಳಿಂದ ಜನಾಂಗಗಳು, ರಾಜರು ಬರ್ತಾರೆ” ಅಂದನು. 17  ಆಗ ಅಬ್ರಹಾಮ ಅಡ್ಡಬಿದ್ದು ನಗ್ತಾ ಒಳಗೊಳಗೆ ಮನಸ್ಸಲ್ಲೇ+ “100 ವರ್ಷದವನಿಗೆ ಮಗು ಆಗುತ್ತಾ? 90 ವರ್ಷ ಆಗಿರೋ ಸಾರ ಮಗು ಹೆರುತ್ತಾಳಾ?” ಅಂದ್ಕೊಂಡ.+ 18  ಅಬ್ರಹಾಮ ಸತ್ಯ ದೇವರಿಗೆ “ಇಷ್ಮಾಯೇಲ ಇದ್ದಾನಲ್ಲಾ, ಅವನನ್ನೇ ಆಶೀರ್ವದಿಸು” ಅಂದ.+ 19  ಅದಕ್ಕೆ ದೇವರು “ನಿನ್ನ ಹೆಂಡತಿ ಸಾರಳಿಂದಾನೇ ನಿನಗೆ ಒಬ್ಬ ಮಗ ಹುಟ್ತಾನೆ. ಅವನಿಗೆ ನೀನು ಇಸಾಕ*+ ಅಂತ ಹೆಸರಿಡಬೇಕು. ನಾನು ಅವನ ಜೊತೆ ನನ್ನ ಒಪ್ಪಂದವನ್ನ ಪಕ್ಕಾ ಮಾಡ್ತೀನಿ. ಇದು ಅವನ ಜೊತೆ, ಅವನ ಸಂತತಿ ಜೊತೆ ಮಾಡ್ಕೊಳ್ಳೋ ಶಾಶ್ವತ ಒಪ್ಪಂದ ಆಗಿರುತ್ತೆ.+ 20  ಇಷ್ಮಾಯೇಲನ ವಿಷ್ಯದಲ್ಲಿ ನೀನು ಮಾಡಿದ ವಿನಂತಿಯನ್ನ ಕೇಳಿದ್ದೀನಿ. ಹಾಗಾಗಿ ನಾನು ಅವನನ್ನೂ ಆಶೀರ್ವದಿಸ್ತೀನಿ, ಅವನ ಸಂತತಿಯನ್ನ ತುಂಬ ತುಂಬ ಹೆಚ್ಚಿಸ್ತೀನಿ. ಅವನಿಂದ 12 ಪ್ರಧಾನರು ಬರ್ತಾರೆ. ಅವನ ವಂಶದವರು ದೊಡ್ಡ ಜನಾಂಗ ಆಗ್ತಾರೆ.+ 21  ಆದ್ರೆ ನನ್ನ ಒಪ್ಪಂದವನ್ನ ಇಸಾಕನ ಜೊತೆನೇ ಮಾಡ್ಕೊಳ್ತೀನಿ.+ ಮುಂದಿನ ವರ್ಷ ಇದೇ ಸಮಯಕ್ಕೆ ಸಾರಗೆ ಇಸಾಕ ಹುಟ್ತಾನೆ” ಅಂದನು.+ 22  ಅಬ್ರಹಾಮನ ಜೊತೆ ಮಾತಾಡಿದ ಮೇಲೆ ದೇವರು ಅಲ್ಲಿಂದ ಹೋದನು. 23  ಅದೇ ದಿನ ಅಬ್ರಹಾಮ ದೇವರು ಹೇಳಿದ ತರಾನೇ ತನ್ನ ಮನೆಯ ಎಲ್ಲ ಪುರುಷರಿಗೆ ಸುನ್ನತಿ ಮಾಡಿಸಿದ. ಅಂದ್ರೆ ತನ್ನ ಮಗ ಇಷ್ಮಾಯೇಲನಿಗೆ, ತನ್ನ ಮನೇಲಿ ಹುಟ್ಟಿದ, ಹಣಕ್ಕೆ ತಗೊಂಡ ಎಲ್ಲ ಪುರುಷರಿಗೆ ಸುನ್ನತಿ ಮಾಡಿಸಿದ.+ 24  ಅಬ್ರಹಾಮ ಸುನ್ನತಿ ಮಾಡಿಸ್ಕೊಂಡಾಗ ಅವನಿಗೆ 99 ವರ್ಷ.+ 25  ಅವನ ಮಗ ಇಷ್ಮಾಯೇಲ್‌ ಸುನ್ನತಿ ಮಾಡಿಸ್ಕೊಂಡಾಗ 13 ವರ್ಷ.+ 26  ಹೀಗೆ ಅಬ್ರಹಾಮನಿಗೂ ಅವನ ಮಗ ಇಷ್ಮಾಯೇಲನಿಗೂ ಅದೇ ದಿನ ಸುನ್ನತಿ ಆಯ್ತು. 27  ಅವನ ಮನೆಯಲ್ಲಿದ್ದ ಬೇರೆಲ್ಲ ಪುರುಷರಿಗೆ ಅಂದ್ರೆ ಅವನ ಮನೇಲಿ ಹುಟ್ಟಿದ ಮತ್ತು ವಿದೇಶಿಯರಿಂದ ಹಣಕ್ಕೆ ತಗೊಂಡ ಎಲ್ಲ ಪುರುಷರಿಗೂ ಅವನ ಜೊತೆ ಸುನ್ನತಿ ಆಯ್ತು.

ಪಾದಟಿಪ್ಪಣಿ

ಅಕ್ಷ. “ನಿರ್ದೋಷಿಯಾಗಿರು.”
ಅರ್ಥ “ತಂದೆಯನ್ನ ಉನ್ನತಕ್ಕೆ ಏರಿಸಲಾಗಿದೆ.”
ಅರ್ಥ “ಸಮೂಹದ (ಜನಸ್ತೋಮದ) ತಂದೆ; ತುಂಬ ಜನ್ರ ತಂದೆ.”
ಇದ್ರಲ್ಲಿ ಗಂಡು ಮಕ್ಕಳೂ ಸೇರಿದ್ದಾರೆ.
ಅಂದ್ರೆ, “ಪುರುಷನ ಜನನಾಂಗದ ತುದಿಯ ಚರ್ಮವನ್ನ.”
ಬಹುಶಃ ಇದರರ್ಥ “ಜಗಳಗಂಟಿ.”
ಅರ್ಥ “ರಾಣಿ.”
ಅರ್ಥ “ನಗು.”