ಆದಿಕಾಂಡ 21:1-34
21 ಯೆಹೋವ ತಾನು ಹೇಳಿದ ತರಾನೇ ಸಾರಳ ಕಡೆ ಗಮನಕೊಟ್ಟನು. ಕೊಟ್ಟ ಮಾತಿನ ಪ್ರಕಾರ ಯೆಹೋವ ಮಾಡಿದನು.+
2 ಸಾರ ಗರ್ಭಿಣಿಯಾಗಿ+ ವಯಸ್ಸಾಗಿದ್ದ ಅಬ್ರಹಾಮನಿಗೆ ಗಂಡುಮಗು ಹೆತ್ತಳು. ದೇವರು ಅಬ್ರಹಾಮನಿಗೆ ಮಾತುಕೊಟ್ಟಾಗ ಹೇಳಿದ್ದ ಸಮಯಕ್ಕೇ ಅವಳಿಗೆ ಮಗು ಹುಟ್ತು.+
3 ಅಬ್ರಹಾಮ ಆ ಮಗುಗೆ ಇಸಾಕ+ ಅಂತ ಹೆಸರಿಟ್ಟ.
4 ದೇವರು ಆಜ್ಞೆ ಕೊಟ್ಟ ಹಾಗೆ ಅಬ್ರಹಾಮ ತನ್ನ ಮಗ ಇಸಾಕಗೆ ಎಂಟು ದಿನ ಆದಾಗ ಸುನ್ನತಿ ಮಾಡಿಸಿದ.+
5 ಇಸಾಕ ಹುಟ್ಟಿದಾಗ ಅಬ್ರಹಾಮನಿಗೆ 100 ವರ್ಷ.
6 ಸಾರ “ದೇವರು ನನ್ನನ್ನ ಖುಷಿಯಿಂದ ನಗೋ ಹಾಗೆ ಮಾಡಿದ್ದಾನೆ. ಇದರ ಬಗ್ಗೆ ಕೇಳಿದವರೆಲ್ಲ ನನ್ನ ಜೊತೆ ನಗ್ತಾರೆ”* ಅಂದಳು.
7 ಅಷ್ಟೇ ಅಲ್ಲ “ನಾನು* ಅಬ್ರಹಾಮನ ಮಗುಗೆ ತಾಯಿ ಆಗ್ತೀನಿ ಅಂತ ಯಾರಾದ್ರೂ ಯೋಚ್ನೆ ಮಾಡಿದ್ರಾ? ಆದ್ರೆ ನಾನು ವಯಸ್ಸಾದ ಮೇಲೆ ಅಬ್ರಹಾಮನಿಗೆ ಒಬ್ಬ ಮಗನನ್ನ ಹೆತ್ತಿದ್ದೀನಿ” ಅಂದಳು.
8 ಆ ಮಗು ಬೆಳೆದು ತಾಯಿ ಹಾಲು ಬಿಡ್ತು. ಇಸಾಕ ತಾಯಿ ಹಾಲು ಬಿಟ್ಟ ದಿನ ಅಬ್ರಹಾಮ ಎಲ್ರನ್ನೂ ಕರೆದು ಊಟ ಹಾಕಿಸಿದ.
9 ಆದ್ರೆ ಈಜಿಪ್ಟ್ ದೇಶದ ಹಾಗರಳಿಂದ ಅಬ್ರಹಾಮನಿಗೆ ಹುಟ್ಟಿದ ಮಗ+ ಇಸಾಕನಿಗೆ ತಮಾಷೆಮಾಡಿ ಕಾಡಿಸ್ತಾ ಇದ್ದ.+ ಅದನ್ನ ಸಾರ ನೋಡ್ತಾ ಇದ್ದಳು.
10 ಅವಳು ಅಬ್ರಹಾಮನಿಗೆ “ಈ ದಾಸಿಯನ್ನ ಅವಳ ಮಗನನ್ನ ಇಲ್ಲಿಂದ ಓಡಿಸು. ನನ್ನ ಮಗ ಇಸಾಕನ ಜೊತೆ ಆ ದಾಸಿಯ ಮಗ ನಿನಗೆ ವಾರಸುದಾರ ಆಗಬಾರದು”+ ಅಂದಳು.
11 ಸಾರ ಹೇಳಿದ ಮಾತು ಕೇಳಿ ಅಬ್ರಹಾಮನಿಗೆ ತುಂಬ ಬೇಜಾರಾಯ್ತು.+
12 ಆಗ ದೇವರು ಅಬ್ರಹಾಮನಿಗೆ “ನಿನ್ನ ಮಗನ ಬಗ್ಗೆ, ದಾಸಿ ಬಗ್ಗೆ ಸಾರ ಹೇಳಿದ ಮಾತಿಂದ ಬೇಜಾರು ಮಾಡ್ಕೊಬೇಡ. ಸಾರ ಹೇಳಿದ ಹಾಗೆ ಮಾಡು. ಯಾಕಂದ್ರೆ ನಾನು ನಿನಗೆ ಮಾತು ಕೊಟ್ಟ ಸಂತಾನ ಇಸಾಕನ ವಂಶದಲ್ಲೇ ಬರುತ್ತೆ.+
13 ಅಷ್ಟೇ ಅಲ್ಲ ನಿನ್ನಿಂದ ಹುಟ್ಟಿದ ಈ ದಾಸಿಯ ಮಗನ+ ವಂಶದವರು ಸಹ ಒಂದು ಜನಾಂಗ ಆಗೋ ತರ ನಾನು ಮಾಡ್ತೀನಿ”+ ಅಂದನು.
14 ಅಬ್ರಹಾಮ ಬೆಳಿಗ್ಗೆ ಬೇಗ ಎದ್ದು ರೊಟ್ಟಿಯನ್ನ, ನೀರಿದ್ದ ಚರ್ಮದ ಚೀಲವನ್ನ ಹಾಗರಳಿಗೆ ಕೊಟ್ಟ. ಅದನ್ನ ಅವಳ ಹೆಗಲ ಮೇಲೆ ಹೊರಿಸಿ ಅವಳ ಜೊತೆ ಹುಡುಗನನ್ನೂ ಕಳಿಸಿಬಿಟ್ಟ.+ ಅವಳು ಅಲ್ಲಿಂದ ಹೋಗಿ ಬೇರ್ಷೆಬದ ಕಾಡಿಗೆ+ ಬಂದು ಅಲ್ಲಿ ಅಲೆದಾಡ್ತಾ ಇದ್ದಳು.
15 ಕೊನೆಗೆ ಚರ್ಮದ ಚೀಲದಲ್ಲಿದ್ದ ನೀರು ಖಾಲಿ ಆಯ್ತು. ಆಗ ಅವಳು ತನ್ನ ಮಗನನ್ನ ಒಂದು ಪೊದೆ ಕೆಳಗೆ ಬಿಟ್ಟು
16 “ನನ್ನ ಮಗ ಸಾಯೋದನ್ನ ನನ್ನಿಂದ ನೋಡೋಕಾಗಲ್ಲ” ಅಂತೇಳಿ ಬಾಣ ಎಸೆತದಷ್ಟು ದೂರ ಹೋಗಿ ಕೂತು ಜೋರಾಗಿ ಅಳೋಕೆ ಶುರುಮಾಡಿದಳು.
17 ದೇವರು ಮಗುವಿನ ಕೂಗನ್ನ ಕೇಳಿಸ್ಕೊಂಡ.+ ದೇವದೂತ ಆಕಾಶದಿಂದ ಹಾಗರಳನ್ನ ಕರೆದು+ “ಹಾಗರಾ, ಯಾಕೆ ಅಳ್ತಿದ್ದೀಯಾ? ಹೆದರಬೇಡ, ನಿನ್ನ ಮಗು ಅಳುನ ದೇವರು ಕೇಳಿದ್ದಾನೆ.
18 ನೀನು ಹೋಗಿ ಮಗನನ್ನ ಎತ್ಕೊಂಡು ಅವನನ್ನ ನೊಡ್ಕೊ. ಅವನ ವಂಶ ಒಂದು ದೊಡ್ಡ ಜನಾಂಗ ಆಗೋ ತರ ನಾನು ಮಾಡ್ತೀನಿ”+ ಅಂದನು.
19 ಆಗ ದೇವರು ಅವಳ ಕಣ್ಣನ್ನ ತೆರೆದನು, ಅವಳಿಗೆ ಒಂದು ಬಾವಿ ಕಾಣಿಸ್ತು. ಅವಳು ಹೋಗಿ ಚರ್ಮದ ಚೀಲದಲ್ಲಿ ನೀರು ತುಂಬಿಸಿ ಮಗನಿಗೆ ಕುಡಿಸಿದಳು.
20 ಹುಡುಗ ಬೆಳಿತಾ ಹೋದಂತೆ ದೇವರು ಅವನ ಜೊತೆ ಇದ್ದನು.+ ಅವನು ಕಾಡಲ್ಲಿ ವಾಸಿಸಿದ ಮತ್ತು ಬಿಲ್ಲುಗಾರನಾದ.
21 ಅವನು ಪಾರಾನಿನ+ ಕಾಡಲ್ಲಿ ವಾಸ ಮಾಡೋಕೆ ಶುರುಮಾಡಿದ ಮತ್ತು ಅವನ ತಾಯಿ ಈಜಿಪ್ಟ್ ದೇಶದಿಂದ ಹೆಣ್ಣು ತಂದು ಅವನಿಗೆ ಮದುವೆ ಮಾಡಿದಳು.
22 ಆ ಕಾಲದಲ್ಲಿ ಅಬೀಮೆಲೆಕ ತನ್ನ ಸೇನಾಪತಿಯಾದ ಫೀಕೋಲನ ಜೊತೆ ಬಂದು ಅಬ್ರಹಾಮನಿಗೆ “ದೇವರು ನಿನ್ನ ಜೊತೆ ಇದ್ದಾನೆ, ನೀನು ಮಾಡೋ ಎಲ್ಲ ಕೆಲಸನ ಆಶೀರ್ವದಿಸ್ತಿದ್ದಾನೆ ಅಂತ ನಮಗೆ ಗೊತ್ತಾಗಿದೆ.+
23 ಹಾಗಾಗಿ ನೀನು ನನಗೆ ಮತ್ತು ನನ್ನ ಮಕ್ಕಳು ಮೊಮ್ಮಕ್ಕಳಿಗೆ ಅನ್ಯಾಯ ಮಾಡಲ್ಲ ಅಂತ ದೇವರ ಮುಂದೆ ಮಾತು ಕೊಡು. ನಾನು ನಿನಗೆ ಶಾಶ್ವತ ಪ್ರೀತಿ ತೋರಿಸಿದ ಹಾಗೇ ನೀನು ನನಗೆ ಮತ್ತು ನನ್ನ ದೇಶದಲ್ಲಿರೋ ಜನರಿಗೆ ಶಾಶ್ವತ ಪ್ರೀತಿ ತೋರಿಸ್ತೀಯ ಅಂತ ಮಾತು ಕೊಡು”+ ಅಂದ.
24 ಅದಕ್ಕೆ ಅಬ್ರಹಾಮ ಒಪ್ಪಿ ಮಾತು ಕೊಟ್ಟ.
25 ಆ ಸಮಯದಲ್ಲಿ ಅಬ್ರಹಾಮ ತನ್ನ ಬಾವಿಯನ್ನ ಅಬೀಮೆಲೆಕನ ಸೇವಕರು ಆಕ್ರಮಿಸಿ ತಗೊಂಡಿದ್ದರ ಬಗ್ಗೆ ಅವನಿಗೆ ದೂರು ಕೊಟ್ಟ.+
26 ಅದಕ್ಕೆ ಅಬೀಮೆಲೆಕ “ಯಾರು ಹೀಗೆ ಮಾಡಿದ್ರೋ ನನಗೆ ಗೊತ್ತಿಲ್ಲ. ಇವತ್ತಿನ ತನಕ ನಾನು ಆ ವಿಷ್ಯ ಕೇಳಿಸ್ಕೊಂಡೇ ಇಲ್ಲ, ನೀನೂ ಅದರ ಬಗ್ಗೆ ಹೇಳಲಿಲ್ಲ” ಅಂದ.
27 ಆಗ ಅಬ್ರಹಾಮ ದನಕುರಿಗಳನ್ನ ಅಬೀಮೆಲೆಕನಿಗೆ ಕೊಟ್ಟ ಮತ್ತು ಅವರಿಬ್ರೂ ಒಪ್ಪಂದ ಮಾಡಿಕೊಂಡ್ರು.
28 ಅಬ್ರಹಾಮ ತನ್ನ ಹಿಂಡಿಂದ ಏಳು ಹೆಣ್ಣು ಕುರಿಮರಿನ ಪಕ್ಕಕ್ಕೆ ಇಟ್ಟ.
29 ಅದನ್ನ ನೋಡಿ ಅಬೀಮೆಲೆಕ ಅಬ್ರಹಾಮಗೆ “ನೀನು ಈ ಹೆಣ್ಣು ಕುರಿಮರಿಗಳನ್ನ ಯಾಕೆ ಪಕ್ಕಕ್ಕೆ ಇಟ್ಟಿದ್ದೀಯಾ?” ಅಂತ ಕೇಳಿದ.
30 ಅದಕ್ಕೆ ಅಬ್ರಹಾಮ “ಈ ಬಾವಿ ತೋಡಿದ್ದು ನಾನೇ ಅನ್ನೋದಕ್ಕೆ ಸಾಕ್ಷಿಯಾಗಿ ನಾನು ಕೊಡೋ ಈ ಏಳು ಹೆಣ್ಣು ಕುರಿಮರಿಗಳನ್ನ ನೀನು ತಗೊಳ್ಳಬೇಕು” ಅಂದ.
31 ಅವರಿಬ್ಬರು ಅಲ್ಲಿ ಮಾತು ಕೊಟ್ಟಿದ್ದರಿಂದ ಅವನು ಆ ಸ್ಥಳಕ್ಕೆ ಬೇರ್ಷೆಬ*+ ಅಂತ ಹೆಸರಿಟ್ಟ.
32 ಹೀಗೆ ಅವರು ಬೇರ್ಷೆಬದಲ್ಲಿ ಒಪ್ಪಂದ+ ಮಾಡ್ಕೊಂಡ್ರು. ಆಮೇಲೆ ಅಬೀಮೆಲೆಕ ತನ್ನ ಸೇನಾಪತಿ ಫೀಕೋಲನ ಜೊತೆ ಫಿಲಿಷ್ಟಿಯರ ದೇಶಕ್ಕೆ ವಾಪಸ್ ಹೋದ.+
33 ಆಮೇಲೆ ಅಬ್ರಹಾಮ ಬೇರ್ಷೆಬದಲ್ಲಿ ಪಿಚುಲ ಮರ* ನೆಟ್ಟ. ಸದಾಕಾಲ ಇರೋ ದೇವರಾದ+ ಯೆಹೋವನ ಹೆಸರನ್ನ ಹೊಗಳಿದ.+
34 ಅಬ್ರಹಾಮ ಫಿಲಿಷ್ಟಿಯರ ದೇಶದಲ್ಲಿ ತುಂಬ ವರ್ಷ ಇದ್ದ.*+
ಪಾದಟಿಪ್ಪಣಿ
^ ಬಹುಶಃ “ನನ್ನನ್ನ ನೋಡಿ ನಗ್ತಾರೆ.”
^ ಅಕ್ಷ. “ಸಾರ.”
^ ಅರ್ಥ “ಪ್ರಮಾಣದ ಬಾವಿ; ಏಳರ [ಕುರಿಮರಿಗಳ] ಬಾವಿ.”
^ ಈ ಮರ ನೀರಿಲ್ಲದ ಪ್ರದೇಶದಲ್ಲೂ ಬೆಳೆಯುತ್ತೆ. ಇದರ ಎಲೆಗಳು ಸದಾ ಹಸಿರಾಗಿರುತ್ತೆ.
^ ಅಥವಾ “ವಿದೇಶಿಯಾಗಿ ವಾಸಿಸಿದ.”