ಆದಿಕಾಂಡ 22:1-24

  • ಇಸಾಕನನ್ನ ಬಲಿ ಕೊಡೋಕೆ ಆಜ್ಞೆ (1-19)

    • ಅಬ್ರಹಾಮನ ಸಂತಾನದಿಂದ ಆಶೀರ್ವಾದ (15-18)

  • ರೆಬೆಕ್ಕಳ ಕುಟುಂಬ (20-24)

22  ಆಮೇಲೆ ಸತ್ಯ ದೇವರು ಅಬ್ರಹಾಮನನ್ನ ಪರೀಕ್ಷೆ ಮಾಡಿದನು.+ ದೇವರು “ಅಬ್ರಹಾಮ!” ಅಂತ ಕರೆದಾಗ ಅಬ್ರಹಾಮ “ಹೇಳು ಸ್ವಾಮಿ!” ಅಂದ.  ಆತನು “ನೀನು ತುಂಬ ಪ್ರೀತಿಸೋ+ ನಿನ್ನ ಒಬ್ಬನೇ ಮಗ ಇಸಾಕನನ್ನ+ ಕರ್ಕೊಂಡು ದಯವಿಟ್ಟು ಮೊರೀಯ+ ದೇಶಕ್ಕೆ ಹೋಗು. ಅಲ್ಲಿ ನಾನು ಹೇಳೋ ಬೆಟ್ಟದ ಮೇಲೆ ಅವನನ್ನ ಸರ್ವಾಂಗಹೋಮ ಬಲಿಯಾಗಿ ಕೊಡು” ಅಂದನು.  ಅಬ್ರಹಾಮ ಬೆಳಿಗ್ಗೆ ಬೇಗ ಎದ್ದು ಕತ್ತೆ ಸಿದ್ಧಮಾಡಿ* ಬಲಿಗೆ ಬೇಕಾದ ಕಟ್ಟಿಗೆ ಒಡೆದ. ಆಮೇಲೆ ತನ್ನ ಮಗ ಇಸಾಕ ಮತ್ತು ಇಬ್ಬರು ಸೇವಕರನ್ನ ಕರ್ಕೊಂಡು ಸತ್ಯ ದೇವರು ಹೇಳಿದ ಸ್ಥಳಕ್ಕೆ ಹೊರಟ.  ಮೂರನೇ ದಿನ ಅಬ್ರಹಾಮಗೆ ದೂರದಲ್ಲಿ ಆ ಸ್ಥಳ ಕಾಣಿಸ್ತು.  ಆಗ ಅಬ್ರಹಾಮ ತನ್ನ ಸೇವಕರಿಗೆ “ನೀವು ಇಲ್ಲೇ ಕತ್ತೆ ಹತ್ರ ಇರಿ. ನಾನು ನನ್ನ ಮಗ ಅಲ್ಲಿಗೆ ಹೋಗಿ ದೇವರನ್ನ ಆರಾಧಿಸಿ ವಾಪಸ್‌ ಬರ್ತಿವಿ” ಅಂದ.  ಆಮೇಲೆ ಅಬ್ರಹಾಮ ಬಲಿಗೆ ಬೇಕಾದ ಕಟ್ಟಿಗೆ ತಗೊಂಡು ಇಸಾಕನ ಹೆಗಲ ಮೇಲೆ ಹೊರಿಸಿ, ಕೈಯಲ್ಲಿ ಬೆಂಕಿ, ಕತ್ತಿ ತಗೊಂಡ. ಅವರಿಬ್ಬರೂ ಒಟ್ಟಿಗೆ ನಡ್ಕೊಂಡು ಹೋದ್ರು.  ದಾರಿಯಲ್ಲಿ ಇಸಾಕ ಅಬ್ರಹಾಮಗೆ “ಅಪ್ಪಾ” ಅಂತ ಕರೆದಾಗ ಅಬ್ರಹಾಮ “ಏನು ಮಗನೇ” ಅಂದ. ಇಸಾಕ “ನಮ್ಮತ್ರ ಬೆಂಕಿ ಇದೆ, ಕಟ್ಟಿಗೆ ಇದೆ. ಆದ್ರೆ ಬಲಿಗೆ ಬೇಕಾದ ಕುರಿ ಎಲ್ಲಿ?” ಅಂತ ಕೇಳಿದ.  ಅದಕ್ಕೆ ಅಬ್ರಹಾಮ “ಮಗನೇ, ಬಲಿಗೆ ಬೇಕಾದ ಕುರಿನ+ ದೇವರೇ ಕೊಡ್ತಾನೆ” ಅಂದ. ಹೀಗೆ ಅವರಿಬ್ರೂ ನಡಿತಾ ಹೋದ್ರು.  ಕೊನೆಗೆ ಅವರು ಸತ್ಯ ದೇವರು ಹೇಳಿದ್ದ ಸ್ಥಳಕ್ಕೆ ಬಂದು ಮುಟ್ಟಿದ್ರು. ಅಲ್ಲಿ ಅಬ್ರಹಾಮ ಒಂದು ಯಜ್ಞವೇದಿ ಕಟ್ಟಿ ಅದರ ಮೇಲೆ ಕಟ್ಟಿಗೆ ಜೋಡಿಸಿದ. ಆಮೇಲೆ ತನ್ನ ಮಗ ಇಸಾಕನ ಕೈಕಾಲು ಕಟ್ಟಿ ಯಜ್ಞವೇದಿ ಮೇಲೆ ಮಲಗಿಸಿದ.+ 10  ಅಬ್ರಹಾಮ ಕತ್ತಿ ತಗೊಂಡು ಮಗನನ್ನ ಬಲಿ ಕೊಡೋಕೆ ಮುಂದಾದ.+ 11  ಥಟ್ಟನೆ ಯೆಹೋವನ ದೂತ ಆಕಾಶದಿಂದ “ಅಬ್ರಹಾಮ, ಅಬ್ರಹಾಮ!” ಅಂತ ಕರೆದ. ಅವನು “ಹೇಳು ಸ್ವಾಮಿ” ಅಂದ. 12  ಆ ದೂತ “ನಿನ್ನ ಮಗನನ್ನ ಕೊಲ್ಲಬೇಡ. ಅವನಿಗೆ ಏನೂ ಹಾನಿ ಮಾಡಬೇಡ. ನಿನ್ನ ಒಬ್ಬನೇ ಮಗನನ್ನ ನನಗೆ ಅರ್ಪಿಸೋಕೆ ನೀನು ಹಿಂಜರಿಲಿಲ್ಲ. ಇದ್ರಿಂದ ನೀನು ನಿಜವಾಗ್ಲೂ ದೇವರಿಗೆ ಭಯಪಟ್ಟು ನಡಿಯೋ ವ್ಯಕ್ತಿ ಅಂತ ನನಗೀಗ ಗೊತ್ತಾಯ್ತು”+ ಅಂದ. 13  ಆಗ ಅಬ್ರಹಾಮನಿಗೆ ಸ್ವಲ್ಪ ದೂರದಲ್ಲಿ ಒಂದು ಟಗರು ಕಾಣಿಸ್ತು. ಅದ್ರ ಕೊಂಬು ಪೊದೆಯಲ್ಲಿ ಸಿಕ್ಕಿಕೊಂಡಿತ್ತು. ಅಬ್ರಹಾಮ ಆ ಟಗರನ್ನ ಹಿಡಿದುತಂದು ಮಗನ ಬದಲು ಅದನ್ನ ಸರ್ವಾಂಗಹೋಮ ಬಲಿಯಾಗಿ ಕೊಟ್ಟ. 14  ಅಬ್ರಹಾಮ ಆ ಸ್ಥಳಕ್ಕೆ ಯೆಹೋವ-ಯೀರೆ* ಅಂತ ಹೆಸರಿಟ್ಟ. ಅದಕ್ಕೇ “ಯೆಹೋವ ತನ್ನ ಬೆಟ್ಟದಲ್ಲಿ ಕೊಡ್ತಾನೆ”+ ಅಂತ ಜನ ಇವತ್ತಿಗೂ ಹೇಳ್ತಾರೆ. 15  ಯೆಹೋವನ ದೂತ ಆಕಾಶದಿಂದ ಎರಡನೇ ಸಲ ಅಬ್ರಹಾಮನನ್ನ ಕರೆದು 16  ಹೀಗೆ ಹೇಳಿದ: “ಯೆಹೋವ ಹೇಳೋದು ಏನಂದ್ರೆ+ ‘ನನ್ನ ಮೇಲೆ ಆಣೆಯಿಟ್ಟು ಹೇಳ್ತೀನಿ, ನಿನ್ನ ಒಬ್ಬನೇ ಮಗನನ್ನ+ ನನಗೆ ಅರ್ಪಿಸೋಕೆ ಹಿಂಜರಿಯದ ಕಾರಣ 17  ನಾನು ಖಂಡಿತ ನಿನ್ನನ್ನ ಆಶೀರ್ವದಿಸ್ತೀನಿ. ನಿನ್ನ ಸಂತತಿನ ಖಂಡಿತ ಆಕಾಶದ ನಕ್ಷತ್ರಗಳ ತರ, ಸಮುದ್ರದ ತೀರದಲ್ಲಿರೋ ಮರಳಿನ ಕಣಗಳ ತರ ಲೆಕ್ಕ ಇಲ್ಲದಷ್ಟು ಮಾಡ್ತೀನಿ.+ ನಿನ್ನ ಸಂತಾನ ಶತ್ರುಗಳ ಪಟ್ಟಣಗಳನ್ನ ವಶ ಮಾಡ್ಕೊಳ್ಳುತ್ತೆ.+ 18  ನೀನು ನನ್ನ ಮಾತು ಕೇಳಿದ್ರಿಂದ ನಿನ್ನ ಸಂತಾನದ+ ಮೂಲಕ ಭೂಮಿಯ ಎಲ್ಲ ದೇಶದ ಜನರಿಗೆ ಆಶೀರ್ವಾದ ಸಿಗುತ್ತೆ.’”+ 19  ಆಮೇಲೆ ಅಬ್ರಹಾಮ ತನ್ನ ಸೇವಕರ ಹತ್ರ ವಾಪಸ್‌ ಹೋದ. ಅವರೆಲ್ರೂ ತಿರುಗಿ ಬೇರ್ಷೆಬಕ್ಕೆ+ ಬಂದ್ರು. ಅಬ್ರಹಾಮ ಬೇರ್ಷೆಬದಲ್ಲೇ ವಾಸಿಸಿದ. 20  ಇದಾದ ಮೇಲೆ ಅಬ್ರಹಾಮನಿಗೆ “ನಿನ್ನ ಅಣ್ಣ ನಾಹೋರನಿಗೆ ಅವನ ಹೆಂಡತಿ ಮಿಲ್ಕಳಿಂದ ಗಂಡುಮಕ್ಕಳು ಹುಟ್ಟಿದ್ದಾರೆ.+ 21  ಮೊದಲನೇ ಮಗ ಊಚ್‌, ಎರಡನೇ ಮಗ ಬೂಜ್‌, ಮೂರನೇ ಮಗ ಕೆಮೂವೇಲ್‌, ಇವನು ಅರಾಮನ ತಂದೆ. 22  ಆಮೇಲೆ ಕೆಸೆದ್‌, ಹಜೋ, ಪಿಲ್ದಾಷ್‌, ಇದ್ಲಾಫ್‌, ಬೆತೂವೇಲ್‌+ ಹುಟ್ಟಿದ್ದಾರೆ” ಅನ್ನೋ ಸುದ್ದಿ ಸಿಕ್ತು. 23  ಬೆತೂವೇಲ್‌ ರೆಬೆಕ್ಕಳ ತಂದೆ.+ ಅಬ್ರಹಾಮನ ಅಣ್ಣ ನಾಹೋರ ಮತ್ತು ಮಿಲ್ಕಗೆ ಈ ಎಂಟು ಮಕ್ಕಳು ಹುಟ್ಟಿದ್ರು. 24  ನಾಹೋರ ಮತ್ತು ಅವನ ಉಪಪತ್ನಿ ರೂಮಗೆ ಹುಟ್ಟಿದ ಗಂಡುಮಕ್ಕಳು ಟೆಬಹ, ಗಹಮ್‌, ತಹಷ್‌, ಮಾಕಾ.

ಪಾದಟಿಪ್ಪಣಿ

ಅಥವಾ “ಕತ್ತೆಗೆ ತಡಿಹಾಕಿ.”
ಅರ್ಥ “ಯೆಹೋವ ಒದಗಿಸ್ತಾನೆ; ಯೆಹೋವ ನೋಡ್ಕೊಳ್ತಾನೆ.”