ಆದಿಕಾಂಡ 25:1-34

  • ಅಬ್ರಹಾಮ ಮತ್ತೆ ಮದುವೆ ಆದ (1-6)

  • ಅಬ್ರಹಾಮನ ಮರಣ (7-11)

  • ಇಷ್ಮಾಯೇಲನ ಗಂಡುಮಕ್ಕಳು (12-18)

  • ಯಾಕೋಬ ಏಸಾವ ಹುಟ್ಟಿದ್ರು (19-26)

  • ಏಸಾವ ಜೇಷ್ಠಪುತ್ರನ ಹಕ್ಕನ್ನ ಮಾರಿದ (27-34)

25  ಆಮೇಲೆ ಅಬ್ರಹಾಮ ಇನ್ನೊಂದು ಮದುವೆ ಮಾಡ್ಕೊಂಡ. ಅವಳ ಹೆಸ್ರು ಕೆಟೂರ.  ಅವಳಿಂದ ಅಬ್ರಹಾಮನಿಗೆ ಹುಟ್ಟಿದ ಮಕ್ಕಳು ಯಾರಂದ್ರೆ ಜಿಮ್ರಾನ್‌, ಯೊಕ್ಷಾನ್‌, ಮೆದಾನ್‌, ಮಿದ್ಯಾನ್‌,+ ಇಷ್ಬಾಕ್‌, ಶೂಹ.+  ಯೊಕ್ಷಾನನಿಗೆ ಶೆಬ, ದೆದಾನ್‌ ಹುಟ್ಟಿದ್ರು. ದೆದಾನನ ಮಕ್ಕಳು ಅಶ್ಶೂರ್‌, ಲೆಟೂಶ್‌, ಲೆಯುಮ್‌.*  ಮಿದ್ಯಾನನ ಮಕ್ಕಳು ಏಫ, ಏಫೆರ್‌, ಹನೋಕ್‌, ಅಬೀದ, ಎಲ್ದಾಯ. ಇವರೆಲ್ಲ ಕೆಟೂರಳ ಮೊಮ್ಮಕ್ಕಳು.  ಆಮೇಲೆ ಅಬ್ರಹಾಮ ತನ್ನ ಎಲ್ಲ ಆಸ್ತಿಪಾಸ್ತಿಯನ್ನ ಇಸಾಕನಿಗೆ ಕೊಟ್ಟ.+  ಉಪಪತ್ನಿಯರಿಂದ ತನಗೆ ಹುಟ್ಟಿದ ಗಂಡುಮಕ್ಕಳಿಗೆ ಉಡುಗೊರೆ ಕೊಟ್ಟ. ಅಲ್ಲದೆ ಅವನು ಬದುಕಿರುವಾಗ್ಲೇ ಅವರನ್ನ ತನ್ನ ಮಗ ಇಸಾಕನಿಂದ+ ದೂರ ಅಂದ್ರೆ ಪೂರ್ವ ದೇಶಕ್ಕೆ ಕಳಿಸಿಬಿಟ್ಟ.  ಅಬ್ರಹಾಮ ಒಟ್ಟು 175 ವರ್ಷ ಬದುಕಿದ.  ಅವನು ತುಂಬ ವರ್ಷ ಸಂತೋಷ, ನೆಮ್ಮದಿಯಿಂದ ಬದುಕಿ ತೀರಿಹೋದ. ಅವನ ಪೂರ್ವಜರ ತರ ಅವನಿಗೂ ಸಮಾಧಿ ಮಾಡಿದ್ರು.  ಅಬ್ರಹಾಮನ ಮಕ್ಕಳಾದ ಇಸಾಕ, ಇಷ್ಮಾಯೇಲ ಅವನನ್ನ ಮಕ್ಪೇಲದ ಗವಿಯಲ್ಲಿ ಸಮಾಧಿ ಮಾಡಿದ್ರು. ಹಿತ್ತಿಯನಾದ ಚೋಹರನ ಮಗ ಎಫ್ರೋನನ ಜಮೀನಲ್ಲಿರೋ ಆ ಗವಿ ಮಮ್ರೆಗೆ ಹತ್ರದಲ್ಲಿದೆ.+ 10  ಅಬ್ರಹಾಮ ಆ ಜಮೀನನ್ನ ಹಿತ್ತಿಯರಿಂದ ಖರೀದಿ ಮಾಡಿದ್ದ. ಸಾರಳನ್ನ ಸಮಾಧಿ ಮಾಡಿದಲ್ಲೇ ಅಬ್ರಹಾಮನಿಗೂ ಸಮಾಧಿ ಮಾಡಿದ್ರು.+ 11  ಅಬ್ರಹಾಮ ಸತ್ತ ಮೇಲೆ ಅವನ ಮಗ ಇಸಾಕನನ್ನ ದೇವರು ಆಶೀರ್ವದಿಸ್ತಾ ಇದ್ದ.+ ಇಸಾಕ ಲಹೈರೋಯಿ ಬಾವಿ+ ಹತ್ರ ವಾಸಿಸ್ತಿದ್ದ. 12  ಸಾರಳ ಸೇವಕಿಯಾದ ಈಜಿಪ್ಟ್‌ ದೇಶದ ಹಾಗರಳಿಂದ+ ಅಬ್ರಹಾಮನಿಗೆ ಹುಟ್ಟಿದ ಇಷ್ಮಾಯೇಲನ+ ಚರಿತ್ರೆ ಹೀಗಿದೆ: 13  ಇಷ್ಮಾಯೇಲನ ಗಂಡುಮಕ್ಕಳ ಹೆಸರೇ ಅವರ ವಂಶಗಳಿಗೂ ಕೊಡಲಾಯ್ತು. ಆ ಗಂಡುಮಕ್ಕಳ ಹೆಸರು: ಇಷ್ಮಾಯೇಲನ ಚೊಚ್ಚಲ ಮಗ ನೆಬಾಯೋತ್‌.+ ಅವನಾದ ಮೇಲೆ ಕೇದಾರ್‌,+ ಅದ್ಬೆಯೇಲ್‌, ಮಿಬ್ಸಾಮ್‌,+ 14  ಮಿಷ್ಮ, ದೂಮ, ಮಸ್ಸಾ, 15  ಹದದ, ತೇಮಾ, ಯಟೂರ್‌, ನಾಫೀಷ್‌, ಕೇದೆಮ. 16  ಇಷ್ಮಾಯೇಲನ ಈ 12 ಮಕ್ಕಳು ಅವರವರ ಕುಲಕ್ಕೆ ಪ್ರಧಾನರಾಗಿದ್ರು. ಅವರ ಊರುಗಳನ್ನ, ಪಾಳೆಯಗಳನ್ನ* ಅವರ ಹೆಸರಿಂದಾನೇ ಗುರುತಿಸ್ತಿದ್ರು.+ 17  ಇಷ್ಮಾಯೇಲ 137 ವರ್ಷ ಬದುಕಿ ತೀರಿಹೋದ. ಅವನ ಪೂರ್ವಜರ ತರ ಅವನಿಗೂ ಸಮಾಧಿ ಮಾಡಿದ್ರು. 18  ಇಷ್ಮಾಯೇಲನ ವಂಶದವರು ಹವೀಲಾದಿಂದ+ ದೂರದ ಅಶ್ಶೂರ್‌ ದೇಶದ ತನಕ ವಾಸಿಸ್ತಾ ಇದ್ರು. ಹವೀಲಾ ಶೂರಿಗೆ+ ಹತ್ರದಲ್ಲಿತ್ತು. ಶೂರ್‌ ಈಜಿಪ್ಟಿಗೆ ಹತ್ರಾನೇ ಇತ್ತು. ಹೀಗೆ ಆ ಅಣ್ಣತಮ್ಮಂದಿರೆಲ್ಲ ಅಕ್ಕಪಕ್ಕದಲ್ಲೇ ವಾಸಿಸ್ತಾ ಇದ್ರು.*+ 19  ಅಬ್ರಹಾಮನ ಮಗ ಇಸಾಕನ ಚರಿತ್ರೆ+ ಹೀಗಿದೆ: ಅಬ್ರಹಾಮ ಇಸಾಕನ ತಂದೆ. 20  ಇಸಾಕನಿಗೆ 40 ವರ್ಷ ಆದಾಗ ರೆಬೆಕ್ಕನ ಮದುವೆಯಾದ. ರೆಬೆಕ್ಕ ಪದ್ದನ್‌-ಅರಾಮಿನಲ್ಲಿ ವಾಸಿಸ್ತಿದ್ದ ಅರಾಮ್ಯನಾದ ಬೆತೂವೇಲನ ಮಗಳು+ ಮತ್ತು ಲಾಬಾನನ ತಂಗಿ. 21  ರೆಬೆಕ್ಕ ಬಂಜೆಯಾಗಿದ್ದಳು. ಹಾಗಾಗಿ ಇಸಾಕ ತನ್ನ ಹೆಂಡತಿಗಾಗಿ ಯೆಹೋವನ ಹತ್ರ ಬೇಡ್ಕೊಳ್ತಾ ಇದ್ದ. ಯೆಹೋವ ಅವನ ಬೇಡಿಕೆಗೆ ಉತ್ರ ಕೊಟ್ಟ. ರೆಬೆಕ್ಕ ಗರ್ಭಿಣಿಯಾದಳು. 22  ಅವಳ ಹೊಟ್ಟೆಯಲ್ಲಿದ್ದ ಮಕ್ಕಳು ಒಂದಕ್ಕೊಂದು ತಳ್ತಾ ಇದ್ದವು.+ ಆಗ ಅವಳು “ಈ ರೀತಿ ನೋವು ಅನುಭವಿಸೋದಕ್ಕಿಂತ ಸಾಯೋದೇ ಒಳ್ಳೇದು” ಅಂದಳು. ಅವಳು ಯೆಹೋವನಿಗೆ ಪ್ರಾರ್ಥಿಸಿ, ಹೀಗೆ ಯಾಕೆ ಆಗ್ತಿದೆ ಅಂತ ಕೇಳಿದಳು. 23  ಯೆಹೋವ ಅವಳಿಗೆ “ನಿನ್ನ ಹೊಟ್ಟೇಲಿ ಎರಡು ಗಂಡುಮಕ್ಕಳಿವೆ.*+ ಅವುಗಳಿಂದ ಎರಡು ಜನಾಂಗಗಳು ಬರುತ್ತೆ.+ ಅವುಗಳ ದಾರಿ ಬೇರೆ ಬೇರೆ ಆಗಿರುತ್ತೆ, ಒಂದು ಜನಾಂಗ ಇನ್ನೊಂದು ಜನಾಂಗಕ್ಕಿಂತ ಬಲಿಷ್ಠವಾಗಿ ಇರುತ್ತೆ.+ ದೊಡ್ಡವನು ಚಿಕ್ಕವನ ಸೇವೆಮಾಡ್ತಾನೆ”+ ಅಂದನು. 24  ರೆಬೆಕ್ಕಗೆ ಹೆರಿಗೆ ಸಮಯ ಬಂತು. ಅವಳಿಗೆ ಅವಳಿ-ಜವಳಿ ಮಕ್ಕಳು ಹುಟ್ಟಿದ್ರು. 25  ಮೊದಲು ಹುಟ್ಟಿದ ಮಗು ಕೆಂಪಾಗಿತ್ತು. ಆ ಮಗುಗೆ ಕೂದಲಿನ ಬಟ್ಟೆ ಹಾಕಿದ್ಯೋ ಅನ್ನೋ ತರ ಮೈತುಂಬ ಕೂದಲಿತ್ತು.+ ಹಾಗಾಗಿ ಆ ಮಗುಗೆ ಏಸಾವ*+ ಅಂತ ಹೆಸರಿಟ್ರು. 26  ಎರಡನೇ ಮಗು ಏಸಾವನ ಹಿಮ್ಮಡಿ ಹಿಡ್ಕೊಂಡು ಹೊರಗೆ ಬಂತು.+ ಹಾಗಾಗಿ ಅದಕ್ಕೆ ಯಾಕೋಬ* ಅಂತ ಹೆಸರಿಟ್ರು.+ ರೆಬೆಕ್ಕ ಇವರನ್ನ ಹೆತ್ತಾಗ ಇಸಾಕಗೆ 60 ವರ್ಷ. 27  ಈ ಇಬ್ರು ಹುಡುಗರು ಬೆಳೆದು ದೊಡ್ಡವರಾದ್ರು. ಏಸಾವ ಬೇಟೆ ಆಡೋದ್ರಲ್ಲಿ ನಿಪುಣನಾದ.+ ಅವನು ಬೇಟೆಯಾಡ್ತಾ ಹೆಚ್ಚಾಗಿ ಕಾಡಲ್ಲೇ ಇರ್ತಿದ್ದ. ಆದ್ರೆ ಯಾಕೋಬ ಸಾಧು* ವ್ಯಕ್ತಿಯಾಗಿದ್ದ. ಇವನು ಡೇರೆಯಲ್ಲಿ ವಾಸಿಸ್ತಿದ್ದ.+ 28  ಇಸಾಕನಿಗೆ ಬೇಟೆ ಮಾಂಸ ಇಷ್ಟ ಆಗಿದ್ರಿಂದ ಅವನು ಏಸಾವನನ್ನ ಪ್ರೀತಿಸಿದ. ರೆಬೆಕ್ಕ ಯಾಕೋಬನನ್ನ ಪ್ರೀತಿಸಿದಳು.+ 29  ಒಂದಿನ ಯಾಕೋಬ ಅಡುಗೆ ಮಾಡ್ತಿದ್ದಾಗ ಏಸಾವ ಕಾಡಿಂದ ಬಂದ. ಅವನಿಗೆ ತುಂಬ ಸುಸ್ತಾಗಿತ್ತು. 30  ಏಸಾವ ಯಾಕೋಬಗೆ “ದಯವಿಟ್ಟು ನೀನು ಮಾಡ್ತಾ ಇರೋ ಆ ಕೆಂಪು ಸಾರು ಸ್ವಲ್ಪ ಕೊಡು. ಬೇಗ ಕೊಡು, ತುಂಬ ಹಸಿವಾಗ್ತಿದೆ”* ಅಂದ. ಅದಕ್ಕೇ ಅವನಿಗೆ ಎದೋಮ್‌*+ ಅನ್ನೋ ಹೆಸರು ಬಂತು. 31  ಆಗ ಯಾಕೋಬ “ಜ್ಯೇಷ್ಠ ಪುತ್ರನಾಗಿ ನಿನಗಿರೋ ಹಕ್ಕನ್ನ+ ಮೊದಲು ನನಗೆ ಮಾರಿಬಿಡು” ಅಂದ. 32  ಏಸಾವ “ಇಲ್ಲಿ ಹಸಿವೆಯಿಂದ ಸಾಯ್ತಾ ಇದ್ದೀನಿ. ಜ್ಯೇಷ್ಠ ಪುತ್ರನಾಗಿ ನನಗಿರೋ ಹಕ್ಕನ್ನ ಇಟ್ಕೊಂಡು ನಾನೇನು ಮಾಡ್ಲಿ?” ಅಂದ. 33  ಅದಕ್ಕೆ ಯಾಕೋಬ “ಮೊದ್ಲು ಮಾತು ಕೊಡು” ಅಂದಾಗ ಏಸಾವ ಮಾತುಕೊಟ್ಟು ಜ್ಯೇಷ್ಠ ಪುತ್ರನಾಗಿ ತನಗಿದ್ದ ಹಕ್ಕನ್ನ ಅವನಿಗೆ ಮಾರಿಬಿಟ್ಟ.+ 34  ಆಗ ಯಾಕೋಬ ರೊಟ್ಟಿ ಮತ್ತು ಕಾಳು ಸಾರು ಏಸಾವನಿಗೆ ಕೊಟ್ಟ. ಅವನು ತಿಂದು ಕುಡಿದು ಹೋದ. ಹೀಗೆ ಏಸಾವ ಜ್ಯೇಷ್ಠ ಪುತ್ರನಾಗಿ ತನಗಿದ್ದ ಹಕ್ಕನ್ನ ತಾತ್ಸಾರ ಮಾಡಿದ.

ಪಾದಟಿಪ್ಪಣಿ

ಈ ಹೆಸರಿನ ಹೀಬ್ರು ಪದಗಳು ಅವರ ವಂಶದವರಿಗೂ ಸೂಚಿಸುತ್ತೆ.
ಅಥವಾ “ಗೋಡೆಯಿಂದ ಸುತ್ತುವರಿದ ಪಾಳೆಯಗಳನ್ನ.”
ಬಹುಶಃ “ಅಣ್ಣತಮ್ಮಂದಿರು ಒಬ್ರನ್ನೊಬ್ರು ದ್ವೇಷಿಸಿದ್ರು.”
ಅಕ್ಷ. “ಎರಡು ಜನಾಂಗ ಇದೆ.”
ಅರ್ಥ “ತುಂಬ ಕೂದಲಿರೋನು.”
ಅರ್ಥ “ಹಿಮ್ಮಡಿ ಹಿಡಿದವನು. ಇನ್ನೊಬ್ಬನ ಸ್ಥಾನ ಕಿತ್ತುಕೊಳ್ಳೋನು.”
ಅಥವಾ “ನಿರ್ದೋಷಿ.”
ಅಥವಾ “ಸುಸ್ತಾಗಿದೆ.”
ಅರ್ಥ “ಕೆಂಪು.”