ಆದಿಕಾಂಡ 29:1-35

  • ಯಾಕೋಬ ಮತ್ತು ರಾಹೇಲಳ ಭೇಟಿ (1-14)

  • ಯಾಕೋಬ ರಾಹೇಲನ್ನ ಪ್ರೀತಿಸಿದ (15-20)

  • ಯಾಕೋಬ ಲೇಯ ಮತ್ತು ರಾಹೇಲನ್ನ ಮದುವೆಯಾದ (21-29)

  • ಲೇಯಳಿಂದ 4 ಗಂಡು ಮಕ್ಕಳು: ರೂಬೇನ್‌, ಸಿಮೆಯೋನ್‌, ಲೇವಿ, ಯೆಹೂದ (30-35)

29  ಆಮೇಲೆ ಯಾಕೋಬ ಪ್ರಯಾಣ ಮುಂದುವರಿಸಿ ಪೂರ್ವ ದಿಕ್ಕಲ್ಲಿ ಇದ್ದ ದೇಶಕ್ಕೆ ಹೋದ.  ಅಲ್ಲಿ ಹೋದಾಗ ಹೊಲದಲ್ಲಿ ಒಂದು ಬಾವಿ ನೋಡಿದ. ಅದ್ರ ಅಕ್ಕಪಕ್ಕದಲ್ಲಿ ಮೂರು ಕುರಿಹಿಂಡು ಮಲಗಿತ್ತು. ಬಾವಿ ಮೇಲೆ ದೊಡ್ಡ ಕಲ್ಲು ಮುಚ್ಚಿತ್ತು. ಕುರುಬರು ಯಾವಾಗ್ಲೂ ಆ ಬಾವಿ ನೀರನ್ನೇ ಕುರಿಗಳಿಗೆ ಕುಡಿಯೋಕೆ ಕೊಡ್ತಿದ್ರು.  ಕುರಿಗಳೆಲ್ಲಾ ಅಲ್ಲಿ ಬಂದ ಮೇಲೆ ಕುರುಬರು ಬಾವಿ ಮೇಲಿದ್ದ ಕಲ್ಲು ಸರಿಸಿ ನೀರು ಕುಡಿಸ್ತಿದ್ರು. ಆಮೇಲೆ ಮತ್ತೆ ಕಲ್ಲನ್ನ ಬಾವಿ ಮೇಲೆ ಮುಚ್ಚುತ್ತಿದ್ರು.  ಯಾಕೋಬ ಕುರುಬರಿಗೆ “ಅಣ್ಣಂದಿರೇ, ನಿಮ್ಮ ಊರು ಯಾವುದು?” ಅಂತ ಕೇಳಿದ. ಆಗ ಅವರು “ನಮ್ಮ ಊರು ಖಾರಾನ್‌”+ ಅಂದ್ರು.  ಅದಕ್ಕೆ ಅವನು “ನಿಮಗೆ ನಾಹೋರನ+ ಮೊಮ್ಮಗನಾದ ಲಾಬಾನ+ ಗೊತ್ತಾ?” ಅಂತ ಕೇಳಿದ. ಅವರು “ಹೌದು ಗೊತ್ತು” ಅಂದ್ರು.  ಅವನು “ಲಾಬಾನ ಹೇಗಿದ್ದಾನೆ?” ಅಂದಾಗ “ಚೆನ್ನಾಗಿದ್ದಾನೆ. ನೋಡು, ಅಲ್ಲಿ ಕುರಿಗಳ ಜೊತೆ ಬರ್ತಾ ಇದ್ದಾಳಲ್ಲಾ ಅವಳೇ ಲಾಬಾನನ ಮಗಳು. ಅವಳ ಹೆಸರು ರಾಹೇಲ್‌”+ ಅಂದ್ರು.  ಆಗ ಯಾಕೋಬ “ಈಗ ಮಧ್ಯಾಹ್ನ ಅಷ್ಟೆ. ಇಷ್ಟು ಬೇಗ ಕುರಿಗಳನ್ನ ಯಾಕೆ ಒಟ್ಟುಗೂಡಿಸ್ತಾ ಇದ್ದೀರಾ? ಕುರಿಗಳಿಗೆ ನೀರು ಕುಡಿಸಿ ಇನ್ನೂ ಸ್ವಲ್ಪ ಹೊತ್ತು ಮೇಯೋಕೆ ಬಿಡಬಹುದಲ್ಲಾ?” ಅಂದ.  ಅವರು “ಎಲ್ಲ ಕುರಿಗಳು ಇಲ್ಲಿ ಬರೋ ತನಕ ನಾವು ಕುರಿಗಳಿಗೆ ನೀರು ಕುಡಿಸೋ ಹಾಗಿಲ್ಲ. ಬಂದ ಮೇಲೇ ಬಾವಿ ಮೇಲಿರೋ ಕಲ್ಲು ಸರಿಸಲಾಗುತ್ತೆ. ಆಮೇಲೆ ನಾವು ಕುರಿಗಳಿಗೆ ನೀರು ಕುಡಿಸ್ತೀವಿ” ಅಂದ್ರು.  ಅವನು ಅವರ ಜೊತೆ ಮಾತಾಡ್ತಾ ಇರುವಾಗ್ಲೇ ರಾಹೇಲ ತನ್ನ ತಂದೆಯ ಕುರಿಗಳ ಜೊತೆ ಅಲ್ಲಿಗೆ ಬಂದಳು. ಅವಳು ಕುರಿ ಕಾಯುವವಳು. 10  ಯಾಕೋಬ ತನ್ನ ಸೋದರಮಾವ ಲಾಬಾನನ ಮಗಳಾದ ರಾಹೇಲ ಮತ್ತು ಅವಳ ಜೊತೆ ಇದ್ದ ಕುರಿಗಳನ್ನ ನೋಡಿದ ತಕ್ಷಣ ಬಾವಿ ಹತ್ರ ಹೋಗಿ ಅದರ ಮೇಲಿದ್ದ ಕಲ್ಲು ಸರಿಸಿ ತನ್ನ ಸೋದರಮಾವನ ಕುರಿಗಳಿಗೆ ನೀರು ಕೊಟ್ಟ. 11  ಆಮೇಲೆ ಯಾಕೋಬ ರಾಹೇಲಳಿಗೆ ಮುತ್ತಿಟ್ಟು ವಂದಿಸಿ ಕಣ್ಣೀರು ಸುರಿಸಿ ಜೋರಾಗಿ ಅತ್ತ. 12  ಆಮೇಲೆ ತಾನು ಅವಳ ತಂದೆಯ ಸಂಬಂಧಿಕ ಮತ್ತು ರೆಬೆಕ್ಕಳ ಮಗ ಅಂದ. ಆಗ ರಾಹೇಲ ಓಡಿಹೋಗಿ ತಂದೆಗೆ ಆ ವಿಷ್ಯ ಮುಟ್ಟಿಸಿದಳು. 13  ಲಾಬಾನ+ ತನ್ನ ತಂಗಿ ಮಗ ಯಾಕೋಬನ ಬಗ್ಗೆ ತಿಳಿದ ತಕ್ಷಣ ಅವನನ್ನ ನೋಡೋಕೆ ಓಡಿದ. ಅವನು ಯಾಕೋಬನನ್ನ ಅಪ್ಪಿ ಮುತ್ತಿಟ್ಟು ತನ್ನ ಮನೆಗೆ ಕರ್ಕೊಂಡು ಬಂದ. ಆಗ ಯಾಕೋಬ ಲಾಬಾನನಿಗೆ ತನ್ನ ಬಗ್ಗೆ ಎಲ್ಲ ವಿಷ್ಯ ಹೇಳಿದ. 14  ಲಾಬಾನ ಅವನಿಗೆ “ನೀನು ನನ್ನ ರಕ್ತ ಸಂಬಂಧಿ” ಅಂದ. ಯಾಕೋಬ ಒಂದು ತಿಂಗಳು ಪೂರ್ತಿ ಲಾಬಾನನ ಹತ್ರ ಇದ್ದ. 15  ಆಮೇಲೆ ಲಾಬಾನ ಯಾಕೋಬನಿಗೆ “ನೀನೇನೋ ನನ್ನ ಸಂಬಂಧಿಕ ನಿಜ,+ ಹಾಗಂತ ಸಂಬಳ ಇಲ್ಲದೆ ಯಾಕೆ ದುಡಿಬೇಕು? ಹೇಳು, ನಾನು ನಿನಗೆಷ್ಟು ಸಂಬಳ ಕೊಡಲಿ?”+ ಅಂದ. 16  ಲಾಬಾನನಿಗೆ ಇಬ್ಬರು ಹೆಣ್ಣುಮಕ್ಕಳಿದ್ರು. ದೊಡ್ಡವಳು ಲೇಯ, ಚಿಕ್ಕವಳು ರಾಹೇಲ್‌.+ 17  ಲೇಯಳ ಕಣ್ಣುಗಳಲ್ಲಿ ಕಾಂತಿ ಇರಲಿಲ್ಲ. ಆದರೆ ರಾಹೇಲ್‌ ನೋಡೋಕೆ ಲಕ್ಷಣವಾಗಿ ಸುಂದರವಾಗಿ ಇದ್ದಳು. 18  ಯಾಕೋಬ ರಾಹೇಲನ್ನ ಪ್ರೀತಿಸ್ತಿದ್ದ. ಹಾಗಾಗಿ ಅವನು ಲಾಬಾನನಿಗೆ “ನಾನು ನಿನ್ನ ಚಿಕ್ಕ ಮಗಳು ರಾಹೇಲನ್ನ ಮದುವೆ ಆಗಬೇಕಂತ ಇದ್ದೀನಿ, ಅವಳಿಗಾಗಿ ನಾನು ನಿನ್ನ ಹತ್ರ ಏಳು ವರ್ಷ ಕೆಲಸ ಮಾಡ್ತೀನಿ”+ ಅಂದ. 19  ಅದಕ್ಕೆ ಲಾಬಾನ “ಅವಳನ್ನ ಬೇರೆಯವರಿಗೆ ಕೊಡೋದಕ್ಕಿಂತ ನಿನಗೆ ಕೊಡೋದೇ ಒಳ್ಳೇದು. ನನ್ನ ಜೊತೆ ಇರು” ಅಂದ. 20  ಹಾಗಾಗಿ ಯಾಕೋಬ ರಾಹೇಲಳಿಗಾಗಿ ಏಳು ವರ್ಷ ಕೆಲಸ ಮಾಡಿದ.+ ಅವನು ಅವಳನ್ನ ತುಂಬ ಪ್ರೀತಿಸ್ತಾ ಇದ್ದದರಿಂದ ಅವನಿಗೆ ಆ ಏಳು ವರ್ಷ ಕಳೆದದ್ದೇ ಗೊತ್ತಾಗಲಿಲ್ಲ ಕೆಲವೇ ದಿನ ಕಳೆದ ಹಾಗೆ ಇತ್ತು. 21  ಆಮೇಲೆ ಯಾಕೋಬ ಲಾಬಾನನಿಗೆ “ನಾನು ನಿನಗೆ ಹೇಳಿದ ಹಾಗೆ ಏಳು ವರ್ಷ ಕೆಲಸ ಮಾಡಿದೆ. ಈಗ ನನ್ನ ಹೆಂಡತಿಯನ್ನ* ನನಗೆ ಕೊಡು. ನಾನು ಅವಳ ಜೊತೆ ಸಂಸಾರ ಮಾಡಬೇಕು” ಅಂದ. 22  ಆಗ ಲಾಬಾನ ಔತಣ ಮಾಡಿಸಿ ಆ ಸ್ಥಳದ ಜನ್ರನ್ನೆಲ್ಲ ಕರೆಸಿದ. 23  ಆದ್ರೆ ಸಂಜೆ ಅವನು ತನ್ನ ದೊಡ್ಡ ಮಗಳಾದ ಲೇಯಳನ್ನ ಯಾಕೋಬನ ಹತ್ರ ಕರ್ಕೊಂಡು ಬಂದ. ಯಾಕೋಬ ಅವಳನ್ನ ಕೂಡಿದ. 24  ಲಾಬಾನ ತನ್ನ ಸೇವಕಿ ಜಿಲ್ಪಳನ್ನ ಕೂಡ ತನ್ನ ಮಗಳಾದ ಲೇಯಗೆ ಸೇವಕಿಯಾಗಿ ಕೊಟ್ಟ.+ 25  ಯಾಕೋಬ ಬೆಳಿಗ್ಗೆ ಎದ್ದಾಗ ತನ್ನ ಜೊತೆ ಇರೋದು ಲೇಯ ಅಂತ ಗೊತ್ತಾಯ್ತು! ಹಾಗಾಗಿ ಅವನು ಲಾಬಾನನಿಗೆ “ನೀನು ಯಾಕೆ ಹೀಗೆ ಮಾಡಿದೆ? ನಾನು ಕೆಲಸ ಮಾಡಿದ್ದು ರಾಹೇಲಗೋಸ್ಕರ ತಾನೇ? ನನಗೆ ಯಾಕೆ ಮೋಸ ಮಾಡ್ದೆ?”+ ಅಂತ ಕೇಳಿದ. 26  ಅದಕ್ಕೆ ಲಾಬಾನ “ದೊಡ್ಡ ಮಗಳು ಇರೋವಾಗ ಚಿಕ್ಕವಳಿಗೆ ಮದುವೆ ಮಾಡೋದು ನಮ್ಮ ಪದ್ಧತಿಯಲ್ಲ. 27  ಈ ವಾರಪೂರ್ತಿ ನೀನು ಇವಳ ಜೊತೆ ಆನಂದಿಸು. ಆಮೇಲೆ ನಾನು ನನ್ನ ಚಿಕ್ಕ ಮಗಳನ್ನೂ ನಿನಗೆ ಕೊಡ್ತೀನಿ. ಆದರೆ ನೀನು ಅವಳಿಗಾಗಿ ಇನ್ನೂ ಏಳು ವರ್ಷ ನನ್ನ ಹತ್ರ ಕೆಲಸ ಮಾಡಬೇಕು”+ ಅಂದ. 28  ಅದಕ್ಕೆ ಯಾಕೋಬ ಒಪ್ಪಿ ಲೇಯ ಜೊತೆ ಆ ವಾರ ಕಳೆದ. ಆಮೇಲೆ ಲಾಬಾನ ತನ್ನ ಮಗಳಾದ ರಾಹೇಲನ್ನ ಅವನಿಗೆ ಹೆಂಡತಿಯಾಗಿ ಕೊಟ್ಟ. 29  ಅಲ್ಲದೆ ಲಾಬಾನ ತನ್ನ ಸೇವಕಿ ಬಿಲ್ಹಾಳನ್ನ+ ತನ್ನ ಮಗಳಾದ ರಾಹೇಲಗೆ ಸೇವಕಿಯಾಗಿ ಕೊಟ್ಟ.+ 30  ಯಾಕೋಬ ರಾಹೇಲನ್ನ ಸಹ ಕೂಡಿದ. ಅವನು ಲೇಯಳಿಗಿಂತ ಹೆಚ್ಚಾಗಿ ರಾಹೇಲನ್ನ ಪ್ರೀತಿಸಿದ. ಅವಳಿಗಾಗಿ ಲಾಬಾನನ ಹತ್ರ ಇನ್ನೂ ಏಳು ವರ್ಷ ಕೆಲಸ ಮಾಡಿದ.+ 31  ಲೇಯಗೆ ಗಂಡನಿಂದ ಕಡಿಮೆ ಪ್ರೀತಿ ಸಿಗೋದನ್ನ* ಯೆಹೋವ ನೋಡಿದನು. ಹಾಗಾಗಿ ಅವಳಿಗೆ ಮಕ್ಕಳಾಗೋ ತರ ಮಾಡಿದ.+ ಆದ್ರೆ ರಾಹೇಲ ಬಂಜೆಯಾಗಿದ್ದಳು.+ 32  ಲೇಯ ಗರ್ಭಿಣಿಯಾಗಿ ಗಂಡು ಮಗು ಹೆತ್ತಳು. “ಯೆಹೋವ ನನ್ನ ವೇದನೆ ನೋಡಿದ್ದಾನೆ.+ ಇನ್ನು ಮುಂದೆ ನನ್ನ ಗಂಡ ನನ್ನನ್ನ ಪ್ರೀತಿಸ್ತಾನೆ” ಅಂತ ಹೇಳಿ ಆ ಮಗುಗೆ ಅವಳು ರೂಬೇನ್‌*+ ಅಂತ ಹೆಸರಿಟ್ಟಳು. 33  ಅವಳಿಗೆ ಮತ್ತೆ ಗಂಡು ಮಗು ಹುಟ್ಟಿತು. “ಗಂಡನ ಪ್ರೀತಿ ಸಿಗಲಿಲ್ಲ ಅಂತ ನಾನು ಪ್ರಾರ್ಥಿಸಿದನ್ನ ಯೆಹೋವ ಕೇಳಿ ನನಗೆ ಈ ಮಗುವನ್ನೂ ಕೊಟ್ಟಿದ್ದಾನೆ” ಅಂತೇಳಿ ಆ ಮಗುಗೆ ಸಿಮೆಯೋನ್‌*+ ಅಂತ ಹೆಸರಿಟ್ಟಳು. 34  ಅವಳಿಗೆ ಇನ್ನೊಂದು ಗಂಡು ಮಗು ಆಯ್ತು. ಆಗ ಅವಳು “ಈಗ್ಲಾದ್ರೂ ನನ್ನ ಗಂಡ ನನಗೆ ಹತ್ರ ಆಗ್ತಾನೆ. ಯಾಕಂದ್ರೆ ನಾನು ಅವನಿಗೆ ಮೂರು ಗಂಡು ಮಕ್ಕಳನ್ನ ಕೊಟ್ನಲ್ಲಾ” ಅಂದಳು. ಹಾಗಾಗಿ ಆ ಮಗುಗೆ ಲೇವಿ*+ ಅಂತ ಹೆಸರಿಟ್ರು. 35  ಅವಳಿಗೆ ಮತ್ತೆ ಇನ್ನೊಂದು ಗಂಡು ಮಗು ಆಯ್ತು. ಆಗ ಅವಳು “ನಾನೀಗ ಯೆಹೋವನನ್ನ ಹೊಗಳ್ತೀನಿ” ಅಂತ ಹೇಳಿ ಆ ಮಗುಗೆ ಯೆಹೂದ*+ ಅನ್ನೋ ಹೆಸರಿಟ್ಟಳು. ಆಮೇಲೆ ಅವಳಿಗೆ ಸ್ವಲ್ಪ ಕಾಲ ಮಕ್ಕಳಾಗಲಿಲ್ಲ.

ಪಾದಟಿಪ್ಪಣಿ

ಇಬ್ರಿಯರ ಪದ್ಧತಿ ಪ್ರಕಾರ ನಿಶ್ಚಿತಾರ್ಥ ಆದವರನ್ನ ಮದುವೆ ಆದವರ ತರ ನೋಡ್ತಿದ್ರು.
ಅಕ್ಷ. “ದ್ವೇಷಿಸೋದನ್ನ.”
ಅರ್ಥ “ನೋಡು, ಒಬ್ಬ ಮಗ!”
ಅರ್ಥ “ಕೇಳಿಸ್ಕೊಳ್ಳೋದು.”
ಅರ್ಥ “ಅಂಟ್ಕೊಳ್ಳೋದು, ಒಂದಾಗಿರೋದು.”
ಅರ್ಥ “ಹೊಗಳಿಕೆ ಸಿಕ್ತು, ಹೊಗಳಿಕೆ ಸಿಗೋ ವ್ಯಕ್ತಿ.”