ಆದಿಕಾಂಡ 32:1-32

  • ದೇವದೂತರ ಮತ್ತು ಯಾಕೋಬನ ಭೇಟಿ (1, 2)

  • ಏಸಾವನ ಭೇಟಿಗೆ ಯಾಕೋಬನ ತಯಾರಿ (3-23)

  • ಯಾಕೋಬ ಮತ್ತು ದೇವದೂತನ ಕುಸ್ತಿ (24-32)

    • ಯಾಕೋಬನಿಗೆ ಇಸ್ರಾಯೇಲ್‌ ಅನ್ನೋ ಹೆಸ್ರು (28)

32  ಆಮೇಲೆ ಯಾಕೋಬ ಪ್ರಯಾಣ ಮುಂದುವರಿಸಿದ. ದಾರಿಯಲ್ಲಿ ದೇವದೂತರು ಅವನನ್ನ ಭೇಟಿ ಆದ್ರು.  ಅವರನ್ನ ನೋಡಿದ ತಕ್ಷಣ ಯಾಕೋಬ “ಇದು ದೇವರ ಪಾಳೆಯ!” ಅಂದ. ಹಾಗಾಗಿ ಆ ಸ್ಥಳಕ್ಕೆ ಮಹನಯಿಮ್‌* ಅಂತ ಹೆಸರಿಟ್ಟ.  ಆಮೇಲೆ ಯಾಕೋಬ ಸೇಯೀರ್‌ನಲ್ಲಿ+ ಅಂದ್ರೆ ಎದೋಮ್‌+ ಪ್ರದೇಶದಲ್ಲಿ ವಾಸಿಸ್ತಿದ್ದ ತನ್ನ ಅಣ್ಣ ಏಸಾವನಿಗೆ ಸುದ್ದಿ ಮುಟ್ಟಿಸೋಕೆ ತನ್ನ ಮುಂದೆ ಕೆಲವರನ್ನ ಕಳಿಸಿದ.  ಅವರಿಗೆ ಹೀಗೆ ಆಜ್ಞೆ ಕೊಟ್ಟ: “ನೀವು ನನ್ನ ಸ್ವಾಮಿ ಏಸಾವನ ಹತ್ರ ಹೋಗಿ ನಾನು ಹೇಳೋದನ್ನ ತಿಳಿಸಿ. ಅದೇನಂದ್ರೆ ‘ನಿನ್ನ ಸೇವಕ ಯಾಕೋಬ ಹೀಗೆ ಹೇಳಿದ್ದಾನೆ, ನಾನು ಇಷ್ಟು ವರ್ಷ ಲಾಬಾನನ ಹತ್ರ ಇದ್ದೆ.*+  ಹೋರಿ ಕತ್ತೆ ಕುರಿಗಳನ್ನ, ಸೇವಕ ಸೇವಕಿಯರನ್ನ ಸಂಪಾದಿಸಿದ್ದೀನಿ.+ ಸ್ವಾಮಿ, ನನಗೆ ದಯೆ ತೋರಿಸಿ ಅಂತ ನಿನ್ನ ಹತ್ರ ಬೇಡ್ಕೊಳ್ತೀನಿ. ಹಾಗಾಗಿ ನಾನು ಬರ್ತಾ ಇರೋ ಸುದ್ದಿಯನ್ನ ಹೇಳಿ ಕಳಿಸ್ತಾ ಇದ್ದೀನಿ.’”  ಸುದ್ದಿ ಮುಟ್ಟಿಸೋಕೆ ಹೋದವರು ಹಿಂದೆ ಬಂದು ಯಾಕೋಬನಿಗೆ “ನಾವು ನಿನ್ನ ಅಣ್ಣ ಏಸಾವನನ್ನ ಭೇಟಿಯಾದ್ವಿ. ಅವನು ನಿನ್ನನ್ನ ನೋಡೋಕೆ ಬರ್ತಿದ್ದಾನೆ. ಅವನ ಜೊತೆ 400 ಗಂಡಸರು ಕೂಡ ಬರ್ತಿದ್ದಾರೆ”+ ಅಂದ್ರು.  ಇದನ್ನ ಕೇಳಿದಾಗ ಯಾಕೋಬನಿಗೆ ತುಂಬ ಹೆದರಿಕೆ ಆಯ್ತು. ಏನಾಗುತ್ತೋ ಅಂತ ಚಿಂತೆಯಲ್ಲಿ ಮುಳುಗಿದ.+ ಹಾಗಾಗಿ ಅವನು ತನ್ನ ಜೊತೆಗಿದ್ದ ಜನರನ್ನ, ಆಡು-ಕುರಿ ದನ-ಹೋರಿ ಒಂಟೆಗಳನ್ನ ಎರಡು ಗುಂಪುಗಳಾಗಿ ಮಾಡಿದ.  ಒಂದುವೇಳೆ ಏಸಾವ ಒಂದು ಗುಂಪಿನ ಮೇಲೆ ದಾಳಿ ಮಾಡಿದ್ರೆ ಇನ್ನೊಂದು ಗುಂಪು ತಪ್ಪಿಸ್ಕೊಂಡು ಹೋಗೋಕೆ ಆಗುತ್ತೆ ಅಂತ ನೆನಸಿದ.  ಆಮೇಲೆ ಯಾಕೋಬ ದೇವರಿಗೆ ಹೀಗೆ ಪ್ರಾರ್ಥಿಸಿದ: “ನನ್ನ ಅಜ್ಜ ಅಬ್ರಹಾಮನ, ನನ್ನ ತಂದೆ ಇಸಾಕನ ದೇವರಾದ ಯೆಹೋವನೇ, ನಾನು ನನ್ನ ದೇಶಕ್ಕೆ ನನ್ನ ಸಂಬಂಧಿಕರ ಹತ್ರ ವಾಪಸ್‌ ಹೋಗಬೇಕಂತ ನೀನೇ ಹೇಳಿದ್ಯಲ್ಲಾ. ನನಗೆ ಒಳ್ಳೇದನ್ನ ಮಾಡ್ತೀನಂತ ಮಾತು ಕೊಟ್ಟಿಯಲ್ಲಾ.+ 10  ನೀನು ನಿನ್ನ ಸೇವಕನಾದ ನನಗೆ ತೋರಿಸಿದ ಶಾಶ್ವತ ಪ್ರೀತಿ, ನಂಬಿಗಸ್ತಿಕೆಗೆ+ ನಾನು ಯೋಗ್ಯನಲ್ಲ. ನಾನು ಈ ಯೋರ್ದನ್‌ ನದಿ ದಾಟಿದಾಗ ನನ್ನ ಹತ್ರ ಒಂದು ಕೋಲು ಮಾತ್ರ ಇತ್ತು. ಆದ್ರೆ ಈಗ ನನ್ನ ಹತ್ರ ಎಷ್ಟೊಂದು ಸಂಪತ್ತು ಇದೆ ಅಂದ್ರೆ ಎರಡು ದೊಡ್ಡ ಗುಂಪಿಗೆ ಒಡೆಯನಾಗಿದ್ದೀನಿ.+ 11  ಈಗ ದಯವಿಟ್ಟು ನನ್ನನ್ನ ಕಾಪಾಡು.+ ನನ್ನ ಅಣ್ಣ ಏಸಾವ ನನ್ನ ಮೇಲೆ, ನನ್ನ ಹೆಂಡತಿಯರ ಮೇಲೆ, ಮಕ್ಕಳ ಮೇಲೆ ದಾಳಿ ಮಾಡ್ತಾನೇನೋ ಅಂತ ಭಯ ಆಗ್ತಿದೆ.+ 12  ನೀನು ನನಗೆ ಖಂಡಿತ ಒಳ್ಳೇದು ಮಾಡ್ತೀಯ ಅಂತ, ನನ್ನ ಸಂತತಿಯನ್ನ ಸಮುದ್ರ ತೀರದಲ್ಲಿರೋ ಮರಳಿನ ಕಣಗಳ ತರ ಲೆಕ್ಕವಿಲ್ಲದಷ್ಟು ಮಾಡ್ತೀಯ ಅಂತ ಹೇಳಿದ್ಯಲ್ಲಾ.”+ 13  ಯಾಕೋಬ ಆ ರಾತ್ರಿ ಅಲ್ಲೇ ಇದ್ದ. ಆಮೇಲೆ ಅವನು ಏಸಾವನಿಗೆ ಉಡುಗೊರೆ ಕೊಡೋಕೆ+ ತನ್ನ ಸೊತ್ತಿಂದ 14  200 ಹೆಣ್ಣು ಆಡು, 20 ಹೋತ, 200 ಹೆಣ್ಣು ಕುರಿ, 20 ಟಗರು, 15  30 ಹೆಣ್ಣು ಒಂಟೆ ಮತ್ತು ಅವುಗಳ ಮರಿಗಳು, 40 ದನ, 10 ಹೋರಿ, 20 ಹೆಣ್ಣು ಕತ್ತೆ, ಬೆಳೆದ 10 ಗಂಡು ಕತ್ತೆಗಳನ್ನ ಬೇರೆ ಮಾಡಿದ.+ 16  ಅವನು ಒಂದಾದ ಮೇಲೆ ಒಂದು ಹಿಂಡನ್ನ ತನ್ನ ಸೇವಕರ ಕೈಗೆ ಒಪ್ಪಿಸಿ “ನೀವು ನನಗಿಂತ ಮುಂಚೆ ಹೋಗಿ ನದಿ ದಾಟಿ. ಪ್ರತಿ ಹಿಂಡಿನ ಮಧ್ಯ ಅಂತರ ಇರಲಿ” ಅಂದ. 17  ಅಲ್ಲದೆ ಮೊದಲನೇ ಸೇವಕನಿಗೆ “ಒಂದುವೇಳೆ ನನ್ನ ಅಣ್ಣ ಏಸಾವ ನಿನ್ನನ್ನ ಭೇಟಿಯಾಗಿ ‘ನಿನ್ನ ಯಜಮಾನ ಯಾರು? ನೀನು ಎಲ್ಲಿಗೆ ಹೋಗ್ತಿದ್ದೀಯ? ನಿನ್ನ ಮುಂದೆ ಇರೋ ಈ ಹಿಂಡು ಯಾರದ್ದು?’ ಅಂತ ಕೇಳಿದ್ರೆ 18  ‘ಇದೆಲ್ಲ ನಿನ್ನ ಸೇವಕ ಯಾಕೋಬನದ್ದು. ನನ್ನ ಸ್ವಾಮಿ ಏಸಾವ, ನನ್ನ ಯಜಮಾನ ಇವುಗಳನ್ನ ನಿನಗೆ ಉಡುಗೊರೆಯಾಗಿ ಕಳಿಸಿದ್ದಾನೆ.+ ಅವನು ಸಹ ನಮ್ಮ ಹಿಂದೆ ಬರ್ತಿದ್ದಾನೆ’ ಅಂತ ಹೇಳಬೇಕು” ಅಂದ. 19  ಅವನು ಎರಡನೆಯವನಿಗೆ, ಮೂರನೆಯವನಿಗೆ ಮತ್ತು ಹಿಂಡುಗಳ ಹಿಂದೆ ಹೋಗ್ತಿದ್ದ ಎಲ್ಲ ಸೇವಕರಿಗೆ ಹಾಗೇ ಆಜ್ಞೆ ಕೊಡ್ತಾ “ನೀವು ಏಸಾವನನ್ನ ಭೇಟಿಯಾದಾಗ ಇದೇ ತರ ಮಾತಾಡಬೇಕು. 20  ಅಲ್ಲದೆ ನೀವು ಅವನಿಗೆ ‘ನಿನ್ನ ಸೇವಕ ಯಾಕೋಬ ನಮ್ಮ ಹಿಂದೆ ಬರ್ತಿದ್ದಾನೆ’ ಅಂತ ಹೇಳಬೇಕು” ಅಂದ. ಯಾಕಂದ್ರೆ ‘ಈ ಉಡುಗೊರೆ ಮೊದ್ಲು ಕಳಿಸಿ ಅವನನ್ನ ಸಮಾಧಾನ ಮಾಡಿದ್ರೆ+ ಭೇಟಿಮಾಡಿದಾಗ ಅವನು ನನ್ನನ್ನ ಪ್ರೀತಿಯಿಂದ ಹತ್ರ ತಗೊಳ್ಳಬಹುದು’ ಅಂತ ಯಾಕೋಬ ಮನಸ್ಸಲ್ಲಿ ಅಂದ್ಕೊಂಡ. 21  ಹಾಗಾಗಿ ಸೇವಕರು ಉಡುಗೊರೆ ತಗೊಂಡು ಅವನಿಗಿಂತ ಮುಂಚೆ ಹೋಗಿ ನದಿ ದಾಟಿದ್ರು. ಆದ್ರೆ ಯಾಕೋಬ ಆ ರಾತ್ರಿ ಬಿಡಾರದಲ್ಲೇ ಇದ್ದ. 22  ಆ ರಾತ್ರಿ ಸ್ವಲ್ಪ ಸಮಯ ಆದ್ಮೇಲೆ ಅವನು ಎದ್ದು ತನ್ನ ಇಬ್ರು ಹೆಂಡತಿಯರನ್ನ,+ ಇಬ್ರು ಸೇವಕಿಯರನ್ನ,+ 11 ಗಂಡುಮಕ್ಕಳನ್ನ ಕರ್ಕೊಂಡು ಯಬ್ಬೋಕ್‌+ ನದಿಯನ್ನ* ಕಡಿಮೆ ನೀರಿದ್ದ ಕಡೆಯಿಂದ ದಾಟಿದ. 23  ಅವನು ಅವರನ್ನ ದಾಟಿಸಿದ ಮೇಲೆ ತನ್ನ ಉಳಿದ ಸ್ವತ್ತನ್ನೆಲ್ಲ ನದಿಯ ಆಕಡೆಗೆ ತಗೊಂಡು ಬಂದ. 24  ಕೊನೆಗೆ ಯಾಕೋಬ ಒಬ್ಬನೇ ಇದ್ದ. ಆಗ ಒಬ್ಬ ಪುರುಷ* ಅವನ ಜೊತೆ ಬೆಳಗಾಗೋ ತನಕ ಕುಸ್ತಿಮಾಡಿದ.+ 25  ಆ ಪುರುಷನಿಗೆ ತನ್ನಿಂದ ಅವನನ್ನ ಸೋಲಿಸೋಕೆ ಆಗ್ತಿಲ್ಲ ಅಂತ ಗೊತ್ತಾದಾಗ ಅವನ ತೊಡೆಯ ಸಂದನ್ನ* ಮುಟ್ಟಿದ. ಹಾಗಾಗಿ ಕುಸ್ತಿ ಮಾಡ್ತಾ ಇದ್ದಾಗ್ಲೇ ಯಾಕೋಬನ ತೊಡೆಯ ಸಂದು ತಪ್ಪಿತು.+ 26  ಆಮೇಲೆ ಆ ಪುರುಷ “ಬೆಳಗಾಗ್ತಾ ಇದೆ, ನನ್ನನ್ನ ಬಿಡು” ಅಂದ. ಅದಕ್ಕೆ ಯಾಕೋಬ “ಇಲ್ಲ, ನೀನು ನನ್ನನ್ನ ಆಶೀರ್ವದಿಸೋ ತನಕ ಬಿಡೋದಿಲ್ಲ”+ ಅಂದ. 27  ಆಗ ಆ ಪುರುಷ “ನಿನ್ನ ಹೆಸರೇನು?” ಅಂತ ಕೇಳಿದ. ಅದಕ್ಕವನು “ಯಾಕೋಬ” ಅಂದ. 28  ಆ ಪುರುಷ “ಇನ್ನು ಮೇಲೆ ನಿನ್ನ ಹೆಸ್ರು ಯಾಕೋಬ ಅಲ್ಲ. ಇಸ್ರಾಯೇಲ್‌.*+ ಯಾಕಂದ್ರೆ ನೀನು ದೇವರ ಜೊತೆ,+ ಮನುಷ್ಯರ ಜೊತೆ ಹೋರಾಡಿ ಕೊನೆಗೂ ಗೆದ್ದೆ” ಅಂದ. 29  ಯಾಕೋಬ ಆ ಪುರುಷನಿಗೆ “ದಯವಿಟ್ಟು ನಿನ್ನ ಹೆಸ್ರು ಹೇಳು” ಅಂದಾಗ ಅವನು “ಯಾಕೆ ನನ್ನ ಹೆಸರು ಕೇಳ್ತೀಯ?”+ ಅಂತ ಹೇಳಿದ. ಆಮೇಲೆ ಅವನು ಯಾಕೋಬನನ್ನ ಆಶೀರ್ವದಿಸಿದ. 30  ಆಗ ಯಾಕೋಬ “ನಾನು ದೇವರನ್ನ* ಕಣ್ಣಾರೆ ನೋಡಿದ್ದೀನಿ. ಆದ್ರೂ ನನ್ನ ಜೀವ ಉಳಿದಿದೆ”+ ಅಂತೇಳಿ ಆ ಜಾಗಕ್ಕೆ ಪೆನೀಯೇಲ್‌*+ ಅಂತ ಹೆಸರಿಟ್ಟ. 31  ಅವನು ಪೆನೀಯೇಲನ್ನ* ದಾಟಿದ ಕೂಡಲೇ ಸೂರ್ಯೋದಯ ಆಯ್ತು. ಸೊಂಟದ ಸಂದು ತಪ್ಪಿದ್ದರಿಂದ ಅವನು ಕುಂಟುತ್ತಾ ನಡಿತಿದ್ದ.+ 32  ಆ ಪುರುಷ ಯಾಕೋಬನ ಸೊಂಟದ ಸಂದಿನ ಮೇಲಿದ್ದ ಸ್ನಾಯುರಜ್ಜನ್ನ ಮುಟ್ಟಿದ್ರಿಂದ ಇಸ್ರಾಯೇಲ್ಯರು ಇವತ್ತಿಗೂ ಸೊಂಟದ ಸಂದಿನ ಮೇಲಿರೋ ಸ್ನಾಯುರಜ್ಜನ್ನ ತಿನ್ನಲ್ಲ.

ಪಾದಟಿಪ್ಪಣಿ

ಅರ್ಥ “ಎರಡು ಪಾಳೆಯಗಳು.”
ಅಥವಾ “ವಿದೇಶಿಯಾಗಿ ವಾಸ ಮಾಡ್ತಿದ್ದೆ.”
ಅಥವಾ “ಕಾಲುವೆಯನ್ನ.”
ಈ ಪುರುಷ ಮನುಷ್ಯರೂಪ ಧರಿಸಿದ್ದ ದೇವದೂತ.
ಅಥವಾ “ಸೊಂಟದ ಸಂದನ್ನ.”
ಅರ್ಥ “ದೇವರ ಜೊತೆ ಹೋರಾಡೋನು (ಬಿಡದೆ ಪ್ರಯತ್ನಿಸೋನು)” ಅಥವಾ “ದೇವರು ಹೋರಾಡ್ತಾನೆ.”
ಅಂದ್ರೆ, ದೇವರ ಸಂದೇಶ ಹೇಳೋಕೆ ಬಂದಿದ್ದ ದೇವದೂತನನ್ನ.
ಅರ್ಥ “ದೇವರ ಮುಖ.”
ಅಥವಾ “ಪೆನೂವೇಲ್‌.” ಆ ಹೆಸ್ರನ್ನ ಈ ರೀತಿನೂ ಬರಿತಿದ್ರು.