ಆದಿಕಾಂಡ 33:1-20

  • ಯಾಕೋಬ ಮತ್ತು ಏಸಾವನ ಭೇಟಿ (1-16)

  • ಯಾಕೋಬ ಶೆಕೆಮಿಗೆ ಹೋದ (17-20)

33  ಯಾಕೋಬ ಕಣ್ಣೆತ್ತಿ ನೋಡಿದಾಗ ಏಸಾವ 400 ಗಂಡಸರ ಜೊತೆ ಬರ್ತಿರೋದು ಕಾಣಿಸ್ತು.+ ಹಾಗಾಗಿ ಅವನು ಲೇಯ, ರಾಹೇಲ, ಇಬ್ರು ಸೇವಕಿಯರಿಗೆ ಅವರವರ ಮಕ್ಕಳನ್ನ ಒಪ್ಪಿಸಿ ಅವರನ್ನ ಬೇರೆ ಬೇರೆ ಗುಂಪಾಗಿ ಮಾಡಿದ.+  ಇಬ್ರು ಸೇವಕಿಯರು ತಮ್ಮ ಮಕ್ಕಳನ್ನ ಕರ್ಕೊಂಡು ಮುಂದೆ ಹೋಗಬೇಕು,+ ಅವರ ಹಿಂದೆ ಲೇಯ ಮತ್ತು ಅವಳ ಮಕ್ಕಳು ಹೋಗಬೇಕು,+ ಕೊನೇಲಿ ರಾಹೇಲ+ ಮತ್ತು ಯೋಸೇಫ ಹೋಗಬೇಕು ಅಂತ ಹೇಳಿದ.  ಆಮೇಲೆ ಅವರೆಲ್ಲರ ಮುಂದೆ ಯಾಕೋಬ ಹೋದ. ಅವನು ಅಣ್ಣನ ಹತ್ರ ಹೋದಾಗ ಏಳು ಸಲ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದ.  ಏಸಾವ ಅವನ ಹತ್ರ ಓಡಿ ಬಂದು ಅವನನ್ನ ತಬ್ಬಿಕೊಂಡು ಮುತ್ತಿಟ್ಟ. ಇಬ್ಬರೂ ಜೋರಾಗಿ ಅತ್ರು.  ಏಸಾವ ಯಾಕೋಬನ ಹಿಂದೆ ಇದ್ದ ಸ್ತ್ರೀಯರನ್ನ ಮತ್ತು ಮಕ್ಕಳನ್ನ ನೋಡಿ “ಇವರೆಲ್ಲ ಯಾರು?” ಅಂತ ಕೇಳಿದ. ಅದಕ್ಕೆ ಅವನು “ನಿನ್ನ ಸೇವಕನಾದ ನನಗೆ ದೇವರು ದಯೆ ತೋರಿಸಿ ಕೊಟ್ಟ ಮಕ್ಕಳು”+ ಅಂದ.  ಆಗ ಸೇವಕಿಯರು ತಮ್ಮ ಮಕ್ಕಳ ಜೊತೆ ಮುಂದೆ ಬಂದು ಬಗ್ಗಿ ನಮಸ್ಕಾರ ಮಾಡಿದ್ರು.  ಲೇಯ ಸಹ ತನ್ನ ಮಕ್ಕಳ ಜೊತೆ ಮುಂದೆ ಬಂದಳು, ಅವರು ಬಗ್ಗಿ ನಮಸ್ಕಾರ ಮಾಡಿದ್ರು. ಆಮೇಲೆ ಯೋಸೇಫ ರಾಹೇಲ ಜೊತೆ ಮುಂದೆ ಬಂದ, ಅವರೂ ಬಗ್ಗಿ ನಮಸ್ಕಾರ ಮಾಡಿದ್ರು.+  ಆಗ ಏಸಾವ “ನೀನು ಸೇವಕರ ಜೊತೆ ಹಿಂಡುಗಳನ್ನ ಯಾಕೆ ಕಳಿಸಿಕೊಟ್ಟೆ?”+ ಅಂದಾಗ ಅವನು “ನೀನು ನನಗೆ ದಯೆ ತೋರಿಸಬೇಕು ಅಂತ ಸ್ವಾಮಿ”+ ಅಂದ.  ಅದಕ್ಕೆ ಏಸಾವ “ತಮ್ಮ, ನನಗೆ ಬೇಕಾದಷ್ಟು ಆಸ್ತಿ ಇದೆ.+ ನನಗೋಸ್ಕರ ಕಳಿಸಿದ್ದನ್ನೆಲ್ಲ ನೀನೇ ಇಟ್ಕೊ” ಅಂದ. 10  ಆದ್ರೆ ಯಾಕೋಬ “ದಯವಿಟ್ಟು ಹಾಗೆ ಹೇಳಬೇಡ. ನಿನಗೆ ನನ್ನ ಮೇಲೆ ದಯೆ ಇದ್ರೆ ನಾನು ಕೊಡೋ ಈ ಉಡುಗೊರೆ ಸ್ವೀಕರಿಸಬೇಕು. ನಿನ್ನನ್ನ ನೋಡಬೇಕು ಅನ್ನೋ ಆಸೆಯಿಂದ ಇದನ್ನೆಲ್ಲ ತಂದಿದ್ದೀನಿ. ಈಗ ನೀನು ನನ್ನನ್ನ ಸಂತೋಷದಿಂದ ಬರಮಾಡ್ಕೊಂಡಿದ್ದೀಯ.+ ನಿನ್ನನ್ನ ನೋಡಿದ್ದು ದೇವರನ್ನ ನೋಡಿದ ಹಾಗೆ ಆಯ್ತು. 11  ದೇವರ ದಯೆಯಿಂದ ನನಗೆ ಯಾವುದಕ್ಕೂ ಕಡಿಮೆ ಇಲ್ಲ.+ ನಿನಗೆ ಒಳ್ಳೆಯದಾಗಲಿ ಅಂತ ಹಾರೈಸ್ತಾ ಈ ಉಡುಗೊರೆ ಕೊಟ್ಟಿದ್ದೀನಿ.+ ಹಾಗಾಗಿ ದಯವಿಟ್ಟು ತಗೊ” ಅಂದ. ಅವನು ತುಂಬ ಒತ್ತಾಯ ಮಾಡಿದ್ರಿಂದ ಏಸಾವ ಅದನ್ನ ತಗೊಂಡ. 12  ಆಮೇಲೆ ಏಸಾವ “ಬಾ, ನಾವು ಪ್ರಯಾಣ ಮುಂದುವರಿಸೋಣ. ನಾನು ನಿನ್ನ ಮುಂದೆ ಮುಂದೆ ಹೋಗ್ತಾ ಇರ್ತಿನಿ” ಅಂದ. 13  ಆದ್ರೆ ಯಾಕೋಬ “ಸ್ವಾಮಿ, ನನ್ನ ಮಕ್ಕಳು ತುಂಬ ಚಿಕ್ಕವರು.+ ಅಲ್ಲದೆ ನನ್ನ ಹತ್ರ ಇರೋ ಕುರಿಗಳಿಗೆ ಮರಿಗಳಿವೆ, ದನಗಳಿಗೆ ಕರುಗಳಿವೆ. ಒಂದೇ ಒಂದು ದಿನ ಅವುಗಳನ್ನ ಬೇಗ ಬೇಗ ಓಡಿಸ್ಕೊಂಡು ಬಂದ್ರೂ ಇಡೀ ಹಿಂಡು ಸತ್ತು ಹೋಗುತ್ತೆ. 14  ಹಾಗಾಗಿ ಸ್ವಾಮಿ ದಯವಿಟ್ಟು ಈ ಸೇವಕನಿಗಿಂತ ಮುಂಚೆ ಪ್ರಯಾಣ ಬೆಳೆಸಬಹುದು. ನಾನು ನನ್ನ ಜೊತೆ ಇರೋ ಪ್ರಾಣಿಗಳ ನಡಿಗೆಗೆ ಮತ್ತು ನನ್ನ ಮಕ್ಕಳ ನಡಿಗೆಗೆ ಸರಿಯಾಗಿ ನಿಧಾನವಾಗಿ ನಡಿತಾ ನನ್ನ ಸ್ವಾಮಿ ವಾಸವಾಗಿರೋ ಸೇಯೀರಿಗೆ ಬರ್ತಿನಿ”+ ಅಂದ. 15  ಆಗ ಏಸಾವ “ಸರಿ, ಹಾಗಾದ್ರೆ ನನ್ನ ಜನರಲ್ಲಿ ಕೆಲವರನ್ನ ನಿನ್ನ ಹತ್ರ ಬಿಟ್ಟು ಹೋಗ್ತೀನಿ” ಅಂದ. ಅದಕ್ಕೆ ಯಾಕೋಬ “ಅದೆಲ್ಲ ಯಾಕೆ? ನಿನ್ನ ದಯೆ ನನ್ನ ಮೇಲಿದ್ರೆ ಅಷ್ಟೇ ಸಾಕು” ಅಂದ. 16  ಹಾಗಾಗಿ ಏಸಾವ ಆ ದಿನ ಸೇಯೀರಿಗೆ ಹೊರಟ. 17  ಯಾಕೋಬ ಪ್ರಯಾಣ ಮಾಡಿ ಸುಕ್ಕೋತಿಗೆ ಬಂದ.+ ಅಲ್ಲಿ ಅವನು ತನಗೋಸ್ಕರ ಒಂದು ಮನೆ ಕಟ್ಟಿದ. ಪ್ರಾಣಿಗಳಿಗಾಗಿ ಚಪ್ಪರಗಳನ್ನ ಹಾಕಿದ. ಹಾಗಾಗಿ ಅವನು ಆ ಜಾಗಕ್ಕೆ ಸುಕ್ಕೋತ್‌* ಅನ್ನೋ ಹೆಸರಿಟ್ಟ. 18  ಯಾಕೋಬ ಪದ್ದನ್‌-ಅರಾಮಿನಿಂದ+ ಹೋದ ಮೇಲೆ ಕಾನಾನ್‌ ದೇಶದ ಶೆಕೆಮ್‌+ ಪಟ್ಟಣಕ್ಕೆ ಸುರಕ್ಷಿತವಾಗಿ ಬಂದು ಮುಟ್ಟಿದ.+ ಆ ಪಟ್ಟಣದ ಹತ್ರ ಅವನು ಡೇರೆ ಹಾಕಿದ. 19  ಆಮೇಲೆ ಅವನು ತಾನು ಡೇರೆ ಹಾಕಿದ್ದ ಜಮೀನಿನ ಒಂದು ಭಾಗ ಖರೀದಿಸಿದ. ಅದನ್ನ ಅವನು 100 ಬೆಳ್ಳಿ ತುಂಡುಗಳನ್ನ ಕೊಟ್ಟು ಹಮೋರನ ಮಕ್ಕಳಿಂದ ತಗೊಂಡ.+ ಹಮೋರನ ಒಬ್ಬ ಮಗನ ಹೆಸ್ರು ಶೆಕೆಮ್‌. 20  ಯಾಕೋಬ ಅಲ್ಲಿ ಒಂದು ಯಜ್ಞವೇದಿ ಕಟ್ಟಿ ಅದಕ್ಕೆ ‘ದೇವರು, ಇಸ್ರಾಯೇಲನ ದೇವರು’* ಅಂತ ಹೆಸರಿಟ್ಟ.+

ಪಾದಟಿಪ್ಪಣಿ

ಅರ್ಥ “ಚಪ್ಪರಗಳು, ಆಶ್ರಯಗಳು.”
ಅಥವಾ “ಏಲೆಲೋಹೇ ಇಸ್ರಾಯೇಲ್‌.”