ಆದಿಕಾಂಡ 37:1-36

  • ಯೋಸೇಫನ ಕನಸುಗಳು (1-11)

  • ಯೋಸೇಫ ಮತ್ತು ಹೊಟ್ಟೆಕಿಚ್ಚಿನ ಅಣ್ಣಂದಿರು (12-24)

  • ಯೋಸೇಫನನ್ನ ದಾಸನಾಗಿ ಮಾರಿದ್ರು (25-36)

37  ಯಾಕೋಬ ತನ್ನ ತಂದೆಯಾದ ಇಸಾಕ ವಿದೇಶಿಯಾಗಿ ವಾಸವಾಗಿದ್ದ ಕಾನಾನ್‌ ದೇಶದಲ್ಲೇ ವಾಸ ಮಾಡಿದ.+  ಇದು ಯಾಕೋಬನ ಚರಿತ್ರೆ. ಯಾಕೋಬನ ಮಗನಾದ ಯೋಸೇಫ+ 17 ವರ್ಷದ ಯುವಕನಾಗಿದ್ದಾಗ ಅಣ್ಣನ ಜೊತೆ ಅಂದ್ರೆ ತನ್ನ ತಂದೆಯ ಹೆಂಡತಿಯರಾದ ಬಿಲ್ಹಾ+ ಮತ್ತು ಜಿಲ್ಪಳ+ ಗಂಡುಮಕ್ಕಳ ಜೊತೆ ಆಡು-ಕುರಿ ಮೇಯಿಸ್ತಿದ್ದ.+ ಅವರು ಮಾಡ್ತಿದ್ದ ಕೆಟ್ಟ ಕೆಲಸಗಳ ಬಗ್ಗೆ ಯೋಸೇಫ ಹೋಗಿ ತನ್ನ ತಂದೆಗೆ ಹೇಳಿದ.  ಇಸ್ರಾಯೇಲನಿಗೆ ವಯಸ್ಸಾದಾಗ ಅವನಿಗೆ ಯೋಸೇಫ ಹುಟ್ಟಿದ್ದ. ಹಾಗಾಗಿ ಇಸ್ರಾಯೇಲ ತನ್ನ ಎಲ್ಲ ಗಂಡುಮಕ್ಕಳಿಗಿಂತ+ ಯೋಸೇಫನನ್ನ ಜಾಸ್ತಿ ಪ್ರೀತಿಸ್ತಿದ್ದ. ಅವನಿಗಾಗಿ ಅಂದವಾದ* ಒಂದು ಉದ್ದ ಅಂಗಿಯನ್ನೂ ಮಾಡಿಸಿ ಕೊಟ್ಟಿದ್ದ.  ತಂದೆ ಯೋಸೇಫನನ್ನೇ ಹೆಚ್ಚು ಪ್ರೀತಿಸೋದನ್ನ ಅವನ ಅಣ್ಣಂದಿರು ನೋಡಿ ಅವನನ್ನ ದ್ವೇಷಿಸೋಕೆ ಶುರು ಮಾಡಿದ್ರು. ಅವರು ಅವನ ಜೊತೆ ಸರಿಯಾಗಿ ಮಾತಾಡ್ತಿರಲಿಲ್ಲ.  ಒಂದಿನ ಯೋಸೇಫನಿಗೆ ಒಂದು ಕನಸು ಬಿತ್ತು. ಆ ಕನಸನ್ನ ಅಣ್ಣಂದಿರಿಗೆ ಹೇಳಿದ.+ ಆಗ ಅವರು ಅವನನ್ನ ಇನ್ನೂ ಹೆಚ್ಚು ದ್ವೇಷಿಸಿದ್ರು.  ಅವನು ಅಣ್ಣಂದಿರ ಹತ್ರ ಹೋಗಿ “ನನಗೊಂದು ಕನಸು ಬಿತ್ತು. ಅದನ್ನ ಹೇಳ್ತೀನಿ, ದಯವಿಟ್ಟು ಕೇಳಿ.  ನಾವು ಹೊಲದ ಮಧ್ಯ ಸಿವುಡುಗಳನ್ನ ಕಟ್ತಾ ಇದ್ವಿ. ಆಗ ನನ್ನ ಕಟ್ಟು ಎದ್ದು ನೆಟ್ಟಗೆ ನಿಲ್ತು, ನಿಮ್ಮ ಕಟ್ಟುಗಳು ಸುತ್ತಲೂ ಬಂದು ನಿಂತು ನನ್ನ ಕಟ್ಟಿಗೆ ಬಗ್ಗಿ ನಮಸ್ಕಾರ ಮಾಡಿದವು” ಅಂದ.+  ಅದಕ್ಕೆ ಅಣ್ಣಂದಿರು “ಅಂದ್ರೆ ನೀನೇನು ರಾಜನಾಗಿ ನಮ್ಮ ಮೇಲೆ ಅಧಿಕಾರ ನಡಿಸ್ತೀಯಾ?”+ ಅಂದ್ರು. ಯೋಸೇಫನ ಕನಸಿಂದಾಗಿ, ಅವನು ಹೇಳಿದ ಮಾತುಗಳಿಂದಾಗಿ ಅಣ್ಣಂದಿರಿಗೆ ಅವನ ಮೇಲಿದ್ದ ದ್ವೇಷ ಇನ್ನೂ ಜಾಸ್ತಿ ಆಯ್ತು.  ಆಮೇಲೆ ಅವನು ಇನ್ನೊಂದು ಕನಸು ಕಂಡ. ಅವನು ಅದನ್ನ ಅಣ್ಣಂದಿರಿಗೆ ಹೇಳ್ತಾ “ನನಗೆ ಇನ್ನೊಂದು ಕನಸು ಬಿತ್ತು. ಈ ಸಲ ಕನಸಲ್ಲಿ ಸೂರ್ಯ, ಚಂದ್ರ ಮತ್ತು 11 ನಕ್ಷತ್ರಗಳು ನನಗೆ ಬಗ್ಗಿ ನಮಸ್ಕಾರ ಮಾಡ್ತಾ ಇದ್ದವು”+ ಅಂದ. 10  ಆಮೇಲೆ ಅವನು ಆ ಕನಸನ್ನ ತನ್ನ ಅಣ್ಣಂದಿರ ಮುಂದೆ ತಂದೆಗೆ ಹೇಳಿದ. ಆಗ ತಂದೆ ಗದರಿಸ್ತಾ “ಏನ್‌ ನಿನ್ನ ಮಾತಿನ ಅರ್ಥ? ನಾನು, ನಿನ್ನ ತಾಯಿ ಮತ್ತು ನಿನ್ನ ಸಹೋದರರೆಲ್ಲ ನಿನ್ನ ಹತ್ರ ಬಂದು ನೆಲದ ತನಕ ಬಗ್ಗಿ ನಿನಗೆ ನಮಸ್ಕಾರ ಮಾಡ್ತೀವಾ?” ಅಂತ ಕೇಳಿದ. 11  ಯೋಸೇಫನ ಮಾತು ಕೇಳಿ ಅವನ ಅಣ್ಣಂದಿರು ಅವನ ಮೇಲೆ ತುಂಬ ಹೊಟ್ಟೆಕಿಚ್ಚುಪಟ್ರು.+ ಆದ್ರೆ ಅವನ ತಂದೆ ಆ ಮಾತನ್ನ ಮನಸ್ಸಲ್ಲಿ ಇಟ್ಕೊಂಡ. 12  ಒಮ್ಮೆ ಯೋಸೇಫನ ಅಣ್ಣಂದಿರು ಶೆಕೆಮ್‌ ಪಟ್ಟಣದ+ ಹತ್ರ ತಂದೆಯ ಆಡು-ಕುರಿಗಳನ್ನ ಮೇಯಿಸೋಕೆ ಹೋದ್ರು. 13  ಆಮೇಲೆ ಇಸ್ರಾಯೇಲ ಯೋಸೇಫನಿಗೆ “ನಿನ್ನ ಅಣ್ಣಂದಿರು ಶೆಕೆಮಿನ ಹತ್ರ ಆಡು-ಕುರಿಗಳನ್ನ ಮೇಯಿಸ್ತಾ ಇದ್ದಾರೆ. ನೀನು ಹೋಗಿ ಅವರನ್ನ ನೋಡ್ಕೊಂಡು ಬರ್ತಿಯಾ?” ಅಂದ. ಅದಕ್ಕೆ ಅವನು “ಸರಿ ಅಪ್ಪ, ಹೋಗ್ತೀನಿ” ಅಂದ. 14  ಆಗ ಇಸ್ರಾಯೇಲ “ನೀನು ಹೋಗಿ ಅಣ್ಣಂದಿರ ಕ್ಷೇಮ ವಿಚಾರಿಸಿ, ಆಡು-ಕುರಿಗಳು ಹೇಗಿವೆ ಅಂತ ನೋಡ್ಕೊಂಡು ಬಂದು ದಯವಿಟ್ಟು ನನಗೆ ಹೇಳು” ಅಂದ. ಆಗ ಯೋಸೇಫ ತನ್ನ ಕುಟುಂಬ ವಾಸವಾಗಿದ್ದ ಹೆಬ್ರೋನ್‌ ಕಣಿವೆಯಿಂದ+ ಶೆಕೆಮಿನ ಕಡೆಗೆ ಹೋದ. 15  ಆಮೇಲೆ ಅವನು ಒಂದು ಬಯಲಲ್ಲಿ ಅಲೆದಾಡ್ತಾ ಇದ್ದಾಗ ಒಬ್ಬ ಅವನನ್ನ ನೋಡಿ “ಏನು ಹುಡುಕ್ತಾ ಇದ್ದೀಯಾ?” ಅಂತ ಕೇಳಿದ. 16  ಅವನು “ನನ್ನ ಅಣ್ಣಂದಿರನ್ನ ಹುಡುಕ್ತಾ ಇದ್ದೀನಿ. ಅವರು ಆಡು-ಕುರಿಗಳನ್ನ ಮೇಯಿಸೋಕೆ ಬಂದಿದ್ರು. ಅವರು ಎಲ್ಲಿದ್ದಾರೆ ಅಂತ ಗೊತ್ತಿದ್ರೆ ದಯವಿಟ್ಟು ಹೇಳು” ಅಂದ. 17  ಆ ವ್ಯಕ್ತಿ “ಅವರು ಇಲ್ಲಿಂದ ಹೋಗುವಾಗ ‘ದೋತಾನಿಗೆ ಹೋಗೋಣ’ ಅಂತ ಮಾತಾಡ್ಕೊಳ್ತಿದ್ರು” ಅಂದ. ಹಾಗಾಗಿ ಯೋಸೇಫ ಅಣ್ಣಂದಿರನ್ನ ಹುಡುಕ್ತಾ ದೋತಾನಿಗೆ ಹೋದ. ಅವರು ಅಲ್ಲಿದ್ರು. 18  ಯೋಸೇಫ ದೂರದಲ್ಲಿ ಬರ್ತಾ ಇರೋದನ್ನ ಅವನ ಅಣ್ಣಂದಿರು ನೋಡಿ ಅವನನ್ನ ಹೇಗಾದ್ರೂ ಸಾಯಿಸಬೇಕು ಅಂತ ಸಂಚು ಮಾಡಿದ್ರು. 19  ಒಬ್ಬರಿಗೊಬ್ರು “ಅಲ್ಲಿ ನೋಡು, ಕನಸುಗಾರ ಬರ್ತಿದ್ದಾನೆ.+ 20  ಬನ್ನಿ, ಅವನನ್ನ ಸಾಯಿಸಿ ಒಂದು ಗುಂಡಿಯಲ್ಲಿ ಹಾಕೋಣ. ಯಾವುದೋ ಕ್ರೂರ ಕಾಡುಪ್ರಾಣಿ ಅವನನ್ನ ತಿಂದು ಹಾಕ್ತು ಅಂತ ಹೇಳಿದರಾಯ್ತು. ಆಗ ಅವನ ಕನಸುಗಳೆಲ್ಲ ಏನಾಗುತ್ತೆ ನೋಡೋಣ” ಅಂದ್ರು. 21  ರೂಬೇನ+ ಈ ಮಾತು ಕೇಳಿ ಅವನನ್ನ ಕಾಪಾಡೋಕೆ ಪ್ರಯತ್ನಿಸ್ತಾ “ಅವನ ಜೀವ ತೆಗಿಯೋದು ಬೇಡ”+ ಅಂದ. 22  “ಅವನ ರಕ್ತ ಸುರಿಸಬೇಡಿ.+ ಅವನ ಜೀವಕ್ಕೆ ಏನೂ ಹಾನಿ ಮಾಡಬೇಡಿ. ಬೇಕಾದ್ರೆ ಅವನನ್ನ ಕಾಡಲ್ಲಿರೋ ಈ ಗುಂಡಿಗೆ ಹಾಕಿ”+ ಅಂದ. ಯೋಸೇಫನನ್ನ ಹೇಗಾದ್ರೂ ಕಾಪಾಡಿ ತಂದೆಗೆ ಒಪ್ಪಿಸಬೇಕು ಅನ್ನೋದು ಅವನ ಉದ್ದೇಶವಾಗಿತ್ತು. 23  ಯೋಸೇಫ ಹತ್ರ ಬಂದ ತಕ್ಷಣ ಅವನ ಅಣ್ಣಂದಿರು ಅವನ ಮೈಮೇಲಿದ್ದ ಅಂದವಾದ ಉದ್ದ ಅಂಗಿ+ ತೆಗೆದು 24  ಅವನನ್ನ ಎತ್ತಿ ನೀರಿನ ಗುಂಡಿಗೆ ಹಾಕಿದ್ರು. ಆಗ ಆ ಗುಂಡಿ ಒಳಗೆ ಸ್ವಲ್ಪನೂ ನೀರು ಇರಲಿಲ್ಲ. 25  ಆಮೇಲೆ ಅವರು ಊಟ ಮಾಡೋಕೆ ಕೂತ್ರು. ಅವರು ತಲೆಯೆತ್ತಿ ನೋಡಿದಾಗ ಗಿಲ್ಯಾದಿನಿಂದ ಇಷ್ಮಾಯೇಲ್ಯರ ಗುಂಪು+ ಬರ್ತಿರೋದು ಕಾಣಿಸ್ತು. ಅವರು ಸುಗಂಧಭರಿತ ಅಂಟು, ಸುಗಂಧ ತೈಲ ಮತ್ತು ಚಕ್ಕೆಯನ್ನ+ ಒಂಟೆಗಳ ಮೇಲೆ ಹೇರಿಕೊಂಡು ಈಜಿಪ್ಟಿಗೆ ಹೋಗ್ತಿದ್ರು. 26  ಆಗ ಯೆಹೂದ “ನಾವು ತಮ್ಮನನ್ನ ಕೊಂದು ಆ ವಿಷ್ಯ ಮುಚ್ಚಿಟ್ರೆ ನಮಗೇನು ಲಾಭ?+ 27  ಬನ್ನಿ, ಅವನನ್ನ ಇಷ್ಮಾಯೇಲ್ಯರಿಗೆ ಮಾರೋಣ.+ ಅವನಿಗೆ ಏನೂ ಹಾನಿ ಮಾಡೋದು ಬೇಡ. ಎಷ್ಟೆಂದ್ರೂ ಅವನು ನಮ್ಮ ತಮ್ಮ ಅಲ್ವಾ? ನಾವೆಲ್ಲ ಒಂದೇ ರಕ್ತ ಅಲ್ವಾ?” ಅಂದ. ಇದನ್ನ ಉಳಿದವರೂ ಒಪ್ಪಿದ್ರು. 28  ಇಷ್ಮಾಯೇಲ್ಯ* ವ್ಯಾಪಾರಿಗಳು+ ಆ ದಾರಿಯಲ್ಲಿ ಹೋಗುವಾಗ ಯೋಸೇಫನ ಅಣ್ಣಂದಿರು ಅವನನ್ನ ನೀರಿನ ಗುಂಡಿಯಿಂದ ಎತ್ತಿ ಇಷ್ಮಾಯೇಲ್ಯರಿಗೆ 20 ಬೆಳ್ಳಿ ಶೆಕೆಲ್‌ಗಳಿಗೆ* ಮಾರಿದ್ರು.+ ಆ ವ್ಯಾಪಾರಿಗಳು ಅವನನ್ನ ಈಜಿಪ್ಟಿಗೆ ಕರ್ಕೊಂಡು ಹೋದ್ರು. 29  ಆಮೇಲೆ ರೂಬೇನ ಬಂದು ನೋಡಿದಾಗ ಯೋಸೇಫ ಗುಂಡಿಯಲ್ಲಿ ಇರಲಿಲ್ಲ. ಆಗ ಅವನು ದುಃಖದಿಂದ ತನ್ನ ಬಟ್ಟೆಗಳನ್ನ ಹರ್ಕೊಂಡ. 30  ಅವನು ತಮ್ಮಂದಿರ ಹತ್ರ ಹೋಗಿ “ಗುಂಡಿಯಲ್ಲಿ ತಮ್ಮ ಇಲ್ಲ! ಅಯ್ಯೋ, ನಾನೀಗ ಏನು ಮಾಡ್ಲಿ?” ಅಂತ ಗೋಳಾಡಿದ. 31  ಅವರು ಒಂದು ಗಂಡು ಆಡನ್ನ ಕೊಯ್ದು ಅದರ ರಕ್ತದಲ್ಲಿ ಯೋಸೇಫನ ಅಂದವಾದ ಉದ್ದ ಅಂಗಿಯನ್ನ ಅದ್ದಿದ್ರು. 32  ಆಮೇಲೆ ಅದನ್ನ ತಮ್ಮ ತಂದೆಗೆ ಕಳಿಸ್ಕೊಟ್ರು. “ಇದು ನಮಗೆ ಸಿಕ್ತು. ಇದು ನಿನ್ನ ಮಗನ ಅಂಗಿನಾ ಅಲ್ವಾ ದಯವಿಟ್ಟು ನೋಡು”+ ಅಂತ ಹೇಳಿ ಕಳಿಸಿದ್ರು. 33  ಆಗ ಯಾಕೋಬ ಆ ಅಂಗಿಯ ಗುರುತು ಹಿಡಿದು “ಇದು ನನ್ನ ಮಗನದ್ದೇ! ಯಾವುದೋ ಕ್ರೂರ ಕಾಡುಪ್ರಾಣಿ ಅವನನ್ನ ಕೊಂದು ತಿಂದಿರಬೇಕು. ಯೋಸೇಫನನ್ನ ತುಂಡು ತುಂಡು ಮಾಡಿರಬೇಕು” ಅಂತ ಗೋಳಾಡಿದ. 34  ಅವನು ಬಟ್ಟೆಗಳನ್ನ ಹರಿದುಕೊಂಡು ಸೊಂಟಕ್ಕೆ ಗೋಣಿ ಸುತ್ಕೊಂಡು ತುಂಬಾ ದಿನ ತನಕ ತನ್ನ ಮಗನಿಗಾಗಿ ಗೋಳಾಡಿದ. 35  ಅವನ ಎಲ್ಲ ಗಂಡುಮಕ್ಕಳೂ ಎಲ್ಲ ಹೆಣ್ಣುಮಕ್ಕಳೂ ಅವನಿಗೆ ಸಮಾಧಾನ ಮಾಡೋಕೆ ತುಂಬ ಪ್ರಯತ್ನಿಸ್ತಾ ಇದ್ರು. ಅವರೆಷ್ಟೇ ಸಮಾಧಾನ ಮಾಡಿದ್ರೂ ಒಪ್ಪದೆ “ನಾನು ನನ್ನ ಮಗನಿಗಾಗಿ ಹೀಗೇ ಕೊರಗಿ ಕೊರಗಿ ಸಮಾಧಿ*+ ಸೇರ್ತಿನಿ” ಅಂದ. ಯಾಕೋಬ ತನ್ನ ಮಗನನ್ನ ನೆನಸಿ ನೆನಸಿ ಅಳ್ತಾ ಇದ್ದ. 36  ಇಷ್ಮಾಯೇಲ್ಯರು* ಯೋಸೇಫನನ್ನ ಕರ್ಕೊಂಡು ಈಜಿಪ್ಟಿಗೆ ಹೋದ ಮೇಲೆ ಅವನನ್ನ ಪೋಟೀಫರನಿಗೆ ಮಾರಿದ್ರು. ಪೋಟೀಫರ ಫರೋಹನ+ ಆಸ್ಥಾನದಲ್ಲಿ ಅಧಿಕಾರಿಯಾಗಿದ್ದ, ಕಾವಲುಗಾರರ ಮುಖ್ಯಸ್ಥನಾಗಿದ್ದ.+

ಪಾದಟಿಪ್ಪಣಿ

ಅಕ್ಷ. “ವಿಶೇಷವಾದ.”
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ಮಿದ್ಯಾನ್ಯ.”
ಅದು, ಎಲ್ಲ ಮಾನವರಿಗಾಗಿ ಇರೋ ಸಾಮಾನ್ಯ ಸಮಾಧಿ. ಪದವಿವರಣೆ ನೋಡಿ.
ಅಥವಾ “ಮಿದ್ಯಾನ್ಯರು.”