ಆದಿಕಾಂಡ 44:1-34
44 ಆಮೇಲೆ ಯೋಸೇಫ ತನ್ನ ಮನೆಯನ್ನ ನೋಡ್ಕೊಳ್ತಿದ್ದ ಸೇವಕನಿಗೆ “ಆ ಮನುಷ್ಯರು ಎಷ್ಟು ಧಾನ್ಯ ತಗೊಂಡು ಹೋಗೋಕೆ ಆಗುತ್ತೋ ಅಷ್ಟೂ ಧಾನ್ಯ ಅವರ ಚೀಲಗಳಲ್ಲಿ ತುಂಬು. ಪ್ರತಿಯೊಬ್ಬರ ಹಣವನ್ನ ಅವರ ಚೀಲದಲ್ಲೇ ಇಟ್ಟುಬಿಡು.+
2 ಆದ್ರೆ ಅವರ ಕೊನೇ ತಮ್ಮನ ಚೀಲದಲ್ಲಿ ಅವನ ಹಣದ ಜೊತೆ ನನ್ನ ಬೆಳ್ಳಿ ಲೋಟ ಕೂಡ ಇಡು” ಅಂದ. ಅವನು ಯೋಸೇಫ ಹೇಳಿದ ಹಾಗೇ ಮಾಡಿದ.
3 ಬೆಳಿಗ್ಗೆ ಸೂರ್ಯ ಹುಟ್ಟಿದಾಗ ಅವರನ್ನ ಕಳಿಸಿಕೊಟ್ರು. ಅವರು ತಮ್ಮ ಕತ್ತೆಗಳ ಜೊತೆ ಹೊರಟು
4 ಪಟ್ಟಣದಿಂದ ಸ್ವಲ್ಪ ದೂರ ಬಂದ್ರು. ಅಷ್ಟರಲ್ಲಿ ಯೋಸೇಫ ತನ್ನ ಸೇವಕನಿಗೆ “ನೀನು ಬೇಗ ಆ ಮನುಷ್ಯರ ಹಿಂದೆನೇ ಹೋಗಿ ಹಿಡಿ! ಆಮೇಲೆ ಅವರಿಗೆ ‘ಉಪಕಾರ ಮಾಡಿದವರಿಗೆ ಅಪಕಾರ ಮಾಡೋದಾ?
5 ನೀವು ನನ್ನ ಧಣಿಯ ಲೋಟ ಯಾಕೆ ಕದ್ರಿ? ನನ್ನ ಧಣಿ ಅದ್ರಲ್ಲೇ ಕುಡಿತಾನೆ. ಅದನ್ನೇ ನೋಡಿ ಭವಿಷ್ಯ ಹೇಳ್ತಾನೆ. ನೀವು ಅದನ್ನೇ ಕದ್ದಿದ್ದೀರಲ್ಲಾ! ದೊಡ್ಡ ತಪ್ಪು ಮಾಡಿದ್ದೀರ’ ಅಂತೇಳು” ಅಂದ.
6 ಹಾಗಾಗಿ ಆ ಸೇವಕ ಅವರನ್ನ ಅಟ್ಟಿಸ್ಕೊಂಡು ಹೋಗಿ ಅವರನ್ನ ನಿಲ್ಲಿಸಿ ಆ ಮಾತನ್ನ ಹೇಳಿದ.
7 ಅದಕ್ಕೆ ಅವರು “ಸ್ವಾಮಿ, ದಯವಿಟ್ಟು ಹಾಗೆ ಹೇಳಬೇಡಿ. ನಿನ್ನ ಸೇವಕರಾದ ನಾವು ಅಂಥ ಕೆಲಸ ಯಾವತ್ತೂ ಮಾಡಲ್ಲ.
8 ನಮ್ಮ ಚೀಲದಲ್ಲಿ ಹಣ ಸಿಕ್ಕಿದಾಗ ನಾವು ಆ ಹಣನ ನಿನಗೆ ಕೊಡಕ್ಕಂತಾನೇ ಕಾನಾನ್ ದೇಶದಿಂದ ಬಂದ್ವಿ ತಾನೇ?+ ಅಂದ್ಮೇಲೆ ನಿನ್ನ ಧಣಿ ಮನೆಯಿಂದ ನಾವು ಚಿನ್ನ ಬೆಳ್ಳಿ ಕದಿತೀವಾ?
9 ಆ ಲೋಟ ನಮ್ಮಲ್ಲಿ ಯಾರ ಹತ್ರ ಸಿಗುತ್ತೋ ಅವನಿಗೆ ಮರಣಶಿಕ್ಷೆ ಆಗ್ಲಿ. ಅಷ್ಟೇ ಅಲ್ಲ ನಾವೆಲ್ಲ ನಮ್ಮ ಧಣಿಗೆ ಗುಲಾಮರಾಗ್ತೀವಿ” ಅಂದ್ರು.
10 ಆಗ ಆ ಸೇವಕ “ಸರಿ, ನೀವು ಹೇಳಿದ ಹಾಗೇ ಆಗ್ಲಿ. ಆದ್ರೆ ಆ ಲೋಟ ಯಾರ ಹತ್ರ ಸಿಗುತ್ತೋ ಅವನು ಮಾತ್ರ ನನ್ನ ಗುಲಾಮ ಆಗಬೇಕು. ಉಳಿದವರು ಹೋಗಬಹುದು” ಅಂದ.
11 ಕೂಡಲೇ ಅವರೆಲ್ಲ ತಮ್ಮತಮ್ಮ ಚೀಲ ಕೆಳಗಿಳಿಸಿ ಬಿಚ್ಚಿದ್ರು.
12 ಆ ಸೇವಕ ಅವರಲ್ಲಿ ದೊಡ್ಡವನಿಂದ ಹಿಡಿದು ಎಲ್ಲರ ಚೀಲನಾ ಚೆನ್ನಾಗಿ ಹುಡುಕ್ತಾ ಬಂದ. ಕೊನೆಗೆ ಚಿಕ್ಕವನಾಗಿದ್ದ ಬೆನ್ಯಾಮೀನನ ಚೀಲದಲ್ಲಿ ಆ ಲೋಟ ಸಿಕ್ತು.+
13 ಆಗ ಅವರು ದುಃಖದಿಂದ ತಮ್ಮ ಬಟ್ಟೆ ಹರ್ಕೊಂಡು ತಮ್ಮ ತಮ್ಮ ಚೀಲಗಳನ್ನ ಕತ್ತೆಗಳ ಮೇಲೆ ಇಟ್ಟು ಪಟ್ಟಣಕ್ಕೆ ವಾಪಸ್ ಹೋದ್ರು.
14 ಯೆಹೂದ+ ಮತ್ತು ಅವನ ಅಣ್ಣತಮ್ಮಂದಿರು ಯೋಸೇಫನ ಮನೆಯೊಳಗೆ ಬಂದಾಗ ಅವನು ಇನ್ನೂ ಅಲ್ಲೇ ಇದ್ದ. ಅವರು ಅವನ ಮುಂದೆ ಅಡ್ಡಬಿದ್ರು.+
15 ಯೋಸೇಫ ಅವರಿಗೆ “ನೀವು ಎಂಥ ಕೆಲಸ ಮಾಡಿದ್ರಿ? ನಾನು ಭವಿಷ್ಯ ನೋಡಿ ಎಲ್ಲ ಕಂಡುಹಿಡಿತೀನಿ ಅಂತ ನಿಮಗೆ ಗೊತ್ತಿಲ್ವಾ?”+ ಅಂತ ಕೇಳಿದ.
16 ಅದಕ್ಕೆ ಯೆಹೂದ “ಸ್ವಾಮಿ, ನಮಗೆ ಏನು ಹೇಳಬೇಕು ಅಂತಾನೇ ಗೊತ್ತಾಗ್ತಿಲ್ಲ. ನಾವು ತಪ್ಪು ಮಾಡಿಲ್ಲ ಅಂತ ಸಾಬೀತು ಮಾಡೋದು ಹೇಗೆ? ನಾವು ಹಿಂದೆ ಮಾಡಿದ ತಪ್ಪಿಗೆ ಈಗ ಸತ್ಯದೇವರು ನಮ್ಮಿಂದ ಲೆಕ್ಕ ಕೇಳ್ತಿದ್ದಾನೆ.+ ಆ ಲೋಟ ಯಾರ ಹತ್ರ ಸಿಗುತ್ತೋ ಅವನು ಮಾತ್ರ ಅಲ್ಲ ನಾವೆಲ್ರೂ ನಿನಗೆ ಈಗ ಗುಲಾಮರು!” ಅಂದ.
17 ಅದಕ್ಕೆ ಯೋಸೇಫ “ಇಲ್ಲ! ನಿಮ್ಮೆಲ್ಲರನ್ನೂ ನಾನು ಗುಲಾಮರನ್ನಾಗಿ ಮಾಡ್ಕೊಳ್ಳಲ್ಲ. ಯಾರ ಹತ್ರ ಲೋಟ ಸಿಕ್ತೋ ಅವನು ಮಾತ್ರ ನನಗೆ ಗುಲಾಮ ಆಗಬೇಕು.+ ಉಳಿದವರೆಲ್ಲ ಅರಾಮಾಗಿ ನಿಮ್ಮ ತಂದೆ ಹತ್ರ ಹೋಗಬಹುದು” ಅಂದ.
18 ಆಗ ಯೆಹೂದ ಯೋಸೇಫನ ಹತ್ರ ಹೋಗಿ ಹೀಗಂದ: “ಸ್ವಾಮಿ, ನಿನ್ನ ದಾಸನಾದ ನಾನು ಹೇಳೋದನ್ನ ದಯವಿಟ್ಟು ಕೇಳು, ನನ್ನ ಮೇಲೆ ಕೋಪ ಮಾಡ್ಕೊಬೇಡ. ನೀನು ಫರೋಹನಿಗೆ ಸಮಾನನಾಗಿದ್ದೀಯ ಅಂತ ನಂಗೊತ್ತು.+
19 ಒಡೆಯನಾದ ನೀನು ನಿನ್ನ ದಾಸರಾದ ನಮಗೆ ತಂದೆ, ತಮ್ಮ ಇದ್ದಾನಾ ಅಂತ ಕೇಳಿದೆ.
20 ಅದಕ್ಕೆ ನಾವು ‘ತಂದೆ ಇದ್ದಾನೆ, ಅವನಿಗೆ ವಯಸ್ಸಾಗಿದೆ. ನಮಗೊಬ್ಬ ಕೊನೇ ತಮ್ಮ ಇದ್ದಾನೆ.+ ಅವನು ತಂದೆಗೆ ವಯಸ್ಸಾದಾಗ ಹುಟ್ಟಿದವನು. ಅವನ ಒಡಹುಟ್ಟಿದವನು ತೀರಿಹೋದ.+ ಅವನ ತಾಯಿಗೆ ಹುಟ್ಟಿದವರಲ್ಲಿ ಈಗ ಉಳಿದವನು ಅವನೊಬ್ಬನೇ.+ ಹಾಗಾಗಿ ತಂದೆಗೆ ಅವನಂದ್ರೆ ತುಂಬ ಪ್ರೀತಿ’ ಅಂತ ಹೇಳಿದ್ವಿ.
21 ಅದಕ್ಕೆ ನೀನು ನಿನ್ನ ದಾಸರಾದ ನಮಗೆ ‘ಅವನನ್ನ ನೋಡ್ಬೇಕು, ಇಲ್ಲಿಗೆ ಕರ್ಕೊಂಡು ಬನ್ನಿ’+ ಅಂತ ಅಪ್ಪಣೆಕೊಟ್ಟೆ.
22 ಆಗ ನಾವು ನಮ್ಮ ಒಡೆಯನಾದ ನಿನಗೆ ‘ತಂದೆಯನ್ನ ಬಿಟ್ಟು ಬರೋಕೆ ಆ ಹುಡುಗನಿಗೆ ಆಗಲ್ಲ. ಒಂದುವೇಳೆ ಬಂದ್ರೂ ಖಂಡಿತ ತಂದೆ ಜೀವಂತ ಉಳಿಯಲ್ಲ’+ ಅಂದ್ವಿ.
23 ಅದಕ್ಕೆ ನೀನು ನಿನ್ನ ದಾಸರಿಗೆ ‘ನಿಮ್ಮ ತಮ್ಮನನ್ನ ಇಲ್ಲಿಗೆ ಕರ್ಕೊಂಡು ಬರದಿದ್ರೆ ಇನ್ನು ಯಾವತ್ತೂ ನನಗೆ ನಿಮ್ಮ ಮುಖ ತೋರಿಸಬಾರದು’ + ಅಂದೆ.
24 ಅದಕ್ಕೇ ನಾವು ಹೋಗಿ ಸ್ವಾಮಿಯಾದ ನೀನು ಹೇಳಿದ ಮಾತನ್ನ ನಿನ್ನ ದಾಸನಾದ ನಮ್ಮ ತಂದೆಗೆ ಹೇಳಿದ್ವಿ.
25 ಸ್ವಲ್ಪ ದಿನ ಆದ್ಮೇಲೆ ತಂದೆ ನಮಗೆ ‘ನೀವು ಹೋಗಿ ಇನ್ನೂ ಸ್ವಲ್ಪ ಧಾನ್ಯ ತಗೊಂಡು ಬನ್ನಿ’+ ಅಂದ.
26 ಆದ್ರೆ ನಾವು ‘ಅಲ್ಲಿಗೆ ಹೋಗೋಕೆ ಸಾಧ್ಯ ಇಲ್ಲ. ನಮ್ಮ ಕೊನೇ ತಮ್ಮ ಬಂದ್ರೆ ಮಾತ್ರ ಹೋಗ್ತೀವಿ. ಇಲ್ಲಾಂದ್ರೆ ನಾವು ಆ ವ್ಯಕ್ತಿಗೆ ಮುಖ ತೋರಿಸೋಕೆ ಆಗಲ್ಲ’ ಅಂದ್ವಿ.+
27 ಆಗ ತಂದೆ ‘ನನ್ನ ಹೆಂಡತಿಯಲ್ಲಿ ನನಗೆ ಇಬ್ರೇ ಗಂಡುಮಕ್ಕಳು ಹುಟ್ಟಿದ್ರು ಅಂತ ನಿಮಗೆ ಚೆನ್ನಾಗಿ ಗೊತ್ತು.+
28 ಅವರಲ್ಲಿ ಒಬ್ಬ ನನ್ನಿಂದ ದೂರ ಆದ. “ಕಾಡುಪ್ರಾಣಿ ಅವನನ್ನ ತುಂಡು ತುಂಡು ಮಾಡಿರಬೇಕು”+ ಅಂದ್ಕೊಂಡೆ. ಅವತ್ತಿಂದ ನಾನು ಅವನನ್ನ ನೋಡಲೇ ಇಲ್ಲ.
29 ಈಗ ನೀವು ಇವನನ್ನ ಸಹ ಕರ್ಕೊಂಡು ಹೋಗಬೇಕಂತ ಇದ್ದೀರ. ಇವನ ಜೀವಕ್ಕೇನಾದ್ರೂ ಅಪಾಯ ಬಂದ್ರೆ ನಾನು ನಿಮ್ಮಿಂದಾಗಿ ಈ ಮುದಿಪ್ರಾಯದಲ್ಲೇ ದುಃಖದಿಂದ ಸಮಾಧಿ*+ ಸೇರಬೇಕಾಗುತ್ತೆ’ ಅಂದ.+
30 ನನ್ನ ತಂದೆ ತನ್ನ ಜೀವಕ್ಕಿಂತ ಹೆಚ್ಚಾಗಿ ಈ ಹುಡುಗನನ್ನ ಪ್ರೀತಿಸ್ತಾನೆ. ನಾನೇನಾದ್ರೂ ಈ ಹುಡುಗ ಇಲ್ಲದೆ ತಂದೆ ಹತ್ರ ಹೋದ್ರೆ
31 ಅವನು ಬಂದಿಲ್ಲ ಅಂತ ನೋಡಿದ ತಕ್ಷಣ ತಂದೆ ಖಂಡಿತ ಸಾಯ್ತಾನೆ. ನಮ್ಮ ತಂದೆ ನಮ್ಮಿಂದಾಗಿ ಈ ಮುದಿಪ್ರಾಯದಲ್ಲಿ ದುಃಖದಿಂದ ಸಮಾಧಿ* ಸೇರ್ತಾನೆ.
32 ನಾನು ತಂದೆಗೆ ‘ಒಂದುವೇಳೆ ಅವನನ್ನ ಕರ್ಕೊಂಡು ಬರದಿದ್ರೆ ಆ ಪಾಪ ಜೀವನಪೂರ್ತಿ ನನ್ನ ಮೇಲೆನೇ ಇರಲಿ’ ಅಂತ ಹೇಳಿ ಈ ಹುಡುಗನ ಜವಾಬ್ದಾರಿ ತಗೊಂಡೆ.+
33 ಹಾಗಾಗಿ ಸ್ವಾಮಿ, ದಯವಿಟ್ಟು ಈ ಹುಡುಗನಿಗೆ ಬದಲಾಗಿ ನನ್ನನ್ನ ನಿನ್ನ ಗುಲಾಮನಾಗಿ ಇಟ್ಕೊ. ಅವನು ಅವನ ಅಣ್ಣಂದಿರ ಜೊತೆ ಹೋಗ್ಲಿ.
34 ಈ ಹುಡುಗನಿಲ್ಲದೆ ನಾನು ತಂದೆ ಹತ್ರ ಹೇಗೆ ಹೋಗ್ಲಿ? ತಂದೆಗೆ ಆಗೋ ಅನಾಹುತ ನನ್ನಿಂದ ನೋಡೋಕೆ ಆಗಲ್ಲ!”