ಆದಿಕಾಂಡ 45:1-28

  • ಯೋಸೇಫ ತನ್ನ ಗುರುತನ್ನ ಬಚ್ಚಿಟ್ಟ (1-15)

  • ಅಣ್ಣತಮ್ಮಂದಿರು ತಂದೆಯನ್ನ ಕರ್ಕೊಂಡು ಬರೋಕೆ ಹೋದ್ರು (16-28)

45  ಆ ಮಾತು ಕೇಳಿದಾಗ ಯೋಸೇಫನಿಗೆ ಅಳು ತಡ್ಕೊಳ್ಳೋಕೆ ಆಗಲಿಲ್ಲ.+ ಆಗ ಅವನು ತನ್ನ ಸೇವಕರಿಗೆ “ಎಲ್ರೂ ಇಲ್ಲಿಂದ ಹೋಗಿ” ಅಂತ ಜೋರಾಗಿ ಹೇಳಿದ. ತಾನು ಯಾರಂತ ಅವನು ತನ್ನ ಅಣ್ಣತಮ್ಮಂದಿರಿಗೆ ಹೇಳುವಾಗ ಬೇರೆ ಯಾರೂ ಅಲ್ಲಿರಲಿಲ್ಲ.+  ಆಮೇಲೆ ಅವನು ಜೋರಾಗಿ ಅತ್ತ. ಎಷ್ಟು ಜೋರಾಗಿ ಅತ್ತ ಅಂದ್ರೆ ಅವನು ಅಳೋ ಶಬ್ದ ಸುತ್ತಮುತ್ತ ಇದ್ದ ಈಜಿಪ್ಟಿನವರಿಗೂ ಕೇಳಿಸ್ತು. ಈ ವಿಷ್ಯ ಫರೋಹನ ಮನೆಯವರಿಗೂ ಗೊತ್ತಾಯ್ತು.  ಕೊನೆಗೂ ಯೋಸೇಫ ತನ್ನ ಅಣ್ಣತಮ್ಮಂದಿರಿಗೆ “ನಾನು ಯೋಸೇಫ. ನನ್ನ ತಂದೆ ಇನ್ನೂ ಇದ್ದಾನಾ?” ಅಂದ. ಇದನ್ನ ಕೇಳಿ ಅವನ ಅಣ್ಣತಮ್ಮಂದಿರಿಗೆ ದಂಗು ಬಡಿದಂತಾಯ್ತು. ಅವರಿಗೆ ಮಾತೇ ಬರಲಿಲ್ಲ.  ಯೋಸೇಫ ತನ್ನ ಅಣ್ಣತಮ್ಮಂದಿರಿಗೆ “ಬನ್ನಿ, ದಯವಿಟ್ಟು ನನ್ನ ಹತ್ರ ಬನ್ನಿ” ಅಂದ. ಅವರು ಅವನ ಹತ್ರ ಬಂದ್ರು. ಆಗ ಅವನು ಅವರಿಗೆ ಹೀಗಂದ: “ನಾನು ನಿಮ್ಮ ಸಹೋದರ. ಈಜಿಪ್ಟಿನವರಿಗೆ ನೀವು ಮಾರಿದ ಯೋಸೇಫ ನಾನೇ.+  ಆದ್ರೆ ನನ್ನನ್ನ ಮಾರಿದ್ದಕ್ಕೆ ನೀವು ಈಗ ಬೇಜಾರು ಮಾಡ್ಕೊಬೇಡಿ. ಒಬ್ರನ್ನೊಬ್ರು ದೂರಬೇಡಿ. ಯಾಕಂದ್ರೆ ನಮ್ಮ ಜೀವ ಉಳಿಸೋಕೆ ದೇವರೇ ನನ್ನನ್ನ ನಿಮಗಿಂತ ಮುಂಚೆ ಇಲ್ಲಿಗೆ ಕಳಿಸಿದ್ದಾನೆ.+  ಬರಗಾಲ ಶುರುವಾಗಿ ಈಗ ಎರಡು ವರ್ಷ ಆಗ್ತಿದೆ ಅಷ್ಟೆ.+ ಇನ್ನೂ ಐದು ವರ್ಷದ ತನಕ ಜನ್ರು ಉಳೋಕೆ, ಬೆಳೆ ಕೊಯ್ಯೋಕೆ ಆಗಲ್ಲ.  ನಿಮ್ಮನ್ನ ಅದ್ಭುತವಾಗಿ ರಕ್ಷಿಸೋಕೆ, ನಿಮ್ಮ ಕುಟುಂಬಗಳು ಈ ಭೂಮಿ ಮೇಲಿಂದ* ಅಳಿದು ಹೋಗದಿರೋಕೆ+ ದೇವರೇ ನನ್ನನ್ನ ನಿಮಗಿಂತ ಮುಂಚೆ ಇಲ್ಲಿಗೆ ಕಳಿಸಿದ್ದಾನೆ.  ಹಾಗಾಗಿ ನನ್ನನ್ನ ಇಲ್ಲಿಗೆ ಕಳಿಸಿದ್ದು ನೀವಲ್ಲ, ಸತ್ಯ ದೇವರೇ. ಫರೋಹನಿಗೆ ಮುಖ್ಯ ಸಲಹೆಗಾರನಾಗಿ,* ಅವನ ಅರಮನೆಯಲ್ಲಿರೋ ಎಲ್ರ ಮೇಲೂ ಇಡೀ ಈಜಿಪ್ಟ್‌ ದೇಶದ ಮೇಲೂ ಅಧಿಕಾರಿ ಆಗೋಕೆ ಆತನೇ ನನ್ನನ್ನ ಇಲ್ಲಿಗೆ ಕಳಿಸಿದ.+  ನೀವು ಬೇಗ ನನ್ನ ತಂದೆ ಹತ್ರ ಹೋಗಿ ‘ನಿನ್ನ ಮಗ ಯೋಸೇಫ ಹೀಗಂದ: “ದೇವರು ನನ್ನನ್ನ ಇಡೀ ಈಜಿಪ್ಟಿಗೆ ಅಧಿಕಾರಿಯಾಗಿ ಮಾಡಿದ್ದಾನೆ.+ ನೀನು ತಡಮಾಡದೆ ನನ್ನ ಹತ್ರ ಬಾ.+ 10  ನಿನ್ನ ಮಕ್ಕಳನ್ನ, ಮೊಮ್ಮಕ್ಕಳನ್ನ, ಆಡು-ಕುರಿಗಳ ಹಿಂಡನ್ನ, ನಿನ್ನತ್ರ ಇರೋ ಎಲ್ಲವನ್ನ ತಗೊಂಡು ಇಲ್ಲಿಗೆ ಬಾ. ನೀವೆಲ್ಲ ಇಲ್ಲಿರೋ ಗೋಷೆನ್‌ ಪ್ರದೇಶದಲ್ಲಿ ಇರಬಹುದು.+ ಆಗ ನೀನು ನನ್ನ ಹತ್ರಾನೇ ಇರ್ತಿಯ. 11  ನಾನು ನಿನಗೆ ಬೇಕಾದ ಆಹಾರ ಕಳಿಸ್ತೀನಿ. ಬರಗಾಲ ಇನ್ನೂ ಐದು ವರ್ಷ ಇರುತ್ತೆ.+ ಹಾಗಾಗಿ ನೀನು ಇಲ್ಲಿಗೆ ಬಾ. ಇಲ್ಲಿಗೆ ಬಂದ್ರೆ ನೀನೂ ನಿನ್ನ ಕುಟುಂಬದವರೂ ಹೊಟ್ಟೆಗಿಲ್ಲದೆ ಕಷ್ಟಪಡಬೇಕಾಗಿಲ್ಲ. ನಿನಗಿರೋ ಯಾವುದನ್ನೂ ನೀನು ಕಳ್ಕೊಳ್ಳೋದಿಲ್ಲ” ’ ಅಂತ ಹೇಳಬೇಕು. 12  ನಿಮ್ಮ ಹತ್ರ ಮಾತಾಡ್ತಿರೋದು ಯೋಸೇಫನೇ ಅಂತ ನನ್ನ ತಮ್ಮ ಬೆನ್ಯಾಮೀನ ಮತ್ತು ನೀವೆಲ್ಲ ಕಣ್ಣಾರೆ ನೋಡಿದ್ದೀರ.+ 13  ಹಾಗಾಗಿ ನೀವು ಹೋಗಿ ಈಜಿಪ್ಟಲ್ಲಿ ನನಗಿರೋ ಎಲ್ಲ ವೈಭವವನ್ನ, ನೀವು ನೋಡಿದ್ದೆಲ್ಲವನ್ನ ನನ್ನ ತಂದೆಗೆ ಹೇಳಿ. ಬೇಗ ಹೋಗಿ ನನ್ನ ತಂದೆಯನ್ನ ಇಲ್ಲಿಗೆ ಕರ್ಕೊಂಡು ಬನ್ನಿ.” 14  ಆಮೇಲೆ ಅವನು ಬೆನ್ಯಾಮೀನನನ್ನ ಅಪ್ಕೊಂಡು ಜೋರಾಗಿ ಅತ್ತ. ಬೆನ್ಯಾಮೀನ ಕೂಡ ಅಣ್ಣನನ್ನ ತಬ್ಬಿಕೊಂಡು ಅತ್ತ.+ 15  ಅಲ್ಲದೆ ಯೋಸೇಫ ತನ್ನ ಅಣ್ಣಂದಿರಿಗೆಲ್ಲ ಮುತ್ತಿಟ್ಟು ಅವರನ್ನ ಅಪ್ಕೊಂಡು ಅತ್ತ. ಆಮೇಲೆ ಅವರು ಅವನ ಜೊತೆ ಮಾತಾಡಿದ್ರು. 16  ಯೋಸೇಫನ ಅಣ್ಣತಮ್ಮಂದಿರು ಬಂದಿದ್ದಾರೆ ಅನ್ನೋ ಸುದ್ದಿ ಫರೋಹನ ಅರಮನೆಗೆ ಮುಟ್ತು. ಇದನ್ನ ಕೇಳಿ ಫರೋಹನಿಗೆ, ಅವನ ಸೇವಕರಿಗೆ ಖುಷಿಯಾಯ್ತು. 17  ಹಾಗಾಗಿ ಫರೋಹ ಯೋಸೇಫನಿಗೆ “ನಿನ್ನ ಅಣ್ಣತಮ್ಮಂದಿರಿಗೆ ‘ನಿಮ್ಮ ಹೊರೆಗಳನ್ನ ಪ್ರಾಣಿಗಳ ಮೇಲೆ ಹೊರಿಸಿ ಕಾನಾನ್‌ ದೇಶಕ್ಕೆ ಹೋಗಿ 18  ನಿಮ್ಮ ತಂದೆಯನ್ನ, ಮನೆಯವರನ್ನೆಲ್ಲ ಕರ್ಕೊಂಡು ನನ್ನ ಹತ್ರ ಬನ್ನಿ. ಈಜಿಪ್ಟ್‌ ದೇಶದ ಒಳ್ಳೇ ವಸ್ತುಗಳನ್ನ ನಿಮಗೆ ಕೊಡ್ತೀನಿ. ನಿಮಗೆ ಈ ದೇಶದಲ್ಲೇ ಸಿಗೋ ಒಳ್ಳೇ ಬೆಳೆಯನ್ನ ಕೊಡ್ತೀನಿ’ ಅಂತ ಹೇಳು.+ 19  ನಾನು ನಿನಗೆ ಕೊಡೋ ಆಜ್ಞೆ ಏನಂದ್ರೆ+ ನೀನು ಅವರಿಗೆ ‘ಈಜಿಪ್ಟ್‌ ದೇಶದಿಂದ ಬಂಡಿಗಳನ್ನ ತಗೊಂಡು+ ಹೋಗಿ ನಿಮ್ಮ ಹೆಂಡತಿ ಮಕ್ಕಳನ್ನ ಕರ್ಕೊಂಡು ಬನ್ನಿ. ಒಂದು ಬಂಡಿಯಲ್ಲಿ ನಿಮ್ಮ ತಂದೆಯನ್ನ ಕರ್ಕೊಂಡು ಬನ್ನಿ.+ 20  ನಿಮ್ಮ ಸೊತ್ತುಗಳ ಬಗ್ಗೆ ಚಿಂತೆ ಮಾಡಬೇಡಿ.+ ಯಾಕಂದ್ರೆ ಇಡೀ ಈಜಿಪ್ಟ್‌ ದೇಶದಲ್ಲಿರೋ ಒಳ್ಳೇ ವಸ್ತುಗಳೆಲ್ಲ ನಿಮ್ಮದೇ’ ಅಂತ ಹೇಳಬೇಕು” ಅಂದ. 21  ಇಸ್ರಾಯೇಲನ ಮಕ್ಕಳು ಹಾಗೇ ಮಾಡಿದ್ರು. ಫರೋಹನ ಅಪ್ಪಣೆ ಪ್ರಕಾರ ಯೋಸೇಫ ಅವರಿಗೆ ಬಂಡಿಗಳನ್ನ ಕೊಟ್ಟ. ಪ್ರಯಾಣಕ್ಕೆ ಬೇಕಾದ ಆಹಾರವನ್ನೂ ಕೊಟ್ಟ. 22  ಅವನು ತನ್ನ ಅಣ್ಣಂದಿರಲ್ಲಿ ಪ್ರತಿಯೊಬ್ಬನಿಗೂ ಒಂದೊಂದು ಜೊತೆ ಹೊಸ ಬಟ್ಟೆ ಕೊಟ್ಟ. ಆದ್ರೆ ಬೆನ್ಯಾಮೀನನಿಗೆ 300 ಬೆಳ್ಳಿಯ ಶೆಕೆಲ್‌ಗಳನ್ನ* ಮತ್ತು ಐದು ಜೊತೆ ಹೊಸ ಬಟ್ಟೆ ಕೊಟ್ಟ.+ 23  ಅವನು ತನ್ನ ತಂದೆಗಂತ ಹತ್ತು ಕತ್ತೆಗಳ ಮೇಲೆ ಈಜಿಪ್ಟ್‌ ದೇಶದ ಒಳ್ಳೇ ವಸ್ತುಗಳನ್ನ, ಹತ್ತು ಹೆಣ್ಣು ಕತ್ತೆಗಳ ಮೇಲೆ ಪ್ರಯಾಣಕ್ಕೆ ಬೇಕಾದ ಧಾನ್ಯ, ರೊಟ್ಟಿಗಳು, ಬೇರೆ ಆಹಾರ ಹೊರಿಸಿ ಕಳಿಸಿದ. 24  ಆಮೇಲೆ ಅವನು ತನ್ನ ಅಣ್ಣತಮ್ಮಂದಿರಿಗೆ “ನೀವು ದಾರಿಯಲ್ಲಿ ಜಗಳ ಮಾಡಬೇಡಿ” ಅಂತೇಳಿ ಕಳಿಸ್ಕೊಟ್ಟ.+ 25  ಆಗ ಅವರು ಈಜಿಪ್ಟ್‌ ದೇಶದಿಂದ ಹೊರಟು ಎತ್ತರ ಪ್ರದೇಶವಾದ ಕಾನಾನಿನಲ್ಲಿರೋ ತಮ್ಮ ತಂದೆ ಯಾಕೋಬನ ಹತ್ರ ಬಂದ್ರು. 26  ಆಮೇಲೆ ಅವರು ತಮ್ಮ ತಂದೆಗೆ “ಯೋಸೇಫ ಇನ್ನೂ ಜೀವದಿಂದ ಇದ್ದಾನೆ. ಅವನೇ ಇಡೀ ಈಜಿಪ್ಟ್‌ ದೇಶದ ಅಧಿಕಾರಿ!” ಅಂದ್ರು.+ ಇದನ್ನ ಕೇಳಿ ಅವನು ಮೂಕವಿಸ್ಮಿತನಾದ. ಯಾಕಂದ್ರೆ ಅವನು ಅವರ ಮಾತನ್ನ ನಂಬಲಿಲ್ಲ.+ 27  ಆದ್ರೆ ಅವರು ಯೋಸೇಫ ಹೇಳಿದ ಎಲ್ಲ ಮಾತುಗಳನ್ನ ಅವನಿಗೆ ತಿಳಿಸಿದಾಗ ಮತ್ತು ಅವನನ್ನ ಕರ್ಕೊಂಡು ಬರೋಕೆ ಯೋಸೇಫ ಕಳಿಸಿಕೊಟ್ಟ ಬಂಡಿಗಳನ್ನ ತೋರಿಸಿದಾಗ ಅವರ ತಂದೆ ಯಾಕೋಬನಿಗೆ ಮತ್ತೆ ಜೀವ ಬಂದಂತಾಯ್ತು. 28  ಆಗ ಇಸ್ರಾಯೇಲ “ಸಾಕು, ನಾನೀಗ ನಂಬ್ತೀನಿ. ನನ್ನ ಮಗ ಯೋಸೇಫ ನಿಜವಾಗ್ಲೂ ಬದುಕಿದ್ದಾನೆ! ನಾನು ಸಾಯೋ ಮುಂಚೆ ಹೋಗಿ ಅವನನ್ನ ನೋಡಬೇಕು!” ಅಂದ.+

ಪಾದಟಿಪ್ಪಣಿ

ಅಥವಾ “ದೇಶದಿಂದ.”
ಅಕ್ಷ. “ತಂದೆಯಾಗಿ.”
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.