ಆದಿಕಾಂಡ 48:1-22

  • ಯೋಸೇಫನ ಇಬ್ಬರು ಗಂಡುಮಕ್ಕಳಿಗೆ ಯಾಕೋಬನಿಂದ ಆಶೀರ್ವಾದ (1-12)

  • ಎಫ್ರಾಯೀಮನಿಗೆ ಹೆಚ್ಚು ಆಶೀರ್ವಾದ (13-22)

48  ಸ್ವಲ್ಪ ಸಮಯ ಆದ್ಮೇಲೆ ಯೋಸೇಫನಿಗೆ ತನ್ನ ತಂದೆ ಆರೋಗ್ಯ ತುಂಬ ಕೆಡ್ತಿದೆ ಅನ್ನೋ ಸುದ್ದಿ ಸಿಕ್ತು. ಆಗ ಅವನು ತನ್ನ ಇಬ್ಬರು ಮಕ್ಕಳು ಅಂದ್ರೆ ಮನಸ್ಸೆ ಮತ್ತು ಎಫ್ರಾಯೀಮನ್ನ ಕರ್ಕೊಂಡು ತಂದೆ ಹತ್ರ ಹೋದ.+  “ನಿನ್ನ ಮಗ ಯೋಸೇಫ ನಿನ್ನನ್ನ ನೋಡೋಕೆ ಬಂದಿದ್ದಾನೆ” ಅಂತ ಯಾಕೋಬನಿಗೆ ಹೇಳಿದಾಗ ಅವನು ಹಾಸಿಗೆಯಿಂದ ಹೇಗೋ ಕಷ್ಟಪಟ್ಟು ಎದ್ದು ಕೂತ.  ಆಮೇಲೆ ಯಾಕೋಬ ಯೋಸೇಫನಿಗೆ ಹೀಗಂದ: “ಸರ್ವಶಕ್ತ ದೇವರು ಕಾನಾನ್‌ ದೇಶದ ಲೂಜ್‌ ಪಟ್ಟಣದಲ್ಲಿ ನನಗೆ ಕಾಣಿಸ್ಕೊಂಡು ನನ್ನನ್ನ ಆಶೀರ್ವದಿಸಿದ.+  ಅಲ್ಲದೆ ಆತನು ‘ನಿನ್ನ ವಂಶದವರು ಜಾಸ್ತಿ ಆಗೋ ತರ ಮಾಡ್ತೀನಿ. ನಿನ್ನ ವಂಶದವರಿಂದ ಅನೇಕ ಕುಲ ಹುಟ್ಟೋ ತರ ಮಾಡ್ತೀನಿ. ಅವೆಲ್ಲ ಸೇರಿ ಒಂದು ದೊಡ್ಡ ಸಮೂಹ ಆಗ್ತಾರೆ.+ ಅಲ್ಲದೆ ನಾನು ಈ ದೇಶವನ್ನ ನಿನ್ನ ನಂತ್ರ ಬರೋ ನಿನ್ನ ಸಂತತಿಗೆ ಶಾಶ್ವತವಾದ ಆಸ್ತಿಯಾಗಿ ಕೊಡ್ತೀನಿ’ ಅಂದ.+  ನಾನು ಈಜಿಪ್ಟ್‌ ದೇಶಕ್ಕೆ ಬರೋ ಮುಂಚೆ ನಿನಗೆ ಇಲ್ಲಿ ಹುಟ್ಟಿದ ಇಬ್ರು ಮಕ್ಕಳು ನನ್ನವರು.+ ರೂಬೇನ್‌ ಮತ್ತು ಸಿಮೆಯೋನ ನನ್ನ ಮಕ್ಕಳಾಗಿರೋ ತರ ಎಫ್ರಾಯೀಮ್‌ ಮತ್ತು ಮನಸ್ಸೆ ಕೂಡ ನನ್ನ ಮಕ್ಕಳಾಗ್ತಾರೆ.+  ಆದರೆ ಇವರಿಬ್ರ ನಂತ್ರ ನಿನಗೆ ಹುಟ್ಟೋ ಮಕ್ಕಳು ನಿನ್ನವರಾಗ್ತಾರೆ. ಆ ಮಕ್ಕಳು ಎಫ್ರಾಯೀಮ್‌ ಮತ್ತು ಮನಸ್ಸೆ ಹೆಸರನ್ನ ಪಡ್ಕೊಳ್ತಾರೆ. ಇವರಿಬ್ರ ಪಾಲಿಗೆ ಸಿಗೋ ಆಸ್ತಿಯಲ್ಲೇ ಆ ಮಕ್ಕಳಿಗೂ ಆಸ್ತಿ ಸಿಗುತ್ತೆ.+  ನಾನು ಪದ್ದನ್‌ನಿಂದ ಕಾನಾನ್‌ ದೇಶಕ್ಕೆ ಬಂದ ಮೇಲೆ ಎಫ್ರಾತವನ್ನ+ ತಲುಪೋಕೆ ಇನ್ನೂ ತುಂಬ ದೂರ ಇದ್ದಾಗ್ಲೇ ನಿನ್ನಮ್ಮ ರಾಹೇಲ ನನ್ನ ಕಣ್ಮುಂದೆನೇ ತೀರಿಹೋದಳು.+ ಹಾಗಾಗಿ ನಾನು ಅವಳನ್ನ ಎಫ್ರಾತಕ್ಕೆ ಅಂದ್ರೆ ಬೆತ್ಲೆಹೇಮಿಗೆ+ ಹೋಗೋ ದಾರಿಯಲ್ಲಿ ಸಮಾಧಿ ಮಾಡ್ದೆ.”  ಆಮೇಲೆ ಇಸ್ರಾಯೇಲ ಯೋಸೇಫನ ಮಕ್ಕಳನ್ನ ನೋಡಿ “ಇವರು ಯಾರು?” ಅಂತ ಕೇಳಿದ.  ಅದಕ್ಕೆ ಯೋಸೇಫ “ಇವರು ಈ ದೇಶದಲ್ಲಿ ದೇವರು ನನಗೆ ಕೊಟ್ಟಿರೋ ಮಕ್ಕಳು” ಅಂದ.+ ಆಗ ಯಾಕೋಬ “ಅವರನ್ನ ದಯವಿಟ್ಟು ನನ್ನ ಹತ್ರ ಕರ್ಕೊಂಡು ಬಾ. ಅವರನ್ನ ಆಶೀರ್ವದಿಸ್ತೀನಿ” ಅಂದ.+ 10  ಇಸ್ರಾಯೇಲನಿಗೆ ವಯಸ್ಸಾಗಿದ್ರಿಂದ ಅವನ ಕಣ್ಣುಗಳು ಮಬ್ಬಾಗಿತ್ತು. ಅವನಿಗೆ ಕಣ್ಣು ಕಾಣಿಸ್ತಿರಲಿಲ್ಲ. ಹಾಗಾಗಿ ಯೋಸೇಫ ತನ್ನ ಮಕ್ಕಳನ್ನ ತಂದೆ ಹತ್ರ ತಂದ. ಆಗ ಇಸ್ರಾಯೇಲ ಅವರಿಗೆ ಮುತ್ತಿಟ್ಟು ಅಪ್ಪಿಕೊಂಡ. 11  ಆಮೇಲೆ ಯೋಸೇಫನಿಗೆ “ನಾನು ಮತ್ತೆ ನಿನ್ನ ಮುಖ ನೋಡ್ತೀನಿ ಅಂತ ನೆನಸಿರಲೇ ಇಲ್ಲ.+ ಆದ್ರೆ ನಿನ್ನನ್ನ ಮಾತ್ರ ಅಲ್ಲ ನಿನ್ನ ಮಕ್ಕಳನ್ನ* ನೋಡೋ ಅವಕಾಶ ದೇವರು ನನಗೆ ಕೊಟ್ಟಿದ್ದಾನೆ” ಅಂದ. 12  ಆಗ ಯೋಸೇಫ ತಂದೆಯ ಮಂಡಿ ಹತ್ರ ಇದ್ದ ತನ್ನ ಮಕ್ಕಳನ್ನ ಪಕ್ಕಕ್ಕೆ ತಂದು ಮಂಡಿಯೂರಿ ನೆಲದ ತನಕ ಬಗ್ಗಿ ನಮಸ್ಕಾರ ಮಾಡಿದ. 13  ಆಮೇಲೆ ಯೋಸೇಫ ತನ್ನ ಇಬ್ರು ಮಕ್ಕಳನ್ನ ಇಸ್ರಾಯೇಲನ ಹತ್ರ ತಂದ. ತನ್ನ ಬಲಗೈಯಿಂದ ಎಫ್ರಾಯೀಮನನ್ನ+ ಹಿಡಿದು ಇಸ್ರಾಯೇಲನ ಎಡಗಡೆ ನಿಲ್ಲಿಸಿದ. ತನ್ನ ಎಡಗೈಯಿಂದ ಮನಸ್ಸೆಯನ್ನ+ ಹಿಡಿದು ಇಸ್ರಾಯೇಲನ ಬಲಗಡೆ ನಿಲ್ಲಿಸಿದ. 14  ಆದ್ರೆ ಇಸ್ರಾಯೇಲ ತನ್ನ ಬಲಗೈಯನ್ನ ಎಫ್ರಾಯೀಮನ ತಲೆ ಮೇಲೆ, ಎಡಗೈಯನ್ನ ಮನಸ್ಸೆಯ ತಲೆ ಮೇಲೆ ಇಟ್ಟ. ಮನಸ್ಸೆ ದೊಡ್ಡ ಮಗ,+ ಎಫ್ರಾಯೀಮ್‌ ಚಿಕ್ಕ ಮಗ ಅಂತ ಇಸ್ರಾಯೇಲನಿಗೆ ಗೊತ್ತಿದ್ರೂ ಅವನು ಬೇಕಂತಾನೇ ತನ್ನ ಕೈಗಳನ್ನ ಆ ರೀತಿ ಇಟ್ಟ. 15  ಆಮೇಲೆ ಅವನು ಯೋಸೇಫನನ್ನ ಆಶೀರ್ವದಿಸ್ತಾ ಹೀಗಂದ:+ “ನನ್ನ ಅಜ್ಜ ಅಬ್ರಹಾಮ ಮತ್ತು ತಂದೆ ಇಸಾಕ ಯಾರ ಜೊತೆ ನಡೆದ್ರೋ ಆ ಸತ್ಯ ದೇವರು,+ನನ್ನ ಜೀವನಪೂರ್ತಿ ನನ್ನ ಕುರುಬನಾಗಿದ್ದು ಇವತ್ತಿನ ತನಕ ನನ್ನನ್ನ ಕಾದು ಕಾಪಾಡಿದ ಸತ್ಯ ದೇವರು,+ 16  ತನ್ನ ದೂತನ ಮೂಲಕ ನನ್ನನ್ನ ಎಲ್ಲ ಸಂಕಷ್ಟಗಳಿಂದ+ ಯಾವಾಗ್ಲೂ ಬಿಡಿಸಿದ ದೇವರು ಈ ಹುಡುಗರನ್ನ ಆಶೀರ್ವದಿಸಲಿ.+ ಇವರನ್ನ ಜನ್ರು ನನ್ನ ಹೆಸರಿಂದ ನನ್ನ ಅಜ್ಜ ಅಬ್ರಹಾಮ ಮತ್ತು ತಂದೆ ಇಸಾಕನ ಹೆಸರಿಂದ ಕರಿಲಿ. ಭೂಮಿ ಮೇಲೆ ಇವರ ಸಂಖ್ಯೆ ತುಂಬ ಹೆಚ್ಚಾಗ್ಲಿ.”+ 17  ತಂದೆ ಎಫ್ರಾಯೀಮನ ತಲೆ ಮೇಲೆ ತನ್ನ ಬಲಗೈ ಇಟ್ಟಿರೋದನ್ನ ನೋಡಿ ಯೋಸೇಫನಿಗೆ ಬೇಸರ ಆಯ್ತು. ಹಾಗಾಗಿ ಅವನು ತಂದೆ ಕೈಹಿಡಿದು ಎಫ್ರಾಯೀಮನ ತಲೆ ಮೇಲಿಂದ ಮನಸ್ಸೆಯ ತಲೆ ಮೇಲಿಡೋಕೆ ಪ್ರಯತ್ನಿಸಿದ. 18  ಯೋಸೇಫ ತಂದೆಗೆ “ಅಪ್ಪ, ದೊಡ್ಡ ಮಗ+ ಅವನಲ್ಲ ಇವನು. ನಿನ್ನ ಬಲಗೈಯನ್ನ ಇವನ ತಲೆ ಮೇಲಿಡು” ಅಂದ. 19  ಆದ್ರೆ ಅವನ ತಂದೆ ನಿರಾಕರಿಸ್ತಾ “ನನಗೆ ಗೊತ್ತು ಮಗ, ನನಗೆ ಗೊತ್ತು. ಅವನ ವಂಶಜರು ಕೂಡ ದೊಡ್ಡ ಜನಸಮೂಹ ಆಗ್ತಾರೆ. ಅವನು ಕೂಡ ಪ್ರಧಾನ ವ್ಯಕ್ತಿಯಾಗ್ತಾನೆ. ಆದ್ರೆ ಅವನ ತಮ್ಮ ಅವನಿಗಿಂತ ಹೆಚ್ಚು ಪ್ರಧಾನನಾಗ್ತಾನೆ.+ ಇವನ ವಂಶ ಎಷ್ಟು ದೊಡ್ಡದಾಗುತ್ತೆ ಅಂದ್ರೆ ಅವರು ಅನೇಕ ಜನಾಂಗಗಳಿಗೆ ಸಮಾನರಾಗಿ ಇರ್ತಾರೆ” ಅಂದ.+ 20  ಆ ದಿನ ಅವನು ಅವರನ್ನ ಇನ್ನೂ ಆಶೀರ್ವದಿಸ್ತಾ+ “ಇಸ್ರಾಯೇಲ್ಯರು ಬೇರೆಯವರನ್ನ ಆಶೀರ್ವದಿಸುವಾಗ,‘ದೇವರು ಎಫ್ರಾಯೀಮ್‌ ಮತ್ತು ಮನಸ್ಸೆಗೆ ಆಶೀರ್ವಾದ ಮಾಡಿದ ಹಾಗೆ ನಿನ್ನನ್ನೂ ಆಶೀರ್ವದಿಸಲಿ’ ಅಂತ ಹೇಳಲಿ” ಅಂದ. ಹೀಗೆ ಅವರಿಗೆ ಆಶೀರ್ವಾದ ಮಾಡುವಾಗ ಮನಸ್ಸೆಗೆ ಬದಲಾಗಿ ಎಫ್ರಾಯೀಮನಿಗೆ ಮೊದಲ ಸ್ಥಾನ ಕೊಟ್ಟ. 21  ಆಮೇಲೆ ಇಸ್ರಾಯೇಲ ಯೋಸೇಫನಿಗೆ “ನಾನು ಇನ್ನು ತುಂಬ ದಿನ ಬದುಕಲ್ಲ.+ ಆದ್ರೆ ದೇವರು ನಿಮ್ಮ ಜೊತೆ ಯಾವಾಗ್ಲೂ ಇರ್ತಾನೆ. ನಿಮ್ಮ ಪೂರ್ವಜರಿದ್ದ ದೇಶಕ್ಕೆ ನಿಮ್ಮನ್ನ ಮತ್ತೆ ಕರ್ಕೊಂಡು ಹೋಗ್ತಾನೆ.+ 22  ನಾನು ಕತ್ತಿ ಮತ್ತು ಬಿಲ್ಲಿಂದ ನನ್ನದಾಗಿ ಮಾಡ್ಕೊಂಡ ಅಮೋರಿಯರ ದೇಶದಲ್ಲಿ ನಿನಗೆ ನಿನ್ನ ಅಣ್ಣತಮ್ಮಂದಿರಿಗಿಂತ ಒಂದು ಭಾಗ* ಹೆಚ್ಚು ಕೊಡ್ತೀನಿ” ಅಂದ.

ಪಾದಟಿಪ್ಪಣಿ

ಅಥವಾ “ಸಂತಾನವನ್ನ.”
ಅಥವಾ “ಒಂದು ಇಳಿಜಾರು ಪ್ರದೇಶ.”