ಆಮೋಸ 7:1-17
7 ವಿಶ್ವದ ರಾಜ ಯೆಹೋವ ನನಗೆ ಒಂದು ದರ್ಶನ ತೋರಿಸಿದನು. ಅದ್ರಲ್ಲಿ ಆತನು ಮಿಡತೆಗಳ ಗುಂಪೊಂದನ್ನ ಕಳಿಸಿದನು. ಆಗ ಚಳಿಗಾಲದ* ಬೆಳೆ ಫಸಲು ಕೊಡೋಕೆ ಶುರು ಆಗಿತ್ತಷ್ಟೇ. ಅದು ರಾಜನಿಗಾಗಿ ಹುಲ್ಲನ್ನ ಕತ್ತರಿಸಿದ ಮೇಲೆ ಬೆಳೆಸಿದ ಬೆಳೆಯಾಗಿತ್ತು.
2 ಆ ಮಿಡತೆಗಳು ದೇಶದ ಬೆಳೆಯನ್ನೆಲ್ಲ ತಿಂದುಬಿಟ್ಟವು. ಅದನ್ನ ನೋಡಿ ನಾನು “ವಿಶ್ವದ ರಾಜ ಯೆಹೋವನೇ, ದಯವಿಟ್ಟು ನಿನ್ನ ಜನ್ರನ್ನ ಕ್ಷಮಿಸು.+ ಇಲ್ಲದಿದ್ರೆ ಯಾಕೋಬ ಬದುಕಿ ಉಳಿಯಲ್ಲ. ಯಾಕಂದ್ರೆ ಅವನು ಬಲಹೀನ”+ ಅಂದೆ.
3 ಹಾಗಾಗಿ ಯೆಹೋವ ತಾನು ಮಾಡಿದ ತೀರ್ಮಾನ ಬದಲಾಯಿಸ್ಕೊಂಡನು.*+ ಯೆಹೋವ ನನಗೆ “ಸರಿ, ಹಾಗೆ ಮಾಡಲ್ಲ” ಅಂದನು.
4 ಆಮೇಲೆ ವಿಶ್ವದ ರಾಜ ಯೆಹೋವ ಇನ್ನೊಂದು ದರ್ಶನ ತೋರಿಸಿದನು. ಅದ್ರಲ್ಲಿ ವಿಶ್ವದ ರಾಜ ಯೆಹೋವ ತನ್ನ ಜನ್ರನ್ನ ಶಿಕ್ಷಿಸೋಕೆ ಬೆಂಕಿ ಬರೋ ತರ ಆಜ್ಞೆ ಕೊಟ್ಟನು. ಆ ಬೆಂಕಿ ಉರಿತಾ ಸಮುದ್ರದ ನೀರನ್ನ ಒಣಗಿಸಿಬಿಟ್ಟಿತು ಮತ್ತು ದೇಶದ ಒಂದು ಭಾಗವನ್ನ ಸುಟ್ಟುಬಿಟ್ಟಿತು.
5 ಅದನ್ನ ನೋಡಿ ನಾನು “ವಿಶ್ವದ ರಾಜ ಯೆಹೋವನೇ, ಹಾಗೆ ಆಗದಿರಲಿ, ದಯವಿಟ್ಟು ಅದನ್ನ ತಡಿ.+ ಇಲ್ಲದಿದ್ರೆ ಯಾಕೋಬ ಬದುಕಿ ಉಳಿಯಲ್ಲ. ಯಾಕಂದ್ರೆ ಅವನು ಬಲಹೀನ”+ ಅಂದೆ.
6 ಹಾಗಾಗಿ ಯೆಹೋವ ತಾನು ಮಾಡಿದ ತೀರ್ಮಾನ ಬದಲಾಯಿಸ್ಕೊಂಡನು.*+ ವಿಶ್ವದ ರಾಜ ಯೆಹೋವ ನನಗೆ “ಸರಿ, ಇದನ್ನ ಕೂಡ ಮಾಡಲ್ಲ” ಅಂದನು.
7 ಆಮೇಲೆ ಆತನು ಇನ್ನೊಂದು ದರ್ಶನ ತೋರಿಸಿದನು. ಅದ್ರಲ್ಲಿ, ತೂಗುಗುಂಡು* ಬಳಸಿ ಕಟ್ಟಿದ ಒಂದು ಗೋಡೆ ಮೇಲೆ ಯೆಹೋವ ನಿಂತಿದ್ದನು. ಆತನ ಕೈಯಲ್ಲಿ ಒಂದು ತೂಗುಗುಂಡು ಇತ್ತು.
8 ಆಗ ಯೆಹೋವ “ಆಮೋಸ, ನಿನಗೆ ಏನು ಕಾಣ್ತಿದೆ?” ಅಂತ ಕೇಳಿದನು. ಅದಕ್ಕೆ “ತೂಗುಗುಂಡು ಕಾಣಿಸ್ತಿದೆ” ಅಂದೆ. ಆಗ ಯೆಹೋವ “ನಾನು ನನ್ನ ಜನ್ರಾದ ಇಸ್ರಾಯೇಲ್ಯರ ಮಧ್ಯದಲ್ಲಿ ತೂಗುಗುಂಡನ್ನ ಹಿಡಿತೀನಿ. ನಾನು ಇನ್ನು ಮುಂದೆ ಅವ್ರನ್ನ ಕ್ಷಮಿಸಲ್ಲ.+
9 ನಾನು ಇಸಾಕನ ಪೂಜಾಸ್ಥಳಗಳನ್ನ+ ಹಾಳುಮಾಡ್ತೀನಿ, ಇಸ್ರಾಯೇಲನ ಪವಿತ್ರ ಸ್ಥಳಗಳನ್ನ ನಾಶಮಾಡ್ತೀನಿ.+ ಯಾರೊಬ್ಬಾಮನ ಕುಟುಂಬದವ್ರನ್ನ ನಾಶಮಾಡೋಕೆ ಕತ್ತಿ ಹಿಡಿದು ಬರ್ತಿನಿ”+ ಅಂದನು.
10 ಬೆತೆಲಿನ+ ಪುರೋಹಿತ ಅಮಚ್ಯ ಇಸ್ರಾಯೇಲಿನ ರಾಜ ಯಾರೊಬ್ಬಾಮನಿಗೆ+ “ಆಮೋಸ ಇಸ್ರಾಯೇಲಿನ ಮಧ್ಯದಲ್ಲೇ ನಿನಗೆ ವಿರುದ್ಧ ಸಂಚು ಮಾಡ್ತಿದ್ದಾನೆ.+ ಜನ್ರಿಗೆ ಅವನು ಹೇಳ್ತಿರೋ ಮಾತುಗಳನ್ನ ಕೇಳಿಸ್ಕೊಳ್ಳೋಕೆ ಆಗ್ತಿಲ್ಲ.+
11 ‘ಯಾರೊಬ್ಬಾಮ ಕತ್ತಿಯಿಂದ ಸಾಯ್ತಾನೆ, ಇಸ್ರಾಯೇಲಿನ ಜನ ತಮ್ಮ ಸ್ವದೇಶದಿಂದ ಖಂಡಿತ ಕೈದಿಯಾಗಿ ಹೋಗ್ತಾರೆ’+ ಅಂತ ಆಮೋಸ ಹೇಳ್ತಿದ್ದಾನೆ” ಅಂತ ಹೇಳಿ ಕಳಿಸಿದ.
12 ಆಮೇಲೆ ಅಮಚ್ಯ ಆಮೋಸನಿಗೆ “ದರ್ಶನ ನೋಡುವವನೇ, ಯೆಹೂದ ದೇಶಕ್ಕೆ ಓಡಿಹೋಗು. ಅಲ್ಲೇ ನಿನ್ನ ಹೊಟ್ಟೆ ತುಂಬಿಸ್ಕೊ ಮತ್ತು ಭವಿಷ್ಯ ಹೇಳು.+
13 ಆದ್ರೆ ಇನ್ನು ಮುಂದೆ ಬೆತೆಲಲ್ಲಿ ನೀನು ಭವಿಷ್ಯ ಹೇಳಬಾರದು.+ ಯಾಕಂದ್ರೆ ಇದು ರಾಜನ ಪವಿತ್ರ ಸ್ಥಳ+ ಮತ್ತು ಈ ರಾಜ್ಯದ ಆಲಯ” ಅಂದ.
14 ಅದಕ್ಕೆ ಆಮೋಸ ಅಮಚ್ಯನಿಗೆ “ನಾನು ಪ್ರವಾದಿ ಆಗಿರಲಿಲ್ಲ, ನನ್ನ ತಂದೆನೂ ಪ್ರವಾದಿ ಆಗಿರಲಿಲ್ಲ. ನಾನು ಕುರುಬನಾಗಿದ್ದೆ+ ಮತ್ತು ಸಿಕಮೋರ್ ಅಂಜೂರ ಮರಗಳನ್ನ ನೋಡ್ಕೊಳ್ತಿದ್ದೆ.*
15 ಆದ್ರೆ ಯೆಹೋವ ನನಗೆ ಹಿಂಡನ್ನ ನೋಡ್ಕೋಳ್ಳೋದನ್ನ ಬಿಟ್ಟು ಬಾ ಅಂತ ಹೇಳಿದನು. ಅಷ್ಟೇ ಅಲ್ಲ ಯೆಹೋವ ನನಗೆ ‘ಹೋಗು, ನನ್ನ ಜನ್ರಾದ ಇಸ್ರಾಯೇಲ್ಯರಿಗೆ ಭವಿಷ್ಯವಾಣಿ ಹೇಳು’+ ಅಂದನು.
16 ಈಗ ಯೆಹೋವನ ಮಾತನ್ನ ಕೇಳು: ‘“ಇಸ್ರಾಯೇಲಿಗೆ ವಿರುದ್ಧ ಭವಿಷ್ಯ ಹೇಳಬೇಡ,+ ಇಸಾಕನ ವಂಶದವರ ವಿರುದ್ಧ ಸಾರಬೇಡ”+ ಅಂತ ನೀನು ಹೇಳ್ತಿಯಲ್ಲಾ.
17 ಹಾಗಾಗಿ ಯೆಹೋವ ಹೀಗೆ ಹೇಳ್ತಾನೆ: “ನಿನ್ನ ಹೆಂಡತಿ ಪಟ್ಟಣದಲ್ಲಿ ವೇಶ್ಯೆಯಾಗ್ತಾಳೆ. ನಿನ್ನ ಮಕ್ಕಳು ಕತ್ತಿಗೆ ಬಲಿ ಆಗ್ತಾರೆ. ನಿನ್ನ ಜಮೀನನ್ನ ಅಳತೆ ಮಾಡಿ ಪಾಲು ಮಾಡ್ಕೊಳ್ಳಲಾಗುತ್ತೆ. ಅಶುದ್ಧವಾದ ಒಂದು ದೇಶದಲ್ಲಿ ನೀನು ಸಾಯ್ತೀಯ. ಇಸ್ರಾಯೇಲ್ ಸ್ವದೇಶದಿಂದ ಕೈದಿಯಾಗಿ ಹೋಗೋದು ಖಂಡಿತ”’”+ ಅಂತ ಹೇಳಿದ.
ಪಾದಟಿಪ್ಪಣಿ
^ ಅಂದ್ರೆ, ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ.
^ ಅಥವಾ “ಮನಮರುಗಿದನು.”
^ ಅಥವಾ “ಮನಮರುಗಿದನು.”
^ ಅಥವಾ “ನೂಲುಗುಂಡು.”
^ ಅಥವಾ “ಸಿಕಮೋರ್ ಅಂಜೂರಗಳನ್ನ ಚುಚ್ಚೋ ಕೆಲಸ ಮಾಡ್ತಿದ್ದೆ.”