ಇಬ್ರಿಯರಿಗೆ ಬರೆದ ಪತ್ರ 11:1-40
11 ನಂಬಿಕೆ ಅಂದ್ರೆ ನಿರೀಕ್ಷಿಸೋ ವಿಷ್ಯ ನಡೆದೇ ನಡಿಯುತ್ತೆ ಅನ್ನೋ ದೃಢ ಭರವಸೆ.+ ನಂಬಿಕೆ ಅಂದ್ರೆ ಒಂದು ವಿಷ್ಯ ಕಣ್ಣಿಗೆ ಕಾಣದೆ ಇದ್ರೂ ಅದು ನಿಜವಾಗ್ಲೂ ಇದೆ ಅನ್ನೋದಕ್ಕಿರೋ ಸ್ಪಷ್ಟ ಸಾಕ್ಷಿ.*
2 ಅಂಥ ನಂಬಿಕೆ ಹಿಂದಿನ ಕಾಲದ ಜನ್ರಲ್ಲಿ* ಇತ್ತು. ಹಾಗಾಗಿ ಅವ್ರಿಂದ ‘ನನಗೆ ಖುಷಿ ಆಗಿದೆ’ ಅಂತ ದೇವರು ಅವ್ರಿಗೆ ತೋರಿಸ್ಕೊಟ್ಟನು.
3 ನಂಬಿಕೆಯಿಂದಾನೇ ನಾವು ಅರ್ಥ ಮಾಡ್ಕೊಂಡಿರೋ ವಿಷ್ಯ ಏನಂದ್ರೆ ಈ ವಿಶ್ವದಲ್ಲಿ* ಇರೋದೆಲ್ಲ ದೇವರ ಮಾತಿಂದ ಸೃಷ್ಟಿ ಆಯ್ತು, ಕಾಣದೆ ಇರೋ ವಿಷ್ಯಗಳಿಂದ ಕಾಣೋ ವಿಷ್ಯ ಬಂದಿದೆ.
4 ನಂಬಿಕೆಯಿಂದಾನೇ ಹೇಬೆಲ ಕಾಯಿನ ಕೊಟ್ಟಿದ್ದಕ್ಕಿಂತ ಶ್ರೇಷ್ಠ ಬಲಿಯನ್ನ ದೇವರಿಗೆ ಕೊಟ್ಟ.+ ಈ ನಂಬಿಕೆ ಇದ್ದಿದ್ರಿಂದಾನೇ ಅವನು ನೀತಿವಂತ ಅಂತ ದೇವರು ತೋರಿಸ್ಕೊಟ್ಟನು. ಹೇಗಂದ್ರೆ ಅವನ ಕಾಣಿಕೆಯನ್ನ ದೇವರು ಸ್ವೀಕರಿಸಿದನು.+ ಅವನು ಸತ್ತುಹೋಗಿದ್ರೂ ಅವನ ನಂಬಿಕೆ ನಮಗೆ ಕಲಿಸ್ತಾ* ಇದೆ.+
5 ನಂಬಿಕೆ ಇದ್ದಿದ್ರಿಂದಾನೇ ಹನೋಕನನ್ನ+ ದೇವರು ಬೇರೆ ಜಾಗಕ್ಕೆ ತಗೊಂಡು ಹೋದನು. ಅವನು ನರಳಿ ಸಾಯಬಾರದು ಅಂತ ಹಾಗೆ ಮಾಡಿದನು. ಅದಕ್ಕೇ ಅವನು ಯಾರಿಗೂ ಸಿಗಲಿಲ್ಲ.+ ಆದ್ರೆ ಅವನನ್ನ ತಗೊಂಡು ಹೋಗೋ ಮುಂಚೆನೇ ಅವನು ದೇವರಿಗೆ ಖುಷಿಯಾಗೋ ತರ ನಡ್ಕೊಂಡಿದ್ದಾನೆ ಅಂತ ದೇವರು ಅವನಿಗೆ ತೋರಿಸ್ಕೊಟ್ಟನು.
6 ನಂಬಿಕೆ ಇಲ್ಲದೆ ಇದ್ರೆ ದೇವರನ್ನ ಖುಷಿಪಡಿಸೋಕೆ ಆಗೋದೇ ಇಲ್ಲ. ಯಾಕಂದ್ರೆ ದೇವರಿಗೆ ಹತ್ರ ಆಗೋಕೆ ಇಷ್ಟಪಡುವವರು ಆತನು ಇದ್ದಾನೆ ಅಂತ, ಆತನನ್ನ ಶ್ರದ್ಧೆಯಿಂದ ಆರಾಧಿಸೋರನ್ನ ಆತನು ಆಶೀರ್ವದಿಸ್ತಾನೆ* ಅಂತ ನಂಬಬೇಕು.+
7 ನಂಬಿಕೆ ಇದ್ದಿದ್ರಿಂದಾನೇ ನೋಹ+ ಅವನ ಜೀವನದಲ್ಲೇ ನೋಡ್ದೆ ಇದ್ದ+ ವಿಷ್ಯದ ಬಗ್ಗೆ ದೇವರು ಎಚ್ಚರಿಕೆ ಕೊಟ್ಟಾಗ ಆತನ ಮಾತನ್ನ ಪಾಲಿಸಿದ* ಮತ್ತು ತನ್ನ ಕುಟುಂಬವನ್ನ ಕಾಪಾಡೋಕೆ ಒಂದು ದೊಡ್ಡ ಹಡಗನ್ನ ಕಟ್ಟಿದ.+ ಈ ನಂಬಿಕೆಯಿಂದಾನೇ ಅವನು ಈ ಲೋಕ ಶಿಕ್ಷೆ ಪಡಿಯೋಕೆ ಯೋಗ್ಯವಾಗಿದೆ ಅಂತ ತೋರಿಸಿದ.+ ಅವನ ನಂಬಿಕೆಯಿಂದಾನೇ ಅವನು ದೇವರ ದೃಷ್ಟಿಯಲ್ಲಿ ನೀತಿವಂತನಾದ.
8 ನಂಬಿಕೆ ಇದ್ದಿದ್ರಿಂದಾನೇ ಅಬ್ರಹಾಮ+ ದೇವರ ಮಾತನ್ನ ಕೇಳಿ ಆತನು ಆಸ್ತಿಯಾಗಿ ಕೊಡೋ ಜಾಗಕ್ಕೆ ಹೊರಟ. ಅವನು ಎಲ್ಲಿಗೆ ಹೋಗ್ತಿದ್ದಾನೆ ಅಂತ ಅವನಿಗೇ ಗೊತ್ತಿಲ್ಲದೆ ಇದ್ರೂ ಅವನು ತನ್ನ ಊರು ಬಿಟ್ಟು ಹೋದ.+
9 ನಂಬಿಕೆಯಿಂದಾನೇ ಅವನು, ಅವನಿಗೆ ಕೊಡ್ತೀನಿ ಅಂತ ದೇವರು ಮಾತುಕೊಟ್ಟಿದ್ದ ದೇಶದಲ್ಲಿ ವಿದೇಶಿಯಾಗಿ ವಾಸಿಸಿದ.+ ಅವನು ಇಸಾಕ, ಯಾಕೋಬರ ಜೊತೆ ಡೇರೆಗಳಲ್ಲಿ ವಾಸಿಸಿದ.+ ಅವ್ರಿಗೂ ದೇವರು ಆ ದೇಶ ಕೊಡ್ತೀನಿ ಅಂತ ಮಾತುಕೊಟ್ಟನು.+
10 ಅವನು ನಿಜವಾದ ಅಡಿಪಾಯ ಇರೋ ಪಟ್ಟಣಕ್ಕಾಗಿ ಕಾಯ್ತಿದ್ದ. ಅದನ್ನ ರಚಿಸಿದವನು,* ನಿರ್ಮಿಸಿದವನು ದೇವರೇ.+
11 ನಂಬಿಕೆ ಇದ್ದಿದ್ರಿಂದಾನೇ ಸಾರಗೆ ಮಕ್ಕಳಾಗೋ ವಯಸ್ಸು ದಾಟಿದ್ರೂ ಗರ್ಭಿಣಿ ಆಗೋಕೆ ಶಕ್ತಿ ಪಡ್ಕೊಂಡಳು.+ ಮಾತು ಕೊಟ್ಟ ದೇವರು ನಂಬಿಗಸ್ತ* ಅಂತ ಅವಳು ನಂಬಿದಳು.
12 ಅದಕ್ಕೇ ಮಕ್ಕಳನ್ನ ಪಡಿಯೋಕೆ ಶಕ್ತಿ ಇಲ್ಲದಿದ್ದ* ಒಬ್ಬ ಮನುಷ್ಯನಿಂದ+ ಆಕಾಶದ ನಕ್ಷತ್ರಗಳ ತರ, ಸಮುದ್ರ ತೀರದ ಮರಳಿನ ತರ ಲೆಕ್ಕ ಇಲ್ಲದಷ್ಟು+ ಮಕ್ಕಳು ಹುಟ್ಟಿದ್ರು.+
13 ದೇವರು ಮಾತುಕೊಟ್ಟ ವಿಷ್ಯಗಳು ಅವ್ರ ಜೀವಮಾನದಲ್ಲಿ ನಡಿಯದೆ ಇದ್ರೂ ಸಾಯೋ ತನಕ ಅವ್ರೆಲ್ಲ ನಂಬಿಕೆ ಇಟ್ರು.+ ಆ ವಿಷ್ಯಗಳನ್ನ ದೂರದಿಂದಾನೇ ನೋಡಿ ಖುಷಿಪಟ್ರು.+ ಅಷ್ಟೇ ಅಲ್ಲ ‘ನಾವು ಈ ದೇಶದವ್ರಲ್ಲ, ಸ್ವಲ್ಪ ಸಮಯಕ್ಕೆ ಇಲ್ಲಿದ್ದೀವಿ’ ಅಂತ ಆ ದೇಶದಲ್ಲಿ ಎಲ್ರಿಗೆ ತಿಳಿಸಿದ್ರು.
14 ಯಾಕಂದ್ರೆ ಹೀಗೆ ಹೇಳುವವರು ತಮಗೆ ಸ್ವಂತ ಆಗಬೇಕಾಗಿರೋ ಜಾಗವನ್ನ ಶ್ರದ್ಧೆಯಿಂದ ಹುಡುಕ್ತಿದ್ದಾರೆ ಅನ್ನೋದಕ್ಕೆ ಸಾಕ್ಷಿ ಕೊಡ್ತಾರೆ.
15 ಅವರು ಬಿಟ್ಟು ಬಂದ ಜಾಗವನ್ನ ಅವರು ನೆನಪಿಸ್ಕೊಳ್ತಾ ಇದ್ದಿದ್ರೆ ಅಲ್ಲಿಗೆ ವಾಪಸ್ ಹೋಗೋಕೆ ಅವಕಾಶ ಇರ್ತಿತ್ತು.+
16 ಆದ್ರೆ ಈಗ ಅವರು ಒಂದು ಶ್ರೇಷ್ಠ ಜಾಗವನ್ನ ಅಂದ್ರೆ ಸ್ವರ್ಗಕ್ಕೆ ಸೇರಿದ ಜಾಗವನ್ನ ಪಡಿಯೋಕೆ ಪ್ರಯತ್ನಿಸ್ತಿದ್ದಾರೆ. ಹಾಗಾಗಿ ದೇವರು ಅವ್ರ ಬಗ್ಗೆ ‘ನಾನೇ ಅವ್ರ ದೇವರು’ ಅಂತ ಹೇಳ್ಕೊಳ್ಳೋಕೆ ನಾಚಿಕೆಪಡಲ್ಲ.+ ಆತನು ಅವ್ರಿಗಾಗಿ ಒಂದು ಪಟ್ಟಣವನ್ನೂ ಸಿದ್ಧಮಾಡಿದ್ದಾನೆ.+
17 ನಂಬಿಕೆ ಇದ್ದಿದ್ರಿಂದ ಅಬ್ರಹಾಮ, ಪರೀಕ್ಷೆ ಬಂದಾಗ+ ಇಸಾಕನನ್ನ ಬಲಿ ಕೊಡೋಷ್ಟರ ಮಟ್ಟಿಗೆ ಹೋದ. ದೇವರು ಮಾತು ಕೊಟ್ಟಾಗ ಖುಷಿಪಟ್ಟ ಅವನು ತನ್ನ ಒಬ್ಬನೇ ಮಗನನ್ನ ಕೊಡೋಕೆ ಮುಂದೆ ಬಂದ.+
18 “ನಾನು ನಿನಗೆ ಮಾತು ಕೊಟ್ಟ ಸಂತಾನ ಇಸಾಕನ ವಂಶದಲ್ಲೇ ಬರುತ್ತೆ” ಅಂತ ದೇವರು ಅವನಿಗೆ ಹೇಳಿದ್ರೂ ಹಾಗೆ ಮಾಡೋಕೆ ಮುಂದೆ ಬಂದ.+
19 ಯಾಕಂದ್ರೆ ತನ್ನ ಮಗನಿಗೆ ಮತ್ತೆ ಜೀವ ಕೊಡೋಕೆ ದೇವ್ರಿಗೆ ಆಗುತ್ತೆ ಅಂತ ಅವನು ನಂಬಿದ್ದ. ನಿಜವಾಗ್ಲೂ ಅವನು ಸಾವಿನ ಬಾಯಿಂದ ತನ್ನ ಮಗನನ್ನ ಪಡ್ಕೊಂಡ. ಇದು ಭವಿಷ್ಯದಲ್ಲಿ ನಡಿಯೋ ವಿಷ್ಯಕ್ಕೆ ಒಂದು ಉದಾಹರಣೆ.+
20 ನಂಬಿಕೆ ಇದ್ದಿದ್ರಿಂದಾನೇ ಇಸಾಕ ಮುಂದೆ ನಡಿಯೋ ವಿಷ್ಯಗಳನ್ನ ಹೇಳಿ ಯಾಕೋಬ+ ಏಸಾವನಿಗೆ+ ಆಶೀರ್ವಾದ ಮಾಡ್ದ.
21 ನಂಬಿಕೆ ಇದ್ದಿದ್ರಿಂದಾನೇ ಯಾಕೋಬ ಇನ್ನೇನು ಸಾಯಬೇಕು ಅನ್ನುವಾಗ+ ಯೋಸೇಫನ ಇಬ್ರು ಗಂಡುಮಕ್ಕಳನ್ನ ಆಶೀರ್ವದಿಸಿದ,+ ತನ್ನ ಕೋಲಿನ ಮೇಲೆ ಊರಿಕೊಂಡು ದೇವರನ್ನ ಆರಾಧಿಸಿದ.+
22 ನಂಬಿಕೆ ಇದ್ದಿದ್ರಿಂದಾನೇ ಯೋಸೇಫ ಸಾಯೋ ಮುಂಚೆ ಇಸ್ರಾಯೇಲ್ಯರು ಒಂದು ದಿನ ಈಜಿಪ್ಟನ್ನ ಬಿಟ್ಟು ಹೋಗ್ತಾರೆ ಅಂತ ಹೇಳಿದ. ‘ಹೋಗುವಾಗ ನನ್ನ ಮೂಳೆಗಳನ್ನ ತಗೊಂಡು ಹೋಗಿ’ ಅಂತ ಆಜ್ಞೆ ಕೊಟ್ಟ.+
23 ನಂಬಿಕೆ ಇದ್ದಿದ್ರಿಂದಾನೇ ಮೋಶೆಯ ಅಪ್ಪ ಅಮ್ಮ ಅವನು ಹುಟ್ಟಿದಾಗ ರಾಜನ ಆಜ್ಞೆಗೆ ಭಯಪಡದೆ+ ಮುದ್ದುಮುದ್ದಾಗಿದ್ದ+ ಅವನನ್ನ ಮೂರು ತಿಂಗಳು ಬಚ್ಚಿಟ್ರು.+
24 ನಂಬಿಕೆ ಇದ್ದಿದ್ರಿಂದಾನೇ ಮೋಶೆ ದೊಡ್ಡವನಾದಾಗ+ ಫರೋಹನ ಮಗಳ ಮಗ ಅಂತ ಕರೆಸ್ಕೊಳ್ಳೋಕೆ ಅವನು ಇಷ್ಟಪಡಲಿಲ್ಲ.+
25 ಸ್ವಲ್ಪ ದಿನ ಪಾಪದ ಸುಖ ಅನುಭವಿಸೋದಕ್ಕಿಂತ ದೇವರ ಜನ್ರ ಜೊತೆ ಕಷ್ಟ ಅನುಭವಿಸೋದನ್ನ ಆರಿಸ್ಕೊಂಡ.
26 ಈಜಿಪ್ಟಿನ ಸಿರಿಸಂಪತ್ತಿಗಿಂತ ದೇವರ ಅಭಿಷಿಕ್ತನಾಗಿ* ಪಡೋ ಅವಮಾನನೇ ದೊಡ್ಡ ಐಶ್ವರ್ಯ ಅಂತ ನೆನಸಿದ. ಯಾಕಂದ್ರೆ ಅವನು ಅವನಿಗೆ ಸಿಗೋ ಬಹುಮಾನದ ಮೇಲೆನೇ ತನ್ನ ದೃಷ್ಟಿ ಇಟ್ಟ.
27 ನಂಬಿಕೆ ಇದ್ದಿದ್ರಿಂದಾನೇ ಅವನು ರಾಜನ ಕೋಪಕ್ಕೆ ಭಯಪಡದೆ+ ಈಜಿಪ್ಟನ್ನ ಬಿಟ್ಟುಹೋದ.+ ಯಾಕಂದ್ರೆ ಕಣ್ಣಿಗೆ ಕಾಣದ ದೇವರನ್ನ ನೋಡ್ತಿದ್ದಾನೆ ಅನ್ನೋ ಹಾಗೆ ಅವನು ತಾಳ್ಮೆಯಿಂದ ಸಹಿಸ್ಕೊಳ್ತಾ ಮುಂದುವರಿದ.+
28 ನಂಬಿಕೆ ಇದ್ದಿದ್ರಿಂದಾನೇ ಅವನು ಪಸ್ಕ ಹಬ್ಬ ಆಚರಿಸಿದ ಮತ್ತು ಬಾಗಿಲಿನ ಚೌಕಟ್ಟಿನ ಮೇಲೆ ರಕ್ತ ಚಿಮಿಕಿಸಿದ. ಇಸ್ರಾಯೇಲ್ಯರಿಗೆ ಮೊದಲು ಹುಟ್ಟಿದ ಮಕ್ಕಳನ್ನ ವಿನಾಶಕ ಕೊಲ್ಲಬಾರದು* ಅಂತ ಹಾಗೆ ಮಾಡಿದ.+
29 ನಂಬಿಕೆ ಇದ್ದಿದ್ರಿಂದಾನೇ ಅವರು ಕೆಂಪು ಸಮುದ್ರ ದಾಟುವಾಗ ಒಣಗಿದ ನೆಲದ ಮೇಲೆ ನಡಿಯೋ ತರ ನಡೆದ್ರು,+ ಆದ್ರೆ ಈಜಿಪ್ಟ್ ದೇಶದವರು ಅದನ್ನ ದಾಟೋಕೆ ಪ್ರಯತ್ನಿಸಿದಾಗ ಮುಳುಗಿಹೋದ್ರು.+
30 ನಂಬಿಕೆ ಇದ್ದಿದ್ರಿಂದಾನೇ ಇಸ್ರಾಯೇಲ್ಯರು ಏಳು ದಿನ ಯೆರಿಕೋ ಪಟ್ಟಣದ ಗೋಡೆ ಸುತ್ತ ಸುತ್ತಿದ್ರು. ಆಮೇಲೆ ಆ ಗೋಡೆ ಬಿದ್ದುಹೋಯ್ತು.+
31 ನಂಬಿಕೆ ಇದ್ದಿದ್ರಿಂದಾನೇ ವೇಶ್ಯೆಯಾದ ರಾಹಾಬ ದೇವರ ಮಾತನ್ನ ಕೇಳದ ಜನ್ರ ಜೊತೆ ನಾಶ ಆಗಲಿಲ್ಲ. ಯಾಕಂದ್ರೆ ಅವಳು ಗೂಢಚಾರರನ್ನ ಸ್ನೇಹಿತರ ತರ ಸ್ವಾಗತಿಸಿದಳು.+
32 ಇನ್ಯಾರ ಬಗ್ಗೆ ನಾನು ಹೇಳಲಿ? ಗಿದ್ಯೋನ್,+ ಬಾರಾಕ್,+ ಸಂಸೋನ,+ ಯೆಫ್ತಾಹ,+ ದಾವೀದ,+ ಸಮುವೇಲ+ ಮತ್ತು ಬೇರೆ ಪ್ರವಾದಿಗಳ ಬಗ್ಗೆ ನಾನು ವಿವ್ರವಾಗಿ ಹೇಳಬೇಕಾದ್ರೆ ನನಗೆ ಸಮಯ ಸಾಕಾಗಲ್ಲ.
33 ನಂಬಿಕೆ ಇದ್ದಿದ್ರಿಂದಾನೇ ಅವರು ರಾಜ್ಯಗಳನ್ನ ಸೋಲಿಸಿದ್ರು,+ ನೀತಿಯನ್ನ ಎತ್ತಿಹಿಡಿದ್ರು, ದೇವರು ಅವ್ರಿಗೆ ಮಾತು ಕೊಟ್ಟನು,+ ಸಿಂಹಗಳ ಬಾಯಿ ಮುಚ್ಚಿದ್ರು,+
34 ಧಗಧಗ ಅಂತ ಉರಿಯೋ ಬೆಂಕಿಯನ್ನ ಆರಿಸಿದ್ರು,+ ಕತ್ತಿಗೆ ಬಲಿ ಆಗೋದ್ರಿಂದ ತಪ್ಪಿಸ್ಕೊಂಡ್ರು,+ ಬಲ ಇಲ್ಲದೆ ಇದ್ದಾಗ ಅವ್ರನ್ನ ಬಲಿಷ್ಠರಾಗಿ ಮಾಡಲಾಯ್ತು,+ ಅವರು ವೀರ ಸೈನಿಕರಾದ್ರು,+ ದಾಳಿ ಮಾಡಿದ ಸೈನ್ಯಗಳನ್ನ ಸದೆಬಡಿದ್ರು.+
35 ಸ್ತ್ರೀಯರು ತಮ್ಮ ಪ್ರಿಯರನ್ನ ಅಂದ್ರೆ ತೀರಿಹೋದ ಆಪ್ತರನ್ನ ಮತ್ತೆ ಜೀವಂತವಾಗಿ ಪಡ್ಕೊಂಡ್ರು.+ ಬೇರೆಯವರು ಅದಕ್ಕಿಂತ ಉತ್ತಮ ರೀತಿಯಲ್ಲಿ ಮತ್ತೆ ಜೀವ ಪಡ್ಕೊಳ್ಳೋಕೆ ಚಿತ್ರಹಿಂಸೆಯನ್ನ ಸಹಿಸ್ಕೊಂಡ್ರು. ಅದಕ್ಕೇ ಅವರು ರಾಜಿಯಾಗಿ ಬಿಡುಗಡೆ ಆಗೋಕೆ ಒಪ್ಪಲಿಲ್ಲ.
36 ಇನ್ನು ಬೇರೆಯವರು ಅವಮಾನ ಅನುಭವಿಸಿದ್ರು, ಚಾಟಿಯೇಟು ತಿಂದ್ರು, ಅವ್ರ ಪರೀಕ್ಷೆ ಅಷ್ಟಕ್ಕೇ ನಿಲ್ಲಲಿಲ್ಲ. ಅವ್ರ ಕೈಗೆ ಬೇಡಿ ಬಿತ್ತು,+ ಜೈಲಿಗೆ ಹೋದ್ರು.+
37 ಇನ್ನು ಸ್ವಲ್ಪ ಜನ್ರನ್ನ ಕಲ್ಲೆಸೆದು ಕೊಂದ್ರು,+ ನಂಬಿಕೆ ವಿಷ್ಯದಲ್ಲಿ ಕೆಲವ್ರನ್ನ ಪರೀಕ್ಷಿಸಿದ್ರು, ಸ್ವಲ್ಪ ಜನ್ರನ್ನ ಗರಗಸದಿಂದ ಎರಡು ಭಾಗಮಾಡಿದ್ರು, ಇನ್ನು ಸ್ವಲ್ಪ ಜನ್ರನ್ನ ಕತ್ತಿಯಿಂದ ಕೊಂದ್ರು.+ ಸ್ವಲ್ಪ ಜನ ಕುರಿ ಆಡುಗಳ ಚರ್ಮ ಹಾಕೊಂಡು ತಿರುಗಾಡಿದ್ರು,+ ಕಷ್ಟದಲ್ಲಿದ್ರು, ಹಿಂಸೆ ಅನುಭವಿಸಿದ್ರು,+ ಬೇರೆಯವರು ಅವ್ರ ಜೊತೆ ಕೆಟ್ಟದಾಗಿ ನಡ್ಕೊಂಡ್ರು.+
38 ಇಂಥವ್ರನ್ನ ಪಡಿಯೋಕೆ ಈ ಲೋಕಕ್ಕೆ ಯೋಗ್ಯತೆ ಇರಲಿಲ್ಲ. ಅವರು ಮರುಭೂಮಿ ಬೆಟ್ಟ ಗುಹೆ+ ಮತ್ತು ಗುಂಡಿಗಳಲ್ಲಿ ಅಲೆದಾಡಿದ್ರು.
39 ಇವ್ರಿಗೆಲ್ಲ ನಂಬಿಕೆ ಇದ್ದಿದ್ರಿಂದ ದೇವರು ಅವ್ರನ್ನ ಮೆಚ್ಚಿದ್ದಾನೆ ಅಂತ ತೋರಿಸ್ಕೊಟ್ಟನು. ಆದ್ರೂ ಆತನು ಕೊಟ್ಟ ಮಾತುಗಳು ನಿಜ ಆಗೋದನ್ನ ಅವರು ನೋಡಲಿಲ್ಲ.
40 ಯಾಕಂದ್ರೆ ನಮಗಿಂತ ಮುಂಚೆ ಅವರು ಪರಿಪೂರ್ಣರಾಗದ ಹಾಗೆ ದೇವರು ಮೊದ್ಲು ನಮಗೆ ಏನೋ ಉತ್ತಮ ಆಗಿರೋದನ್ನ ಕೊಡಬೇಕು ಅಂದ್ಕೊಂಡನು.+
ಪಾದಟಿಪ್ಪಣಿ
^ ಅಥವಾ “ಬಲವಾದ ಆಧಾರ.”
^ ಅಥವಾ “ನಮ್ಮ ಪೂರ್ವಜರಲ್ಲಿ.”
^ ಪದವಿವರಣೆಯಲ್ಲಿ “ಲೋಕದ ವ್ಯವಸ್ಥೆ” ನೋಡಿ.
^ ಅಕ್ಷ. “ಅವನ ನಂಬಿಕೆ ಮಾತಾಡ್ತಾ.”
^ ಅಥವಾ “ಪ್ರತಿಫಲ ಕೊಡ್ತಾನೆ.”
^ ಅಥವಾ “ಭಯಭಕ್ತಿ ತೋರಿಸಿದ.”
^ ಅಥವಾ “ ಅದ್ರ ವಾಸ್ತುಶಿಲ್ಪಿ.”
^ ಅಥವಾ “ವಿಶ್ವಾಸ ಇಡೋಕೆ ಯೋಗ್ಯ.”
^ ಅಕ್ಷ. “ಸತ್ತ.”
^ ಗ್ರೀಕ್‌ನಲ್ಲಿ “ಕ್ರಿಸ್ತನಾಗಿ.”
^ ಅಕ್ಷ. “ಮುಟ್ಟಬಾರದು.”