ಇಬ್ರಿಯರಿಗೆ ಬರೆದ ಪತ್ರ 4:1-16

  • ದೇವರ ಜೊತೆ ವಿಶ್ರಾಂತಿ ಪಡೆಯೋಕೆ ಯೋಗ್ಯತೆ ಕಳ್ಕೊಳ್ಳಬಾರದು (1-10)

  • ದೇವರ ಜೊತೆ ವಿಶ್ರಾಂತಿ ಪಡೆಯೋಕೆ ಪ್ರೋತ್ಸಾಹ (11-13)

    • ದೇವರ ವಾಕ್ಯಕ್ಕೆ ಜೀವ ಇದೆ (12)

  • ಯೇಸು ಶ್ರೇಷ್ಠ ಮಹಾ ಪುರೋಹಿತ (14-16)

4  ಈಗ್ಲೂ ದೇವರ ಜೊತೆ ವಿಶ್ರಾಂತಿ ಪಡಿಯೋಕೆ ಆಗುತ್ತೆ ಅಂತ ಆತನು ಮಾತುಕೊಟ್ಟಿದ್ದಾನೆ. ಅದಕ್ಕೇ ನಮ್ಮಲ್ಲಿ ಯಾರೂ ಆ ವಿಶ್ರಾಂತಿ ಪಡಿಯೋ ಯೋಗ್ಯತೆ ಕಳ್ಕೊಳ್ಳದ ಹಾಗೆ ಎಚ್ಚರವಾಗಿ ಇರೋಣ.+  ಇಸ್ರಾಯೇಲ್ಯರು ಸಿಹಿಸುದ್ದಿ ಕೇಳಿಸ್ಕೊಂಡ ಹಾಗೆ ನಾವೂ ಸಿಹಿಸುದ್ದಿ ಕೇಳಿಸ್ಕೊಂಡಿದ್ದೀವಿ.+ ಆದ್ರೆ ಅದ್ರಿಂದ ಅವ್ರಿಗೆ ಏನೂ ಪ್ರಯೋಜನ ಆಗಲಿಲ್ಲ. ಯಾಕಂದ್ರೆ ವಿಧೇಯತೆ ತೋರಿಸಿದವ್ರಿಗೆ ಇದ್ದ ಆ ಬಲವಾದ ನಂಬಿಕೆ ಅವ್ರಿಗೆ ಇರಲಿಲ್ಲ.  ನಾವು ನಂಬಿಕೆ ಇಟ್ಟಿರೋದ್ರಿಂದ ದೇವರ ಜೊತೆ ವಿಶ್ರಾಂತಿ ಪಡಿತೀವಿ. ಆದ್ರೆ ಅವ್ರ ವಿಷ್ಯದಲ್ಲಿ ಆತನು “‘ಅವರು ನನ್ನ ಜೊತೆ ವಿಶ್ರಾಂತಿ ಪಡಿಯಲ್ಲ’+ ಅಂತ ನಾನು ಸಿಟ್ಟಿಂದ ಆಣೆ ಮಾಡ್ದೆ” ಅಂದನು. ಆತನು ತನ್ನ ಎಲ್ಲಾ ಕೆಲಸ ಮುಗಿಸಿ ಲೋಕ ಸೃಷ್ಟಿಯಾದಾಗಿಂದ ವಿಶ್ರಾಂತಿ ಪಡೀತಾ ಇದ್ರೂ ಹಾಗೆ ಹೇಳಿದನು.+  ಆತನು ಏಳನೇ ದಿನದ ಬಗ್ಗೆ ಒಂದು ವಚನದಲ್ಲಿ “ದೇವರು ತನ್ನೆಲ್ಲ ಕೆಲಸ ಮುಗಿಸಿ ಏಳನೇ ದಿನ ವಿಶ್ರಮಿಸಿದನು” ಅಂತ ಹೇಳಿದ್ದಾನೆ.+  ಇನ್ನೊಂದು ವಚನದಲ್ಲಿ “ಅವರು ನನ್ನ ಜೊತೆ ವಿಶ್ರಾಂತಿ ಪಡಿಯಲ್ಲ” ಅಂತ ಹೇಳಿದ್ದಾನೆ.+  ಮೊದ್ಲು ಸಿಹಿಸುದ್ದಿ ಕೇಳಿಸ್ಕೊಂಡವರು ಅದನ್ನ ಪಾಲಿಸದೇ ಇದ್ದಿದ್ರಿಂದ ಆ ವಿಶ್ರಾಂತಿ ಪಡಿಲಿಲ್ಲ. ಆದ್ರೆ ಆ ವಿಶ್ರಾಂತಿ ಪಡಿಯೋಕೆ ಕೆಲವ್ರಿಗೆ ಇನ್ನೂ ಅವಕಾಶ ಇದೆ.+  ಅದಕ್ಕೇ ದೇವರು ತುಂಬ ಸಮಯ ಆದ್ಮೇಲೆ ದಾವೀದನ ಕೀರ್ತನೆಯಲ್ಲಿ “ಇವತ್ತು ನೀವು ನನ್ನ ಮಾತಿಗೆ ಗಮನ ಕೊಡುವಾಗ ನಿಮ್ಮ ಹೃದಯ ಕಲ್ಲು ಮಾಡ್ಕೊಬೇಡಿ” ಅಂತ ಹೇಳಿದನು. ಇದನ್ನ ಈಗಾಗ್ಲೇ ಈ ಪತ್ರದಲ್ಲಿ ತಿಳಿಸಿದ್ದೀನಿ. ಅಲ್ಲಿ ಆತನು “ಇವತ್ತು” ಅಂತ ಹೇಳಿ ಒಂದು ದಿನನ ಮತ್ತೆ ಗುರುತಿಸಿದ.+  ಒಂದುವೇಳೆ ಅವ್ರನ್ನ ಯೆಹೋಶುವ+ ವಿಶ್ರಾಂತಿ ಸ್ಥಳಕ್ಕೆ ಕರ್ಕೊಂಡು ಹೋಗಿದ್ರೆ ಸ್ವಲ್ಪ ಸಮಯ ಆದ್ಮೇಲೆ ದೇವರು ಇನ್ನೊಂದು ದಿನದ ಬಗ್ಗೆ ಹೇಳ್ತಿರಲಿಲ್ಲ.  ಹಾಗಾಗಿ ಸಬ್ಬತ್‌ ದಿನದ ತರ ದೇವರ ಜನ್ರಿಗೆ ಒಂದು ವಿಶ್ರಾಂತಿ ದಿನ ಇನ್ನೂ ಇದೆ.+ 10  ದೇವರು ತನ್ನ ಎಲ್ಲಾ ಕೆಲಸ ಮುಗಿಸಿ ವಿಶ್ರಮಿಸಿದ ತರ ಆತನ ಜೊತೆ ವಿಶ್ರಾಂತಿ ಪಡೆದವನೂ ತನ್ನೆಲ್ಲಾ ಕೆಲಸ ಮುಗಿಸಿ ವಿಶ್ರಾಂತಿ ಪಡಿದಿದ್ದಾನೆ.+ 11  ಹಾಗಾಗಿ ಆ ವಿಶ್ರಾಂತಿ ಪಡಿಯೋಕೆ ನಾವು ನಮ್ಮಿಂದ ಆಗೋದನ್ನೆಲ್ಲ ಮಾಡೋಣ. ಆಗ ಪದೇ ಪದೇ ಮಾತು ಕೇಳದಿದ್ದ ಅವ್ರ ದಾರಿಯನ್ನ ನಮ್ಮಲ್ಲಿ ಯಾರೂ ಹಿಡಿಯಲ್ಲ.+ 12  ಪವಿತ್ರ ಗ್ರಂಥಕ್ಕೆ* ಜೀವ ಇದೆ, ತುಂಬಾ ಶಕ್ತಿ ಇದೆ.+ ಅದು, ಎರಡೂ ಕಡೆ ಚೂಪಾಗಿರೋ ಕತ್ತಿಗಿಂತ ಚೂಪಾಗಿದೆ.+ ಅದು ಮನುಷ್ಯನ ಒಳಗೆ ಎಷ್ಟು ಆಳಕ್ಕೆ ಹೋಗುತ್ತೆ ಅಂದ್ರೆ ಅವನು ಒಳಗೆ ಹೇಗಿದ್ದಾನೆ, ಹೊರಗೆ ಹೇಗಿದ್ದಾನೆ ಅಂತ ತೋರಿಸ್ಕೊಡುತ್ತೆ, ಅವನ ಮೂಳೆ* ಮತ್ತು ಅದ್ರೊಳಗಿರೋ ಮಜ್ಜೆ ಒಳಗೂ ತೂರಿಹೋಗುತ್ತೆ. ಅವನ ಹೃದಯದ ಆಲೋಚನೆ ಉದ್ದೇಶಗಳನ್ನ ಬಯಲು ಮಾಡೋ ಸಾಮರ್ಥ್ಯ ಅದಕ್ಕಿದೆ. 13  ಆತನ ದೃಷ್ಟಿಗೆ ಮರೆಯಾದ ಸೃಷ್ಟಿ ಒಂದೂ ಇಲ್ಲ.+ ಆತನ ಕಣ್ಣಿಗೆ ಎಲ್ಲ ಬಯಲಾಗಿದೆ, ಎಲ್ಲವನ್ನೂ ಆತನು ನೋಡ್ತಾನೆ. ನಾವು ಲೆಕ್ಕ ಕೊಡಬೇಕಾಗಿರೋದು ಆತನಿಗೇ.+ 14  ನಮ್ಮ ಶ್ರೇಷ್ಠ ಮಹಾ ಪುರೋಹಿತ ಅಂದ್ರೆ ದೇವರ ಮಗನಾದ ಯೇಸು ಸ್ವರ್ಗಕ್ಕೆ ಹೋಗಿರೋದ್ರಿಂದ+ ಆತನ ಮೇಲೆ ನಮಗಿರೋ ನಂಬಿಕೆ ಬಗ್ಗೆ ತಿಳಿಸ್ತಾ ಇರೋಣ.+ 15  ನಮ್ಮ ಮಹಾ ಪುರೋಹಿತನಿಗೆ ನಮ್ಮ ಬಲಹೀನತೆಗಳನ್ನ ಅರ್ಥ ಮಾಡ್ಕೊಳ್ಳೋಕೆ* ಆಗುತ್ತೆ.+ ಯಾಕಂದ್ರೆ ನಮ್ಮ ಹಾಗೆ ಆತನಿಗೆ ಎಲ್ಲ ತರದ ಕಷ್ಟಗಳು ಬಂತು. ಆದ್ರೆ ಪಾಪ ಮಾಡಲಿಲ್ಲ.+ 16  ಹಾಗಾಗಿ ಅಪಾರ ಕೃಪೆ ತೋರಿಸೋ ದೇವರ ಸಿಂಹಾಸನದ ಹತ್ರ ನಾವು ಹೋಗಿ ಯಾವ ಹಿಂಜರಿಕೆನೂ ಇಲ್ದೆ ಮಾತಾಡೋಣ.+ ಆಗ ನಮಗೆ ಸಹಾಯ ಬೇಕಿದ್ದಾಗ ಆತನು ಕರುಣೆ, ಅಪಾರ ಕೃಪೆ ತೋರಿಸ್ತಾನೆ.

ಪಾದಟಿಪ್ಪಣಿ

ಅಥವಾ “ದೇವರ ವಾಕ್ಯಕ್ಕೆ.”
ಅಕ್ಷ. “ಕೀಲು.”
ಅಥವಾ “ಅನುಕಂಪ ತೋರಿಸೋಕೆ.”