ಇಬ್ರಿಯರಿಗೆ ಬರೆದ ಪತ್ರ 6:1-20

  • ಪ್ರೌಢರಾಗೋಕೆ ಪ್ರಗತಿ ಮಾಡ್ತಾ ಇರಬೇಕು (1-3)

  • ನಂಬಿಕೆಯಿಂದ ಬಿದ್ದುಹೋಗುವವರು ದೇವರ ಮಗನನ್ನ ಮತ್ತೆ ಮರದ ಕಂಬಕ್ಕೆ ಜಡಿತಾರೆ (4-8)

  • ನಿಮ್ಮ ನಿರೀಕ್ಷೆ ನಿಜವಾಗುತ್ತೆ ಅನ್ನೋ ಭರವಸೆ ಇರಬೇಕು (9-12)

  • ದೇವರು ಕೊಟ್ಟ ಮಾತು ಖಂಡಿತ ನಿಜ ಆಗುತ್ತೆ (13-20)

    • ದೇವರು ಕೊಟ್ಟ ಮಾತು, ಇಟ್ಟ ಆಣೆ ಯಾವತ್ತೂ ಬದಲಾಗಲ್ಲ (17, 18)

6  ಹಾಗಾಗಿ ಕ್ರಿಸ್ತನ ಬಗ್ಗೆ ನಾವು ಮೊದಮೊದ್ಲು ಕಲಿತ ಬೋಧನೆಗಳೇ+ ಸಾಕು ಅಂತ ಹೇಳ್ದೇ ಪ್ರೌಢರಾಗೋಕೆ ಪ್ರಗತಿ ಮಾಡ್ತಾ ಇರೋಣ.+ ಮೂಲ ಬೋಧನೆಗಳನ್ನ ಅಂದ್ರೆ ವ್ಯರ್ಥ* ಕೆಲಸಗಳಿಗಾಗಿ ಪಶ್ಚಾತ್ತಾಪ, ದೇವರ ಮೇಲೆ ನಂಬಿಕೆ,  ಬೇರೆ ಬೇರೆ ದೀಕ್ಷಾಸ್ನಾನ, ಕೈಗಳನ್ನ ಇಡೋದು,+ ಸತ್ತವರಿಗೆ ಮತ್ತೆ ಜೀವ ಬರೋ ವಿಷ್ಯ,+ ಶಾಶ್ವತ ನ್ಯಾಯತೀರ್ಪು ಇವುಗಳ ಬಗ್ಗೆ ಮಾತ್ರ ಪದೇಪದೇ ಕಲಿಯೋದು ಬೇಡ.  ನಿಜ ಏನಂದ್ರೆ ದೇವರ ಸಹಾಯದಿಂದ ನಾವು ಪ್ರಗತಿ ಮಾಡ್ತಾ ಪ್ರೌಢರಾಗೋಕೆ ಆಗುತ್ತೆ.  ಕೆಲವರು ಸತ್ಯದ ಬೆಳಕನ್ನ, ದೇವರಿಂದ ಉಡುಗೊರೆಯನ್ನ,* ಪವಿತ್ರಶಕ್ತಿಯನ್ನ ಈ ಹಿಂದೆ ಪಡೆದಿದ್ರು.+  ದೇವರ ಶ್ರೇಷ್ಠ ಮಾತು ಮತ್ತು ಮುಂದೆ ಸಿಗೋ ಲೋಕದ ಆಶೀರ್ವಾದಗಳನ್ನ* ರುಚಿನೋಡಿದ್ರು.  ಆದ್ರೆ ಅವ್ರೀಗ ನಂಬಿಕೆಯಿಂದ ಬಿದ್ದುಹೋಗಿದ್ದಾರೆ.+ ಅವ್ರಿಗೆ ಪುನಃ ಪಶ್ಚಾತ್ತಾಪಪಡೋಕೆ ಸಹಾಯ ಮಾಡಕ್ಕಾಗಲ್ಲ. ಯಾಕಂದ್ರೆ ಅವರು ದೇವರ ಮಗನನ್ನ ಮತ್ತೆ ಮರದ ಕಂಬಕ್ಕೆ ಜಡಿತಾರೆ, ಆತನನ್ನ ಎಲ್ರ ಮುಂದೆ ಅವಮಾನ ಮಾಡ್ತಾರೆ.+  ಉದಾಹರಣೆಗೆ ಆಗಾಗ ಬೀಳೋ ಮಳೆ ದೇವರು ನೆಲಕ್ಕೆ ಕೊಡೋ ಆಶೀರ್ವಾದ. ಮಳೆನೀರನ್ನ ನೆಲ ಹೀರ್ಕೊಂಡು ರೈತನಿಗೆ ಫಲ ಕೊಡುತ್ತೆ.  ಆದ್ರೆ ನೆಲದಲ್ಲಿ ಮುಳ್ಳುಗಿಡಗಳು ಕಳೆಗಳು ಬೆಳೆದ್ರೆ ಆ ನೆಲ ಏನೂ ಉಪಯೋಗಕ್ಕೆ ಬರಲ್ಲ. ಅದು ಬೇಗ ಶಾಪಕ್ಕೆ ಗುರಿಯಾಗುತ್ತೆ. ಕೊನೆಗೆ ಅದನ್ನ ಸುಟ್ಟು ಹಾಕಲಾಗುತ್ತೆ.  ಪ್ರಿಯರೇ, ನಾವು ಹೀಗೆ ಹೇಳಿದ್ರೂ ನೀವು ಅವ್ರ ತರ ಇಲ್ಲ, ರಕ್ಷಣೆಗೆ ನಡೆಸೋ ಕೆಲಸಗಳನ್ನ ಮಾಡ್ತಿದ್ದೀರಿ ಅನ್ನೋ ಭರವಸೆ ನಮಗಿದೆ. 10  ನೀವು ಪವಿತ್ರ ಜನ್ರಿಗೆ ಸೇವೆ ಮಾಡಿದ್ರಿ, ಇನ್ನೂ ಮಾಡ್ತಾ ಇದ್ದೀರ. ನಿಮ್ಮ ಈ ಕೆಲಸವನ್ನ ದೇವರ ಹೆಸ್ರಿಗಾಗಿ ನೀವು ತೋರಿಸಿದ ಪ್ರೀತಿಯನ್ನ ದೇವರು ಮರಿಯಲ್ಲ.+ ಯಾಕಂದ್ರೆ ಆತನು ಅನ್ಯಾಯ ಮಾಡಲ್ಲ. 11  ಮುಂಚೆಯಿಂದ ನೀವು ಮಾಡ್ತಾ ಬಂದ ಹಾಗೆ ಪ್ರತಿಯೊಬ್ರೂ ಕಷ್ಟಪಟ್ಟು ಸೇವೆ ಮಾಡ್ತಾ ಇರಬೇಕು ಅನ್ನೋದು ನಮ್ಮ ಇಷ್ಟ. ಆಗ ನಿಮ್ಮ ನಿರೀಕ್ಷೆ+ ನಿಜವಾಗುತ್ತೆ ಅನ್ನೋ ಪೂರ್ಣ ಭರವಸೆ ಕೊನೆ ತನಕ ನಿಮಗಿರುತ್ತೆ.+ 12  ಹಾಗಾಗಿ ನೀವು ಸೋಮಾರಿ ಆಗಬೇಡಿ.+ ನಂಬಿಕೆ, ತಾಳ್ಮೆ ತೋರಿಸೋ ಮೂಲಕ ದೇವರು ಮಾತು ಕೊಟ್ಟದ್ದನ್ನ ಪಡೆದವ್ರ ತರ ನೀವೂ ಆಗಬೇಕು. 13  ದೇವರು ಅಬ್ರಹಾಮನಿಗೆ ಮಾತುಕೊಟ್ಟಾಗ ತನ್ನ ಮೇಲೆನೇ ಆಣೆ ಇಟ್ಟನು.+ ಯಾಕಂದ್ರೆ ಆತನಿಗಿಂತ ದೊಡ್ಡವನು ಯಾರೂ ಇರಲಿಲ್ಲ. 14  ದೇವರು ಅಬ್ರಹಾಮನಿಗೆ “ನಾನು ಖಂಡಿತ ನಿನ್ನನ್ನ ಆಶೀರ್ವದಿಸ್ತೀನಿ. ನಿನ್ನ ಸಂತತಿಯನ್ನ ಲೆಕ್ಕ ಮಾಡೋಕೆ ಆಗದಷ್ಟು ಜಾಸ್ತಿ ಮಾಡ್ತೀನಿ” ಅಂತ ಮಾತು ಕೊಟ್ಟನು.+ 15  ದೇವರು ಆ ಮಾತು ಕೊಟ್ಟಿದ್ದು ಅಬ್ರಹಾಮ ತಾಳ್ಮೆ ತೋರಿಸಿದ ಮೇಲೆ. 16  ಮನುಷ್ಯರು ತಮಗಿಂತ ದೊಡ್ಡವ್ರ ಮೇಲೆ ಆಣೆ ಇಡ್ತಾರೆ. ಅದು ಅವ್ರ ಮಾತು ಸತ್ಯ ಅನ್ನೋದಕ್ಕೆ ಸಾಕ್ಷಿ ಆಗಿರೋದ್ರಿಂದ ಎಲ್ಲ ವಿವಾದನೂ ಅಲ್ಲಿಗೇ ಮುಗಿಯುತ್ತೆ.+ 17  ಅದೇ ರೀತಿ ದೇವರು ತಾನು ಮಾತು ಕೊಟ್ಟದ್ದನ್ನ ಆಸ್ತಿಯಾಗಿ ಪಡೆದವ್ರಿಗೆ ತನ್ನ ಉದ್ದೇಶ* ಬದಲಾಗಲ್ಲ ಅಂತ ಇನ್ನೂ ಸ್ಪಷ್ಟವಾಗಿ ತೋರಿಸೋಕೆ ಇಷ್ಟಪಟ್ಟನು.+ ಹಾಗಾಗಿ ಆಣೆಯಿಟ್ಟು ಹೇಳೋ ಮೂಲಕ ತಾನು ಕೊಟ್ಟ ಮಾತನ್ನ ಪಕ್ಕಾ ಮಾಡಿದನು.* 18  ದೇವರು ಕೊಟ್ಟ ಮಾತು, ಇಟ್ಟ ಆಣೆ ಯಾವತ್ತೂ ಬದಲಾಗಲ್ಲ. ಇದ್ರ ಬಗ್ಗೆ ಆತನು ಸುಳ್ಳು ಹೇಳೋಕೆ ಸಾಧ್ಯಾನೇ ಇಲ್ಲ.+ ಹಾಗಾಗಿ ಆಶ್ರಯ ಪಡಿಯೋಕೆ ದೇವರ ಹತ್ರ ಓಡಿ ಬಂದಿರೋ ನಾವು ನಮ್ಮ ಮುಂದೆ ಇಟ್ಟಿರೋ ನಿರೀಕ್ಷೆಯನ್ನ ಗಟ್ಟಿಯಾಗಿ ಹಿಡ್ಕೊಳ್ಳೋಕೆ ಆಗಿದೆ. 19  ಈ ನಿರೀಕ್ಷೆ+ ನಮ್ಮ ಜೀವನಕ್ಕೆ ಲಂಗರದ ಹಾಗಿದೆ. ಸಂಶಯಪಡದೆ ದೃಢವಾಗಿರೋಕೆ ಅದು ಸಹಾಯ ಮಾಡುತ್ತೆ ಮತ್ತು ಪರದೆ ದಾಟಿ ಹೋಗೋಕೆ ದಾರಿ ತೋರಿಸುತ್ತೆ.+ 20  ಯೇಸು+ ನಮಗಿಂತ ಮುಂಚೆ ಹೋಗಿ ನಮಗಾಗಿ ದಾರಿ ತೆರೆದು ಸಿದ್ಧ ಮಾಡಿದ್ದಾನೆ. ಮೆಲ್ಕಿಜೆದೇಕನ ಹಾಗೆ ಆತನು ಶಾಶ್ವತವಾಗಿ ಮಹಾ ಪುರೋಹಿತನಾಗಿದ್ದಾನೆ.+

ಪಾದಟಿಪ್ಪಣಿ

ಅಕ್ಷ. “ಸತ್ತ.”
ಅಕ್ಷ. “ಉಚಿತ ಉಡುಗೊರೆಯನ್ನ.”
ಅಕ್ಷ. “ಶಕ್ತಿಗಳನ್ನ.”
ಅಥವಾ “ನಿರ್ಣಯ.”
ಅಕ್ಷ. “ಮಧ್ಯಸ್ಥಿಕೆ ವಹಿಸಿದನು.”