ಎಜ್ರ 1:1-11
1 ಪರ್ಶಿಯ ರಾಜ ಕೋರೆಷ+ ಆಳ್ತಿದ್ದ ಮೊದಲ್ನೇ ವರ್ಷದಲ್ಲಿ ಯೆಹೋವನು ರಾಜ ಕೋರೆಷನ ಮನಸ್ಸನ್ನ ಪ್ರಚೋದಿಸಿದನು. ಒಂದು ಸಂದೇಶವನ್ನ ರಾಜ ಕೋರೆಷ ಇಡೀ ರಾಜ್ಯಕ್ಕೆ ಸಾರೋ ತರ ಮಾಡಿದನು. ಯೆರೆಮೀಯನ ಮೂಲಕ ಹೇಳಿಸಿದ ತನ್ನ ಮಾತುಗಳು+ ನಿಜ ಆಗಬೇಕು ಅಂತ ಯೆಹೋವ ಹೀಗೆ ಮಾಡಿದನು. ರಾಜ ಆ ಸಂದೇಶವನ್ನ ಪತ್ರಗಳ ಮೂಲಕ ಕೂಡ ಕಳಿಸಿದ.+ ಅದ್ರಲ್ಲಿ ಹೀಗಿತ್ತು:
2 “ಪರ್ಶಿಯ ರಾಜ ಕೋರೆಷ ಅನ್ನೋ ನಾನು ಹೇಳೋದು ಏನಂದ್ರೆ ‘ಸ್ವರ್ಗದ ದೇವರಾದ ಯೆಹೋವ ಭೂಮಿ ಮೇಲಿರೋ ಎಲ್ಲ ರಾಜ್ಯಗಳನ್ನ ನನಗೆ ಕೊಟ್ಟಿದ್ದಾನೆ.+ ಯೆಹೂದ ದೇಶದ ಯೆರೂಸಲೇಮ್‌ನಲ್ಲಿ ಆತನಿಗಾಗಿ ಒಂದು ಆಲಯ ಕಟ್ಟಿಸಬೇಕಂತ ನನಗೆ ಆಜ್ಞೆ ಕೊಟ್ಟಿದ್ದಾನೆ.+
3 ಆತನಿಗೆ ಸೇರಿದ ಜನ ನಿಮ್ಮಲ್ಲಿ ಯಾರಾದ್ರೂ ಇದ್ದಾರಾ? ಇದ್ರೆ ಅವ್ರು ಯೆಹೂದ ದೇಶದ ಯೆರೂಸಲೇಮಿಗೆ ಹೋಗಬೇಕು. ಇಸ್ರಾಯೇಲಿನ ದೇವರಾದ ಯೆಹೋವನ ಆಲಯವನ್ನ ಪುನಃ ಕಟ್ಟಬೇಕು. ಅವ್ರ ದೇವರು ಅವ್ರ ಜೊತೆ ಇರ್ತಾನೆ. ಆತನೇ ಸತ್ಯ ದೇವರು. ಯೆರೂಸಲೇಮಲ್ಲಿ ಆತನ ಆಲಯ ಇತ್ತು.*
4 ಇಡೀ ರಾಜ್ಯದಲ್ಲಿ ಎಲ್ಲೆಲ್ಲಿ ಈ ಜನ ವಿದೇಶಿಗಳಾಗಿ ಜೀವಿಸ್ತಾ ಇದ್ದಾರೋ+ ಅಲ್ಲಿ ಅಕ್ಕಪಕ್ಕದವರು* ಅವ್ರಿಗೆ ಬೆಳ್ಳಿಬಂಗಾರವನ್ನ ವಸ್ತುಗಳನ್ನ ಸಾಕುಪ್ರಾಣಿಗಳನ್ನ ಕೊಡಬೇಕು. ಅಷ್ಟೇ ಅಲ್ಲ ಯೆರೂಸಲೇಮಲ್ಲಿರೋ ಸತ್ಯ ದೇವರ ಆಲಯಕ್ಕಾಗಿ ಸ್ವಇಷ್ಟದ ಕಾಣಿಕೆಗಳನ್ನ ಕೊಟ್ಟು+ ಸಹಾಯ ಮಾಡಬೇಕು.’ ”
5 ಆಗ ಯೆಹೂದ ಮತ್ತು ಬೆನ್ಯಾಮೀನ್ ಕುಲದ ಮುಖ್ಯಸ್ಥರು, ಪುರೋಹಿತರು, ಲೇವಿಯರು ಹೀಗೆ ಯಾರ ಮನಸ್ಸನ್ನ ಸತ್ಯ ದೇವರು ಪ್ರಚೋದಿಸಿದ್ನೋ ಅವ್ರೆಲ್ಲ ಯೆರೂಸಲೇಮಿಗೆ ಹೋಗೋಕೆ, ಯೆಹೋವನ ಆಲಯವನ್ನ ಮತ್ತೆ ಕಟ್ಟೋಕೆ ತಯಾರಿ ಮಾಡ್ಕೊಂಡ್ರು.
6 ಅವ್ರ ಅಕ್ಕಪಕ್ಕದ ಜನ್ರೆಲ್ಲ ಬೆಳ್ಳಿಬಂಗಾರದ ಪಾತ್ರೆಗಳನ್ನ ವಸ್ತುಗಳನ್ನ ಸಾಕುಪ್ರಾಣಿಗಳನ್ನ ಅಮೂಲ್ಯ ವಸ್ತುಗಳನ್ನ ಕೊಟ್ಟು ಸಹಾಯ ಮಾಡಿದ್ರು.* ಅಷ್ಟೇ ಅಲ್ಲ ಸ್ವಇಷ್ಟದ ಕಾಣಿಕೆಗಳನ್ನ ಕೊಟ್ರು.
7 ನೆಬೂಕದ್ನೆಚ್ಚರ ಯೆಹೋವನ ಆಲಯದ ಪಾತ್ರೆಗಳನ್ನ ಯೆರೂಸಲೇಮಿಂದ ತಗೊಂಡು ಹೋಗಿ ತನ್ನ ಮನೇಲಿ, ತನ್ನ ದೇವ್ರ ಆಲಯದಲ್ಲಿ ಇಟ್ಟಿದ್ದ. ಅವುಗಳನ್ನ ಕೂಡ ರಾಜ ಕೋರೆಷ ಅಲ್ಲಿಂದ ತಗೊಂಡು ಬಂದ.+
8 ಮಿತ್ರದಾತ ಅನ್ನೋ ಖಜಾಂಚಿಯ ಉಸ್ತುವಾರಿಯ ಕೆಳಗೆ ರಾಜ ಕೋರೆಷ ಹೀಗೆ ಮಾಡಿದ. ಮಿತ್ರದಾತ ಆ ಪಾತ್ರೆಗಳ ಪಟ್ಟಿಮಾಡಿ ಯೆಹೂದದ ಮುಖ್ಯಸ್ಥ ಶೆಷ್ಬಚ್ಚರನಿಗೆ*+ ಕೊಟ್ಟ.
9 ಆ ಪಟ್ಟಿ ಹೀಗಿತ್ತು: ಬುಟ್ಟಿ ಆಕಾರದ 30 ಚಿನ್ನದ ಪಾತ್ರೆ, ಬುಟ್ಟಿ ಆಕಾರದ 1,000 ಬೆಳ್ಳಿ ಪಾತ್ರೆ, ಬೇರೆ 29 ಪಾತ್ರೆಗಳು,
10 ಚಿನ್ನದ 30 ಚಿಕ್ಕ ಬಟ್ಟಲುಗಳು, ಬೆಳ್ಳಿಯ 410 ಚಿಕ್ಕ ಬಟ್ಟಲುಗಳು, ಬೇರೆ 1,000 ಪಾತ್ರೆಗಳು.
11 ಹೀಗೆ ಚಿನ್ನ ಬೆಳ್ಳಿಯ ಒಟ್ಟು ಪಾತ್ರೆಗಳು 5,400. ಬಾಬೆಲಲ್ಲಿ ಕೈದಿಗಳಾಗಿದ್ದ ಜನ+ ಯೆರೂಸಲೇಮಿಗೆ ವಾಪಸ್ ಹೋಗ್ತಿದ್ದ ಸಮಯದಲ್ಲಿ ಈ ಪಾತ್ರೆಗಳನ್ನ ಶೆಷ್ಬಚ್ಚರ ತನ್ನ ಜೊತೆ ತಗೊಂಡು ಹೋದ.
ಪಾದಟಿಪ್ಪಣಿ
^ ಬಹುಶಃ, “ಆತನು ಯೆರೂಸಲೇಮಿನಲ್ಲಿದ್ದಾನೆ.”
^ ಅಕ್ಷ. “ಅವ್ರ ಊರಲ್ಲಿರೋ ಗಂಡಸ್ರು.”
^ ಅಕ್ಷ. “ಅವ್ರ ಕೈಗಳನ್ನ ಬಲಪಡಿಸಿದ್ರು.”