ಎಜ್ರ 5:1-17

  • ಯೆಹೂದಿಗಳು ಆಲಯ ಕಟ್ಟೋದನ್ನ ಮತ್ತೆ ಶುರು ಮಾಡಿದ್ರು (1-5)

  • ರಾಜ ದಾರ್ಯಾವೆಷನಿಗೆ ತತ್ತೆನೈ ಕಳಿಸಿದ ಪತ್ರ (6-17)

5  ಆಮೇಲೆ ಪ್ರವಾದಿ ಹಗ್ಗಾಯ+ ಮತ್ತು ಇದ್ದೋವನ+ ಮೊಮ್ಮಗ ಪ್ರವಾದಿ ಜೆಕರ್ಯ+ ಯೆಹೂದದ ಮತ್ತು ಯೆರೂಸಲೇಮಿನ ಜನ್ರಾಗಿದ್ದ ಯೆಹೂದ್ಯರಿಗೆ ಭವಿಷ್ಯವಾಣಿ ಹೇಳ್ತಿದ್ರು. ಯೆಹೂದ್ಯರ ಜೊತೆ ಇದ್ದ ಇಸ್ರಾಯೇಲ್‌ ದೇವ್ರ ಹೆಸ್ರಲ್ಲಿ ಭವಿಷ್ಯವಾಣಿ ಹೇಳ್ತಿದ್ರು.  ಆಗ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲ್‌+ ಮತ್ತು ಯೆಹೋಚಾದಾಕನ ಮಗ ಯೇಷೂವ+ ಯೆರೂಸಲೇಮಲ್ಲಿದ್ದ ದೇವರ ಆಲಯವನ್ನ ಮತ್ತೆ ಕಟ್ಟೋಕೆ ಶುರು ಮಾಡಿದ್ರು.+ ದೇವರ ಪ್ರವಾದಿಗಳು ಅವ್ರ ಜೊತೆ ಇದ್ದು ಅವ್ರಿಗೆ ಬೆಂಬಲ ಕೊಟ್ರು.+  ಅದೇ ಸಮಯಕ್ಕೆ, ನದಿಯ ಈ ಕಡೆಯ* ಪ್ರದೇಶಗಳ ರಾಜ್ಯಪಾಲನಾಗಿದ್ದ ತತ್ತೆನೈ, ಶೆತರ್‌-ಬೋಜೆನೈ ಮತ್ತು ಅವ್ರ ಜೊತೆ ಕೆಲ್ಸ ಮಾಡ್ತಿದ್ದ ಗಂಡಸ್ರು ಅಲ್ಲಿಗೆ ಬಂದು “ಈ ಆಲಯ ಕಟ್ಟೋಕೆ, ಈ ನಿರ್ಮಾಣ ಕೆಲಸವನ್ನ ಪೂರ್ತಿ ಮಾಡೋಕೆ* ನಿಮಗೆ ಅಪ್ಪಣೆ ಕೊಟ್ಟವ್ರು ಯಾರು?” ಅಂತ ಕೇಳಿ  “ಈ ಕಟ್ಟಡ ಕಟ್ಟೋದ್ರಲ್ಲಿ ಯಾರೆಲ್ಲ ಇದ್ದಾರೆ? ಅವ್ರ ಹೆಸ್ರು ಹೇಳಿ” ಅಂದ್ರು.  ಆದ್ರೆ ದೇವರು ಯೆಹೂದ್ಯರ ಹಿರಿಯರಿಗೆ ಸಹಾಯ ಮಾಡಿದ್ರಿಂದ+ ತತ್ತೆನೈಗೆ, ಬೇರೆ ಗಂಡಸ್ರಿಗೆ ಆ ಕೆಲಸವನ್ನ ನಿಲ್ಲಿಸೋಕೆ ಆಗಲಿಲ್ಲ. ಆಗ ಆ ವಿಷ್ಯದ ಬಗ್ಗೆ ದಾರ್ಯಾವೆಷನಿಗೆ ವರದಿ ಕಳಿಸಿ, ಅಲ್ಲಿಂದ ಉತ್ರ ಬರೋ ತನಕ ಕಾದ್ರು.  ನದಿಯ ಈ ಕಡೆಯ ಪ್ರದೇಶಗಳ ರಾಜ್ಯಪಾಲ ತತ್ತೆನೈ, ಶೆತರ್‌-ಬೋಜೆನೈ ಮತ್ತು ಅವನ ಜೊತೆ ಕೆಲ್ಸ ಮಾಡ್ತಿದ್ದ ಗಂಡಸ್ರು ಅಂದ್ರೆ ನದಿಯ ಈ ಕಡೆಯ ಪ್ರದೇಶಗಳ ಉಪ ರಾಜ್ಯಪಾಲರು ರಾಜ ದಾರ್ಯಾವೆಷನಿಗೆ ಒಂದು ಪತ್ರ ಕಳಿಸಿದ್ರು.  ಅವರು ಕಳಿಸಿದ ಆ ಪತ್ರದಲ್ಲಿ ಹೀಗಿತ್ತು: “ರಾಜ ದಾರ್ಯಾವೆಷನೇ, ನಿನಗೆ ಒಳ್ಳೇ ಆರೋಗ್ಯ ಇರ್ಲಿ!  ನಾವು ರಾಜನಿಗೆ ಒಂದು ವಿಷ್ಯ ಹೇಳೋಣ ಅಂತ ಬಂದ್ವಿ. ಯೆಹೂದ ಪ್ರಾಂತ್ಯದಲ್ಲಿರೋ* ಮಹಾನ್‌ ದೇವರ ಆಲಯಕ್ಕೆ ಹೋಗಿದ್ವಿ. ಜನ ಅದನ್ನ ದೊಡ್ಡದೊಡ್ಡ ಕಲ್ಲುಗಳಿಂದ ಕಟ್ತಿದ್ದಾರೆ, ಅದ್ರ ಗೋಡೆಗಳಿಗೆ ದೊಡ್ಡ ದೊಡ್ಡ ಮರದ ಕಂಬಗಳನ್ನ ಹಾಕ್ತಿದ್ದಾರೆ. ಉತ್ಸಾಹದಿಂದ ಅದನ್ನ ಕಟ್ತಾ ಇರೋದ್ರಿಂದ ಅದ್ರ ಕೆಲಸ ಬೇಗಬೇಗ ನಡಿತಿದೆ.  ನಾವು ಯೆಹೂದ್ಯರ ಹಿರಿಯರಿಗೆ ‘ಈ ಆಲಯ ಕಟ್ಟೋಕೆ, ಈ ನಿರ್ಮಾಣ ಕೆಲ್ಸ ಪೂರ್ತಿ ಮಾಡೋಕೆ* ನಿಮಗೆ ಅಪ್ಪಣೆ ಕೊಟ್ಟವ್ರು ಯಾರು?’ ಅಂತ ಕೇಳಿದ್ವಿ.+ 10  ಮುಂದೆ ನಿಂತು ಕೆಲ್ಸ ಮಾಡಿಸ್ತಾ ಇರೋರ ಹೆಸ್ರು ತಿಳ್ಕೊಂಡು ನಿನಗೆ ಹೇಳೋಣ ಅಂತ ಅವ್ರ ಹೆಸ್ರುಗಳನ್ನ ಕೇಳಿದ್ವಿ. 11  “ಅದಕ್ಕೆ ಅವ್ರು ‘ನಾವು ಭೂಮ್ಯಾಕಾಶಗಳ ದೇವರ ಸೇವಕರು. ತುಂಬ ವರ್ಷ ಹಿಂದೆನೇ ಇದನ್ನ ಕಟ್ಟಿದ್ರು. ಈ ಆಲಯನ ನಾವೀಗ ಮತ್ತೆ ಕಟ್ತಾ ಇದ್ದೀವಿ. ಈ ಆಲಯವನ್ನ ಇಸ್ರಾಯೇಲಿನ ಒಬ್ಬ ಮಹಾ ರಾಜ ಕಟ್ಟಿ ಮುಗಿಸಿದ್ದ.+ 12  ಆದ್ರೆ ನಮ್ಮ ಪೂರ್ವಜರು ಸ್ವರ್ಗದ ದೇವ್ರಿಗೆ ಕೋಪ ಬರೋ ತರ ಮಾಡಿದ್ರು.+ ಅದಕ್ಕೆ ದೇವರು ಅವ್ರನ್ನ ಬಾಬೆಲಿನ ರಾಜನೂ ಕಸ್ದೀಯನೂ ಆದ ನೆಬೂಕದ್ನೆಚ್ಚರನ ಕೈಗೆ ಕೊಟ್ಟುಬಿಟ್ಟನು.+ ನೆಬೂಕದ್ನೆಚ್ಚರ ಈ ಆಲಯನ ನಾಶಮಾಡಿದ್ದ.+ ಜನ್ರನ್ನ ಕೈದಿಗಳಾಗಿ ಬಾಬೆಲಿಗೆ ಕರ್ಕೊಂಡು ಹೋಗಿದ್ದ.+ 13  ಹಾಗಿದ್ರೂ ಕೋರೆಷ ಬಾಬೆಲಿನ ರಾಜನಾಗಿ ಆಳೋಕೆ ಶುರು ಮಾಡಿದ ಮೊದಲ್ನೇ ವರ್ಷದಲ್ಲಿ ದೇವರ ಈ ಆಲಯವನ್ನ ಮತ್ತೆ ಕಟ್ಟಬೇಕಂತ ಆಜ್ಞೆ ಕೊಟ್ಟ.+ 14  ಅಷ್ಟೇ ಅಲ್ಲ ನೆಬೂಕದ್ನೆಚ್ಚರ ಯೆರೂಸಲೇಮಿನ ದೇವಾಲಯದಿಂದ ತಗೊಂಡು ಹೋಗಿ ಬಾಬೆಲಿನ ದೇವಾಲಯದಲ್ಲಿ ಇಟ್ಟಿದ್ದ ಬೆಳ್ಳಿಬಂಗಾರದ ಪಾತ್ರೆಗಳನ್ನ+ ರಾಜ ಕೋರೆಷ ಅಲ್ಲಿಂದ ತಗೊಂಡು ಬಂದು ಅವುಗಳನ್ನ ಶೆಷ್ಬಚ್ಚರ*+ ಅನ್ನೋನಿಗೆ ಕೊಟ್ಟ. ಈ ಶೆಷ್ಬಚ್ಚರನನ್ನ ಕೋರೆಷನೇ ರಾಜ್ಯಪಾಲನಾಗಿ ನೇಮಿಸಿದ್ದ.+ 15  ಕೋರೆಷ ಅವನಿಗೆ “ಈ ಪಾತ್ರೆಗಳನ್ನ ಯೆರೂಸಲೇಮಿನ ದೇವಾಲಯದಲ್ಲಿ ಇಡೋಕೆ ತಗೊಂಡು ಹೋಗು. ದೇವರ ಆಲಯ ಮೊದ್ಲು ಎಲ್ಲಿತ್ತೋ ಮತ್ತೆ ಅದನ್ನ ಅಲ್ಲೇ ಕಟ್ಟು” ಅಂದ.+ 16  ಆಮೇಲೆ ಶೆಷ್ಬಚ್ಚರ ಯೆರೂಸಲೇಮಿಗೆ ಬಂದು ದೇವರ ಆಲಯದ ಅಡಿಪಾಯ ಹಾಕಿದ.+ ಅವತ್ತಿಂದ ಕೆಲ್ಸ ನಡೀತಿದೆ, ಇನ್ನೂ ಮುಗಿದಿಲ್ಲ’ ಅಂತ ಉತ್ರ ಕೊಟ್ರು.+ 17  “ಹಾಗಾಗಿ ಈಗ ರಾಜನಿಗೆ ಸರಿ ಅನಿಸಿದ್ರೆ ರಾಜ ಕೋರೆಷ ಯೆರೂಸಲೇಮಿನ ಈ ದೇವಾಲಯ ಮತ್ತೆ ಕಟ್ಟೋಕೆ ಆಜ್ಞೆ ಕೊಟ್ಟಿದ್ನಾ ಇಲ್ವಾ+ ಅಂತ ಬಾಬೆಲಿನ ರಾಜಮನೆತನದ ಖಜಾನೆಯಲ್ಲಿರೋ ಕಾಗದಪತ್ರಗಳನ್ನ ತನಿಖೆ ಮಾಡಿಸಿ ನೋಡು. ಆಮೇಲೆ ಈ ವಿಷ್ಯದ ಬಗ್ಗೆ ರಾಜನ ನಿರ್ಧಾರ ಏನೇ ಆಗಿದ್ರೂ ಅದನ್ನ ನಮಗೆ ಹೇಳು.”

ಪಾದಟಿಪ್ಪಣಿ

ಅಥವಾ “ಯೂಫ್ರೆಟಿಸ್‌ ನದಿಯ ಪಶ್ಚಿಮಕ್ಕಿರೋ.”
ಅಥವಾ “ಕಂಬಗಳನ್ನ ಹಾಕೋಕೆ.”
ಅಥವಾ “ಯೆಹೂದದ ಕೈಕೆಳಗಿದ್ದ ಜಿಲ್ಲೆಯಲ್ಲಿರೋ.”
ಅಥವಾ “ಕಂಬಗಳನ್ನ ಹಾಕೋಕೆ.”
ಬಹುಶಃ ಎಜ್ರ 2:2; 3:8ರಲ್ಲಿ ಹೇಳಿರೋ ಜೆರುಬ್ಬಾಬೆಲ್‌ ಇವನೇ ಇರಬಹುದು.