ಎಜ್ರ 6:1-22
6 ಹಾಗಾಗಿ ರಾಜ ದಾರ್ಯಾವೆಷ ಅಮೂಲ್ಯ ವಸ್ತುಗಳನ್ನಿಡೋ ಬಾಬೆಲಿನ ಖಜಾನೆಯಲ್ಲಿರೋ ಕಾಗದ ಪತ್ರಗಳನ್ನ ತನಿಖೆ ಮಾಡು ಅಂತ ಆಜ್ಞೆ ಕೊಟ್ಟ.
2 ಆಗ ಮೇದ್ಯ ಪ್ರಾಂತ್ಯದಲ್ಲಿದ್ದ* ಅಹ್ಮೆತಾದ ಭದ್ರ ಕೋಟೆಯಲ್ಲಿ ಒಂದು ಸುರುಳಿ ಸಿಕ್ತು. ಅದ್ರಲ್ಲಿ ಈ ಸಂದೇಶ ಇತ್ತು:
3 “ರಾಜ ಕೋರೆಷ ಆಳ್ತಿದ್ದ ಮೊದಲ್ನೇ ವರ್ಷದಲ್ಲಿ ಅವನು ಯೆರೂಸಲೇಮಲ್ಲಿದ್ದ ದೇವಾಲಯದ ಬಗ್ಗೆ ಈ ಆಜ್ಞೆ ಕೊಟ್ಟಿದ್ದ:+ ‘ಅವ್ರು ಬಲಿಗಳನ್ನ ಅರ್ಪಿಸೋಕೆ ಆಲಯವನ್ನ ಮತ್ತೆ ಕಟ್ಟಬೇಕು. ಅದ್ರ ಅಡಿಪಾಯ ಭದ್ರವಾಗಿ ಹಾಕಬೇಕು. ಅದ್ರ ಎತ್ರ 60 ಮೊಳ,* ಅಗಲ 60 ಮೊಳ ಇರ್ಬೇಕು.+
4 ಗೋಡೆಗಳನ್ನ ಕಟ್ಟುವಾಗ ಮೂರು ಸಾಲಿನ ದೊಡ್ಡದೊಡ್ಡ ಕಲ್ಲುಗಳನ್ನ, ಒಂದು ಸಾಲಿನ ಮರದ ದಿಮ್ಮಿಗಳನ್ನ ಇಡಬೇಕು.+ ಇದಕ್ಕೆಲ್ಲ ತಗಲೋ ಖರ್ಚುವೆಚ್ಚಗಳನ್ನ ರಾಜಮನೆತನದ ಖಜಾನೆಯಿಂದ ಕೊಡಬೇಕು.+
5 ನೆಬೂಕದ್ನೆಚ್ಚರ ಯೆರೂಸಲೇಮಿನ ದೇವಾಲಯದಿಂದ ತಗೊಂಡು ಹೋಗಿ ಬಾಬೆಲಿನ ದೇವಾಲಯದಲ್ಲಿ ಇಟ್ಟಿರೋ ಬೆಳ್ಳಿಬಂಗಾರದ ಪಾತ್ರೆಗಳನ್ನ+ ವಾಪಸ್ ಕೊಡಬೇಕು. ಅದನ್ನ ಅದ್ರ ಸ್ಥಾನದಲ್ಲಿ ಅಂದ್ರೆ ಯೆರೂಸಲೇಮಿನ ದೇವಾಲಯದಲ್ಲಿ ಇಡಬೇಕು.’ +
6 ದಾರ್ಯಾವೆಷನಾಗಿರೋ ನಾನು ನದಿಯ ಈಕಡೆಯ* ಪ್ರಾಂತ್ಯಗಳ ರಾಜ್ಯಪಾಲ ತತ್ತೆನೈಗೆ, ಶೆತರ್-ಬೋಜೆನೈಗೆ ಹೇಳೋದು ಏನಂದ್ರೆ ನೀವು, ನಿಮ್ಮ ಜೊತೆ ಕೆಲ್ಸ ಮಾಡೋರು ಅಂದ್ರೆ ನದಿಯ ಈಕಡೆಯ ಪ್ರಾಂತ್ಯಗಳ ಉಪ ರಾಜ್ಯಪಾಲರು+ ಆ ಜಾಗದಿಂದ ದೂರ ಇರಿ.
7 ದೇವರ ಆಲಯದ ಕೆಲ್ಸದಲ್ಲಿ ತಲೆಹಾಕಬೇಡಿ. ಯೆಹೂದ್ಯರ ರಾಜ್ಯಪಾಲ, ಯೆಹೂದ್ಯರ ಹಿರಿಯರು ಆ ಆಲಯ ಮೊದ್ಲು ಎಲ್ಲಿತ್ತೋ ಅಲ್ಲೇ ಮತ್ತೆ ಅದನ್ನ ಕಟ್ತಾರೆ.
8 ದೇವರ ಆಲಯವನ್ನ ಮತ್ತೆ ಕಟ್ಟೋಕೆ ಯೆಹೂದ್ಯರ ಹಿರಿಯರಿಗೆ ನೀವು ಸಹಾಯ ಮಾಡಬೇಕು ಅಂತ ಈ ಆಜ್ಞೆ ಕೊಡ್ತಾ ಇದ್ದೀನಿ: ರಾಜಮನೆತನದ ಖಜಾನೆಯಿಂದ,+ ನದಿಯ ಆಕಡೆಯ ಪ್ರಾಂತ್ಯಗಳಲ್ಲಿ ಸಂಗ್ರಹಿಸೋ ತೆರಿಗೆಯಿಂದ ಅವ್ರಿಗೆ ಹಣ ಸಹಾಯ ಮಾಡಿ. ಅವ್ರ ಕೆಲ್ಸ ನಿಲ್ಲದ ಹಾಗೆ ಅವ್ರ ಖರ್ಚುವೆಚ್ಚಗಳನ್ನ ತಪ್ಪದೆ ನೋಡ್ಕೊಳ್ಳಿ.+
9 ಸ್ವರ್ಗದ ದೇವ್ರಿಗೆ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋಕೆ ಏನೆಲ್ಲ ಬೇಕೋ ಅದನ್ನೆಲ್ಲ ಅಂದ್ರೆ ಹೋರಿ+ ಟಗರು+ ಕುರಿಮರಿ+ ಅಷ್ಟೇ ಅಲ್ಲ, ಗೋದಿ+ ಉಪ್ಪು+ ದ್ರಾಕ್ಷಾಮದ್ಯ+ ಎಣ್ಣೆ+ ಹೀಗೆ ಯೆರೂಸಲೇಮಲ್ಲಿರೋ ಪುರೋಹಿತರು ಕೇಳೋ ಎಲ್ಲವನ್ನ ಪ್ರತಿದಿನ ಅವ್ರಿಗೆ ತಪ್ಪದೆ ಕೊಡಿ.
10 ಆಗ ಸ್ವರ್ಗದ ದೇವ್ರನ್ನ ಮೆಚ್ಚಿಸೋ ಅರ್ಪಣೆಗಳನ್ನ ತಪ್ಪದೆ ಕೊಡೋಕೆ ಆಗುತ್ತೆ. ಅವರು ರಾಜನ, ಅವನ ಗಂಡು ಮಕ್ಕಳ ಆರೋಗ್ಯಕ್ಕಾಗಿ ಪ್ರಾರ್ಥನೆನೂ ಮಾಡ್ತಾರೆ.+
11 ಇನ್ನೊಂದು ಆಜ್ಞೆ ಏನಂದ್ರೆ ಯಾವನಾದ್ರೂ ಇದನ್ನ ಮುರಿದ್ರೆ ಅವನ ಮನೆಯ ಕಂಬವನ್ನ ಕಿತ್ತು ಅವನನ್ನ ಎತ್ತಿ ಅದ್ರ ಮೇಲೆ ತೂಗಿಹಾಕಿಸ್ತೀನಿ. ಅವನು ಮಾಡಿದ ಈ ತಪ್ಪಿಗೆ ಅವನ ಮನೆ ಸಾರ್ವಜನಿಕ ಶೌಚಾಲಯ* ಆಗುತ್ತೆ.
12 ನನ್ನ ಆಜ್ಞೆ ಮೀರಿ ಯೆರೂಸಲೇಮಿನ ದೇವರ ಆಲಯವನ್ನ ನಾಶ ಮಾಡೋನು ರಾಜನೇ ಆಗಿರಲಿ ಪ್ರಜೆನೇ ಆಗಿರಲಿ ದೇವರು ಅವನನ್ನ ನಾಶ ಮಾಡ್ತಾನೆ. ಈ ಆಲಯವನ್ನ ತನ್ನ ಹೆಸ್ರಿಗಾಗಿ, ಗೌರವಕ್ಕಾಗಿ ಆರಿಸ್ಕೊಂಡಿರೋ+ ಅದೇ ದೇವರು ಸರ್ವನಾಶ ಮಾಡ್ತಾನೆ. ದಾರ್ಯಾವೆಷನಾದ ನಾನು ಈ ಆಜ್ಞೆ ಕೊಡ್ತಾ ಇದ್ದೀನಿ. ಇದು ತಕ್ಷಣ ಜಾರಿಗೆ ಬರಲಿ.”
13 ಆಗ ನದಿಯ ಈಕಡೆಯ ಪ್ರದೇಶಗಳ ರಾಜ್ಯಪಾಲನಾದ ತತ್ತೆನೈ, ಶೆತರ್-ಬೋಜೆನೈ,+ ಅವ್ರ ಜೊತೆ ಕೆಲ್ಸ ಮಾಡೋರು ರಾಜ ದಾರ್ಯಾವೆಷ ಕೊಟ್ಟ ಆಜ್ಞೆಯನ್ನ ಚಾಚೂತಪ್ಪದೆ ಪಾಲಿಸಿದ್ರು.
14 ಯೆಹೂದ್ಯರ ಹಿರಿಯರು ಪ್ರವಾದಿ ಹಗ್ಗಾಯನ,+ ಇದ್ದೋವನ ಮೊಮ್ಮಗ ಜೆಕರ್ಯನ+ ಭವಿಷ್ಯವಾಣಿಗಳಿಂದ ಪ್ರೋತ್ಸಾಹ ಪಡೆದು ಕಟ್ಟಡದ ಕೆಲ್ಸ ಮುಂದುವರಿಸಿದ್ರು.+ ಇಸ್ರಾಯೇಲ್ ದೇವರು ಆಜ್ಞೆ ಕೊಟ್ಟ ಹಾಗೆ,+ ಕೋರೆಷ,+ ದಾರ್ಯಾವೆಷ,+ ಪರ್ಶಿಯ ರಾಜ ಅರ್ತಷಸ್ತ ಕೊಟ್ಟ ಆಜ್ಞೆ ಹಾಗೆ+ ಆ ಆಲಯವನ್ನ ಕಟ್ಟಿ ಮುಗಿಸಿದ್ರು.
15 ಅವರು ರಾಜ ದಾರ್ಯಾವೆಷ ಆಳ್ತಿದ್ದ ಆರನೇ ವರ್ಷದಲ್ಲಿ, ಅದಾರ್* ತಿಂಗಳಿನ ಮೂರನೇ ದಿನದಲ್ಲಿ ಆ ಆಲಯವನ್ನ ಪೂರ್ತಿ ಕಟ್ಟಿಮುಗಿಸಿದ್ರು.
16 ಆಗ ಪುರೋಹಿತರು, ಲೇವಿಯರು,+ ಕೈದಿಗಳಾಗಿದ್ದು ವಾಪಸ್ ಬಂದಿದ್ದ ಬೇರೆ ಇಸ್ರಾಯೇಲ್ಯರು ಅಂದ್ರೆ ಎಲ್ಲ ಇಸ್ರಾಯೇಲ್ಯರು ಸಂತೋಷ ಸಂಭ್ರಮದಿಂದ ದೇವರ ಆಲಯದ ಉದ್ಘಾಟನೆ* ಮಾಡಿದ್ರು.
17 ದೇವರ ಆಲಯದ ಉದ್ಘಾಟನೆಗಾಗಿ ಅವರು 100 ಹೋರಿ 200 ಟಗರು 400 ಕುರಿಮರಿ ಕೊಟ್ರು. ಎಲ್ಲ ಇಸ್ರಾಯೇಲ್ಯರಿಗಾಗಿ, ಇಸ್ರಾಯೇಲ್ ಕುಲಗಳ ಸಂಖ್ಯೆ ಪ್ರಕಾರ 12 ಗಂಡು ಆಡುಗಳನ್ನ ಪಾಪಪರಿಹಾರ ಬಲಿಯಾಗಿ ಕೊಟ್ರು.+
18 ಮೋಶೆಯ ಪುಸ್ತಕದಲ್ಲಿ ಹೇಳಿದ ಹಾಗೆ+ ಅವರು ಯೆರೂಸಲೇಮಲ್ಲಿ ದೇವರ ಸೇವೆಗಾಗಿ ಪುರೋಹಿತರನ್ನ, ಲೇವಿಯರನ್ನ ಅವ್ರವ್ರ ದಳಗಳ ಪ್ರಕಾರ ನೇಮಿಸಿದ್ರು.+
19 ಕೈದಿಗಳಾಗಿದ್ದು ವಾಪಸ್ ಬಂದಿದ್ದ ಜನ ಮೊದಲ್ನೇ ತಿಂಗಳಿನ 14ನೇ ದಿನ ಪಸ್ಕ ಹಬ್ಬ ಆಚರಿಸಿದ್ರು.+
20 ಎಲ್ಲ ಪುರೋಹಿತರು, ಲೇವಿಯರು ಪಸ್ಕ ಹಬ್ಬವನ್ನ ಆಚರಿಸೋಕೆ ತಮ್ಮನ್ನ ಶುದ್ಧ ಮಾಡ್ಕೊಂಡ್ರು.+ ಒಬ್ರೂ ಅಶುದ್ಧ ಆಗಿರಲಿಲ್ಲ. ಆ ಪುರೋಹಿತರು, ಲೇವಿಯರು ಕೈದಿಗಳಾಗಿದ್ದು ವಾಪಸ್ ಬಂದಿದ್ದ ಎಲ್ಲ ಜನ್ರಿಗಾಗಿ, ತಮಗಾಗಿ, ಬೇರೆ ಪುರೋಹಿತರಿಗಾಗಿ ಪಸ್ಕದ ಕುರಿಮರಿಯನ್ನ ಬಲಿಯಾಗಿ ಕೊಟ್ರು.
21 ಆಮೇಲೆ ವಾಪಸ್ ಬಂದಿದ್ದ ಇಸ್ರಾಯೇಲ್ಯರು ಅದನ್ನ ತಿಂದ್ರು. ಇಸ್ರಾಯೇಲ್ ದೇವರಾದ ಯೆಹೋವನನ್ನ ಆರಾಧಿಸೋಕೆ ಇಸ್ರಾಯೇಲ್ಯರ ಜೊತೆ ಸೇರ್ಕೊಂಡಿದ್ದ ಬೇರೆ ಜನ್ರೂ ಅದನ್ನ ತಿಂದ್ರು. ಆ ಜನ್ರು ಸುತ್ತಮುತ್ತ ಇರೋ ದೇಶಗಳ ಅಶುದ್ಧ ಕೆಲ್ಸಗಳನ್ನ ಬಿಟ್ಟು ತಮ್ಮನ್ನ ಶುದ್ಧ ಮಾಡ್ಕೊಂಡ್ರು.+
22 ಅವ್ರೆಲ್ಲ ಸಂತೋಷ ಸಂಭ್ರಮದಿಂದ ಏಳು ದಿನ ತನಕ ಹುಳಿ ಇಲ್ಲದ ರೊಟ್ಟಿಗಳ ಹಬ್ಬ ಆಚರಿಸಿದ್ರು.+ ಯಾಕಂದ್ರೆ ಯೆಹೋವನೇ ಅವ್ರಿಗೆ ಈ ಸಂತೋಷ ಸಿಗೋ ತರ ಮಾಡಿದ್ದನು. ಇಸ್ರಾಯೇಲ್ ದೇವರು ಅಶ್ಶೂರ್ಯರ ರಾಜನ* ಹೃದಯವನ್ನ ಇಸ್ರಾಯೇಲ್ಯರ ಕಡೆ ತಿರುಗಿಸಿ ಸತ್ಯ ದೇವರ ಆಲಯವನ್ನ ಕಟ್ಟೋಕೆ ಅವ್ರ ಜೊತೆ ಸಹಕರಿಸೋ ತರ ಮಾಡಿದ್ದನು.+
ಪಾದಟಿಪ್ಪಣಿ
^ ಅಥವಾ “ಮೇದ್ಯದ ಕೈಕೆಳಗಿದ್ದ ಜಿಲ್ಲೆಯಲ್ಲಿರೋ.”
^ ಸುಮಾರು 26.7 ಮೀ. (87.6 ಅಡಿ) ಪರಿಶಿಷ್ಟ ಬಿ14 ನೋಡಿ.
^ ಅಥವಾ “ಯೂಫ್ರೆಟೆಸ್ ನದಿಯ ಪಶ್ಚಿಮಕ್ಕಿರೋ.”
^ ಬಹುಶಃ, “ಕಸದ ತಿಪ್ಪೆ; ಸಗಣಿಯ ಕುಪ್ಪೆ.”
^ ಪರಿಶಿಷ್ಟ ಬಿ15 ನೋಡಿ.
^ ಅಥವಾ “ಸಮರ್ಪಣೆ.”
^ ಇದು ಪರ್ಶಿಯ ರಾಜನಾದ ಒಂದನೇ ದಾರ್ಯವೆಷನಿಗೆ ಸಿಕ್ಕಿದ ಬಿರುದು. ಯಾಕಂದ್ರೆ ಈ ಮುಂಚೆ ಅಶ್ಶೂರ್ಯರ ಪ್ರಾಂತ್ಯವಾಗಿದ್ದ ಸ್ಥಳವನ್ನ ಆ ಸಮಯದಲ್ಲಿ ಅವನು ಆಳ್ತಿದ್ದ.