ಎಸ್ತೇರ್ 1:1-22
1 ರಾಜ ಅಹಷ್ವೇರೋಷ* ಭಾರತದಿಂದ ಇಥಿಯೋಪ್ಯದ* ತನಕ 127 ಪ್ರದೇಶಗಳನ್ನ*+ ಆಳ್ತಿದ್ದ ಕಾಲ ಅದು.
2 ಆ ಸಮಯದಲ್ಲಿ ಅವನು ಶೂಷನ್*+ ಅನ್ನೋ ಕೋಟೆಯಿಂದ* ಆಳ್ತಿದ್ದ.
3 ಅವನು ಆಳ್ತಿದ್ದ ಮೂರನೇ ವರ್ಷದಲ್ಲಿ ಅವನು ತನ್ನೆಲ್ಲ ಅಧಿಕಾರಿಗಳಿಗೆ, ಸೇವಕರಿಗೆ ಒಂದು ಔತಣ ಮಾಡಿಸಿದ. ಮೇದ್ಯ+ ಮತ್ತು ಪರ್ಶಿಯದ+ ಸೇನಾಪತಿಗಳು, ಗಣ್ಯ ಅಧಿಕಾರಿಗಳು, ಪ್ರದೇಶಗಳ ರಾಜ್ಯಪಾಲರು ಆ ಔತಣಕ್ಕೆ ಬಂದಿದ್ರು.
4 ರಾಜ ಅವ್ರಿಗೆ ತುಂಬ ದಿನ ತನಕ ಅಂದ್ರೆ 180 ದಿನ ತನಕ ತನ್ನ ರಾಜ್ಯದ ಸಿರಿಸಂಪತ್ತನ್ನ, ವೈಭವವನ್ನ ತೋರಿಸಿದ.
5 ಆ ದಿನಗಳು ಮುಗಿದ್ಮೇಲೆ ರಾಜ ಶೂಷನ್ ಕೋಟೆಯಲ್ಲಿ ಔತಣ ಮಾಡಿಸಿದ. ಆ ಔತಣ ರಾಜನ ಅರಮನೆಯ ಉದ್ಯಾನವನದ ಅಂಗಳದಲ್ಲಿ ಏಳು ದಿನ ನಡೀತು. ಶ್ರೀಮಂತರು ಬಡವರು ಎಲ್ಲ ರೀತಿ ಜನ ಅಲ್ಲಿ ಬಂದಿದ್ರು.
6 ಇಡೀ ಅಂಗಳವನ್ನ ನಾರಿನ ಬಟ್ಟೆಯಿಂದ, ಒಳ್ಳೇ ಗುಣಮಟ್ಟದ ಹತ್ತಿ ಬಟ್ಟೆಯಿಂದ, ನೀಲಿ ಬಣ್ಣದ ಪರದೆಗಳಿಂದ ಅಲಂಕಾರ ಮಾಡಿದ್ರು. ಆ ಪರದೆಗಳನ್ನ ನೇರಳೆ ಬಣ್ಣದ ಹುರಿಗಳಿಂದ ಬೆಳ್ಳಿಯ ಉಂಗುರಗಳಿಗೆ ಕಟ್ಟಿ ಅಮೃತ ಶಿಲೆಯ ಕಂಬಗಳಿಗೆ ತೂಗುಹಾಕಿದ್ರು. ಅಮೃತ ಶಿಲೆ, ಮುತ್ತುಗಳು, ಕಪ್ಪು ಬಣ್ಣದ ಕಲ್ಲುಗಳ ಮಿಶ್ರಿತ ಶಿಲೆಯನ್ನ ಹಾಸಿದ್ದ ನೆಲದ ಮೇಲೆ ಬೆಳ್ಳಿಬಂಗಾರದ ದಿವಾನ್‌ಗಳನ್ನ ಇಟ್ಟಿದ್ರು.
7 ದ್ರಾಕ್ಷಾಮದ್ಯವನ್ನ ಚಿನ್ನದ ಲೋಟಗಳಲ್ಲಿ* ಹಾಕಿ ಕೊಡ್ತಿದ್ರು. ಒಂದು ಲೋಟದ ತರ ಇನ್ನೊಂದು ಲೋಟ ಇರ್ಲಿಲ್ಲ. ದ್ರಾಕ್ಷಾಮದ್ಯವನ್ನ ನೀರಿನ ತರ ಹರಿಸ್ತಿದ್ರು. ಅಷ್ಟೊಂದು ದ್ರಾಕ್ಷಾಮದ್ಯವನ್ನ ಕೊಡೋಕೆ ರಾಜನಿಗೆ ಮಾತ್ರ ಸಾಧ್ಯ ಇತ್ತು.
8 ಯಾರೂ ಅತಿಥಿಗಳಿಗೆ ದ್ರಾಕ್ಷಾಮದ್ಯ ಕುಡಿಯೋಕೆ ಒತ್ತಾಯ ಮಾಡಲಿಲ್ಲ.* ಯಾಕಂದ್ರೆ ಹಾಗೆ ಮಾಡಬಾರದು ಅಂತ ನಿಯಮ ಇತ್ತು. ರಾಜ ಅರಮನೆಯ ಅಧಿಕಾರಿಗಳಿಗೆ, ಅತಿಥಿಗಳು ಕೇಳಿದಷ್ಟು ದ್ರಾಕ್ಷಾಮದ್ಯವನ್ನ ಕೊಡಬೇಕಂತ ಆಜ್ಞೆ ಕೊಟ್ಟಿದ್ದ.
9 ರಾಣಿ ವಷ್ಟಿನೂ+ ಸ್ತ್ರೀಯರಿಗಾಗಿ ರಾಜ ಅಹಷ್ವೇರೋಷನ ರಾಜಭವನದಲ್ಲಿ* ಒಂದು ಔತಣ ಮಾಡಿಸಿದ್ದಳು.
10 ಏಳನೇ ದಿನ ರಾಜ ದ್ರಾಕ್ಷಾಮದ್ಯ ಕುಡಿದು ಖುಷಿಯಲ್ಲಿ ತೇಲಾಡ್ತಾ ಇದ್ದಾಗ ತನ್ನ ಸೇವಕರಿಗೆ ಅಂದ್ರೆ ಮೆಹೂಮಾನ್, ಬಿಜೆತಾ, ಹರ್ಬೋನಾ,+ ಬಿಗೆತಾ, ಅಬಗೆತಾ, ಜೇತರ್, ಕರ್ಕಸ್ ಅನ್ನೋ ಏಳು ಜನ ಆಸ್ಥಾನದ ಅಧಿಕಾರಿಗಳಿಗೆ ಒಂದು ಆಜ್ಞೆ ಕೊಟ್ಟ. ಇವರು ರಾಜನ ಸೇವೆಗಾಗಿ ಯಾವಾಗ್ಲೂ ಅವನ ಮುಂದೆ ಇರ್ತಿದ್ರು.
11 ರಾಣಿ ವಷ್ಟಿ ತನ್ನ ರಾಜಮನೆತನದ ತಲೆಯುಡುಪನ್ನ ಹಾಕೊಂಡು ರಾಜನ ಮುಂದೆ ಬಂದು ಎಲ್ಲ ಜನ್ರಿಗೆ, ಅಧಿಕಾರಿಗಳಿಗೆ ತನ್ನ ಸೌಂದರ್ಯ ಪ್ರದರ್ಶಿಸಬೇಕು ಅಂತ ರಾಜ ಹೇಳಿ ಕಳಿಸಿದ. ಯಾಕಂದ್ರೆ ರಾಣಿ ವಷ್ಟಿ ತುಂಬ ಅಪರೂಪದ ಸುಂದರಿ ಆಗಿದ್ದಳು.
12 ರಾಜ ಆಸ್ಥಾನದ ಅಧಿಕಾರಿಗಳ ಮೂಲಕ ಕೊಟ್ಟ ಆಜ್ಞೆಯನ್ನ ರಾಣಿ ವಷ್ಟಿ ತಿರಸ್ಕರಿಸಿದಳು. ರಾಜನ ಮುಂದೆ ಬರೋಕೆ ಎಷ್ಟು ಸಲ ಕರೆದ್ರೂ ಬರ್ಲೇ ಇಲ್ಲ. ಆಗ ರಾಜನಿಗೆ ತುಂಬ ಕೋಪ ಬಂತು. ಅವನ ರಕ್ತ ಕುದಿಯೋಕೆ ಶುರು ಆಯ್ತು.
13 ರಾಜ ಈ ವಿಷ್ಯಗಳ ಬಗ್ಗೆ ಒಳ್ಳೇ ತಿಳುವಳಿಕೆ ಇದ್ದ ವಿವೇಕಿಗಳ ಜೊತೆ ಮಾತಾಡಿದ. (ರಾಜ ತನಗೆ ಸಂಬಂಧಪಟ್ಟ ವಿಷ್ಯಗಳನ್ನ ಈ ರೀತಿ ಕಾನೂನಿನ ಬಗ್ಗೆ, ಮೊಕದ್ದಮೆಗಳ ಬಗ್ಗೆ ಚೆನ್ನಾಗಿ ತಿಳ್ಕೊಂಡಿದ್ದವರ ಮುಂದೆ ಇಡ್ತಿದ್ದ.
14 ಅವ್ರಲ್ಲಿ ರಾಜನಿಗೆ ತುಂಬ ಆಪ್ತರಾಗಿದ್ದ ಸಲಹೆಗಾರರು ಯಾರಂದ್ರೆ: ಕರ್ಷೆನಾ, ಶೇತಾರ್, ಅದ್ಮಾತಾ, ತರ್ಷೀಷ್, ಮೆರೆಸ್, ಮರ್ಸೆನಾ, ಮೆಮೂಕಾನ್. ಈ ಏಳೂ ಜನ ಮೇದ್ಯ ಮತ್ತು ಪರ್ಶಿಯದ ಅಧಿಕಾರಿಗಳಾಗಿದ್ರು.+ ರಾಜ್ಯದಲ್ಲಿ ತುಂಬ ದೊಡ್ಡ ಸ್ಥಾನ ಪಡ್ಕೊಂಡಿದ್ದ ಇವರು ಯಾವಾಗ ಬೇಕಾದ್ರೂ ರಾಜನ ಹತ್ರ ಹೋಗಬಹುದಿತ್ತು.)
15 ರಾಜ ಅವ್ರಿಗೆ “ರಾಜ ಅಹಷ್ವೇರೋಷನಾಗಿರೋ ನಾನು ಆಸ್ಥಾನದ ಅಧಿಕಾರಿಗಳ ಮೂಲಕ ಕೊಟ್ಟ ಆಜ್ಞೆಯನ್ನ ರಾಣಿ ವಷ್ಟಿ ತಿರಸ್ಕರಿಸಿದಳು. ಹಾಗಾಗಿ ನಿಯಮದ ಪ್ರಕಾರ ಅವಳಿಗೆ ಏನು ಮಾಡಬೇಕಂತ ಹೇಳಿ” ಅಂದ.
16 ಅದಕ್ಕೆ ರಾಜನ ಮುಂದೆ, ಅಧಿಕಾರಿಗಳ ಮುಂದೆ ಮೆಮೂಕಾನ “ರಾಣಿ ವಷ್ಟಿ ತಪ್ಪು ಮಾಡಿದ್ದು ರಾಜನ ವಿರುದ್ಧ ಮಾತ್ರ ಅಲ್ಲ.+ ರಾಜ ಅಹಷ್ವೇರೋಷನ ಸಂಸ್ಥಾನದಲ್ಲಿರೋ ಎಲ್ಲ ಅಧಿಕಾರಿಗಳ ಮತ್ತು ಜನ್ರ ವಿರುದ್ಧ.
17 ಯಾಕಂದ್ರೆ ರಾಣಿ ಮಾಡಿದ ವಿಷ್ಯ ನಾಳೆ ಎಲ್ಲ ಹೆಂಗಸ್ರಿಗೆ ಗೊತ್ತಾದ್ರೆ ಅವರು ಕೂಡ ತಮ್ಮತಮ್ಮ ಗಂಡಂದಿರಿಗೆ ಮರ್ಯಾದೆ ಕೊಡಲ್ಲ. ‘ರಾಣಿ ವಷ್ಟಿನೇ ರಾಜ ಅಹಷ್ವೇರೋಷನ ಮಾತು ಕೇಳಲಿಲ್ಲ. ಕರೆದಾಗ ಅವನ ಮುಂದೆ ಹೋಗಲಿಲ್ಲ’ ಅಂತ ಹೇಳ್ತಾರೆ.
18 ರಾಣಿ ಮಾಡಿದ ಈ ವಿಷ್ಯ ಮೇದ್ಯ ಮತ್ತು ಪರ್ಶಿಯದ ಅಧಿಕಾರಿಗಳ ಹೆಂಡತಿಯರಿಗೆ ಗೊತ್ತಾದ್ರೆ ಇವತ್ತೇ ಅವರು ಕೂಡ ತಮ್ಮ ಗಂಡಂದಿರ ಜೊತೆ ಅವಳ ತರ ಮಾತಾಡಿ ಮರ್ಯಾದೆ ಕೊಡಲ್ಲ. ಆಗ ಅವ್ರ ಗಂಡಂದಿರಿಗೆ ತುಂಬ ಕೋಪ ಬರುತ್ತೆ.
19 ಹಾಗಾಗಿ ರಾಜನಿಗೆ ಸರಿ ಅನಿಸೋದಾದ್ರೆ ಅವನು ಒಂದು ರಾಜಾಜ್ಞೆ ಹೊರಡಿಸಬಹುದು. ಅದೇನಂದ್ರೆ ರಾಣಿ ವಷ್ಟಿ ಇನ್ನು ಯಾವತ್ತೂ ರಾಜ ಅಹಷ್ವೇರೋಷನ ಮುಂದೆ ಬರಬಾರದು. ಈ ರಾಜಾಜ್ಞೆ ಯಾವತ್ತೂ ರದ್ದಾಗದ+ ಹಾಗೆ ಅದನ್ನ ಮೇದ್ಯ ಮತ್ತು ಪರ್ಶಿಯರ ನಿಯಮಗಳಲ್ಲಿ ಸೇರಿಸಬಹುದು. ಅಷ್ಟೇ ಅಲ್ಲ ವಷ್ಟಿಯ ಸ್ಥಾನಕ್ಕೆ ಅವಳಿಗಿಂತ ಒಳ್ಳೇ ಹೊಸ ರಾಣಿಯನ್ನ ರಾಜ ಆರಿಸ್ಕೊಳ್ಳಬಹುದು.
20 ರಾಜನ ಈ ಆಜ್ಞೆ ಬಗ್ಗೆ ಸಾಮ್ರಾಜ್ಯದಲ್ಲಿ ಇರೋರೆಲ್ಲ ಕೇಳಿಸ್ಕೊಂಡಾಗ ಗಂಡ ಸಾಮಾನ್ಯನಾಗಿ ಇರಲಿ ದೊಡ್ಡ ಸ್ಥಾನದಲ್ಲೇ ಇರಲಿ ಎಲ್ಲ ಹೆಂಡತಿಯರು ಗೌರವ ಕೊಡ್ತಾರೆ” ಅಂದ.
21 ಈ ಸಲಹೆ ರಾಜನಿಗೂ ಅಧಿಕಾರಿಗಳಿಗೂ ಇಷ್ಟ ಆಯ್ತು. ಮೆಮೂಕಾನ್ ಹೇಳಿದ ಹಾಗೇ ರಾಜ ಮಾಡಿದ.
22 ಹಾಗಾಗಿ ಅವನು ತನ್ನ ಎಲ್ಲ ಪ್ರಾಂತ್ಯಗಳಿಗೆ+ ಅವ್ರವ್ರ ಭಾಷೆಯಲ್ಲಿ, ಅವ್ರವ್ರ ಲಿಪಿಯಲ್ಲಿ ಪತ್ರಗಳನ್ನ ಬರೆದು ಕಳಿಸಿದ. ಆ ಪತ್ರಗಳಲ್ಲಿ ಹೀಗಿತ್ತು: ಗಂಡಸ್ರು ಮನೆ ಯಜಮಾನರಾಗಿ ಇರ್ತಾರೆ. ಅವರು ಕುಟುಂಬದ ಮೇಲೆ ಅಧಿಕಾರ ನಡೆಸಬೇಕು. ಅವನ ಜನ ಮಾತಾಡೋ ಭಾಷೆಯನ್ನೇ ಅವನ ಮನೆಯಲ್ಲಿ ಆಡಬೇಕು.
ಪಾದಟಿಪ್ಪಣಿ
^ ಇವನು ಮಹಾರಾಜ ದಾರ್ಯಾವೇಷನ (ದಾರ್ಯಾವೇಷ ಹಿಸ್ಟಾಸ್ಪಿಸ್) ಮಗನಾಗಿದ್ದ ಮೊದಲ್ನೇ ಸರಕ್ಸೀಸ್ ಆಗಿರಬಹುದು ಅಂತ ಹೇಳಲಾಗುತ್ತೆ.
^ ಅಥವಾ “ಕೂಷ್.”
^ ಅಥವಾ “ರಾಜನ ಕೈಕೆಳಗಿದ್ದ ಜಿಲ್ಲೆಗಳನ್ನ.”
^ ಅಥವಾ “ಸೂಸಾ.”
^ ಅಥವಾ “ಅರಮನೆಯಿಂದ.”
^ ಅಥವಾ “ಪಾತ್ರೆಗಳಲ್ಲಿ.”
^ ಅಥವಾ “ಕುಡಿಯೋ ವಿಷ್ಯದಲ್ಲಿ ಯಾವುದೇ ಕಡ್ಡಾಯ ಇರಲಿಲ್ಲ.”
^ ಅಥವಾ “ಅರಮನೆಯಲ್ಲಿ.”