ಎಸ್ತೇರ್‌ 2:1-23

  • ಹೊಸ ರಾಣಿಗಾಗಿ ಹುಡುಕಾಟ (1-14)

  • ಎಸ್ತೇರ್‌ ರಾಣಿಯಾದಳು (15-20)

  • ಮೊರ್ದೆಕೈ ಸಂಚು ಬಯಲು ಮಾಡಿದ (21-23)

2  ಈ ವಿಷ್ಯಗಳೆಲ್ಲ ಆದ್ಮೇಲೆ ರಾಜ ಅಹಷ್ವೇರೋಷನ+ ಕೋಪ ತಣ್ಣಗಾಯ್ತು. ಆಗ ಅವನು ವಷ್ಟಿ ಮಾಡಿದ್ರ ಬಗ್ಗೆ+ ಅವಳಿಗೆ ಕೊಟ್ಟ ಶಿಕ್ಷೆ ಬಗ್ಗೆ ನೆನಪಿಸ್ಕೊಂಡ.+  ಆಗ ರಾಜನ ಆಪ್ತ ಸೇವಕರು ಹೀಗಂದ್ರು: “ರಾಜನಿಗಾಗಿ ಸುಂದರವಾದ ಯುವ ಕನ್ಯೆಯರನ್ನ ಹುಡುಕಬೇಕು.  ಇದಕ್ಕಾಗಿ ರಾಜ ತನ್ನ ಸಾಮ್ರಾಜ್ಯದಲ್ಲಿರೋ ಎಲ್ಲ ಪ್ರಾಂತ್ಯಗಳಲ್ಲಿ* ಜನ್ರನ್ನ ನೇಮಿಸ್ಲಿ.+ ಅವರು ಸುಂದರವಾಗಿರೋ ಯುವ ಕನ್ಯೆಯರನ್ನ ಹುಡುಕಿ ಶೂಷನಿನ* ಕೋಟೆಗೆ* ಕರ್ಕೊಂಡು ಬಂದು ಸ್ತ್ರೀಯರ ಅರಮನೆಯಲ್ಲಿ* ಬಿಡ್ಲಿ. ರಾಜ ಕಂಚುಕಿಯೂ* ಸ್ತ್ರೀಯರ ಪರಿಪಾಲಕನೂ ಆಗಿರೋ ಹೇಗೈ+ ಸಂರಕ್ಷಣೆಯಲ್ಲಿ ಆ ಕನ್ಯೆಯರನ್ನ ಇಡ್ಲಿ. ಅವ್ರ ಸೌಂದರ್ಯವನ್ನ ಹೆಚ್ಚಿಸೋ ಲೇಪನಗಳಿಗಾಗಿ* ಏರ್ಪಾಡು ಮಾಡ್ಲಿ.  ರಾಜನಿಗೆ ಯಾರು ತುಂಬ ಇಷ್ಟ ಆಗ್ತಾಳೋ ಆ ಯುವತಿ ವಷ್ಟಿಗೆ ಬದ್ಲು ರಾಣಿ ಆಗ್ಲಿ.”+ ಈ ಸಲಹೆ ರಾಜನಿಗೆ ಇಷ್ಟ ಆಯ್ತು. ಅವನು ಹಾಗೇ ಮಾಡಿದ.  ಶೂಷನ್‌*+ ಕೋಟೆಯಲ್ಲಿ ಮೊರ್ದೆಕೈ+ ಅನ್ನೋ ಹೆಸ್ರಿನ ಒಬ್ಬ ಯೆಹೂದ್ಯ ಇದ್ದ. ಇವನು ಬೆನ್ಯಾಮೀನ್‌ ಕುಲದವನಾದ+ ಕೀಷನ ಮರಿಮಗ, ಶಿಮ್ಮಿಯ ಮೊಮ್ಮಗ, ಯಾಯೀರನ ಮಗ.  ಬಾಬೆಲಿನ ರಾಜ ನೆಬೂಕದ್ನೆಚ್ಚರ ಯೆಹೂದದ ರಾಜ ಯೆಕೊನ್ಯನ*+ ಜೊತೆ ಯೆರೂಸಲೇಮಿಂದ ಕೈದಿಯಾಗಿ ಕರ್ಕೊಂಡು ಬಂದ ಜನ್ರಲ್ಲಿ ಇವನೂ ಇದ್ದ.  ಈ ಮೊರ್ದೆಕೈ ತನ್ನ ತಂದೆಯ ಸಹೋದರನ+ ಮಗಳಾದ ಹದೆಸ್ಸಾಳ* ಅಂದ್ರೆ ಎಸ್ತೇರ್‌ಳ ಪಾಲಕನಾಗಿದ್ದ.* ಯಾಕಂದ್ರೆ ಅವಳು ತಂದೆತಾಯಿ ಇಲ್ಲದ ತಬ್ಬಲಿ ಆಗಿದ್ದಳು. ಅವಳು ರೂಪವತಿ ಆಗಿದ್ದಳು, ನೋಡೋಕೆ ತುಂಬ ಚೆನ್ನಾಗಿದ್ದಳು. ಅವಳ ತಂದೆತಾಯಿ ತೀರಿಹೋದ ಮೇಲೆ ಮೊರ್ದೆಕೈ ಅವಳನ್ನ ಸ್ವಂತ ಮಗಳ ಹಾಗೆ ನೋಡ್ಕೊಂಡಿದ್ದ.  ರಾಜನ ಆಜ್ಞೆ ಮತ್ತು ಅವನ ನಿಯಮದ ಪ್ರಕಾರ ತುಂಬ ಯುವತಿಯರನ್ನ ಶೂಷನ್‌* ಕೋಟೆಗೆ ಕರ್ಕೊಂಡು ಬಂದ್ರು. ಹೀಗೆ ಕರ್ಕೊಂಡು ಬಂದ ಯುವತಿಯರಲ್ಲಿ ಎಸ್ತೇರ್‌ ಕೂಡ ಇದ್ದಳು. ಆ ಎಲ್ಲ ಯುವತಿಯರನ್ನ ಹೇಗೈ ನೋಡ್ಕೊಳ್ತಿದ್ದ.+  ಹೇಗೈಗೆ ಎಸ್ತೇರ್‌ ತುಂಬ ಇಷ್ಟ ಆದಳು, ಅವಳಿಗೆ ದಯೆ* ತೋರಿಸಿ ಅವಳ ಸೌಂದರ್ಯ ಹೆಚ್ಚಿಸೋಕೆ*+ ಮತ್ತು ಒಳ್ಳೇ ಆಹಾರಕ್ಕಾಗಿ ಏರ್ಪಾಡು ಮಾಡಿದ. ಅಷ್ಟೇ ಅಲ್ಲ ರಾಜನ ಅರಮನೆಯಿಂದ ಏಳು ಯುವತಿಯರನ್ನ ಅವಳ ಸೇವಕಿಯರಾಗಿ ನೇಮಿಸಿದ. ಅವಳನ್ನ, ಅವಳ ಸೇವಕಿಯರನ್ನ ಸ್ತ್ರೀಯರ ಅರಮನೆಯಲ್ಲಿದ್ದ ಅತ್ಯುತ್ತಮ ಸ್ಥಳದಲ್ಲಿ ಇರಿಸಿದ. 10  ಎಸ್ತೇರ್‌ ತನ್ನ ಜನ್ರ ಬಗ್ಗೆಯಾಗಲಿ ತನ್ನ ಸಂಬಂಧಿಕರ ಬಗ್ಗೆಯಾಗಲಿ ಯಾರಿಗೂ ಹೇಳಲಿಲ್ಲ.+ ಯಾಕಂದ್ರೆ ಆ ವಿವರಗಳನ್ನ ಯಾರಿಗೂ ಹೇಳಬಾರದು ಅಂತ ಮೊರ್ದೆಕೈ+ ಈ ಮುಂಚೆನೇ ಹೇಳಿದ್ದ.+ 11  ಎಸ್ತೇರ್‌ ಹೇಗಿದ್ದಾಳೆ, ಅವಳಿಗೆ ಏನಾಗ್ತಿದೆ ಅಂತ ತಿಳಿಯೋಕೆ ಮೊರ್ದೆಕೈ ಪ್ರತಿದಿನ ಸ್ತ್ರೀಯರ ಅರಮನೆಯ ಅಂಗಳಕ್ಕೆ ಬಂದು ಹೋಗ್ತಿದ್ದ. 12  ಸ್ತ್ರೀಯರ ಸೌಂದರ್ಯ ಹೆಚ್ಚಿಸೋಕಂತಾನೇ ಇದ್ದ 12 ತಿಂಗಳಿನ ಕಾರ್ಯಕ್ರಮ ಮುಗಿದ ಮೇಲೆ ಪ್ರತಿಯೊಬ್ಬ ಯುವತಿ ತನ್ನ ಸರದಿ ಪ್ರಕಾರ ರಾಜ ಅಹಷ್ವೇರೋಷನ ಹತ್ರ ಹೋಗಬೇಕಿತ್ತು. ಅವಳು ರಾಜನ ಹತ್ರ ಹೋಗೋ ಮುಂಚೆ ತನ್ನ ಸೌಂದರ್ಯವನ್ನ ಹೆಚ್ಚಿಸೋ ಈ ಕಾರ್ಯಕ್ರಮವನ್ನ ಪೂರ್ತಿ ಮಾಡಬೇಕಿತ್ತು. ಅವಳು ಆರು ತಿಂಗಳ ತನಕ ಗಂಧರಸದ+ ಎಣ್ಣೆಯನ್ನ, ಆರು ತಿಂಗಳುಗಳ ತನಕ ಸುಗಂಧ ತೈಲವನ್ನ+ ಬೇರೆಬೇರೆ ಲೇಪನಗಳನ್ನ ಹಚ್ಕೊಳ್ಳಬೇಕಿತ್ತು. 13  ಆಮೇಲೆ ಅವಳು ರಾಜನ ಹತ್ರ ಹೋಗೋಕೆ ಸಿದ್ಧ ಆಗ್ತಿದ್ದಳು. ಸ್ತ್ರೀಯರ ಅರಮನೆಯಿಂದ ರಾಜನ ಅರಮನೆಗೆ ಹೋಗುವಾಗ ಅವಳು ಏನೇ ಕೇಳಿದ್ರೂ ಕೊಡ್ತಿದ್ರು. 14  ಸಾಯಂಕಾಲ ರಾಜನ ಹತ್ರ ಹೋಗ್ತಿದ್ದಳು. ಮಾರನೇ ದಿನ ಬೆಳಿಗ್ಗೆ ಸ್ತ್ರೀಯರಿಗಾಗೇ ಇದ್ದ ಇನ್ನೊಂದು ಅರಮನೆಗೆ ವಾಪಸ್‌ ಬರ್ತಿದ್ದಳು. ಅಲ್ಲಿ ರಾಜನ ಕಂಚುಕಿಯೂ+ ಉಪಪತ್ನಿಯರ ಪರಿಪಾಲಕನೂ ಆಗಿದ್ದ ಶವಷ್ಗಜನ ಆರೈಕೆ ಕೆಳಗೆ ಇರ್ತಿದ್ದಳು. ರಾಜನಿಗೆ ಅವಳು ಇಷ್ಟವಾಗಿ ಅವನು ಅವಳನ್ನ ಹೆಸ್ರಿಟ್ಟು ಕರೆದ್ರೆ ಮಾತ್ರ ಮತ್ತೆ ಅವಳು ರಾಜನ ಹತ್ರ ಹೋಗಬಹುದಿತ್ತು.+ 15  ಹೀಗೆ ಮೊರ್ದೆಕೈಯ ತಂದೆಯ ಸಹೋದರ ಅಬೀಹೈಲನ ಮಗಳ ಅಂದ್ರೆ ಮೊರ್ದೆಕೈ ತನ್ನ ಸ್ವಂತ ಮಗಳ ತರ ಬೆಳೆಸಿದ ಎಸ್ತೇರಳ+ ಸರದಿ ಬಂತು. ಅವಳು ಸ್ತ್ರೀಯರ ಪರಿಪಾಲಕನೂ ರಾಜನ ಕಂಚುಕಿಯೂ ಆದ ಹೇಗೈ ನೀಡಿದ್ದನ್ನೇ ಹೊರತೂ ಬೇರೆ ಏನನ್ನೂ ಕೇಳಲಿಲ್ಲ. (ಎಸ್ತೇರಳನ್ನ ನೋಡಿದವ್ರೆಲ್ಲ ಅವಳನ್ನ ತುಂಬ ಮೆಚ್ಚುತ್ತಿದ್ರು.) 16  ರಾಜ ಅಹಷ್ವೇರೋಷನ ಆಳ್ವಿಕೆಯ ಏಳನೇ ವರ್ಷದ+ ಹತ್ತನೇ ತಿಂಗಳಲ್ಲಿ ಅಂದ್ರೆ ಟೇಬೇತ್‌* ತಿಂಗಳಲ್ಲಿ ಎಸ್ತೇರಳನ್ನ ರಾಜನ ಅರಮನೆಗೆ ಕರ್ಕೊಂಡು ಬಂದ್ರು. 17  ರಾಜ ಬೇರೆ ಎಲ್ಲ ಯುವತಿಯರಿಗಿಂತ ಎಸ್ತೇರಳನ್ನ ಜಾಸ್ತಿ ಪ್ರೀತಿಸಿದ. ಅವಳು ಬೇರೆ ಎಲ್ಲ ಕನ್ಯೆಯರಿಗಿಂತ ಹೆಚ್ಚಾಗಿ ರಾಜನ ಮೆಚ್ಚಿಕೆಯನ್ನ, ಒಪ್ಪಿಗೆಯನ್ನ ಪಡೆದಳು. ಹಾಗಾಗಿ ಅವನು ಅವಳ ತಲೆ ಮೇಲೆ ತಲೆಯುಡುಪನ್ನ* ಇಟ್ಟು ವಷ್ಟಿಯ ಸ್ಥಾನದಲ್ಲಿ ಅವಳನ್ನ ರಾಣಿಯಾಗಿ ಮಾಡಿದ.+ 18  ಆಮೇಲೆ ರಾಜ ತನ್ನ ಎಲ್ಲ ಅಧಿಕಾರಿಗಳಿಗಾಗಿ ಮತ್ತು ಸೇವಕರಿಗಾಗಿ ಎಸ್ತೇರ್‌ ಹೆಸ್ರಲ್ಲಿ ಒಂದು ದೊಡ್ಡ ಔತಣ ಮಾಡಿಸಿದ. ಅವನು ತನ್ನ ಪ್ರಾಂತ್ಯದಲ್ಲಿದ್ದ ಎಲ್ಲ ಕೈದಿಗಳಿಗೆ ಬಿಡುಗಡೆ ಆಗಬೇಕಂತ ಆಜ್ಞಾಪಿಸಿದ. ತನ್ನ ಸ್ಥಾನಮಾನಕ್ಕೆ ತಕ್ಕ ಹಾಗೆ ಉಡುಗೊರೆಗಳನ್ನ ಕೊಡ್ತಾ ಬಂದ. 19  ಎರಡನೇ ಸಲ ಕನ್ಯೆಯರನ್ನ*+ ಕರ್ಕೊಂಡು ಬಂದಾಗ ಮೊರ್ದೆಕೈ ರಾಜನ ಅರಮನೆಯ ಹೆಬ್ಬಾಗಿಲಲ್ಲಿ ಕೂತಿದ್ದ. 20  ಮೊರ್ದೆಕೈ ಆಜ್ಞಾಪಿಸಿದ ಹಾಗೇ ಎಸ್ತೇರ್‌ ತನ್ನ ಜನ್ರ ಬಗ್ಗೆಯಾಗಲಿ ತನ್ನ ಸಂಬಂಧಿಕರ ಬಗ್ಗೆಯಾಗಲಿ ಯಾರಿಗೂ ಹೇಳಿರಲಿಲ್ಲ.+ ಎಸ್ತೇರ್‌ ಮೊರ್ದೆಕೈಯ ಆರೈಕೆಯಲ್ಲಿದ್ದಾಗ ಹೇಗೆ ಅವನ ಮಾತನ್ನ ಕೇಳ್ತಿದ್ದಳೋ ಈಗ್ಲೂ ಹಾಗೇ ಅವನ ಮಾತನ್ನ ಕೇಳ್ತಿದ್ದಳು.+ 21  ಆ ದಿನಗಳಲ್ಲಿ ಮೊರ್ದೆಕೈ ರಾಜನ ಅರಮನೆಯ ಹೆಬ್ಬಾಗಿಲಲ್ಲಿ ಕೂತ್ಕೊಳ್ತಿದ್ದ. ಅದೇ ಸಮಯದಲ್ಲಿ ರಾಜನ ಬಾಗಿಲು ಕಾಯೋರಾಗಿ ಸೇವೆಮಾಡ್ತಿದ್ದ ಬಿಗೆತಾನ್‌ ಮತ್ತು ತೆರೆಷ್‌ ಅನ್ನೋ ಇಬ್ರು ಆಸ್ಥಾನದ ಅಧಿಕಾರಿಗಳು ರಾಜ ಅಹಷ್ವೇರೋಷನ ಮೇಲಿನ ಕೋಪದಿಂದ ಅವನನ್ನ ಸಾಯಿಸೋಕೆ* ಸಂಚು ಮಾಡಿದ್ರು. 22  ಇದ್ರ ಬಗ್ಗೆ ಮೊರ್ದೆಕೈಗೆ ಗೊತ್ತಾಯ್ತು. ತಕ್ಷಣ ಎಸ್ತೇರ್‌ ರಾಣಿಗೆ ಆ ವಿಷ್ಯ ತಿಳಿಸಿದ. ಆಗ ಎಸ್ತೇರ್‌ ಮೊರ್ದೆಕೈ ಪರವಾಗಿ* ಎಲ್ಲ ವಿಷ್ಯವನ್ನ ರಾಜನಿಗೆ ಹೇಳಿದಳು. 23  ಈ ವಿಷ್ಯದ ಬಗ್ಗೆ ತನಿಖೆ ಮಾಡಿದಾಗ ಅದು ನಿಜ ಅಂತ ಸಾಬೀತಾಯ್ತು. ಆಗ ಆ ಇಬ್ರು ಗಂಡಸ್ರನ್ನ ಕಂಬಕ್ಕೆ ನೇತುಹಾಕಲಾಯ್ತು. ಈ ವಿಷ್ಯಗಳನ್ನೆಲ್ಲ ರಾಜನ ಮುಂದೆ ಇತಿಹಾಸ ಪುಸ್ತಕದಲ್ಲಿ ಬರೆಸಲಾಯ್ತು.+

ಪಾದಟಿಪ್ಪಣಿ

ಅಥವಾ “ತನ್ನ ಕೈಕೆಳಗಿದ್ದ ಜಿಲ್ಲೆಗಳಲ್ಲಿ.”
ಅಥವಾ “ಸೂಸಾ.”
ಅಥವಾ “ಅರಮನೆಗೆ.”
ಅಥವಾ “ಅಂತಃಪುರದಲ್ಲಿ.”
ಅಕ್ಷ. “ನಪುಂಸಕ.” ಪದವಿವರಣೆ ನೋಡಿ.
ಅಥವಾ “ಸೌಂದರ್ಯ ಲೇಪನಗಳನ್ನ ಹಚ್ಚೋಕೆ.”
ಅಥವಾ “ಸೂಸಾ.”
2ಅರ 24:8ರಲ್ಲಿ ಇವನನ್ನ ಯೆಹೋಯಾಖೀನ ಅಂತ ಕರೆಯಲಾಗಿದೆ.
ಅರ್ಥ “ಮರ್ಟಲ್‌ ಮರ.”
ಅಥವಾ “ಕಾಳಜಿ ವಹಿಸ್ತಿದ್ದ.”
ಅಥವಾ “ಸೂಸಾ.”
ಅಥವಾ “ಶಾಶ್ವತ ಪ್ರೀತಿ.”
ಅಥವಾ “ಸೌಂದರ್ಯ ಲೇಪನಗಳನ್ನ ಹಚ್ಚೋಕೆ.”
ಅಥವಾ “ಪೇಟ.”
ಅಥವಾ “ಯುವತಿಯರನ್ನ.”
ಅಕ್ಷ. “ಅವನ ಮೇಲೆ ಕೈಹಾಕೋಕೆ.”
ಅಕ್ಷ. “ಮೊರ್ದೆಕೈ ಹೆಸ್ರಲ್ಲಿ.”