ಎಸ್ತೇರ್‌ 3:1-15

  • ಹಾಮಾನನನ್ನ ರಾಜ ಗೌರವಿಸಿದ (1-4)

  • ಯೆಹೂದ್ಯರನ್ನ ನಾಶ ಮಾಡೋಕೆ ಹಾಮಾನ ಸಂಚು ಮಾಡಿದ (5-15)

3  ಇದಾದ ಮೇಲೆ ರಾಜ ಅಹಷ್ವೇರೋಷ ಅಗಾಗನ+ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನಿಗೆ+ ಪದವಿ ಕೊಟ್ಟು ತನ್ನ ಹತ್ರ ಇದ್ದ ಬೇರೆಲ್ಲ ಅಧಿಕಾರಿಗಳಿಗಿಂತ ಅವನನ್ನ ದೊಡ್ಡ ಸ್ಥಾನಕ್ಕೆ ಏರಿಸಿದ.+  ಅರಮನೆಯ ಹೆಬ್ಬಾಗಿಲ ಹತ್ರ ಇದ್ದ ರಾಜನ ಸೇವಕರೆಲ್ಲ ಹಾಮಾನನಿಗೆ ಬಗ್ಗಿ ನಮಸ್ಕಾರ ಮಾಡ್ತಾ ಇದ್ರು. ಯಾಕಂದ್ರೆ ಅವನನ್ನ ಗೌರವಿಸೋಕೆ ಹೀಗೆ ಮಾಡಬೇಕಂತ ರಾಜ ಆಜ್ಞೆ ಕೊಟ್ಟಿದ್ದ. ಆದ್ರೆ ಮೊರ್ದೆಕೈ ಹಾಮಾನನಿಗೆ ಬಗ್ಗಿ ನಮಸ್ಕಾರ ಮಾಡೋಕೆ ಅಥವಾ ಅಡ್ಡಬೀಳೋಕೆ ಒಪ್ಪಲಿಲ್ಲ.  ಹಾಗಾಗಿ ಅರಮನೆಯ ಹೆಬ್ಬಾಗಿಲ ಹತ್ರ ಇದ್ದ ರಾಜನ ಸೇವಕರು ಮೊರ್ದೆಕೈಗೆ “ನೀನ್ಯಾಕೆ ರಾಜಾಜ್ಞೆ ಮೀರ್ತಾ ಇದ್ದೀಯ?” ಅಂತ ಕೇಳಿದ್ರು.  ದಿನಾಲೂ ಇದನ್ನೇ ಕೇಳ್ತಿದ್ರು. ಆದ್ರೆ ಅವನು ಅವ್ರ ಮಾತನ್ನ ಕಿವಿಗೆ ಹಾಕೊಳ್ತಾನೇ ಇರ್ಲಿಲ್ಲ. ಆಗ ಅವರು ಈ ವಿಷ್ಯ ಹಾಮಾನನಿಗೆ ಹೇಳಿದ್ರು. ಮೊರ್ದೆಕೈಗೆ ಶಿಕ್ಷೆ ಆಗುತ್ತಾ ಇಲ್ವಾ ಅಂತ ನೋಡೋಕೆ ಹಾಗೆ ಮಾಡಿದ್ರು.+ ಯಾಕಂದ್ರೆ ತಾನೊಬ್ಬ ಯೆಹೂದಿ+ ಅಂತ ಮೊರ್ದೆಕೈ ಅವ್ರಿಗೆ ಹೇಳಿದ್ದ.  ಮೊರ್ದೆಕೈ ತನಗೆ ಬಗ್ಗಿ ನಮಸ್ಕಾರ ಮಾಡದೇ ಇರೋದನ್ನ ನೋಡಿದಾಗ ಹಾಮಾನನ ಕೋಪ ನೆತ್ತಿಗೇರಿತು.+  ಆದ್ರೆ ಮೊರ್ದೆಕೈ ಮೇಲೆ ಮಾತ್ರ ಕೈಹಾಕೋದು* ಹಾಮಾನನ ದೃಷ್ಟಿಯಲ್ಲಿ ತುಂಬ ಚಿಕ್ಕ ವಿಷ್ಯ ಆಗಿತ್ತು. ಯಾಕಂದ್ರೆ ಮೊರ್ದೆಕೈಯ ಜನ್ರ ಬಗ್ಗೆನೂ ಅವನಿಗೆ ಹೇಳಿದ್ರು. ಹಾಗಾಗಿ ಹಾಮಾನ ಅಹಷ್ವೇರೋಷನ ಸಾಮ್ರಾಜ್ಯದಲ್ಲಿದ್ದ ಮೊರ್ದೆಕೈಯ ಜನ್ರನ್ನ ಅಂದ್ರೆ ಎಲ್ಲ ಯೆಹೂದ್ಯರನ್ನ ನಾಶ ಮಾಡೋಕೆ ದಾರಿ ಹುಡುಕ್ತಿದ್ದ.  ಅವ್ರನ್ನ ಯಾವ ತಿಂಗಳ ಯಾವ ದಿನದಲ್ಲಿ ನಾಶ ಮಾಡಬೇಕಂತ ತೀರ್ಮಾನ ಮಾಡೋಕೆ ರಾಜ ಅಹಷ್ವೇರೋಷ ಆಳ್ತಿದ್ದ 12ನೇ ವರ್ಷದ+ ಮೊದಲ್ನೇ ತಿಂಗಳಲ್ಲಿ ಅಂದ್ರೆ ನೈಸಾನ್‌* ತಿಂಗಳಲ್ಲಿ ಹಾಮಾನನ ಮುಂದೆ ಪೂರನ್ನ (ಅಂದ್ರೆ ಚೀಟು) ಹಾಕಿದ್ರು.+ ಅದು 12ನೇ ತಿಂಗಳಿನ ಅಂದ್ರೆ ಅದಾರ್‌*+ ತಿಂಗಳಿನ ಮೇಲೆ ಬಿತ್ತು.  ಹಾಮಾನ ರಾಜ ಅಹಷ್ವೇರೋಷನಿಗೆ “ನಿನ್ನ ಸಾಮ್ರಾಜ್ಯದಲ್ಲಿ ಒಂದು ಜನಾಂಗ ಇದೆ. ಅವರು ಎಲ್ಲ ಪ್ರಾಂತ್ಯಗಳಲ್ಲಿ*+ ಚದರಿಕೊಂಡಿದ್ದಾರೆ.+ ಅವ್ರ ನಿಯಮಗಳು ಬೇರೆ ಜನಾಂಗಗಳ ನಿಯಮಗಳ ತರ ಅಲ್ಲ. ಅವರು ರಾಜನ ನಿಯಮಗಳನ್ನೂ ಪಾಲಿಸಲ್ಲ. ಅವ್ರನ್ನ ಹಾಗೇ ಬಿಟ್ಟುಬಿಡೋದು ರಾಜನಿಗೆ ಒಳ್ಳೇದಲ್ಲ.  ರಾಜನಿಗೆ ಇಷ್ಟ ಆಗೋದಾದ್ರೆ ಅವ್ರನ್ನ ನಾಶ ಮಾಡೋಕೆ ಒಂದು ಆಜ್ಞೆ ಬರೆದು ಕೊಡು. ಹಾಗೆ ಮಾಡಿದ್ರೆ ರಾಜನ ಖಜಾನೆಯಲ್ಲಿ ಇಡೋಕೆ ನಾನು 10,000 ಬೆಳ್ಳಿ ತಲಾಂತುಗಳನ್ನ* ಅಧಿಕಾರಿಗಳಿಗೆ ಕೊಡ್ತೀನಿ”* ಅಂದ. 10  ಅದನ್ನ ಕೇಳಿ ರಾಜ ತನ್ನ ಕೈಯಲ್ಲಿದ್ದ ಮುದ್ರೆ ಉಂಗುರ+ ತೆಗೆದು ಯೆಹೂದ್ಯರ ಶತ್ರುವಾಗಿದ್ದ ಅಗಾಗನ+ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನಿಗೆ+ ಕೊಟ್ಟ. 11  ರಾಜನು ಹಾಮಾನನಿಗೆ “ಬೆಳ್ಳಿಯನ್ನೂ ಜನ್ರನ್ನೂ ನಿನ್ನ ಕೈಗೆ ಒಪ್ಪಿಸ್ತಿದ್ದೀನಿ. ನಿನಗೆ ಇಷ್ಟಬಂದ ಹಾಗೆ ಮಾಡು” ಅಂದ. 12  ಹಾಗಾಗಿ ಮೊದಲ್ನೇ ತಿಂಗಳ 13ನೇ ದಿನ ರಾಜನ ಕಾರ್ಯದರ್ಶಿಗಳನ್ನ+ ಕರೆಸಲಾಯ್ತು. ಅವರು ಬಂದು ರಾಜನ ದೇಶಾಧಿಪತಿಗಳಿಗೆ, ಪ್ರಾಂತ್ಯಗಳ ರಾಜ್ಯಪಾಲರಿಗೆ, ಎಲ್ಲ ಜನ್ರ ಅಧಿಕಾರಿಗಳಿಗೆ ಹಾಮಾನನ ಆಜ್ಞೆಗಳನ್ನೆಲ್ಲ ಬರೆದ್ರು.+ ಅವುಗಳನ್ನ ಎಲ್ಲ ಪ್ರಾಂತ್ಯಗಳಲ್ಲಿರೋ ಜನ್ರ ಭಾಷೆಗಳಲ್ಲಿ, ಲಿಪಿಗಳಲ್ಲಿ* ಬರೆದ್ರು. ಅವುಗಳನ್ನ ರಾಜ ಅಹಷ್ವೇರೋಷನ ಹೆಸ್ರಲ್ಲಿ ಬರೆದು ರಾಜನ ಮುದ್ರೆ ಉಂಗುರವನ್ನ ಒತ್ತಿದ್ರು.+ 13  ಸಂದೇಶವಾಹಕರ ಮೂಲಕ ಈ ಪತ್ರಗಳನ್ನ ರಾಜನ ಆಳ್ವಿಕೆ ಕೆಳಗಿದ್ದ ಎಲ್ಲ ಪ್ರಾಂತ್ಯಗಳಿಗೆ ಕಳಿಸಿದ್ರು. ಒಂದೇ ದಿನ ಅಂದ್ರೆ 12ನೇ ತಿಂಗಳಾದ ಅದಾರ್‌+ ತಿಂಗಳ 13ನೇ ದಿನ ಎಲ್ಲ ಯೆಹೂದ್ಯರನ್ನ ಅಂದ್ರೆ ಅವ್ರಲ್ಲಿದ್ದ ಯುವಕರನ್ನ, ವೃದ್ಧರನ್ನ, ಮಕ್ಕಳನ್ನ, ಸ್ತ್ರೀಯರನ್ನ ಹೀಗೆ ಎಲ್ರನ್ನ ಕೊಂದು ಅವ್ರನ್ನ ಪೂರ್ತಿ ನಾಶಮಾಡಿ ಅವ್ರ ಆಸ್ತಿಪಾಸ್ತಿನ ಸ್ವಾಧೀನ ಮಾಡ್ಕೊಳ್ಳಬೇಕಂತ ಅದ್ರಲ್ಲಿ ಹೇಳಿತ್ತು.+ 14  ಅಷ್ಟೇ ಅಲ್ಲ ಎಲ್ಲ ಜನ ಆ ದಿನಕ್ಕಾಗಿ ಸಿದ್ಧರಾಗಿರೋಕೆ ಎಲ್ಲ ಪ್ರಾಂತ್ಯಗಳಲ್ಲಿ ಆ ಪ್ರತಿಯನ್ನ ನಿಯಮದ ಹಾಗೆ ಜಾರಿ ಮಾಡಿ, ಅದನ್ನ ಎಲ್ಲ ಜನ್ರಿಗೆ ಪ್ರಕಟಣೆ ಮಾಡಬೇಕಿತ್ತು. 15  ರಾಜ ಆಜ್ಞೆ ಕೊಟ್ಟ ಹಾಗೇ ಸಂದೇಶವಾಹಕರು ತಕ್ಷಣ ಅಲ್ಲಿಂದ ಹೊರಟ್ರು.+ ಹೀಗೆ ಆ ನಿಯಮ ಶೂಷನಿನ*+ ಕೋಟೆಯಲ್ಲಿ* ಜಾರಿಗೆ ಬಂತು. ಆಗ ಶೂಷನ್‌* ಪಟ್ಟಣದ ಜನ್ರಿಗೆ ಗಲಿಬಿಲಿ ಆಯ್ತು. ಆದ್ರೆ ರಾಜ ಮತ್ತು ಹಾಮಾನ ಕೂತು ದ್ರಾಕ್ಷಾಮದ್ಯ ಕುಡಿತಿದ್ರು.

ಪಾದಟಿಪ್ಪಣಿ

ಅಥವಾ “ಮೊರ್ದೆಕೈಯನ್ನ ಮಾತ್ರ ಕೊಲ್ಲೋದು.”
ಅಥವಾ “ನಿನ್ನ ಕೈಕೆಳಗಿರೋ ಜಿಲ್ಲೆಗಳಲ್ಲಿ.”
ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.
ಬಹುಶಃ, “ಈ ಕೆಲಸ ಮಾಡುವವರಿಗೆ ಕೊಡೋಕೆ ನಾನು ರಾಜ ಖಜಾನೆಯಲ್ಲಿ 10,000 ತಲಾಂತು ಬೆಳ್ಳಿಯನ್ನ ಜಮಾ ಮಾಡ್ತೀನಿ.”
ಅಥವಾ “ಬರವಣಿಗೆ ಶೈಲಿಗಳಲ್ಲಿ.”
ಅಥವಾ “ಸೂಸಾ.”
ಅಥವಾ “ಅರಮನೆಯಲ್ಲಿ.”
ಅಥವಾ “ಸೂಸಾ.”