ಎಸ್ತೇರ್‌ 5:1-14

  • ಎಸ್ತೇರ್‌ ರಾಜನ ಮುಂದೆ ಹೋದಳು (1-8)

  • ಹಾಮಾನನ ಕೋಪ ಮತ್ತು ಅಹಂಕಾರ (9-14)

5  ಮೂರನೇ ದಿನ+ ಎಸ್ತೇರ್‌ ತನ್ನ ರಾಜವಸ್ತ್ರಗಳನ್ನ ಹಾಕೊಂಡು ಅರಮನೆಯ ಒಳಗಿನ ಅಂಗಳಕ್ಕೆ ಬಂದು ರಾಜಭವನದ ಮುಂದೆ ನಿಂತಳು. ಅದೇ ಸಮಯದಲ್ಲಿ ರಾಜ ರಾಜಭವನದ ಬಾಗಿಲ ಮುಂದೆ ಇದ್ದ ತನ್ನ ಸಿಂಹಾಸನದಲ್ಲಿ ಕೂತಿದ್ದ.  ಆಗ ರಾಜನ ಕಣ್ಣು ಅಂಗಳದಲ್ಲಿ ನಿಂತಿದ್ದ ರಾಣಿ ಎಸ್ತೇರ್‌ ಮೇಲೆ ಬಿತ್ತು. ಅವಳನ್ನ ನೋಡ್ತಾ ರಾಜನಿಗೆ ಖುಷಿಯಾಗಿ ಅವನು ತನ್ನ ಸುವರ್ಣದಂಡವನ್ನ ಅವಳ ಕಡೆ ಚಾಚಿದ.+ ಆಗ ಎಸ್ತೇರ್‌ ರಾಜನ ಹತ್ರ ಬಂದು ಸುವರ್ಣದಂಡದ ತುದಿ ಮುಟ್ಟಿದಳು.  ಆಗ ರಾಜ “ರಾಣಿ ಎಸ್ತೇರ್‌ ಏನು ವಿಷ್ಯ? ಏನು ಬೇಕು? ನನ್ನ ರಾಜ್ಯದಲ್ಲಿ ಅರ್ಧ ರಾಜ್ಯ ಬೇಕಾದ್ರೂ ಕೇಳು, ಕೊಡ್ತೀನಿ. ಹೇಳು!” ಅಂದ.  ಆಗ ಎಸ್ತೇರ್‌ “ರಾಜನಿಗೆ ಒಪ್ಪಿಗೆ ಇದ್ರೆ ಇವತ್ತು ನಾನು ಏರ್ಪಡಿಸಿರೋ ಔತಣಕ್ಕೆ ಹಾಮಾನನ+ ಜೊತೆ ಬರಬೇಕು” ಅಂದಳು.  ಆಗ ರಾಜ ತನ್ನ ಸೇವಕರಿಗೆ “ಎಸ್ತೇರ್‌ ಕೇಳ್ಕೊಂಡ ಹಾಗೇ ಆಗ್ಲಿ. ತಕ್ಷಣ ಹಾಮಾನನನ್ನ ಬರೋಕೆ ಹೇಳಿ” ಅಂದ. ಹೀಗೆ ಎಸ್ತೇರ್‌ ಏರ್ಪಡಿಸಿದ ಔತಣಕ್ಕೆ ಹಾಮಾನನ ಜೊತೆ ರಾಜ ಹೋದ.  ಔತಣದ ಕೊನೇಲಿ ದ್ರಾಕ್ಷಾಮದ್ಯ ಕುಡಿತಿದ್ದಾಗ ರಾಜನು ಎಸ್ತೇರ್‌ಗೆ “ನಿನ್ನ ಕೋರಿಕೆ ಏನಂತ ಹೇಳು, ನಾನು ಇಲ್ಲ ಅನ್ನಲ್ಲ. ಏನು ಬೇಕಾದ್ರೂ ಕೇಳು. ನನ್ನ ರಾಜ್ಯದಲ್ಲಿ ಅರ್ಧ ರಾಜ್ಯ ಕೇಳಿದ್ರೂ ಕೊಡ್ತೀನಿ!”+ ಅಂದ.  ಆಗ ಎಸ್ತೇರ್‌ “ನನ್ನ ಕೋರಿಕೆ ಏನಂದ್ರೆ  ನಾನು ನಿಜವಾಗ್ಲೂ ರಾಜನ ಮೆಚ್ಚುಗೆ ಪಡೆದಿರೋದಾದ್ರೆ, ರಾಜ ನನ್ನ ಕೋರಿಕೆ ಕೇಳಿ ನಿಜವಾಗ್ಲೂ ನೆರವೇರಿಸಬೇಕು ಅಂತಿದ್ರೆ ನಾಳೆ ನಾನು ಏರ್ಪಡಿಸೋ ಔತಣಕ್ಕೆ ನೀವು ಹಾಮಾನನ ಜೊತೆ ಬರಬೇಕು. ಆಗ ರಾಜನಿಗೆ ನನ್ನ ಕೋರಿಕೆ ಏನಂತ ಹೇಳ್ತೀನಿ” ಅಂದಳು.  ಅವತ್ತು ಔತಣ ಮುಗಿಸಿ ಹೋಗುವಾಗ ಹಾಮಾನನಿಗೆ ತುಂಬ ಸಂತೋಷ ಆಗಿತ್ತು. ಅವನು ಗಾಳಿಯಲ್ಲಿ ತೇಲ್ತಿದ್ದ. ಆದ್ರೆ ಅರಮನೆಯ ಹೆಬ್ಬಾಗಿಲ ಹತ್ರ ಬಂದಾಗ ಅಲ್ಲಿ ಕೂತಿದ್ದ ಮೊರ್ದೆಕೈಯನ್ನ ನೋಡಿ ತುಂಬ ಕೋಪ ಬಂತು.+ ಯಾಕಂದ್ರೆ ಮೊರ್ದೆಕೈ ಅವನನ್ನ ನೋಡಿ ಎದ್ದು ನಿಲ್ಲಲೂ ಇಲ್ಲ, ಭಯದಿಂದ ನಡುಗ್ಲೂ ಇಲ್ಲ. 10  ಹಾಗಿದ್ರೂ ಹಾಮಾನ ತನ್ನ ಕೋಪವನ್ನ ನುಂಗಿ ಮನೆ ಕಡೆ ನಡೆದ. ಅವನು ತನ್ನ ಹೆಂಡತಿ ಜೆರೆಷಳನ್ನ+ ಮತ್ತು ತನ್ನ ಸ್ನೇಹಿತರನ್ನ ಕರೆಸಿದ. 11  ಅವನು ತನ್ನಲ್ಲಿದ್ದ ಅಪಾರ ಆಸ್ತಿ ಬಗ್ಗೆ, ತನಗಿದ್ದ ಅನೇಕ ಗಂಡು ಮಕ್ಕಳ+ ಬಗ್ಗೆ, ರಾಜ ತನಗೆ ದೊಡ್ಡ ಪದವಿ ಕೊಟ್ಟು ರಾಜನ ಅಧಿಕಾರಿಗಳಿಗಿಂತ, ಸೇವಕರಿಗಿಂತ ತನಗೆ ಜಾಸ್ತಿ ಗೌರವ ಸಿಗೋ ಹಾಗೆ ಮಾಡಿದ್ರ+ ಬಗ್ಗೆ ಜಂಬ ಕೊಚ್ಕೊಂಡ. 12  ಅಷ್ಟೇ ಅಲ್ಲ ಹಾಮಾನ “ಔತಣಕ್ಕೆ ರಾಜನ ಜೊತೆ ನನ್ನನ್ನ ಬಿಟ್ಟು ಬೇರೆ ಯಾರನ್ನೂ ಎಸ್ತೇರ್‌ ಕರೆದಿಲ್ಲ.+ ಇದಕ್ಕಿಂತ ಇನ್ನೇನು ಬೇಕು! ನಾಳೆನೂ ಔತಣಕ್ಕೆ ರಾಜನ ಜೊತೆ ನನ್ನನ್ನ ಕರೆದಿದ್ದಾಳೆ.+ 13  ಆದ್ರೆ ಆ ಯೆಹೂದಿ ಮೊರ್ದೆಕೈ ಅರಮನೆಯ ಹೆಬ್ಬಾಗಿಲಲ್ಲಿ ಕೂತಿರೋ ತನಕ ಇದ್ಯಾವುದೂ ನಂಗೆ ಖುಷಿ ಕೊಡಲ್ಲ” ಅಂದ. 14  ಆಗ ಅವನ ಹೆಂಡತಿ ಜೆರೆಷ ಮತ್ತು ಅವನ ಸ್ನೇಹಿತರು “50 ಮೊಳ* ಉದ್ದದ ಕಂಬ ನಿಲ್ಲಿಸು. ಮೊರ್ದೆಕೈಯನ್ನ ಆ ಕಂಬಕ್ಕೆ ನೇತುಹಾಕೋಕೆ ಬೆಳಿಗ್ಗೆ ಹೋಗಿ ರಾಜನಿಗೆ ಹೇಳು.+ ರಾಜನ ಜೊತೆ ಹೋಗಿ ಔತಣ ಆನಂದಿಸು” ಅಂದ್ರು. ಈ ಸಲಹೆ ಹಾಮಾನನಿಗೆ ಇಷ್ಟ ಆಯ್ತು. ಹಾಗಾಗಿ ಅವನು ಕಂಬವನ್ನ ನಿಲ್ಲಿಸಿದ.

ಪಾದಟಿಪ್ಪಣಿ

ಸುಮಾರು 22.3 ಮೀ. (73 ಅಡಿ). ಪರಿಶಿಷ್ಟ ಬಿ14 ನೋಡಿ.