ಎಸ್ತೇರ್‌ 9:1-32

  • ಯೆಹೂದ್ಯರ ವಿಜಯ (1-19)

  • ಪೂರೀಮ್‌ ಹಬ್ಬದ ಆರಂಭ (20-32)

9  ರಾಜನ ಆಜ್ಞೆ ಮತ್ತು ನಿಯಮ ಜಾರಿಗೆ ಬರಬೇಕಿದ್ದ+ 12ನೇ ತಿಂಗಳ ಅಂದ್ರೆ ಅದಾರ್‌*+ ತಿಂಗಳ 13ನೇ ದಿನ ಬಂತು. ಯೆಹೂದ್ಯರ ಶತ್ರುಗಳು ಯೆಹೂದ್ಯರ ಮೇಲೆ ದಾಳಿ ಮಾಡಿ ಗೆಲ್ಲಬಹುದು ಅಂದ್ಕೊಂಡಿದ್ದ ದಿನ ಅದು. ಆದ್ರೆ ಆದದ್ದೇ ಬೇರೆ. ತಮ್ಮನ್ನ ದ್ವೇಷಿಸ್ತಿದ್ದವ್ರ ಮೇಲೆ ಯೆಹೂದ್ಯರೇ ಅವತ್ತು ಜಯ ಸಾಧಿಸಿದ್ರು.+  ರಾಜ ಅಹಷ್ವೇರೋಷನ+ ಪ್ರಾಂತ್ಯಗಳಲ್ಲಿದ್ದ* ಯೆಹೂದ್ಯರು ತಮಗೆ ಹಾನಿಮಾಡೋಕೆ ಬರುವವರ ಮೇಲೆ ದಾಳಿ ಮಾಡೋಕೆ ತಮ್ಮತಮ್ಮ ಪಟ್ಟಣಗಳಲ್ಲಿ ಸೇರಿ ಬಂದ್ರು. ಯೆಹೂದ್ಯರ ವಿರುದ್ಧ ಒಬ್ಬನಿಗೂ ನಿಲ್ಲಕ್ಕಾಗಲಿಲ್ಲ. ಯಾಕಂದ್ರೆ ಎಲ್ಲ ಜನ್ರಲ್ಲಿ ಯೆಹೂದ್ಯರ ಬಗ್ಗೆ ಭಯ ಹುಟ್ಕೊಂಡಿತ್ತು.+  ಎಲ್ಲ ಪ್ರಾಂತ್ಯಗಳ ಅಧಿಕಾರಿಗಳು, ದೇಶಾಧಿಪತಿಗಳು,+ ರಾಜ್ಯಪಾಲರು, ರಾಜನ ವ್ಯವಹಾರಗಳನ್ನ ನೋಡ್ಕೊಳ್ತಾ ಇದ್ದವರು ಯೆಹೂದ್ಯರಿಗೆ ಬೆಂಬಲ ಕೊಟ್ರು. ಯಾಕಂದ್ರೆ ಅವ್ರಿಗೆ ಮೊರ್ದೆಕೈಯ ಭಯ ಇತ್ತು.  ರಾಜನ ಅರಮನೆಯಲ್ಲಿ ಮೊರ್ದೆಕೈ ಒಬ್ಬ ದೊಡ್ಡ ಅಧಿಕಾರಿಯಾದ.+ ಅವನಿಗೆ ಹೆಚ್ಚೆಚ್ಚು ಅಧಿಕಾರ ಸಿಕ್ತು, ಅವನ ಕೀರ್ತಿ ಎಲ್ಲ ಪ್ರಾಂತ್ಯಗಳಲ್ಲಿ ಹಬ್ಬುತ್ತಾ ಹೋಯ್ತು.  ಯೆಹೂದ್ಯರು ತಮ್ಮ ಶತ್ರುಗಳನ್ನೆಲ್ಲ ಕತ್ತಿಯಿಂದ ಕೊಂದು ಪೂರ್ತಿ ನಾಶಮಾಡಿದ್ರು. ತಮ್ಮನ್ನ ದ್ವೇಷಿಸ್ತಿದ್ದ ಜನ್ರಿಗೆ ಇಷ್ಟಬಂದ ಹಾಗೆ ಮಾಡಿದ್ರು.+  ಶೂಷನ್‌*+ ಕೋಟೆಯಲ್ಲಿ* ಯೆಹೂದ್ಯರು 500 ಗಂಡಸ್ರನ್ನ ಕೊಂದು ಹಾಕಿದ್ರು.  ಅಷ್ಟೇ ಅಲ್ಲ ಅವರು ಪರ್ಷಂದಾತ, ದಲ್ಫೋನ, ಆಸ್ಪಾತ,  ಪೋರಾತ, ಅದಲ್ಯ, ಅರೀದಾತ,  ಪರ್ಮಷ್ಟ, ಅರೀಸೈ, ಅರಿದೈ, ವೈಜಾತನನ್ನ ಕೊಂದ್ರು. 10  ಈ ಹತ್ತೂ ಜನ ಹಮ್ಮೆದಾತನ ಮಗನೂ ಯೆಹೂದ್ಯರ ಶತ್ರುವೂ ಆಗಿದ್ದ ಹಾಮಾನನ+ ಗಂಡು ಮಕ್ಕಳು. ಯೆಹೂದ್ಯರು ಅವ್ರನ್ನ ಕೊಂದ್ರು ಆದ್ರೆ ಅವ್ರಿಂದ ಏನೂ ಕೊಳ್ಳೆ ಹೊಡಿಲಿಲ್ಲ.+ 11  ಆ ದಿನ ಶೂಷನ್‌* ಕೋಟೆಯಲ್ಲಿ* ಸತ್ತವ್ರ ಸಂಖ್ಯೆ ರಾಜನಿಗೆ ತಿಳಿಸಲಾಯ್ತು. 12  ರಾಜ ಎಸ್ತೇರ್‌ ರಾಣಿಯನ್ನ “ಶೂಷನ್‌* ಕೋಟೆಯಲ್ಲಿ* ಯೆಹೂದ್ಯರು 500 ಗಂಡಸ್ರನ್ನ, ಹಾಮಾನನ 10 ಗಂಡು ಮಕ್ಕಳನ್ನ ಕೊಂದು ನಾಶ ಮಾಡಿದ್ದಾರೆ. ಶೂಷನ್‌ ಕೋಟೆಯಲ್ಲೇ ಈ ಸ್ಥಿತಿಯಾಗಿದ್ರೆ ರಾಜನ ಬೇರೆ ಪ್ರಾಂತ್ಯಗಳ+ ಕಥೆ ಏನು? ಎಸ್ತೇರ್‌ ರಾಣಿ, ನಿನಗೆ ಇನ್ನೇನು ಬೇಕು? ನಿನ್ನ ಮುಂದಿನ ಆಸೆ ಏನು? ಹೇಳು, ಅದನ್ನ ಸಹ ಮಾಡಿಬಿಡ್ತೀನಿ” ಅಂದ. 13  ಅದಕ್ಕೆ ಎಸ್ತೇರ್‌ “ರಾಜ ಒಪ್ಪೋದಾದ್ರೆ+ ಶೂಷನ್‌* ಪಟ್ಟಣದಲ್ಲಿರೋ ಯೆಹೂದ್ಯರು ಇವತ್ತು ಜಾರಿಯಲ್ಲಿರೋ ನಿಯಮದ ಪ್ರಕಾರನೇ ನಾಳೆನೂ ಮಾಡೋಕೆ ಅನುಮತಿ ಕೊಡು.+ ಹಾಮಾನನ 10 ಗಂಡು ಮಕ್ಕಳ ಶವಗಳನ್ನ ಕಂಬಕ್ಕೆ ನೇತುಹಾಕೋಕೆ ಅಪ್ಪಣೆ ಕೊಡು”+ ಅಂದಳು. 14  ಆಗ ರಾಜ ಹಾಗೇ ಅಪ್ಪಣೆ ಕೊಟ್ಟ. ತಕ್ಷಣ ಶೂಷನ್‌* ಪಟ್ಟಣದಲ್ಲಿ ರಾಜಾಜ್ಞೆಗೆ ಸಂಬಂಧಪಟ್ಟ ಒಂದು ನಿಯಮ ಜಾರಿಗೆ ಬಂತು. ಹಾಮಾನನ 10 ಗಂಡು ಮಕ್ಕಳನ್ನ ನೇತುಹಾಕಿದ್ರು. 15  ಅದಾರ್‌ ತಿಂಗಳ 14ನೇ ದಿನ+ ಯೆಹೂದ್ಯರು ಮತ್ತೊಮ್ಮೆ ಶೂಷನ್‌* ಪಟ್ಟಣದಲ್ಲಿ ಸೇರಿ ಬಂದು ಆ ಪಟ್ಟಣದ 300 ಗಂಡಸ್ರನ್ನ ಕೊಂದು ಹಾಕಿದ್ರು. ಆದ್ರೆ ಅವ್ರಿಂದ ಏನೂ ಕೊಳ್ಳೆ ಹೊಡಿಲಿಲ್ಲ. 16  ರಾಜನ ಬೇರೆ ಪ್ರಾಂತ್ಯಗಳಲ್ಲಿದ್ದ ಯೆಹೂದ್ಯರು ಕೂಡ ಸೇರಿ ಬಂದು ಪ್ರಾಣ ಉಳಿಸ್ಕೊಳ್ಳೋಕೆ ಹೋರಾಡಿದ್ರು.+ ಅವರು ತಮ್ಮನ್ನ ದ್ವೇಷಿಸ್ತಿದ್ದ 75,000 ಶತ್ರುಗಳನ್ನ ಕೊಂದು ಹಾಕಿದ್ರು.+ ಆದ್ರೆ ಯೆಹೂದ್ಯರು ಆ ಜನ್ರಿಂದ ಏನೂ ಕೊಳ್ಳೆ ಹೊಡಿಲಿಲ್ಲ. 17  ಇದು ಅದಾರ್‌ ತಿಂಗಳ 13ನೇ ದಿನ ನಡಿತು. 14ನೇ ದಿನ ಯೆಹೂದ್ಯರು ವಿಶ್ರಾಂತಿ ತಗೊಂಡು ಔತಣ ಮಾಡಿಸಿ ಸಂಭ್ರಮಿಸಿದ್ರು. 18  ಶೂಷನ್‌* ಪಟ್ಟಣದಲ್ಲಿದ್ದ ಯೆಹೂದ್ಯರು ಹೋರಾಡೋಕೆ 13ನೇ ಮತ್ತು 14ನೇ ದಿನ ಸೇರಿ ಬಂದ್ರು.+ 15ನೇ ದಿನ ವಿಶ್ರಾಂತಿ ತಗೊಂಡು ಔತಣ ಮಾಡಿ ಸಂಭ್ರಮಿಸಿದ್ರು. 19  ಬೇರೆ ಪ್ರಾಂತ್ಯಗಳ ಪಟ್ಟಣಗಳಲ್ಲಿದ್ದ ಯೆಹೂದ್ಯರು ಅದಾರ್‌ ತಿಂಗಳ 14ನೇ ದಿನ ಔತಣ ಮಾಡಿಸಿದ್ರು. ಸಂಭ್ರಮದಿಂದ ಹಬ್ಬ ಆಚರಿಸಿದ್ರು.+ ಒಬ್ರಿಗೊಬ್ರು ಆಹಾರ ಹಂಚಿದ್ರು.+ 20  ಈ ಎಲ್ಲ ಘಟನೆಗಳನ್ನ ಮೊರ್ದೆಕೈ+ ಬರೆದಿಟ್ಟ. ಅವನು ರಾಜ ಅಹಷ್ವೇರೋಷನ ಪ್ರಾಂತ್ಯಗಳಲ್ಲಿ ವಾಸವಿದ್ದ ಎಲ್ಲ ಯೆಹೂದ್ಯರಿಗೆ ಅಂದ್ರೆ ಹತ್ರ ಇದ್ದ, ದೂರ ಇದ್ದ ಎಲ್ಲ ಯೆಹೂದ್ಯರಿಗೆ ಪತ್ರಗಳನ್ನ ಕಳಿಸಿದ. 21  ಈಗಿಂದ ಪ್ರತಿ ವರ್ಷ ಅದಾರ್‌ ತಿಂಗಳ 14ನೇ ಮತ್ತು 15ನೇ ದಿನ ಹಬ್ಬ ಆಚರಿಸಬೇಕಂತ ಮೊರ್ದೆಕೈ ಆ ಪತ್ರಗಳಲ್ಲಿ ಯೆಹೂದ್ಯರಿಗೆ ನಿರ್ದೇಶನ ಕೊಟ್ಟಿದ್ದ. 22  ಯಾಕಂದ್ರೆ ಆ ದಿನಗಳಲ್ಲಿ ಯೆಹೂದ್ಯರಿಗೆ ತಮ್ಮ ಶತ್ರುಗಳಿಂದ ಬಿಡುಗಡೆ ಸಿಕ್ತು. ಅದೇ ತಿಂಗಳಲ್ಲಿ ಅವ್ರ ದುಃಖ ಸಂತೋಷವಾಗಿ, ಅವ್ರ ಗೋಳಾಟ+ ಹಬ್ಬವಾಗಿ ಬದಲಾಯ್ತು. ಹಾಗಾಗಿ ಯೆಹೂದ್ಯರು ಆ ಎರಡೂ ದಿನಗಳಲ್ಲಿ ದೊಡ್ಡ ಔತಣ ಮಾಡಿಸಿ ಸಂಭ್ರಮಿಸಿದ್ರು. ಒಬ್ರಿಗೊಬ್ರು ಆಹಾರವನ್ನ, ಬಡವರಿಗೆ ಉಡುಗೊರೆಗಳನ್ನ ಹಂಚಿದ್ರು. 23  ತಾವು ಶುರು ಮಾಡಿದ ಈ ಹಬ್ಬವನ್ನ ಪ್ರತಿ ವರ್ಷ ಮಾಡ್ತೀವಿ, ಮೊರ್ದೆಕೈ ತಮಗೆ ಬರೆದ ಪತ್ರದಲ್ಲಿ ನಿರ್ದೇಶಿಸಿದ ವಿಷ್ಯಗಳನ್ನ ಮಾಡ್ತೀವಿ ಅಂತ ಯೆಹೂದ್ಯರು ಒಪ್ಕೊಂಡ್ರು. 24  ಯಾಕಂದ್ರೆ ಅಗಾಗನ+ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನ+ ಯೆಹೂದ್ಯರನ್ನ ಸರ್ವನಾಶ ಮಾಡೋಕೆ ಸಂಚು ಮಾಡಿದ್ದ.+ ಎಲ್ಲ ಯೆಹೂದ್ಯರ ಶತ್ರುವಾಗಿದ್ದ ಅವನು ಯೆಹೂದ್ಯರನ್ನ ಹೆದರಿಸೋಕೆ, ಅವ್ರನ್ನ ನಾಶ ಮಾಡೋಕೆ ಪೂರನ್ನ ಅಂದ್ರೆ ಚೀಟನ್ನ ಹಾಕಿಸಿದ್ದ.+ 25  ಆದ್ರೆ ರಾಜನ ಮುಂದೆ ಎಸ್ತೇರ್‌ ಬಂದಾಗ ರಾಜ “ಯೆಹೂದ್ಯರ ವಿರುದ್ಧ ಹಾಮಾನ ಮಾಡಿರೋ ಸಂಚು+ ಅವನ ತಲೆ ಮೇಲೇ ಬರಲಿ” ಅನ್ನೋ ಆಜ್ಞೆ ಬರೆಸಿದ.+ ಆಗ ಹಾಮಾನನನ್ನ, ಅವನ ಗಂಡು ಮಕ್ಕಳನ್ನ ಕಂಬಕ್ಕೆ ನೇತುಹಾಕಿದ್ರು.+ 26  ಹೀಗೆ ಪೂರ್‌*+ ಅನ್ನೋ ಹೆಸ್ರಿಂದ ಆ ದಿನಗಳನ್ನ ಅವರು ಪೂರೀಮ್‌ ಅಂತ ಕರೆದ್ರು. ಹಾಗಾಗಿ ಮೊರ್ದೆಕೈ ಬರೆದ ಪತ್ರದಲ್ಲಿದ್ದ ಮಾತುಗಳನ್ನ, ತಾವು ನೋಡಿದ ವಿಷ್ಯಗಳನ್ನ, ತಾವು ಅನುಭವಿಸಿದ ವಿಷ್ಯಗಳನ್ನ ಮನಸ್ಸಲ್ಲಿ ಇಟ್ಕೊಂಡು 27  ಯೆಹೂದ್ಯರು ಒಂದು ತೀರ್ಮಾನ ಮಾಡಿದ್ರು. ಅದೇನಂದ್ರೆ ತಾವು, ತಮ್ಮ ಸಂತತಿಯವರು, ತಮ್ಮನ್ನ ಬಂದು ಸೇರ್ಕೊಳ್ಳೋ ಜನ್ರೆಲ್ಲ+ ಆ ಎರಡೂ ದಿನ ತಪ್ಪದೆ ಹಬ್ಬ ಮಾಡ್ತೀವಿ. ಪತ್ರದಲ್ಲಿ ಬರೆದ ತರಾನೇ ಪ್ರತಿ ವರ್ಷ ಇದೇ ತರ ಮಾಡ್ತೀವಿ. 28  ಪೂರೀಮ್‌ ಅನ್ನೋ ಈ ಹಬ್ಬವನ್ನ ಪ್ರತಿ ಪ್ರಾಂತ್ಯದಲ್ಲೂ ಪ್ರತಿ ಪಟ್ಟಣದಲ್ಲೂ ಪ್ರತಿ ಮನೆತನದಲ್ಲೂ ತಲೆಮಾರುಗಳ ತನಕ ನೆನಪು ಮಾಡ್ಕೊಳ್ಳಬೇಕಿತ್ತು, ಅದನ್ನ ಆಚರಿಸಬೇಕಿತ್ತು. ಆ ಹಬ್ಬ ಆಚರಿಸೋ ಪದ್ಧತಿ ಯೆಹೂದ್ಯರಲ್ಲಿ ಅಳಿಸಿ ಹೋಗಬಾರದು, ಆ ಆಚರಣೆಯನ್ನ ಅವ್ರ ವಂಶದವರು ಯಾವತ್ತೂ ನಿಲ್ಲಿಸಬಾರದು ಅಂತ ಈ ತರ ಮಾಡಿದ್ರು. 29  ಆಮೇಲೆ ಪೂರೀಮಿನ ಬಗ್ಗೆ ಎರಡನೇ ಪತ್ರ ಬರೆದ್ರು. ಅಬೀಹೈಲನ ಮಗಳು ಎಸ್ತೇರ್‌ ರಾಣಿ ಮತ್ತು ಯೆಹೂದ್ಯ ಮೊರ್ದೆಕೈ ತಮಗಿದ್ದ ಅಧಿಕಾರದಿಂದ ಈ ಪತ್ರಕ್ಕೆ ಸಹಿ ಮಾಡಿದ್ರು. 30  ಮೊರ್ದೆಕೈ ಈ ಪತ್ರವನ್ನ ರಾಜ ಅಹಷ್ವೇರೋಷನ+ ಸಾಮ್ರಾಜ್ಯದ 127 ಪ್ರಾಂತ್ಯಗಳಲ್ಲಿದ್ದ+ ಎಲ್ಲ ಯೆಹೂದ್ಯರಿಗೂ ಕಳಿಸಿದ. ಅದ್ರಲ್ಲಿ ಶಾಂತಿ, ಸತ್ಯದ ಮಾತುಗಳನ್ನ ಬರೆದಿದ್ರು. 31  ಹೇಳಿದ ದಿನಗಳಲ್ಲೇ ಪೂರೀಮ್‌ ಹಬ್ಬ ಆಚರಿಸಬೇಕು ಅಂತ ಬರೆದಿದ್ರು. ಯೆಹೂದ್ಯನಾದ ಮೊರ್ದೆಕೈ ಮತ್ತು ಎಸ್ತೇರ್‌ ರಾಣಿ ಹೇಳಿದ್ದೇ ಆ ಪತ್ರದಲ್ಲಿತ್ತು.+ ಅಷ್ಟೇ ಅಲ್ಲ ಆ ದಿನಗಳನ್ನ ಮನಸ್ಸಲ್ಲಿಟ್ಟು ತಾವು ಮತ್ತು ತಮ್ಮ ವಂಶದವರು ಈ ಹಬ್ಬ ಮಾಡ್ತೀವಿ,+ ಉಪವಾಸ ಮಾಡ್ತೀವಿ,+ ದೇವ್ರನ್ನ ಬೇಡ್ಕೊಳ್ತೀವಿ ಅಂತ+ ಸ್ವತಃ ಯೆಹೂದ್ಯರೇ ಹೇಳಿದ್ರು. 32  ಪೂರೀಮ್‌+ ಬಗ್ಗೆ ಹೇಳಿದ ಈ ವಿಷ್ಯಗಳನ್ನ ಎಸ್ತೇರ್‌ ಕೊಟ್ಟ ಆಜ್ಞೆ ಪಕ್ಕಾ ಮಾಡ್ತು ಮತ್ತು ಅವನ್ನ ಒಂದು ಪುಸ್ತಕದಲ್ಲಿ ಬರೆದಿಟ್ರು.

ಪಾದಟಿಪ್ಪಣಿ

ಅಥವಾ “ಕೈಕೆಳಗಿದ್ದ ಜಿಲ್ಲೆಗಳಲ್ಲಿದ್ದ.”
ಅಥವಾ “ಸೂಸಾ.”
ಅಥವಾ “ಅರಮನೆಯಲ್ಲಿ.”
ಅಥವಾ “ಸೂಸಾ.”
ಅಥವಾ “ಅರಮನೆಯಲ್ಲಿ.”
ಅಥವಾ “ಸೂಸಾ.”
ಅಥವಾ “ಅರಮನೆಯಲ್ಲಿ.”
ಅಥವಾ “ಸೂಸಾ.”
ಅಥವಾ “ಸೂಸಾ.”
ಅಥವಾ “ಸೂಸಾ.”
ಅಥವಾ “ಸೂಸಾ.”
“ಪೂರ್‌” ಅಂದ್ರೆ “ಚೀಟು.” ಇದ್ರ ಬಹುವಚನ “ಪೂರೀಮ್‌.” ಇದೇ ಯೆಹೂದ್ಯರ ಹಬ್ಬದ ಹೆಸರಾಯ್ತು. ಇದನ್ನ ತಮ್ಮ ಪವಿತ್ರ ಕ್ಯಾಲೆಂಡರ್‌ ಪ್ರಕಾರ 12ನೇ ತಿಂಗಳಲ್ಲಿ ಆಚರಿಸ್ತಿದ್ರು. ಪರಿಶಿಷ್ಟ ಬಿ15 ನೋಡಿ.