ಓಬದ್ಯ 1:1-21

  • ಅಹಂಕಾರಿ ಎದೋಮನ್ನ ತಗ್ಗಿಸಲಾಗುತ್ತೆ (1-9)

  • ಎದೋಮ ಯಾಕೋಬನನ್ನ ಹಿಂಸಿಸಿದ್ದು (10-14)

  • ಯೆಹೋವನ ದಿನ ಎಲ್ಲ ಜನಾಂಗಗಳ ವಿರುದ್ಧ ಬರುತ್ತೆ (15, 16)

  • ಯಾಕೋಬನ ವಂಶದವ್ರನ್ನ ಪುನಃಸ್ಥಾಪಿಸಲಾಗುತ್ತೆ (17-21)

    • ಯಾಕೋಬ ಎದೋಮನನ್ನ ಸುಟ್ಟುಬಿಡ್ತಾನೆ (18)

    • ಯೆಹೋವ ರಾಜನಾಗಿ ಆಳ್ತಾನೆ (21)

 ಓಬದ್ಯ* ಕಂಡ ದರ್ಶನ. ವಿಶ್ವದ ರಾಜ ಯೆಹೋವ ಎದೋಮಿನ ಬಗ್ಗೆ ಹೇಳಿದ ಮಾತುಗಳನ್ನ ಓಬದ್ಯ ಹೀಗೆ ಹೇಳಿದ:+ “ಯೆಹೋವ ಹೇಳಿದ ಸುದ್ದಿಯನ್ನ ನಾವು ಕೇಳಿಸ್ಕೊಂಡಿದ್ದೀವಿ,ಆತನು ದೇಶಗಳ ಮಧ್ಯ ಒಬ್ಬ ಪ್ರತಿನಿಧಿಯನ್ನ ಕಳಿಸಿದ್ದಾನೆ,ಆ ಪ್ರತಿನಿಧಿ ‘ಬನ್ನಿ, ಎದೋಮಿನ ವಿರುದ್ಧ ಯುದ್ಧ ಮಾಡೋಕೆ ಸಿದ್ಧರಾಗೋಣ’ ಅಂತ ಹೇಳ್ತಿದ್ದಾನೆ.”+   “ನೋಡು! ನಾನು ನಿನ್ನನ್ನ ಬೇರೆಲ್ಲ ಜನಾಂಗಗಳಿಗಿಂತ ಕೀಳಾಗಿ ಮಾಡಿದ್ದೀನಿ,ಅವರು ನಿನ್ನನ್ನ ತುಂಬ ಕೀಳಾಗಿ ಕಾಣ್ತಾರೆ.+   ನೀನು ಬಂಡೆ ಸಂದುಗಳಲ್ಲಿ,ಎತ್ತರದ ಬೆಟ್ಟಗಳಲ್ಲಿ ವಾಸಿಸ್ತಾ,‘ನನ್ನನ್ನ ನೆಲಕ್ಕೆ ನೂಕೋಕೆ ಯಾರಿಂದಾನೂ ಆಗಲ್ಲ’ ಅಂದ್ಕೊಳ್ತಿಯಲ್ಲಾ,ಆದ್ರೆ ನಿನ್ನ ಹೃದಯದ ಸೊಕ್ಕೇ ನಿನ್ನನ್ನ ಮೋಸ ಮಾಡಿದೆ.+   ನೀನು ಹದ್ದಿನ ತರ ಎತ್ತರದಲ್ಲಿ ವಾಸಸ್ಥಾನವನ್ನ ಮಾಡ್ಕೊಂಡ್ರೂ*ನಕ್ಷತ್ರಗಳ ಮಧ್ಯ ಗೂಡು ಕಟ್ಕೊಂಡ್ರೂನಾನು ನಿನ್ನನ್ನ ಅಲ್ಲಿಂದ ತಳ್ಳಿಬಿಡ್ತೀನಿ” ಅಂತ ಯೆಹೋವ ಹೇಳ್ತಾನೆ.   “ರಾತ್ರಿಯಲ್ಲಿ ಕಳ್ಳರು, ದರೋಡೆಕೋರರು ಬಂದ್ರೆತಮಗೆ ಬೇಕಿರೋದನ್ನ ಮಾತ್ರ ಕದ್ಕೊಂಡು ಹೋಗ್ತಾರಲ್ವಾ? ದ್ರಾಕ್ಷಿಹಣ್ಣುಗಳನ್ನ ಕೀಳುವವರು ಬಂದ್ರೆ ಬೇರೆಯವ್ರಿಗಾಗಿ ಸ್ವಲ್ಪನಾದ್ರೂ ಬಿಟ್ಟುಹೋಗ್ತಾರಲ್ವಾ?+ ಆದ್ರೆ ನಿನ್ನ ಶತ್ರುಗಳು ನಿನ್ನನ್ನ ಪೂರ್ತಿ ನಾಶಮಾಡ್ತಾರೆ!*   ಅವರು ಏಸಾವನಿಗಾಗಿ ಪೂರ್ತಿಯಾಗಿ ಹುಡುಕಾಡಿದ್ದಾರೆ! ಅವನ ನಿಧಿನಿಕ್ಷೇಪಗಳಿಗಾಗಿ ಎಲ್ಲ ಕಡೆ ಹುಡುಕಿ ಲೂಟಿ ಮಾಡಿದ್ದಾರೆ!   ಅವರು ನಿನ್ನನ್ನ ತಮ್ಮ ಗಡಿಯಾಚೆ ಓಡಿಸಿದ್ದಾರೆ. ನಿನ್ನ ಎಲ್ಲ ಮಿತ್ರರಾಜ್ಯಗಳು* ನಿಂಗೆ ಮೋಸ ಮಾಡಿವೆ. ನಿನ್ನ ಜೊತೆ ಶಾಂತಿಯಿಂದ ಇರುವವರು ನಿನ್ನನ್ನ ಸೋಲಿಸಿದ್ದಾರೆ. ನಿನ್ನ ಜೊತೆ ಊಟ ಮಾಡುವವರು ನಿನ್ನನ್ನ ಹಿಡಿಯೋಕೆ ಬಲೆ ಬೀಸ್ತಾರೆ,ಆದ್ರೆ ನಿಂಗೆ ಅದು ಗೊತ್ತಾಗೋದೇ ಇಲ್ಲ.”   ಯೆಹೋವ ಹೇಳೋದು ಏನಂದ್ರೆ“ಆ ದಿನ ನಾನು ಎದೋಮಲ್ಲಿರೋ ವಿವೇಕಿಗಳನ್ನ,ಏಸಾವನ ಬೆಟ್ಟ ಪ್ರದೇಶದಲ್ಲಿರೋ ವಿವೇಚನೆ ಇರೋ ಜನ್ರನ್ನ ನಾಶ ಮಾಡ್ತೀನಿ.+   ಏಸಾವನ ಬೆಟ್ಟ ಪ್ರದೇಶದಲ್ಲಿರೋ ಪ್ರತಿಯೊಬ್ಬನೂ ಸಂಹಾರ ಆಗ್ತಾನೆ,+ಹಾಗಾಗಿ ತೇಮಾನೇ,+ ನಿನ್ನ ರಣವೀರರು ಹೆದರಿ ನಡುಗ್ತಾರೆ.+ 10  ನೀನು ನಿನ್ನ ತಮ್ಮ ಯಾಕೋಬನನ್ನ ಹಿಂಸಿಸಿದೆ,+ಹಾಗಾಗಿ ಅವಮಾನ ನಿನ್ನನ್ನ ಆವರಿಸುತ್ತೆ,+ನೀನು ಅಸ್ತಿತ್ವದಲ್ಲೇ ಇಲ್ಲದ ಹಾಗೆ ನಾಶವಾಗಿ ಹೋಗ್ತೀಯ.+ 11  ಅಪರಿಚಿತರು ಅವನ ಸೈನ್ಯವನ್ನ ಸೆರೆಹಿಡ್ಕೊಂಡು ಹೋದ ದಿನ,+ನೀನು ಸುಮ್ನೆ ನಿಂತು ನೋಡ್ತಿದ್ದೆ,ವಿದೇಶಿಯರು ಅವನ ಪ್ರದೇಶದೊಳಗೆ ನುಗ್ಗಿ ಯೆರೂಸಲೇಮನ್ನ ಪಾಲು ಮಾಡ್ಕೊಳ್ಳೋಕೆ ಚೀಟುಹಾಕಿದ ದಿನ,+ನೀನು ಕೂಡ ಅವ್ರಷ್ಟೇ ಕೆಟ್ಟವನಾಗಿ ನಡ್ಕೊಂಡೆ. 12  ನಿನ್ನ ತಮ್ಮನಿಗೆ ಕಷ್ಟ ಬಂದ ದಿನ ನೀನು ಹಿಗ್ಗಬಾರದಿತ್ತು,+ಯೆಹೂದದ ಜನ್ರ ನಾಶನದ ದಿನ ನೀನು ಸಂಭ್ರಮ ಪಡಬಾರದಿತ್ತು,+ಅವ್ರ ಸಂಕಷ್ಟದ ದಿನ ನೀನು ಸೊಕ್ಕಿಂದ ಮಾತಾಡಬಾರದಿತ್ತು. 13  ನನ್ನ ಜನ್ರ ಕಷ್ಟದ ದಿನ ಅವ್ರ ಪಟ್ಟಣದೊಳಗೆ ನೀನು ಬರಬಾರದಿತ್ತು,+ಅವನ ಕಷ್ಟದ ದಿನ ಅವನಿಗಾದ ಕೇಡನ್ನ ನೋಡಿ ನೀನು ಹಿಗ್ಗಬಾರದಿತ್ತು, ಅವನ ಕಷ್ಟದ ದಿನ ಅವನ ಸಿರಿಸಂಪತ್ತನ್ನ ನೀನು ದೋಚಬಾರದಿತ್ತು.+ 14  ದಾರಿಗಳು ಕೂಡೋ ಸ್ಥಳದಲ್ಲಿ ನಿಂತು ತಪ್ಪಿಸ್ಕೊಂಡು ಓಡ್ತಾ ಇದ್ದವ್ರನ್ನ ಸಾಯಿಸಬಾರದಿತ್ತು,+ಕಡುಕಷ್ಟದ ದಿನ ಬದುಕಿ ಉಳಿದವ್ರನ್ನ ನೀನು ಹಿಡಿದು ಶತ್ರುಗಳ ಕೈಗೆ ಒಪ್ಪಿಸಬಾರದಿತ್ತು.+ 15  ಯೆಹೋವನ ದಿನ ಹತ್ರ ಆಗಿದೆ, ಆತನು ಎಲ್ಲ ಜನಾಂಗಗಳ ವಿರುದ್ಧ ಬರ್ತಾನೆ.+ ನೀನು ಬೇರೆಯವ್ರಿಗೆ ಮಾಡಿದ್ದನ್ನೇ ನಿನಗೂ ಮಾಡಲಾಗುತ್ತೆ.+ ನೀನು ಬೇರೆಯವ್ರ ಜೊತೆ ನಡ್ಕೊಂಡ ರೀತಿಯಲ್ಲೇ ನಿನ್ನ ಜೊತೆನೂ ನಡ್ಕೊಳ್ಳಲಾಗುತ್ತೆ. 16  ನೀವು ನನ್ನ ಪವಿತ್ರ ಬೆಟ್ಟದಲ್ಲಿ ದ್ರಾಕ್ಷಾಮದ್ಯ ಕುಡಿದ ಹಾಗೇ,ಎಲ್ಲ ಜನಾಂಗಗಳು ನನ್ನ ಕೋಪ ಅನ್ನೋ ದ್ರಾಕ್ಷಾಮದ್ಯ ಕುಡಿತಾ ಇರ್ತವೆ.+ ಅವರು ಅದನ್ನ ಕುಡಿದು ನುಂಗಿಬಿಡ್ತಾರೆ. ಅವರು ಅಸ್ತಿತ್ವದಲ್ಲೇ ಇರಲೇ ಇಲ್ಲವೇನೋ ಅನ್ನೋ ತರ ಕಣ್ಮರೆ ಆಗ್ತಾರೆ. 17  ಆದ್ರೆ ಪಾರಾದವರು ಚೀಯೋನ್‌ ಬೆಟ್ಟದ ಮೇಲೆ ಇರ್ತಾರೆ,+ಆ ಬೆಟ್ಟ ಪವಿತ್ರವಾಗಿರುತ್ತೆ,+ಯಾಕೋಬನ ವಂಶದವರು ತಮಗೆ ಸೇರಿದ ಸೊತ್ತನ್ನ ಮತ್ತೆ ತಮ್ಮದಾಗಿ ಮಾಡ್ಕೊಳ್ತಾರೆ.+ 18  ಯಾಕೋಬನ ವಂಶದವರು ಬೆಂಕಿ ತರ ಆಗ್ತಾರೆ,ಯೋಸೇಫನ ವಂಶದವರು ಜ್ವಾಲೆ ತರ ಆಗ್ತಾರೆ,ಏಸಾವನ ವಂಶದವರು ಕೂಳೆ ತರ ಇರ್ತಾರೆ,ಇವ್ರನ್ನ ಅವರು ಸುಟ್ಟು ಬೂದಿ ಮಾಡ್ತಾರೆ,ಏಸಾವನ ವಂಶದಲ್ಲಿ ಯಾರೂ ಬದುಕಿ ಉಳಿಯಲ್ಲ.+ ಯಾಕಂದ್ರೆ ಯೆಹೋವನೇ ಇದನ್ನ ಹೇಳಿದ್ದಾನೆ. 19  ಅವರು ನೆಗೆಬ್‌,* ಏಸಾವನ ಬೆಟ್ಟ ಪ್ರದೇಶವನ್ನ,ಷೆಫೆಲಾ ಮತ್ತು ಫಿಲಿಷ್ಟಿಯರ ದೇಶವನ್ನ ವಶ ಮಾಡ್ಕೊಳ್ತಾರೆ.+ ಅವರು ಎಫ್ರಾಯೀಮಿನ ಮತ್ತು ಸಮಾರ್ಯದ ಜಮೀನನ್ನೂ ತಮ್ಮದಾಗಿ ಮಾಡ್ಕೊಳ್ತಾರೆ,+ಬೆನ್ಯಾಮೀನ ಗಿಲ್ಯಾದನ್ನ ಸ್ವಾಧೀನ ಮಾಡ್ಕೊಳ್ತಾನೆ. 20  ಕಾನಾನ್‌ ದೇಶದಿಂದ ಚಾರೆಪ್ತದ+ ತನಕ ಇರೋ ಪ್ರದೇಶಈ ಕೋಟೆಯಿಂದ ಕೈದಿಯಾಗಿ ಹೋದ ಇಸ್ರಾಯೇಲ್ಯರಿಗೆ ಸೇರುತ್ತೆ.+ ಯೆರೂಸಲೇಮಿಂದ ಕೈದಿಯಾಗಿ ಹೋಗಿ ಸೆಪಾರದಿನಲ್ಲಿ ಇದ್ದವರು ನೆಗೆಬಿನ ಪಟ್ಟಣಗಳನ್ನ ವಶ ಮಾಡ್ಕೊಳ್ತಾರೆ.+ 21  ಏಸಾವನ ಬೆಟ್ಟ ಪ್ರದೇಶಕ್ಕೆ ತೀರ್ಪು ಕೊಡೋಕೆ+ರಕ್ಷಕರು ಚೀಯೋನ್‌ ಬೆಟ್ಟದ ಮೇಲೆ ಹೋಗ್ತಾರೆ. ಆಗ ಯೆಹೋವ ರಾಜನಾಗಿ ಆಳ್ತಾನೆ.”+

ಪಾದಟಿಪ್ಪಣಿ

ಈ ಹೆಸ್ರಿನ ಅರ್ಥ “ಯೆಹೋವನ ಸೇವಕ.”
ಬಹುಶಃ, “ಎತ್ತರಕ್ಕೆ ಹಾರಿದ್ರೂ.”
ಬಹುಶಃ, “ಆದ್ರೆ ನಿನ್ನ ಶತ್ರುಗಳು ನಿನ್ನನ್ನ ಎಷ್ಟರ ಮಟ್ಟಿಗೆ ನಾಶಮಾಡ್ತಾರೆ?”
ಅಥವಾ “ನಿನ್ನ ಜೊತೆ ಒಪ್ಪಂದ ಮಾಡಿದವರು.”
ಅಥವಾ “ದಕ್ಷಿಣ.”