ಗಲಾತ್ಯದವರಿಗೆ ಬರೆದ ಪತ್ರ 6:1-18

  • ಬೇರೆಯವ್ರ ಭಾರಗಳನ್ನ ಹೊತ್ಕೊಳ್ಳಿ (1-10)

    • ಬಿತ್ತಿದ್ದನ್ನೇ ಕೊಯ್ಯಬೇಕು (7, 8)

  • ಸುನ್ನತಿ ಮುಖ್ಯವಲ್ಲ (11-16)

    • ಹೊಸ ಸೃಷ್ಟಿ (15)

  • ಕೊನೇ ಮಾತು (17, 18)

6  ಸಹೋದರರೇ, ಯಾರಾದ್ರೂ ಗೊತ್ತಿಲ್ದೆ ತಪ್ಪು ದಾರಿ ಹಿಡಿದಿದ್ರೆ ಎಲ್ಲ ಚೆನ್ನಾಗಿ ತಿಳ್ಕೊಂಡಿರೋ ಕ್ರೈಸ್ತರಾದ* ನೀವು ಮೃದುವಾಗಿ ಅವನನ್ನ ಮತ್ತೆ ಸರಿ ದಾರಿಗೆ ತರೋಕೆ ಪ್ರಯತ್ನಿಸಿ.+ ಅದೇ ಸಮಯದಲ್ಲಿ ನೀವೂ ಯಾವ ತಪ್ಪನ್ನೂ ಮಾಡದ ಹಾಗೆ+ ಹುಷಾರಾಗಿರಿ.+  ಒಬ್ರು ಇನ್ನೊಬ್ರ ಭಾರಗಳನ್ನ ಯಾವಾಗ್ಲೂ ಹೊತ್ಕೊಳ್ಳಿ.+ ಹೀಗೆ ನೀವು ಕ್ರಿಸ್ತನ ನಿಯಮ ಪಾಲಿಸ್ತೀರ.+  ಒಬ್ಬ ವ್ಯಕ್ತಿ ಏನೂ ಅಲ್ಲದಿದ್ರೂ ಅವನು ಮನಸ್ಸಲ್ಲಿ ‘ನಾನು ದೊಡ್ಡವನು’ ಅಂತ ನೆನಸಿದ್ರೆ+ ಅವನು ಅವನನ್ನೇ ಮೋಸ ಮಾಡ್ಕೊಳ್ತಿದ್ದಾನೆ.  ಆದ್ರೆ ಪ್ರತಿಯೊಬ್ಬನು ಅವನು ಮಾಡಿದ ಕೆಲಸವನ್ನ ಚೆನ್ನಾಗಿ ಪರೀಕ್ಷಿಸ್ಕೊಳ್ಳಲಿ.+ ಆಗ ಅವನು ಬೇರೆಯವ್ರ ಜೊತೆ ತನ್ನನ್ನ ಹೋಲಿಸ್ಕೊಳ್ಳೋ ಬದ್ಲು ತನ್ನ ಕೆಲಸದ ಬಗ್ಗೆ ಮಾತ್ರ ಖುಷಿಪಡ್ತಾನೆ.+  ಯಾಕಂದ್ರೆ ಪ್ರತಿಯೊಬ್ಬನು ತನ್ನ ಹೊರೆಯನ್ನ* ತಾನೇ ಹೊತ್ಕೊಬೇಕು.+  ಅಷ್ಟೇ ಅಲ್ಲ, ದೇವರ ಮಾತಿನ ಬಗ್ಗೆ ಕಲಿತಾ ಇರುವವನು ಅದನ್ನ ಕಲಿಸ್ತಾ ಇರುವವ್ರ ಜೊತೆ ಎಲ್ಲ ಒಳ್ಳೇ ವಿಷ್ಯಗಳನ್ನ ಹಂಚ್ಕೊಳ್ಳಲಿ.+  ಮೋಸಹೋಗಬೇಡಿ,* ಯಾರೂ ದೇವರಿಗೆ ಮೋಸ ಮಾಡಕ್ಕಾಗಲ್ಲ.* ಯಾಕಂದ್ರೆ ಒಬ್ಬನು ಏನು ಬಿತ್ತುತ್ತಾನೋ ಅದನ್ನೇ ಕೊಯ್ತಾನೆ.+  ಪಾಪದ* ಆಸೆಗಳನ್ನ ಬಿತ್ತುವವನು ಪಾಪದ ಆಸೆಗಳಿಂದ ನಾಶವನ್ನ ಕೊಯ್ತಾನೆ, ಆದ್ರೆ ಪವಿತ್ರಶಕ್ತಿಯನ್ನ ಬಿತ್ತುವವನು ಪವಿತ್ರಶಕ್ತಿಯಿಂದ ಶಾಶ್ವತ ಜೀವವನ್ನ ಕೊಯ್ತಾನೆ.+  ಹಾಗಾಗಿ ಒಳ್ಳೇದು ಮಾಡೋದನ್ನ ಬಿಡೋದು ಬೇಡ. ನಾವು ಸುಸ್ತಾಗದೆ ಇದ್ರೆ* ತಕ್ಕ ಸಮಯಕ್ಕೆ ಫಲ ಕೊಯ್ತೀವಿ.+ 10  ಹಾಗಾಗಿ ಅವಕಾಶ* ಇರುವಾಗೆಲ್ಲ ಎಲ್ರಿಗೂ ಒಳ್ಳೇದು ಮಾಡೋಣ, ಮುಖ್ಯವಾಗಿ ನಂಬಿಕೆಯಲ್ಲಿ ನಮ್ಮ ಸಂಬಂಧಿಕರಾದವ್ರಿಗೆ ಒಳ್ಳೇದು ಮಾಡೋಣ. 11  ದೊಡ್ಡ ದೊಡ್ಡ ಅಕ್ಷರಗಳಲ್ಲಿ ನನ್ನ ಕೈಯಾರೆ ನಿಮಗೆ ಈ ಪತ್ರ ಬರಿತಾ ಇದ್ದೀನಿ ನೋಡಿ. 12  ಜನ್ರು ನಮ್ಮನ್ನ ನೋಡಿ ಮೆಚ್ಚಬೇಕು ಅಂತ ಇಷ್ಟಪಡುವವರು ಸುನ್ನತಿ ಮಾಡಿಸ್ಕೊಳ್ಳೋಕೆ ನಿಮ್ಮನ್ನ ಒತ್ತಾಯಿಸ್ತಾರೆ. ಕ್ರಿಸ್ತನಿಗೋಸ್ಕರ* ಹಿಂಸೆ ಅನುಭವಿಸಬಾರದು ಅನ್ನೋದೇ ಅವ್ರ ಉದ್ದೇಶ. 13  ಸುನ್ನತಿ ಮಾಡಿಸ್ಕೊಳ್ಳುವವ್ರೇ ನಿಯಮ ಪುಸ್ತಕ ಪಾಲಿಸಲ್ಲ,+ ನಿಮ್ಮ* ಬಗ್ಗೆ ಅವರು ಕೊಚ್ಕೊಬೇಕು ಅಂತಾನೇ ‘ಸುನ್ನತಿ ಮಾಡಿಸ್ಕೊಳ್ಳಿ’ ಅಂತ ಹೇಳ್ತಿದ್ದಾರೆ. 14  ಆದ್ರೆ ನಾನು, ಹಿಂಸಾ ಕಂಬದ* ಮೇಲೆ ಸತ್ತ ನಮ್ಮ ಪ್ರಭು ಯೇಸು ಕ್ರಿಸ್ತನ ಬಗ್ಗೆ ಬಿಟ್ಟು ಬೇರೆ ಯಾವುದ್ರ ಬಗ್ಗೆನೂ ಯಾವತ್ತೂ ಹೆಮ್ಮೆಪಡಲ್ಲ.+ ಆತನಿಂದಾಗಿ ನನ್ನ ದೃಷ್ಟಿಯಲ್ಲಿ ಈ ಲೋಕ ಸತ್ತುಹೋಗಿದೆ, ಈ ಲೋಕದ ದೃಷ್ಟಿಯಲ್ಲಿ ನಾನು ಸತ್ತುಹೋಗಿದ್ದೀನಿ.* 15  ಸುನ್ನತಿ ಆಗೋದು, ಆಗ್ದೆ ಇರೋದು ಮುಖ್ಯ ಅಲ್ಲ,+ ಹೊಸ ಸೃಷ್ಟಿ ಆಗಿರೋದೇ ಮುಖ್ಯ.+ 16  ಇದಕ್ಕೆ ತಕ್ಕ ಹಾಗೆ ನಡ್ಯೋ ಎಲ್ರಿಗೆ ಅಂದ್ರೆ ದೇವರ ಇಸ್ರಾಯೇಲ್ಯರಿಗೆ ಶಾಂತಿ, ಕರುಣೆ ಸಿಗ್ಲಿ.+ 17  ಇನ್ಮುಂದೆ ಯಾರೂ ನನಗೆ ತೊಂದ್ರೆ ಕೊಡಬೇಡಿ. ಯಾಕಂದ್ರೆ ನಾನು ಯೇಸುಗೆ ದಾಸ ಅನ್ನೋದಕ್ಕೆ ನನ್ನ ಮೈಮೇಲೆ ಗುರುತುಗಳಿವೆ.+ 18  ಸಹೋದರರೇ, ನೀವು ಒಳ್ಳೇ ಗುಣಗಳನ್ನ ತೋರಿಸುವಾಗ ನಮ್ಮ ಪ್ರಭು ಯೇಸು ಕ್ರಿಸ್ತ ನಿಮಗೆ ಅಪಾರ ಕೃಪೆ ತೋರಿಸ್ಲಿ. ಆಮೆನ್‌.

ಪಾದಟಿಪ್ಪಣಿ

ಅಥವಾ “ಪ್ರೌಢರಾದ.”
ಅಥವಾ “ಜವಾಬ್ದಾರಿಯನ್ನ.”
ಅಥವಾ “ದೇವರು ಅಪಹಾಸ್ಯ ಸಹಿಸಲ್ಲ.”
ಅಥವಾ “ದಾರಿ ತಪ್ಪಬೇಡಿ.”
ಅಥವಾ “ದೇಹದ.”
ಅಥವಾ “ಬಿಟ್ಟುಬಿಡದಿದ್ರೆ.”
ಅಕ್ಷ. “ಸಮಯ.”
ಅಕ್ಷ. “ಕ್ರಿಸ್ತನ ಹಿಂಸಾ ಕಂಬಕ್ಕೋಸ್ಕರ.”
ಅಕ್ಷ. “ನಿಮ್ಮ ದೇಹದ.”
ಅಥವಾ “ನನ್ನನ್ನ ಕಂಬದ ಮೇಲೆ ಕೊಲ್ಲಲಾಗಿದೆ.”