ಜೆಕರ್ಯ 1:1-21
1 ದಾರ್ಯಾವೆಷ ಆಳ್ತಿದ್ದ ಎರಡ್ನೇ ವರ್ಷದ ಎಂಟನೇ ತಿಂಗಳಲ್ಲಿ+ ಇದ್ದೋವನ ಮೊಮ್ಮಗನೂ ಬೆರೆಕ್ಯನ ಮಗನೂ ಆದ ಪ್ರವಾದಿ ಜೆಕರ್ಯನಿಗೆ*+ ಯೆಹೋವನ ಸಂದೇಶ ಸಿಕ್ತು. ಅದೇನಂದ್ರೆ:
2 “ನಿಮ್ಮ ಪೂರ್ವಜರ ಮೇಲೆ ಯೆಹೋವನಿಗೆ ತುಂಬ ಕೋಪ ಬಂದಿತ್ತು.+
3 ಹಾಗಾಗಿ ಅವ್ರಿಗೆ ಹೀಗೆ ಹೇಳು: ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: “‘ನನ್ನ ಹತ್ರ ವಾಪಸ್ ಬನ್ನಿ’ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ. ‘ಆಗ ನಾನು ನಿಮ್ಮ ಹತ್ರ ವಾಪಸ್ ಬರ್ತಿನಿ’+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.”’
4 ‘ನೀವು ನಿಮ್ಮ ಪೂರ್ವಜರ ತರ ಆಗಬೇಡಿ. ಆಗಿನ ಪ್ರವಾದಿಗಳು ಅವ್ರಿಗೆ “ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ನಿಮ್ಮ ಕೆಟ್ಟ ದಾರಿಗಳನ್ನ, ಕೆಟ್ಟ ಕೆಲಸಗಳನ್ನ ಬಿಟ್ಟು ದಯವಿಟ್ಟು ವಾಪಸ್ ಬನ್ನಿ’ ಅಂತ ಹೇಳಿದ್ದರು.”’+
‘ಆದ್ರೆ ಅವರು ನನ್ನ ಮಾತನ್ನ ಕೇಳಲಿಲ್ಲ. ನನ್ನ ಕಡೆ ಗಮನಕೊಡಲಿಲ್ಲ’+ ಅಂತ ಯೆಹೋವ ಹೇಳ್ತಿದ್ದಾನೆ.
5 ‘ಈಗ ನಿಮ್ಮ ಪೂರ್ವಜರು ಎಲ್ಲಿದ್ದಾರೆ? ಆವಾಗಿದ್ದ ಪ್ರವಾದಿಗಳು ಇವತ್ತು ಬದುಕಿದ್ದಾರಾ?
6 ಯಾವ ನಿಯಮಗಳನ್ನ ಪಾಲಿಸಬೇಕಂತ ನಾನು ನಿಮ್ಮ ಪೂರ್ವಜರಿಗೆ ಹೇಳಿದ್ನೋ ಆ ನಿಯಮಗಳನ್ನ ಪಾಲಿಸದೇ ಇದ್ರೆ ಏನಾಗುತ್ತೆ ಅಂತ ಎಚ್ಚರಿಸೋಕೆ ನಾನು ನನ್ನ ಸೇವಕರನ್ನ, ಪ್ರವಾದಿಗಳನ್ನ ಅವ್ರ ಹತ್ರ ಕಳಿಸಿದ್ದೆ. ನಾನು ಹೇಳಿದ ಎಲ್ಲ ವಿಷ್ಯಗಳನ್ನ ಅವರು ಅನುಭವಿಸಿದ್ರಲ್ವಾ?’+ ಹಾಗಾಗಿ ಅವರು ನನ್ನ ಹತ್ರ ವಾಪಸ್ ಬಂದು, ನನಗೆ ಹೀಗಂದ್ರು: ‘ಸೈನ್ಯಗಳ ದೇವರಾದ ಯೆಹೋವ ತನ್ನ ಮನಸ್ಸಲ್ಲಿ ಅಂದ್ಕೊಂಡ ತರಾನೇ ಮಾಡಿದ್ದಾನೆ. ನಾವು ಹಿಡಿದ ದಾರಿಗಳಿಗೆ, ನಾವು ಮಾಡಿದ ಕೆಲಸಗಳಿಗೆ ತಕ್ಕಂತೆ ನಮ್ಮ ಜೊತೆ ನಡ್ಕೊಂಡಿದ್ದಾನೆ.’”+
7 ದಾರ್ಯಾವೆಷ ಆಳ್ತಿದ್ದ ಎರಡ್ನೇ ವರ್ಷದ+ 11ನೇ ತಿಂಗಳಿನ ಅಂದ್ರೆ ಶೆಬಾಟ್* ತಿಂಗಳಿನ 24ನೇ ದಿನ ಇದ್ದೋವನ ಮೊಮ್ಮಗನೂ ಬೆರೆಕ್ಯನ ಮಗನೂ ಆದ ಪ್ರವಾದಿ ಜೆಕರ್ಯನಿಗೆ ಯೆಹೋವನ ಸಂದೇಶ ಸಿಕ್ತು. ಅದೇನಂದ್ರೆ:
8 “ರಾತ್ರಿ ಹೊತ್ತಲ್ಲಿ ನಾನು ಒಂದು ದರ್ಶನ ನೋಡಿದೆ. ವ್ಯಕ್ತಿಯೊಬ್ಬ ಕೆಂಪು ಕುದುರೆ ಮೇಲೆ ಸವಾರಿ ಮಾಡ್ತಿದ್ದ. ಅವನು ಕಂದರದಲ್ಲಿ ಮರ್ಟಲ್ ಮರಗಳ* ಮಧ್ಯ ಬಂದು ನಿಂತ್ಕೊಂಡ. ಅವನ ಹಿಂದೆ ಕೆಂಪು, ಕಂದು ಮತ್ತು ಬಿಳಿ ಬಣ್ಣದ ಕುದುರೆಗಳಿದ್ದವು.”
9 ಆಗ ನಾನು “ಒಡೆಯ, ಇವರು ಯಾರು?” ಅಂತ ಕೇಳಿದೆ.
ಅದಕ್ಕೆ ನನ್ನ ಜೊತೆ ಮಾತಾಡ್ತಿದ್ದ ದೇವದೂತ “ಇವರು ಯಾರಂತ ನಿನಗೆ ತೋರಿಸ್ತೀನಿ” ಅಂದ.
10 ಆಗ ಮರ್ಟಲ್ ಮರಗಳ ಮಧ್ಯ ನಿಂತಿದ್ದ ಆ ವ್ಯಕ್ತಿ “ಯೆಹೋವ ಇವ್ರನ್ನ ಭೂಮಿಯಲ್ಲೆಲ್ಲ ಸಂಚರಿಸ್ಕೊಂಡು ಬರೋಕೆ ಕಳಿಸಿದ್ದಾನೆ” ಅಂದ.
11 ಮರ್ಟಲ್ ಮರಗಳ ಮಧ್ಯ ನಿಂತಿದ್ದ ಯೆಹೋವನ ದೂತನಿಗೆ ಆ ಕುದುರೆಸವಾರರು “ನಾವು ಇಡೀ ಭೂಮಿಯನ್ನ ಸಂಚರಿಸಿದ್ವಿ. ಭೂಮೀಲಿ ಸ್ವಲ್ಪನೂ ಗಲಿಬಿಲಿ ಇಲ್ಲ, ಪ್ರಶಾಂತವಾಗಿದೆ”+ ಅಂದ್ರು.
12 ಆಗ ಯೆಹೋವನ ದೂತ “ಸೈನ್ಯಗಳ ದೇವರಾದ ಯೆಹೋವನೇ, 70 ವರ್ಷಗಳಿಂದ ಯೆಹೂದದ ಪಟ್ಟಣಗಳ ಮೇಲೆ, ಯೆರೂಸಲೇಮಿನ ಮೇಲೆ ನಿನ್ನ ಕೋಪ ಹೊತ್ತಿ ಉರಿತಿದೆ.+ ಇನ್ನೂ ಎಷ್ಟು ದಿನ ಕರುಣೆ ತೋರಿಸದೆ ಹೀಗೇ ಇರ್ತಿಯ?”+ ಅಂತ ಕೇಳಿದ.
13 ನನ್ನ ಜೊತೆ ಮಾತಾಡ್ತಿದ್ದ ದೇವದೂತನಿಗೆ ಯೆಹೋವ ಸಾಂತ್ವನದ ಮಾತುಗಳನ್ನಾಡ್ತಾ ದಯೆಯಿಂದ ಉತ್ತರಿಸಿದ.
14 ನನ್ನ ಜೊತೆ ಮಾತಾಡ್ತಿದ್ದ ಆ ದೇವದೂತ ನನಗೆ ಹೀಗಂದ: “ನೀನು ಹೀಗೆ ಹೇಳು ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ: “ನನಗೆ ಯೆರೂಸಲೇಮಿನ ಮೇಲೆ ಮತ್ತು ಚೀಯೋನಿನ ಮೇಲೆ ನಿಜವಾಗ್ಲೂ ತುಂಬ ಪ್ರೀತಿ, ಕಾಳಜಿ ಇದೆ.+
15 ಹಾಯಾಗಿರೋ ದೇಶಗಳ ಮೇಲೆ ನನಗೆ ತುಂಬ ಕೋಪ ಬಂದಿದೆ.+ ಯಾಕಂದ್ರೆ ನಾನು ನನ್ನ ಜನ್ರಿಗೆ ಸ್ವಲ್ಪ ಶಿಕ್ಷೆ ಕೊಡಬೇಕು ಅಂದ್ಕೊಂಡಿದ್ದೆ.+ ಆದ್ರೆ ಆ ದೇಶಗಳು ನನ್ನ ಜನ್ರಿಗೆ ತುಂಬಾನೇ ಹಾನಿ ಮಾಡಿದ್ವು.”’+
16 ಹಾಗಾಗಿ ಯೆಹೋವ ಹೀಗೆ ಹೇಳ್ತಾನೆ: ‘“ನಾನು ಕರುಣೆಯಿಂದ ಯೆರೂಸಲೇಮಿಗೆ ವಾಪಸ್ ಹೋಗ್ತೀನಿ.+ ಅಲ್ಲಿ ನನ್ನ ಸ್ವಂತ ಮನೆಯನ್ನ ಕಟ್ಟಲಾಗುತ್ತೆ.+ ಯೆರೂಸಲೇಮನ್ನ ಮತ್ತೆ ಕಟ್ಟೋಕೆ ಅಳತೆಗಳನ್ನ ತಗೊಳ್ಳಲಾಗುತ್ತೆ”*+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.’
17 ಇನ್ನೊಂದು ಸಲ ತಿಳಿಸ್ತಾ ಹೀಗೆ ಹೇಳು: ‘ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: “ನನ್ನ ಪಟ್ಟಣಗಳಲ್ಲಿ ಒಳ್ಳೇತನ ಮತ್ತೊಮ್ಮೆ ತುಂಬಿತುಳುಕುತ್ತೆ. ಯೆಹೋವ ಮತ್ತೆ ಚೀಯೋನನ್ನ ಸಾಂತ್ವನಗೊಳಿಸ್ತಾನೆ,+ ಯೆರೂಸಲೇಮನ್ನ ಆರಿಸ್ಕೊಳ್ತಾನೆ.”’”+
18 ಆಮೇಲೆ ನಾನು ತಲೆ ಎತ್ತಿ ನೋಡಿದಾಗ ನಾಲ್ಕು ಕೊಂಬುಗಳು ಕಾಣಿಸ್ತು.+
19 ಆಗ ನನ್ನ ಜೊತೆ ಮಾತಾಡ್ತಿದ್ದ ದೇವದೂತನಿಗೆ “ಏನಿವು?” ಅಂದೆ. ಅದಕ್ಕೆ ಅವನು “ಯೆಹೂದವನ್ನ,+ ಇಸ್ರಾಯೇಲನ್ನ+ ಮತ್ತು ಯೆರೂಸಲೇಮನ್ನ+ ಚೆಲ್ಲಾಪಿಲ್ಲಿ ಮಾಡಿದ ಕೊಂಬುಗಳಿವು” ಅಂದ.
20 ಆಮೇಲೆ ಯೆಹೋವ ನನಗೆ ನಾಲ್ಕು ಕರಕುಶಲಗಾರರನ್ನ ತೋರಿಸಿದನು.
21 ಆಗ ನಾನು “ಇವರು ಏನು ಮಾಡೋಕೆ ಬಂದಿದ್ದಾರೆ?” ಅಂತ ಕೇಳಿದೆ.
ಅದಕ್ಕೆ ದೇವದೂತ “ಯಾರೂ ತಲೆ ಎತ್ತೋಕೆ ಆಗದಷ್ಟರ ಮಟ್ಟಿಗೆ ಯೆಹೂದವನ್ನ ಆ ಕೊಂಬುಗಳು ಚೆಲ್ಲಾಪಿಲ್ಲಿ ಮಾಡಿದ್ದವು. ಈ ಕೆಲಸಗಾರರು ಆ ಕೊಂಬುಗಳನ್ನ ಹೆದರಿಸೋಕೆ ಬಂದಿದ್ದಾರೆ. ಯೆಹೂದವನ್ನ ಚೆಲ್ಲಾಪಿಲ್ಲಿ ಮಾಡಬೇಕಂತ ಅದ್ರ ವಿರುದ್ಧ ತಮ್ಮ ಕೊಂಬುಗಳನ್ನ ಎತ್ತಿದ ಎಲ್ಲ ದೇಶಗಳನ್ನ ನಾಶಮಾಡೋಕೆ ಬಂದಿದ್ದಾರೆ” ಅಂದ.
ಪಾದಟಿಪ್ಪಣಿ
^ ಅರ್ಥ “ಯೆಹೋವ ನೆನಪಿಸ್ಕೊಂಡನು.”
^ ಪರಿಶಿಷ್ಟ ಬಿ15 ನೋಡಿ.
^ ಇದು, ಹೊಳಪಿನ ಎಲೆಗಳು ಮತ್ತು ಸುವಾಸನೆ ಇರೋ ಬಿಳಿ ಹೂವುಗಳನ್ನ ಬಿಡೋ ಪೊದೆ.
^ ಅಕ್ಷ. “ಅಳೆಯೋ ನೂಲನ್ನ ಎಳೆಯಲಾಗುತ್ತೆ.”