ಜೆಕರ್ಯ 5:1-11

  • ದರ್ಶನ 6: ಹಾರಾಡ್ತಿರೋ ಸುರುಳಿ (1-4)

  • ದರ್ಶನ 7: ಅಳೆಯೋ ಒಂದು ಪಾತ್ರೆ (5-11)

    • ಕೆಟ್ಟತನವನ್ನ ಸೂಚಿಸೋ ಸ್ತ್ರೀ ಅದ್ರ ಒಳಗೆ ಇದ್ದಾಳೆ (8)

    • ಪಾತ್ರೆಯನ್ನ ಶಿನಾರ್‌ ದೇಶಕ್ಕೆ ತಗೊಂಡು ಹೋಗಲಾಯ್ತು (9-11)

5  ನಾನು ಮತ್ತೆ ಮೇಲೆ ನೋಡಿದಾಗ ಹಾರ್ತಿರೋ ಸುರುಳಿ ಕಾಣಿಸ್ತು.  ಅವನು “ನಿನಗೆ ಏನು ಕಾಣಿಸ್ತಿದೆ?” ಅಂತ ಕೇಳಿದ. ಅದಕ್ಕೆ ನಾನು “ಹಾರ್ತಿರೋ ಒಂದು ಸುರುಳಿ ಕಾಣ್ತಿದೆ. ಅದು 20 ಮೊಳ* ಉದ್ದ, 10 ಮೊಳ ಅಗಲ ಇದೆ” ಅಂದೆ.  ಆಮೇಲೆ ಅವನು ನನಗೆ ಹೀಗಂದ: “ಇದು ಇಡೀ ಭೂಮಿ ಮೇಲೆ ಬರೋ ಶಾಪ. ಯಾಕಂದ್ರೆ ಆ ಸುರುಳಿಯ ಒಂದು ಕಡೆ ಬರೆದಿರೋ ಪ್ರಕಾರ ಕಳ್ಳತನ ಮಾಡಿರುವವ್ರಿಗೆಲ್ಲ+ ಶಿಕ್ಷೆ ಆಗಿಲ್ಲ. ಆ ಸುರುಳಿಯ ಇನ್ನೊಂದು ಕಡೆ ಬರೆದಿರೋ ಪ್ರಕಾರ ಸುಳ್ಳು ಆಣೆ ಮಾಡಿದವ್ರಿಗೆಲ್ಲ+ ಶಿಕ್ಷೆ ಆಗಿಲ್ಲ.  ‘ಅದನ್ನ ಕಳಿಸಿದವನು ನಾನೇ. ಅದು ಕಳ್ಳನ ಮನೆಯೊಳಗೆ ಮತ್ತು ನನ್ನ ಹೆಸ್ರಲ್ಲಿ ಸುಳ್ಳು ಆಣೆ ಮಾಡಿದವನ ಮನೆಯೊಳಗೆ ಹೋಗಿ ಆ ಮನೆಯಲ್ಲೇ ಇದ್ದು ಅದನ್ನ, ಅದ್ರ ತೊಲೆಗಳನ್ನ, ಕಲ್ಲುಗಳನ್ನ ನುಂಗಿಹಾಕುತ್ತೆ’ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.”  ಆಮೇಲೆ ನನ್ನ ಜೊತೆ ಮಾತಾಡ್ತಿದ್ದ ದೇವದೂತ ಮುಂದೆ ಬಂದು “ದಯವಿಟ್ಟು ನಿನ್ನ ತಲೆಯನ್ನ ಮೇಲೆತ್ತು ಮತ್ತು ಏನು ಹೋಗ್ತಿದೆ ಅಂತ ನೋಡು” ಅಂದ.  ಆಗ ನಾನು “ಏನದು?” ಅಂತ ಕೇಳಿದೆ. ಅದಕ್ಕೆ ಅವನು “ಅಲ್ಲಿ ಹೋಗ್ತಿರೋದು ಧಾನ್ಯವನ್ನ ಅಳೆಯೋ ಒಂದು ಪಾತ್ರೆ”* ಅಂದ. ಅಷ್ಟೇ ಅಲ್ಲ “ಇದು ಇಡೀ ಭೂಮಿಯಲ್ಲಿರೋ ಕೆಟ್ಟ ಜನ್ರ ರೂಪವಾಗಿದೆ” ಅಂತನೂ ಹೇಳಿದ.  ಆಮೇಲೆ ಆ ಪಾತ್ರೆಗಿದ್ದ ವೃತ್ತಾಕಾರದ ಸೀಸದ ಮುಚ್ಚಳ ತೆಗೆದಾಗ ಅದ್ರೊಳಗೆ ಒಬ್ಬ ಸ್ತ್ರೀ ಕೂತಿರೋದನ್ನ ನಾನು ನೋಡಿದೆ.  ಆಮೇಲೆ ಅವನು “ಈ ಸ್ತ್ರೀ ಕೆಟ್ಟತನವನ್ನ ಸೂಚಿಸ್ತಾಳೆ” ಅಂತ ಹೇಳಿ ಅವಳನ್ನ ಮತ್ತೆ ಅದೇ ಪಾತ್ರೆಗೆ ಎಸೆದ. ಆಮೇಲೆ ಭಾರವಾದ ಸೀಸದ ಮುಚ್ಚಳದಿಂದ ಆ ಪಾತ್ರೆಯ ಬಾಯಿ ಮುಚ್ಚಿದ.  ನಾನು ತಲೆಯೆತ್ತಿ ನೋಡಿದಾಗ ಇಬ್ಬರು ಸ್ತ್ರೀಯರು ಗಾಳಿಯಲ್ಲಿ ತೇಲುತ್ತಾ ಮುಂದೆ ಬರೋದನ್ನ ನೋಡಿದೆ. ಅವ್ರಿಗೆ ಕೊಕ್ಕರೆಗೆ ಇರೋ ತರ ರೆಕ್ಕೆಗಳಿದ್ದವು. ಅಳೆಯೋ ಆ ಪಾತ್ರೆಯನ್ನ ಅವರು ಭೂಮಿ ಮತ್ತು ಆಕಾಶದ ಮಧ್ಯ ತಗೊಂಡು ಹೋದ್ರು. 10  ಆಗ ನಾನು ನನ್ನ ಜೊತೆ ಮಾತಾಡ್ತಿದ್ದ ಆ ದೇವದೂತನಿಗೆ “ಅವರು ಆ ಪಾತ್ರೆಯನ್ನ ಎಲ್ಲಿಗೆ ತಗೊಂಡು ಹೋಗ್ತಿದ್ದಾರೆ?” ಅಂತ ಕೇಳಿದೆ. 11  ಅದಕ್ಕೆ ಅವನು “ಅದನ್ನ ಅವರು ಶಿನಾರ್‌+ ದೇಶಕ್ಕೆ* ತಗೊಂಡು ಹೋಗ್ತಿದ್ದಾರೆ. ಅಲ್ಲಿ ಅವರು ಅವಳಿಗಾಗಿ ಒಂದು ಮನೆ ಕಟ್ತಾರೆ. ಅದು ಸಿದ್ಧವಾದ ಮೇಲೆ ಅವಳು ಇರಬೇಕಾದ ಜಾಗದಲ್ಲಿ ಅವಳನ್ನ ಇಡಲಾಗುತ್ತೆ” ಅಂದ.

ಪಾದಟಿಪ್ಪಣಿ

ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು) ಪರಿಶಿಷ್ಟ ಬಿ14 ನೋಡಿ.
ಅಕ್ಷ. “ಏಫಾ ಪಾತ್ರೆ.” ಒಂದು ಏಫಾವನ್ನ ಅಳೆಯೋಕೆ ಬಳಸೋ ಒಂದು ಪಾತ್ರೆಯನ್ನೋ ಅಥವಾ ಒಂದು ಬುಟ್ಟಿಯನ್ನೋ ಇಲ್ಲಿ ಸೂಚಿಸಲಾಗಿದೆ. ಒಂದು ಏಫಾ ಸುಮಾರು 22ಲೀ. ಪರಿಶಿಷ್ಟ ಬಿ14 ನೋಡಿ.
ಅದು, ಬ್ಯಾಬಿಲೋನಿಯ.