ಜ್ಞಾನೋಕ್ತಿ 14:1-35
14 ಬುದ್ಧಿ ಇರೋ ಸ್ತ್ರೀ ತನ್ನ ಮನೆ ಕಟ್ತಾಳೆ,+ಬುದ್ಧಿ ಇಲ್ಲದವಳು ಕೈಯಾರೆ ಮನೆ ಮುರಿತಾಳೆ.
2 ಸರಿಯಾದ ದಾರಿಯಲ್ಲಿ ನಡಿಯುವವನಿಗೆ ಯೆಹೋವನ ಭಯ ಇರುತ್ತೆ,ಅಡ್ಡದಾರಿ ಹಿಡಿಯುವವನು ಆತನನ್ನ ತಿರಸ್ಕರಿಸ್ತಾನೆ.
3 ಮೂರ್ಖನ ಅಹಂಕಾರದ ಮಾತುಗಳು ಕೋಲಿಂದ ಹೊಡೆದ ಹಾಗಿರುತ್ತೆ,ವಿವೇಕಿಯ ಮಾತುಗಳು ಕಾಪಾಡುತ್ತೆ.
4 ದನಕರುಗಳು ಇಲ್ಲದಿದ್ರೆ ಗೋದಲಿ ಗಲೀಜಾಗಿ ಇರಲ್ಲ,ಆದ್ರೆ ಹೋರಿಯ ಶಕ್ತಿಯಿಂದ ಬೆಳೆ ಚೆನ್ನಾಗಿ ಬೆಳೆಯುತ್ತೆ.
5 ನಂಬಿಗಸ್ತಸಾಕ್ಷಿ ಸುಳ್ಳು ಹೇಳಲ್ಲ,ಆದ್ರೆ ಸುಳ್ಳುಸಾಕ್ಷಿಯ ಬಾಯಲ್ಲಿ ಬರೋದು ಬರೀ ಸುಳ್ಳೇ.+
6 ಗೇಲಿ ಮಾಡುವವನಿಗೆ ವಿವೇಕ ಹುಡುಕಿದ್ರೂ ಸಿಗಲ್ಲ,ಅರ್ಥಮಾಡ್ಕೊಳ್ಳೋ ಶಕ್ತಿ ಇರೋ ವ್ಯಕ್ತಿಗೆ ಜ್ಞಾನ ಸುಲಭವಾಗಿ ಸಿಗುತ್ತೆ.+
7 ಮೂರ್ಖನಿಂದ ದೂರ ಇರು,ಅವನ ಮಾತಲ್ಲಿ ಜ್ಞಾನ ಇರಲ್ಲ.+
8 ಜಾಣ ತನ್ನ ವಿವೇಕದಿಂದ ಯಾವ ದಾರೀಲಿ ಹೋಗಬೇಕಂತ ತಿಳ್ಕೋತಾನೆ,ಬುದ್ಧಿ ಇಲ್ಲದವನು ಮೂರ್ಖತನದಿಂದ ಮೋಸ ಹೋಗ್ತಾನೆ.*+
9 ಮೂರ್ಖ ತನ್ನ ತಪ್ಪುಗಳನ್ನ ತಮಾಷೆಯಾಗಿ ತಗೊಳ್ತಾನೆ,+ಆದ್ರೆ ನೀತಿವಂತ ರಾಜಿ ಮಾಡ್ಕೊಳ್ಳೋಕೆ ತಯಾರಾಗಿ ಇರ್ತಾನೆ.*
10 ನಮ್ಮ ಹೃದಯದಲ್ಲಿರೋ ನೋವು ನಮ್ಮ ಹೃದಯಕ್ಕೇ ಗೊತ್ತು,ಬೇರೆ ಯಾರೂ ಅದ್ರ ಸಂತೋಷ ಹಂಚ್ಕೊಳ್ಳಕ್ಕಾಗಲ್ಲ.
11 ಕೆಟ್ಟವನ ಮನೆ ನಾಶವಾಗಿ ಹೋಗುತ್ತೆ,+ನೀತಿವಂತನ ಡೇರೆ ಏಳಿಗೆ ಆಗ್ತಾ ಹೋಗುತ್ತೆ.
12 ಮನುಷ್ಯನಿಗೆ ಸರಿ ಅನಿಸೋ ಒಂದು ದಾರಿ ಇದೆ,+ಆದ್ರೆ ಅದು ಸಾವಲ್ಲಿ ಕೊನೆ ಆಗುತ್ತೆ.+
13 ನಗುವವನ ಹೃದಯದಲ್ಲೂ ನೋವು ಅಡಗಿರಬಹುದು,ಸಂತೋಷ ಕೊನೆಗೆ ಸಂಕಟವಾಗಿ ಬದಲಾಗಬಹುದು.
14 ಯಾರ ಹೃದಯ ದೇವರಿಂದ ದೂರ ಇರುತ್ತೋ ಅವನ ಕೆಲಸಗಳಿಗೆ ತಕ್ಕ ಶಿಕ್ಷೆ ಸಿಗುತ್ತೆ,+ಒಳ್ಳೇ ವ್ಯಕ್ತಿಗೆ ಅವನ ಕೆಲಸಗಳಿಗೆ ಒಳ್ಳೇ ಫಲ ಸಿಗುತ್ತೆ.+
15 ಅನುಭವ ಇಲ್ಲದವನು* ಹೇಳಿದ್ದನ್ನೆಲ್ಲ ಕಣ್ಮುಚ್ಚಿ ನಂಬ್ತಾನೆ,ಆದ್ರೆ ಜಾಣ ಪ್ರತಿ ಹೆಜ್ಜೆಯನ್ನ ಚೆನ್ನಾಗಿ ಯೋಚ್ನೆ ಮಾಡಿ ಇಡ್ತಾನೆ.+
16 ವಿವೇಕಿ ಹುಷಾರಾಗಿದ್ದು ಕೆಟ್ಟದ್ರಿಂದ ದೂರಾನೇ ಇರ್ತಾನೆ,ಮೂರ್ಖ ದುಡುಕ್ತಾನೆ,* ಅತಿಯಾದ ಆತ್ಮವಿಶ್ವಾಸ ತೋರಿಸ್ತಾನೆ.
17 ಮುಂಗೋಪಿ ಮೂರ್ಖನಾಗಿ ನಡ್ಕೊಳ್ತಾನೆ,+ಆದ್ರೆ ವಿಷ್ಯಗಳನ್ನ ಜಾಗರೂಕತೆಯಿಂದ ತೂಗಿನೋಡುವವನು ದ್ವೇಷಕ್ಕೆ ಗುರಿ ಆಗ್ತಾನೆ.
18 ಅನುಭವ ಇಲ್ಲದವನು ಮೂರ್ಖತನವನ್ನ ಆಸ್ತಿಯಾಗಿ ಪಡಿತಾನೆ,ಆದ್ರೆ ಜಾಣ ಜ್ಞಾನದ ಕಿರೀಟ ಪಡಿತಾನೆ.+
19 ಕೆಟ್ಟ ಜನ್ರು ಒಳ್ಳೇತನದ ಮುಂದೆ ಬಾಗಬೇಕಾಗುತ್ತೆ,ಕೆಟ್ಟವರು ನೀತಿವಂತರ ಬಾಗಿಲ ಹತ್ರ ಅಡ್ಡಬೀಳಬೇಕಾಗುತ್ತೆ.
20 ಬಡವನನ್ನ ಅಕ್ಕಪಕ್ಕದವರು ಕೂಡ ದ್ವೇಷಿಸ್ತಾರೆ,+ಆದ್ರೆ ಶ್ರೀಮಂತನಿಗೆ ತುಂಬಾ ಸ್ನೇಹಿತರು ಇರ್ತಾರೆ.+
21 ಬೇರೆಯವರನ್ನ ಕೀಳಾಗಿ ನೋಡುವವನು ಪಾಪಿ,ಬಡವನಿಗೆ ಕನಿಕರ ತೋರಿಸುವವನು ಸಂತೋಷವಾಗಿ ಇರ್ತಾನೆ.+
22 ಕೇಡು ಬಗೆಯುವವರು ದಾರಿ ತಪ್ಪದೇ ಇರ್ತಾರಾ?
ಒಳ್ಳೇದನ್ನ ಮಾಡೋಕೆ ಇಷ್ಟಪಡುವವರನ್ನ ಜನ ಪ್ರೀತಿಸ್ತಾರೆ, ನಂಬ್ತಾರೆ.+
23 ಕಷ್ಟಪಟ್ಟು ಮಾಡೋ ಪ್ರತಿಯೊಂದು ಕೆಲಸದಲ್ಲಿ ಪ್ರಯೋಜನ ಇರುತ್ತೆ,ಆದ್ರೆ ಹರಟೆ ಹೊಡೀತಾ ಕಾಲ ಕಳೆದ್ರೆ ಬಡತನಕ್ಕೆ ಬಲಿ ಆಗಬೇಕಾಗುತ್ತೆ.+
24 ವಿವೇಕಿಗಳ ಆಸ್ತಿನೇ ಅವ್ರ ಕಿರೀಟ,ದಡ್ಡರ ಕೆಲಸಗಳಲ್ಲಿ ದಡ್ಡತನನೇ ಇರುತ್ತೆ.+
25 ಸತ್ಯಸಾಕ್ಷಿ ಜೀವ ಕಾಪಾಡ್ತಾನೆ,ಕಪಟಿ ಬಾಯಿ ಬಿಟ್ರೆ ಬರೀ ಸುಳ್ಳೇ ಹೇಳ್ತಾನೆ.
26 ಯೆಹೋವನ ಮೇಲೆ ಭಯ ಇರುವವನಿಗೆ ಆತನ ಮೇಲೆ ಭರವಸೆನೂ ಇರುತ್ತೆ,+ಆ ಭಯನೇ ಅವನ ಮಕ್ಕಳಿಗೆ ಒಂದು ಆಶ್ರಯವಾಗಿ ಇರುತ್ತೆ.+
27 ಯೆಹೋವನ ಭಯ ಜೀವದ ಚಿಲುಮೆ.
ಅದು ಮರಣದ ಉರ್ಲುಗಳಿಂದ ತಪ್ಪಿಸಿ ಕಾಪಾಡುತ್ತೆ.
28 ಪ್ರಜೆಗಳು ಜಾಸ್ತಿ ಇದ್ರೆ ರಾಜನಿಗೆ ಗೌರವ ಜಾಸ್ತಿ,+ಪ್ರಜೆಗಳಿಲ್ಲದ ರಾಜ ಬಿದ್ದುಹೋಗ್ತಾನೆ.
29 ಬೇಗ ಕೋಪ ಮಾಡ್ಕೊಳ್ಳದವನು ಬುದ್ಧಿವಂತ,+ಮುಂಗೋಪಿ ತನ್ನ ಮೂರ್ಖತನವನ್ನ ತೋರಿಸಿ ಬಿಡ್ತಾನೆ.+
30 ಪ್ರಶಾಂತ ಹೃದಯ ದೇಹಕ್ಕೆ ಆರೋಗ್ಯ,*ಹೊಟ್ಟೆಕಿಚ್ಚಿಂದ ಮೂಳೆಗಳ ಸವೆತ.*+
31 ದೀನರಿಗೆ ಮೋಸ ಮಾಡಿದ್ರೆ ದೇವರಿಗೆ* ಅವಮಾನ ಮಾಡಿದ ಹಾಗೆ,+ಬಡವರಿಗೆ ಕನಿಕರ ತೋರಿಸಿದ್ರೆ ದೇವರಿಗೆ ಗೌರವ ಕೊಟ್ಟ ಹಾಗೆ.+
32 ಕೆಟ್ಟ ಕೆಲಸಾನೇ ಕೆಟ್ಟವನನ್ನ ಮುಳುಗಿಸಿಬಿಡುತ್ತೆ,ನೀತಿವಂತ ತಪ್ಪು ಮಾಡದೆ ನಡ್ಕೊಂಡ್ರೆ ಅದು ಅವನನ್ನ ಕಾಪಾಡುತ್ತೆ.+
33 ಅರ್ಥ ಮಾಡ್ಕೊಳ್ಳೋ ಶಕ್ತಿ ಇರೋ ವ್ಯಕ್ತಿ ತನ್ನ ವಿವೇಕವನ್ನ ತೋರಿಸ್ಕೊಳ್ಳಲ್ಲ,+ಮೂರ್ಖ ತನಗೆ ಗೊತ್ತಿರೋ ವಿಷ್ಯಗಳ ಬಗ್ಗೆ ಊರಿಗೇ ಡಂಗೂರ ಸಾರುತ್ತಾನೆ.
34 ನೀತಿ ಒಂದು ದೇಶಕ್ಕೆ ಒಳ್ಳೇ ಹೆಸ್ರು ತರುತ್ತೆ,+ಜನ್ರಿಗೆ ಪಾಪ ಕೆಟ್ಟ ಹೆಸ್ರು ತರುತ್ತೆ.
35 ತಿಳುವಳಿಕೆಯಿಂದ* ನಡ್ಕೊಳ್ಳೋ ಸೇವಕನನ್ನ ನೋಡಿ ರಾಜ ಸಂತೋಷ ಪಡ್ತಾನೆ,+ಮಾನಮರ್ಯಾದೆ ಇಲ್ಲದೆ ನಡ್ಕೊಳ್ಳುವವನ ಮೇಲೆ ರೇಗ್ತಾನೆ.+
ಪಾದಟಿಪ್ಪಣಿ
^ ಬಹುಶಃ, “ಇನ್ನೊಬ್ರಿಗೆ ಮೋಸ ಮಾಡ್ತಾನೆ.”
^ ಅಥವಾ “ಜನ್ರಿಂದ ಒಳ್ಳೇ ಹೆಸ್ರು ಪಡ್ಕೊಳ್ತಾನೆ.”
^ ಅಕ್ಷ. “ಮುಗ್ಧ.”
^ ಅಥವಾ “ವಿಪರೀತ ಕೋಪ ಮಾಡ್ಕೊಳ್ತಾನೆ.”
^ ಅಕ್ಷ. “ಕೊಳೆಯುತ್ತೆ.”
^ ಅಕ್ಷ. “ಜೀವ.”
^ ಅಥವಾ “ತನ್ನ ಸೃಷ್ಟಿಕರ್ತನಿಗೆ.”
^ ಅಕ್ಷ. “ಒಳನೋಟ.”