ದಾನಿಯೇಲ 10:1-21

  • ದೇವರ ಒಬ್ಬ ಸಂದೇಶವಾಹಕ ದಾನಿಯೇಲನನ್ನ ಭೇಟಿಮಾಡಿದ (1-21)

    • ಮೀಕಾಯೇಲ ದೇವದೂತನಿಗೆ ಸಹಾಯ ಮಾಡಿದನು (13)

10  ಪರ್ಶಿಯದ ರಾಜ ಕೋರೆಷನ+ ಮೂರನೇ ವರ್ಷದ ಆಳ್ವಿಕೆಯ ಸಮಯದಲ್ಲಿ ಬೇಲ್ತೆಶಚ್ಚರ+ ಅನ್ನೋ ಹೆಸ್ರಿದ್ದ ದಾನಿಯೇಲನಿಗೆ ಒಂದು ಸಂದೇಶ ಸಿಕ್ತು. ಆ ಸಂದೇಶ ಸತ್ಯವಾಗಿತ್ತು. ಅದು ಒಂದು ದೊಡ್ಡ ಹೋರಾಟದ ಬಗ್ಗೆ. ಆ ಸಂದೇಶ ಅವನಿಗೆ ಅರ್ಥ ಆಯ್ತು, ಅವನು ನೋಡಿದ ವಿಷ್ಯಗಳನ್ನ ಅರ್ಥ ಮಾಡ್ಕೊಳ್ಳೋಕೆ ಸಹಾಯ ಸಿಕ್ತು.  ಆ ಸಮಯದಲ್ಲಿ ದಾನಿಯೇಲನಾದ ನಾನು ಮೂರು ವಾರ ದುಃಖಪಡ್ತಾ ಇದ್ದೆ.+  ನಾನು ರುಚಿಯಾದ ಆಹಾರ ಮುಟ್ಟಲಿಲ್ಲ. ಮಾಂಸ ತಿನ್ನಲಿಲ್ಲ, ದ್ರಾಕ್ಷಾಮದ್ಯ ಕುಡಿಲಿಲ್ಲ. ಮೂರು ವಾರ ತನಕ ನನ್ನ ಶರೀರಕ್ಕೆ ಎಣ್ಣೆ ಹಚ್ಕೊಳ್ಳಲಿಲ್ಲ.  ಮೊದಲ್ನೇ ತಿಂಗಳ, 24ನೇ ದಿನ ನಾನು ಟೈಗ್ರಿಸ್‌*+ ಅನ್ನೋ ಮಹಾ ನದಿ ತೀರದಲ್ಲಿ ಇದ್ದಾಗ  ನಾರಿಂದ ಮಾಡಿದ ಬಟ್ಟೆ ಹಾಕಿದ್ದ ಒಬ್ಬ ವ್ಯಕ್ತಿಯನ್ನ ನೋಡ್ದೆ.+ ಅವನ ಸೊಂಟಪಟ್ಟಿಯನ್ನ ಊಫಜಿನ ಚಿನ್ನದಿಂದ ಮಾಡಿದ್ರು.  ಅವನ ದೇಹ ಕ್ರಿಸಲೈಟ್‌ ರತ್ನದ+ ತರ ಇತ್ತು. ಅವನ ಮುಖ ಮಿಂಚಿನ ತರ ಹೊಳಿತಿತ್ತು. ಅವನ ಕಣ್ಣುಗಳು ಉರಿತಿರೋ ಪಂಜುಗಳ ತರ ಇತ್ತು. ಅವನ ಕೈಕಾಲು ಹೊಳಪು ಕೊಟ್ಟಿರೋ ತಾಮ್ರದ ತರ ಇತ್ತು.+ ಅವನ ಧ್ವನಿ ಜನ್ರ ಗುಂಪಿನ ಧ್ವನಿ ತರ ಇತ್ತು.  ಈ ದರ್ಶನ ನೋಡಿದವನು ದಾನಿಯೇಲನಾದ ನಾನೊಬ್ಬನೇ. ನನ್ನ ಜೊತೆ ಇದ್ದ ಬೇರೆ ಗಂಡಸ್ರು ಈ ದರ್ಶನ ನೋಡಲಿಲ್ಲ.+ ಹಾಗಿದ್ರೂ ಅವರು ಭಯದಿಂದ ನಡುಗ್ತಿದ್ರು, ಓಡಿಹೋಗಿ ಅಡಗಿಕೊಂಡ್ರು.  ಅಲ್ಲಿ ನಾನೊಬ್ಬನೇ ಉಳ್ಕೊಂಡೆ. ಈ ಮಹಾ ದರ್ಶನವನ್ನ ನೋಡಿದ ಮೇಲೆ ನನ್ನಲ್ಲಿ ಶಕ್ತಿನೇ ಇರಲಿಲ್ಲ. ನನ್ನ ಮುಖ ಬಿಳಿಚ್ಕೊಂಡಿತು, ನನ್ನ ಬಲನೇ ಇಲ್ಲದ ಹಾಗೆ ಆಯ್ತು.+  ಆಮೇಲೆ ಆ ವ್ಯಕ್ತಿ ಮಾತಾಡೋದನ್ನ ಕೇಳಿಸ್ಕೊಂಡೆ. ಆದ್ರೆ ಅವನು ಮಾತಾಡ್ತಾ ಇರುವಾಗ್ಲೇ ನಾನು ನೆಲಕ್ಕೆ ಮುಖಮಾಡಿ ಗಾಢ ನಿದ್ದೆ ಮಾಡಿಬಿಟ್ಟೆ.+ 10  ಆಗ ಒಂದು ಕೈ ನನ್ನನ್ನ ಮುಟ್ಟಿದ ಹಾಗೆ ಅನಿಸ್ತು.+ ನನಗಾಗ ಎಚ್ಚರ ಆಯ್ತು, ಅದು ನನ್ನನ್ನ ಅಲ್ಲಾಡಿಸಿದಾಗ ಅಂಗೈಗಳನ್ನ ಊರಿ ಮಂಡಿ ಸಹಾಯದಿಂದ ಮೇಲೆದ್ದೆ. 11  ಆಮೇಲೆ ಅವನು ನನಗೆ“ದಾನಿಯೇಲ, ನೀನು ತುಂಬ ಅಮೂಲ್ಯ.+ ನಾನು ನಿನಗೆ ಹೇಳೋ ವಿಷ್ಯಗಳನ್ನ ಚೆನ್ನಾಗಿ ಕೇಳಿಸ್ಕೊ. ಎದ್ದೇಳು, ದೇವರು ನನ್ನನ್ನ ನಿನ್ನ ಹತ್ರ ಕಳಿಸಿದ್ದಾನೆ” ಅಂದ. ಅವನು ಹೀಗೆ ಹೇಳಿದಾಗ, ನಾನು ನಡುಗ್ತಾ ಎದ್ದು ನಿಂತೆ. 12  ಆಮೇಲೆ ಅವನು “ದಾನಿಯೇಲನೇ ಭಯಪಡಬೇಡ.+ ನೀನು ಈ ವಿಷ್ಯಗಳನ್ನ ಅರ್ಥ ಮಾಡ್ಕೊಳ್ಳೋಕೆ ಮನಸ್ಸು ಮಾಡಿದ ದಿನದಿಂದಾನೇ, ನಿನ್ನ ದೇವರ ಮುಂದೆ ತಗ್ಗಿಬಗ್ಗಿ ನಡೆದ ದಿನದಿಂದಾನೇ ದೇವರು ನಿನ್ನ ಪ್ರಾರ್ಥನೆಯನ್ನ ಕೇಳಿಸ್ಕೊಂಡಿದ್ದಾನೆ. ಅದಕ್ಕೇ ನಾನೀಗ ನಿನ್ನ ಹತ್ರ ಬಂದಿದ್ದೀನಿ.+ 13  ಆದ್ರೆ 21 ದಿನ ತನಕ ಪರ್ಶಿಯ ಸಾಮ್ರಾಜ್ಯದ ನಾಯಕ+ ನನ್ನ ವಿರುದ್ಧ ನಿಂತ. ಆಗ ನಾಯಕರಲ್ಲಿ ತುಂಬ ಪ್ರಮುಖನಾಗಿರೋ* ಮೀಕಾಯೇಲ*+ ನನಗೆ ಸಹಾಯ ಮಾಡೋಕೆ ಬಂದನು. ನಾನು ಪರ್ಶಿಯದ ರಾಜರ ಹತ್ರ ನಿಂತ್ಕೊಂಡಿದ್ದೆ. 14  ಕಡೇ ದಿನಗಳಲ್ಲಿ ನಿನ್ನ ಜನ್ರಿಗೆ ಏನಾಗುತ್ತೆ ಅಂತ ನಿನಗೆ ಅರ್ಥ ಮಾಡಿಸೋಕೆ ನಾನು ಬಂದಿದ್ದೀನಿ.+ ಯಾಕಂದ್ರೆ ಮುಂದೆ ನಡಿಯೋ ವಿಷ್ಯಗಳ ಬಗ್ಗೆ ಈ ದರ್ಶನದಲ್ಲಿದೆ.”+ 15  ಅವನು ಈ ಮಾತುಗಳನ್ನ ಹೇಳಿದಾಗ ನಾನು ತಲೆ ತಗ್ಗಿಸಿದೆ. ಮೂಕನಾಗಿ ಹೋದೆ. 16  ಮನುಷ್ಯನ ತರ ಕಾಣ್ತಿದ್ದ ವ್ಯಕ್ತಿ ನನ್ನ ತುಟಿಗಳನ್ನ ಮುಟ್ಟಿದಾಗ+ ನನ್ನ ಮುಂದೆ ನಿಂತಿದ್ದವನಿಗೆ ಬಾಯಿ ತೆರೆದು “ನನ್ನ ಒಡೆಯನೇ, ದರ್ಶನ ನೋಡಿ ನಡುಗ್ತಾ ಇದ್ದೀನಿ. ನನಗೆ ಶಕ್ತಿನೇ ಇಲ್ಲ.+ 17  ಹೀಗಿರುವಾಗ ನಿನ್ನ ಸೇವಕನಾದ ನಾನು ನನ್ನ ಒಡೆಯನಾದ ನಿನ್ನ ಜೊತೆ ಹೇಗೆ ಮಾತಾಡ್ಲಿ?+ ಯಾಕಂದ್ರೆ ಈಗ ನನಗೆ ಶಕ್ತಿ ಇಲ್ಲ, ನನ್ನಲ್ಲಿ ಉಸಿರೇ ಉಳಿದಿಲ್ಲ”+ ಅಂದೆ. 18  ಮನುಷ್ಯನ ತರ ಕಾಣ್ತಿದ್ದವನು ಮತ್ತೊಮ್ಮೆ ನನ್ನ ತುಟಿಗಳನ್ನ ಮುಟ್ಟಿ ನನ್ನನ್ನ ಬಲಪಡಿಸಿದ.+ 19  ಆಮೇಲೆ ಅವನು ನನಗೆ “ದೇವರಿಗೆ ತುಂಬ ಅಮೂಲ್ಯ ಆಗಿರುವವನೇ,+ ಹೆದರಬೇಡ.+ ನಿನಗೆ ಒಳ್ಳೇದಾಗ್ಲಿ.+ ಧೈರ್ಯವಾಗಿರು, ಹೌದು ಧೈರ್ಯವಾಗಿರು” ಅಂದ. ಅವನು ನನ್ನ ಜೊತೆ ಮಾತಾಡಿದಾಗ ನನಗೆ ಬಲ ಸಿಕ್ಕಿ “ನನ್ನ ಒಡೆಯನೇ, ಈಗ ನೀನು ಮಾತಾಡು. ಯಾಕಂದ್ರೆ ನೀನು ನನಗೆ ಬಲ ಕೊಟ್ಟಿದ್ದೀಯ” ಅಂದೆ. 20  ಆಗ ಅವನು ಹೀಗೆ ಹೇಳಿದ: “ನಾನು ನಿನ್ನ ಹತ್ರ ಯಾಕೆ ಬಂದೆ ಅಂತ ನಿಂಗೊತ್ತಾ? ನಾನೀಗ ವಾಪಸ್‌ ಹೋಗಿ ಪರ್ಶಿಯದ ನಾಯಕನ ಜೊತೆ ಹೋರಾಡ್ತೀನಿ.+ ನಾನು ಹೋದ ಮೇಲೆ ಗ್ರೀಸಿನ ನಾಯಕ ಬರ್ತಾನೆ. 21  ಹಾಗಿದ್ರೂ ನಾನು ನಿನಗೆ ಸತ್ಯದ ಪುಸ್ತಕದಲ್ಲಿ ಬರೆದಿರೋ ಮಾತುಗಳನ್ನ ಹೇಳ್ತೀನಿ. ನಿನ್ನ ನಾಯಕನಾದ ಮೀಕಾಯೇಲನನ್ನ+ ಬಿಟ್ರೆ ಈ ವಿಷ್ಯಗಳಲ್ಲಿ ಬೇರೆ ಯಾರೂ ನನಗೆ ಸಂಪೂರ್ಣ ಬೆಂಬಲ ಕೊಡ್ತಿಲ್ಲ.

ಪಾದಟಿಪ್ಪಣಿ

ಅಕ್ಷ. “ಹಿದ್ದೆಕೆಲ್‌.”
ಅರ್ಥ “ದೇವರ ತರ ಯಾರಿದ್ದಾರೆ?”
ಅಥವಾ “ಮೊದಲನೇ ಸ್ಥಾನದಲ್ಲಿದ್ದ ನಾಯಕ.”