ಧರ್ಮೋಪದೇಶಕಾಂಡ 13:1-18

  • ದೇವರಿಗೆ ತಿರುಗಿ ಬಿದ್ದವರಿಗೆ ಮಾಡಬೇಕಾದದ್ದು (1-18)

13  ಯಾರಾದ್ರೂ ನಾನು ಪ್ರವಾದಿ ಅಥವಾ ಕನಸು ನೋಡಿ ಭವಿಷ್ಯ ಹೇಳ್ತೀನಿ ಅಂತ ನಿಮ್ಮ ಹತ್ರ ಬರಬಹುದು. ಅವನು ಒಂದು ಚಿಹ್ನೆಯನ್ನ ಅಥವಾ ಭವಿಷ್ಯದ ಬಗ್ಗೆ ಏನೋ ಒಂದು ವಿಷ್ಯವನ್ನ ಹೇಳಿದ್ರೆ,  ಅವನು ಹೇಳಿದ ಹಾಗೇ ನಡೆದುಬಿಟ್ರೆ, ಅವನು ನಿಮಗೆ ಗೊತ್ತಿಲ್ಲದ ಬೇರೆ ದೇವರುಗಳ ಬಗ್ಗೆ ಮಾತಾಡ್ತಾ, ‘ಬನ್ನಿ, ಆ ದೇವರುಗಳನ್ನ ಆರಾಧಿಸೋಣ, ಅವುಗಳ ಸೇವೆ ಮಾಡೋಣ’ ಅನ್ನಬಹುದು.  ನೀವು ಅಂಥ ಪ್ರವಾದಿಯ ಮಾತನ್ನ ಅಥವಾ ಕನಸು ನೋಡಿ ಭವಿಷ್ಯ ಹೇಳೋನ ಮಾತನ್ನ ಕೇಳಬಾರದು.+ ಯಾಕಂದ್ರೆ ನಿಮ್ಮ ದೇವರಾದ ಯೆಹೋವನನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ಪ್ರೀತಿಸ್ತೀರಾ+ ಇಲ್ವಾ ಅಂತ ತಿಳ್ಕೊಳ್ಳೋಕೆ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಪರೀಕ್ಷೆ ಮಾಡ್ತಿದ್ದಾನೆ.+  ನಿಮ್ಮ ದೇವರಾದ ಯೆಹೋವ ಹೇಳೋ ದಾರಿಯಲ್ಲೇ ನೀವು ನಡೀಬೇಕು, ಭಯಪಡಬೇಕು, ಆತನ ಆಜ್ಞೆಗಳನ್ನೇ ಪಾಲಿಸಬೇಕು. ಆತನು ಹೇಳೋದನ್ನ ಕೇಳಿ, ಆತನ ಸೇವೆಯನ್ನ ಮಾತ್ರ ಮಾಡಬೇಕು, ಆತನನ್ನೇ ಗಟ್ಟಿಯಾಗಿ ಹಿಡ್ಕೊಬೇಕು.+  ಆದ್ರೆ ಆ ಪ್ರವಾದಿಯನ್ನ ಅಥವಾ ಕನಸು ನೋಡಿ ಭವಿಷ್ಯ ಹೇಳೋರನ್ನ ಸಾಯಿಸಬೇಕು.+ ಯಾಕಂದ್ರೆ ಈಜಿಪ್ಟಲ್ಲಿ ಗುಲಾಮರಾಗಿದ್ದ ನಿಮ್ಮನ್ನ ಬಿಡಿಸ್ಕೊಂಡು ಬಂದ ನಿಮ್ಮ ದೇವರಾದ ಯೆಹೋವನ ವಿರುದ್ಧನೇ ನೀವು ತಿರುಗಿ ಬಿಳೋ ತರ ಅವರು ಮಾಡಿಬಿಡ್ತಾರೆ. ನಿಮ್ಮ ದೇವರಾದ ಯೆಹೋವ ನಿಮಗೆ ಆಜ್ಞೆ ಕೊಟ್ಟ ದಾರಿಯಲ್ಲಿ ನೀವು ನಡಿಯೋದನ್ನ ಬಿಟ್ಟುಬಿಡಬೇಕು ಅಂತ ಹಾಗೆ ಮಾಡ್ತಾರೆ. ನಿಮ್ಮ ಮಧ್ಯದಿಂದ ಕೆಟ್ಟತನ ತೆಗೆದುಹಾಕಬೇಕು.+  ನಿಮ್ಮ ಒಡಹುಟ್ಟಿದ ಅಣ್ಣತಮ್ಮ ಆಗ್ಲಿ ಮಗಮಗಳು ಆಗ್ಲಿ ನೀವು ತುಂಬ ಪ್ರೀತಿಸೋ ನಿಮ್ಮ ಹೆಂಡತಿ ಆಗ್ಲಿ ನಿಮ್ಮ ಆಪ್ತ ಸ್ನೇಹಿತ ಆಗ್ಲಿ ಗುಟ್ಟಾಗಿ ನಿಮಗೆ ‘ಬಾ, ನಾವು ಬೇರೆ ದೇವರುಗಳನ್ನ ಆರಾಧನೆ ಮಾಡೋಣ’ + ಅಂತ ಹೇಳಿ ನಿಮಗಾಗ್ಲಿ ನಿಮ್ಮ ಪೂರ್ವಜರಿಗಾಗ್ಲಿ ಗೊತ್ತಿಲ್ಲದ ದೇವರುಗಳನ್ನ ಆರಾಧಿಸೋ ತರ ನಿಮ್ಮನ್ನ ಮರಳು ಮಾಡೋಕೆ ಪ್ರಯತ್ನಿಸಿದ್ರೆ,  ನಿಮ್ಮ ಹತ್ರದಲ್ಲಿ, ದೂರದಲ್ಲಿ ಅಥವಾ ಭೂಮಿಯ ಯಾವುದೇ ಮೂಲೆಯಲ್ಲಿ ವಾಸಿಸೋ ಜನಾಂಗಗಳ ದೇವರುಗಳ ಸೇವೆ ಮಾಡೋಣ ಅಂತ ಹೇಳಿದ್ರೆ  ನೀವು ಒಪ್ಪಬಾರದು, ಅವನು ಹೇಳಿದ ತರ ಮಾಡಬಾರದು.+ ಅವನಿಗೆ ದಯೆ, ಅನುಕಂಪ ತೋರಿಸಬಾರದು, ಕಾಪಾಡಬಾರದು.  ಅವನನ್ನ ಸಾಯಿಸ್ಲೇಬೇಕು.+ ಅದಕ್ಕಾಗಿ ನೀವೇ ಅವನ ಮೇಲೆ ಮೊದ್ಲು ಕಲ್ಲೆಸಿಬೇಕು. ಆಮೇಲೆ ಬೇರೆಲ್ಲ ಜನ್ರು ಕಲ್ಲೆಸಿಬೇಕು.+ 10  ನೀವು ಗುಲಾಮರಾಗಿದ್ದ ಈಜಿಪ್ಟಿಂದ ನಿಮ್ಮನ್ನ ಬಿಡಿಸ್ಕೊಂಡು ಬಂದ ನಿಮ್ಮ ದೇವರಾದ ಯೆಹೋವನನ್ನ ಬಿಟ್ಟು ದೂರ ಹೋಗೋ ತರ ಮಾಡೋಕೆ ಪ್ರಯತ್ನಿಸಿದ್ರಿಂದ ಅವನನ್ನ ಕಲ್ಲೆಸೆದು ಸಾಯಿಸಬೇಕು.+ 11  ಆಗ ಎಲ್ಲ ಇಸ್ರಾಯೇಲ್ಯರು ಇದನ್ನ ಕೇಳಿ ಹೆದರ್ತಾರೆ, ಇಂಥ ಕೆಟ್ಟ ಕೆಲಸವನ್ನ ಮುಂದೆ ಯಾವತ್ತೂ ಮಾಡಲ್ಲ.+ 12  ನಿಮ್ಮ ದೇವರಾದ ಯೆಹೋವ ನಿಮ್ಮ ನಿವಾಸಕ್ಕಾಗಿ ಕೊಡೋ ಯಾವುದಾದ್ರೂ ಒಂದು ಪಟ್ಟಣದಿಂದ ನಿಮಗೆ ಒಂದು ಸುದ್ದಿ ಸಿಕ್ಕಿದ್ರೆ ಅಂದ್ರೆ 13  ಯಾವ ಕೆಲಸಕ್ಕೂ ಬಾರದ ಅಲ್ಲಿನ ಗಂಡಸರು ತಮ್ಮ ಪಟ್ಟಣದ ಜನ್ರಿಗೆ ‘ಬನ್ನಿ, ಬೇರೆ ದೇವರುಗಳ ಸೇವೆ ಮಾಡೋಣ’ ಅಂತ ಹೇಳಿ ಅವ್ರಿಗೆ ಗೊತ್ತಿಲ್ಲದ ದೇವರುಗಳನ್ನ ಆರಾಧಿಸೋಕೆ ಪ್ರೇರೇಪಿಸ್ತಾ ತಪ್ಪುದಾರಿಗೆ ಎಳಿತಿದ್ದಾರೆ ಅನ್ನೋ ಸುದ್ದಿ ಸಿಕ್ಕಿದ್ರೆ 14  ನೀವು ಅದ್ರ ಬಗ್ಗೆ ಪರಿಶೀಲಿಸಿ, ಪೂರ್ತಿ ತನಿಖೆ ಮಾಡಿ, ಚೆನ್ನಾಗಿ ವಿಚಾರಿಸಬೇಕು.+ ಆಗ ನಿಮ್ಮ ಮಧ್ಯ ಆ ಅಸಹ್ಯ ವಿಷ್ಯ ನಡೆದದ್ದು ನಿಜ ಅಂತ ಗೊತ್ತಾದ್ರೆ 15  ಆ ಪಟ್ಟಣದ ಜನ್ರನ್ನ ನೀವು ಕತ್ತಿಯಿಂದ ಸಾಯಿಸ್ಲೇಬೇಕು.+ ಆ ಪಟ್ಟಣವನ್ನ, ಅದ್ರಲ್ಲಿರೋ ಎಲ್ಲವನ್ನ ಪೂರ್ತಿ ನಾಶ ಮಾಡಬೇಕು. ಪ್ರಾಣಿಗಳನ್ನೂ ಕೊಲ್ಲಬೇಕು.+ 16  ಎಲ್ಲ ಕೊಳ್ಳೆಯನ್ನ ಪಟ್ಟಣದ ಮುಖ್ಯಸ್ಥಳದಲ್ಲಿ* ಕೂಡಿಸಿ ಇಡೀ ಪಟ್ಟಣವನ್ನ ಬೆಂಕಿಯಿಂದ ಸುಟ್ಟುಬಿಡಬೇಕು. ಆ ಎಲ್ಲ ಕೊಳ್ಳೆ ನಿಮ್ಮ ದೇವರಾದ ಯೆಹೋವನಿಗೆ ಅರ್ಪಿಸೋ ಸರ್ವಾಂಗಹೋಮ ಬಲಿ ತರ ಇರುತ್ತೆ. ಅದು ಯಾವಾಗ್ಲೂ ಪಾಳುಬಿದ್ದ ಪಟ್ಟಣ ಆಗಿರುತ್ತೆ. ಅದನ್ನ ಮತ್ತೆ ಯಾವತ್ತೂ ಕಟ್ಟಬಾರದು. 17  ನಾಶಕ್ಕಾಗಿ ಇಟ್ಟ ಯಾವುದೇ ವಸ್ತುವನ್ನ ನೀವು ತಗೊಳ್ಳಬಾರದು.+ ಆಗ ಯೆಹೋವ ಕಡುಕೋಪನ ಬಿಟ್ಟುಬಿಡ್ತಾನೆ. ನಿಮ್ಮ ಪೂರ್ವಜರಿಗೆ ಮಾತು ಕೊಟ್ಟ ಹಾಗೆ ನಿಮಗೆ ಕರುಣೆ, ಕನಿಕರ ತೋರಿಸ್ತಾನೆ, ನಿಮ್ಮ ಸಂಖ್ಯೆಯನ್ನ ತುಂಬ ಹೆಚ್ಚಿಸ್ತಾನೆ.+ 18  ನೀವು ನಿಮ್ಮ ದೇವರಾದ ಯೆಹೋವನ ಮಾತು ಕೇಳಬೇಕು. ನಾನು ಇವತ್ತು ನಿಮಗೆ ಹೇಳ್ತಿರೋ ಆತನ ಎಲ್ಲ ಆಜ್ಞೆಗಳನ್ನ ಪಾಲಿಸಬೇಕು. ಹೀಗೆ ನಿಮ್ಮ ದೇವರಾದ ಯೆಹೋವನ ದೃಷ್ಟಿಯಲ್ಲಿ ಯಾವುದು ಸರಿನೋ ಅದನ್ನೇ ಮಾಡ್ತಾ ಇರಬೇಕು.+

ಪಾದಟಿಪ್ಪಣಿ