ಧರ್ಮೋಪದೇಶಕಾಂಡ 31:1-30

  • ಮೋಶೆಯ ಸಾವು ಹತ್ರ (1-8)

  • ನಿಯಮ ಪುಸ್ತಕವನ್ನ ಎಲ್ಲರಿಗೆ ಕೇಳಿಸೋ ಹಾಗೆ ಓದಬೇಕು (9-13)

  • ಯೆಹೋಶುವನ ನೇಮಕ (14, 15)

  • ಇಸ್ರಾಯೇಲ್ಯರು ದಂಗೆ ಏಳ್ತಾರೆ ಅಂತ ಮುಂಚೆನೇ ಹೇಳಿದ್ದು (16-30)

    • ಇಸ್ರಾಯೇಲ್ಯರು ಕಲಿಯಬೇಕಾದ ಹಾಡು (19, 22, 30)

31  ಮೋಶೆ ಹೋಗಿ ಎಲ್ಲ ಇಸ್ರಾಯೇಲ್ಯರಿಗೆ  ಹೀಗಂದ: “ನನಗೀಗ 120 ವರ್ಷ.+ ನಾನು ಇನ್ನು ಮುಂದೆ ನಿಮ್ಮನ್ನ ಕರ್ಕೊಂಡು ಹೋಗೋಕೆ ಆಗಲ್ಲ. ಯಾಕಂದ್ರೆ ಯೆಹೋವ ನನಗೆ ‘ನೀನು ಯೋರ್ದನ್‌ ನದಿ ದಾಟಬಾರದು’ + ಅಂತ ಹೇಳಿದ್ದಾನೆ.  ನಿಮ್ಮ ದೇವರಾದ ಯೆಹೋವ ನಿಮಗಿಂತ ಮುಂಚೆ ಹೋಗಿ ಯೋರ್ದನ್‌ ನದಿ ದಾಟಿ, ನಿಮ್ಮ ಮುಂದೆ ಇರೋ ಆ ಜನ್ರನ್ನ ನಾಶ ಮಾಡ್ತಾನೆ. ನೀವು ಅವರ ದೇಶ ವಶ ಮಾಡ್ಕೊಳ್ತೀರ.+ ಯೆಹೋವ ಹೇಳಿದ ಹಾಗೆ ಇನ್ನು ಮುಂದೆ ಯೆಹೋಶುವ ಮುಂದಾಳತ್ವ ವಹಿಸಿ ನಿಮ್ಮನ್ನ ಯೋರ್ದನ್‌ ನದಿಯ ಆ ಕಡೆಗೆ ಕರ್ಕೊಂಡು ಹೋಗ್ತಾನೆ.+  ಯೆಹೋವ ಅಮೋರಿಯರ ರಾಜರಾದ ಸೀಹೋನ,+ ಓಗರನ್ನ+ ಅವರ ದೇಶವನ್ನ ನಾಶ ಮಾಡಿದ ಹಾಗೆ ಈ ಜನ್ರನ್ನ ಕೂಡ ನಾಶ ಮಾಡ್ತಾನೆ.+  ನಿಮಗೋಸ್ಕರ ಯೆಹೋವನೇ ಅವ್ರನ್ನ ಸೋಲಿಸ್ತಾನೆ. ಆಗ ನಾನು ಈಗಾಗ್ಲೇ ಕೊಟ್ಟ ಎಲ್ಲ ಆಜ್ಞೆಗಳ ಪ್ರಕಾರ ನೀವು ಅವ್ರಿಗೆ ಮಾಡಬೇಕು.+  ಧೈರ್ಯವಾಗಿ, ದೃಢವಾಗಿ ಇರಿ.+ ಆ ಜನ್ರಿಗೆ ಹೆದರಬೇಡಿ, ಹೆದರಿ ಕಂಗಾಲಾಗಬೇಡಿ.+ ಯಾಕಂದ್ರೆ ನಿಮ್ಮ ದೇವರಾದ ಯೆಹೋವನೇ ನಿಮ್ಮ ಜೊತೆ ಬರ್ತಾನೆ. ಆತನು ಕೈಬಿಡಲ್ಲ, ನಿಮ್ಮನ್ನ ಬಿಟ್ಟುಬಿಡಲ್ಲ.”+  ಆಮೇಲೆ ಮೋಶೆ ಯೆಹೋಶುವನನ್ನ ಕರೆದು ಎಲ್ಲ ಇಸ್ರಾಯೇಲ್ಯರ ಮುಂದೆ ಅವನಿಗೆ “ನೀನು ಧೈರ್ಯವಾಗಿರು, ದೃಢವಾಗಿರು.+ ಯಾಕಂದ್ರೆ ಯೆಹೋವ ಈ ಜನ್ರ ಪೂರ್ವಜರಿಗೆ ಕೊಡ್ತೀನಿ ಅಂತ ಮಾತು ಕೊಟ್ಟಿರೋ ಆ ದೇಶಕ್ಕೆ ಇವ್ರನ್ನ ನೀನೇ ಕರ್ಕೊಂಡು ಹೋಗ್ತಿಯ. ಆ ದೇಶವನ್ನ ನೀನೇ ಇವ್ರಿಗೆ ಆಸ್ತಿಯಾಗಿ ಕೊಡ್ತೀಯ.+  ಯೆಹೋವನೇ ನಿನ್ನ ಮುಂದೆ ಹೋಗ್ತಾನೆ. ಆತನು ಯಾವಾಗ್ಲೂ ನಿನ್ನ ಜೊತೆ ಇರ್ತಾನೆ.+ ಆತನು ನಿನ್ನ ಕೈಬಿಡಲ್ಲ, ನಿನ್ನನ್ನ ಬಿಟ್ಟುಬಿಡಲ್ಲ. ಹೆದರಬೇಡ, ಹೆದರಿ ಕಂಗಾಲಾಗಬೇಡ”+ ಅಂದ.  ಆಮೇಲೆ ಮೋಶೆ ಈ ನಿಯಮ ಪುಸ್ತಕವನ್ನ ಬರೆದ.+ ಅದನ್ನ ಯೆಹೋವನ ಒಪ್ಪಂದದ ಮಂಜೂಷವನ್ನ ಹೊತ್ಕೊಂಡು ಹೋಗೋ ಲೇವಿಯರಾದ ಪುರೋಹಿತರಿಗೆ, ಇಸ್ರಾಯೇಲ್ಯರ ಎಲ್ಲ ಹಿರಿಯರಿಗೆ ಕೊಟ್ಟ. 10  ಮೋಶೆ ಅವ್ರಿಗೆ “ನೀವು ಬಿಡುಗಡೆಯ ವರ್ಷ ಅಂದ್ರೆ ಪ್ರತಿ ಏಳನೇ ವರ್ಷ+ ಚಪ್ಪರಗಳ ಹಬ್ಬ*+ ಆಚರಿಸುವಾಗ ಗೊತ್ತು ಮಾಡ್ಕೊಂಡ ಸಮಯದಲ್ಲಿ 11  ಈ ನಿಯಮ ಪುಸ್ತಕವನ್ನ ಓದಬೇಕು. ಇದನ್ನ ನಿಮ್ಮ ದೇವರಾದ ಯೆಹೋವ ಆರಿಸ್ಕೊಳ್ಳೋ ಜಾಗದಲ್ಲಿ ಎಲ್ಲ ಇಸ್ರಾಯೇಲ್ಯರು ಆತನ ಸನ್ನಿಧಿಯಲ್ಲಿ ಸೇರಿಬಂದಾಗ+ ಎಲ್ರಿಗೂ ಕೇಳಿಸೋ ಹಾಗೆ ಓದಬೇಕು.+ 12  ಗಂಡಸರು, ಸ್ತ್ರೀಯರು, ಮಕ್ಕಳು,* ನಿಮ್ಮ ಪಟ್ಟಣಗಳಲ್ಲಿ ವಾಸಿಸೋ ವಿದೇಶಿಯರು ಹೀಗೆ ಎಲ್ರನ್ನ ಸೇರಿಸಬೇಕು.+ ಅವ್ರೆಲ್ಲ ನಿಮ್ಮ ದೇವರಾದ ಯೆಹೋವನ ಬಗ್ಗೆ ಕೇಳಿಸ್ಕೊಂಡು ಕಲಿತು ಆತನಿಗೆ ಭಯಪಡೋಕೆ, ಈ ನಿಯಮ ಪುಸ್ತಕದಲ್ಲಿರೋ ಎಲ್ಲ ಮಾತುಗಳನ್ನ ಶ್ರದ್ಧೆಯಿಂದ ಪಾಲಿಸೋಕೆ ನೀವು ಹೀಗೆ ಮಾಡಬೇಕು. 13  ಆಗ ಈ ನಿಯಮ ಪುಸ್ತಕದ ಬಗ್ಗೆ ಗೊತ್ತಿಲ್ದೆ ಇರೋ ಅವ್ರ ಮಕ್ಕಳು ಅದನ್ನ ಕೇಳಿಸ್ಕೊಳ್ತಾರೆ,+ ಈ ಯೋರ್ದನ್‌ ನದಿ ದಾಟಿ ನೀವು ವಶ ಮಾಡ್ಕೊಳ್ಳೋ ಆ ದೇಶದಲ್ಲಿ ಬದುಕಿರೋ ತನಕ ಎಲ್ಲ ದಿನ ನಿಮ್ಮ ದೇವರಾದ ಯೆಹೋವನಿಗೆ ಭಯಪಡೋಕೆ ಕಲಿತಾರೆ”+ ಅಂದ. 14  ಆಮೇಲೆ ಯೆಹೋವ ಮೋಶೆಗೆ “ನೀನು ಸಾಯೋ ಸಮಯ ಹತ್ರ ಆಗ್ತಿದೆ.+ ನೀನು ಯೆಹೋಶುವನನ್ನ ಕರ್ಕೊಂಡು ದೇವದರ್ಶನ ಡೇರೆ ಹತ್ರ ಬಾ.* ಅವನಿಗೆ ಮುಂದಾಳತ್ವ ವಹಿಸೋ ನೇಮಕ ಕೊಡ್ತೀನಿ”+ ಅಂತ ಹೇಳಿದನು. ಹಾಗಾಗಿ ಮೋಶೆ, ಯೆಹೋಶುವ ದೇವದರ್ಶನ ಡೇರೆ ಹತ್ರ ಹೋದ್ರು. 15  ಆ ಡೇರೆ ಹತ್ರ ಯೆಹೋವ ಮೋಡದಲ್ಲಿ ಕಾಣಿಸ್ಕೊಂಡನು. ಮೋಡ ಡೇರೆಯ ಬಾಗಿಲ ಹತ್ರ ನಿಲ್ತು.+ 16  ಆಗ ಯೆಹೋವ ಮೋಶೆಗೆ ಹೀಗಂದನು: “ನೀನು ಬೇಗ ಸಾಯ್ತಿಯ. ಈ ಜನ್ರು ತಾವು ವಶ ಮಾಡ್ಕೊಳ್ಳೋ ದೇಶಕ್ಕೆ ಹೋದ್ಮೇಲೆ ಸುತ್ತಮುತ್ತ ಇರೋ ದೇಶಗಳ ದೇವರುಗಳನ್ನ ಆರಾಧಿಸೋಕೆ* ಶುರು ಮಾಡ್ತಾರೆ.+ ಅವರು ನನ್ನನ್ನ ಬಿಟ್ಟುಬಿಡ್ತಾರೆ,+ ನಾನು ಅವ್ರ ಜೊತೆ ಮಾಡ್ಕೊಂಡಿರೋ ಒಪ್ಪಂದ ಮೀರಿ ನಡೀತಾರೆ.+ 17  ಆ ಸಮಯದಲ್ಲಿ ನನಗೆ ಅವ್ರ ಮೇಲೆ ತುಂಬ ಕೋಪ ಬರುತ್ತೆ,+ ನಾನು ಅವ್ರ ಕೈಬಿಡ್ತೀನಿ.+ ನಾಶ ಆಗೋ ತನಕ ನಾನು ಅವ್ರಿಗೆ ಸಹಾಯ ಮಾಡಲ್ಲ.*+ ಆಮೇಲೆ ಅವರು ತುಂಬ ಕಷ್ಟ, ನೋವು ಅನುಭವಿಸುವಾಗ+ ‘ನಮ್ಮ ದೇವರು ನಮ್ಮ ಮಧ್ಯ ಇಲ್ಲ, ಅದಕ್ಕೇ ಇಷ್ಟೆಲ್ಲಾ ಕಷ್ಟನೋವು’ + ಅಂತಾರೆ. 18  ಆದ್ರೆ ಆ ದಿನ ನಾನಂತೂ ಅವ್ರಿಗೆ ಸಹಾಯ ಮಾಡಲ್ಲ.* ಅವರು ನನ್ನನ್ನ ಬಿಟ್ಟು ಬೇರೆ ದೇವರುಗಳನ್ನ ಆರಾಧನೆ ಮಾಡಿ ಆ ಎಲ್ಲ ಕೆಟ್ಟ ಕೆಲಸ ಮಾಡಿರ್ತಾರೆ. ಅದಕ್ಕೇ ನಾನು ಅವ್ರಿಗೆ ಸಹಾಯ ಮಾಡೋದೇ ಇಲ್ಲ.+ 19  ನೀನೀಗ ಈ ಹಾಡು ಬರಿ,+ ಇದನ್ನ ಇಸ್ರಾಯೇಲ್ಯರಿಗೆ ಕಲಿಸು,+ ಅವರು ಕಲೀಲಿ. ದೇವರ ಮಾತು ಕೇಳದೇ ಹೋದ್ರೆ ಪರಿಣಾಮ ಏನಾಗುತ್ತೆ ಅಂತ ಈ ಹಾಡು ಅವ್ರಿಗೆ ನೆನಪಿಸುತ್ತೆ.+ 20  ನಾನು ಅವ್ರ ಪೂರ್ವಜರಿಗೆ ಮಾತು ಕೊಟ್ಟ ಹಾಗೆ+ ಹಾಲೂ ಜೇನೂ ಹರಿಯುವ ದೇಶಕ್ಕೆ+ ಅವ್ರನ್ನ ಕರ್ಕೊಂಡು ಹೋದ್ಮೇಲೆ ಅವರು ತಿಂದುಕುಡಿದು ಖುಷಿಯಾಗಿ ಇರುವಾಗ*+ ನನ್ನನ್ನ ಬಿಟ್ಟು ಬೇರೆ ದೇವರುಗಳ ಸೇವೆ ಮಾಡಿ ನನಗೆ ಅಗೌರವ ತೋರಿಸ್ತಾರೆ, ನನ್ನ ಒಪ್ಪಂದ ಮುರೀತಾರೆ.+ 21  ಅವ್ರಿಗೆ ತುಂಬ ಕಷ್ಟ ಬಂದಾಗ+ ದೇವರ ಮಾತು ಕೇಳದಿದ್ರೆ ಪರಿಣಾಮ ಏನಾಗುತ್ತೆ ಅಂತ ಈ ಹಾಡು ನೆನಪಿಸುತ್ತೆ. (ಅವ್ರ ವಂಶದವರು ಈ ಹಾಡು ಮರಿಬಾರದು.) ನಾನು ಅವ್ರಿಗೆ ಯಾವ ದೇಶ ಕೊಡ್ತೀನಿ ಅಂತ ಮಾತು ಕೊಟ್ಟಿದ್ದೀನೋ ಆ ದೇಶಕ್ಕೆ ಅವ್ರನ್ನ ಕರ್ಕೊಂಡು ಹೋಗೋ ಮುಂಚೆನೇ ಅವರು ಯಾವ ಗುಣ ಬೆಳೆಸ್ಕೊಂಡಿದ್ದಾರೆ ಅಂತ ನನಗೆ ಈಗ್ಲೇ ಗೊತ್ತು.”+ 22  ಹಾಗಾಗಿ ಆ ದಿನ ಮೋಶೆ ಆ ಹಾಡು ಬರೆದು ಇಸ್ರಾಯೇಲ್ಯರಿಗೆ ಕಲಿಸಿದ. 23  ಆಮೇಲೆ ಆತನು* ನೂನನ ಮಗ ಯೆಹೋಶುವನನ್ನ ಮುಂದಾಳತ್ವ ವಹಿಸೋಕೆ ನೇಮಿಸಿ+ “ನಾನು ಇಸ್ರಾಯೇಲ್ಯರಿಗೆ ಕೊಡ್ತೀನಿ ಅಂತ ಹೇಳಿದ ಆ ದೇಶಕ್ಕೆ+ ನೀನೇ ಅವ್ರನ್ನ ಕರ್ಕೊಂಡು ಹೋಗಬೇಕು. ಹಾಗಾಗಿ ನೀನು ಧೈರ್ಯವಾಗಿರು ದೃಢವಾಗಿರು.+ ನಾನು ಯಾವಾಗ್ಲೂ ನಿನ್ನ ಜೊತೆ ಇರ್ತಿನಿ” ಅಂದ. 24  ಮೋಶೆ ಒಂದು ಪುಸ್ತಕದಲ್ಲಿ ನಿಯಮ ಪುಸ್ತಕದ ಎಲ್ಲ ಮಾತನ್ನ ಬರೆದು ಮುಗಿಸಿದ ಕೂಡ್ಲೇ+ 25  ಯೆಹೋವನ ಒಪ್ಪಂದದ ಮಂಜೂಷ ಹೊರೋ ಲೇವಿಯರಿಗೆ ಆಜ್ಞೆ ಕೊಡ್ತಾ 26  “ಈ ನಿಯಮ ಪುಸ್ತಕವನ್ನ ನೀವು ತಗೊಂಡು+ ಹೋಗಿ ನಿಮ್ಮ ದೇವರಾದ ಯೆಹೋವನ ಒಪ್ಪಂದದ ಮಂಜೂಷದ ಪಕ್ಕದಲ್ಲಿಡಿ.+ ಇಸ್ರಾಯೇಲ್ಯರ ವಿರುದ್ಧವಾಗಿ ಇದೇ ಸಾಕ್ಷಿಕೊಡ್ಲಿ. 27  ಯಾಕಂದ್ರೆ ದಂಗೆ ಏಳೋ,+ ಹಠಹಿಡಿಯೋ ಗುಣ+ ಈ ಜನ್ರಲ್ಲಿದೆ ಅಂತ ನನಗೆ ಚೆನ್ನಾಗಿ ಗೊತ್ತು. ನಾನು ಬದುಕಿರುವಾಗ್ಲೇ ಯೆಹೋವನ ವಿರುದ್ಧ ಇಷ್ಟು ದಂಗೆ ಏಳ್ತಾರೆ ಅಂದ್ರೆ ನಾನು ಸತ್ತ ಮೇಲೆ ಇನ್ನೆಷ್ಟು ದಂಗೆ ಏಳಬಹುದು! 28  ಇಸ್ರಾಯೇಲ್ಯರ ಕುಲಗಳ ಎಲ್ಲ ಹಿರಿಯರನ್ನ, ಅಧಿಕಾರಿಗಳನ್ನ ನನ್ನ ಹತ್ರ ಬರೋಕೆ ಹೇಳಿ. ನಾನು ಅವ್ರ ವಿರುದ್ಧ ಭೂಮಿ ಆಕಾಶವನ್ನ ಸಾಕ್ಷಿಯಾಗಿ ಇಟ್ಟು+ ಅವ್ರಿಗೆ ಈ ಮಾತುಗಳನ್ನ ಹೇಳಬೇಕು. 29  ನಾನು ಸತ್ತ ಮೇಲೆ ಈ ಜನ್ರು ಕೆಟ್ಟ ಕೆಲಸಗಳನ್ನ ಮಾಡೇ ಮಾಡ್ತಾರೆ.+ ನಾನು ಅವ್ರಿಗೆ ಕೊಟ್ಟ ಆಜ್ಞೆಗಳನ್ನ ಪಾಲಿಸಲ್ಲ ಅಂತ ನನಗೆ ಚೆನ್ನಾಗಿ ಗೊತ್ತು. ಅವರು ಯೆಹೋವನ ದೃಷ್ಟಿಯಲ್ಲಿ ಕೆಟ್ಟದಾಗಿರೋದನ್ನ ಮಾಡೋದ್ರಿಂದ, ಆತನಿಗೆ ಕೋಪಬರಿಸೋ ಕೆಲಸಗಳಿಗೆ ಕೈಹಾಕೋದ್ರಿಂದ ಮುಂದೆ ಖಂಡಿತ ಅವ್ರ ಮೇಲೆ ಕಷ್ಟಗಳು ಬರುತ್ತೆ ಅಂತ ನನಗೆ ಗೊತ್ತು”+ ಅಂದ. 30  ಆಮೇಲೆ ಎಲ್ಲ ಇಸ್ರಾಯೇಲ್ಯರಿಗೆ ಕೇಳಿಸೋ ಹಾಗೆ ಮೋಶೆ ಈ ಹಾಡಿನ ಪದಗಳನ್ನ ಆರಂಭದಿಂದ ಕೊನೆ ತನಕ ಹೇಳಿದ.+

ಪಾದಟಿಪ್ಪಣಿ

ಅಥವಾ “ಪರ್ಣಶಾಲೆಗಳ ಹಬ್ಬ.” ಪದವಿವರಣೆಯಲ್ಲಿ “ಚಪ್ಪರಗಳ ಹಬ್ಬ” ನೋಡಿ.
ಅಕ್ಷ. “ಚಿಕ್ಕ ಮಕ್ಕಳು.”
ಅಥವಾ “ನಿಮ್ಮ ನಿಮ್ಮ ಜಾಗದಲ್ಲಿ ನಿಲ್ಲಿ.”
ಅಥವಾ “ವೇಶ್ಯೆ ತರ ನಡ್ಕೊಳ್ಳೋಕೆ.”
ಅಕ್ಷ. “ಅವ್ರಿಂದ ನನ್ನ ಮುಖ ಮರೆಮಾಡ್ತೀನಿ.”
ಅಕ್ಷ. “ಅವ್ರಿಂದ ನನ್ನ ಮುಖ ಮರೆಮಾಡ್ತೀನಿ.”
ಅಕ್ಷ. “ಕೊಬ್ಬಿದಾಗ.”
ಬಹುಶಃ “ದೇವರು” ಆಗಿರಬೇಕು.