ಧರ್ಮೋಪದೇಶಕಾಂಡ 32:1-52
32 “ಆಕಾಶವೇ, ನಾನು ಹೇಳೋದನ್ನ ಕೇಳು,ಭೂಮಿಯೇ, ನನ್ನ ಮಾತು ಕೇಳು.
2 ನನ್ನ ಬೋಧನೆ ಮೆಲ್ಲಗೆ ಸುರಿಯೋ ಮಳೆ ತರ,ನನ್ನ ಮಾತು ಹನಿಹನಿಯಾಗಿ ಬೀಳೋ ಮಂಜು ತರ,ಅದು ಹುಲ್ಲಿನ ಮೇಲೆ ಕೂತ್ಕೊಳ್ಳೋ ತುಂತುರು ತರ,ಗಿಡಮರಗಳ ಮೇಲೆ ಹೇರಳವಾಗಿ ಸುರಿಯೋ ಮಳೆ ತರ.
3 ನಾನು ಯೆಹೋವನ ಹೆಸ್ರನ್ನ ಸಾರಿಹೇಳ್ತೀನಿ.+
ನಮ್ಮ ದೇವರ ಶ್ರೇಷ್ಠತೆಯನ್ನ ತಿಳಿಸ್ತೀನಿ!+
4 ಆತನು ಬಂಡೆ ತರ ಇದ್ದಾನೆ, ಆತನ ಕೆಲಸದಲ್ಲಿ ಯಾವುದೇ ತಪ್ಪು ಇರಲ್ಲ,*+ಯಾಕಂದ್ರೆ ಆತನು ಮಾಡೋದೆಲ್ಲಾ ನ್ಯಾಯ.+
ಆತನು ಯಾವತ್ತೂ ಅನ್ಯಾಯ ಮಾಡಲ್ಲ,+ ಆತನು ನಂಬಿಗಸ್ತ ದೇವರು,+ಆತನು ನೀತಿವಂತ ನ್ಯಾಯವಂತ ದೇವರು.+
5 ಕೆಟ್ಟವರ ತರ ನಡ್ಕೊಂಡಿದ್ದು ಅವ್ರೇ,+ಅವರು ಆತನ ಮಕ್ಕಳಲ್ಲ, ತಪ್ಪೆಲ್ಲಾ ಅವ್ರದ್ದೇ,+ಅವರು ಅಡ್ಡದಾರಿ ಹಿಡಿದ ವಕ್ರ ಸಂತತಿನೇ!+
6 ಬುದ್ಧಿಹೀನರೇ, ಅವಿವೇಕಿಗಳೇ,+ನೀವು ಯೆಹೋವನಿಗೆ ಕೃತಜ್ಞತೆ ತೋರಿಸೋದು ಹೀಗೇನಾ?+
ಆತನು ನಿಮ್ಮ ತಂದೆ ತಾನೇ? ಆತನಿಂದಾನೇ ನೀವು ಇವತ್ತು ಇದ್ದೀರ ತಾನೇ?+
ನಿಮ್ಮನ್ನ ಸೃಷ್ಟಿಸಿ ಒಂದು ಜನಾಂಗವಾಗಿ ಮಾಡಿದ್ದು ಆತನೇ ಅಲ್ವಾ?
7 ಹಿಂದಿನ ದಿನಗಳನ್ನ ನೆನಪಿಸ್ಕೊಳ್ಳಿ,ಹಿಂದಿನ ಪೀಳಿಗೆ ಬಗ್ಗೆ ಯೋಚಿಸಿ,ನಿಮ್ಮ ತಂದೆನ ಕೇಳಿ, ಅವನು ನಿಮಗೆ ಹೇಳ್ತಾನೆ,+ಹಿರಿಯರನ್ನ ವಿಚಾರಿಸಿ, ಅವರು ನಿಮಗೆ ವಿವರಿಸ್ತಾರೆ.
8 ಸರ್ವೋನ್ನತ ದೇವರು ಎಲ್ಲ ಜನಾಂಗಗಳಿಗೆ ಆಸ್ತಿ ಹಂಚಿದಾಗ,+ಆದಾಮನ ವಂಶನ* ವಿಂಗಡಿಸಿದಾಗ,+
ಇಸ್ರಾಯೇಲ್ಯರ ಸಂಖ್ಯೆನ ಮನಸ್ಸಲ್ಲಿಟ್ಟು+ಎಲ್ಲ ಜನಾಂಗಗಳಿಗೆ ಗಡಿ ನಿರ್ಧರಿಸಿದ.+
9 ಆತನ ಜನ್ರೇ ಯೆಹೋವನಿಗೆ ಸ್ವತ್ತು,+ಯಾಕೋಬನೇ ಆತನಿಗೆ ಆಸ್ತಿ.+
10 ಆತನಿಗೆ ಯಾಕೋಬ ಸಿಕ್ಕಿದ್ದು ಒಂದು ಕಾಡಲ್ಲಿ,+ವಿಚಿತ್ರ ಶಬ್ದ ಮಾಡೋ ಪ್ರಾಣಿಗಳಿದ್ದ ಬರಡು ಮರುಭೂಮಿಯಲ್ಲಿ.+
ಆತನು ಅವನನ್ನ ಸುತ್ತುವರಿದು ಕಾದು ಕಾಪಾಡಿದ,+ಅವನನ್ನ ತನ್ನ ಕಣ್ಣುಗುಡ್ಡೆ ತರ ನೋಡ್ಕೊಂಡ.+
11 ಹದ್ದು ತನ್ನ ಮರಿಗಳಿಗೆ ಹಾರೋದನ್ನ ಕಲಿಸೋಕೆ ಅವನ್ನ ಗೂಡಿಂದ ತಳ್ಳಿ,ಮರಿಗಳ ಪಕ್ಕದಲ್ಲೇ ಹಾರುತ್ತಾ,ಹೇಗೆ ತನ್ನ ರೆಕ್ಕೆಗಳನ್ನ ಚಾಚಿ ಮರಿಗಳನ್ನ ತಗೊಳ್ಳುತ್ತೋ,ಹೇಗೆ ತನ್ನ ಗರಿಗಳ ಮೇಲೆ ಅವನ್ನ ಹೊತ್ಕೊಂಡು ಬರುತ್ತೋ+
12 ಅದೇ ತರ ಯಾಕೋಬನನ್ನ ಯೆಹೋವನೊಬ್ಬನೇ ಮಾರ್ಗದರ್ಶಿಸ್ತಾ ಬಂದ.+
ಬೇರೆ ಯಾವ ದೇವರೂ ಆತನ ಜೊತೆ ಇರಲಿಲ್ಲ.+
13 ಭೂಮಿಯ ಎತ್ತರ ಜಾಗಗಳು ವಶವಾಗೋ ತರ ಆತನು ಮಾಡಿದ,+ಹೀಗೆ ಹೊಲದ ಬೆಳೆನ ಉಣ್ಣೋ ಹಾಗೆ ಮಾಡಿದ,+ಕಡಿದಾದ ಬಂಡೆಯಿಂದ ಜೇನನ್ನೂ
ಗಡಸು ಬಂಡೆಯಿಂದ ಎಣ್ಣೆಯನ್ನೂ ಕೊಟ್ಟು ಸಾಕಿದ,
14 ಹಸುಗಳ ಹಾಲಿಂದ ಬೆಣ್ಣೆ, ಆಡು-ಕುರಿಗಳ ಹಾಲು,ಕೊಬ್ಬಿದ ಕುರಿಗಳ, ಹೋತಗಳ, ಬಾಷಾನಿನ ಟಗರುಗಳ ಮಾಂಸ,ಶ್ರೇಷ್ಠವಾದ ಗೋದಿ ಕೊಟ್ಟು ಸಾಕಿದ.+
ಅಷ್ಟೇ ಅಲ್ಲ ಅವನು ಕೆಂಪು ದ್ರಾಕ್ಷಿಯ ಮದ್ಯ ಕುಡಿದ.
15 ಯೆಶುರೂನ* ಚೆನ್ನಾಗಿ ತಿಂದು ಕೊಬ್ಬಿದಾಗ ದಂಗೆ ಎದ್ದು ತನ್ನ ಧಣಿನ ಒದ್ದ.
ಅವನು ಕೊಬ್ಬಿ ದಡಿಯನಾಗಿ ಊದ್ಕೊಂಡ.+
ತನ್ನನ್ನ ಸೃಷ್ಟಿ ಮಾಡಿದ ದೇವರನ್ನೇ ಬಿಟ್ಟುಬಿಟ್ಟ.+
ಬಂಡೆ ತರ ಇದ್ದು ರಕ್ಷಿಸಿದ ದೇವರನ್ನೇ ತಿರಸ್ಕರಿಸಿದ.
16 ಅವರು ಬೇರೆ ದೇವರುಗಳನ್ನ ಆರಾಧಿಸಿ ಆತನಿಗೆ ತುಂಬ ಕೋಪ ಬರಿಸಿದ್ರು,+ಅಸಹ್ಯ ಕೆಲಸಗಳನ್ನ ಮಾಡಿ ಸಿಟ್ಟು ತರಿಸಿದ್ರು.+
17 ಅವರು ದೇವರಿಗಲ್ಲ, ಕೆಟ್ಟ ದೇವದೂತರಿಗೆ ಬಲಿ ಕೊಟ್ರು,+ಅವ್ರಿಗೂ ಅವ್ರ ಪೂರ್ವಜರಿಗೂ ಗೊತ್ತಿಲ್ಲದ,ನಿನ್ನೆಮೊನ್ನೆ ಬಂದ ಹೊಸ ಹೊಸ ದೇವರುಗಳಿಗೆ ಬಲಿ ಕೊಟ್ರು.
18 ಅವರು ತಮ್ಮ ಹೆತ್ತ ಅಪ್ಪನ್ನ, ಆಶ್ರಯವಾಗಿದ್ದ ದೇವ್ರನ್ನ ಮರೆತುಬಿಟ್ರು,+ಅವ್ರನ್ನ ಹುಟ್ಟಿಸಿದ ದೇವರನ್ನೇ ಅವರು ನೆನಪಿಸ್ಕೊಳ್ಳಲಿಲ್ಲ.+
19 ಯೆಹೋವ ಅದನ್ನ ನೋಡಿದ,ತನ್ನ ಮಕ್ಕಳು ತನಗೆ ಕೋಪ ಬರಿಸಿದ್ರಿಂದ ಅವ್ರನ್ನ ಬಿಟ್ಟುಬಿಟ್ಟ.+
20 ಆತನು ಹೀಗಂದ: ‘ನಾನು ಅವ್ರಿಗೆ ಸಹಾಯ ಮಾಡಲ್ಲ,*+ಅವ್ರಿಗೆ ಎಂಥ ಗತಿ ಬರುತ್ತೆ ಅಂತ ನೋಡ್ತೀನಿ.
ಅವರು ಕೆಟ್ಟ ಪೀಳಿಗೆಯವರು,+ಅವರು ನಂಬಿಕೆ ದ್ರೋಹ ಬಗೆದ ಮಕ್ಕಳು.+
21 ದೇವರು ಅಲ್ಲದ್ದನ್ನ ಆರಾಧಿಸಿ ನನಗೆ ರೋಷ ಬರಿಸಿದ್ರು,*+ಪ್ರಯೋಜನಕ್ಕೆ ಬಾರದ ಮೂರ್ತಿಗಳನ್ನ ಆರಾಧಿಸಿ ನನ್ನ ಮನನೋಯಿಸಿದ್ರು.+
ಹಾಗಾಗಿ ನಾನೂ ಅವ್ರನ್ನ ಪ್ರಯೋಜನಕ್ಕೆ ಬಾರದ ಜನ್ರಿಂದ ಗಲಿಬಿಲಿ ಮಾಡ್ತೀನಿ,+ಒಂದು ಮೂರ್ಖ ಜನಾಂಗದಿಂದ ಅವ್ರ ಮನನೋಯಿಸ್ತೀನಿ,+
22 ನನ್ನ ಕೋಪ ಬೆಂಕಿ ತರ ಹೊತ್ತಿ ಉರಿಯುತ್ತೆ,+ಸಮಾಧಿಯ* ತಳದ ತನಕ ಹೋಗಿ ಉರಿಯುತ್ತೆ,+ಭೂಮಿನ ಅದ್ರ ಬೆಳೆನ ಸುಟ್ಟುಬಿಡುತ್ತೆ,ಬೆಟ್ಟಗಳ ಬುಡಕ್ಕೆ ಬೆಂಕಿ ಹತ್ಕೊಳ್ಳುತ್ತೆ.
23 ಅವ್ರ ಮೇಲೆ ಒಂದ್ರ ಮೇಲೊಂದು ಕಷ್ಟ ತರ್ತಿನಿ,ಅವ್ರ ಮೇಲೆ ನನ್ನ ಬಾಣಗಳನ್ನ ಬಿಡ್ತೀನಿ.
24 ಅವರು ಹಸಿದು ಬಳಲಿ ಬಲಹೀನರಾಗ್ತಾರೆ,+ವಿಪರೀತ ಜ್ವರ ಬಂದು ಸಾಯ್ತಾರೆ, ಅವ್ರ ವಿನಾಶ ಘೋರವಾಗಿರುತ್ತೆ,+ಅವ್ರನ್ನ ಕೊಲ್ಲೋಕೆ ಕ್ರೂರ ಪ್ರಾಣಿಗಳನ್ನ+
ನೆಲದಲ್ಲಿ ಹರಿದಾಡೋ ವಿಷಹಾವುಗಳನ್ನ ಕಳಿಸ್ತೀನಿ.
25 ಮನೆ ಹೊರಗೆ ಇರೋರು ಕತ್ತಿಯಿಂದ ಸಾಯ್ತಾರೆ,+ಒಳಗೆ ಇರೋರು ಹೆದರಿ ಸಾಯ್ತಾರೆ,+ಯುವಕನಾಗ್ಲಿ ಕನ್ಯೆಯಾಗ್ಲಿ ಮಗುವಾಗ್ಲಿ
ಹಣ್ಣು ಮುದುಕನಾಗ್ಲಿ ಎಲ್ರಿಗೂ ಅದೇ ಗತಿ ಆಗುತ್ತೆ.+
26 “ಅವ್ರನ್ನ ನಾನು ಚೆಲ್ಲಾಪಿಲ್ಲಿ ಮಾಡ್ತೀನಿ,ಯಾರೂ ಯಾವತ್ತೂ ಅವ್ರನ್ನ ನೆನಪಿಸ್ಕೊಳ್ಳದ ತರ ಮಾಡ್ತೀನಿ” ಅಂತ ಹೇಳಬೇಕಂತಿದ್ದೆ.
27 ಆದ್ರೆ ಶತ್ರುಗಳು ತಪ್ಪರ್ಥ ಮಾಡ್ಕೊಂಡು,+“ನಾವು ಗೆದ್ದಿದ್ದು ನಮ್ಮ ಸ್ವಂತ ಬಲದಿಂದಾನೇ,+ಯೆಹೋವನಿಂದಲ್ಲ” ಅಂತ ಹಂಗಿಸಬಹುದು ಅಂತ ಯೋಚಿಸಿ+ ಹಾಗೆ ಹೇಳಲಿಲ್ಲ.
28 ಇಸ್ರಾಯೇಲ್ಯರು ಬುದ್ಧಿ ಇಲ್ಲದವರು,*ಸ್ವಲ್ಪನೂ ತಿಳುವಳಿಕೆ ಇಲ್ಲದವರು.+
29 ಅವ್ರಿಗೆ ಬುದ್ಧಿ ಇದ್ದಿದ್ರೆ+ ಇದ್ರ ಬಗ್ಗೆ ಸ್ವಲ್ಪನಾದ್ರೂ ಯೋಚಿಸ್ತಿದ್ರು.+
ನಮಗೆ ಎಂಥ ಗತಿ ಬರಬಹುದು ಅಂತ ಆಲೋಚಿಸ್ತಿದ್ರು.+
30 ಇಸ್ರಾಯೇಲ್ಯರ ಬಂಡೆಯಾಗಿರೋ ಅವ್ರ ದೇವರೇ ಅವ್ರನ್ನ ಮಾರಿಬಿಟ್ಟ,+ಯೆಹೋವ ಅವ್ರನ್ನ ಶತ್ರುಗಳ ಕೈಗೆ ಒಪ್ಪಿಸಿದ.
ಅದಕ್ಕೇ ಅವ್ರಲ್ಲಿ 1,000 ಜನ್ರನ್ನ ಒಬ್ಬನೇ ಅಟ್ಟಿಸ್ಕೊಂಡು ಹೋಗಕ್ಕಾಯ್ತು,ಅವ್ರಲ್ಲಿ 10,000 ಜನ್ರನ್ನ ಇಬ್ರೇ ಓಡಿಸಿಬಿಟ್ರು.+
31 ಬಂಡೆ ತರ ಇರೋ ನಮ್ಮ ದೇವರ ಹಾಗೆ ಶತ್ರುಗಳ ದೇವರುಗಳು* ಇಲ್ಲ,+ಇದು ನಮ್ಮ ಶತ್ರುಗಳಿಗೂ ಅರ್ಥ ಆಗಿದ್ಯಲ್ಲಾ.+
32 ಅವರು ಸೊದೋಮಿನಲ್ಲಿ,ಗೊಮೋರದ ತೋಟದಲ್ಲಿ* ಬೆಳೆದ ದ್ರಾಕ್ಷಿಬಳ್ಳಿ ತರ ಇದ್ದಾರೆ.+
ಅವ್ರ ದ್ರಾಕ್ಷಿ ವಿಷ,ದ್ರಾಕ್ಷಿಗೊಂಚಲು ಕಹಿ.+
33 ಅವ್ರ ದ್ರಾಕ್ಷಾಮದ್ಯ ಹಾವಿನ ವಿಷ ತರ,ಅದು ಜೀವ ತೆಗಿಯೋ ನಾಗರಹಾವಿನ ವಿಷ ತರ.
34 ನಾನು ಅವರು ಮಾಡಿದ್ದನ್ನೆಲ್ಲ* ಕೂಡಿಟ್ಟಿದ್ದೀನಿ,ಅವುಗಳನ್ನ ನನ್ನ ಕಣಜದಲ್ಲಿ ಭದ್ರವಾಗಿ ಇಟ್ಟಿದ್ದೀನಿ.+
35 ಸೇಡು ತೀರಿಸೋದು, ಪ್ರತೀಕಾರ ಮಾಡೋದು ನನ್ನ ಕೆಲಸ,+ಸಮಯ ಬಂದಾಗ ಅವರು ಕಾಲು ಜಾರಿ ಬೀಳ್ತಾರೆ,+ಅವರು ನಾಶವಾಗಿ ಹೋಗೋ ದಿನ ಹತ್ರ ಇದೆ,ಅವರಿಗಾಗಿ ಕಾಯ್ತಾ ಇರೋ ದುರ್ಗತಿ ಬೇಗ ಬರ್ತಿದೆ.’
36 ಯೆಹೋವ ತನ್ನ ಜನ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ.+
ತನ್ನ ಸೇವಕರ ಶಕ್ತಿ ಕಮ್ಮಿ ಆಗಿರೋದನ್ನ,ನಿಸ್ಸಹಾಯಕ, ಬಲಹೀನ ಪರಿಸ್ಥಿತಿಯಲ್ಲಿ ಇರೋರನ್ನನೋಡಿ ಆತನು ಅವ್ರಿಗೆ ಕನಿಕರ ತೋರಿಸ್ತಾನೆ.*+
37 ಆಗ ಆತನು ಹೀಗಂತಾನೆ: ‘ಅವ್ರ ದೇವರುಗಳು ಎಲ್ಲಿ?+
ಅವರು ಆಶ್ರಯವನ್ನ ಹುಡುಕಿದ ಆ ಬಂಡೆ ಎಲ್ಲಿ?
38 ಬಲಿಪ್ರಾಣಿಯ ಕೊಬ್ಬನ್ನ* ತಿಂತಿದ್ದ,ಪಾನ ಅರ್ಪಣೆಗಳ ದ್ರಾಕ್ಷಾಮದ್ಯ ಕುಡಿತಿದ್ದ ಆ ದೇವರುಗಳು ಎಲ್ಲಿ?+
ಅವು ಎದ್ದು ಬಂದು ನಿಮಗೆ ಸಹಾಯ ಮಾಡ್ಲಿ,ಅವು ನಿಮಗೆ ಆಶ್ರಯ ಕೊಡ್ಲಿ.
39 ಈಗ್ಲಾದ್ರೂ ತಿಳ್ಕೊಳ್ಳಿ, ನಾನೇ, ನಾನೇ ದೇವರು,+ನನ್ನ ಬಿಟ್ಟು ಬೇರೆ ಯಾವ ದೇವರೂ ಇಲ್ಲ.+
ಜೀವ ತೆಗೆಯೋದೂ ನಾನೇ, ಜೀವ ಕೊಡೋದೂ ನಾನೇ.+
ಗಾಯ ಮಾಡೋದೂ ನಾನೇ,+ ವಾಸಿ ಮಾಡೋದೂ ನಾನೇ.+
ನನ್ನ ಕೈಯಿಂದ ಯಾರಿಗೂ ಯಾರನ್ನೂ ಬಿಡಿಸಕ್ಕಾಗಲ್ಲ.+
40 ನಾನು ನನ್ನ ಕೈಯೆತ್ತಿ,*“ಶಾಶ್ವತಕ್ಕೂ ಜೀವಿಸೋ ನನ್ನ ಮೇಲೆ” ಆಣೆ ಇಟ್ಟು,+
41 ಪಳಪಳ ಹೊಳೆಯೋ ನನ್ನ ಕತ್ತಿನ ಚೂಪಾಗಿ ಮಾಡಿ,ನ್ಯಾಯತೀರ್ಪು ಮಾಡೋಕೆ ಸಿದ್ಧನಾಗಿ,+ನನ್ನ ಶತ್ರುಗಳಿಗೆ ಸೇಡು ತೀರಿಸ್ತೀನಿ,+ನನ್ನನ್ನ ದ್ವೇಷಿಸೋರಿಗೆ ಶಿಕ್ಷೆ ಕೊಡ್ತೀನಿ.
42 ನನ್ನ ಕೈಯಿಂದ ಸತ್ತವರ, ಸೆರೆಸಿಕ್ಕವರ ರಕ್ತದಿಂದ
ನನ್ನ ಬಾಣಗಳು ಮತ್ತೇರೋ ತರ ಮಾಡ್ತೀನಿ.
ಶತ್ರುಗಳಲ್ಲಿರುವ ನಾಯಕರ ರುಂಡಗಳನ್ನ ಚೆಂಡಾಡಿ,ನನ್ನ ಕತ್ತಿ ಅವರ ಮಾಂಸ ತಿನ್ನೋ ತರ ಮಾಡ್ತೀನಿ.’
43 ಜನಾಂಗಗಳೇ, ದೇವರ ಜನ್ರ ಜೊತೆ ಹರ್ಷಿಸಿ,+ಆತನು ತನ್ನ ಸೇವಕರ ರಕ್ತನ ಚೆಲ್ಲಿದವರಿಗೆ ಸೇಡು ತೀರಿಸ್ತಾನೆ.+
ತನ್ನ ಶತ್ರುಗಳಿಗೆ ಪ್ರತೀಕಾರ ಮಾಡ್ತಾನೆ,+ತನ್ನ ಜನ್ರ ದೇಶಕೋಸ್ಕರ ಪ್ರಾಯಶ್ಚಿತ್ತ ಮಾಡ್ತಾನೆ.”*
44 ಹೀಗೆ ಮೋಶೆ ಬಂದು ಈ ಹಾಡಿನ ಪದಗಳನ್ನ ಜನ್ರಿಗೆ ಕೇಳಿಸೋ ಹಾಗೆ ಹೇಳಿದ.+ ಅವನಿಗೆ ನೂನನ ಮಗ ಹೋಷೇಯ*+ ಸಹಾಯ ಮಾಡಿದ.
45 ಮೋಶೆ ಇದನ್ನೆಲ್ಲ ಇಸ್ರಾಯೇಲ್ಯರಿಗೆ ಹೇಳಿ ಮುಗಿಸಿದ ಮೇಲೆ
46 ಅವರಿಗೆ “ನಾನು ಇವತ್ತು ನಿಮಗೆ ಹೇಳಿದ ಎಚ್ಚರಿಕೆ ಮಾತುಗಳನ್ನೆಲ್ಲ ಹೃದಯದಲ್ಲಿ ಇಟ್ಕೊಳ್ಳಿ.+ ಆಗ, ಈ ನಿಯಮ ಪುಸ್ತಕದ ಎಲ್ಲ ನಿಯಮಗಳನ್ನ ಪಾಲಿಸಬೇಕು ಅಂತ ನೀವು ನಿಮ್ಮ ಮಕ್ಕಳಿಗೆ ಹೇಳಕ್ಕಾಗುತ್ತೆ.+
47 ಇವೆಲ್ಲ ಸುಳ್ಳಲ್ಲ, ಇವುಗಳನ್ನ ಪಾಲಿಸೋದ್ರಿಂದ ನೀವು ಬದುಕಿ ಬಾಳ್ತೀರ.+ ಇವುಗಳ ಪ್ರಕಾರ ನಡೆದ್ರೆ ನೀವು ಯೋರ್ದನ್ ನದಿ ದಾಟಿ ವಶ ಮಾಡ್ಕೊಳ್ಳೋ ದೇಶದಲ್ಲಿ ಹೆಚ್ಚು ವರ್ಷ ಬದುಕ್ತೀರ” ಅಂದ.
48 ಅದೇ ದಿನ ಯೆಹೋವ ಮೋಶೆಗೆ
49 “ನೀನು ಯೆರಿಕೋ ಮುಂದೆ ಇರೋ ಮೋವಾಬ್ ದೇಶದ ಅಬಾರೀಮ್ ಬೆಟ್ಟಕ್ಕೆ+ ಹೋಗು. ಅಲ್ಲಿ ನೆಬೋ ಬೆಟ್ಟ+ ಹತ್ತು. ಅಲ್ಲಿಂದ, ನಾನು ಇಸ್ರಾಯೇಲ್ಯರಿಗೆ ಆಸ್ತಿಯಾಗಿ ಕೊಡೋ ಕಾನಾನ್ ದೇಶನ+ ನೋಡು.
50 ಆ ಬೆಟ್ಟದ ಮೇಲೆ ನೀನು ಸಾಯ್ತೀಯ. ನಿನ್ನ ಅಣ್ಣ ಆರೋನ ಹೋರ್ ಬೆಟ್ಟದ+ ಮೇಲೆ ಸತ್ತಮೇಲೆ ಅವನಿಗೆ ಸಮಾಧಿ ಆದ ಹಾಗೆ ನಿನಗೂ ಸಮಾಧಿ ಆಗುತ್ತೆ.
51 ಯಾಕಂದ್ರೆ ನೀವಿಬ್ರೂ ಚಿನ್ ಕಾಡು ಪ್ರದೇಶದ ಕಾದೇಶಿನಲ್ಲಿದ್ದಾಗ ಮೆರೀಬಾ ನೀರಿನ+ ಹತ್ರ ನನಗೆ ನಂಬಿಗಸ್ತರಾಗಿ ನಡ್ಕೊಳ್ಳಲಿಲ್ಲ. ನೀವು ಇಸ್ರಾಯೇಲ್ಯರ ಮುಂದೆ ನನಗೆ ಗೌರವ ಕೊಡಲಿಲ್ಲ.+
52 ನಾನು ಇಸ್ರಾಯೇಲ್ಯರಿಗೆ ಕೊಡೋ ದೇಶನ ನೀನು ಈಗ ದೂರದಿಂದ ನೋಡು. ಆದ್ರೆ ಆ ದೇಶಕ್ಕೆ ಹೋಗಬಾರದು”+ ಅಂದನು.
ಪಾದಟಿಪ್ಪಣಿ
^ ಅಥವಾ “ಕೆಲಸಗಳು ಪರಿಪೂರ್ಣ.”
^ ಬಹುಶಃ “ಮಾನವಕುಲನ.”
^ ಅರ್ಥ “ನೀತಿವಂತ.” ಇದು ಇಸ್ರಾಯೇಲ್ಯರಿಗಿದ್ದ ಗೌರವಾನ್ವಿತ ಬಿರುದು.
^ ಅಕ್ಷ. “ನನ್ನ ಮುಖವನ್ನ ಅವ್ರಿಂದ ಮರೆಮಾಡ್ತೀನಿ.”
^ ತನ್ನನ್ನ ಮಾತ್ರ ಜನ್ರು ಆರಾಧಿಸಬೇಕಂತ ದೇವರು ಬಯಸೋ ಕಾರಣ, ತನ್ನನ್ನ ಬಿಟ್ಟು ಬೇರೆ ದೇವರನ್ನ ಅವರು ಆರಾಧಿಸಿದಾಗ ಆತನಿಗೆ ಬರೋ ಕೋಪಕ್ಕೆ ಇದು ಸೂಚಿಸುತ್ತೆ. (ವಿಮೋ 20:5)
^ ಬಹುಶಃ, “ಬುದ್ಧಿಮಾತನ್ನ ಕೇಳದವರು.”
^ ಅಕ್ಷ. “ಬಂಡೆ.”
^ ಅಕ್ಷ. “ಮೆಟ್ಟಿಲುಪಾತಿಗಳಲ್ಲಿ.”
^ ಅಥವಾ “ಅವರ ತೀರ್ಪುಗಳನ್ನೆಲ್ಲ.”
^ ಅಥವಾ “ಮನಸ್ಸು ಬದಲಾಯಿಸ್ಕೊಳ್ತಾನೆ.”
^ ಅಥವಾ “ಅತ್ಯುತ್ತಮ ಭಾಗವನ್ನ.”
^ ಅಕ್ಷ. “ಸ್ವರ್ಗದ ಕಡೆಗೆ ಕೈಯೆತ್ತಿ.”
^ ಅಥವಾ “ದೇಶವನ್ನ ಶುದ್ಧ ಮಾಡ್ತಾನೆ.”
^ ಇದು ಯೆಹೋಶುವನಿಗೆ ಮೊದಲಿದ್ದ ಹೆಸ್ರು. ಹೋಷಾಯ ಹೆಸ್ರಿನ ಸಂಕ್ಷಿಪ್ತರೂಪ ಹೋಷೇಯ. ಹೋಷಾಯ ಅಂದ್ರೆ “ಯಾಹು ರಕ್ಷಿಸಿದ್ದಾನೆ.”